ಜೈವಿಕ ತಂತ್ರಜ್ಞಾನವೆಂಬುದು ವಿಜ್ಞಾನದ ಒಂದು ವಿಶೇಷ ಭಾಗವಾಗಿ ತೀರಾ ಇತ್ತೀಚೆಗೆ ಬೆಳವಣಿಗೆ ಕಂಡಿದೆ. ಆದರೆ, ಈ ಜ್ಞಾನದ ಅಳವಡಿಕೆ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವುದನ್ನು ಕಾಣಬಹುದು. ಕ್ರಿಸ್ತ ಪೂರ್ವ 6000 ದಿಂದಲೂ ಇದು ಬಳಕೆಯಲ್ಲಿದೆ. ಉದಾಹರಣೆಗೆ ಸುಮೇರಿಯನ್ನರು ವಿವಿಧ ರೀತಿಯ ಬಿಯರ್ ತಯಾರಿಕೆಯಲ್ಲಿ ಪರಿಣತಿ ಸಾಧಿಸಿದ್ದರು. 3ನೇ ಶತಮಾನದ ಆಸುಪಾಸಿನಲ್ಲಿ ಹಲವಾರು ಡಿಸ್ಟಿಲರಿ ಕೇಂದ್ರಗಳಿದ್ದ ಬಗ್ಗೆ ದಾಖಲೆಗಳು ಲಭ್ಯವಾಗಿವೆ. ಅಂದು ವ್ಯಾಪಕವಾಗಿ ಬಳಕೆಯಲ್ಲಿದ್ದ ಡಿಸ್ಟಿಲೇಷನ್ ಪ್ರಕ್ರಿಯೆಯ ಮೂಲಕವೇ ಈಥೈನ್ ಆಲ್ಕೋಹಾಲ್ ತಯಾರಿಸುವ ವಿಧಾನ ಇಂದಿಗೂ ಸಹ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿದೆ.

ಭಾರತೀಯ ಆಯುರ್ವೇದ ವ್ಶೆದ್ಯಪದ್ಧತಿಯಲ್ಲಿ ಆಲ್ಕೋಹಾಲ್ ಬಳಕೆ ಪ್ರಾಚೀನವಾದುದು. ಫ್ರಾನ್ಸ್ ನಲ್ಲಿ 1650ರಲ್ಲಿಯೇ ಅಣಬೆಗಳನ್ನು ಕೃತಕವಾಗಿ ಬೆಳೆಸುವುದು ಪ್ರಾರಂಭವಾಯಿತು. ಇವೆಲ್ಲಾ ಜೈವಿಕ ತಂತ್ರಜ್ಞಾನ ಬಹು ಹಿಂದಿನಿಂದಲೂ ಚಾಲ್ತಿಯಲ್ಲಿರುವುದರ ಕುರುಹಾಗಿವೆ. ಇವೆಲ್ಲಾ ದಾಖಲೆಗೆ ದೊರೆತಿರುವ ಜೈವಿಕ ತಂತ್ರಜ್ಞಾನದ ಕುರುಹುಗಳಾದರೆ, ದಾಖಲೆಗೆ ಲಭ್ಯವಿಲ್ಲದ ಪದ್ಧತಿಗಳು ಎಣಿಕೆಗೆ ನಿಲುಕದಷ್ಟು. ನಮ್ಮ ರೈತರು, ಗ್ರಾಮೀಣ ಜನತೆ ತಮಗರಿವಿಲ್ಲದೆಯೇ ಜೈವಿಕ ತಂತ್ರಜ್ಞಾನ ಮೇಳೈಸಿದ ಅನೇಕ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾ, ಅವುಗಳಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಅವು ಹೆಚ್ಚಾಗಿ ಆಹಾರ ವಿಧಾನಗಳಲ್ಲಿ ಹಾಗೂ ವೈದ್ಯಕೀಯ ಪದ್ಧತಿಗಳಲ್ಲಿ ಬಳಕೆಗೆ ಬಂದಿವೆ.

ಇಂತಹ ರೈತ ಸಂಶೋಧನೆಯ ಜೈವಿಕ ತಂತ್ರಜ್ಞಾನಕ್ಕೆ ಉತ್ತಮ ಉದಾಹರಣೆ ‘ಮದ್ದಿನ ಮಡಕೆ’ ಅಥವಾ ‘ಕಳ್ಳರೋಗದ ಮದ್ದು’. ಇದೊಂದು ಜಾನುವಾರು ಖಾಯಿಲೆ ಗುಣಪಡಿಸುವ ನಾಟಿ ಔಷಧಿ. ಅಪ್ಪಟ ದೇಸೀ ತಂತ್ರಜ್ಞಾನ.

ಮದ್ದಿನ ಮಡಕೆ: ಮದ್ದಿನ ಮಡಕೆ ಜಾನುವಾರುಗಳ ಖಾಯಿಲೆ ಗುಣಪಡಿಸುವ ನಾಟಿ ಔಷಧಿ. ಇದಕ್ಕೆ ಶತಮಾನಗಳ ಹಿನ್ನೆಲೆ ಇದೆ. ಸಮುದಾಯ ಕೇಂದ್ರಿತ ಪದ್ಧತಿಯಾಗಿರುವುದು ಇದರ ವೈಶಿಷ್ಟ್ಯ.ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಡೆಂಕಣಿಕೋಟೆ ತಾಲ್ಲೂಕು ತಗ್ಗಟ್ಟಿ ಗ್ರಾಮದಲ್ಲಿ ಈ ವಿಶಿಷ್ಟ ಪದ್ಧತಿ ಈಗಲೂ ಬಳಕೆಯಲ್ಲಿದೆ. ಮುಂಚೆ ಈ ಭಾಗದ ಹಲವಾರು ಹಳ್ಳಿಗಳಲ್ಲಿ ಚಾಲ್ತಿಯಲಿದ್ದ ಈ ಪದ್ಧತಿ ಕ್ರಮೇಣ ಕಣ್ಮರೆಯಾಗುತ್ತಾ ಬಂದು ಪ್ರಸ್ತುತ ತಗ್ಗಟ್ಟಿಯ ನಾಟಿವೈದ್ಯ ಆನಂದಪ್ಪ ಅವರ ಮನೆಯಲ್ಲಿ ಮಾತ್ರ ಜೀವಂತವಾಗಿರುವುದನ್ನು ಕಾಣಬಹುದು.

ಈ ಭಾಗದಲ್ಲಿ ಔಷಧಿಗೆ ಮದ್ದು ಎಂದು ಕರೆಯುತ್ತಾರೆ. ಮಣ್ಣಿನ ಮಡಕೆಯಲ್ಲಿ ಔಷಧಿ ಇರುವುದರಿಂದ ಮದ್ದಿನ ಮಡಕೆ ಎಂಬ ಹೆಸರು ಇದಕ್ಕಿದೆ. ಮುಖ್ಯವಾಗಿ ಜಾನುವಾರುಗಳ ಆಂತರಿಕ ಖಾಯಿಲೆಗಳನ್ನು ಅಂದರೆ ದೇಹದಲ್ಲಿ ಅವಿತುಕೊಂಡ ಖಾಯಿಲೆಗಳನ್ನು ಇದು ಗುಣಪಡಿಸುತ್ತದೆ. ಹಾಗಾಗಿಯೇ ಇದಕ್ಕೆ ‘ಕಳ್ಳರೋಗದ ಮದ್ದು’ ಎಂಬ ಹೆಸರಿದೆ. ಅಲ್ಲದೆ ಹಲವಾರು ಜಾತಿಯ ಗಿಡಮೂಲಿಕೆಗಳು ಕೂಡುವುದರಿಂದ ‘ಕೂಟಮದ್ದು’ ಎಂಬ ಮತ್ತೊಂದು ಹೆಸರೂ ಚಾಲ್ತಿಯಲ್ಲಿದೆ. ಇದರ ಮಹತ್ವ ಎಷ್ಟೆಂದರೆ ದೂರದ ಊರುಗಳಿಂದಲೂ ಸಹ ಜನ ತಗ್ಗಟ್ಟಿ ಗ್ರಾಮಕ್ಕೆ ಬಂದು ಔಷಧಿ ಒಯ್ಯುತ್ತಾರೆ.

ಒಂದು ಮಣ್ಣಿನ ಮಡಕೆ ಅಥವಾ ಹರಿವಿಯಲ್ಲಿ 101 ವಿವಿಧ ಜಾತಿಯ ಔಷಧಿ ಸಸ್ಯಗಳ ಭಾಗಗಳನ್ನು ಹಾಕಿ ನೆನೆಸಿದ ಕಷಾಯವೇ ಕಳ್ಳರೋಗದ ಮದ್ದು. ವಿವಿಧ ಮರ, ಗಿಡ, ಬಳ್ಳಿ, ಪೊದೆಗಳ ತೊಗಟೆ, ಎಲೆ, ಕೊಂಬೆ, ಬೇರು, ಗೆಡ್ಡೆಗಳನ್ನು ವರ್ಷದ ಶೂನ್ಯಮಾಸ ಅಥವಾ ಧನುರ್ಮಾಸದಲ್ಲಿ ಸಂಗ್ರಹಿಸಿ, ಗುರುವಾರ ಅಥವಾ ಭಾನುವಾರದಂದು ಮಣ್ಣಿನ ಮಡಕೆಗೆ ಅರೆ-ಬರೆ ಕುಟ್ಟಿ ಹಾಕಲಾಗುತ್ತದೆ. ಮರು ದಿನದಿಂದಲೇ ಕಷಾಯ ಬಳಕೆಗೆ ಲಭ್ಯ. ವರ್ಷದಲ್ಲಿ ಆಗಾಗ್ಗೆ ಇದಕ್ಕೆ ಔಷಧಿ ಸಸ್ಯಗಳ ಭಾಗಗಳನ್ನು ತಂದು ಹಾಕುತ್ತಾರೆ. ಆದರೆ ಶೂನ್ಯ ಮಾಸದಲ್ಲಿ ಹಾಕಿದರೆ ಹೆಚ್ಚು ಪರಿಣಾಮಕಾರಿ. ಔಷಧದ ಬಳಕೆ ವಿಧಾನ ಕುತೂಹಲಕಾರಿಯಾಗಿದೆ. ಯಾರಿಗೆ ಔಷಧದ ಅಗತ್ಯವಿದೆಯೋ ಅವರು ಔಷಧಿ ಒಯ್ಯಲು ತರುವ ಪಾತ್ರೆಯ ತುಂಬಾ ನೀರನ್ನು ತಂದು ಮದ್ದಿನ ಮಡಕೆಗೆ ಹಾಕಿ ತಮಗೆ ಅಗತ್ಯವಿರುವಷ್ಟು ಔಷಧಿ ಒಯ್ಯುತ್ತಾರೆ. ಇದು ಕಡ್ಡಾಯ.

