ದೇಸ ದೇಸವ ತಿರುಗಿ ದಾಸಯ್ಯ ಪಡಿಗೆ ಬಂದ
ಹಾಸುಗಿ ಹಾಸೆ ಜಗುಲಿಗೆ ತಾಯಮ್ಮ
ದಾಸಯ್ಯನಲ್ಲ ನಿನ ತಮ್ಮ

ಬೇಡೂಕೆ ಬಂದ ಬಾವಾಜಿ ಬಾಳ್ಹೊತ್ತೆ ನಿಲ್ದೀರು
ಕಾಲದಾಹುತಿಯೆ ನಮಗಾದೊ ತಾಯಮ್ಮ
ಪಡಿ ಅಕ್ಕಿ ಹಾಕಿ ಕಳೂಹಿಸು

ಹಾವು ಕಪ್ಪಿಯ ನುಂಗಿ ದಾವುತಿ ಬಿಡುವುದು
ಬಾರೆ ತಂಗ್ಯಮ್ಮ ತಪ್ಸುವ ಅದು ನಮ್ಮ
ವಾಲೆ ಭಾಗ್ಯವೇನೆ ಉಳಿಸುದು

ದಾನ ಮಾಡದ ಜೀವ ಧರ್ಮದ ಜೀವು
ಹ್ಯಾಂಗ್ಹೋಗಲಿ ಜೀವುಸ್ವರ್ಗಕ್ಕೆ ಸ್ವರ್ಗದ ಬಾಗಿಲ ಮುಂದ
ಉಕ್ಕಿನ ಚೂರಿ ಉರಿ ಎಣ್ಣೆ

ದಾನಕ್ಕನ ಮನೆಯಲ್ಲಿ ದೀನಕ್ಕ ಮನಿ ಮಾಡಿ
ಯಾದಕೆ ದಿನಕ್ಕೆ ಬಡವಾದೆ ದಾನಕ್ಕ
ದಾನ ಮಾಡುವ ಕಂಡ ಬಡವಾದೆ

ಬಾಯರಿಗೂ ಬಂದರಿಗೂ ಬಾವಿಯ ತೊರಿಸಿ
ಸೇದುವ ಹಗ್ಗ ಕೊಡುಪಾನ ಕೊಟ್ಟೀರು
ಕಾಶಿಗ್ಹೊದಷ್ಟೇ ಫಲ ಬಕ್ಕು

ಕರ್‌ಕರಿ ಮಾಡೀರೋ ಕರ್‌ಕರಿಗಾಳಲ್ಲ
ನನಗೂ ಈ ಮನೆಯ ಸ್ಥಿರವಲ್ಲ ಅತ್ಯಮ್ಮ
ನಾ ಬಾಳೂ ಮನೆಯೇ ಸ್ವರ್ಗವೇ ಸ್ವರ್ಗದ
ಬಾಗಿಲ ಮುಂದೆ ಉಕ್ಕಿನ ಕಂಬೆ ಉರಿ ಎಣ್ಣೆ
ಯಮರಾಯ ಬಾಗಿಲ ತೆಎಗೆಯೋ ಸ್ವರ್ಗದ
ನಾ ಬಾಗಿಲ ತೆಗೆಕಿದ್ರೆ ನೀ ಒಳಗೆ ಬರಕಿದ್ರೆ
ನೀ ಮಾಡಿದ ಧರ್ಮ ನನಗ್ಹೇಳು
ಹಸಿದರ ಹೊಟ್ಟೆಯ ಕಂಡೆ ಮಾಸಿದ ಮಂಡೆಯ ಕಂಡೆ
ಜೋಗಿಗೆ ಭಿಕ್ಷೆಯ ಮಗದ್ಹೋಯ್ದೆ ಯಮರಾಯ
ದಾರಿಯಲ್ಲಿದ್ದ ಮುಳ್ಳ ತೆಗೆದಿದ್ದೆ ಯಮರಾಯ
ಬಾಗಿಲ ತೆಗೆಯೋ ಸ್ವರ್ಗದ

ಬಾಡಿದ ಬಳ್ಳಿಗೆ ಜೋಡುನಿರ‍್ಹೈಸುವೆ
ಕೋಡ್ಯೆಲೆ ಆಗು ಕೊಡಿ ಆಗು  ಈ ಊರ
ಬೇಡಿ ತಿಂಬರಿಗೆ ಎಲಿಯಾಗು

ಹೆದ್ದಾರಿ ಮನೆಯಾಳೆ ಹೆಗ್ಗಡತಿ ನನ್ನಕ್ಕ
ಮಜ್ಜಿಗಿ ದಾನ ಕೊಡುವಾಳೆ ಏನೆಂದೆ ಕೊಡುವಾಳೆ
ಗಿಜ್ಜಿ ಕಾಲ್ಮಗನ ಪಡಿಕೆಂದು

ರಾಶಿಯ ಬದುಕಿಗೂ ಆಸಿ ಮಾಡಲಿಲ್ಲ
ರಾಶಿಗೂ ಕಲ್ಲೇ ಹೋಯ್ಲಿಲ್ಲ ದೆವರೆ
ಲೇಸಿ ಕೊಡಿ ನನ್ನ ಕೆಲಸಕ್ಕೆ

ಬಿಸಿಲೇ ಕೊಡಿ ನನ್ನ ಕೆಲಸಕ್ಕೆ
ಬಿಸಿಲೇ ನಿನ್ನೂರಿಗೆ ಹಸು ಮಗಿನ ಕಳ್ಸಿದೆ
ಬಿಸಿಲೇ ನೀ ಕಾದುಕಳುಹಿಸು ಶಿರಸಿಯ
ಮಾದೇವಿ ಕಾದು ಮನೆಗೆ ಕಳುಹೂಳು

ಕಣ್ಣಿಗೂ ಬೆನ್ನಿಗೂ ತಣ್ಣಗಾಯ್ಲಿ ಎಂದು
ಬಣ್ಣಿಸಿ ನಿರ‍್ಹೋಯ್ದೆ ಬಸಳಿಗೆ ಬಾಲಯ್ಯನ
ಬೆನ್ನಿಗು ಬಿದ್ದರಿಗು ಸುಖವಾಯ್ಲಿ