ಮಧುರಚನ್ನ ೩೧ ಜುಲೈ ೧೯೦೩ ರಲ್ಲಿ ಬಿಜಾಪುರ ಜಿಲ್ಲೆಯ ಹಲಸಂಗಿ ಯಲ್ಲಿ ಜನಿಸಿ ಮುಲ್ಕೀವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ ವ್ಯಕ್ತಿ. ದೇವರ ಚಿಂತನೆಯಲ್ಲಿ ತೊಡಗಿದ, ಆತ್ಮಸಾಕ್ಷಾತ್ಕಾರಕ್ಕಾಗಿ ಪ್ರಯೋಗಗಳನ್ನು ಸತತ ನಡೆಸಿದ ಮಧುರ ಚನ್ನರು ಮುಖ್ಯವಾಗಿ ಅನುಭಾವಿ ಕವಿ-ಅತಿ ಚಿಕ್ಕಂದಿನಿಂದಲೇ ಕವನಗಳನ್ನು ಬರೆದರು ಸ್ಪೆನ್ಸರ್, ರಸಲ್, ಟಾಲ್‌ಸ್ಟಾಯ್, ಪರಮಹಂಸ, ವಿವೇಕಾನಂದ, ಅರವಿಂದರ ಪ್ರಭಾವ ಇವರ ಮೇಲೆ ಗಾಡವಾಗಿದೆ. ವಚನಕಾರರಂತೆ, ಇವರ ಜೀವನಕ್ಕೂ ಇವರ ಬರಹಕ್ಕೂ ಗಾಡಸಂಭಂಧವಿರುವುದನ್ನು ಕಾಣಬಹುದು. ಮಧುರಚನ್ನರು ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿ ತಮ್ಮ ಬದುಕು ಮತ್ತು ಬರಹವನ್ನು ರೂಪಿಸಿಕೊಂಡವರು.

ಇವರ ನನ್ನ ನಲ್ಲ ಪ್ರಕಟವಾದದ್ದು ೧೯೩೩ ರಲ್ಲಿ ಇದರೊಳಗಿನ ನನ್ನನಲ್ಲ ಮಧುರಗೀತ , ಮತ್ತು ದೇವತಾ ಪೃಥಿವಿ, ಉತ್ತಮ ಕವನಗಳು. ನನ್ನನಲ್ಲ ಒಂದು ಅನುಭಾವ ಗೀತೆ. ಅಕ್ಕಮಹಾ ದೇವಿಯ ನೀವುಕಾಣಿರೆ ನೀವುಕಾಣಿರೆ ಎಂದು ಚನ್ನ ಮಲ್ಲಿಕಾರ್ಜುನನಿಗಾಗಿ ನಡೆಸುವಂಥ ಹುಡುಕಾಟವಿಲ್ಲಿದೆ.

ಇಲ್ಲಿಯ ಹುಡುಕಾಟ ಕಾವ್ಯ-ಸೃಷ್ಟಿಯ ಹುಡುಕಾಟವೂ ಆಗಿ, ಅದರ ಗೂಡತೆಯ ಬಗೆಗೆ ಆಶ್ಚರ್ಯವಿದ್ದು ಹಾಗೆಯೇ, ಅರಿಯಬೇಕೆಂಬ ಛಲವಿದೆ ಎನ್ನುವುದು ಗಮನಿಸಬೇಕಾದ ಸಂಗತಿ. ನಲ್ಲ,ನ್ನು ದೈವ ಮತ್ತು ಕಾವ್ಯ-ಎರಡಕ್ಕೂ ಅನ್ವಯಿಸಲಾಗಿದೆ. ಆತನನ್ನು ನಿಸ್ಸೀಮ, ನಿಶ್ಯಬ್ದ ಎನ್ನುವುದರಲ್ಲಿ ಇದು ಸ್ಪಷ್ಟವಾಗುತ್ತದೆ. ಈ ದೃಷ್ಟಿಯಿಂದ ನನ್ನನಲ್ಲ ದೈವ ಮೀಮಾಂಸೆ ಮತ್ತು ಕಾವ್ಯ ಮೀಮಾಂಸೆ.