ನೀರು ತರದಿದ್ದರೂ ಔಷಧಿ ಕೊಂಡೊಯ್ಯಬಹುದು. ಆದರೆ, ಇದರ ಉದ್ದೇಶ ಮಡಕೆಯಲ್ಲಿ ಸದಾ ಕಷಾಯ ಲಭ್ಯವಿರಲಿ ಮತ್ತು ಎಲ್ಲರಿಗೂ ಅದರ ನಿರ್ವಹಣೆಯ ಜವಾಬ್ದಾರಿ ಇರಲಿ ಎಂಬುದು. ಎಲ್ಲರ ಬಳಕೆಗೆ ಅನುಕೂಲವಾಗುವಂತೆ ಮದ್ದಿನ ಮಡಕೆಯನ್ನು ಮನೆಯ ಹೊರಗೆ ಅಥವಾ ಮನೆಯ ಹಿಂಭಾಗ ಇಟ್ಟಿರುತ್ತಾರೆ. ಸಂಬಂಧಪಟ್ಟ ನಾಟಿ ವೈದ್ಯರು ಮನೆಯಲ್ಲಿಲ್ಲದಿದ್ದರೂ ಸಹ ಬಂದವರಿಗೆ ಔಷಧಿ ಲಭ್ಯವಾಗುತ್ತದೆ. ಆನಂದಪ್ಪನವರ ಮನೆಯಲ್ಲಿ ಪ್ರಸ್ತುತ ಕೊಟ್ಟಿಗೆ ಮನೆಯ ಮುಂಭಾಗದಲ್ಲಿ ಮದ್ದಿನ ಮಡಕೆಯನ್ನು ಇಟ್ಟಿದ್ದು ಯಾರು ಬೇಕಾದರೂ ಸಹ ಬಂದು ಔಷಧಿ ಒಯ್ಯಲು ಅನುಕೂಲಕರವಾಗಿದೆ. ಇಂಥವರೇ ಔಷಧಿ ಒಯ್ಯಬೇಕೆಂಬ ನಿಷೇಧಗಳಿಲ್ಲ, ಅಂತಸ್ತು, ಜಾತಿ, ಧರ್ಮಗಳ ಯಾವುದೇ  ಅಡೆ- ತಡೆಗಳು ಇಲ್ಲಿ ಕಂಡುಬರುವುದಿಲ್ಲ.

ಮದ್ದು ಹಾಕಲು ಸೂಕ್ತ ಕಾಲ: ಧನುರ್ಮಾಸದ(ಡಿಸೆಂಬರ್ 15ರಿಂದ ಜನವರಿ 15) ಒಂದು ತಿಂಗಳ ಕಾಲ ಗಿಡಮೂಲಿಕೆ ಸಂಗ್ರಹಿಸಿ ಮಡಕೆಗೆ ಹಾಕಲು ಅತ್ಯಂತ ಪ್ರಶಸ್ತವೆಂದು ಆನಂದಪ್ಪನವರಾದಿಯಾಗಿ ಎಲ್ಲಾ ನಾಟಿ ವೈದ್ಯರ ಅಭಿಮತ. ಅದರಲ್ಲಿಯೂ ಮುಖ್ಯವಾಗಿ ಈ ಅವಧಿಯ ಅಮಾವಾಸ್ಯೆಯಂದು ಹಾಕಿದರೆ ಇನ್ನೂ ಒಳ್ಳೆಯದು. ಇಡೀ ದಿನ ಗಿಡಮೂಲಿಕೆಗಳನ್ನು ಕಿತ್ತು ತಂದು ಸಂಜೆ ಸಣ್ಣ-ದಪ್ಪ(ಅರೆ-ಬರೆ) ಚಚ್ಚಿ ಹಾಕಿದರೆ ಬೆಳಕರಿಯುವ ಹೊತ್ತಿಗೆ ದೋಸೆ ಹಿಟ್ಟು ಉಕ್ಕಿದಂತೆ ಉಕ್ಕುತ್ತದಂತೆ. ನಿಶ್ಯಬ್ದ ವಾತಾವರಣದಲ್ಲಿ ಹಾಗೆ ಉಕ್ಕುವ ಶಬ್ದವೂ ಕೇಳಿಸುತ್ತದೆ ಎನ್ನುತ್ತಾರೆ ಆನಂದಪ್ಪನ ಹಿರಿಯ ಮಗ ರಾಮಣ್ಣ. ಅವರ ಪ್ರಕಾರ ಈ ಶಬ್ದ ‘ನಾಗರಹಾವು ಸರಿದಾಡಿದಂತೆ’ ಕೇಳಿಸುತ್ತದೆ.

ಹೀಗೆ ಉಕ್ಕುವ ಕ್ರಿಯೆ 2-3 ದಿನಗಳವರೆಗೂ ನಡೆಯುತ್ತದೆ. ಔಷಧಿ ಬಳಸಲು ಆರಂಭಿಸಿದ ನಂತರ ಉಕ್ಕುವ ಕ್ರಿಯೆ ಇಲ್ಲವಾಗುತ್ತದೆ. ಹೊಸದಾಗಿ ಹಾಕಿದಾಗ ಈ ರೀತಿ ಉಕ್ಕು ಬರಲು ಕಾರಣ ತಪಾಲ (ಸಾರಾಯಿಬ್ಯಾಲ) ಮತ್ತು ಚುಜ್ಜಲಿ ಮರದ ಪಟ್ಟೆ/ಚಕ್ಕೆಗಳಲ್ಲಿರುವ ಗುಣ ಎಂಬುದು ಇವರ ಅಭಿಮತ.

101 ಗಿಡಮೂಲಿಕೆಗಳು: ಮದ್ದಿನ ಮಡಕೆಗೆ 101 ಗಿಡಮೂಲಿಕೆಗಳನ್ನು ಹಾಕಬೇಕು. ಗ್ರಾಮೀಣ ಜನರಿಗೆ ಅದರಲ್ಲೂ ನಾಟಿ ವೈದ್ಯರಿಗೆ 101, 51, 11 ಮುಂತಾದವು ಪೂಜನೀಯ ಸಂಖ್ಯೆಗಳು. ಉದಾಹರಣೆಗೆ ವ್ಯವಹಾರದಲ್ಲಿ ಯಾರಿಗಾದರೂ ಮುಂಗಡ  ಹಣ ಕೊಡಬೇಕಾದರೆ 101 ರೂ. ಕೊಡುವುದು ವಾಡಿಕೆ. ಮದ್ದಿನ ಮಡಕೆಗೂ ಸಹ 101 ಜಾತಿ ಗಿಡಮೂಲಿಕೆಗಳನ್ನು ಸೇರಿಸಬೇಕೆನ್ನುವುದು ಇದೇ ರೀತಿಯ ನಂಬಿಕೆಗೆ ಒಳಪಟ್ಟಿದೆ. ಆನಂದಪ್ಪನವರ ಪ್ರಕಾರ ಹಿರಿಯರ ಕಾಲದಿಂದಲೂ ಇದು ನಡೆದು ಬಂದಿದೆ. ವರ್ಷಕ್ಕೊಮ್ಮೆಯಾದರೂ 101 ಗಿಡಮೂಲಿಕೆಗಳನ್ನು ತಂದು ಹಾಕಬೇಕು, ಅದು ಮದ್ದಿಗೆ ಹೆಚ್ಚು ಶಕ್ತಿ ಕೊಡುತ್ತದೆ. ಇದನ್ನು ಶೂನ್ಯಮಾಸದಲ್ಲಿ ಗಿಡಮೂಲಿಕೆ ಹಾಕುವಾಗ ನೆರವೇರಿಸುತ್ತಾರೆ. ಉಳಿದಂತೆ ಕಾಡಿಗೆ ಹೋದಾಗ ಯಾವ ಮರದ ತೊಗಟೆ/ಚಕ್ಕೆ ಸಿಗುತ್ತದೆಯೋ ಅದನ್ನು ತಂದು ಹಾಕುತ್ತಿರುತ್ತಾರೆ.

