ಕೊಂತಿಯ ದೇವಿಯೆ ಮುಟ್ಟಾಯಿ ಮೂರು ದಿನದಲ್ಲಿ
ಅರಶಿನ ಶೀಕಾಯಿ ಗಿರೀಗೆ ಅವ್ಳಸಂಗಡ
ಕೂಡಿನ ಮೈದಿನಿಯ ಕರಕಂಡ ಬಾಲಮ್ಮ
ಹ್ವಾದಾಳೆ ಹರಿವ ಜಲಧೀಗೆ ಬಾಲಮ್ಮ
ಅರಶೀಣ ಶೀಕಾಯಿ ತಿಗರುದ್ದಿ ಬಾಲಮ್ಮ
ಮುಳುಕಿ ಮಿಂದಿದಾಳೆಹನಿನೀರ ಬಾಲಮ್ಮ  
ದಿಡಹತ್ತಿ ಮೇಲೆ ನಿಲುವಾಳೆ
ತೆಂಕದಿಂದ ಬಂದು ನೂರೊಂದ ಗಿಳಿಹಿಂಡು
ಅವು ಒಂದು ಮುಳುಕು ಹೊಡೆದಾವು ನಿತ್ತಿಕಂಡು
ಯಾವ ಮಾರಾಯನ ಮಡದಿ ಇವಳು ಮಿಂದ ನೀರ
ಸಾಂದೆಲ್ಲ ಅದ್ದಿ ಪರಿಮಳೋ
ಅಷ್ಟೊಂದ ಮಾತ ಕೇಂಡಾಳೆ ಬಾಲಮ್ಮ
ಮತ್ತೊಂದು ಮುಳಕ ಹೂಡಿದಾಳೆ ಬಾಲಮ್ಮ
ತನ್ನೊಸ್ರಗಳೆಲ್ಲ ಸೆಳಿದಾಳೆ ಬಾಲಮ್ಮ
ಮೂಡಾಯಿ ಮುಖ ಹಾಕಿನಿಲುವಾಳೆ ಬಾಲಮ್ಮ
ಸೂಲ್ಯಮ್ಮನಿಗೆ ಜೋಡಕೈಯ ಮುಗಿದಾಳೆ
ನಿಮ್ಮಂಥ ತೋಳೋನೆ ನಿಮ್ಮಂಥ ತೊಡಿಯಾನೆ
ನಿಮ್ಮಂಥಮುದ್ದು ಮೊಗದೋನೆ ಸೂಲ್ಯದೇವ್ರೆ
ನಿಮ್ಮಂಥ ಗರಭೇ ನಿಲಬೇಕು
ಅಷ್ಟೊಂದ ಮಾತು ಕೇಂಡಾಳು ಬಾಲಮ್ಮ
ಬಿದ್ದ ಮಾರುಗವ ಹಿಡಿದಾಳು
ಮ್ಯಾಲ್ಹಾದಿ ಬಿಸಿಲೆಂದು ಕೆಳಹಾದಿ ಕೆಸರೆಂದು
ಸಸಿ ತ್ವಾಟದ ದಾರಿ ಸನಿ ಅಂದ ಹೋಗುವಾಗೆ
ಅಲ್ಲೊಂದ ಕರುಮಳಿನೇ ಹೊಯ್ದಿತು ಹೊಯ್ಯಂತ ಸಮಯದಲ್ಲಿ
ಚಿತ್ತೂಳಿ ಮರ ಸೇರಿ ನಿಲುವಾಳೆ ಬಾಲಮ್ಮ
ಕೊಯ್ದಂಥ ಹಣ್ಣು ಮೆಲಿದಾಳೆ ಬಾಲಮ್ಮ
ಈ ಫಲ ತನಗೆ  ನಿಜವೆಂದು ಬಾಲಮ್ಮ
ಈ ನಿರು ತನಗೆ ನಿಜವೆಂದು
ಇಷ್ಟೊಂದು ಮಾತ ಕೇಂಡಳೆ ಬಾಲಮ್ಮ
ಪಚ್ಚೆಯ ವನಕೆ ನಡಿದಾಳ ಬಾಲಮ್ಮ
ಪಚ್ಚೆ ಕದಿರೈದ ಕೊಯದೀಳು ಬಾಲಮ್ಮ
ಕೊಯ್ದಂಥ ಕದರೇ ಮುಡದೀಳು ಬಾಲಮ್ಮ
