ನಾರಿಯ ನಲ್ಲನು ತೂಗು ಮಂಚದ ಮೇಲೆ
ಹೋಳು ಬೆಲಿ ಎಲಿಯ ಮೇಲುವಾಗ ಮಾರಾಯ್ರೆ
ಮಾಡ್ಬೇಕು ಮಗನ ಮದುವಿಯ
ಕಣ್ಣುಬ್ಬು ಬಾರದೇ ಬಾಯಿ ಹಲ್ಲು ತಾಳದೇ
ಅಷ್ಟೇನು ಅವ್ಸರವು ಮದುವಿಗೇ    
ಗುತ್ತಿನ ಕಟ್ಟಿಯ ಮಣ್ಣು ಎತ್ತಿನ ಮ್ಯಾಲ್ಹೇರಕಂಡ
ಎಣ್ಣಿ ಮಿಂಚಿನಲಿ ಮನಿ ಮಾರು ಮಾಡ್ಕಂಡು
ಎಣ್ಣೀಳೆ ಮಗನ ಮದುವೀಗೆ ಅಕ್ಕಮ್ಮ
ಹೆಣ್ಕೇಳುಕೆ ಹೋಯ್ಕಂದ ಹೆರಟೀಳೆ
ಮೆತ್ಹತ್ರಿ ಮ್ಯಾಲೆ ನಡೆದಾಳು ಅಕ್ಕಮ್ಮ
ತನಗೊಪ್ಪಿದ ಚಿನ್ನ ಇಡುವಾಳು ಅಕ್ಕಮ್ಮ
ತನಗೊಪ್ಪಿದ ಸೀರೆ ಉಡುವಾಳು ಅಕ್ಕಮ್ಮ
ತಲೆ ಬಾಚಿ ಹೂಗ ಮುಡಿದಾಳು ಅಕ್ಕಮ್ಮ
ಕೈಯಲಿ ಸತ್ತುಗಿಯ ಹಿಡಿದಾಳು ಅಕ್ಕಮ್ಮ
ಕಾಲಿಗೆ ಜೀಕಿನ ಜೋಡ ಹಾಕೀಳ

ಆಡುಕ್ಹೋದ ಅಭಿಮನ್ಯು ಓಡಿ ಮನೆಗೆ ಬಂದಿದ
ಗದ್ಲವೇನೇ ಗೌಜೇನೇ
ಏನೂ ಗದ್ದಲವಿಲ್ಲ ಏನೂ ಗೌಜ ಇಲ್ಲ
ಸೋದರ ಮಾವನ ಮಗಳೇ ಪರರಿಗಾದ ಮೇಲೆ
ಅಭಿಮನ್ಯು ನೀನಿದ್ದೇ ಫಲವೇನು
ಅಷ್ಟೋಂದು ಮಾತ ಹೇಳೀಳೆ ಸೌಭದ್ರಿ
ಹೋಗಿ ಬರುವೆ ಅಣ್ಣಯ್ನ ಅರಮನಿಗೆ ಅನುತ್ಹೇಳೀ
ತೋತ್ತ್ಯರ‍್ನ ಗೌಂಡೇರ‍್ನ ಕರೆದಳು ಸೌಭದ್ರಿ
ಪಟ್ಟಣ ಜೋಕೆ ಮನೆ ಜೋಕೆ ಅನುತ್ತೇಳಿ
ಹೋದಳು ಅಣ್ಣಯ್ನ ಅರಮನಿಗೆ

ಚಿತ್ತರದ ಬಯಲಲ್ಲಿ ಆರೇಳು ಸತ್ತಿಗೆ ತೋರಿ
ನನತೆಂಗಿ ಆಲ್ದೆ ಪರರಲ್ಲ
ಪಾದವ ತೋಳೆಸೀನಿ ಪಾವ್ಹಡದಲ್ಲೋರೇಸೀನಿ
ತೂಗು ಮಂಚದಲಿ ಕುಳಿಹೇಳಿ
ಪಾದ ತೊಲೆಸುದು ಬ್ಯಾಡ ಪಾವುಡ ಒರೆಸುದು ಬ್ಯಾಡ
ನಾ ಕುಳಿತಿ ಮಣ್ಣಿನ ಜಗುಲೀಲಿ
ಎಂದೂ ಬಾರದ ಸೌಭದ್ರಿ ಇಂದೇನು ಬಂದೀಯ
ಬಂದ ಕಾರಣವ ಒದಗ್ಹೇಳು
ಎಂದೂ ನಾ ಬರಲಿಲ್ಲ ಇಂದೇ ನಾ ಬಂದೀದೆ
ನಾ ಬಂದೆ ಒಂದು ಹೊಸ ಸುದ್ದಿ ಅಣ್ಣಯ್ಯ
ಮಾಡಬೇಕು ಮುದ್ದನ ಮದುವೆಯ
ಹೆಣ್ ಕೇಳಲು ಬಂದೆ ಮದುವೀಗೆ
ಕನಕ ಕೇಳುಕೆ ಬಂದು ತಂಗಿ ನಿನ್ನೆ ಮೊನ್ನೆ ಬರಲಿಲ್ಲ ನಿನ್ನಿಂದ ಮೊದಲೇ ಕೌರವರು
ಹೆಣ್ಣಿಗೆ ಚೂಡಂಗೆ ಹಿಡುಸೀರು
ಹೆಣ್ ಕೇಳುಕೆ ಬಂದ್ ತಂಗಿ ನನ್ನನ್ನು ಕೇಳಲು ಬ್ಯಾಡ
ನಿನ್ನತ್ತಿಗೆ ಕರೆದು ನುಡಿಮಾತ

