ಭಾರತ ಸಾವಿರಾರು ವರ್ಷಗಳಿಂದ ಅವಿಚ್ಛಿನ್ನವಾದ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿರುವ ದೇಶ. ಹಲವಾರು ಚಿಂತನಕಾರರು, ಉದಾತ್ತ ರೀತಿಯಲ್ಲಿ ಆಳಿದ ರಾಜರು, ಸಮಾಜಸುಧಾರಕರು, ಸಾಹಿತಿಗಳು, ಕಲಾವಿದರು, ಸಂತರು ಎಲ್ಲ ಈ ಸಂಸ್ಕೃತಿಯನ್ನು ಬೆಳೆಸಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ, ಅದರಲ್ಲೂ ಕರ್ನಾಟಕ ಸಂಗೀತದಲ್ಲಿ ಪುರಂದರದಾಸರು ಮತ್ತು ತ್ರಿಮೂರ್ತಿಗಳೆನಿಸಿಕೊಳ್ಳುವ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿಗಳು ಮತ್ತು ಇವರ ಶಿಷ್ಯ ಪರಂಪರೆಯವರು ಸಂಗೀತಶಾಸ್ತ್ರ, ಕಲೆ ಬೆಳೆದುಕೊಂಡು ಬರಲು ಅಪಾರವಾಗಿ ಶ್ರಮಿಸಿದ್ದಾರೆ.

ಈ ಪರಂಪರೆಯಲ್ಲೇ ಬಂದು ಖ್ಯಾತಿ ಪಡೆದು ಕಣ್ಮರೆಯಾದ ಸಂಗೀತ ವಿದ್ವಾಂಸರ ಪೈಕಿ, ಮಧುರೈ ಮಣಿ ಅಯ್ಯರ್ ಅವರಿಗೆ ತಮ್ಮದೇ ಆದ ಒಂದು ಸ್ಥಾನವಿದೆ. ಅವರ ಸಂಗೀತವೆಂದರೆ ಜನಸಾಮಾನ್ಯರಿಗೆ ಹೆಚ್ಚು ಪ್ರಿಯ. ಅದಕ್ಕೆ ಕಾರಣ ಅವರು ತಮ್ಮ ಹಾಡಿಕೆಯಲ್ಲಿ ಬರಿಯ ವಿದ್ವತ್ ಪ್ರದರ್ಶನ ಮಾಡದೆ, ಸಂಗೀತದಲ್ಲಿ ಅಸಕ್ತಿ ಇರುವ ಜನಸಾಮಾನ್ಯರಿಗೂ ತೃಪ್ತಿ ನೀಡುವಂತಹ ಅಂಶಗಳನ್ನು ಹೊಂದಿಸಿಕೊಂಡು ಪ್ರತ್ಯೇಕವಾದ ಧಾಟಿಯನ್ನು ರೂಪಿಸಿಕೊಂಡಿದ್ದರು. ಅದಕ್ಕೆ ’ಮಣಿ ಅಯ್ಯರ್ ಶೈಲಿ’ ಅಥವಾ ’ಮಣಿ ಅಯ್ಯರ್ ಬಾಣಿ’ ಎಂದೇ ಹೆಸರಾಯಿತು. ಹೀಗೆ ಶಾಸ್ತ್ರೀಯ ಕರ್ನಾಟಕ ಸಂಗೀತವನ್ನು ವಿದ್ವಾಂಸರು ಕೇಳುತ್ತಿದ್ದ ಸ್ಥಿತಿಯನ್ನು ಬದಲಿಸಿ, ಸಾಮಾನ್ಯ ಸಂಗೀತಾಭಿಮಾನಿಯೂ ಸಹ ಅರ್ಥಮಾಡಿಕೊಂಡು ಕೇಳಿ, ಆನಂದಿಸುವಂತೆ ಮಾಡಿದ ಹಿರಿಯರಲ್ಲಿ ಮಣಿ ಅಯ್ಯರ್ ಅವರು ಮೊದಲ ಪಂಕ್ತಿಯಲ್ಲಿದ್ದಾರೆ.