ಈ ಫಲ ತನಗೆ ನಿಜವೆಂದು
ಅಷ್ಟೊಂದು ಮಾತ ಕೇಂಡಾಳೆ ಬಾಲಮ್ಮ
ಗೀರದಿಂದ ಮನಿಗೆ ನಡೆದಾಳು ಬಾಲಮ್ಮ
ಮೆತ್ಹತ್ತಿ ಮ್ಯಾನೆ ನಡೆದಾಳು ಬಾಲಮ್ಮ
ತನಗೊಪ್ಪಿದ ಸೀರೆ ಉಡುವಾಳೆ ಬಾಲಮ್ಮ
ಒಂದ್ ಬೋಗಸ ಹೊನ್ನು ತಗಿದಾಳು ಬಾಲಮ್ಮ
ಮೆತ್ತಿಂದ ಕೆಳಗೆ ಇಳಾದಾಳ ಬಾಲಮ್ಮ
ಮುಗ್ಟ ಬಚ್ಚಿ ಕಾಯ ಸುಳಿದಾಳ ಬಾಲಮ್ಮ
ಒಳಗಿದ್ದ ತಾಯಮ್ಮನ ಕರಿದಾಳು ಬಾಲಮ್ಮ
ಒಳಗಿದ್ದ ತಾಯಮ್ಮನ ಏನೆಂದು ಕರಿದಾಳು
ನಾ ಹೊಯಬತ್ತೆ ಅಮ್ಮನವರ ಸ್ಥಳಕ್ಕಾಗಿ ತಾಯಮ್ಮ
ಹಾಲು ಗಂಜಿಗಳ ಅನುಮಾಡಿ
ಅಷ್ಟೊಂದು ಮಾತ ಕೇಂಡಾಳೆ ಬಾಲಮ್ಮ
ಬಿದ್ದ ಮಾರುಗವೆ ಹಿಡಿದಾಳೆ ಬಾಲಮ್ಮ
ಹೋದಳಮ್ಮನವರ ತಳಕಾಗಿ ಬಾಲಮ್ಮ
ಒಂದ್ ಬೊಗಸೆ ಹೊನ್ನು ಹೊಯ್ದಾಳು ಬಾಲಮ್ಮ
ಎಡಕ್ಹೋಗಿ ಬಲಕೆ ಬರುವಾಳು ಬಾಲಮ್ಮ
ಬಿದ್ದು ಅಮ್ಮನವರಿಗೆ ಶರಣೆಂದು ಬಾಲಮ್ಮ
ನಿಮ್ಮಂಥ ತೋಳರೆ ನಿಮ್ಮಂಥ ತೊಡೆಯಾರೆ
ನಿಮ್ಮಂಥ ಮುದ್ದ ಮುಖದೋರೆ ಅಮ್ಮನವ್ರೆ
ನಿಮ್ಮಂಥ ಗರಭೇ ನಿಲ್ಲಬೇಕು ಅನುತ್ಹೇಳಿ
ಬಿದ್ದು ಮಾರುಗನ ಹಿಡಿದಾಳೆ ಬಾಲಮ್ಮ
ತಾ ಬಂದಳು ತನ್ನ ಅರಮನಿಗೆ ಆವ್ಳತಾಯಿ
ಊಟಕ್ಕೂ ಮಗಳ ಕರಿದರೆ ಬಾಲಮ್ಮ
ತಾಬಂದಳು ತನ್ನ ಅರಮನಿಗೆ ಅವ್ಳತಾಯಿ
ಊಟಕ್ಕೂ ಮಗಳ ಕರಿದರೆ ಬಾಲಮ್ಮ
ಬಾಮಿಯಂಗಳಕೆ ನಡಿದಾಳು ಬಾಲಮ್ಮ
ಹೊಯ್ಕೋತಳ್ಹೋನ್ನ ಮಣಿಮ್ಯಾಲೆ ಬಾಲಮ್ಮ
ಹಾಸೂಗಿ ಹಾಸ್ಯಳು ಕೀಸ್ಯಾಳು ಬಾಲಮ್ಮ
ರಾಶಿ ಮಲ್ಲುಗಿಯ ಮುಡಿಯಳು ಸಣ್ಣಕ್ಕಿ
ವಾಸುನಿ ಬ್ಯಾಡ ಅವಳೀಗೆ ಅವ್ಳತಾಯಿ
ಮಗು ಬಸ್ರಿ ಅಂದ ಅರತೀಳು
ಅಷ್ಟೊಂದ ಮಾತ ಕೇಂಡಳೇ ಬಾಲಮ್ಮ
