ಹಾಗಲಕಾಯಿಗೆ ಹಾಲೊಯ್ದೆ ಮೊಸರ‍್ಹೊಯ್ದೆ
ಏನಹೊಯ್ದರೆ ಅದರ ಕಯ ಬಿಡ ಅಪ್ಪನಳಿಯ
ಊರುಗುಪಕರಿ ನನಗ್ವೈರಿ

ಅರಗದ್ ಗಟ್ಟದ ಮೇಲೆ ಮುರುಗನ ಬೇಟೆಗ್ಹೋಯಿ
ಕಡ್ಗದ ಕೈಯವಳ ಒಡಗೂಡಿ ನಾ ಬಂದೆ
ತಾರೆ ತಂಬುಗಿಯ ಉದಕವ ಮನೆ ಮಡದಿ
ಕಾಲಿಗೆ ನೀರ ಅನುಮಾಡು
ಚಂಬಲ್ಲ ನೀರಿಲ್ಲ ಕೊಂಡಲ್ ಕೊಡ ಪಾನಿಲ್ಲ
ಹಳ್ಳದಲುಂಟು ಹನಿ ನೀರು ಸ್ವಾಮಿ ಕೇಳಿ
ಅಲ್ ಹೋಗಿ ಶ್ರೀಮುಖವ ತೊಳಿಯಿನಿ
ನಿನ ಬೆನ್ನ ಬೇಡತ್ತ ಹೊನ್ ಕೋಲ ಆಡತ್ತ
ತಾರೆ ಗಿಂಡಗಿಲಿ ಉದುಕವ
ನನ್ನ ಬೆನ್ನಬೇಡುವುದೇಕೆ ಹೊನ್ ಕೋಲ ಆಡುವುದ್ಯಾಕೆ
ನಾಮಾಡಿದ ಐಬೇ ನನಗ್ಹೇಳಿ
ನಿನ್ನ ನಾ ತರುವಾಗ ಆರು ವರ್ಷದ ಬಾಲೆ
ಯಾರಿಂದ ಈ ಮಾತ ಕಲೀತಿಯ
ನೆಟ್ಟಂಥ ಮಲ್ಲಿಗಿ ನೆಟ್ಟಂಗೆ ಇರುವುದೇ ಮತ್ತೊಂದು ಮೊಳಕೆ ನೆರೆಯದೇ
ಮುಷ್ಟಿಯಿಂದ ಮೊಳಕೈಗೆ ನೆರಿಯದೇ ಸ್ವಾಮಿ ಕೇಳಿ
ಅದರಾಗೆರಡು ಮೊಗ್ಗು ಅರಳದೇ ಆ ಹೂಗ
ನಿಮ್ಮಂಥ ಜಾಣರು ಮುಡಿವರೇ

ಹಣ್ಣಡಕಿ ಇದ್ದಂತೆ ಕಾಯಡಿಕೆ ತಿಂದಾನೆ
ಹಿಂಡಾರು ಇದ್ದಂತೆ ನೆರಿಮನಿ ಹೋಗುವನಿಗೆ
ನಡುದಾರಿಯಲ್ಲಿಸಿಡ್ಲ ಎರಗಲಿ

ಚಂಡ್ ಮಂಡಿ ಕಟ್ಟಿದಳ ದುಂಡ್ ಮಲ್ಲಿಗೆ ಮುಡಿದೀಳ
ಗಂಡಗೊಂದ್ವಾಲಿ ಬರೆದೀಳ ಏನೆಂದೆ
ಹಿಂದಿ ಪ್ರಕಾರ ನಡೆದಿದೆ
ಚಂಡ್ ಮಂಡಿ ಕಟ್ಹೇಣ್ಣೆ ದುಂಡ್ ಮಲ್ಲಿಗೆ ಮುಡಿ ಹೆಣ್ಣೆ

ಹಿಂದಿನ ಪ್ರಕಾರವೇನಡಿ ಹೆಣ್ಣೆ ನಿನ್ನಂಥ
ರಾಣಿ ನನಗಿಲ್ಲ ದೊರಕೀಳು
ಹಾಂಗಾರಾಗಲಿ ಸ್ವಾಮಿ ಅಯಸ್ಸು ಪಡೆಯಲಿ
ನೂರೊಂದು ಕುದುರಿ ಸರದಾರ ನಿನ್ನಂಥ
ರಾಯರು ನನಗಿಲ್ಲ ದೊರಕೀರು

