ಈ ವ್ಯಕ್ತಿ ನಮ್ಮ ಬಂಧುಗಳ ಪೈಕಿ. ಅವರ ಮದುವೆ ಆಗಿ ಹದಿನಾರು ವರ್ಷಗಳಾದವು. ಅವರಿಗೆ ಮದುವೆಗೆ ಮುಂಚೆ, ಮದುವೆ ಆದ ಹತ್ತು ವರ್ಷಗಳವರೆಗೆ ಕುಡಿತದ ಚಟವಿರಲಿಲ್ಲ. ಈಗ ಆರು ವರ್ಷಗಳಿಂದ ಈ ಚಟ ಪ್ರಾರಂಭವಾಗಿದೆ. ಕುಡಿದು ರಸ್ತೆಯಲ್ಲಿ ಬಿದ್ದರೂ ಎಚ್ಚರವಿರಲಿಲ್ಲ. ಅವರು ದಾವಣಗೆರೆಯ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಚಟದಿಂದ ಅಲ್ಲಿ ಅವರು ಕೆಲಸ ಕಳೆದುಕೊಂಡರು. ಅಲ್ಲಿಂದ ಅವರನ್ನು ಆ ಜಾಗ ಬಿಡಿಸಿ ಹೊಸಪೇಟೆಗೆ ಕರೆದುಕೊಂಡು ಬಂದು ಅಲ್ಲಿ ಕೆಲಸ ಕೊಡಿಸಿದೆವು. ಕೆಲವು ತಿಂಗಳಿಂದ ಮತ್ತೆ ಶುರು ಮಾಡಿದ್ದಾರೆ. ಇಲ್ಲಿಗೆ ಬರುವುದಕ್ಕೆ ಮುಂಚೆ ಅವರು ಇನ್ನು ಮೇಲೆ ಕುಡಿತದ ಚಟ ಬಿಟ್ಟುಬಿಡುತ್ತೇನೆ ಎಂದು ಹೇಳಿದ್ದರು. ಅವರಿಗೆ ಹೆಂಡತಿ ಮತ್ತು ನಾಲ್ಕು ಮಕ್ಕಳಿದ್ದಾರೆ. ಇದರಿಂದ ಅವರ ಜೀವನ ಸಾಗಿಸುವುದು ಕಷ್ಟ. ಆದ್ದರಿಂದ ಈ ಚಟವನ್ನು ಬಿಡಿಸುವುದಕ್ಕೆ ಏನಾದರೂ ಟ್ರೀಟ್ಮೆಂಟ್ ಸಾಧ್ಯತೆ ಇದೆಯೇ ಹೇಗೆ ತಿಳಿಸಿ. ಇವರ ನಿರಂತರ ಚಟದಿಂದ ಆಗುವ ದುಷ್ಪರಿಣಾಮಗಳೇನು? ಅವರಿಗೆ ಹುಚ್ಚು ಹಿಡಿಯುತ್ತದೆಯೇನು? ಮೇಲಾಗಿ ಕುಡಿದಾಗ ಹುಚ್ಚರಂತೆ ವರ್ತಿಸುತ್ತಾರೆ. ಅಸಂಬದ್ಧ ಮಾತುಗಳನ್ನಾಡುವುದು, ಅವಾಚ್ಯ ಶಬ್ದಗಳ ಬಳಕೆ, ದಂಡಿಸುವುದು ಹಾಗೂ ಹುಚ್ಚನಂತೆ ವರ್ತಿಸುತ್ತಾರೆ. ಇದಕ್ಕೇನು ಮಾಡಬೇಕು ತಿಳಿಸಿ.

