ಗೋಮೇಸೂ ಮಕ್ಕಳೆ ನನ್ನೆತ್ತಿನ ಕಂಡಿರ್ಯಾ
ಕಸ್ತೂರಿ ಕೋಡು ಕೈಲನ ಬೆನ್ನಿಗೂ
ಬಣ್ಣದ ಚಂಡಾಡು ಹಸುಮಗು

ಬಂಡಿಯ ಹೊಡುವನ ಬಂಡಾಟ ನೋಡಿನಿ
ಬಂಡಿ ಧೂಳವನೆ ಮೈದೂಳ ಶಿರಸಿಯ
ಸಿಂಗಾರದ ಬಂಡಿ ಹೊಡೆದನೆ

ಎಸರಿಡು ಹೊತ್ತಿಗೆ ಹಸು ಮಗು ಸೀನತು
ಬಸವಯ್ಯಬಾಗಿಲಲಿ ಗೆಲಿದಾನು ತಾಯಮ್ಮ
ಎಸರಿಡು ಹೊತ್ತು ಗಳದ್ಹೋಯ್ತು

ಆರ್ಹೂಡುದ ಗದ್ದೀಲೆ ಮಾರ‍್ಹೂಡ ಕಂದಯ್ಯ
ಓಳಿ ಕಡದ್ಹೂಡ ಮರಹೂಡ ಕಂದಯ್ಯ
ಹೇಳಿಕೊಡುವಜ್ಜ ಮನೆಲಿಲ್ಲ

ಕಾಳ್ಹೂರಿ ಬೆಳ್ಳೋರಿ ಕಂಬ್ಲಕ್ಹೋಯಿ ಬರುವಾಗೆ
ಯಾರ್ಹೋರಿ ಎಂದೆ ದೋರಿಕೇಳಿ ನಮ್ಮನಿ
ಮಾರಾಯ ಅಜ್ಜಯ್ಯನ ಮನಿಹೋರಿ

ಮಳೆಗಾಳಿ ಬಪ್ಪಾಗೆ ಎಲ್ಲಿದ್ದೆ ಕೋಗಿಲೆ
ಅಂಬರದ ಮ್ಯಾಲೆ ಅರಮನೆ ಆಡ್ಕಿಯ
ತ್ಯಾಟದ ಸಿಂಗಾರ್ಹೂವಿನ ಸೆಳೆಮಂಚ

ಕರೆ ಕರೆಕಾಗಿಯೆ ಕರಿ ನನ್ನ ಬಾಗಿಲ ಮುಂದ
ಹರಿವಾಣದಲ್ಹಾಲು ಎರಸುವೆ ಕಾಕಿಯೇ
ಕರೆ ನನ್ನ ಬಂಧು ಬಳಗವೇ

ಮಕ್ಕಳಾಟದ ಗುಬ್ಬಿ ಮರದಡಿಯಾಕಿದ್ದೆ
ನಾ ಕೊಡುವೆ ಗುಬ್ಬಿ ಮನೆ ತಳು ಈ ಊರಲ್
ಕಟ್ಟಿರುವೆ ಚಿತ್ರದ ಕಡುಮಾಡ

ಕಾಕಿ ಕರೆದರೆ ತಾಯೆ ಲೋಕಕೆ ಬಿದ್ದಿನ ಬಪ್ಪು,
ಕಿಚ್ಚು ಕರೆದರೆ ತಾಯೆ ಹುಸಿಯಲ್ಲ ಈ ಮನಿ
ಕಾಲ ತಾವರಿಯ ಅಳಿಯ ಬಪ್ಪ

ಭಾಗ್ಯವೇ ಬಂದೀತು ಬಾ ನನ್ನ ಕೊಟ್ಟಿಗೆಗೆ
ಬಾಲದಲಿ ಕಂಡೆ ಬೆಳಿ ಸುಳಿ ನಮ್ಮೆತ್ತಿನ
ಭಾಗ್ಯದಲಿ ಉಂಬೆ ಅನುದಿನ