ಪುರುಷರೊಳ್ಳಿಯರೆಂದು ವರಿಸಿಕೊಳ್ಳದಿರು
ಹರುಷದಲಿ ನಗಿಯೆ ನಗದೀರೂ ಅವ್ರೆದೆಯಲ್ಲೂ
ಸರ್ಪ ಕಾಳಿಂಗ ವಿಷವುಂಟು

ಯಾವಾಗ ನೋಡಿದರು ಹೋಗು ಹೈಟೆಂಬೆ
ಹ್ಯಾಮಗೆಟ್ಟವನೆ ಅಲುಪನೆ ಈ ಮನೆಯಲ್ಲಿ
ಎಷ್ಟು ಮಾಡಿದರು ಫಲವಿಲ್ಲ

ಹಾದಿ ಮ್ಯಾಲ್ಹೋಪೊನೆ ದಾಳೀಂಬರನ ಕೊರಳೋನೆ
ಬಾಯಿಗೆ ಬಾಗಡಿಕೆ ಕೊಡುವಿಯ
ಒಡದಲ್ಲಡಿಕೆ ಇಲ್ಲ ಮಡಿದ ಚೂರಿಯೆ ಇಲ್ಲ
ನನ್ನ ಸಂಗಡ ಬಂದೀರೆ ನಿನ ಮಡದಿ ಏನ್ಹೇಳ್ವಳು
ಯಾವ ರೂಪಿನಲಿ ಬರಲಕ್ಕು
ಅಂಗಿ ಹಾಕ್ಹೆಣ್ಣೆ ಮುಂಡಾಸು ಕಟ್ಹೆಣ್ಣೆ
ಗಂಡು ರೂಪಿನಲಿ ಸವನ್ಹೆಣ್ಣೆ
ಗಂಡು ರೂಪಿನಲಿ ನಡೆದಾಳು
ಯಾರಮ್ಮ ಮನೆಯಲ್ಲಿ ಯಾರಮ್ಮ ಮಠದಲ್ಲಿ
ನನಗುಬ ಬಿದ್ದಿಗಗೂ ಪಾದುಕೆ ಪನ್ನೀರು ಅನು ಮಾಡಿ
ಎಲ್ಲರ ಮನ ಬಿದ್ದಿ ನಗು ಕಣ್ಹುಬ್ಬು ಮೀಸಿಯೇ
ನಮ್ಮನಿ ಬಿದ್ದಿನಗೆ ಎದೆ ಗುಂಡು
ಸಣ್ಣಂಗ್ಡಿಗೆ ಹೋಗ್ಹೆಣ್ಣೆ ಸಣ್ಣಕ್ಕಿ ತಾರ‍್ಹೆಣ್ಣೆ
ನನಗೂ ಬಿದ್ದಿನಗೂ ಒಡನೂಟ
ಹಿತ್ತಲಕೆ ಹೋಗ್ಹೆಣ್ಣೆ ಬದನೇಕಾಯಿ ತಾ ಹೆಣ್ಣೆ
ನನಗೂ ಬಿದ್ದಿನಗೂ ಒಡನೂಟ ಬಡಿಸಿಕೆ

ಹೆಯ್ಟೆಣ್ಣೆ ನಿನ್ನ ತವರಿಗೆ
ನನಗೂ ಬಿದ್ದಿನಗೂ ಜೋಡು ಮಂವು ಬೇಕು
ಹೋಗ್ಹೆಣ್ಣೆ ನಿನ್ನತವರಿಗೆ
ನೀವ್ ಮಂಚದಲ್ಲೊರಗಿರಿ  ನಾ
ಮಂಚ್ ಕಾಲಡಿ ಒರಗುವೆ
ನಾ ಹೋಗೆ ನನ್ನ ತವರಿಗೆ
ಮಂಚದ ಕಾಲಡಿಯೆ ಮನಶ್ರತಿ ತಿಂಬ ಹುಲಿಯಂಟು
ಹೋಗ್ಹೆಣ್ಣೆ ನಿನ್ನ ತವರಿಗೆ
ಹೋಗು ಹೋಗದೆಂದರೆ ಬರಿದೆ ಹೋಪವಳಲ್ಲ
ಸಾವಿರ ಕೊಟ್ಟು ಸಭೆ ಕೂಡಿ ತೆರಕೊಟ್ಟು
ಅದು ನನ್ನಿಂದ ಮೊದಲೇ ಸವಲನಲೀ

