ಸುರಗಿ ಹೂವಾಪಾಗೆ ಸುರನಾರಿಯೆರು ಮುಡುವಾಗೆ
ನನ ತಾಯಿ ಚಿಂತಿ ಬಿಡುವಾಳು ಏನೆಂದು
ಹೂ ಮುಡಿವ ಮಗಳು ಮನೆಲಿಲ್ಲ
ಹೆಣ್ಣು ಹುಟ್ಟಿದ ಮನೆಯು ಇನ್ನಾರು ಉದ್ಧಾರಾಯ್ಲಿ
ಎಮ್ಮೆ ಹನ್ನರಡೆ ಕರೆಯಲಿ ತಾಯಮ್ಮನ
ಹೆಸರು ನಾಕುರಿಗೆ ನೆಸೆಯಲಿ
ಕಡಿಯಕ್ಕಿ ಸಂಗಡ ಇಡಿಯಕ್ಕಿ ದಾನವ ಮಾಡಿ
ತಂದ ನೀರಿನಲಿ ಶಿವದಾನ ಮಾಡಿದ ಪುಣ್ಯ
ಹೆತ್ತಲ್ಲು ಹಿರಿಯ ಮಗಳಿಗಳಿಗೆ
ನಾರಿ ಬಾಲಮ್ಮಗೆ ನಾಗರಂಚಿನ ಸೀರೆ
ತಾಮರದ ಚಂಬು ಬಲಗೈಲಿ ಹಿಡಕಂಡು
ನಾಗದೇವ್ರಿಗೆ ತನುವ ಎರೆದಾಳ
ಹೆಣ್ಣು ಹುಟ್ಟಿತುಎಂದು ಅಣ್ಣನಿಗೆ ಹೇಳುಕಿ ಕೊಟ್ಟೆ
ರನ್ನದ ತೊಟ್ಟಿಲು ಕೊಡಲೆಂದೇ
ಹೆಣ್ಣು ಹುಟ್ಟಿದರೆ ಮಣ್ಣಿನ ಹೊಂಡಕೆ ಹಾಕು
ರನ್ನದ ತೊಟ್ಟಿಲ ಕೊಡಲಾರೆ
ಪಾಪಿಷ್ಟ ಅಣ್ಣಯ್ಯ ಅಷ್ಟೊಂದ್ ಹೇಳಿರೆ ಸಾಕು
ಕಾನೊಳಗಿನ ಎರಡೇ ಕಣಗೀಲ ಎಲೆತಂದು
ಹಾಸೂನೆ ಎರಡನೇ ಹೊದಸೂನೆ
ನಾಡಿಗರ ಕೇರೀಲೆ ಬೇಡುಗರ ಮನೆಯುಂಟು
ಬೇಡಿ ತಂದ್ ಹಾಲ ಕುಡಸೂವೆ
ಹೆಣ್ಣಿಲ್ಲ ದಾಕಿಯ ಹೆಣ ಸಿಂಗಾರಾಪತಿಗೆ
ಬಣ್ಣದ ನೆರಿಯ ಸೊಸೆದೀರು ನಿಂತ್ಯಂಡ
ಕಣ್ಣ ಕಾಡುಗಿಯ ಅಳಿಯಾರು
ಬೆನ್ನು ತಿಕ್ಕುವರಿಲ್ಲ ಬೆನ್ನಿಗೆ ಬಿದ್ಧವರಿಲ್ಲ
ನನತಾಯಿ ಹೆಣ್ಣೆ ಪಡಿಲಿಲ್ಲ ಶಿರಸಿಯ
ಮಾದೇವಿ ನನ್ನ ಹಿರಿಯಕ್ಕ ಕೊಲ್ಲೂರ
ಮೂಕಾಂಬೆ ನನ್ನ ಕಿರಿಯಕ್ಕ
ಹುಟ್ಟೀದ ಗಳಿಗೆ ಪಟ್ಟು ಆಳೂವ ಗಳಿಗಿ
ಮೈನೆರೆದ ಗಳಿಗೆ ವಿಷಗಳಿಗೆ ನನ ತಾಯಿಗೆ
ಹೆಣ್ಹುಟ್ಟೀತೆಂದು ಹರ್ಷಿಲ್ಲ
ಹೆಣ್ ಕೇಂಬುಕು ಬಂದೀರಿ ಕರಿಕಿ ಕಲ್ಯಾಣದರು
ಮಾಯಿ ಮಾವ ಇದ್ರ ಮಗಳೀಗೆ ಬಾಲಮ್ಮಗೆ
ಕೂಡಾಡುಕಿದ್ರ ಮೈದಿನಿ
ಕಾಕಿ ಕರಬುವ ರಾಜುಕಡಲ ಮರಗುವ ರಾಜು
ಮಂಗ ಸರಗೈವ ಮರನ್ಹಳ್ಳಿ ರಾಜ್ಯಕ್ಕೆ
ಮಲಿಕುಡು ಮಗಳ ಕೊಡುವಾರೆ
ಆನಂದ ಪುರದ ಅರಳಿ ಕಟ್ಟೆಯ ಮ್ಯಾನೆ
ಅರಿದಿದ್ದ ಮಗಿನ ಕೈ ದರಿ ಎರುವಾಗೆ
ಅರಳಿ ತನ್ನ ಹಾಲ ಬಿಡುವಾದೆ
ನಾಕ್ಹೆಣ್ಣೆ ಹುಟ್ಟಿತು ನಾಕೂರಿಗೆ ಕೊಟ್ಟೀಳ
ನಾಕೂರು ತಾಯಮ್ನ ಬಳಗವೇ ಅಳಿದಿಕ್ಳ
ನಾಕೂ ಕಡಿನಲ್ಲೇ ಬರುವರ
ನಂಬಳಿ ಹೆಣ್ ಮಕ್ಳ ಅಂಬಾಳಿ ಸುಳಿಯಂಗೆ
ಗಂಡ ಮಕ್ಳ ಸುರ್ಗಿ ಸರಿನ್ಹಂಗೆ ನನತಾಯಿ
ಅಳಿದಿಕ್ಳ ಗಿಳಿಯ ಮರಿಹಂಗೆ
ತಾಯ್ಮನಿ ಜೋತಿಗೆ ಯಾರೆಣ್ಣೆ ಎರಿದರು
ಕಾಮಕಂಟಕದ ಕೊರಳೋಳೂ ತಂಗ್ಯಮ್ಮ
ನಾನೆರಿದೆಣ್ಣೆ ನಿಜವೆಂದು
ಮಂಡಿಯ ಕೂದಲು ಕಂಡವರು ಮರಗೂರೆ
ಪುಣ್ಯ ಸ್ತ್ರೀ ನನ್ನ ಪಡೆದಮ್ಮ ಸಾಕಿದಕೂದ್ಲೆ
ಎಣ್ಣಿ ನೀರಿನಲಿ ನೆರೆದಾವು
ಹೆಣುಮಕ್ಕಳು ಸಾಲದೇ ಹೆಂಗಿರುವಳು ನನ ತಾಯಿ
ಹನ್ನರಡಂಕಣದ ಅರಮನಿ ಗೋಡಿಯ ಮ್ಯಾನೆ
ಹೆಣ್ಣು ಮಕ್ಕಳ ರೂಪ ಬರೆದಾಳು.
Leave A Comment