ಅಷ್ಟೊಂದು ಮಾತ ಕೇಂಡಳೆ ಅಕ್ಕಮ್ಮ  ಮೆತ್ತತ್ತಿ ಮ್ಯಾನೆ ನಡೆದಳು
ಉಪ್ಪರಿಗಿ ಒಳಗೆ ಸಣ್ಣಕ್ಕಿ ತೊಳಿವಾರೆ ಸಣ್ಣ ಸಂಸಾರದ ಹಿರಿಯಾರೆ ಅತ್ತಿಗೆ
ನಾ ಒಂದೂ ಒನಕೆ ತೊಳಿಸುವೆ
ನೀನೊಂದು ಒನಕೆ ತೋಳಿಸುಕೆ
ಹತ್ಮಂದಿ ಗೌಂಡೇರಿದ್ರು ನಿನ್ನಾಟಿಕೆ ಸಾಕೆ ಮನೆಗ್ಹೋಗೆ
ಉಪ್ಪರಿಗೆ ಒಳಗೆ ದೊಡ್ಡಕ್ಕಿ ತೊಳಿವಾರೆ
ದೊಡ್ಡ ಸಂಸಾರದ ಹಿರಿಯಾರೆ ಅತ್ತಿಗೆ
ನಾನೊಂದು ಒನಕೆ ತೊಳಿಸುವೆ
ನೀನೊಂದು ಒನಕೆ ತೊಳಿಸುಕ್ಕೆ ಐದ್ಮಂದಿ ತೊತ್ಯೇರಿದ್ರು
ನಿನ್ನಾಟಿಕೆ ಸಾಕೆ ಮನಿಗ್ಹೋಗೆ
ಕೊಟ್ಟಿಗೆಯಲ್ಲಿ ಸರಳೆಮ್ಮೆ ಕರೆವಾರೆ

ಸರುವ ಸಂಪಿಗೆಯ ಮುಡಿವಾರೆ ಅತ್ತಿಗೆ
ನಾನೊಂದು ಎಮ್ಮೆಯ ಕರಿಯೂವೆ
ನಾ ಬಂದಾ ಒಂದ್ ಹೊಸ ಸುದ್ಧಿ ಅತ್ತಿಗೆ
ಅಭಿಮನ್ಯು ಕೈ ಧರೆಗೆ ನೆರದಾನು ಅತ್ತಿಗೆ
ಕನಕಾಂಗಿ ನಿನ ಮಗಳ ಕೊಡಬೇಕು
ಮನೆ ಹತ್ರವಿರುವ ರಾಮ ರೈತರ ಬಿಟ್ಟು
ಪಾಮರಗೆಲ್ಲ ಮಗಳ ಕೊಡಲಾರೆ
ಅಭಿಮನ್ಯು ಕಳ್ಳನು ಅಭಿಮನ್ಯು ಸುಳ್ಳನು
ಅಭಿಮನ್ಯುವಿಗೆ ಹೆಣ್ ಕೊಡಲಾರೆ
ಅಭಿಮನ್ಯುಗೆ ಕೊಡೂ ಹೆಣ್ಣಿನ ಕಟ್ಟಿಗೆ ಗುಂಡಿಕೆ ಹಾಕ್ವೆ
ಅಭಿಮನ್ಯುಗೆ ಹೆಣ್ಣ ಕೊಡಲಾರೆ

ಅಷ್ಟೊಂದ ಮಾತ ಕೇಂಡಾಳೆ ಸೌಭದ್ರಿ
ಕಡಗಣ್ಣಲ್ಹವಿಯ ಸೆಡಿದಾಳೆ ಸೌಭದ್ರಿ
ತಾ ಬಂದಳ ತನ್ನ ಅರಮನಿಗೆ…..
ಉಪ್ಪರಿಗೆ ಒಳಗೆ ಪುಸ್ತಕ ಹಿಡಿದವ್ರೆ
ನಿನ ತಂಗಿ ಸೌಭದ್ರಿ ಉಣಲಿಲ್ಲ
ಮಾಡಿದ ಅಡಿಗಿ ಇದ್ರ ಗೌಡೇರು ತೊತ್ತೇರಿಗ್ಹಾಕ
ಸಿಟ್ಟು ಬಂದ್ರೆ ಸೌಭದ್ರಿನಡೆಯಲಿ….

