ಶಾಲೀಗ್ ಹ್ವಾದ ಮಗನೀಗೆ ಹಸಿಹಾಲು ಬಿಸಿಗಂಜಿ
ಹಸ್ರಂಗಿ ಮ್ಯಾಲ್ ಗಡಿಯಾರು
ಹ್ಯಾಕಂಡು ಇಸ್ಕೂಲಿಗೆ ಹ್ವಾಪ ಮಗ ಬಂದ

ನನ್ನೂರ ಹೆದ್ದಾರಿ ಮೇನ್ ಮನ್ನೆ ಹ್ವಾದವರ‍್ಯಾರು
ಚಿನ್ನದ ರೇಡಿ ತಕ್ಕಂಡ ತಮ್ಮಯ್ಯ
ಯಾತ್ರೀಗೆ ಹೊಯ್ಕಂದ ನಡೆದಾನು

ನಾರಿಯ ಕ್ಯಾಸ ನಲವತ್ತೆ ಮಾರುದ್ದ
ಏಳ ಮಾರುದ್ದ ಎಣಿಗೆಂಟ ಅಂಬಾಡಿ
ಆನೆ ಬಾಗಿಲಿಗೆ ತಡೆದೀತ

ಹಟ್ಟಿಯ ಹಣಿಗುಣೋ ಮನಿಯ ದೆವ್ರೆ ಗುಣೋ
ಕರಿಯುಕ್ಹೋದವಳ ಕೈಗುಣ ಕಾಂಜೀನ
ಭರಣಿ ತುಂಬ್ಹಾಲ ಕರೆದಾಳ

ಹೆಬ್ಬಾಗಿಲ ಚಂದಕ್ಕ ಗುಬ್ಬಿ ಗೂಡ್ಹಾಕಿತ್ತ
ಅಂಬ್ರದಿಂದಿಳಿದ ಕಡು ಮಾಡು ಅಣ್ಣಯ್ಯಗೆ
ಗುಣದಿಂದ ಬಂದೋ ಗಳುಬಳಿ

ಮಾವಿನ ಹೂಗಿಗೆ ಯಾರ ಬಪ್ಪರು ಕಳ್ಳರು
ಬಾನದ ಮೇಲಿರುವ ಮುಗಿಲರು ಪಾಂಡವರಳಿಯ
ದೇವೇಂದ್ರನ ಮಗಳ ಬಯಕಿಗೆ

ಆಚಾರಿ ಗಂಡೀರೆ ಐದೇಳಿ ಜನಿವಾರೋ
ಪಂಚ ಪತ್ತುರದ ಉಳಿಬಾಚಿ ತಕ್ಕಂಡು
ಪಂಚುಳ್ಳ ದೇಶ ತಿರುಗುವ

ಹಾಡಿಗೆ ಹನ್ನೆರಡು ಕವ್ರು ಮಾತಿನಲಿ ಚದುರಂಗ
ಉಂಬೂ ಕೂತಲ್ಲೆ ಎರಡಂಗ
ಮಾಡಿದ ಪಾಪೋ ಕಾವೇರಿಗ್ಹೋಯಿ ಪರಿಹರ

ಆಚೆ ಕೂಸಾಳಗುಡಿ ಈಚೆ ಕೊರಗರ ಕೊಪ್ಪ
ನಡೆಗೊಂದೆ ಜಾತಿಗಿಡ ಹುಟ್ಟಿ ಅಣ್ಣಯ್ಯ
ಆ ಹೂಗಿನ ಮೇಲೆ ಮನಸೇನು

ಅಕ್ಕ ತಂಗ್ಯರ್ ನಾವು ನಾಗೂರ ಸಂತೀಗ್ ಹೋಯಿ
ರುವಾಗ ದರಿ ಹತ್ತಿ ಗೋಯ್ ಹಣ್ಣ ಕೊಯ್ವಾಗ
ರಂಡ್ಯಾರ‍್ ಮುಂಡ್ಯಾರ‍್ ಅಂದ ಕರೆದಾನ ಮದುಮಗ
ಅವ್ರ ಮನಿ ಹೆಣ್ಣೆ ಮದಿಯಾದ

