ಗಂಡನ ಗುಣವೇ ಕಂಡೆ ಅಂಬವರಿಲ್ಲ
ಹಿಂಡೆತ್ತಿನೊಳಗೆ ಬಸವನ ಕಾಲ್ಹೆಜ್ಜೆ
ಕಂಡೆ ಅಂಬವಳೆ ಕಡು ಜಾಣೆ

ಗಾಂಧಾರಿ ದೇವಿಗೆ ನೂರೊಂದು ಮಕ್ಕಳು
ಸಂತೋಷಕಿಕಲ್ಲ ಸಭೆಗಿಲ್ಲ ಗಾಂಧಾರಿ
ಹಡೆದಾಳು ಹರುಗಿ ಧಡಿಹಾಂಗೆ

ಮುಡುವಾಳ ಮುಪ್ಪಾರು ಪರಿಮಳ ಕೆಡುವುದ
ದೊರೆಗಳ ಹಿಂಡಿರಿಗೆ ಬಡತನ ಬಂದರೆ
ದೊರೆತನದ ಮತೇ ಆಡುವರು.

ಗಂಡರ್ಯಾರಿಗೆ ನಿಜವೇ ಮಕ್ಕಳ್ಯಾರಿಗು ನಿಜವೆ
ಇದು ಮೂರು ದಿನ ಸಂಸಾರ ಬದುಕೀಗೆ
ಆಡಿ ಮಢಾಇದರ ಫಲವುಂಟೆ

ನೆಂಟರ ಮನೆಯಲ್ಲಿ ಎಂಟೆಮ್ಮೆ ಎಳಗಂದಿ
ಎಂಟು ದಿನ ಹೆಚ್ಚು ಇರಬಾರದಣ್ಣನ ಮಾಯೆ
ಹಸಿ ಹೋಗಿ ಮಣಿಯ ಕೊಡುವರಣ್ಣನ ಮಾಯೆ
ಮೊಸರಿಟ್ಟು ಮಜ್ಜಿಗೆಯ ಕೊಡುವರು

ಪತ್ರಿಯ ಮರದಡಿ ಬಿಚ್ಚಿದ ಪುಸ್ತಕವ
ಪತ್ರಿ ಮರ ಬಾಡಿ ಮುಖ ಬೆಗರಿ ತಮ್ಮಯ್ನ
ಹೊತ್ತ್ ಹೋದ್ರೂ ಸಂಧಿ ಬಿಳಿಯದು

ಹೊಟೆ ಕಿಚ್ಚಿನ ಜೀವ ಎಲ್ಹೋಯಿ ಸುಡ್ವಾದು
ಹಣ್ಣಿನಿ ನೆಲ್ಲಿ ಮರದಡೀ ಆ ಜೀವ
ಎಲ್ಲ ಬೆಂದೀರೂ ಎದಿ ಬೇಯ

ಮುಡಿಯಾಳು ಮುಗ್ಗೀರು ಪರಿಮಳ ಕೆಡುವುದೆ
ದೋರಿಯ ಮಕ್ಕಳಿಗೆ ಬಡತನ ಬಂದರೂ
ದೊರೆತನದ ಮಾತ ಬಿಡುವರೇ

ನಗೆ ಮುಖದ ಚಲುವಾನೆ ನಗಿತಾನೆಂದು ಕಾಣಬೇಡಿ
ನಗಿ ಬೇರೆ ಆವನ ಬೇರೆ ಬಾಳೀಯ
ಕುಂಡಗ ಬೇರೆ ಕೊನಿ ಬೇರೆ ಅಂಬಿಗಲಲ್ಲಿ
ಕೊಂಡು ಮಾರುವವನ ಕುಲಬೇರೆ

ಸಂಪೂಗಿ ಮರನಡಿ ತಂಪೆಂದು ಬಂದ್ ನಿಂತೆ
ಕೊಯ್ಲಿಲ್ಲ ಹೂಗ ಮುಡಿಲಿಲ್ಲ ದೇವರೆ
ಮಾತಿಗೆ ನಾನು ಗುರಿಯಾದೆ

ಮಳೆಗಾಲದ ಮಳೆ ಒಳವ್ಯಾರ ಬಲ್ಲವರು
ಹೊದುವ ಕಂಬಳಿಗೆ ಪರರಿಗೆ ಕೊಟ್ಟೀಕೆ
ಹಳುವ ಸೇರಿದನೆ ಸಲುಹೆಡ್ಡೆ

ಸತ್ ಮರ ಚಿಗರೂದೆ ಬಿದ್ದ್ ಮರ ಬೇರ‍್ಹೊಯ್ವೂದೆ
ಸ್ವರ್ಗಕ್ಕೋದವರು ಬರುವರೆ ನಮ್ಮ ತಾಯಿ
ಸತ್ಹೆಣಕೆಯಷ್ಟು ಮರಗೂರೆ