ಹೊತ್ತಾರೆ ಮುಂಚೆ ಎದ್ದಾನೆ ಅಣ್ಣಯ್ಯ
ಚಿನ್ನದ್ಹಾರಿಗಳ ಹೆಗಲಲ್ಲಿ ಹ್ಯಾಕಂಡು
ಮೂಡಿನ ಬೈಲಿಗೆ ನಡಿದಾನೆ ಅಣ್ಣಯ್ಯ
ಎಡಕ್ಹೋಪ ನೀರ ಕಡಿದಾನೆ ಅಣ್ಣಯ್ಯ
ನ್ಯಾಗಳದಂಥ ನೀರ ಹದ ಮಾಡಿ ಅಣ್ಣಯ್ಯ  
ಬೆಳ್ಳಿಯ ಚಂಬೆ ಬಲಗೈಲಿ ಹಿಡ್ಕಂಡ
ಬಾಮಿ ಅಂಗಣಕೆ ನಡಿದಾನೆ ಅಣ್ಣಯ್ಯ
ಹೊನ್ನಿನಕಾಲದೊಟ್ಟಿ ಮಗನೀರು ಮಕ್ಕಂಡು
ಕಾಲು ಶ್ರೀಮುಖವ ತೊಳೆದಾನೆ ಅಣ್ಣಯ್ಯ
ಒಂದ್ ಚಂಬು ನೀರ ಹಿಡಿದಾನೆ ಅಣ್ಣಯ್ಯ
ತೊಳಸಿ ಮಂಟಪಕ್ಕೆ ಬುವಾನೆ ಅಣ್ಣಯ್ಯ
ಎಡಕ್ಹೋಯಿ ಬಲಕೆ ಬರುವಾನೆ ಅಣ್ಣಯ್ಯ
ನಾನೆಣ್ಣಿದ ಕಾರ್ಯ ಜಯವಾಯ್ಲಿ
ಅಷ್ಟೊಂದು ಮಾತ ಕೇಂಡಾನೆ ಅಣ್ಣಯ್ಯ
ಒಳಗಿದ್ದ ತಂಗ್ಯಮ್ಮನ ಕರುವಾನೆ  ಏನೆಂದೆ
ಊಟಕ್ಕಾರು ಬಳಸಂದ ಅಣ್ಣಯ್ಯ
ಅಷ್ಟೊಂದಮಾತ ಕೇಂಡಾಳೆ ತಂಗ್ಯಮ್ಮ
ಬೆಳ್ಳಿ ಹರಿವಾಣಕೆ ಬಳಸೀಳೆ ಅಣ್ಣಯ್ಯ
ಹೋ ಕೂತ ಹೊನ್ನಮಣಿಮ್ಯಾನೆ ಅಣ್ಣಯ್ಯ
ಹಸುವಿಗು ಮೂರ‍್ ತುತ್ತ ಮೆಲಿದಾನೆ ಅಣ್ಣಯ್ಯ
ಉಂಡು ಕೈ ಬಾಯಿ ತೊಳಿದಾನೆ ಅಣ್ಣಯ್ಯ
ಆಳೂ ಮಕ್ಕಳನ ಕರಿದಾನೆ ಅಣ್ಣಯ್ಯ
ಮೆತ್ಹತ್ತಿ ಮ್ಯಾನೆ ನಡಿದಾನೆ ಅಣ್ಣಯ್ಯ
ಬೀಂಜದ ಮುಡಿಯ ಇಳಿಸಿದ ಅಣ್ಣಯ್ಯ

ಆಳೂ ಮಕ್ಕಳನೆ ಕರೆದನೆ
ಹೂಡುವ ಎತ್ತು ನೂರು ಹೂಡದಿದ್ದ ಎತ್ತ ನೂರ
ಹೂಡಿಮಿಕ್ಕಿದವೆ ಅವನೂರು ಅಳಮಕ್ಕಳ
ಇವು ಸಾಗಲಿ ನನ್ನ ಬಯಲಿಗೆ
ಹೂಡುವ ನೇಲ ನೂರು ಹೂಡದಿದ್ದ ನೇಲ ನೂರ
ಹೂಡಿಮಿಕ್ಕಿದುವೆ ಅವನೂರು ಆಳ ಮಕ್ಕಳ
ಇವುಸಾಗಲಿ ನನ್ನಬಯಲಿಗೆ
ಅಷ್ಟೊದ ಮಾತ ಕೇಂಡಾನೆ ಅಣ್ಣಯ್ಯ
ಬೀಂಜದ ಮುಡನೇ ನೆಗಿದಾಣೆ ಅಣ್ಣಯ್ಯ
ಬೆಳ್ಳಿಯ ಬುಟ್ಟಿ ಬಲಗೈಲಿ ಹಿಡ್ಕಂಡ
ಮೂಡಿನ ಬಯಲಿಗೆ ನಡಿದಾನೆ
ಗೋವಿಂದನೆ ನೆನಕಂಡ ಭೂಮಿಯ ಮೆಟ್ಕಂಡ
ಭೂಮಿಗೂ ನೆಲ್ಲಬಿಡುವಾನೆ ಏನಂದೆ
ಒಂದ್ ಬಿಕ್ಕ ನೂರ ಬೆಳಿಲೆಂದ