101 ಗಿಡಮೂಲಿಕೆಗಳನ್ನು ಎಣಿಸಲು ನಾಟಿ ವೈದ್ಯರು ಅನುಸರಿಸುವ ಕ್ರಮ ಕುತೂಹಲಕರ. ಕಲವೀರಪ್ಪನದೊಡ್ಡಿಯ ಮಹಾರುದ್ರಪ್ಪನವರು 101 ಕಲ್ಲುಗಳನ್ನು ತಂದು ಮನೆಯ ಕೊಟ್ಟಿಗೆಯಲ್ಲಿ ಇಟ್ಟಿರುತ್ತಾರೆ. ಮದ್ದಿನ ಮಡಕೆಗೆ ಗಿಡಮೂಲಿಕೆ ತಂದು ಹಾಕಿದಂತೆಲ್ಲಾ ಎಷ್ಟು ಗಿಡಮೂಲಿಕೆ ತಂದು ಹಾಕುತ್ತಾರೋ ಅಷ್ಟೂ ಕಲ್ಲುಗಳನ್ನು ಹೊರಗೆ ಬಿಸಾಡುತ್ತಾರೆ. ಕಲ್ಲುಗಳು ಪೂರಾ ಮುಗಿದಾಗ 101 ಗಿಡಮೂಲಿಕೆ ಪೂರ್ತಿಯಾಗಿದೆ ಎಂದರ್ಥ.

ಆನಂದಪ್ಪನವರಿಗೆ ವಯಸ್ಸಾಗಿರುವುದರಿಂದ ಮದ್ದಿನ ಮಡಕೆಗೆ ಹಾಕುವ 101 ಗಿಡಮೂಲಿಕೆಗಳ ಹೆಸರುಗಳು ಪೂರ್ತಿ ನೆನಪಿಲ್ಲ. ಅವರ ನೆನಪಿನಲ್ಲಿ ಅಂದಾಜು 60 ಹೆಸರುಗಳಿವೆ. ಕಾಡಿನಲ್ಲಿ ತಿರುಗಾಡುವಾಗ ಕಣ್ಣಿಗೆ ಬೀಳುವ ಗಿಡಮೂಲಿಕೆಗಳನ್ನು ಕಿತ್ತು ತರುವುದು ಅವರ ವಾಡಿಕೆ. ಆದರೆ, ಮದ್ದಿನ ಮಡಕೆಗೆ ಕಡ್ಡಾಯವಾಗಿ ಹಾಕಲೇಬೇಕಾದ 20-30 ಗಿಡಮೂಲಿಕೆಗಳಿವೆ. ಅವುಗಳನ್ನು ಹಾಕಿದ ನಂತರ ಉಳಿದವುಗಳನ್ನು ಲಭ್ಯತೆಯನ್ನು ನೋಡಿಕೊಂಡು ಸೇರಿಸುತ್ತಾ ಹೋಗುತ್ತಾರೆ.

ಮದ್ದಿನ ಮಡಕೆಗೆ ಗಿಡಮೂಲಿಕೆಗಳ ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ, ಅರಿಶಿನ, ಜೀರಿಗೆ ಮುಂತಾದ ಮನೆಬಳಕೆಯ ಸಾಂಬಾರ ಪದಾರ್ಥಗಳನ್ನೂ ಹಾಕುತ್ತಾರೆ. ಜೊತೆಗೆ ಮಜ್ಜಿಗೆ, ಬೆಲ್ಲ ಸಹ ಬಳಕೆಯಾಗುತ್ತವೆ. ನಾಟಿ ವೈದ್ಯದಲ್ಲಿ ಇವೆಲ್ಲವೂ ಸಹ ಔಷಧಿಗೆ ಬಳಕೆಯಾಗುವುದನ್ನು ಗಮನಿಸಬಹುದು. ಮದ್ದಿಗೆ ಹೆಚ್ಚು ಶಕ್ತಿ ಬರಲು, ಜೈವಿಕ ಕ್ರಿಯೆ ಜರುಗಲು ಈ ಸಂಬಾರು ಪದಾರ್ಥಗಳ ಪಾತ್ರ ದೊಡ್ಡದು ಎನ್ನುತ್ತಾರೆ ಹಲವಾರು ಪಶುವೈದ್ಯರು. ನಮ್ಮ ಕ್ಷೇತ್ರ ಕಾರ್ಯದಲ್ಲಿ ಮದ್ದಿನಮಡಕೆಗೆ ಹಾಕುವ 75 ಗಿಡಮೂಲಿಕೆಗಳ ಹೆಸರು ಲಭ್ಯವಾಯಿತು(ಸಾಂಬಾರು ಪದಾರ್ಥಗಳೂ ಸೇರಿ). ಆನಂದಪ್ಪ, ಮಹಾರುದ್ರಪ್ಪ, ಕೆಂಪರಾಮಯ್ಯ, ರಾಮಣ್ಣನವರಿಂದ ಈ ಮಾಹಿತಿಯನ್ನು ಸಂಗ್ರಹಿಸಲಾಯಿತು.

ಮದ್ದಿನ ಮಡಕೆಗೆ ಹಾಕುವ ಗಿಡಮೂಲಿಕೆಗಳ ಪಟ್ಟಿ

ಕ್ರಮಸಂಖ್ಯೆ ಮೂಲಿಕೆ ಹೆಸರು ಗಿಡದ ವಿಧ ಸಸ್ಯಶಾಸ್ತ್ರೀಯ ಹೆಸರು ಬಳಸುವ ಭಾಗ ಔಷಧೀಯ ಗುಣ ಲಭ್ಯತೆ
1 ದೊಡ್ಡಮರ ಮರ Ailanthus excelsaRoxb ಚಕ್ಕೆ/ಪಟ್ಟೆ Anti spasmodic ಕಡಿಮೆಯಾಗುತ್ತಿದೆ
2 ಚುಜ್ಜಲಿ ಮರ Al bizia amara ಚಕ್ಕೆ/ಪಟ್ಟೆ Pneumonia ಸಿಗುತ್ತದೆ
3 ಉರುಗಲಿ ಮರ ಚಕ್ಕೆ/ಪಟ್ಟೆ ಸಿಗುತ್ತದೆ
4 ಎಟ್ಟಿ ಮರ Strychnox nux-vomica ಚಕ್ಕೆ/ಪಟ್ಟೆ Anti viral, for pneumonia ಕಡಿಮೆಯಾಗುತ್ತಿದೆ
5 ಆಡುಮುಟ್ಟದ ಸೊಪ್ಪು ಗಿಡ Tylophora indica ಎಲೆ ಸಿಗುತ್ತದೆ
6 ದೊಡ್ಡಂಚಿ ಹುಲ್ಲು ತೆಂಡೆ/ಬೇರು ಸಿಗುತ್ತದೆ
7 ಜಾಗಡಿ/ದಾಗಡಿ ಬಳ್ಳಿ Cocculums hirsutusLinn ಎಲೆ ಸಿಗುತ್ತದೆ
8 ಆನೆಗೊಬ್ಬಳಿ ಬಳ್ಳಿ ಎಲೆ ಅಪರೂಪ
9 ಸಂಪಿಗೆ ಮರ Michelia Champaka ಚಕ್ಕೆ/ಪಟ್ಟೆ ಸಿಗುತ್ತದೆ
10 ಬೂರಗ ಮರ Bombax ceiba ಚಕ್ಕೆ/ಪಟ್ಟೆ Anti bactirial, for sprains,dysentery ಸಿಗುತ್ತದೆ
11 ಕೌತೆ ಮರ ಚಕ್ಕೆ/ಪಟ್ಟೆ ತುಂಬಾ ಅಪರೂಪ 

10-15 ಕಿ.ಮೀ.ಹೋಗಬೇಕು

12 ಸಿಟ್ಟುಂಡೆ ಗಿಡ ಎಲೆ ಸಿಗುತ್ತದೆ
13 ಸುಂಡೆ ಗಿಡ AnguSolanumivi Lam ಎಲೆ ಸಿಗುತ್ತದೆ
14 ಪಟ್ಟೆ ಸೊಪ್ಪು ಸಣ್ಣ ಗಿಡ ಸೊಪ್ಪು ಸಿಗುತ್ತದೆ
15 ಕಾಡುಮೆಣಸು ಗಿಡ Corchorus Olitoius ಎಲೆ/ಕಡ್ಡಿ ಅಪರೂಪ
16 ಅಂಟುವಾಳ ಮರ Sapindus Trifoliatus ಕಾಯಿ ಅಪರೂಪ
17 ಅಳಲೆಕಾಯಿ ಮರ Terminalia chebula ಚಕ್ಕೆ/ಪಟ್ಟೆ ಅಪರೂಪ
18 ಕಾಡುಈರುಳ್ಳಿ ಸಣ್ಣಗಿಡ Crinum vivipuram(Lam) ಗೆಡ್ಡೆ ಅಪರೂಪ
19 ಬೇವು ಮರ Azadhirachta indica ಚಕ್ಕೆ/ಪಟ್ಟೆ Acrid, alterative,anthelmintic,liver tonic ಸಿಗುತ್ತದೆ
20 ನೆಲಬೇವು/ಕಿರುನೆಲ್ಲಿ ಚಿಕ್ಕ ಗಿಡ Phyllanthus aeidus ಸೊಪ್ಪು ಸಿಗುತ್ತದೆ
21 ನಿಂಬೆ ಗಿಡ Citrua aurantifoliaswingle ಕಾಯಿ For dysentary,bringing on heat, 