ಮಧುರಗೀತ, ಗೆಳೆತನವನ್ನು ಕುರಿತ ನೀಳ್ಗವನ. ಪ್ರೇಮ-ಮೋಹ, ಸ್ವಾರ್ಥ-ನಿಸ್ವಾರ್ಥ, ಬುದ್ಧಿ-ಭಾವಗಳಿಗೆ ತಾತ್ವಿಕ ಅರ್ಥಗಳನ್ನು ಹುಡುಕುತ್ತದೆ ಈ ಕವನ. ದೇವತಾಪೃಥಿವಿ, ಎಂಬ ಕವನವು ಇವರ ಕೃತಿಸತಿಯ ಶಿರೋರತ್ನವಾಗಿದೆ. ಎಂದು ಬೇಂದ್ರೆಯವರು ಅಬಿಪ್ರಾಯ ಪಟ್ಟಿದ್ದಾರೆ. ಇದೊಂದು ಪ್ರಾರ್ಥನಾ ಗೀತೆ. ಇಲ್ಲಿ ಭೂಮಿಗೆ ದೈವತ್ವ ಮತ್ತು ತಾಯ್ತನಗಳನ್ನು ಆರೋಪಿಸಲಾಗಿದೆ. ಮಲಗಿರುವ ತಾಯಿಯನ್ನು ಎಬ್ಬಿಸುವ ಮಾತು ಉದ್ದಕ್ಕೂ ಇದ್ದು, ಆಕೆಯಿಂದ ಆದ್ಯಾತ್ಮಿಕ ಬೆಳಕನ್ನು ಪಡೆಯುವ ಹಂಬಲವಿದೆ. ಇಲ್ಲಿರುವ ಹಸಿವು ಪ್ರೇಮದ ಹಸಿವು. ಜ್ಞಾನದ ಹಸಿವು.

ಇತರೆ ಕವನಗಳಲ್ಲಿ ಗೀತಾತ್ಮಕತೆ ಕಡಿಮೆ. ಆದರೆ ಅನುಭವ-ಅನುಭಾವದ ಪ್ರಾಣಶಕ್ತಿ, ಮಂತ್ರಶಕ್ತಿಯಿದೆ. ‘ಪೂರ್ವರಂಗ, ೧೯೩೨ ‘ಕಾಳರಾತ್ರಿ, ೧೯೩೩ ‘ಬೆಳಗು, ೧೯೩೭ -ಈ ಗದ್ಯ ಕೃತಿಗಳು ಆಧ್ಯಾತ್ಮಿಕ ಆತ್ಮಕಥನಗಳು ‘ಆತ್ಮ ಸಂಶೋಧನೆ, ೧೯೫೪ ಇವರ ಆತ್ಮ ಚರಿತ್ರೆ. ಇದೂ ಸಹ ಮಧುರಚನ್ನರ ಆಧ್ಯಾತ್ಮಿಕ ಸಾಧನೆಯನ್ನೇ ಹೇಳುವ ಕೃತಿ. ಆಧ್ಯಾತ್ಮದ ಬಗೆಗೆ ವಿವಿಧ ತಾತ್ವಿಕರಿಂದ ಗ್ರಹಿಸಿದ್ದನ್ನು ಮತ್ತು ತಾವು ಕಂಡುಕೊಂಡುದ್ದನ್ನು ಈ ಕೃತಿಗಳಲ್ಲಿ ಹೆಳುತ್ತಾರೆ.

ಭಾವಬದ್ದಿಗಳೆರಡೆ ತಿಳುವಳಿಕೆಗಾಧಾರ

ಭಾವಕ್ಕೆ ಬುದ್ದಿಯೇ ಬಾಹ್ಯ ನೇತ್ರ!

ಭಾವಕೊಲಿಯದ ಬುದ್ದಿ, ಬುದ್ದಿಗೊಲಿಯದ ಭಾವ

ಇಲ್ಲೆ ಕಾಣಯ್ಯ ಸಂದೇಹ ಸೂತ್ರ!

