ಉಂಡದ್ದ ಉಟ್ಟದ್ದು ಗಂಗಾತಾಯಿ ಬಲ್ಲಾಳ
ಗಂಡಾಡು ಮಾತ ತೌರಿಗೆ ಕೊಂಡಾಡಿದರೆ
ರೆಂಬೆ ನೀ ಬಾಳು ಬಗಿ ಹೆಂಗೆ

ಬಾಳುವ ಮನೆಯಲ್ಲಿ ಭಾಳ ಬಾಳ್ಹೇಳುವರು
ಬಾಮುಲಿ ಕೆಮಿಯ ಮರೆ ಮಾಡಿ ಬಾಲಮ್ಮ
ಬಾಳಿ ಬಾ ಬಾಳಿ ಸುಳಿ ಹಂಗೆ      

ಬಾಳೆ ಪಟ್ಟೆಯ ಸೀರೆ ಬ್ಹಾಳೊತ್ತು ಉಡಬೇಡ
ಬಾಗಿಲಿಗೆ ಚಾಚಿ ನಿಲಬೇಡ ಬಾಲಮ್ಮ
ಮಾಯಿಗುತ್ತರವ ಕೊಡಬೇಡ

ಮೂಲೆ ಮೂಲೆಯ ಸೇರಿ ಯಾಕಳುವೆ ಎಲೆ ಮಗಳೆ
ಓಲೆ ಇಟ್ಟಾತ ಬಿಡಲಾರ ಬಾಲಮ್ಮ
ಇಂದ್ಹೋಗಿ ನಾಳೆ ಬರಲಕ್ಕು

ಹುಟ್ಟಿದ ಹೆಣ್ಮಕ್ಳು ಮೆಟ್ಲಿಂದಿಳುವಾಗ
ಹೊಟ್ಟೇಲಿ ಬೆಂಕಿ ಹೊಯ್ದಂತೆ ಹೆಣ್ಮಕ್ಳ
ಪಡೆಯದಿರೇಳು ಜನ್ಮಕ್ಕೆ

ಅಚ್ಚ ಮಲ್ಲಿಗೆ ಹೂಗು ಮುಚ್ಚಿ ಕೈಲ್ ಕೊಟ್ಟಂತೆ
ಬಟ್ಟಲು ಬೆಳಗಲಿಕೆ ಅರಿಯದು ಮಗುವನ್ನು
ಈ ಹೊತ್ತು ಎತ್ತಿ ಕೊಡುತ್ತೇನೆ

ಹತ್ತು ಕೊಡ ನೀರನ್ನು ಎತ್ತಿ ತಂದವಳಲ್ಲ
ಚಿತ್ತದಲಿ ಬಹಳ ಅರತ್ರಾಣಿ ನಮ್ಮಗಳು
ನಿಮ್ಮಗಳ ಹಾಗೆ ಸಲಹೀನಿ

ಕಣ್ಣು ಕಾಡುಗಿಯೆ ನನ್ನ ಮಾತು ಕೇಳು
ಚೆನ್ನಿಗರ ಕಂಡು ತಲೆ ಬಾಗು ಬಾಗದಿದ್ರೆ
ಹೆಣ್ಣೆಂಬ ಕುಲಕೆ ಹಳು ಬಂತು

ತಂಗಿ ಕಳ್ಸಿಕೊಂಡ ದಿಂಬ್ದ ಮೇಲ್ ನಿಂತ್ಕಂಡ
ಉಂಗಿಲಲಿ ಕಣ್ಣೀರ ಸೆಡಿದಾನು ತಂಗ್ಯಮ್ಮ
ನೀ ತಿರುಗಿ ಬರುವ ದಿನ ಹೇಳು

ಹೋಗೆಂದರೆ ಹೋಗಾಳು ಬಾಗಿಲು ಮೆಟ್ಲು ಗಳಿಯಾಳು
ನಾ ಹೆಂಗೆ ಮಗಳ ಕಳುಹಲಿ | ಹಿತ್ತಲ
ಹೂಗು ತುಂಬಿಸುವೆ ಮುಡಿ ಮ್ಯಾನೆ

ಮಗಳ ಧಾರಿಯ ಎರೆದು ಕೈಲಿ ದನವನ್ನು ಕೊಟ್ಟು
ಗಾಳಿ ಪಾಡಿನಲೆ ಒರಗೀರು ಅಪ್ಪಯ್ಯ
ಮಗಳ್ಹುಟ್ಟಿ ಪುಣ್ಯ ಪಡೆದೀರು