ಬಾರತವಿದ್ದರೆ ಬಾರೆಂಬಲಣ್ಣಯ್ಯ
ಬಾರತವಿಲ್ಲದೆ ಬಡವಿಯೋ ಹೋಗೀರೆ
ಬಾಗಿಲ ಕಸವ ಗುಡಿಸೆಂಬ

ಅಣ್ಣನ ಹೆಂಡತಿಗಿಂತ ತಮ್ಮನ ಹೆಂಡತಿ ಜಾಣೆ
ತಂಗಿ ಒಬ್ಬಳಿಗೆ ನೆಲೆ ಇಲ್ಲ ಸಂಪುರಿಯ
ಹೊಳೆ ಬೇಕು ಅಣ್ಣಯ್ಯನ ಮನೆ ಬೇಡ

ಹಾಗಲ್ ಕಾಯಿ ಆಪಾರೆ ಆರೆಮ್ಮೆ ಕರುವಾಗೆ
ಆಹಾರದ ಭೂಮಿ ಬೆಳುವಾಗೆ ತಮ್ಮಯ್ಯ
ಆಗಳಿಕ ತನಮಡದಿ ಕರಿಕಂಬ

ಅರ್ ಎಮ್ಮಿ ಬತ್ತಿಹೋದೋ ಹಾಗಲ್ ಕಾಯಿ ಬಿಳಿದ್ ಹೋದೋ
ಆದರದ ಭೂಮಿ ಬರ್‌ಡ್ ಬಿದ್ದೋ ತಮ್ಮಯ್ಯ
ಆಗಳಿಕ ತನ್ನಕ್ಕನ ಕರಿಕಂಬ

ದಾಯಾದಿ ಕಾದಾಡ್ವಾಗೆ ಭೂಮಿ ಪಾಲಾಪಾಗೆ
ಆಗಳ್ ತಮ್ಮಯ್ಯ ಹಸು ಮಗು ಕೂಕಂಡ್
ನಡು ತುಂಡಿನ್ ಭೂಮಿ ತನಗೆಂಬ

ಹೆಂಡಿರು ಮಕ್ಕಳಿಗೆ ಹಿಂಡೆಮ್ಮೆ ಹೊಡಕೊಟ್ಟ
ಬೆನ್ನಿಗೂ ಬಿದ್ದ ಹೆರಿಯಕ್ಕ ಮಕ್ಕಳಿಗೆ
ಹಿಂದಿನ ಸಾಲ ಬರಕೊಟ್ಟ

ಬೇಸರವಾಯ್ತೆಂದ ಅಣ್ಣನ ಮನಿಗ್ಹೋದೆ
ಅತ್ತಿಗೆ ಕೊಟ್ಟಿದಳೆ ಕೊಡಗಡಿಗಿ
ಕೊಟ್ಟ ಕೊಡಗಡಿಗಿ ಹಿತ್ತಲಲ್ಲಿ ಜರದೀಕೆ
ಹೋದೆ ಮಾವಯ್ಯನ ಅರಮನೆಗೆ
ಹೋದೆ ಮಾವಯ್ಯನ ಅರಮನೆಗೆ ಮಾವನ ಮಡದಿ
ಉಂಡ್ಹೋಗ ಸೊಸೆಯೆ ಉಳಿದ್ಹೋಗ ನಿನ ಮಾವ ನೆಟ್ಟ
ಕೆಂಡ ಸಂಪಿಗೆಯ ಮುಡಿದ್ಹೋಗ

ಗಟ್ಟಿಕ್ಹೋದಣ್ಣಯ್ಯ ಚಿನ್ನದ ಮಲಿಗಿತಂದ
ಸುಣ್ಣದ ಹೆಳಿ ಮೇಲೆ ಒಳಕ್ಹೋದ ಅಣ್ಣಯ್ಯ
ಸುಮ್ಮನೆ ಮಲ್ಲಿಗೆಯ ಮುಡಿ ಎಂದ

ಅಕ್ಕನಕರಿ ಎಂದಿರೆ ತಿಂಗಳು ತುಂಬಲಿ ಎಂದ
ಪಿಲ್ಲೀಯ ಕಾಲ ಮಡೆದಿಯ ಕರಿ ಎಂದರೆ
ಕುದುರಿ ಹಲ್ಲಣವೇ ಬಿಗಿದಾನು

ಅಣ್ಣನ ಮಡದಿಕೂಡೆ ನಾನೇನ್ಹೇಳಿದಳಲ್ಲ
ಚೆಲ್ಲಿದ ಬಿಕ್ಕಿದ ಮಗಿ ಎಂದ ಮಾತಿಗೆ
ಹೋಗೆಂದಳು ನೀನು ಹೈಟೆಂದ್ಲು
ಸಾಕಣ್ಣ ಸಂಸಾರ ನೂಕಣ್ಣ ದೋನಿನ
ದಾಣಿಸಿಕೊಡಣ್ಣ ನನ್ನ ಹೊಳಿಯಚೆ
ಇಷ್ಟು ಸಣ್ಣ ಮಾತಿಗೆ ಸಿಟ್ ಬಂತಾ ತಂಗಿ
ಪಟ್ಟಿ ತಂದಿದೆನ ಉಡು ಬಾರೆ ನಿನ ಮಗನಿಗೆ
ಗೆಜ್ಜಿ ತಂದಿದೇನೆ ಉಡು ಬಾರೆ ನಿನ ಮಗನಿಗೆ
ಗೆಜ್ಜಿ ತಂದಿದೇನೆ ಇಡು ಬಾರೆ
ಪಟ್ಟಿ ನಿನ ಮಡದಿಗೆ ಗೆಜ್ಜಿ ನಿನ ಮಗನಿಗೆ
ದಾಣಿಸಿಕೊಂಡ ನನ್ನ ಹೊಳಿಯಾಚೆ