ಪಟ್ಟದಣದರಸಿಗೆ ಹೊಟ್ಟೆಲಿ ಕರುಳಿಲ್ಲ
ಕೊಡುವೆನೆಂದರೆ ಕೈಲಿಲ್ಲ ಆ ಸೂಳಿ
ಬಿಡುವೆನೆಂದರೆ ಮನಸಿಲ್ಲ

ಸೂಳಿಯ ಮಕ್ಕಳು ಯಾಕಾಪರಣ್ಣಯ್ಯ
ಹೊಳಿಹೊದ್ದೀಲಿರುವ ಚಗತೀಯ ಕಡಿದರೆ
ಗಳು ಅಕ್ಕ ಮನಿಗೆ ಬಳಿ ಅಕ್ಕ

ಏಳೂರ ಗಾಣಿಗ ಎಳ್ಳ ಕೇಳಲು ಬಂದ
ಎಳ್ಳುಂಟ ನಾರಿ ಮನೆಯಲ್ಲಿ
ಎಳ್ಳು ಇಪ್ಪೊಕೆ ಉಂಟು ರಾಯರು ಮನೆಲಿಲ್ಲ
ರಾಯರು ಕಟ್ಟಸಿದ ಹೊಸಪೇಟೆ ಒಳಗ್ಹೋಯಿ
ಎಳ್ಳಿಗೂ ಧಾರಣಿಯೆ ಕೇಳಿ ಬಾರ
ಎಳ್ಲಿಗೂ ಧಾರಣೆ ಕೆಂಡೆ ಅಳಿವುಕು ಕಳಿಸಿಯ ತಂದೆ
ಹಳಿಯೊಳೆ ಎಳ್ಳ ಅಳದ್ಹೊಯ್ಯೆ
ಅಷ್ಟೊಂದು ಮಾತ ಕೆಂಡಾಳೆ ಹಸಿಯೋಳು
ಗಂಡಗೆ ಒದ್ವಾಲೆ ಬರೆದಾಳು
ಏಳೂರು ಗಾಣಿಗ ಎಳ್ಳು ಕೊಂಬಲು ಬಂದ
ಎಳ್ಳುಂಟು ಕೇಂಡ ಮನೆಯಲ್ಲಿ ಸ್ವಾಮಿ ಕೇಳಿ
ಓಲಿ ಕಂಡವರೆ ಬರಬೇಕು.

ಸ್ವಾತಿ ಮಳೆ ಹೊಯ್ಯಲಿ ಸೀತಿ ಕೆರೆ ತುಂಬಲಿ
ಸೂಳೆಯರ ಪಟ್ಟಣವೇ ಮುಳಗಲಿ ಮಾರಾಯ್ರೆ
ಕಾಯಮದ ಸೂಳಿ ಬಳದ್ಹೋಯ್ಲಿ

ಕೇರಿ ಮ್ಯಾಲಿನ ಸೂಳೆ ಯಾರ‍್ ಮೇಲೆ ಕಣ್ಣೆಟ್ಟೆ
ತೇರಿನ ಮಿಳಿ ಹಿಡಿವ ಅರಸನಿಗೂ ಅಣ್ಮಯ್ಯಗೂ
ಹೂಗಿನ ಚಂಡಿಟ್ಟೆ ಕರೆದಾಳು

ಕಳ್ಳು ಕುಡುಕರ ಮಾತು ಸುಳ್ಳೇನ ಬದ್ದೇನ
ಗುಳ್ಳಿಯ ತುಂಬ ಹೊಲೆಯನ ಮಾತಿಗೆ ಹ್ವಾರೆ
ಯಳ್ಳಷ್ಟು ಮಾನ ಉಳಿಲಿಲ್ಲ

ಊರಿಗ್ ಉಗ್ರಾಣಿ ಬೇಕ ತೇರಿಗ್ ಪತಾಕಿ ಬೇಕ
ಸಾರೀಗೆ ಕುತ್ತುಂಬ್ರಿ ಹಾಕಬೇಕ ಈ ಊರ
ನಾಡೋಳಗೆ ಬೇಕ ಬಿಡಿಸೂಳೆ