ಜನನ – ಬಾಲ್ಯ

ದಕ್ಷಿಣದ ಮಧುರೈ, (ಅಥವಾ ಮಧುರೆ) ತಮಿಳು ನಾಡಿನ ಚರಿತ್ರೆಯಲ್ಲಿ ವಿಶೇಷ ಸ್ಥಾನ ಪಡೆದ ನಗರ. ರಾಜ ಮಹಾರಾಜರುಗಳು ಅದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು, ವಿದ್ವಾಂಸರಿಗೂ ಕಲಾವಿದರಿಗೂ ಆಶ್ರಯಕೊಟ್ಟುದರಿಂದ ಕಲೆಗಳ ಬೀಡಾಗಿ ಬೆಳೆಯಿತು. ಪಾರ್ವತಿ ದೇವಿಯ ಅವತಾರವೆನ್ನುವ ಮೀನಾಕ್ಷೀ ದೇವಿಯ ಭವ್ಯವಾದ ಸುಂದರ ದೇವಾಲಯವಿದೆ. ಈ ಕಾರಣಗಳಿಂದ ಭಕ್ತರು, ಸಾಧುಸಂತರು ಮತ್ತು ಕಲಾವಿದರು ಮಧುರೆಯಲ್ಲಿ ಆಶ್ರಯ ಪಡೆಯುವುದು ಸ್ವಾಭಾವಿಕವಾಗಿದ್ದಿತು. ಸಂಗೀತ, ನಾಟ್ಯ ಮುಂತಾದ ಕಲೆಗಳಿಗೆ ಮಧುರೆ ಪ್ರಸಿದ್ಧವಾಗಿತ್ತು. ಇಪ್ಪತ್ತೆಯ ಶತಮಾನದ ಪೂರ್ವಾರ್ಧದಲ್ಲಿ ಮಧುರೆ ಪುಷ್ಪವನಂ ಅಯ್ಯರ್ ಎಂಬುವರು ತಮ್ಮ ಶಾರೀರ ಸಂಪತ್ತಿನಿಂದ ಕರ್ನಾಟಕ ಸಂಗೀತದಲ್ಲಿ ಅಪಾರ ಕೀರ್ತಿಗಳಿಸಿದ್ದರು. ಅವರ ಕಿರಿಯ ಸಹೋದರ ರಾಮಸ್ವಾಮಿ ಅಯ್ಯರ್ ಸಹ, ವೃತ್ತಿಯಿಂದ ಸರ್ಕಾರೀ ಕೆಲಸದಲ್ಲಿದ್ದರೂ, ಉತ್ತಮ ಸಂಗೀತ ಶಾಸ್ತ್ರಜ್ಞರಾಗಿದ್ದರು. ಇವರಿಗೆ ೧೯೧೨ರ ಅಕ್ಟೋಬರ್ ಇಪ್ಪತ್ತೈದರಂದು ಒಂದು ಮುದ್ದಾದ ಗಂಡು ಮಗು ಜನಿಸಿತು. ಆ ಮಗುವೇ ಮಣಿ ಅಯ್ಯರ್. ಮಣಿಯವರಿಗೆ ಮೂರು ಜನ ಸೋದರಿಯರಿದ್ದರು..

ತಮಿಳು ದೇಶದಲ್ಲಿ ’ಮಣಿ’ ಎಂಬ ಮಾತನ್ನು ಎರಡು ಅರ್ಥದಲ್ಲಿ ಬಳಸುತ್ತಾರೆ. ತಮಿಳರ ಬಲು ಮೆಚ್ಚಿನ ದೇವರು ಸುಬ್ರಹ್ಮಣ್ಯಸ್ವಾಮಿ. ಈ ಹೆಸರನ್ನು ಸಾಮಾನ್ಯವಾಗಿ ಪ್ರತಿ ಕುಟುಂಬದಲ್ಲೂ ಒಬ್ಬರಿಗಾದರೂ ಇಟ್ಟಿರುತ್ತಾರೆ. ಇದರ ಸಂಕ್ಷಿಪ್ತರೂಪ ’ಮಣಿ’. ಅಲ್ಲದೆ ಮುತ್ತು, ಹವಳ ಮುಂತಾದುವಕ್ಕೆ ಸಹ ’ಮಣಿ’ ಎನ್ನುವುದುಂಟು. ಅಂದರೆ, ಒಂದು ಮಗುವಿಗೆ ’ಮಣಿ’ ಎಂದು ಹೆಸರಿಟ್ಟರೆ ಸುಬ್ರಹ್ಮಣ್ಯ ಸ್ವಾಮಿಯ ಹೆಸರಿಟ್ಟ ತೃಪ್ತಿಯ ಜೊತೆಗೆ ಬೆಲೆಬಾಳುವ ವಸ್ತು ಎಂಬ ಅರ್ಥವೂ ಸೇರುತ್ತದೆ. ಹೀಗೆ ರಾಮಸ್ವಾಮಿ ಅಯ್ಯರ್ರವರು ತಮ್ಮ ಏಕೈಕ ಮುದ್ದು ಮಗನಿಗೆ ಮಣಿ ಎಂದು ಹೆಸರಿಟ್ಟರು.