ಕೊರಗೂತಿ ತಲಿಮ್ಯಾಲೆ ನಾಲ್ಕು ಚೊಟ್ಟಿನ ಬುಟ್ಟಿ
ನಾಕೂರು ತಿರುಗಿ ಬರುವೋಳೆ ಕೊರಗತಿ
ಲೇಸೇನು ಅಪ್ಪಯ್ಯನ ಮನೆಯಲ್ಲಿ

ಅರಿಕಲ್ಲಿಗೆ ಅರಿವುಂಟೆ ತುರಕರಿಗೆ ಜನಿವಾರುಂಟೆ
ಸರಕಾರಕ್ಕೆ ಉಂಟೇ ಸುಖ ದುಃಖ ನಮ್ಮಂಥ
ಬಡಬಗ್ಗರಿಗುಂಟೆ ಧರ್ಮವು

ಹೊತ್ತರ ಮುಂಚೆದ್ದು ದುಷ್ಟರ ಮುಖ ನೋಡಿ
ಇಷ್ಟೊತ್ತಿನವರೆಗೂ ನಿರಾಹಾರ ದೇವರೆ
ದುಷ್ಟೆ ನನಗೆಲ್ಲಿ ಎದುರಾಳಿ

ಮಾತುಗಾರತಿ ಮನೆಗೆ ಯಾಕ್ಹೋದಿ ಗಿಣಿರಾಮ
ಮಾತಿಗ ಮಾತ ಪ್ರತಿಮಾತ ಆಡುವಳ ಕೈಲಿ
ಸೊತು ಬಂದಿಯೇನೋ ಗಿಣಿರಾಮ

ಬಾವಿಯ ಕಟ್ಟೇಲಿ ಬಳುಮೇಸ್ತ್ರಿ ದೂರೇನ
ನಮ್ಮೆಣ್ಣು ಪರರ ಮನೆಯಲ್ಲಿ ಕೊಟ್ಟೀರ‍್ ಮೇಲ್
ಬಳಮೇಸ್ತಿ ದೂರುದ ತರವಲ್ಲ ತಾಯಮ್ಮ
ಸುಮ್ಮನೆ ತಲೆ ತಗ್ಗಿಸಿ ಒಳಗ್ಹೋಗಿ

ಅಡಿಗಿಯ ಮಾಡೂಳ ಮಕ್ಕಳ ಕೈ ತಡೆಯೋಳ
ಒಕ್ಕಿ ಬಂದ್ ಹಾಲ ಅಡಸೂಳ ಬಾಲಮ್ಮನ
ಬಾಳು ಮನಿಗ್ಹೆಂಗೆ ಕಳುಹಾಲಿ

ಕಣ್ಣ ಕಾಡುಗಿಯೆ ನನ್ನ ಮಾತನು ಕೇಳು
ಚೆನ್ನಿಗರ ಕಂಡು ತೆಲಬಾಂಗು
ಚೆನ್ನಿಗರ ಕಂಡುತಲೆಬಾಂಗದಿದ್ರೆ
ಹೆಣ್ಣೆಂಬ ಕುಲಕು ಹಳುಬಂತು

ದೇವರ ಕೋಣೀಲಿ ನ್ಯಾಗಳ ಬಿದ್ದೀತು
ಹಾವೆಂದೇ ಜೀವ ಹೆದರೀತು ದೇವರೆ
ನ್ಯಾಗಳದ ಕೀಲು ವೈಕೀಲು

ಅಮ್ಮ ನಿಮ್ಮನೆಯಲ್ಲಿ ಕಮ್ಮಗೇನ್ಹಾರಿತು
ಅಮ್ಮ ನಿಮ್ಮನಿಯಲ್ಲಿ ತಿಥಿ ಏನು
ಅಲ್ಲಗೆಟ್ಟ ಜೋಗಿ ಸುಳ್ಳ ಮಾತ ಹೇಳಬ್ಯಾಡ
ನಾಳೆ ನಮ್ಮನಿಯಲ್ಲಿ ಮೆದಿ ಜೋಗಿ
ಯಾವೂರ ಹೆಣ್ಣಮ್ಮ ಯಾವುರ ಗಂಡಮ್ಮ
ಯಾವ ದಿನದಲ್ಲಿ ಮದುವೆಯೂ
ಬೈಂದೂರ ಹೆಣ್ಣುಜೋಗಿ ಭಟ್ಕಳದ ಗಂಡ ಜೋಗಿ
ಶುಕ್ರವಾರದ ದಿನದಲ್ಲಿ ಮದುವೆಯೂ

