ಏಷ್ಯಾ ಖಂಡದ ಏಕೈಕ ಏಕಾಗ್ರ ಶಿಲೆಯ ಮಾನೊಲಿಥಿಕ್ ಬೆಟ್ಟವೆಂದು ಗಿನ್ನಿಸ್ ಪುಸ್ತಕದಲ್ಲಿ ದಾಖಲೆಯಾಗಿದೆ. ಮಧುಗಿರಿ ಕೆರೆ, ಕಾಲುವೆ, ತೋಪು, ತೋಟ ಮತ್ತು ದೇವಾಲಯಗಳಿಂದ ಕೂಡಿದ್ದು, ರಮಣೀಯವಾದ ನಿಸರ್ಗ ಚೆಲುವನ್ನು ಹೊಂದಿದೆ. ಇದು ಪರಮ ಪಾವನವಾದ ಕ್ಷೇತ್ರವಾಗಿದ್ದು “ಮದ್ದಗಿರಿ” ಎಂಬ ಹೆಸರು, ೨೦ನೇ ಶತಮಾನದ ಆದಿ ಭಾಗದವರೆವಿಗೂ ಬಳಕೆಯಲ್ಲಿತು. ಮದ್ದೈರಿ ಎಂಬ ಹೆಸರನ್ನು ಮಧುಗಿರಿ ಎಂದು ೧೯೨೬ರಲ್ಲಿ ನಾಮಕರಣ ಮಾಡಲಾಯಿತು. ಅಸಂಖ್ಯಾತವಾದ ಜೇನುಗೂಡುಗಳಿಂದ ಶೋಭಿಸುತ್ತಿದ್ದ ಮದ್ದಗಿರಿಯು ಮಧುಗಿರಿಯಾಯಿತು. ಹಾಗೂ ಇಲ್ಲಿನ ದಾಳಿಂಬೆ ’ಮಧುಗಿರಿಯ ಮಧು’ ಎಂದೇ ಖ್ಯಾತವಾಗಿದೆ.

“ಮಧುಗಿರಿ ಏಕಶಿಲೆ ಬೆಟ್ಟ”

ದೂರ ಎಷ್ಟು?
ತಾಲ್ಲೂಕು : ಮಧುಗಿರಿ
ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೪೪ ಕಿ.ಮೀ

ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಏಕಾಗ್ರ ಶಿಲೆಯ ಬೆಟ್ಟವೆಂದು ಕರೆಸಿಕೊಳ್ಳುತ್ತಿರುವ ಈ ದುರ್ಗ ಸುಮಾರು ೨೩೨ ಎಕರೆಗಳಷ್ಟು ವಿಸ್ತಾರವಾಗಿದ್ದು, ೧೧೯೨ ಮೀಟರ್ ಎತ್ತರವಾಗಿದೆ. ಈ ಬೆಟ್ಟವನ್ನು ದಕ್ಷಿಣ ದಿಕ್ಕಿನಿಂದ ನೋಡಿದಾಗ ಮದಿಸಿದ ಕರಿಯಂತೆ ಕಾಣುತ್ತದೆ. ಮದ್ದಾನೆಯಂತೆ ಕಂಡುದರಿಂದ ಇದಕ್ಕೆ ಮದ್ದಗಿರಿ ಎಂಬ ಹೆಸರು ಬಂದಿರಬೇಕು. ಬೆಟ್ಟ ಹತ್ತಲು ತುಂಬಾ ಕಡಿದಾಗಿದೆ. ಏರುತ್ತಾ ಹೋದಂತೆ ಶ್ರಮ ತುಂಬಾ ಹೆಚ್ಚಾಗುವುದು. ಈ ಬೆಟ್ಟದ ಮೇಲೆ ನೀರಿನ ವಸತಿ (ನೀರಿನ ದೊಣೆ) ಇದೆ ಎಂಬುದಕ್ಕೆ ಒಂದು ನಿದರ್ಶನವಿದೆ.