ಹಕ್ಲು ಮಲ್ಲಿಗೆ ಕೊಸಿ ಒಕ್ಲ ಮಕ್ಳನ್ ಕರ‍್ಸಿ
ಸೂಳೆಯರ ಕರೆಸಿ ಹೊಗ್ನೆಸಿ ತಮ್ಮಯ್ಯ
ಸೊಸಿಯ ಲಗ್ನಕೆ ಕಳುಹಿದ

ಶೆಟ್ಟಿ ನಾಡರ‍್ಹೂಡುಗ ಸೊಕ್ಕಿ ಸೂಳೆಯ ಸೇರಿ
ಪೆಟ್ಟಿಗೆ ಚಿನ್ನು ಅವಳಿಗೆ ಕೊಟ್ಟೇಕೆ
ದುಃಖು ಮಾಡಿದನೆ ಮನೆಯಲ್ಲಿ

ಸಾಲ ಶೂಲವ ಮಾಡಿ ಸೂಳಿಗೆ ಸೀರೆಯ ಕೊಟ್ಟು
ಸಾಲದು ಬಂದು ಕೈ ಕಟ್ಟಿ ಕೊಲುವಾಗೆ
ದಮ್ಮಯ್ಯ ಸೂಳೆಹೊಣಿಯಾಗೆ
ಅಣ್ಣನಿಗೆ ನಾ ಹೋಣಿಯಾಪೆ ತಮ್ಮನಿಗೆ ನಾ ಹೊಣಿಯಾಪೆ
ನಿನಗ್ಯಾಕೆ ನಾನು ಹೊಣೆಯಾಪೆ

ಕಬ್ಬಿನ ಗದ್ದೇಲಿ ಕಬ್ಹುಲ್ಲ ಕೊಯ್ವ್ಹೆಣ್ಣೆ
ಬಾಗೆಲಿಗೆ ಸುಣ್ಣ ಕೊಡುವಿಯ
ನೀವು ದೇವತೆಗಳು ನಾನು ದೀವರ ಹುಡುಗಿ
ನಾ ಕೊಟ್ಟ ಸುಣ್ಣ ನಿಮಗಕ್ಕ
ಚಿಪ್ಪಿಯ ಸುಣ್ಣಕೆ ಚಪ್ಪರ ಬಳ್ಳೆಲೆಗೆ
ಅದರಲ್ಲೇನ್ಹೆಣ್ಣೆ ಪರಿಬೇಧದ

ಪರಿಮಳದ ಮಲ್ಲಿಗೆ ಇರುಳೆದ್ದೆಲ್ಲಿಗೆ ಹೋತೆ
ಪದುಮತಿ ಸೂಳಿ ಹುಡುಕೂಳು ಅಂಬಗಲಲ್ಲಿ
ಹದಿನೈದಂಗಡಿಯ ಒಳಗೆಲ್ಲ

ನೇಲಿ ಇಲ್ಲದ ಗುಂಡೀಲೆ ಬಲೆಯ ಬೀಸೂಕ್ಹೊಯಿ
ನೆಲಿ ತಪ್ಪಿ ಬಲಿಯೆ ಬಳದಾಡಿ ಅಣ್ಣಯ್ಯ
ಸೂಳಿಮನಿ ತಪ್ಪಿ ಹುಡುಕಾಡಿ

ಏನೆ ಗಾಣಿಗರ‍್ಹುಡಗಿ ಗೋಣ ಮೇಲಿನ ಗಂಟೆ
ವಾಲಾಡತೆಣ್ಣೆ ಅಳೆಯೂಳೆ ಗಾನಿಗರ‍್ಹುಡಗಿ
ತೋಳ ಮೇಲೊರಗೂ ಮನಮಾಡು
ತೋಳ ಮೇಲೊರಗೊನೆ ಧೂಳ ಮೇಲೊರಗಯ್ಯ
ನಿನ್ನಿಂದು ಚೆಲುವ ಮನಿ ಪುರುಷ ಕೇಂಡೆರೆ
ರುಂಡಿಗೆ ರುಂಡು ಹೊಡಿಸೂರು
ಹೊಡಿಯಲ ಇಬಡಿಯಲಿ ರುಂಡಿಗೂ ರುಂಡ ಹೊಯ್ಸಲಿ
ರುಂಡೆ ಸರಕಾರಕೂ ನಡೆಯಲಿ ಏ ಹೆಣ್ಣೆ
ಇಂದೊಂದು ಗಳಿಗೆ ಉಳಿದ್ಹೋಗೆ