newcastle disease

ಸಿಗುತ್ತದೆ
22 ಈಶ್ವರಿ ಬೇರು ಬಳ್ಳಿ Aristolochia indica ಬೇರು Anti bacterial, Diuretic ಅಪರೂಪ
23 ಎಕ್ಕ ಗಿಡ/ಪೊದೆ Calobropis giganteaL.R.Br ಕುಡಿ Anti nematodal, for hairloss,cough, for abscess ಸಿಗುತ್ತದೆ
24 ಅರಳಿ ಮರ Ficus religiosa ಚಕ್ಕೆ/ಪಟ್ಟೆ Cooling, for abscess ಸಿಗುತ್ತದೆ
25 ಮಾವು ಮರ Mangifera indica ಚಕ್ಕೆ/ಪಟ್ಟೆ Acrid, anti bactirial,for fever, oedema ಸಿಗುತ್ತದೆ
26 ಹಲಸು ಮರ Artocarpusheterophyllus ಚಕ್ಕೆ/ಪಟ್ಟೆ For expelling retainedplecenta ಸಿಗುತ್ತದೆ
27 ಹೊಂಗೆ ಮರ Derris indica ಚಕ್ಕೆ/ಪಟ್ಟೆ Anti nematodal, fordiarrhoea, worms ಸಿಗುತ್ತದೆ
28 ಕಾಡುಮಾವು ಮರ ಚಕ್ಕೆ/ಪಟ್ಟೆ ಅಪರೂಪ
29 ಬೆಪ್ಪಾಲೆ ಮರ Wrightia tinctonia ಚಕ್ಕೆ/ಪಟ್ಟೆ Acrid, anthelmintic, aphrodisiac, bitter ಸಿಗುತ್ತದೆ
30 ದುಂಡುಮಲ್ಲಿಗೆ ಪೊದೆ ಸೊಪ್ಪು ಸಿಗುತ್ತದೆ
31 ಕರಿಬೇವು ಮರ Murrya Koengii (L) ಎಲೆ ಸಿಗುತ್ತದೆ
32 ಅಜ್ಜಿಗೆಡ್ಡೆ/ಶತಾವರಿ ಗಿಡ/ಬಳ್ಳಿ Asparagus racemosus ಗಡ್ಡೆ Anti bacterial, anti cancer,anti fungal ಅಪರೂಪ
33 ವಡ್ದರಬೆಣ್ಣೆ ಗಿಡ ಚಿಕ್ಕ ಗಿಡ ಚಿಕ್ಕ ಗೆಡ್ಡೆ ಸಿಗುತ್ತದೆ
34 ತಪಾಲ ಮರ Limonia acdissima ಚಕ್ಕೆ/ಪಟ್ಟೆ ಸಿಗುತ್ತದೆ
35 ಬೇಲ ಮರ Limonia acdissmia ಚಕ್ಕೆ/ಪಟ್ಟೆ Liver stimulant ಅಪರೂಪವಾಗುತ್ತಿದೆ
36 ಕೊತ್ತಿ ಚಿಕ್ಕಗಿಡ ಸೊಪ್ಪು ಸಿಗುತ್ತದೆ
37 ಚೇಗೊಡತಿ ಗಿಡ ಎಲೆ ಅಪರೂಪ
38 ಸೀಲಿ ಬಳ್ಳಿ ಎಲೆ ಅಪರೂಪ
39 ಕುಡ್ಲಿಡಿ/ಅಡ್ಡಿಕೆ ಚಿಕ್ಕ ಗಿಡ Tridax procumbens ಸೊಪ್ಪು Wound healing acceleration, antiinflammatory. for diarrhoea, ephemeral fever. ಸಿಗುತ್ತದೆ
40 ತೊಂಡೆ ಬಳ್ಳಿ Coccinia grandis(L) Voiga ಸೊಪ್ಪು ಸಿಗುತ್ತದೆ
41 ಹಾಗಲ ಬಳ್ಳಿ Momordica charantia ಎಲೆ Cough and cold, tricks ಸಿಗುತ್ತದೆ
42 ಕೊಗ್ಗಿ ಚಿಕ್ಕಗಿಡ ಬೇರು ಸಿಗುತ್ತದೆ
43 ಕಾಡಳ್ಳಿ ಗಿಡ Jotropa curcas ಚಕ್ಕೆ/ಪಟ್ಟೆ Toxic, for dysentery ಸಿಗುತ್ತದೆ
44 ಹುಣಸೆ ಮರ Tamarindus indica ಚಕ್ಕೆ/ಪಟ್ಟೆ Anti viral, cough andcold,black quarter, ephemeral fever ಸಿಗುತ್ತದೆ
45 ಮುಂಗರಬಳ್ಳಿ/ನೆರಲೆ ಬಳ್ಳಿ Cissus quadrangularis ಕಾಂಡ For diarrhoea, ephemeralfever,bloat, pneumonia ಅಪರೂಪ
46 ಆಡುಸೋಗೆ ಗಿಡ Adhathoda Vasica ಸೊಪ್ಪು Anti tussive, For cough,debility ಅಪರೂಪ
47 ಉಗನಿ ಬಳ್ಳಿ ಕುಡಿ ಸಿಗುತ್ತದೆ
48 ರಜಮಂಡಲ ಪೊದೆ ಚಕ್ಕೆ/ಪಟ್ಟೆ ಅಪರೂಪ
49 ಅಮೃತಬಳ್ಳಿ/ಜನಿವಾರದ ಬಳ್ಳಿ ಬಳ್ಳಿ Tinosphora cardifolia ಎಲೆ For black quarter, ephemeralfever and fever, agalactia. ಸಿಗುತ್ತದೆ
50 ಬಿಲ್ವಪತ್ರೆ ಮರ Aegle marmelos ಚಕ್ಕೆ/ಪಟ್ಟೆ Nematocidal ಸಿಗುತ್ತದೆ
51 ಕರಿಬಂಟನಗಿಡ ಪೊದೆ ಚಕ್ಕೆ/ಪಟ್ಟೆ ಅಪರೂಪ
52 ಕಾಡೆಗುಡಿಗಿಡ ಗಿಡ ಎಲೆ
53 ಹಿರೇಮದ್ದಿನ ಗಿಡ/ಅಶ್ವಗಂಧ ಗಿಡ Withania Somnifra ಎಲೆ ಸಿಗುತ್ತದೆ
54 ನೇರಲೆ ಮರ Syzygium cumini ಚಕ್ಕೆ/ಪಟ್ಟೆ Anti viral, for fever,bloat, colic ಸಿಗುತ್ತದೆ
55 ಲೋಳೆಸರ ಗಿಡ Aloe barbadensis ಪಟ್ಟೆ Anti bacterial, immunostimulant,anti inflammatory, anti microbial ಸಿಗುತ್ತದೆ
56 ವಿಷಮಧಾರೆ ಪೊದೆ ಸೊಪ್ಪು ಅಪರೂಪ
57 ಆನೆಮಗ್ಗುಲು/ಆನೆನೆಗ್ಗಿಲು ಸಣ್ಣಗಿಡ Pedalium Murex ಸೊಪ್ಪು Lithotriptic, stomachic,anti gonorrhoea. tonic ಸಿಗುತ್ತದೆ
58 ಗುಲಗುಂಜಿ ಬಳ್ಳಿ Abrus precatorius ಸೊಪ್ಪು Anti spasmodic ಅಪರೂಪ
59 ಬಜೆ ಗಿಡ Acorus calamus ಬೇರು Anti convulsant ಅಪರೂಪ
60 ದೊಡ್ಡಪತ್ರೆ ಗಿಡ Colcus aromationa ಎಲೆ ಸಿಗುತ್ತದೆ
61 ಕಾಡುನೆಲ್ಲಿ ಮರ Emblica officinalis ಕಾಯಿ For fever, contagiousecthyma, pneumonia ಅಪರೂಪ
62 ಹೊನ್ನೆ ಮರ ಚಕ್ಕೆ/ಪಟ್ಟೆ ಅಪರೂಪ
63 ಬಿಳಿಸೂಲಿ ಪೊದೆ Securinega virosa ಎಲೆ For anorexia, fowl fox ಸಿಗುತ್ತದೆ
64 ಸೊಂಡ್ಲಿ ಪೊದೆ ಎಲೆ ಅಪರೂಪ
65 ವರಸಿ ಮರ ಚಕ್ಕೆ/ಪಟ್ಟೆ ಅಪರೂಪ
66 ಜೀರಿಗೆ Cucuminum sativum ಕಾಳು
67 ಮಜ್ಜಿಗೆ
68 ಬೆಲ್ಲ
69 ಮೆಣಸಿನಕಾಯಿ ಗಿಡ Capsicum annuum ಕಾಯಿ For bloat, ephemeral,stomatitis, worms
70 ಕಾಳುಮೆಣಸು ಬಳ್ಳಿ Pipar nigrum ಕಾಳು Anti ascariasis, cough and cold,dysentery, fever, worms
71 ಬೆಳ್ಳುಳ್ಳಿ(3-4 ಗಡ್ಡೆ) Ca Allim sativum ಗಡ್ಡೆ Anti bactirial, anti biotic,anti inflammatory, 

anti microbial

72 ಈರುಳ್ಳಿ(7-8 ಗಡ್ಡೆ) Allium cepa ಗಡ್ಡೆ Anti ascaris, anti asthmatic,anti bacterial, anti fatigue
73 ಅರಿಶಿಣ Curcuma LongaKoengi ಕೊಂಬು For fever, cough and cold,dysentery, worms, wounds
74 ಸಾಸಿವೆ(ಸೌಟಿನಲ್ಲಿ ಬಿಸಿಮಾಡಿ ಹಾಕಬೇಕು)
75 ಲವಂಗ Syzigium aromaticum ಇಲುಕು For colic, bloat