ಸಂಗೀತದ ವಾತಾವರಣ

ಮಗು ಬೆಳೆಯುತ್ತಿದ್ದುದು ಸಂಗೀತದ ವಾತಾವರಣದಲ್ಲಿ. ಒಂದು ಕಡೆ ಚಿಕ್ಕಪ್ಪ ಪುಷ್ಪವನಂ ಅಯ್ಯರಿಗೆ, ತನ್ನ ತಂದೆ ಪಾಠ ಹೇಳುತ್ತಿದ್ದುದನ್ನು ಕೇಳುವ ಅವಕಾಶ. ಮತ್ತೊಂದು ಕಡೆ ಇವರ ತಾಯಿಯೂ ಸ್ವತಃ ಸಂಗೀತ ಜ್ಞಾನವನ್ನು ಪಡೆದವರಾದ್ದರಿಂದ ತಾಯಿಯ ಹಾಡಿಕೆಯನ್ನು ಕೇಳಲು ಮತ್ತು ಆಕೆಯಿಂದ ಚಿಕ್ಕ ಪುಟ್ಟ ಹಾಡುಗಳನ್ನು ಕಲಿಯಲು ಸಾಧ್ಯವಾಗುತ್ತಿತ್ತು. ಆ ಸಮಯದಲ್ಲಿ ಮಧುರೆಯಲ್ಲಿ ವಾಸಿಸುತ್ತಿದ್ದ ಮತ್ತೊಬ್ಬ ಖ್ಯಾತವ್ಯಕ್ತಿ ವೀಣೆ ಷಣ್ಮುಗವಡಿವು. ಈಕೆಯೇ ಇಂದು ಪ್ರಪಂಚದಲ್ಲೆಲ್ಲಾ ಪ್ರಸಿದ್ಧಿ ಪಡೆದಿರುವ ಸಂಗೀತ ಕಲಾವಿದೆ ಶ್ರೀಮತಿ ಎಂ. ಎಸ್. ಸುಬ್ಬಲಕ್ಷ್ಮಿಯವರ ತಾಯಿ. ಅಷ್ಟೇ ಅಲ್ಲ, ಅಂದಿನ ಇತರ ಖ್ಯಾತ ಸಂಗೀತಗಾರರೆಲ್ಲರೂ ಮಧುರೆಗೆ ತಪ್ಪದೆ ಬರುತ್ತಿದ್ದರು. ಬಾಲಕ ಮಣಿಗೆ ಇವರ ಸಂಗೀತವನ್ನು ಕೇಳಲು ಹಲವಾರು ಸಂದರ್ಭಗಳು ದೊರಕುತ್ತಿದ್ದವು.ಆ ಕಾಲದಲ್ಲಿ ಸಂಗೀತ ಕಚೇರಿಗಳನ್ನು ಏರ್ಪಡಿಸಲು ಕೆಲವೇ ಸಂಗೀತ ಸಭೆಗಳು ಇದ್ದವು. ದೇವಸ್ಥಾನದ ಉತ್ಸವಗಳಲ್ಲಿ ಮತ್ತು ಅನುಕೂಲಸ್ಥರ ಮನೆಗಳ ಮದುವೆ, ಮುಂಜಿ ಮುಂತಾದ ಸಮಾರಂಭಗಳಲ್ಲಿಯೇ ಸಾಮಾನ್ಯವಾಗಿ ಸಂಗೀತ ಕಚೇರಿಗಳು ನಡೆಯುತ್ತಿದ್ದುವು. ಇವು ದೇವಸ್ಥಾನದ ವಿಶಾಲವಾದ ಅಂಗಳಗಳಲ್ಲಿ ಮತ್ತು ವಿಶೇಷವಾಗಿ ಸಿದ್ಧಗೊಳಿಸಲ್ಪಟ್ಟ ಚಪ್ಪರಗಳಲ್ಲಿ ನಡೆಯುತ್ತಿದ್ದುದರಿಂದ ಯಾರೂ ಬೇಕಾದರೂ ಕೇಳಲು ಸಾಧ್ಯವಾಗುತ್ತಿತ್ತು. ಮುಖ್ಯವಾಗಿ ಕರ್ನಾಟಕ ಸಂಗೀತದ ಬೆಳವಣಿಗೆಯಲ್ಲಿ ಪ್ರಮುಖಪಾತ್ರ ವಹಿಸಿದ ಅನೇಕ ನಾಗಸ್ವರ ವಿದ್ವಾಂಸರು ಮಧುರೆಯಲ್ಲಿ ವಾಸವಾಗಿದ್ದರು.