ಚೆಲುವ ಚನ್ನಿಗರು ಬಳಲಿ ಬರುವರೆಂದು
ಎರಡು ಕೈಯೆಲ್ಲರಡು ಉದುಕವೇ ತೆಕ್ಕೊಂಡು
ಬಾಂಗಿ ಶ್ರೀಪಾದ ತೊಳಿದಾಳು ತೊಳೆವಂಥ ಸಮಯದಿ
ಪಾದದಲ್ಲೆಂತ ಗುರುತವೆ
ನಿನ್ಮೂರ ಬಯಲಲಿ ಸಣ್ಣ ಮಿಗವ ಕಂಡೆ
ಬಾಂಗಿ ಬಣ್ಣಗಳ ಹಿಡುವಾಗ್ಗೆ ಸತಿಕೇಳೆ
ಶೀಂಗಿಬಂದ್ ಕಾಲಕೊರಿದಾವು
ನಗಿ ನಗಿಯಾಡುತ್ತ ಸಿಟ್ಟು ಸಂತೈಸುತ್ತ
ಲಕ್ಷ್ಮಿದೇವಿ ವಮಬ ಹಣಿದಾಳು ಲಕ್ಷ್ಮಿ ದೇವಿ
ಹೋದಾಳೆ ಶೀಂಗಿ ಬುಡಕಾಗಿ
ಏನೆಲೆ ಶೀಂಗಿಯೆ ಒಳ್ಳೇಯವಳೆಂದ ಮಾಡಿದ್ದೆ
ಚೆನ್ನಿಗರ ಕುರುವ ಮರೆತೀಯ

ಚೆನ್ನಿಗರ ಕುರುವ ನಾನೇನು ಮರೆತಿಲ್ಲ
ಬಸವಪ್ಪನೆಂಬ ಹೊಸ ಸೂಳಿ ಮನೆಯಲ್ಲಿ
ಕೂತು ಆಡಿದರೆ ಪಗಡೀಯ
ಮುದ್ರದುಂಗರ ಕೊಡುವೆ ಮತ್ತು ಸಾವಿರ ಕೊಡುವ
ಇನ್ನಿದ್ದರ‍್ಹೇಳೆ ಗುಣವೇ

ಎಂದು ನಾ ಬಂದೀರುಒಂದು ಚಂಬುದಕವೇ
ಇಂದೇನೆ ಗೌರಿ ಹೊಸ ಪರಿ ನಿನಗೀಗ
ಇಬ್ಬರೇನು ಪುರುಷರು
ಇಬ್ರೆಂದು ನಾನರಿಯೆ ಒಬ್ರೆಂದು ನಾನರಿಯೆ
ಕೀರು ಕಿರುಜಡೆಯ ಮುಗಟೆಯ ಒಳಗಿರುವ
ಶಿವಗಂಗಿಗೊಂದು ನಿಮಗೊಂದು
ಶಿವಗಂಗಿ ತಂಗಿದೀರೆಂದು ನಿನಗ್ಯಾರು ಹೇಳಿರುವ ಸತಿಯೆ
ನಿನ್ನಾಣೆ ನಿನ್ನ ಮಗನಾಣೆ
ತಾಯಾಣೆ ಕೊಡುವರು ತಂದ್ಯಾಣೆ ಕೊಡುವರು
ಮಟ್ಟಿ ಮ್ಯಾನಾಡೋ ಮಗನಾಣೆ ಕೊಡುವರು
ದುಷ್ಟರು ನನಗೆಲ್ಲಿ ದೊರಕೀರು

