ಆರಂಭ ಅಡವೀಲೆ ಕೊಡನ ನೀರಿಗ್ಹೋಯಿ
ತಡವಾದತ್ತೆ ಬೈವರು ಮೂಡಿನ
ಗಿಳಿ ಮಿಂದೆ ನೀರ ಕಳುಕಾದು ತೆಂಗಿನ
ಹೆಡಿ ಬಿದ್ದೆ ಕೊಡವೇ ಹುಡಿಯಾದು
ಅಷ್ಟೋತ್ತಿಗೆ ಹೋದಳಿಗೆ ಇಷ್ಟೊತ್ತೇನಾದವು 
ನೀನ್ಯಾರೆ ಅಲ್ಲಿ ತಡೆದರು
ನನ್ನ ಕಂಡಂಗೆ ಇರುವಾಗ ನೀವ್ ನೀರೀಗೆ ಹೋಪಾಗ
ನಿಮ್ಮನ್ಯಾರಲ್ಲಿ ತಡೆದೀರು
ಅತ್ತೆ ಕಾಲದ ಕೊಡ ಮಾವನ ಕಾಲದ ಕೊಡ
ಆ ಕೊಡ ಹ್ಯಾಂಗೆ ಹೊಡಿಯಾದು

ಹೊನ್ನಿನ ಕೊಡವಲ್ಲ ಚಿನ್ನದ ಕೊಡವಲ್ಲ
ಮಣ್ಣ ಕೊಡಕ್ಕೆಷ್ಟೆ ಮರಗೂರಿ ಮಾಯಿ ಕೇಳಿ
ನನ್ನೂರಿಗೊಂದೊಲೆ ಕಳುಹುವೆ ನನ್ನಣ್ಣಯ್ಯ
ಕೊಡಪಾನದ ಹೊರಿಯೇ ಕಳಿಸುವ

ಬಾಗಳ ಹೂ ಬಿದ್ದು ಮುರಿದಿತ್ತು ನನ್ನ ಬೆನ್ನು
ನೋಯಲಿಲ್ವೇನೆಂದು ಕೇಣಲಿಲ್ಲ ನನ ಮಾಯಿ
ಅಂಥ ಗಂಡನ ಮನಿ ನನಗೆ ಬ್ಯಾಡ

ರಾಕೇಸ್ತಿ ನನ ಮಾಯಿ ರಣ ಭೂತು ನನ ಮಾವ
ಸೂರ್ಪನಖಿ ನನ್ನಮೈದುನಿ ಸಂಗಡ
ಹೆಂಗಿರುವುದೇ ತಾಯಿ ಅನುದಿನ

ಅರಗಿದ್ದು ಗುಡ್ಡಿಯ ಮೇಲೆ ಎರುವೆ ಸಾಲ್ ಹೊಯ್ದಂಗೆ
ಅರವತ್ತು ಗೆಣಿಯಾದ ಸಂಗಡ
ಅರಿಯಾದು ಅತ್ತೆ ಕೆಲಸವು ನಾ ನಿಮ್ಮ
ಹೆತ್ತ ಮಗಳಂತೆ ಸಲಗಿನಿ

ಮಗಳ ಕೊಟ್ಟ ಮನಿಗೆ ಮುದ್ದಲ್ಲ ಎಲೆ ಹೆಣ್ಣೆ
ಹಿಡಿಯೆ ಚಂದಣದ ಬಲಗೀಯ ನಿನ್ನಪ್ಪಯ್ಯ
ದೊರೆಯಾದರೂ ನನಗೆ ಭಯವಿಲ್ಲ

ಉಪ್ಪಿನ ಕಾಳಿಗೆ ಬೀಗು ಗೊಯ್ಕಡಿ ಚೋಟ್ಟೀಗು ಬೀಗು
ನೆಳಿನ ಕೈಕಾಲಿಗೆ ಸರಪಳಿ ಈಮನಿ
ಬಳಿಮೇಸ್ತಿ ಬಾಳು ಬಗಿಹೆಂಗೆ

ಕಡಿಯಕ್ಕಿ ಕೂಳ ಅಟ್ಟುಂಡ ಹೆಣ್ತಾಯಿ
ಬಿಡುನುಡಿ ಎಂಬ ಮೈದಿನ ಸಂಗಡ
ಹೆಂಗಿರಲಿ ತಾಯೇ ಅನುದಿನ.