ರಟ್ಟಿ ಜಪ್ಪುಂಗೆ ಕೂಲಿಯ ಕೊಟ್ಟುಂಬೆ
ಸಭೆಯೊಳಗೆ ಸೊಪ್ಪು ಆರಿದುಂಬೆ ದೇವಕಿ
ದಾಯಾದ್ರಿಗೆ ದಯನು ಎನಲಾರೆ

ಕಳ್ಳಿಯ ಮೈಬರ್ಣಣ ಸೆಳ್ಳಿಯ ಹಣ್ಣನ್ಹಾಂಗೆ
ಇರುಳೆದ್ದ ಗೈಯುವ ಗರತೀಯ ಮೈ ಬಣ್ಣ
ಗೆಂಡ ಸಂಪೂಗಿ ಎಸಳಾಂಗೆ

ಬಳುಕಿದ ಸೊಂಟಕ್ಕೆ ಕೊಳಕಿಯ ನ್ಯಾಗಳ
ಬಳುಕಿ ಬಣಸಾಲೆಯಲ್ಲಿ ಇಳಿವೋನೆ ತಮ್ಮಯ್ಯ
ಕೊಳಕಿ ತಪ್ಪಿದರೆ ಅರಿಯನೇ

ಬೆಳ್ಳನಾ ಬೆಳಗೆದ್ದು ಬೆಳ್ಳಿ ತೂಕನ ಮಾಡಿ
ಕಳ್ಳ ಕಾಣಕ್ಕ ಅಕಸಾಲಿ ನಿನ ಕಮಿಯ
ವಾಲೀಗ್ ಹಿತ್ತಾಳೀನೇ ಬೆರಸಿದ

ಆಕ್ಕ ತಂಗೀರು ಸೇರಿ ಇಕ್ಕೇರಿ ಸಂತೆಗೆ ಹೋಗಿ
ತಕ್ಕೊಂಬಾ ಬಾರೆ ಚೌಲಿಯ ಚಿನ್ನದ ಕೂದ್ಲ
ಒಪ್ಪಿತು ಇಬ್ಬರ ಕೂದಲಿಗೂ

ರಟ್ಟೇಲಿ ಸತುವಿಲ್ಲ ಒನಕೇಲಿ ಬಳೆ ಇಲ್ಲ
ಇಕ್ಕೇರಿ ಕಬ್ಬಿಣನೆ ತರಿಸಣ್ಣ ನಾ ತೊಳುವ
ಒನಕೆಗೆ ಬಳೀನೆ ಕಟ್ಸಣ್ಣ