 

“ಬೃಹತ್ ಬೆಟ್ಟದ ಕೋಟೆಗಳು”

ಪಾಳೆಗಾರರು ಕಟ್ಟಿದ ಕೋಟೆಗಳೆಲ್ಲಾ ರಕ್ಷಣಾದೃಷ್ಠಿಯಿಂದ ಒಳ್ಳೆಯ ವಿನ್ಯಾಸವುಳ್ಳದ್ದಾಗಿದೆ ಪಶ್ಚಿಮದ ಕೋಟೆ. ಬೃಹತ್ ಬೆಟ್ಟದ ಮೇಲ್ಬಾಗದ ಕಡಿದಾದ ಪ್ರದೇಶದವರೆಗೂ ಕಟ್ಟಿ ತಮ್ಮ ಕಾರ್ಯವನ್ನು ಪ್ರದರ್ಶಿಸಿದ್ದಾರೆ. ಈ ಕೋಟೆಗಳಲ್ಲಿ ಕೋವಿ ಗಂಡಿಗಳು, ತುಪಾಕಿ ವೇದಿಕೆಗಳು, ಕೋಟೆ ಬುರುಜುಗಳು ಆಗಿನ ಪಾಳೇಗಾರರ ರಕ್ಷಣಾ ತಂತ್ರಗಳನ್ನು ತಿಳಿಸುತ್ತವೆ. ಸುಮಾರು ಆರು ವೀಕ್ಷಣಾ ವೇದಿಕೆಗಳಿವೆ. ಪಾಳೇಗಾರರ ಪರಿವಾರದವರು ಅಂತಃಪುರದ ರಾಣಿಯರು ಈ ಸ್ಥಳಗಳಲ್ಲಿ ನಿಂತು ವಿಹಂಗಮ ದೃಶ್ಯ ವೀಕ್ಷಿಸುತ್ತಿದ್ದರು.

 

ಮಿಡಿಗೇಶಿಯ ದುರ್ಗ

ದೂರ ಎಷ್ಟು?
ತಾಲ್ಲೂಕು : ಮಧುಗಿರಿ
ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೫೪ ಕಿ.ಮೀ

ಮಧುಗಿರಿಗೆ ಉತ್ತರ ಭಾಗದ ಎಡದಂಡೆಯಲ್ಲಿ ಅಂದರೆ ಪಾವಗಡಕ್ಕೆ ಹೋಗುವ ಹೆದ್ದಾರಿಯಲ್ಲಿ ಒಂದು ಬೆಟ್ಟ ಎದ್ದು ಕಾಣುತ್ತದೆ.ಊರೆಲ್ಲಾ ಆ ಬೆಟ್ಟದ ತಪ್ಪಲಲ್ಲಿ ಅದರಲ್ಲೂ ಬಂಡೆಯ ಮೇಲೆ ವಾಸಗೃಹಗಳಿವೆ. ಈ ಊರಿನ ಸೌಂದರ‍್ಯವನ್ನು ಹೆಚ್ಚಿಸಿರುವ ಈ ಬೆಟ್ಟ ತುಂಬಾ ಆಕರ್ಷಣೀಯವಾಗಿದೆ. ಬೆಟ್ಟದ ಮೇಲಿರುವ ದೇವಾಲಯಗಳು ಮತ್ತು ಮಸೀದಿ ಸರ್ವಜನಾಂಗದ ಸಾಮರಸ್ಯದ ಸಂಕೇತ. ಈ ದೇವಸ್ಥಾನದ ಮುಂಭಾಗದಲ್ಲಿರುವ ಗರುಡ ವಿಗ್ರಹದ ಎರಡು ತೋಳುಗಳ ರಂಧ್ರದಿಂದಲೂ ಉತ್ತರಾಯಣ ದಕ್ಷಿಣಾಯನ ಕಾಲಗಳಲ್ಲಿ ಬೆಳಗಿನ ಸೂರ‍್ಯ ಕಿರಣಗಳು ದೇವರ ಪಾದದ ಮೇಲೆ ಬೀಳುವಂತೆ ಶಿಲ್ಪಿಯು ತನ್ನ ಕುಶಲತೆಯ ಚಾತುರ್ಯವನ್ನು ತೋರಿಸಿದ್ದಾನೆ. ಇದಲ್ಲದೆ ಈಶ್ವರ ದೇವಾಲಯ ದಕ್ಷಬ್ರಹ್ಮ ಯಜ್ಞನಾಶಕನಾದ ವೀರಭದ್ರ ದೇವಾಲಯ ಮತ್ತು ಮಾರುತಿ ಮುಂತಾದ ದೇವಾಲಯಗಳಿಂದ ಆವೃತವಾಗಿ ಮಿಡಿಗೇಶಿಯ ದೇವಾಲಯಗಳ ತವರೂರಾಗಿದೆ.