ಕಳ್ಳರೋಗದ ಮದ್ದು ವಾಸಿ ಮಾಡುವ ರೋಗಗಳು

ಕ್ರಮಸಂಖ್ಯೆ ರೋಗದ ಹೆಸರು ರೋಗ ಲಕ್ಷಣ ಔಷಧಿ ಪ್ರಮಾಣ ಎಷ್ಟುದಿನ ಸಮಯ ಇತರೆ
1 ಕೆಮ್ಮು(cough) ಜಾನುವಾರು ಸದಾ/ಆಗಾಗ ಕೆಮ್ಮುತ್ತಿರುತ್ತವೆ. ಒಂದು ಸಲಕ್ಕೆ ಮೂರುಗೊಟ್ಟ*  (ಅಂದಾಜು 450 ಮಿ.ಲೀ.) 3 ದಿನ ಬೆಳಗಿನ ಹೊತ್ತು ಅಥವಾಖಾಲಿ ಹೊಟ್ಟೆಯಲ್ಲಿರುವಾಗ
2 ಹೊಟ್ಟೆ ಉಗ್ಗರBloat ಅಜೀರ್ಣದಿಂದಾಗಿ ಸರಿಯಾಗಿ ಮೇವುತಿನ್ನುವುದಿಲ್ಲ, ಮೆಲುಕುಹಾಕುವುದಿಲ್ಲ, ಹೊಟ್ಟೆ ಊದಿರುತ್ತದೆ ಒಂದು ಸಲಕ್ಕೆ ಮೂರು ಗೊಟ್ಟ(ಅಂದಾಜು 450 ಮಿ.ಲೀ.) 3 ದಿನ ಬೆಳಗಿನ ಹೊತ್ತು ಅಥವಾಖಾಲಿ ಹೊಟ್ಟೆಯಲ್ಲಿರುವಾಗ ತಮಟೆ ರೋಗಎಂದೂ ಕರೆಯುತ್ತಾರೆ
3 ಮೈಮೇಲೆ ಕೂದಲುಬೆಳೆದಿರುವಿಕೆ ಜಾನುವಾರು ಮೈಮೇಲೆ ಅಗತ್ಯಕ್ಕಿಂತಹೆಚ್ಚಾಗಿ ಕೂದಲು ಬೆಳೆದಿರುತ್ತವೆ ಒಂದು ಸಲಕ್ಕೆ ಮೂರು ಗೊಟ್ಟ(ಅಂದಾಜು 450 ಮಿ.ಲೀ.) 3 ದಿನ ಬೆಳಗಿನ ಹೊತ್ತು ಅಥವಾಖಾಲಿ ಹೊಟ್ಟೆಯಲ್ಲಿರುವಾಗ
4 ಮೇವು ಬಿಟ್ಟಿರುವುದುLack of Appetite ಮಂಕಾಗಿರುತ್ತವೆ, ಸರಿಯಾಗಿ ಮೇವುತಿನ್ನುವುದಿಲ್ಲ, ನಿಶ್ಯಕ್ತಿ, ಬದವಾಗುತ್ತವೆ. ಒಂದು ಸಲಕ್ಕೆ ಮೂರು ಗೊಟ್ಟ(ಅಂದಾಜು 450 ಮಿ.ಲೀ.) 3 ದಿನ ಬೆಳಗಿನ ಹೊತ್ತು ಅಥವಾಖಾಲಿ ಹೊಟ್ಟೆಯಲ್ಲಿರುವಾಗ
5 ಬೇಧಿ ತೆಳ್ಳಗೆ ಪದೇ-ಪದೇ ಸಗಣಿ ಹಾಕುವುದು.ಕೆಲವೊಮ್ಮೆ ರಕ್ತ ಮಿಶ್ರಿತವಾಗಿವಾಸನೆಯಿಂದಕೂಡಿರುತ್ತದೆ. 

ಆಯಾಸದಿಂದ ಮೇವು ಬಿಡುತ್ತವೆ.

ಒಂದು ಸಲಕ್ಕೆ ಮೂರು ಗೊಟ್ಟ(ಅಂದಾಜು 450 ಮಿ.ಲೀ.) 3 ದಿನ ಬೆಳಗಿನ ಹೊತ್ತು ಅಥವಾಖಾಲಿ ಹೊಟ್ಟೆಯಲ್ಲಿರುವಾಗ
6 ಜಂತು ಹುಳು ವಿವಿಧ ರೀತಿಯ ಜಂತು ಹುಳಗಳು ಹೊಟ್ಟೆಮತ್ತು ಕರುಳಿನಲ್ಲಿ ಸೇರಿಕೊಂಡು ತೊಂದರೆಕೊಡುತ್ತವೆ. ಸೊರಗಿ ಬಡಕಲಾಗುತ್ತವೆ ಒಂದು ಸಲಕ್ಕೆ ಮೂರು ಗೊಟ್ಟ(ಅಂದಾಜು 450 ಮಿ.ಲೀ.) 3 ದಿನ ಬೆಳಗಿನ ಹೊತ್ತು ಅಥವಾಖಾಲಿ ಹೊಟ್ಟೆಯಲ್ಲಿರುವಾಗ
7 ಗುಳ್ಳೆ ರೋಗ ಹೊಟ್ಟೆಯಲ್ಲಿ ಕರುಳಿನ ಮೇಲೆಗುಳ್ಳೆಗಳಾಗಿರುತ್ತವೆ. ಮೂಗಿನಲ್ಲಿನೀರು ಸೋರುತ್ತಿರುತ್ತದೆ. ಒಂದು ಸಲಕ್ಕೆ ಮೂರು ಗೊಟ್ಟ(ಅಂದಾಜು 450 ಮಿ.ಲೀ.) 3 ದಿನ ಬೆಳಗಿನ ಹೊತ್ತು ಅಥವಾಖಾಲಿ ಹೊಟ್ಟೆಯಲ್ಲಿರುವಾಗ
8 ನರಡಿ ಸದಾ ಸೀನುತ್ತಿರುತ್ತವೆ ಒಂದು ಸಲಕ್ಕೆ ಮೂರು ಗೊಟ್ಟ 3 ದಿನ ಬೆಳಗಿನ ಹೊತ್ತು ಅಥವಾಖಾಲಿ ಹೊಟ್ಟೆಯಲ್ಲಿರುವಾಗ
9 ಪಿಂಜರ ಮೇಲು ತಿನ್ನುವುದಿಲ್ಲ, ಹಿಂದೆ-ಮುಂದೆಎಳೆಯುತ್ತವೆ ಬಡಕಲಾಗುತ್ತವೆ ಒಂದು ಸಲಕ್ಕೆ ಮೂರು ಗೊಟ್ಟ 3 ದಿನ ಬೆಳಗಿನ ಹೊತ್ತು ಅಥವಾಖಾಲಿ ಹೊಟ್ಟೆಯಲ್ಲಿರುವಾಗ

ಜಾನುವಾರು ಚೆನ್ನಾಗಿ ಮೈಕೈ ತುಂಬಿಕೊಳ್ಳಲು ಕೂಡ ಇದೇ ಮದ್ದನ್ನು ಒಂದು ಸಲಕ್ಕೆ ಮೂರು ಗೊಟ್ಟ(450 ಮಿ.ಲೀ.)ದಂತೆ ಎಷ್ಟು ದಿನ ಬೇಕಾದರೂ ಹಾಕಬಹುದು. ಅದೂ ಕೂಡ ಬೆಳಗಿನ ಹೊತ್ತು ಅಥವಾ ಖಾಲಿ ಹೊಟ್ಟೆಯಲ್ಲಿಯೇ ಹಾಕಬೇಕು.

ಗೊಟ್ಟ = ಬಿದಿರಿನಿಂದ ಮಾಡಿರುವ ಕೊಳವೆ. ಮುಂಭಾಗದಲ್ಲಿ ಚೂಪಾಗಿದ್ದು ದನಗಳ ಬಾಯಿಗಿಟ್ಟು ಔಷಧಿ ಕುಡಿಸಲು ಅನುಕೂಲವಾಗಿರುವಂತೆ ಮಾಡಿರುತ್ತಾರೆ. ಖಾಯಿಲೆ ವಾಸಿಯಾದರೂ ಸಹ 3 ದಿವಸ ಕುಡಿಸಬೇಕೆಂದು ನಾಟಿ ವ್ಶೆದ್ಯರು ಸಲಹೆ ಮಾಡುತ್ತಾರೆ.