ಹೋಗ್ವಾಗ ನೆಗಿ ಮಖ ಬರುವಾಗ ಉರಿಮುಖ
ನಿನಗ್ಯಾರು ಕುಂದು ನುಡಿದರು
ನಿನ್ನಂಥಮಗ ಇದ್ರೆ ದೇವ್ರಂಥ ಪುರುಷರಿದ್ರೆ
ನನಗ್ಯಾಕೆ ಕುಂದ ನುಡಿದರು
ಮನೆ ಹತರ ಇರುವ ರಾಮ ರೈತರ ಬಿಟ್ಟು
ಪಾಮರಗು ಮಗಳ ಕೊಡೆನೆಂದ್ಲು
ಅಭಿಮನ್ಯುಗೆ ಕೊಡು ಹೆಣ್ಣಿದ್ರೆ ಕಟ್ಟಿನ ಗುಂಡಿಗೆ ಹಾಕ್ವೆ
ಅಭಿಮನ್ಯವಿಗೆ ಹೆಣ್ಣ ಕೊಡಲಾರೆ
ಇಷ್ಟೆಂಬ ಮಾತ ಕೇಳಿದ ಅಭಿಮನ್ಯು ತಾಯಿ ಹತ್ರ ಭಾಷೆ ಕೊಡುವನು
ಮೂಡಾಯಿ ಮಾಡಿ ಸೂರ್ಯ ಪಡುವಾಯಿ ಕಂತಕಿದ್ರೆ
ಆ ಹೆಣ್ಣಿನ ನಾನು ತರದಿದ್ರೆ ತಾಯಮ್ಮ
ಅಭಿಮನ್ಯು ಹೆಸರು ಬದಲಿಡು
ಅಷ್ಟೆಂಬ ಮಾತ ಹೇಳಿದ ಅಭಿಮನ್ಯು
ಬೆಳ್ಳಿಯ ಖಡ್ಗ ಬಲಕೈಲಿ ಹಿಡಕೊಂಡು
ಉಪ್ಪರಿಗಿ ಕೆಳಗೆ ಇಳಿದಾನು ಅಭಿಮನ್ಯು
ಒಳಗಿದ್ದ ತಾಯಿಯ ಕರೆದಾನು | ಏನೆಂದೆ ಕರೆದಾನು
ಹೋಯ್ ಬಪ್ಪೆ ಮಾವಯ್ನ ಅರಮನೆಗೆ ತಾಯಮ್ಮ
ಗೆಲ್ಲಿ ಬತ್ತಿ ಮಾವಯ್ನ ಮಗಳನ್ನೆ ತಾಯಮ್ಮ
ಪಟ್ಟಣ ಜೋಕೆ ಮನೆ ಜೋಕೆ ಅನುತ್ಹೇಳಿ
ಕುದುರೆಗೆ ಹಲ್ಲಣವ ಬಿಗಿದೆದ್ದ

