ಮಹಾರಾಷ್ಟ್ರದಲ್ಲಿ ಜನಿಸಿ, ಕರ್ನಾಟಕದಲ್ಲಿ ಹಿಂದೂಸ್ಥಾನಿ ಸಂಗೀತ ಶಿಕ್ಷಣ ಪಡೆದು ಸಂಗೀತ ಕಲೆಯ ಪ್ರಸಾರದಲ್ಲಿ ನಿರತರಾಗಿ ಗಾಯಕರಾಗಿ, ಅನೇಕ ಜನ ಶಿಷ್ಯರನ್ನು ತಯಾರಿಸುವ ಧಾರವಾಡದ ಶ್ರೀ ಮಧುಕರ ಗಣೇಶ ಪಟವರ್ಧನ ಅವರು ಕರ್ನಾಟಕದಲ್ಲಿ ನೆಲೆಸಿದ ಹಿಂದುಸ್ಥಾನಿ ಸಂಗೀತಗಾರರಲ್ಲೊಬ್ಬರು. ೧೯೨೫ರಲ್ಲಿ ಮಹಾರಾಷ್ಟ್ರದ ಗಡಹಿಂಗ್ಲಜದಲ್ಲಿ ಜನಿಸಿದ ಶ್ರೀ ಮಧುಕರ ಗಣೇಶ ಪಟವರ್ಧನ ಸಂಗೀತ ಮತ್ತು ಸಂಸ್ಕೃತಿಯ ಪರಂಪರೆಯಿಂದ ಬಂದವರು. ಅಜ್ಜ ಸಿತಾರ ವಾದಕ ಮಹಾದೇವರಾವ್‌, ಮಾವ ಕೀರ್ತನಕಾರರು, ಸಂಗೀತಗಾರರೂ ಆದ ಶ್ರೀ ಬಾಬೂರಾವ್‌ ಭಾಗವತ್‌, ಸೋದರ ಶ್ರೀ ಶ್ರೀಕಾಂತ ಪಟವರ್ಧನ ದಿಲ್‌ ರುಬಾ ವಾದಕರು.

ಶ್ರೀ ಗುರುರಾಜ ದೇಶಪಾಂಡೆ ಅವರ ಶಿಷ್ಯರಾದ ಶ್ರೀ ನಾರಾಯಣರಾವ್‌ ಮಜುಂದಾರ್ ಅವರಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿರುವ ಶ್ರೀ ಪಟವರ್ಧನ ಸಂಗೀತ ವಿಶಾರದ ಪದವೀಧರರು ಮತ್ತು ಆಕಾಶವಾಣಿಯಲ್ಲಿ ಸುಗಮ ಸಂಗೀತ ಹಾಗೂ ದೂರದರ್ಶನದಲ್ಲಿ ಹಿಂದೂಸ್ಥಾನಿ ಸಂಗೀತದ ಸ್ವೀಕೃತ ಕಲಾವಿದರು.

ಧಾರವಾಡ, ಹುಬ್ಬಳ್ಳಿ, ಪೂನಾ, ಮುಂಬೈ, ಕೊಲ್ಲಾಪುರ, ಬೆಳಗಾಂ ಮುಂತಾದ ಅನೇಕ ಕಡೆ ಪಟವರ್ಧನರ ಕಾರ್ಯಕ್ರಮಗಳು ನಡೆದಿವೆ. ಸರ್ಕಾರಿ ಉದ್ಯೋಗದಲ್ಲಿದ್ದ ಶ್ರೀಯುತರು ನಿವೃತ್ತಿಯ ನಂತರ ಅನೇಕ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ನೀಡುತ್ತಿದ್ದಾರೆ.

ದೂರದರ್ಶನದಲ್ಲಿ ಈಚೆಗೆ ಪ್ರಸಾರವಾದ ‘ಹಿಂದೂಸ್ಥಾನಿ ರಾಗಮಾಲಿಕೆ’ಯಲ್ಲಿ ಹಾಡಿರುವ ಪಟವರ್ಧನರವರು ಕಳೆದ ನಲವತ್ತು ವರ್ಷಗಳಿಂದ ಧಾರವಾಡದ ಆಕಾಶವಾಣಿ ಕೇಂದ್ರದಿಂದ ಮರಾಠಿ ಸುಗಮ ಸಂಗೀತ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ಶ್ರೀ ಮಧುಕರ ಗಣೇಶ ಪಟವರ್ಧನ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೯-೨೦೦೦ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.