ತಗ್ಗಟ್ಟಿಯ ಮದ್ದಿನಮಡಕೆ ಔಷಧಿ ಬಳಸುವ ಇತರ ಗ್ರಾಮಗಳು: ಈಗಾಗಲೇ ಹೇಳಿರುವಂತೆ ಮುಂಚೆ ಬಹುತೇಕ ಗ್ರಾಮಗಳಲ್ಲಿ ಈ ಔಷಧಿ ಲಭ್ಯವಿರುತ್ತಿದ್ದು ಕ್ರಮೇಣ ತಗ್ಗಟ್ಟಿಯಲ್ಲಿ ಮಾತ್ರ ಉಳಿಯಿತು. ತಗ್ಗಟ್ಟಿಗೆ ಬಂದು ಆನಂದಪ್ಪನವರ ಮನೆಯಿಂದ ಔಷಧಿ ಒಯ್ಯುವ ಹಳ್ಳಿಗಳು ಇಂತಿವೆ; (ಊರಿನ ಹೆಸರಿನ ಮುಂದೆ ಕಂಸದಲ್ಲಿ ತಗ್ಗಟ್ಟಿಗೆ ಇರುವ ಅಂತರ ನೀಡಲಾಗಿದೆ). ಅತ್ತಿನತ್ತ  (3 ಕಿ.ಮೀ.), ನೂರೊಂದುಸ್ವಾಮಿ ಬೆಟ್ಟ (5 ಕಿ.ಮೀ.), ಪೋಡೂರು (3 ಕಿ.ಮೀ.), ಉಡುಬರಾಣೆ (3 ಕಿ.ಮೀ.), ಹುಲಿಬಂಡೆ (5 ಕಿ.ಮೀ.), ಸೂಲುಕುಂಟೆ (7 ಕಿ.ಮೀ.), ಕರಡಿಕಲ್ಲು (9 ಕಿ.ಮೀ.), ತಿಮ್ಮೇನಹಳ್ಳಿ (9 ಕಿ.ಮೀ.), ಬ್ಯಾಡರಹಳ್ಳಿ (4 ಕಿ.ಮೀ.), ಯರಮುತ್ತನಹಳ್ಳಿ (4 ಕಿ.ಮೀ.) ಹಾಗೂ ಮಿಳಿದಿರಿಕೆ (5 ಕಿ.ಮೀ.). ಇದನ್ನು ಗಮನಿಸಿದರೆ ಅಂದಾಜು 9 ಕಿ.ಮೀ. ದೂರದಿಂದ ಬಂದು ಔಷಧಿ ಒಯ್ಯುವುದು ತಿಳಿಯುತ್ತದೆ. ಕಳ್ಳರೋಗದಮದ್ದು ಎಷ್ಟು ಪರಿಣಾಮಕಾರಿ ಎಂಬುದಕ್ಕೆ ಇದು ಸಾಕ್ಷಿ. ಇದಲ್ಲದೆ ಅಪರೂಪಕ್ಕೆ ದೂರದ ಹೊಸೂರು, ಬೆಂಗಳೂರು, ಡೆಂಕಣಿಕೋಟೆ, ಹುಣಸನಹಳ್ಳಿಗಳಿಂದಲೂ ಜನರು ಬಂದು ಔಷಧಿ ಒಯ್ದಿದ್ದನ್ನು ಆನಂದಪ್ಪ ನೆನೆಯುತ್ತಾರೆ.ಇನ್ನೊಂದು ವಿಷಯವೆಂದರೆ, ಈ ಗ್ರಾಮಗಳವರು ಖಾಯಿಲೆ ಬಂದಾಗ ತಾವೇ ಸ್ವತಃ ಬೇರೆ- ಬೇರೆ ಮದ್ದು ಕುಡಿಸಿ ಪರಿಣಾಮಕಾರಿಯಾಗದಿದ್ದಾಗ ಇಲ್ಲಿಗೆ ಬಂದು ಔಷಧಿ ತೆಗೆದುಹೋಗುವುದನ್ನು ಆನಂದಪ್ಪ ಗಮನಿಸಿದ್ದಾರೆ. ‘ಈ ಮದ್ದು ಕುಡಿಸಿ ರಾಸುಗಳಿಗೆ ತೊಂದರೆಯಾಗಿರುವುದನ್ನು ನನ್ನ ಅನುಭವದಲ್ಲಿ ನೋಡಿಯೇ ಇಲ್ಲಕ’ ಇದು ಆನಂದಪ್ಪನವರ ಆತ್ಮವಿಶ್ವಾಸದ ನುಡಿ.

