ಒಡೆಯರ ಮನೆಯಲ್ಲಿ ಮಾದೊಡ್ಡ ಹರಿಸೇವೆ
ಒಕ್ಕಲ ಪಂಕ್ತಿ ಕಣನಲ್ಲಿ ನಮ್ಮೊಡೆಯರು
ಒಕ್ಕಲಿಗೆ ಬಡಿಸಿ ದಣಿಯಾರು

ಕೊಲ್ಲೂರಿಗ್ಹೋಗಿ ಹೂಗಿನ ತೇರಳೆದೀಕೆ
ಆನೆ ಝರಿಯಲ್ಲಿ ಬರುವರು ನಮ್ಮೊಡೆಯರು
ಅರಿದಿದ್ದರು ಕಂಡು ಅರಸೆಂದ್ರು

ಹಿಟ್ಟಿಗಕ್ಕಿ ನೆನಸೀಕೆ ನಟ್ಟಿ ನಡುಕ ಹೊದೆ
ಚಳಿ ಬಂತು ಅಂದು ನಡಗಿದೆ ನನ್ನೊಡೆಯರು
ಗುಡಿಗ್ಹೋಗು ಅಂದು ಕಳುಸೀರುನನ್ನೊಡಿಯರು
ಹಾಡ್ಹೇಳುತಕ್ಕಿ ಅರಿತಿದ್ದೆ ನನ್ನೊಡೆಯರು
ಎತ್ಕಂಡೇ ಬಂದ್ರು ಕೊಡಿಕೋಲು

ಕರಿಯ ಕಣ್ಣಿನಕಾಕಿಯರ ಕಂಡು ಕರುಬೂದು
ಓಡೋಡುಪ್ಪರಿಗಿ ಮನಿಕಂಡು ನಮ್ಮೊಡಿಯರೆ
ನಿಮ್ಮ ಕಂಡು ಜನರ ಕರಬೂರು

ಒಡೆಯರ ಕೂಡ ಹೇಳೀರೆ ಉಟ್ ಪಟ್ಟೆ ಕೊಡುವಾರು
ಒಡೆಯರ ಮಡದಿ ಒಡತೀಯ ಕೈಲ್ಹೇಳಿರೆ
ಮುಡಿದ ತಾವರಿನೆ ಕೊಡುವರು.

ಒಡೆಯರು ಮೆಟ್ಟುವ ಮೆಟ್ಟು ಸಾಜಾಕೊಂಬ ಹಿತ್ತಾಳಿ
ಮ್ಯಾಲೊಂದು ತರದ ಗುರೂಗೂಜಿ ಮೆಟ್ಟನ್ನು ಮೆಟ್ಟಿ
ಒಡೆಯರು ನಮ್ಮನಿಗೆ ಬರುವಾರು

ಬೆನ್ಹಾಕಿ ನಡೆದಾರೆ ಬೆನ್ನು ಬಾಮಡಿ ನೋಡಿ
ಬೆನ್ನೊಳಗಿರುವ ಸುಳಿ ನೋಡಿ ನಮ್ಮೊಡೆಯರ
ಬೆನ್ನಿಗು ಬರುವ ಜನ ನೋಡಿ

ಯಾರ್ಯಾರು ಕರಿದಾರೆ ಹೋಗದಿರು ಅಣ್ಣಯ್ಯ
ಜಾಗಿ ಕೊಟ್ಟೊಡೆಯ ದನಿಗಳು ಕರೆದೀರೆ
ಹೋಗಿ ಬಾ ಸತ್ತುಗಿಯ ನೆಳಲಡ್ಡೆ