ಬಸುರಿ ಬಸುರಿ ಎಂದು ಮೊಸರನ್ನ ಉಂಡೀಳು
ಬಸುರೆಲ್ಲಿ ಹೊಯ್ತು ಸೊಸಿ ಮುದ್ದೆ
ಬಸುರೆಲ್ಲಿ ಹೊಯ್ತು ನಿಮ್ಮನಿ
ಕಟ್ಟುಪ್ಪು ತಿಂದು ಕರಗೀತು

ಬಸಿರಿ ಎಣ್ಣಿದಾಳೆ ಬಸರೂರ ಚಿನ್ನಕ್ಕೂ
ಮತ್ತೊಂದೆಣ್ಣೆ ದಾಳೆ ಮನದಲ್ಲಿ ತಂಗ್ಯಮ್ಮ
ಮಂಗ್ಳೂರು ಮಲ್ಲಿಗಿನೆ ಮುಡಿಕಂದ

ಅರಶಿನ ಗೊಯ್ಟಿಯಹೂಗ ತರಿಸಿ ಮುಡಿತೇನೆಂದ
ಅರಸು ಗೊಪಾಲನ ಬಸಿರೀಲೆ ನನತಾಯಿ
ಜಡಿಮ್ಯಾಲೇ ಜಲ್ಲಿ ಬಿಡುವಾಳೆ

ಬಸಿರಿ ಬಯ್ಕಿಯ ಹಾಗೆ ಹಸಿರು  ಸೀರೆಯ ಉಡುಪಿ
ಬಸಿರಿ ಬಿಸಿಲೆಂದೇ ಹ ಹೊಯ್ಟೀಳು ಚಂದಿಯ ಬಳಿ
ಹೊಸರಿಗೂ ದೊಡ್ಡವನ ಹಿರಿಸೊಸಿ

ಕಡ್ಗಣ್ಣಲಿ ಕಾಡೂಗಿ ನಡುಬೆನ್ನಿಗೆ ಅರಷಿಣ
ತಿಂಗಳ ಬಾಣಸ್ತ್ರಿ ಹಸು ಮಗು ಮಿಂದ್ ನೀರು
ತೆಂಗಿಗೂ ಸಾವಿರ ಮಿಡಿ ಬಿದ್ದು

ಹೂವಿನ ಗಿಜಗತ್ತಿ ಬಲಗೈಲಿ ನಮ್ಮನಿ
ಬಾಣಸ್ತ್ರಿ ಬಚ್ಚಲಿಗೆ ನಡೆದಾಳು
ತೆಂಗಿನ ಮರಕೆ ತಿಂಗಳು ದಿನ ನೀರಿಲ್ಲ

ಬಾಣಂತಿ ಮೀವಲ್ಲಿ ಬಸಳಿಯ ಚಪ್ಪರ
ಬಾಂಗಿ ಬಾರಣ್ಣ ಬಳಗಾರ ನಮ್ಮನಿ
ಬಾಣಂತಿ ಕೈಗೆ ಬಳೆ ಇಡು.

ಹಡೆದಾಳೆಂಬ ಸುದ್ಧಿಯ ಹಡೆದಮ್ಮಗೆ ಹೇಳ್ ಕಳಿಸಿ
ತೊಟ್ಟಿಲ ನೇಣ ಗಿಜಗತ್ತಿ ತಕ್ಕಂಡ
ಹಡೆದಮ್ಮನ ಬೇಗ ಬರಹೇಳಿ

ಬಾಣಂತಿಗೊಪ್ಪುದು ಬಲಗಣ್ಣ ಕಾಡುಗಿ
ದೇವ್ರಿಗೆ ಒಪ್ಪೂದೆ ಶ್ರೀಗಂಧ ಮಾರಣಕಟ್ಟೆ
ಮ್ಯಾಳಕೊಪ್ಪೂದೆ ಸ್ತ್ರಿ ವ್ಯಾಸೋ

ಅರಷಣ ಮಾರುವ ಶೆಟ್ಟಿ ಅರಶಿಣ ಮಾರುತ ಬಂದ
ವರಸದ ಬಾಣಂತಿಯ ಹಸು ಮಗು ಮೀವಾಗೆ
ಅರಶಿಣ ಬೇಕು ತಿಗುರಿಗೆ