ಮಧ್ಯ ಸಾರತೆ ವಿಶ್ವದಾದ್ಯಂತ ಮಾನವ ಕುಲಕ್ಕೆ ಬೃಹತ್ ಸವಾಲಾದ ಸಮಸ್ಯೆ. ಕ್ಯಾನ್ಸರ‍್ ಮತ್ತು ಹೃದಯಾಘಾತದ ನಂತರ ಅತಿ ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳುವ ರೋಗವೆಂದರೆ ಪ್ರಾಯಶಃ ಕುಡಿತ. ಮದ್ಯಸೇವನೆಯಿಂದ ಹೊಟ್ಟೆಯುರಿತ, ಯಕೃತಿನ ಊತ ಹಾಗೂ ಮೆದುಳಿನ ನಶಿಸುವಿಕೆ ಉಂಟಾಗುತ್ತದೆ. ಮೆದುಳಿನ ಆಘಾತ ನಿರ್ದಿಷ್ಟ ಪ್ರಮಾಣವನ್ನು ದಾಟಿದ ಮೇಲೆ ವಿಭಿನ್ನ ಚಿತ್ತವಿಕಲತೆ ಕಾಣಿಸಿಕೊಳ್ಳುವುದು ಸಹಜ. ಇದನ್ನು ನಾವು ಅಲ್ಕೊಹಾಲಿಕ್ ಸೈಕೋಸಿಸ್ ಎನ್ನುತ್ತೇವೆ. ಮದ್ಯಸಾರತೆ ತಾತ್ಕಾಲಿಕ  ಅವಲಂಬನವಾಗಿರಬಹುದು ಅಥವಾ ನಿರಂತರ ಅವಲಂಬನವಾಗಿರಬಹುದು. ಇದಕ್ಕೆ ಪೂರ್ವನಿಗದಿತ ವ್ಯಕ್ತಿತ್ವ ಮಾದರಿಯನ್ನು ಗುರುತಿಸಿ ಅದನ್ನು ಆಲ್ಕೊಹಾಲಿಕ್ ಪರ್ಸನಾಲಿಟಿ ಎಂದೂ ಹೆಸರಿಸಲಾಗಿದೆ. ಇದರ ಚಿಕಿತ್ಸೆಗಾಗಿ ಮದ್ಯ ವ್ಯಸನಿಯನ್ನು ಎರಡು ವಿಭಾಗಗಳಾಗಿ ವರ್ಗೀಕರಿಸಬಹುದು. ಮದ್ಯಪಾನವನ್ನು ನಿಲ್ಲಿಸಬೇಕು, ಆದರೆ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಒಂದನೆಯ ವರ್ಗವಾದರೆ ಕುಡಿತದಿಂದ ಹಾನಿ ಏನೂ ಇಲ್ಲ, ತಾನು ಕುಡಿದೇ ತೀರುತ್ತೇನೆ ಎನ್ನುವ ಹುಚ್ಚು ಹಠದವರು ಎರಡನೇ ವರ್ಗಕ್ಕೆ ಸೇರುತ್ತಾರೆ.

ಇದರ ವ್ಯಸನದಿಂದ ಹಲವಾರು ನಿರ್ದಿಷ್ಟ ರೋಗ ಪ್ರಕಾರಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ?

. ಡೆಲಿರಿಯಂ ಟ್ರೆಮನಸ್ : ವ್ಯಕ್ತಿ ಭಯಗ್ರಸ್ಥನಾಗುತ್ತಾನೆ. ತಾನಿರುವ ಸ್ಥಳ, ಸಮಯ ಹಾಗೂ ಸಂಭಾಷಿಸುತ್ತಿರುವ ವ್ಯಕ್ತಿಯ ಪರಿವನ್ನು ಮರೆತು ಆತಂಕಪೂರಿತನಾಗುತ್ತಾನೆ. ಕೈನಡುಕ, ಬಾಯಿ ತೊದಲು, ಕ್ರಮ ತಪ್ಪಿದ ಎದೆಬಡಿತ, ಮೈಕೈ ಬಿಸಿ ಬಿಸಿಯಾಗುವಿಕೆ, ಕೈಕಾಲು ಮೈ ನಡುಕ, ಮೈ ಮೇಲೆ ಹುಳು ಹುಪ್ಪಟ ಹರಿದಾಡುವ ಭ್ರಮೆ ಇತ್ಯಾದಿ.

. ಹ್ಯಾಲುಸಿನೋಸಿಸ್ : ತಲೆಯಲ್ಲಿ ಶಬ್ದ, ಕಿರುಚಾಟ, ಗಂಟೆಯ ಶಬ್ದ ಕೇಳಿ ಬರುವುದು, ಯಾರಿಗೂ ಕೇಳಿಸದ ಶಬ್ದ, ಕಾಣಿಸದ ನೋಟಗಳು ಕಾಣುವುದು.

. ಭ್ರಮಾಧೀನತೆಯ ಸ್ಥಿತಿ : ಸಂಶಯ, ಅನುಮಾನ, ಶಂಕೆ ಪ್ರಬಲವಾಗಿ ಮೂಡಿ ಬರುತ್ತದೆ. ಸಂಗಾತಿಯ ಶೀಲವನ್ನು ಶಂಕಿಸುವುದು, ತನ್ನ ವಿರುದ್ಧ ಇತರರು ಸಂಚನ್ನು ಹೂಡುತ್ತಿದ್ದಾರೆ ಎನ್ನುವ ಬಗ್ಗೆ ಭ್ರಮೆ ಇತ್ಯಾದಿ ಕಾಣಿಸಿಕೊಳ್ಳಬಹುದು.

. ಬ್ಲಾಕ್ ಔಟ್ಸ್ : ಕ್ಷಣಕಾಲ ಸಂಪೂರ್ಣ ಅರಿವನ್ನು ಕಳೆದುಕೊಳ್ಳುವಿಕೆ.

. ಹಾಗೂ ಮದ್ಯಸಾರತೆ ಚಿತ್ತವಿಕಲತೆ : ರೋಗದ ಲಯ, ಗತಿ, ಸಮಯ ಹಾಗೂ ರೋಗಿಯ ದೈಹಿಕ ಸ್ವಾಸ್ಥದ ಅನುಗುಣವಾಗಿ ಚಿಕಿತ್ಸೆಯನ್ನು ರೂಪಿಸಬೇಕಾಗುತ್ತದೆ.