ವಾಟೆಯ ಮರಡಿ ವಾಟೆಯ ಹಣ್ಣುಬಿದ್ದು
ಬೇಟೆಗೆ ಹೋದವನ ಮೊಲನುಂಗಿ ಆ ಊರ
ಸಂಬಳಕಿದ್ದವನ ನುಸಿನುಂಗಿ

ಮಕ್ಕಳ ತಾಯಿ ಬರುತಾಳ ಬಲು ಬಂಜಿ ಬರುತಾಳ
ಒಂದೇ ಹತ್ತವಳು ಬರುತಾಳ ತಂಗ್ಯಮ್ಮ
ಕಂದಯ್ನ ಒಳಗೇ ಕರಕಾಣ

ಉರುಗನ ಸಪ್ಪು ಗರಭಕ್ಕೆ ತಂಪೆಂದು
ಕರ್ಣ ಅರ್ಜುನರ ಬಸರೀಲಿ ಅಕ್ಕಮ್ಮ
ಉರುಗನ ತಂಬುಳಿಯ ಉಣಕಂದ್ಲ

ಒಂದ್ ಚಂಬು ನೀರಾಗೆ ಪುರುಷರ ಮುಖ ತೊಳೆದು
ಸಣ್ಣ ಬಾಲಯ್ನ ಮುಖ ತೊಳೆದು ಮಿಕ್ಕಿದ ನೀರು
ಏಳು ಕೊಪ್ಪರಿಗೆ ಎಸರಿಟ್ಟು ಮಿಕ್ಕಿದ ನೀರು
ಏಳು ಮುಡಿ ಅಕ್ಕಿ ತೊಳೆದಿಟ್ಟು ಮಿಕ್ಕಿದ ನೀರ್
ಏಳ ಮೆಲ್ಲರಕೆ ಹದಮಾಡಿ ಮಿಕ್ಕಿದ ನೀರ್
ಬೆಳಗಿನ ನಾಡರಿಗೆ ಬೆಲೆ ಮಾಡಿ ಮಿಕ್ಕಿದ ನೀರ್
ಕಡ್ಕೆ ನಾಡರಿಗೆ ಕಡ ಹಾಕಿ ಮಿಕ್ಕಿದ ನೀರ್
ಕಡ್ಕೆ ನಾಡರಿಗೆ ಕಡಹಾಕಿ ಮಿಕ್ಕಿದ ನೀರ್
ಪಡುವಿನ ಸಮುಂದರಕ್ಕೆ ಹರಿದ್ ಹೊಯ್ತು

ಭರಣಿ ಉಪ್ಪಿನಕಾಯಿಬಂದರುದಾ ಸಣ್ಣಕ್ಕಿ
ಬಂದರಿಗೆಲ್ಲಾ ಅನುಕೂಲ ಮಾಡೀಕೆ
ಅಣ್ಣಯ್ಯ ಬಂದರಿಗೆ ನಡೆದೀದ

ಕಬ್ಬು ಸೀ ಅಂದ್ಹೇಳಿ ಬೇರೆಲ್ಲ ಜಯ್ದೀರು
ಒಬ್ಬಿಷ್ಟಗ್ಹೇಣ್ಣು ಕೊಡದೀರು ತಂಗ್ಯಮಗೆ
ಹಬ್ಬ ಜಾತುರಿನೆ ಕಡಿಮ್ಯಾದೋ

ಕಡಿಯಕ್ಕಿ ಕೊಳ್ ಚಂದ ಕಡದ ಮಜ್ಜುಗಿ ಚಂದ
ಕಡಲೊಳಗೆ ಬರುವ ತೆರಿ ಚಂದ ಗಂಗಾತಾಯಿ
ನೀವ್ ಚಂದ ನಮ್ಮ ಬಳಗಕ್ಕೆ

ಆಳೆತ್ತರ ಕಣ್ಣೀರ ಬೀಳ ಬ್ಯಾಡಂದಿರು ಬಿದ್ದು
ಧೂಳ ಮಾಣಿಕದ ಕಣನಲ್ಲೂ  ಈ ಜೀಂವೆ
ಹಾಳಾದು ಪರರ ಮನೆಯಲ್ಲೂ

ಬಡತನ ಅಂಬುದು ಬಿಡದೆ ಬೆನ್ನಿಗೆ ಬಂದು
ಸಣ್ಣ ಕಂದಯ್ಯ ನೆರಿದಾಗ ಬಡವೀಯ
ಹಡಗು ತಂದಿಡುವ ಮನೆಯಲ್ಲು

ಕಂಬಳ ಗೆದ್ದಿ ಕೂಡ ಒಂಭತ್ತು ಮುಡಿ ಗೆದ್ದಿ
ಉಂಬಳಿ ಮಾವಯ್ನ ನಡು ಬೈಲು ನಲವತ್ಹಾನಿ
ಮದು ಮಕ್ಕಳ ಹಾಂಗೆ ತಲೆ ಬಾಂಗಿ

ಹಡಗೀನ ಮ್ಯಾನ್ ಬರುವಾಗೆ ಗುಡುಗು ಮಿಂಚಿನ ಸೀರಿ
ಸೆರಗಿಗು ಗರುಡ ಹನುಮಂತ ಸಿರಿಯೇ
ಶಿವ ಕೊಂಡ ತನ್ನ ಮಡದೀಗೆ