ಹೆಚ್ಚಾಗಿ ಬಳಸುವ ಕಾಲ: ಬೇಸಿಗೆ ಕಾಲದಲ್ಲಿ ಔಷಧಿಯ ಬಳಕೆ ಹೆಚ್ಚು. ಬೆಳೆಗಳ ಕಟಾವು ಮುಗಿದು ಹೊಲದಲ್ಲಿ ತರಗಲು ಬೀಳುತ್ತದೆ, ಅದನ್ನು ತಿನ್ನುವ ಜಾನುವಾರುಗಳಿಗೆ ಖಾಯಿಲೆ ಹೆಚ್ಚು, ಆಗ ಕಳ್ಳರೋಗದಮದ್ದಿಗೆ ವಿಪರೀತ ಬೇಡಿಕೆ ಇರುತ್ತದೆ. ಅಲ್ಲದೆ ಈ ಕಾಲದಲ್ಲಿ ಚುಜ್ಜಲಿ ಹೂ ಬಿಡುತ್ತವೆ. ಈ ಭಾಗದಲ್ಲಿ ಯತೇಚ್ಛವಾಗಿ ಈ ಮರಗಳಿದ್ದು ಮರಗಳ ಕೆಳಗೆ ಬಿದ್ದ ಈ ಹೂಗಳನ್ನು ರಾಸುಗಳು ತಿಂದು ಖಾಯಿಲೆಗೆ ಗುರಿಯಾಗುತ್ತವೆ. ಔಷಧಿ ಬಳಕೆ ಹೆಚ್ಚಾಗಲು ಇದೂ ಸಹ ಕಾರಣ.
ಕಳ್ಳರೋಗದಮದ್ದು ಬಳಕೆಯ ಕೆಲವು ಯಶಸ್ವಿ ಪ್ರಸಂಗಗಳು:
ಪ್ರಸಂಗ-1: ಸ್ವತಃ ಆನಂದಪ್ಪನವರ ಅನುಭವ ಇದು. 20-25 ವರ್ಷ ಹಿಂದೆ ನಡೆದಿದ್ದು. ಆಗ ಯಾವುದೋ ಕಾರಣಕ್ಕೆ ಇವರ ಮನೆಯಲ್ಲಿ ಕಳ್ಳರೋಗದ ಮದ್ದು ಹಾಕುವುದನ್ನು ನಿಲ್ಲಿಸಿದ್ದರು. ಅಂತಹ ಸಂದರ್ಭದಲ್ಲಿ ಇವರ ಒಂದು ಎತ್ತು ಜೋಳದ ಮೇವು ತಿಂದ ನಂತರ ಖಾಯಿಲೆ ಬಿದ್ದಿತು. ಸತತ 3 ದಿನ ಮೇವು ತಿನ್ನಲಿಲ್ಲ. ಏನೇನೋ ಔಷಧಿ ಮಾಡಿದರೂ ಪ್ರಯೋಜನವಾಗಲಿಲ್ಲ.  ಒಂದು ವಾರದ ನಂತರವೂ ಪರಿಸ್ಥಿತಿ ಸುಧಾರಿಸಲಿಲ್ಲ, ಬದಲಿಗೆ ಬಿಗಡಾಯಿಸಿತು. ಕಾಲುಗಳು ಊತ ಬಂದವು. ಪರವೂರಿನ ನಾಟಿವೈದ್ಯರನ್ನು ಕರೆಸಿ ಮದ್ದು ಕೊಡಿಸಿದರೂ ಪ್ರಯೋಜನವಾಗಲಿಲ್ಲ.  ಆಗ ಇದೇ ಗ್ರಾಮದ ಕುರುಸಿದ್ದಪ್ಪನವರ ಮನೆಯಿಂದ ಕಳ್ಳರೋಗದಮದ್ದು ತಂದು ಕುಡಿಸಲು ಶುರುಮಾಡಿದರು. ಕ್ರಮೇಣ ಎತ್ತಿನ ಆರೋಗ್ಯ ಸುಧಾರಿಸಲಾರಂಭಿಸಿ ಮೂರು ತಿಂಗಳಿಗೆ ಪೂರ್ತಿ ವಾಸಿಯಾಯಿತು. ಈ ಅನುಭವದ ನಂತರ ಆನಂದಪ್ಪ ಮತ್ತೆ ಮದ್ದು ಹಾಕಲು ಪ್ರಾರಂಭಿಸಿ ಮತ್ತೆ ಎಂದೂ ಸಹ ನಿಲ್ಲಿಸಲಿಲ್ಲ.
ಪ್ರಸಂಗ-2: 7-8 ವರ್ಷಗಳ ಹಿಂದೆ ಈ ಔಷಧಿ ಬಗ್ಗೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಚಿಕ್ಕ ಲೇಖನ ಪ್ರಕಟವಾಗಿತ್ತು. ಅದನ್ನು ಓದಿ ಬೆಂಗಳೂರಿನಿಂದ 3 ಜನ ಬಂದು ತಮ್ಮ ಸೀಮೆಹಸುಗಳಿಗೆ ಮೈತುಂಬಾ ಕೂದಲು ಅಲ್ಲಲ್ಲಿ ಉದುರಿ ಗಾಯಗಳಾಗಿವೆ ಎಂದು ಹೇಳಿ ಔಷಧಿ ತೆಗೆದುಕೊಂಡು ಹೋದರು. ಒಂದೆರಡು ವಾರಗಳ ನಂತರ ಹಸುಗಳಿಗೆ ವಾಸಿಯಾಗಿರುವುದಾಗಿ ಪತ್ರ ಬರೆದಿದ್ದರು.
ಪ್ರಸಂಗ-3: ಈ ಔಷಧಿಯನ್ನು ಮನುಷ್ಯರಿಗೂ ಸಹ ಕೊಡಬಹುದು ಎನ್ನುತ್ತಾರೆ ಆನಂದಪ್ಪ. ಹೊಸದಾಗಿ ಗಿಡಮೂಲಿಕೆಗಳನ್ನು ತಂದು ಮಡಕೆಗೆ ಹಾಕಿದಾಗ ಕುಡಿಯಲು ಯೋಗ್ಯವಾಗಿರುತ್ತದೆ ಹಾಗೂ ಪರಿಣಾಮಕಾರಿಯೂ ಆಗಿರುತ್ತದೆ ಎಂಬುದು ಇವರ ಅನುಭವ. ಈ ಹೇಳಿಕೆಗೆ ಪೂರಕವಾಗಿ ಅವರದೇ ಒಂದು ಉದಾಹರಣೆ ನೀಡುತ್ತಾರೆ.ಅವರ ಮೊಮ್ಮಗು ಹುಟ್ಟಿದಾಗ ತುಂಬಾ ಸಣ್ಣಗಿತ್ತು. ಯಾವ ರೀತಿಯ ಉಪಚಾರ ಮಾಡಿದರೂ ಸರಿಯಾಗಲಿಲ್ಲ. ಕೊನೆಗೆ ಒಂದು ದಿನ ಆನಂದಪ್ಪನವರ ಮಡದಿ ಕಳ್ಳರೋಗದ ಮದ್ದನ್ನೇ ಕುಡಿಸಲು ತೀರ್ಮಾಸಿದರು. ಸತತವಾಗಿ 3 ದಿವಸ ಒಂದೊಂದು ಲೋಟ ಕುಡಿಸಿದ ನಂತರ ಕ್ರಮೇಣ ಮಗು ದುಂಡು- ದುಂಡಾಗಿ ಚೆನ್ನಾಗಾಯಿತು. ಇದರಿಂದ ಮನುಷ್ಯರು ಇದನ್ನು ಬಳಸಿದರೂ ಸಹ ಯಾವುದೇ ಹಾನಿಯಿಲ್ಲ ಎಂಬುದು ಮನವರಿಕೆಯಾಗುತ್ತದೆ.
ಪ್ರಸಂಗ-4: ಉಡುಬರಾಣೆಯಲ್ಲಿ ಒಬ್ಬರು ಸ್ವಾಮೀಜಿ 12 ಎಮ್ಮೆ ಹಾಗೂ ಒಂದು ಕೋಣವನ್ನು ಸಾಕಿದ್ದರು. ಒಮ್ಮೆ ಇದ್ದಕ್ಕಿದ್ದಂತೆ ಕೋಣ ನಿಶ್ಯಕ್ತಿಯಾಯಿತು. ಎಮ್ಮೆಗಳಿಗೆ ಗಬ್ಬ ಕಟ್ಟುತ್ತಿರಲಿಲ್ಲ. ಸ್ವತಃ ಸ್ವಾಮೀಜಿಯೇ ತಗ್ಗಟ್ಟಿಗೆ ಬಂದು ಮದ್ದು ಕೊಂಡೊಯ್ದರು. 2-3 ಸಲ ಕುಡಿಸುವ ಹೊತ್ತಿಗೆ ಕೋಣ ಸರಿಹೋಯಿತು.
ಹೀಗೆ ಕಳ್ಳರೋಗದ ಮದ್ದು ಬಳಸಿ ಯಶಸ್ವಿಯಾದ ಅನೇಕ ಉದಾಹರಣೆಗಳನ್ನು ಆನಂದಪ್ಪ ಹಾಗೂ ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.
ಪಶುವೈದ್ಯರ ಮತ್ತು ಇತರ ತಜ್ಞರ ಅಭಿಪ್ರಾಯಗಳು:
ಮದ್ದಿನಮಡಕೆ ವಿಧಾನದ ಹಿಂದಿನ ವ್ಶೆಜ್ಞಾನಿಕ ಕಾರಣಗಳ ಬಗ್ಗೆ ಹಲವಾರು ಪಶು ವೈದ್ಯರು ಮತ್ತು ತಜ್ಞರು ಹಲವಾರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಪಾರಂಪರಿಕ ನಾಟಿ ವ್ಶೆದ್ಯದ ಬಗ್ಗೆ ಅಪಾರ ಸಂಶೋಧನೆ ನಡೆಸಿರುವ ಬಿ.ಎಸ್. ಸೋಮಶೇಖರ್ ಅವರು ‘ನಾಟಿ ಪಶು ವೈದ್ಯ ಪರಂಪರೆಯಲ್ಲಿ ಇಂತಹ ನೂರಾರು ಪದ್ಧತಿಗಳಿದ್ದವು. ಈಗಲೂ ಹೆಚ್ಚು ಜನಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಅವುಗಳ ಅಸ್ತಿತ್ವವಿದೆ. ಮದ್ದಿನ ಮಡಕೆ ದೇಸೀ ಪಶುವೈದ್ಯ ಪರಂಪರೆಯ ಒಂದು ಶ್ರೇಷ್ಠ ವಿಧಾನ. ಇಂತಹವು ಜನರ ಅನುಭವದ ಮೂಸೆಯಲ್ಲಿ, ಮೌಖಿಕ ಸಾಧನ ಮಾತ್ರದಿಂದಲೇ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಗೊಳ್ಳುತ್ತಾ  ಬರುತ್ತವೆ. ಆ ರೀತಿ ಆಗುವಾಗ ಅಲ್ಪ-ಸ್ವಲ್ಪ ಬದಲಾವಣೆಗಳಾಗುವುದುಂಟು’ ಎನ್ನುತ್ತಾರೆ.
ಈ ಪದ್ಧತಿಯ ವ್ಶೆಜ್ಞಾನಿಕ ವಿಶ್ಲೇಷಣೆ ಮಾಡುವ ಬಗ್ಗೆ ಸೋಮಶೇಖರ್ ಅವರನ್ನು ಕೇಳಿದಾಗ ಅದಕ್ಕವರು ಒಪ್ಪಲಿಲ್ಲ. ‘ಇಂತಹ ವಿಧಾನಗಳ ವ್ಶೆಜ್ಞಾನಿಕ ವಿಶ್ಲೇಷಣೆಯೇ ಅಪ್ರಸ್ತುತ. ಇದರ ವಿಶ್ಲೇಷಣೆಗೆ ಮಾನದಂಡಗಳನ್ನು ಅಳವಡಿಸುವುದೇ ಬಹುದೊಡ್ಡ ಸವಾಲು. ನಮ್ಮಲ್ಲಿ ಪ್ರಚಲಿತವಿರುವ ವಿಶ್ಲೇಷಣಾ ಮಾನದಂಡಗಳೆಲ್ಲಾ ಪಾಶ್ಚಾತ್ಯ ಸಿದ್ಧಮಾದರಿಗಳು, ಅವುಗಳ ಮೂಲಕ ನಮ್ಮ ದೇಸೀ ವೈದ್ಯ ವಿಧಾನಗಳ ವಿಶ್ಲೇಷಣೆ ಸಾಧುವಲ್ಲ, ಅದರ ಅಗತ್ಯವೂ ಸಹ ಇಲ್ಲ. ಈ ವಿಧಾನಗಳು 2+2= 4 ತರಹದ ಸಿದ್ಧ ಮಾದರಿಗಳಲ್ಲ, ಇಲ್ಲಿ ಅನುಭವ, ಕೈಗುಣ, ನಂಬಿಕೆ, ಕಾಲ, ದಿನ, ಹವಾಮಾನ, ಪ್ರಾದೇಶಿಕತೆ ಮುಂತಾದ ಹತ್ತು ಹಲವುಗಳ ಸಮ್ಮಿಶ್ರಣವಿರುತ್ತದೆ. ಯಾವುದನ್ನು ಯಾವುದರ ಆಧಾರದ ಮೇಲೆ ವಿಶ್ಲೇಷಣೆ ಮಾಡುತ್ತೀರಿ’ ಎಂದು ಪ್ರಶ್ನಿಸುತ್ತಾರೆ.
ತುಮಕೂರು ಜಿಲ್ಲೆ ಮಧುಗಿರಿಯ ಸರ್ಕಾರಿ ಪಶುವೈದ್ಯ ಶಾಲೆಯಲ್ಲಿ ಸಹಾಯ ನಿರ್ದೇಶಕರಾಗಿರುವ ಡಾ.ಸಂಜೀವ ರಾಯ ಅವರು ‘ಮದ್ದಿನ ಮಡಕೆಗೆ 75ಕ್ಕೂ ಅಧಿಕ ಗಿಡಮೂಲಿಕೆಗಳು ಸೇರುವುದರಿಂದ ಅದು ಖಂಡಿತವಾಗಿಯೂ ಪರಿಣಾಮಕಾರಿ. ನಮ್ಮ ನಾಟಿ ವ್ಶೆದ್ಯದಲ್ಲಿ ಒಂದು ಗಿಡಮೂಲಿಕೆಯೇ ಹಲವಾರು ಖಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿರುತ್ತದೆ. ಮದ್ದಿನ ಮಡಕೆಗೆ ಬಳಸುವ ಗಿಡಮೂಲಿಕೆಗಳ ಪಟ್ಟಿ ನೋಡಿದರೆ ಅವೆಲ್ಲವೂ ಅತ್ಯಂತ ಶ್ರೇಷ್ಠ ಗಿಡಮೂಲಿಕೆಗಳಾಗಿವೆ. ಹಾಗಾಗಿ ರೈತರು ಇದರ ಬಳಕೆಯಿಂದ ಹಲವಾರು ಖಾಯಿಲೆಗಳು ಗುಣವಾಗುತ್ತವೆ ಎಂದು ಹೇಳಿದರೆ ಅದು ಅತಿಶಯೋಕ್ತಿಯೇನಲ್ಲ’ ಎನ್ನುತ್ತಾರೆ.
ಅನನ್ಯ ವಿಧಾನದ ಕಣ್ಮರೆ!  ಮದ್ದಿನಮಡಕೆ ಕಡಿಮೆಯಾಗಲು ಕಾರಣಗಳು!
ಈ ಪದ್ಧತಿ ಈಗ್ಗೆ 20-30 ವರ್ಷಗಳ ಹಿಂದೆ ತಗ್ಗಟ್ಟಿ ಸುತ್ತ-ಮುತ್ತಲ ಹಲವಾರು ಗ್ರ್ರಾಮಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿತ್ತು. ತಗ್ಗಟ್ಟಿಗೆ 5 ಕಿ.ಮೀ. ದೂರದಲ್ಲಿರುವ ಉರಿಗಂ ಗ್ರಾಮದಲ್ಲಿ ಮಾದಪ್ಪ ಎಂಬ ನಾಟಿವೈದ್ಯರು ಇದನ್ನು ಹಾಕುತ್ತಿದ್ದರು. ಪಕ್ಕದ ಕಲವೀರಪ್ಪನದೊಡ್ಡಿಯ ಮಹಾರುದ್ರಪ್ಪನವರು ಮೊದಲು ಇದನ್ನು ಬಳಸುತ್ತಿದ್ದು, ಇತ್ತೀಚೆಗೆ ಬಿಟ್ಟಿದ್ದಾರೆ. ಮದ್ದಿನ ಮಡಕೆಯ ಹೆಸರು, ಅದರ ಉಪಯೋಗ, ಅದಕ್ಕೆ ಬಳಸುವ ಗಿಡಮೂಲಿಕೆಗಳ ಸ್ಥೂಲ ಪರಿಚಯ ಈಗಲೂ ಜನಮಾನಸದಲ್ಲಿದೆ. ಯುವಕರಲ್ಲಿಯೂ ಸಹ ಇದರ ಬಗ್ಗೆ ಮಾಹಿತಿ ಇರುವುದು ಅಚ್ಚರಿ ಹಾಗೂ ಮದ್ದಿನ ಮಡಕೆಯ ಜನಪ್ರಿಯತೆಗೆ ಸಾಕ್ಷಿ.