ಹೊಳಿ ಹೊದ್ದೀಲಿರುವ ಹೆಣ್ಣೆ ಎಣೆಗಂಟು ಸೆಳುವ್ಹೆಣ್ಣೆ
ಹಲವು ಮಲ್ಲುಗೀಗೆ ಮುಡಿವ್ಹೆಣ್ಣೆ ಅಂಬಿಗರ‍್ಹೆಣ್ಣೆ
ಕುಲದಲ್ಲೆಂತವರ ಮಗಳು  ನೀನು
ನನ್ನ ಕುಲಕೇಂಬುಕೆ ನೀನೆಲ್ಲಿ ಜಾಣನೆ
ಕುಲದಲ್ಲಂಬಿಗರ ಮಗಳ್ನಾನು
ಅಂಬಿಗರ ಮಗಳಾರೆ ನಂಬುಗಿ ನಾ ಕೊಡುವೆ
ನಾ ಬತ್ತೆ ಮನಿಯ ಕುರು ಹೇಳೆ
ಹುಲಿಯುಗುರು ದಾರಂದ ಹೊನ್ನು ಕಳಸದರಮನಿ
ದ್ವಾರಗಳ್ವಜ್ಜುರದ ಬಂಡಸಾಲಿ ಒಳಗೀಗ
ದೊರೆಗಳ ತೋಳಲ್ಲಿ ಒರಗೂವೆ
ಹಾಂಗಾಂರಾಗಲಿ ಹೆಣ್ಣೆ  ಮಾತಿನಲಿ ನೀ ಜಾಣೆ
ಮುಡುವ ಹೂಗಿನಲಿ ನೀ ಜಾಣೆ
ಮುಡುವ ಹೂಗಿನಲಿ ನೆನೆತೀರು
ತಾಯಿಗೂ ನಾ ನೆನೆವೆನೇ ತಂದಿಗೂ ನಾ ನೆರೆವೇನೆ
ಬಾಲಿಗೂ ಕೈಹಿಸಿದ ಸರಿವ್ವಾರಿ ನಾ ನೆನೆವೇನೆ
ನಿನಗ್ಯಾಕೆ ನೆನೆವೆ ಬಿಕನಾಸಿ

ಗಂಡಗೂಟಕಿಕ್ಕಿ ಗಿಂಡುಗಿನೀರನು ಇಟ್ಟು
ಕಡೆಗಣ್ಣಲ್ಹನಿಯ ತೆಗೆದಾಳು
ಕಡಗಣ್ಣಲ್ಲಿ ನೀರ‍್ಯಾಕೆ ಕಡುದುಃಖ ನಿಂಗ್ಯಾಕೆ
ನಿನಗ್ಯಾರೇ ಕುಂದ ನುಡಿದಾರು

ಮಾವ ಕುಂದ ನುಡಿದಾನೆ ಮಾಯಿ ಕುಂದು ನುಡಿಲಲ್ಲಿ
ಮೈದಿನ ಕುಂದ ನುಡಿದಾನೆ
ನೀವ್ ನಂಬಿದ ಆ ಹೆಣ್ಣ ಬಿಡಬೇಕು
ಬಿಡ್ತೆ ಬಿಡ್ತೆ ಎಂದುಬಾಯಲಿ ಹೇಳಿರು ಸಾಲ
ಭಾಷಿ ಕೊಟ್ಹೋಗಿ ಬಲಗೈ ಎಂಜಲು ಕೈ
ಬಾಯಿ ತೊಳೆದು ಹೆರಗೆ ಬರುತ್ತೇನೆ
ಕೊಲ್ಲೂರು ಮೂಕಾಂಬಿ ಆಣೆ ಶಿವನಾಣೆ ಕೊಟ್ಟರೂ
ನಂಬಿದ ಆ ಹೆಣ್ಣು ಬಿಡುದಿಲ್ಲ.

ಸಣ್ಣ ಹೆಣ್ಣಿನಗಂಡ ದೊರಿಯೆ ಚಾಕರಿಗ್ಹೋಯಿ
ಆರ್‌ಎತ್ತರ ಮ್ಯಾಲೆ ಅವ ಬಂದು ಕುಕಂಡ
ನಾರೀ ನಿನ ಮಕ್ಳ ಹೆಸರ‍್ಹೇಳೆ
ಬಾಲಯ್ಯ ಬಗ್ಗಯ್ಯ  ಈರಭದ್ರರು ಸ್ವಾಮಿ
ಗಾಳಿಪಟ್ಟದ ಗಜ ನಿಂಬಿ ಬಣ್ಣದ ಚಂಡು
ಹೋಯಿ ನಿಮ್ಮಪ್ಪಯ್ಯಗೆ ಸರಣೆನ್ನಿ
ಹಾದರಕ್ಹುಟ್ಟಿದ ಮಕ್ಳೆ ಇಲ್ಲಾರಿಗೆ ಸರಣೆಂಬ್ರಿ
ನಾಳೆ ನಿಮ್ಮಬ್ಬಿ ಮರಣವೇ ಕಾರ್ಗಲ್ಲ
ಬೀದೀಲೆ ಬಾಯ ಬಿಡಲಕ್ಕ

