ಹಾಸಿದ ಹಾಸುಗೆ ಮ್ಯಾಲೆ ಸಾಸುಮಿ ಚೆಲ್ಲೀಕೆ
ಸೂಸುಮಗಾರ ಮೈದಿನ ಕೂಕಂಡ
ಚೆಲ್ಲಿದ ಸಾಸುಮಿ ಮಗಿ ಎಂಬ

ಸೂಳಿಯ ಮನಿಯಲ್ಲಿ ಸುಳಿದಾಡು ಮೈದಿನ
ತೋಳ ಮೆಲೆಂತ ಗುರುತವೇ ಮೈದಿನ
ಸೂಳೆ ಬಂದ ತೋಳ ಹಿಡಿದಾಳ
ಸುಳ್ಳಗೆಟ್ಟ ಅತ್ತಿಗಿ ಸುಳ್ಳು ಮಾತ್ಹೇಳಬ್ಯಾಡ
ಕಲ್ಲು ಬಾಮಿ ಇಳಿದೆ ಮಕು ತೊಳೆದೆ ಅತ್ತಿಗೆ
ಕಲ್ಲು ಬಂದು ಭುಜಕೆ ಹೊಡೆದಾವೆ

ಆಚಾರಿ ಸಾಲ್ಯೆಲ್ಲಿ ಆಚೆ ಕೂತವನಾರೆ
ಆ ತಂಗಿ ಗಂಡ ಮೈದುನ ಕೂಕಂಡ
ಆಚಾರಿ ಕೆಲಸ ಕಲಿಕಂಬ

ಮಾವಿನ ಹಣ್ ತಿಂದು ಮೈಗೆ ಇಟ್ಟವನಾರು
ಮಾನಬಿಟ್ಟವನೇ ಮೈದುನ ತಂಗಿಯ ಗಂಡ
ಮಾಯಿನ್ ಹಣ್  ತಿಂದು ಮೈಗಿಟ್ಟ

ಮಾರಾಯ್ರು ಬೈದಿರೇ ಬಾರದೇ ಕಣ್ಣೀರು
ಗಂಡನ ತಮ್ಮ ಮೈದಿನ ಬೈದೀರೆ
ಮೋಡದಲಿ ಮಳಿಯು  ಸುರಿದ್ಹಂಗೆ

ಚಾವಡಿ ಮ್ಯಾನ ಕೂತವ್ನೇ ನಗಿ ಮುಖದ ಮೈದಿನ
ನಾನುಟ್ಟ ಪಟ್ಟಿ ಹೆಸರ‍್ ಹೇಳ
ಹಾದರಗಿತ್ತಿ ಉಡುವಳೆ ಹಲವು ಬಣ್ಣದ ಪಟ್ಟಿ
ನಾನ್ಹೇಳಲರಿಯೆ ಹಸುಮಗು