ಇಷ್ಟೆಲ್ಲಾ ಉನ್ನತ ಗುಣಗಳಿರುವ ಮದ್ದಿನಮಡಕೆಯ ಬಳಕೆ ಕಡಿಮೆಯಾಗಲು ಹತ್ತು-ಹಲವು ಕಾರಣಗಳಿವೆ.

ಜಾನುವಾರುಗಳ ಸಂಖ್ಯೆಯಲ್ಲಿ ಇಳಿಮುಖ: ಈಗ್ಗೆ 15-20 ವರ್ಷಗಳ ಹಿಂದೆ ಈ ಭಾಗದಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಕಡಿಮೆ ಎಂದರೂ 15ರಿಂದ 20 ಜೊತೆ ಕಾಲ್ನಡೆಗಳಿರುತ್ತಿದ್ದವು.  ಕೃಷಿಯಲ್ಲಿ ಬೀಸಿದ ಆಧುನೀಕತೆಯ ಗಾಳಿಯಿಂದಾಗಿ ಉಳುಮೆ- ಒಕ್ಕಣೆಗಳಿಗೆ ಟ್ರ್ಯಾಕ್ಟರ್, ಟಿಲ್ಲರ್ ಗಳು ದಾಂಗುಡಿ ಇಟ್ಟ ಪರಿಣಾಮ ದನಗಳನ್ನು ಸಾಕುವ ಪ್ರಮಾಣ ಕಡಿಮೆಯಾಯಿತು. ರೈತರು ಮದ್ದಿನಮಡಕೆಗೆ ವಿದಾಯ ಹೇಳಲು ಇದು ಪ್ರಮುಖ ಕಾರಣ. ದನಗಳೇ ಇಲ್ಲವೆಂದ ಮೇಲೆ ದನಗಳ ಔಷಧಿಗೆ ಜಾಗವೆಲ್ಲಿಯದು?

ಕಾಡಿನ ಕಣ್ಮರೆ: ಮದ್ದಿನ ಮಡಕೆಗೆ ಹಾಕುವ ಗಿಡಮೂಲಿಕೆಗಳ ಪ್ರಮುಖ ಮೂಲ ಕಾಡು. ಆದರೆ, ಕಳೆದ  30-40 ವರ್ಷಗಳಲ್ಲಿ ಕಾಡು ನಾಶದ ಹಾದಿ ಹಿಡಿಯಿತು. ಉದಾಹರಣೆಗೆ ಮೊದಲು ತಗ್ಗಟ್ಟಿ ಗ್ರಾಮದ  ಕೇವಲ 100 ಮೀಟರ್ ವ್ಯಾಪ್ತಿಯಲ್ಲಿ ದಟ್ಟ ಅರಣ್ಯವಿತ್ತು. ಮದ್ದಿನ ಮಡಕೆಗೆ ಬೇಕಾದ ಗಿಡಮೂಲಿಕೆಗಳೆಲ್ಲಾ ಕೈಯಳತೆಯಲ್ಲೇ ದೊರಕುತ್ತಿದ್ದವು. ಇಂದು ದಟ್ಟ ಕಾಡು ಇಲ್ಲವೇ ಇಲ್ಲ, ಸಾಧಾರಣ ಕಾಡೂ ಸಹ ಸುಮಾರು ಒಂದು ಕಿ.ಮೀ. ದೂರದಲ್ಲಿದೆ. ಯಾವಾಗ ಗಿಡಮೂಲಿಕೆಗಳ ಲಭ್ಯತೆ ದುರ್ಲಭವಾಯಿತೋ ಆಗಲೇ ಮದ್ದಿನ ಮಡಕೆಗೆ ಸಂಚಕಾರ ಒದಗಿತು.

ನಾಟಿ ವೈದ್ಯರ ಸಂಖ್ಯೆ ಕ್ಷೀಣ: ನಾಟಿ ವ್ಶೆದ್ಯ ವ್ಲತ್ತಿ ಮಾಡುವ ಬದ್ಧತೆ ಹಿರಿಯ ತಲೆಮಾರಿಗೆ ಹೆಚ್ಚು- ಕಡಿಮೆ ನಿಂತು ಹೋಗಿದೆ. ಯುವಕರು ಇದರತ್ತ ವಿಮುಖರು. ಸಾಂಪ್ರದಾಯಿಕವಾದ ಪ್ರತಿಯೊಂದನ್ನೂ ಯುವಕರು ಅಸಡ್ಡೆಯಿಂದ ಕಾಣುತ್ತಿರುವುದರಿಂದ ಮದ್ದಿನಮಡಕೆಯೂ ಅದಕ್ಕೆ ಹೊರತಾಗಿಲ್ಲ.

ಇವುಗಳಲ್ಲದೆ ಒಟ್ಟಾರೆ ಗ್ರಾಮೀಣ ಬದುಕಿನ ಚಿತ್ರಣವೇ ಬದಲಾಗುತ್ತಿದೆ. ಜನರ ಜೀವನ ಶೈಲಿ, ಬಯಕೆಗಳು ಆಧುನಿಕ ಸ್ಪರ್ಶ ಪಡೆದುಕೊಂಡಿವೆ. ಕೃಷಿ ವಿಧಾನದ ಸ್ವರೂಪ ಮೊದಲಿನಂತಿಲ್ಲ. ವಲಸೆ, ವಾಣಿಜ್ಯೀಕರಣ ಮುಂತಾದ ಹತ್ತು- ಹಲವು ಸಮಸ್ಯೆಗಳ ಸಂಕೋಲೆಯಲ್ಲಿ ಸಿಲುಕಿರುವ ಗ್ರಾಮಗಳು ಮದ್ದಿನಮಡಕೆಯಂತಹ ಅನನ್ಯ ವಿಧಾನಗಳಿಗೆ ತಿಲಾಂಜಲಿ ಇಡುತ್ತಿವೆ.
ಅದ್ಭುತ ರೈತ ಜೈವಿಕ ತಂತ್ರಜ್ಞಾನ ಪದ್ಧತಿಯೊಂದನ್ನು ಉಳಿಸಿಕೊಳ್ಳಲಾರದ ಅಸಹಾಯಕತೆಯಲ್ಲಿ ನಾವಿದ್ದೇವೆ.

———————————————————————————————
ಪ್ರಾಥಮಿಕ ಮಾಹಿತಿ ಮೂಲ:

  • ಶ್ರೀ ಆನಂದಪ್ಪ, ದನಗಳ ನಾಟಿ ವೈದ್ಯರು, 90 ವರ್ಷ, ತಗ್ಗಟ್ಟಿ ಗ್ರಾಮ, ಡೆಂಕಣಿಕೋಟೆ ತಾ. ತಮಿಳುನಾಡು.
  • ಶ್ರೀ ಕೆಂಪರಾಮಯ್ಯ, ವಿಷ ವೈದ್ಯ ಪರಿಣತರು. 70 ವರ್ಷ, ಉರಿಗಂ ಗ್ರಾಮ, ಡೆಂಕಣಿಕೋಟೆ ತಾ. ತಮಿಳುನಾಡು.
  • ಶ್ರೀ ಮಹಾರುದ್ರಪ್ಪ, ದನಗಳ ನಾಟಿ ವೈದ್ಯರು, 80 ವರ್ಷ, ಕಲವೀರಪ್ಪನದೊಡ್ಡಿ, ಡೆಂಕಣಿಕೋಟೆ ತಾ. ತಮಿಳುನಾಡು.
  • ಶ್ರೀ ಪ್ರಸನ್ನಯ್ಯ, ರೈತರು, ಸಿದ್ದಪ್ಪನದೊಡ್ಡಿ ಗ್ರಾಮ, 55 ವರ್ಷ, ಡೆಂಕಣಿಕೋಟೆ ತಾ. ತಮಿಳುನಾಡು.
  • ಶ್ರೀಮತಿ ನರಸಮ್ಮ,  ಜನಗಲ ನಾಟಿ ವೈದ್ಯರು, 50 ವರ್ಷ, ತಗ್ಗಟ್ಟಿ ಗ್ರಾಮ,  ಡೆಂಕಣಿಕೋಟೆ ತಾ. ತಮಿಳುನಾಡು.

ಆಧಾರ ಗ್ರಂಥಗಳು:

  • Plants used in Animal care, Dr.Nitya S Ghosh and Dr. Sagari R Ramadas: Anthra publication, Hydarabad.
  • Poisonous and Medicinal Plants, Jayashri publications, Bangalore.
  • ಬಿಳಿಗಿರಿರಂಗನ ಬೆಟ್ಟದ ಸೋಲಿಗರು: ನಾಟಿ ವೈದ್ಯ ಪದ್ಧತಿ, ಡಾ.ಜೆ. ಸೋಮಶೇಖರ್. ಎಂ ರಾಜಪ್ಪಾಜಿ.
  • ಪಶುವೈದ್ಯದಲ್ಲಿ ಔಷಧಿ ಸಸ್ಯಗಳ ಬಳಕೆಗೊಂದು ಕೈಪಿಡಿ. ಬೈಫ್ ಸಂಸ್ಥೆ.