ಶಿವಪುರಧ್ವಜ ಸತ್ಯಾಗ್ರಹ ಸೌಧ

ದೂರ ತಾಲ್ಲೂಕು ಕೇಂದ್ರದಿಂದ – ೧ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೨೦ ಕಿ.ಮೀ.


ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಿಗುವ ಮದ್ದೂರು ಪಟ್ಟಣ ಐತಿಹಾಸಿಕ ಘಟನೆಗಳನ್ನು ನೆನಪಿಸುವ ಸ್ಥಳವಾಗಿದೆ. ೧೯೩೮ ಏಪ್ರಿಲ್ -೧೧ ೧೨ ಮತ್ತು ೧೩ ರಂದು ಮದ್ದೂರಿನ ಶಿವಪುರದಲ್ಲಿ ಟಿ. ಸಿದ್ದಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ಸಿನ ಮೊದಲ ಅಧಿವೇಶನ ನಡೆಯಿತು. ಈ ಹಂತದಲ್ಲಿ ಸರ್ಕಾರದ ಪ್ರತಿಬಂಧಕಾಜ್ಞೆಯನ್ನು ಜನರು ಉಲ್ಲಂಘಿಸಿದರು. ಅಧಿವೇಶನ ನಡೆದ ಸ್ಥಳದಲ್ಲಿ ಜಮಾವಣೆಗೊಂಡು ರಾಷ್ಟ್ರಧ್ವಜಕ್ಕೆ ಗೌರವಸಲ್ಲಿಸಿ ಸೆರವಾಸಕ್ಕೆ ಗುರಿಯಾದರು. ಈ ಘಟನೆಯ ನೆನಪಿಗಾಗಿ ನಿರ್ಮಾಣಗೊಂಡುದೇ ಸತ್ಯಾಗ್ರಹ ಸೌಧ.

 

ಹನುಮಂತನಗರ

ದೂರ ತಾಲ್ಲೂಕು ಕೇಂದ್ರದಿಂದ – ೧೬ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೨೦ ಕಿ.ಮೀ.

ಹನುಮಂತನಗರ ಮಂಡ್ಯದಿಂದ ಭಾರತೀನಗರಕ್ಕೆ ಹೋಗುವ ಮಾರ್ಗದಲ್ಲಿ ೧೬ ಕಿ.ಮೀ ದೂರದಲ್ಲಿದೆ. ಕರಡಕೆರೆಯಲ್ಲಿ ಪ್ರಸಿದ್ದವಾದ ಶ್ರೀ ಆಂಜನೇಯ ದೇವಾಲಯ ಇದೆ. ಈ ಆಂಜನೇಯ ದೇವಾಲಯದ ಪ್ರಭಾವದಿಂದ ಈ ಜಾಗಕ್ಕೆ ಹನುಮಂತನಗರ ಎಂಬ ಹೆಸರು ಬಂದಿದೆ. ಸುಮಾರು ೫ ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀ ಆತ್ಮಲಿಂಗೇಶ್ವರ ದೇವಸ್ಥಾನ ನಿರ್ಮಾಣಗೊಂಡಿದೆ. ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಪ್ರಕೃತಿ ಮತ್ತು ಯೋಗ ಚಿಕಿತ್ಸೆ, ಔಷಧ ಚಿಕಿತ್ಸಾ ಕೇಂದ್ರ ನಿರ್ಮಿಸಲಾಗಿದೆ.

 

ಕೊಕ್ಕರೆ ಬೆಳ್ಳೂರು

ದೂರ ತಾಲ್ಲೂಕು ಕೇಂದ್ರದಿಂದ – ೨೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ – ೫೦ ಕಿ.ಮೀ.


ಮದ್ದೂರು ತಾಲ್ಲೂಕಿನಿಂದ ೨೦ ಕಿ.ಮೀ. ದೂರದಲ್ಲಿರುವ ಕೊಕ್ಕರೆ  ಬೆಳ್ಳೂರು ಒಂದು ಪಕ್ಷಿಧಾಮ, ಪ್ರತಿ ವರ್ಷ ಚಳಿಗಾಲದ ಅವಧಿಯಲ್ಲಿ ದೇಶ ವಿದೇಶಗಳ ಬೇರೆ ಬೇರೆ ಭಾಗಗಳಿಂದ ವಂಶಾಭಿವೃದ್ಧಿಗಾಗಿ ಹಲವು ಬಗೆಯ ಕೊಕ್ಕರೆಗಳು ಇಲ್ಲಿಗೆ ಬರುತ್ತವೆ. ಪ್ರಕೃತಿ ಸಹಜವಾದ ಈ ಪ್ರದೇಶವು ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ.

 

ವೈದ್ಯನಾಥೇಶ್ವರ

ದೂರ ತಾಲ್ಲೂಕಿನಿಂದ ೩ ಕಿ.ಮೀ.
ಜಿಲ್ಲೆಯಿಂದ ೨೩ ಕಿ.ಮೀ.

ಮದ್ದೂರು ನಗರದ ಶಿಂಷಾನದಿಯ ಬಲದಂಡೆಯ ಮೇಲೆ ವೈದ್ಯನಾಥೇಶ್ವರ ಎಂಬ ಪ್ರಾಚೀನ ದೇವಸ್ಥಾನ ಇದೆ. ಈ ದೇವಾಲಯದಿಂದಲೇ ಊರಿಗೆ ವೈದ್ಯನಾಥಪುರವೆಂಬ ಹೆಸರು ಬಂದಿದೆ. ದೇವಾಲಯದ ಮೂಲ ಗರ್ಭಗೃಹದಲ್ಲಿ ಒಂದೆಡೆ ಹುತ್ತವಿದ್ದು ಅದರ ಮೃತ್ತಿಕ ಪ್ರಸಾದದಿಂದ ಚರ್ಮವ್ಯಾಧಿಗಳು ಗುಣವಾಗುತ್ತವೆ. ಹೊಯ್ಸಳ ದೊರೆಗಳು ಹಾಗೂ ಅಧಿಕಾರಿಗಳು ವೈದ್ಯನಾಥೇಶ್ವರನಿಗೆ ದಾನವಿತ್ತ ಅನೇಕ ಶಾಸನಗಳು ದೊರೆತಿವೆ. ಕಾರ್ತೀಕ ಮಾಸದಲ್ಲಿ ವೈದ್ಯನಾಥೇಶ್ವರನಿಗೆ ವಿಶೇಷ ಪೂಜೆ ನಡೆಯುತ್ತದೆ.