ಆಳೆದ್ದಿರಂಗಳೋ ಧೂಳೆದ್ದೀರ ಪಟ್ಟಣೋ
ನಾನೆದ್ದಿರು ಬರಿಯ ಹುಲಿಹಂಗ ಅಣ್ಣಯ್ಯನ
ಆಳಿಯೆದ್ದಿರು ಆಡಿಕಿ ಸಸಿಹಾಂಗೆ

ಅತ್ತಿಗೆ ಮೈದಿನಿ ನಾವಿಬ್ಬರೊಂದಾಗಿ
ಅರೆಯ ಮ್ಯಾನಡಕಿ ಸಸಿ ನೆಟ್ಟು ಅತ್ತಿಗಿ
ಹೆಡಿ ಬಿಟ್ಟರು ನಮ್ಮ ಗುಣ ಬಿಡ

ಬೇಲಿ ಮೇಲಿರುವುದೇ ದರ ಹಿರಿಯಕಾಯಿ
ಕಾಯಿ ಒಳ್ಳೆದಮ್ಮ ರುಚಿ ಇಲ್ಲ ಲಾವೂರ
ನೆಂಟರೊಳ್ಳೆಯವರೆ ನಡೆತಿಲ್ಲ

ಸಣ್ಣಕ್ಕಿ ಬುತ್ತಿಯ ಹನ್ನೆರಡು ಕಟ್ಕಂಡ
ಹನ್ನೆರಡೇ ರಾಜು ತಿರುಗುವ ಬಾಲಯ್ಯ
ಎಲ್ಲಿ ಹೋದರ‍್ಹೆಣ್ಣೆ ದೊರಕಿಲ್ಲ ಲಾವೂರ
ದಿಂಡಿ ಸಂತಾನವೇ ದೊರಕೀದೋ

ಸಂತೀಗಿ ಹೋತಾಳ್ ಕೈಲಿ ಸಂಚಿ ಸುಣ್ಣದ ಕಾಯಿ
ಎಂಟುನೂರಡಕಿ ಎಲಿ ನೂರು ತಕ್ಕಂಡ
ಮಟ್ಟಿಯಲ್ಲಿದ್ದಡಕಿ ಹೊರ ಬಂದು

ಮಧ್ಯಾಹ್ನದೊತ್ತಿಗೆ ಬಿದ್ದಿತು ಮಾಯಿನಣ್ಣು
ಎದ್ದಾಳೆ ಸೀತೆ ಸೆರಗೊಡ್ಡಿ ಲಾವೂರ
ಬಿದ್ದಳು ಮಾರಾಯನ ಸೆರಗೀಗೆ

ಕಳ್ಳೆಲ್ಲಿ ಕುಡಿದಿಯೆ ಬಿಲ್ಲೆಲ್ಲಿ ಮರೆತೀಯ
ಕಳ್ಳ ದೀವುತಿಯ ಮನೆಯಲ್ಲಿ ಅಣ್ಣಯ್ಯ
ಬಿಲ್ಲಿಟ್ಟೆ ಕಳ್ಳ ಕುಡಿದಾನ

ಮೂಡಿನ ಗುಡ್ಡಿಯ ಮ್ಯಾನೆ ತೊರಿತು ಕೊರಗರ ಬೆಳ್ಳಿ
ಅಲ್ಲಿಗೆ ಸೂಲ್ಯದೇವ್ರು ನಡೆದಾರು ಸೂಲದೇವ್ರು
ಹಿಡಿದರು ಕೊರತಿಯೆ ನಡುತೋಳು
ಕಿಟ್ಟ ಬ್ಯಾಡಿ ಸೂಲ್ಯದೇವ್ರೆ ಮುಟ್ ಬ್ಯಾಡಿ ಸೂಲ್ಯದೇವ್ರೆ
ಮುಟ್ಟಾರು ಮುತ್ತಾರತನದ ಮುಟ್ಟು ಮುರು ದಿನಕೆ ಸಂದು
ಮುಳುಕಿ ಬಾ ಹರಿವ ಜಲಧೀಲೆ
ಮುಳುಕಿ ಬಪ್ಪುಕೆ ಸ್ವಾಮಿ ಶಿಶು ಮಕ್ಕಳರಮನಿ
ಗೌಳಿ ತಾಗಿದರೆ ಕೆಡುವುದು