 

ತಿಮ್ಮಲಾಪುರ ಅರಣ್ಯಧಾಮ

ದೂರ ಎಷ್ಟು?
ತಾಲ್ಲೂಕು : ಮಧುಗಿರಿ
ತಾಲ್ಲೂಕು ಕೇಂದ್ರದಿಂದ: ೧೩ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೫೭ ಕಿ.ಮೀ

ಈ ವನ್ಯಧಾಮ ಬೆಟ್ಟಗಳ ಸಾಲಿನಿಂದ ಕೂಡಿದ್ದು ತುಂಬಾ ವಿಶಾಲವಾಗಿದೆ. ಸಂಜೀವಿನಿ ವನ ಎಂತಲೂ ಕರೆಯಬಹುದು. ಮಧ್ಯದಲ್ಲಿ ನಿರೀಕ್ಷಣಾ ಮಂದಿರವಿದ್ದು, ಸುತ್ತಲೂ ಸುಂದರವಾದ ಹಾಗೂ ಬೆಲೆ ಬಾಳುವ ಮರಗಳಿದ್ದು, ನೋಡಲು ರಮಣೀಯವಾಗಿದೆ. ಬಂಡೆಗಲ್ಲಿನ ಮೇಲೆ ಹರಿಯುವ ನೀರಿನ ಝುಳು ಝುಳು ಶಬ್ದ ಕೇಳಲು ಕರ್ಣಾನಂದ.

 

“ಮೈದನಹಳ್ಳಿ ಕೃಷ್ಣಮೃಗ ಅರಣ್ಯಧಾಮ”

ದೂರ ಎಷ್ಟು?
ತಾಲ್ಲೂಕು : ಮಧುಗಿರಿ
ತಾಲ್ಲೂಕು ಕೇಂದ್ರದಿಂದ: ೨೪ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೬೮ ಕಿ.ಮೀ

 ಈ ವನ್ಯಧಾಮದಲ್ಲಿ ಅನೇಕ ಬೆಲೆ ಬಾಳುವ ಮರಗಳಿದ್ದು ಅರಣ್ಯವೆಲ್ಲಾ ಹುಲ್ಲಿನಿಂದ ಕೂಡಿದೆ ಇಲ್ಲಿನ ವಿಶೇಷತೆ ಕಪ್ಪು ಕೃಷ್ಣ ಮೃಗಗಳು. ಇವು ಹಿಂಡು ಹಿಂಡಾಗಿ, ನೋಡುಗರನ್ನು ಕೈಬೀಸಿ ಕರೆಯುತ್ತವೆ. ಸುತ್ತಮುತ್ತಲಿನ ಗ್ರಾಮದ ಶಾಲಾಮಕ್ಕಳು ಹೊರ ಸಂಚಾರಕ್ಕೆ ಆಗಮಿಸುತ್ತಿದ್ದು, ಕೃಷ್ಣಮೃಗಗಳನ್ನು ನೈಜವಾಗಿ ನೋಡಿ ಆನಂದಿಸುತ್ತಾರೆ.