ಮಧ್ಯರಾತ್ರೀಲಿ ಎದ್ದೋದರು ಪುರುಷರು
ನಿದ್ರಿ ಕಣ್ಣಿನಲಿಹುಡುಕಾಡಿ ತಂಗ್ಯಮ್ಮ
ಎದ್ದು ಕೂತು ಶಾಪಹೊಡಿದಾಳೆ ಏನೆಂದೆ
ಸುಟ್ಹೋಯ್ಲಿ ಸೂಳಿ ಮನಿಯಾರು

ತಾಯೀಗೆ ಬೈದೀಕೆ ಮಡದಿಗೆ ಹೊಡೆದೀಕೆ
ತಾಹೋದರೂ ಸೂಳಿ ಮನಿಗಾಯಿ ಪತಿಗಳ ಸ್ವಾಮಿ
ಕಣಿ ಹಾರಿ ಕಾಲೆ ಮುರುದ್ಹೋದು
ಕಣಿ ಹಾರಿ ಕಾಲೆ ಮುರದ್ಹೋಪ ಸಮಯದಲ್ಲಿ
ಮಡದಿನ ಮೂರ್ ಕರಿನೆ ಕರೆದಾನೆ
ಮಡದಿನ ಮೂರ್ ಕರಿನೆ ಏನೆಂದೆ ಕರೆದಾನು
ಕಾಲಡಿಗ್ ಬೆಳಕು ಕೈದೀಪ ತಕ್ಕಂಡ
ಸೂಳಿ ಮನಿವರಗೂ ಬರಬೇಕು

ಹಾಸುಗಿ ಹಾಸಿಕೆ ಯಾಕೆ ಎಣ್ಣುವೆ ಮಗುವೆ
ಆತ ಸೂಳೀಯರ ಮನಿಗ್ಹೋದ ಎಲೆ ಹೆಣ್ಣೆ
ಹಾಸುಗಿ ಮಡದ ಒಳಗೀಡು

ಆಚೀಯ ಕಡಿನಲ್ಲಿ ಆಕೀ ಬರುವ ನೋಡೂಳ
ಹೋತರಿಯಾ ಕದನೆ ಅವರೂದ
ನಿನ್ನಂಥ ಸತಿ ಬಿಟ್ಟು  ಹೊನ್ನಂತಾಸುಗಿ ಬಿಟ್ಟು
ಹೋಗತಿಲ್ಲ ಕದವ ಆವುರ‍್ಹೆಣ್ಣೆ

ಕಾಯಲಿ ಕಕ್ಕೆಲಿ ಚಕ್ರಕ್ಕೆ ಹನ್ನೆರಡಲಿ
ರಾಯ ಮಾವಯ್ಯ ಮೆಲುವೆಲಿ ತಂಬಲಿಗೂ
ಬಿಮಾವರ ಸೂಳಿ ಬೆರಗಾಯಿ ಬೆನ್ನಗೆ ಬಂದು
ಉಗುವ ತಂಬುಲಿಗು ಸೆರಗೊಡ್ಡಿ ಆ ಸೂಳಿ
ಯಾವ ತಾಯ್ ಪಡೆದ ಮಗಳವಳು

ತೆಂಗಿನ ಕೊನಿಯೇತುಂಬಿ ತರಿಯಲು ಬಾರ
ನಂಬಲು ಬಾರ ಗಣಸಿನ ಹೆಣ್ಣ ಹೆಂಗ್ಸಿನ
ನಂಬಿಸಿಕೊರಳ ಅರುವಾನೆ

ಘೋರೆಂಬ ಅಡವೀಲೆ ನಾನೊಬಳ್ಹೋಗುವಾಗೆ
ಮಾರಾಯ ಸೆರಗುಹಿಡಿದಾರು
ಸೆರಗ್ಹಿಡಿದ ಪಾಪಕ್ಕೆ ಕೈಲಿ ದಾನವ ಕೊಡುವೆ
ಹಿಡಿದಮತ ಸೆರಗ ಬಿಡಿರಯ್ಯ