ಉಂಡೆದ್ದಳು ಒಂದೇ ಗಳಗೀನೆ ಬಾಲಮ್ಮ
ಉಂಡು ಕೈ ಬಾಯ ತೊಳೆದಾಳು ಬಾಲಮ್ಮ
ಹೋಯ್ ಕೂತಳ್ಹೋನ್ನ ಜಗಲಲಿ
ಅದಿಟ್ಟಡಕಿಯ ಹೊಸ ಸ್ಯೋಸಿಟ್ಟ ಬಿಳಿಯಲೆ
ಹಾಲಲ್ಲಿಂಗಿಸಿದ ಕೆನೆ ಸುಣ್ಣ ಹ್ಯಾಕಂಡ
ಆಯದೀಳ್ಯಗಳ ಮೆಲಿದಾಳೆ ಬಾಲಮ್ಮ
ಅಲ್ಲೊಂದು ಸುಖು ನಿದ್ರಿ ಗೆಯ್ದಳ
ಅಲ್ಲೊಂದು ಸುಖುನಿದ್ರಿ ಗೆಯ್ಯಂಥ ಸಮ್ಯದಲ್ಲಿ
ಅಡಕಿಯ ಕೊನಿಯ ಸ್ವಪ್ನವೇ ಬಿದ್ದಿತೆಂದು
ಅಲ್ಲಿಂದ ದಡಬಡ ಎದ್ ಕೂತ್ಲ ಬಾಲಮ್ಮ
ಮೆತ್ತಿಂದೆ ಕೆಳಗೆ ಇಳಿದಾಳೆ
ಚಾವಡಿಯ ಮೇಲೆ ಹತ್ತಿ ಹಾಸುಗಿ ಮೇಲೆ
ಅಲ್ಲೊಂದ್ ಸುಖ ನಿದ್ರಿ ಗೆಯ್ದಳೆ
ಅಲ್ಲೊಂದ್ ಸುಖ ನಿದ್ರಿ ಗೆಯ್ವಂಥ ಸಮಯ್ದಲ್ಲಿ
ಸಿಂಗಾರ ಕೊನಿಯ ಸಪುನವೇ ಕಟ್ಟಿತೇನೆಂದು
ಅಲ್ಲಿಂದ ದಡಬಡ ಎದ್ ಕೂತ್ಲ ಬಾಲಮ್ಮ
ಒಳಗಿದ್ದ ತಾಯಮ್ನ ಕರೆದಾಳು
ಮೆತ್ತಿನ ಮ್ಯಾನೆ ಹಾಸುಗಿಮ್ಯಾಲೆ
ಅಲ್ಲೊಂದು ಸುಖ ನಿದ್ರಿ ಗೇಯ್ವುಂತ ಸಮಯದಲ್ಲಿ
ಅಡಕಿಯ ಗೋನಿಯ ಸಪನವೇ
ಅಡಕಿಯ ಗೋನಿಯ ಸಪನು ಕಟ್ಟೀತೆಂದು
ಅಲ್ಲಿಂದ ದಡಬಡ ಎದ್ದ ಕೂತೆ ತಾಯಮ್ಮ
ಮೆತ್ತಿಂದ ಕೆಳಗೆ ಇಳಿದೀದೆ
ಚಾವುಡಿ ಮ್ಯಾನೆ ಹತ್ತಿ ಹಾಸುಗಿ ಮ್ಯಾನೆ
ಅಲ್ಲೊಂದು ಸುಖನಿದ್ರಿಗೇಯ್ದಿರೇ ತಾಯಮ್ಮ
ಸಿಂಗಾರ ಕೊನಿಯ ಸಪುನವೇ
ಅಡಕಿ ಕೊನಿ ಸಪ್ನಂದು ನನಕೈಲಿ ಹೇಳಲು ಮಗಳೆ
ನಿನ್ನಂಥ ರಂಭಿಯರಿಗೂ ನುಡಿದಿರು ದೇವರು
ಕೊಡತಾನೆ ನಿನಗೂ ಪಲುಗಳ
ಸಿಂಗಾರ ಕೊನಿ ಸಪ್ನಂದು ನನಕೂಡ ಹೇಳಲು ಮಗಳೆ
ನಿನ್ನಂಥ ರಂಭಿಯರಿಗೂ ನುಡಿದೀರು ದೇವರು
ಕೊಡತಾನೆ ನಿನಗೂ ಪಲಗಳು