ನನ್ನನಲ್ಲ ಕವನದ ಈ ಸಾಲುಗಳೇ ಮಧುರಚನ್ನ ಮೂಲತಹ ಸಂಶೋಧಕ ಎನ್ನುವುದನ್ನು ಸ್ಪಷ್ಟಪಡಿಸುತ್ತವೆ. ‘ಶಾರದಾ ವಾಚನಾಲಯ, ‘ಹಲಸಂಗಿ ಗೆಳೆಯರ ಗುಂಪು, ‘ಅರವಿಂದ ಮಂಡಲ, ಕಟ್ಟಿ ತಮ್ಮ ಸಾಹಿತ್ಯದ-ಸಾಂಸ್ಕೃತಿಕ ಚಟುವಟಿಕೆಗಳಿಂದ ಹಲಸಂಗಿಯನ್ನು ನವೋದಯ ಸಾಹಿತ್ಯದ ಒಂದು ಕೇಂದ್ರವನ್ನಾಗಿ ಮಾಡಿದ ಮಧುರಚನ್ನರು ತಮ್ಮನ್ನು ಸಂಶೋಧನೆ, ಭಾಷಾಶಾಸ್ತ್ರ, ಜಾನಪದ, ಅನುವಾದ ಕಾರ್ಯಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೇವಾಲಯಗಳು ಶಾಸನಗಳಬಗ್ಗೆ, ಶಿವಶರಣರು ಮತ್ತು ಶರಣ ಸಾಹಿತ್ಯದ ಬಗ್ಗೆ ಸಂಶೋಧನ ಲೇಖನಗಳನ್ನು ಬರೆದಿದ್ದಾರೆ. ಇವರ ಕನ್ನಡ ಪ್ರಾಚೀನ ಲಿಪಿ ಬೋದಿನಿ, ೧೯೨೪ ಎಂಬ ಪುಟ್ಟ ಕೃತಿಯು ಕನ್ನಡ ಲಿಪಿಯ ಹುಟ್ಟು ಬೆಳವಣಿಗೆಯನ್ನು ಕುರಿತು ಹೇಳುತ್ತದೆ. ಕೇವಲ ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ೧೯೨೩ ರಲ್ಲಿ ವಿಜಾಪುರ ಸಾಹಿತ್ಯ ಸಮ್ಮೇಳನದಲ್ಲಿ ಇವರು ಹಳ್ಳಿಯ ಹಾಡುಗಳು ಎಂಬ ಪ್ರಬಂಧವನ್ನು ಮಂಡಿಸಿದರು. ಗರತಿಯಹಾಡು, ಮಲ್ಲಿಗೆದಂಡೆ, ಜೀವನ ಸಂಗೀತ, ಜಾನಪದ ಕೃತಿಗಳು ಇವರು ಮತ್ತು ಇವರ ಗೆಳೆಯರಿಂದ ಸಂಪಾದಿತವಾದವು. ಇವರ ರವೀಂದ್ರನಾಥ ಠಾಕೂರ್, ಅರವಿಂದ, ಟಾಲ್‌ಸ್ಟಾಯ್, ಅನುವಾದಗಳು ತಮ್ಮ ಆಧ್ಯಾತ್ಮಿಕ ಸಾಧನೆಗೆ, ಅಧ್ಯಯನಕ್ಕೆ ಪೂರಕವಾಗಿ ಮಾಡಿಕೊಂಡಂಥವು.

ಇಂಥ ಅನುಭಾವಿ, ಕವಿ, ಸಂಘಟಕ, ಸಂಶೋಧಕ, ಅನುವಾದಕಾರ- ೧೫ ಸೆಪ್ಟೆಂಬರ್ ೧೯೫೩ ರಲ್ಲಿ ನಿಧನರಾದರು. ಇಂಥ ಅಜರಾಮರ ನಕ್ಷತ್ರವನ್ನು ಕುರಿತು ಬೇಂದ್ರೆಯವರು ಹೀಗೆ ಹಾಡಿದ್ದಾರೆ;

ಮಧುರಗೀತವ ಹಾಡಿ,‘ನನ್ನನಲ್ಲ ನ ಒಲಿಸಿ

ಹಲಸಂಗಿ ನಾಡಿನಲಿ ನೆಲೆಸಿ ನಿಂತ,

ನನ್ನ‘ಚನ್ನ‘ನಿಗೆಣೆಯ ಗೆಣೆಯರಾರಿಹರು

ಅವನೆ ಅವನಿಗೂ ಹೆಚ್ಚು ಅವನಿಗಿಂತ.