ಮನಿ ಮಾರಿಬರುವಾಗೆ ನೆಲ ಬಾಯಿ ಬಿಡುವುದೇ
ಮನಿ ಕೂಸೆ ಮಡ್ಡಿ ಹದ ಮಾಡು ಆಹೋರಿ
ಹಣಿ ಹತ್ತಿ ಮುರಿದೇ ನಿಲುವದು

ಹೊಳೆ ಮೀನೆ ಹೊಲಸೆಂದು ಹೊಲನ ಬೇಟಿಗ್ಹೋಯಿ
ಮಿಗುವೆ ಚಂದ್ರಮದ ಮರು ಸೇರಿ ಅಣ್ಣಯ್ಯ
ಹೆಣ್ಣೆಂಬ ಮಿಗುವೆ ಹೊಡೆದೀರು ಅಣ್ಣಯ್ಯ
ಮನಸಿನಲಿ ಪಾಲಿಸಿಕೋ ಕಿರಿತಂಗಿ

ಬಡವೀಯ ಕಡುದುಃಖ ಅಡವಿಗೆ ಕೇಳೀತು
ಕಡು ಜಾಣರೆಂಬ ಮೀಗು ಕೇಳಿ ಬಡವೀಯ
ಕಡಗಲ್ಹನಿಯ ಸೇಡುವಾದೆ

ಕಟ್ಟೀರು ಕರುವವರಲ್ಲ ಬಿಟ್ಟೀರು ಮೇವವರಲ್ಲ
ಪಟ್ಟು ಆಳೂವವರ ಎಳೆಗಂದಿ ಎಮ್ಮೆಯ ಮಣಕ
ಸಕ್ಕರಿ ಮುರು ಇಲ್ಲದೇ ಕರಿಲಾಗ್ದು

ಆಲದ ಮರಕೆ ಆನೀಯ ಕಟ್ಟೀಕೆ
ಸ್ನಾನಕ್ಹೋಯಿದನೆ ಹೆರಿಯಣ್ಣ ಬಪ್ಪರಗುಂಡೆ
ಆನಿಸರಪಳಿಯ ಹರ‍್ಕಂತ

ಅರವತ್ತೆ ಗಿಣಿ ಹಿಂಡು ಅರಗಿ ನೀರ‍್ ಕುಡುವಾಗೆ
ಅರವತ್ತಂಕರಕಿ ಕುಸಿದಾವು ನಮ್ಮೊಡೆರೆ
ಕೂತು ಕಟ್ಟಿಸಿರೆ ಮದಗವ

ಗೋಮೇಸೋ ಮಕ್ಕಳೆ ಚಿನ್ನದ್ಹೂಟಿಯ ಕೋಲು
ಗೋವೆಲ್ಲೆ ನೀರ ಕುಡಿದಾವು ಉಪ್ಪುಂದ
ಅಮ್ಮನವರ ಗದ್ದುಗಿನೆ ಇಳಿವಲ್ಲಿ

ಮನೆ ಹೊದ್ದಿನ ಮಾವಿನ ಮರ ಹೂಗಕ್ಕ ಕಾಯಕ್ಕ
ಚಣಿಲೆ ನಿನ್ನ ಆಟೂ ತರವಲ್ಲ ನಮ್ಮನಿ
ಚಟ್ಟಿಲ್ಲ ತಮ್ಮಯ್ಯ ಒಳಗಿದ್ದ ಬಪ್ಪರಗುಂಟು
ಚಣಿಲು ತಿರುಪತಿಗೆ ಇಳಿದೋದು

ಹುಲ್ಲು ಕತ್ತರಿಯಲ್ಲಿ ಹಲ್ಲಿ ಮರಿ ಮೂರುಂಟು
ಕೊಲ್ಲದಿರಣ್ಣ ಮರಿ ಮೂರ ನಿನ ತಂಗಿ
ಹುಲ್ನೀರು ಕೊಟ್ಟು ಸಲಹೂಳು ಅವು ನಮ್ಮ
ಓಲೆ ಭಾಗ್ಯವೇನೆ ಉಳಿಸೂವುಗು.