ಚಿತ್ತರದ ಬಯಲಲ್ಲಿ ಆರೇಳ್ ಕುದುರೆ ತೋರಿ
ನನ್ನಳಿಯನಲ್ದೆ ಪರರಲ್ಲ ಗೌಂಡೇರೆ
ಪಾದುಕೆ ಪನ್ನೀರ ಅನುಮಾಡಿ
ಪಾದವ ತೊಳಿಸೀರು ಪಾವ್ಡವ ಒರೆಸೀರು
ತೂಗುಮಂಚದಲಿ ಕುಳಿಸೀರು
ಎಂದೂ ಬಾರದ ಅಭಿಮನ್ಯು ಇಂದೇಕೆ ಬಂದೀಯೇ
ಬಂದ ಕಾರಣವ ಒದಗ್ಹೇಳು
ಎಂದೂ ನಾಬರಲಿಲ್ಲ ಇಂದೇ ನಾ ಬಂದೀದೆ
ನಾ ಬಂದ ಒಂದು ಹೊಸ ಸುದ್ಧಿ ಮಾವಯ್ಯ
ಕನಕಾಂಗಿ ನಿನ್ನ ಮಗಳ ಕೊಡಬೇಕು
ಹೆಣ್ ಕೆಳುಕೆ ಬಂದ್ ಅಳಿಯ ನಿನ್ನೆ ಯಾಕೋ ಬರಲಿಲ್ಲಾ
ನಿನ್ನಿಂದ ಮೊದಲೇ ಕೌರವರು ಪಾಂಡುವರು ಹೆಣ್ಣಿಗೆ ಚುಡಂಗ ಇಡ್ಸೀರು
ಅವರಿಟ್ಟ ಚೂಡಂಗ ಹರಿದು ಬಿಸಾಡುವೆ
ನಾನಿಡುವೆ ಹೊನ್ನ ಹೊಸ ಬಂದಿ ಮಾವಯ್ಯ
ಕನಕಾಂಗಿ ನಿನ ಮಗಳ ಕೊಡಬೇಕು
ಹೆಣ್ ಕೇಳುಕೆ ಬಂದಳಿಯ ನನ್ನೇನು ಕೇಳುವೆ
ಅತ್ತೆ ಒಡನಾಡಿ ನುಡಿ ಮಾತ
ಅತ್ತೆ ಕೊಡ ಕೇಳುಕೆ ನೀ ಸಾಕಿದ ಗೌಂಡಿಯೋ
ಹಿಡಿಯೋ ಮಾವಯ್ಯ ತೆರೀನ್ ಹಣ
ಗಾಳಿಗೆ ಒಲಿ ಮಗು ಬಾಳಿಗೆ ಒಲಿ ಮಗು
ಗಾಳಿ ಬಂದಂತೆ ಒಲಿ ಮಗು ಕನಕಾಂಗಿ
ಅಭಿಮನ್ಯು ಭಾವಯ್ಕೆ ಒಲಿಬ್ಯಾಡ
ಗಾಳಿಗು ಒಲಿಲಾರೆ ಬಾಳಿಗು ಒಲಿಲಾರೆ
ಗಾಳಿ ಬಂದಂತೆ ಒಲಿಲಾರೆ ಅಪ್ಪಯ್ಯ
ಅಭಿಮನ್ಯು ಭಾವಯ್ಗೆ ಒಲಿದ್ಹೋಪೆ
ಅಂಬಲಿ ಕುಡಿಸುವ ಕಂಬಳಿ ಹೊದಿಸುವ
ದೊಂಬರಾಟಗಳ ಕಲಿಸುವ ಕನಕಾಂಗಿ
ಅಭಿಮನ್ಯು ಭಾವಯ್ಗೆ ಒಲಿಬ್ಯಾಡ
ಅಂಬಲಿ ಕುಡಿಬಲ್ಲೇ ಕಂಬ್ಳಿಯ ಹೊದಿಬಲ್ಲೆ
ದೊಂಬರಾಟಗಳ ಕಲಿಬಲ್ಲೆ ಅಪ್ಪಯ್ಯ
ಅಭಿಮನ್ಯು ಭಾವಯ್ಗೆ ಒಲಿದ್ವಾಪೆ
ದೊಂಬರಾಟಗಳ ಕಲಿಬಲ್ಲೆ ಅಪ್ಪಯ್ಯ
ಅಭಿಮನ್ಯು ಭಾವಯ್ಗೆ ಒಲಿದ್ವಾಪೆ
ಬಾರಮ್ಮ ಕನಕಾಂಗಿ ಏರಮ್ಮ ಜಗುಲಿಯ ಯಾರ ನಿನಗೆ ಪುರುಷನು
ಕೌರವರ ಮಗ ಬ್ಯಾಡ ಕೆಟ್ಟ ಕಡುಪಾಪಿಯು
ಅರಳಿಯೆ ಅಭಿಮನ್ಯು ಸ್ವಾಮಿ
ಅವರಕ್ಕೆ ತಾಯೇ ಪುರುಷರು
ಮಟ್ಟಿ ಮ್ಯಾಲಿದ್ದ ಮಗಳ | ಕೆಳಗೆ ಹೊತ್ಹಾಕಿಕೆ
ಸಿಟ್ಟು ಗೊಂಡು ಒಳಗೆ ನಡೆದಾನು

ಅಷ್ಟೊಂದು ಮಾತ ಕೆಂಡೇನೆ ಅಭಿಮನ್ಯು
ಕುದುರಿ ಹಲ್ಲಣವ ಬಿಗಿದಾನು | ಅಭಿಮನ್ಯು
ಬಿದ್ದ ಮಾರ್ಗವ ಹಿಡಿದಾನು |