ಸಂಗೀತದ ಶಿಕ್ಷಣ ಪ್ರಾರಂಭ

ಎಲ್ಲಾ ಮಕ್ಕಳಂತೆ ಮಣಿಗೂ ಶಾಲಾ ವಿದ್ಯಾಭ್ಯಾಸದ ಏರ್ಪಾಡು ನಡೆದಿತ್ತು. ಆದರೆ ಮಗನ ಒಲವು ಸಂಗೀತದ ಕಡೆ ಸಾಕಷ್ಟು ಇರುವುದನ್ನು ಗಮನಿಸಿದ ರಾಮಸ್ವಾಮಿ ಅಯ್ಯರ್ರವರು ಅದಕ್ಕೆ ತಕ್ಕ ಅನುಕೂಲವನ್ನು ಮಾಡಿ ಕೊಟ್ಟರು. ಮಳವರಾಯನೆಂದಲ್ ಸುಬ್ಬರಾಮ ಭಾಗವತರ್ ಎಂಬುವರು ಆ ಕಾಲದ ಹಿರಿಯ ವಿದ್ವಾಂಸರು. ಮುಂದೆ ’ಸಂಗೀತ ಕಲಾನಿಧಿ’ ಬಿರುದ್ನು ಪಡೆದವರು. ಅವರ ಶಿಷ್ಯ ರಾಜಂ ಭಾಗವತರ್ ಎಂಬುವರಲ್ಲಿ ಮಣಿ ಗುರುಕುಲವಾಸ ಮಾಡಲು ಆರಂಭಿಸಿದ.

ತಮ್ಮ ಗುರುಗಳಂತೆ ರಾಜಂ ಭಾಗವತರೂ ಸ್ವರ ಹಾಡುವುದರಲ್ಲಿ ಖ್ಯಾತಿ ಪಡೆದಿದ್ದರು. ಎಳೆಯ ವಯಸ್ಸಿನ ಮಣಿಯ ಮನಸ್ಸಿನ ಮೇಲೆ ಈ ಕ್ರಮ ವಿಶೇಷ ಪರಿಣಾಮವನ್ನುಂಟುಮಾಡಿ, ಆ ಕ್ರಮದ ಸೂಕ್ಷ್ಮವಗಳನ್ನು ಗ್ರಹಿಸುವಂತೆ ಮಾಡಿತು. ಇದು ಅವರ ಭವಿಷ್ಯದ ಕೀರ್ತಿಗೆ ನಾಂದಿಯಾಯಿತು. ಜೊತೆಗೇ ಸಂಗೀತ ಶಾಸ್ತ್ರದ ಸೂಕ್ಷ್ಮಾಂಶಗಳನ್ನು ತಂದೆಯಿಂದಲೂ ಕಲಿತರು. ಉತ್ತಮ ಸಂಗೀತಗಾರರಾಗುವುದಕ್ಕೆ ಬೇಕದ ಬಲವಾದ ತಳಹದಿ ಅವರಿಗೆ ದೊರಕಿತು.

ಗುರುಗಳು

ಈ ಸಮಯದಲ್ಲಿ ಗಾಯಕಿ ಶಿಖಾಮಣಿ ಹರಿಕೇಶ ನಲ್ಲೂರ್ ಮುತ್ತಯ್ಯ ಭಾಗವತರ್ ಎಂಬ ಹಿರಿಯ ವಿದ್ವಾಂಸರು ಮಧುರೆಯಲ್ಲಿ ’ಶ್ರೀ ತ್ಯಾಗರಾಜ ವಿದ್ಯಾಲಯ’ ಎಂಬ ಸಂಗೀತ ಕಲಾಶಾಲೆಯನ್ನು ಪ್ರಾರಂಭಿಸಿ ಅನೆಕರಿಗೆ ಸಂಗೀತ ಶಿಕ್ಷಣವನ್ನು ಕೊಡಲಾರಂಭಿಸಿದರು. ಈ ಶಾಲೆಯಲ್ಲಿ ಪ್ರಾರಂಭದಿಂದಲೇ ಶಿಷ್ಯರಾಗಿ ಸೇರಿದವರ ಪೈಕಿ ಮಣಿ ಅಯ್ಯರ್ ಮತ್ತು ಮೈಸೂರಿನ ಬೆಳಕವಾಡಿ ವರದರಾಜ ಅಯ್ಯಂಗಾರ್ಯಾರು ಮುಖ್ಯವಾದವರು. ಮುತ್ತಯ್ಯ ಭಾಗವತರ ಶಿಕ್ಷಣಕ್ರಮ ವಿಶೇಷವಾದುದು. ತಮ್ಮ ಶಿಷ್ಯರಲ್ಲಿ ಲಕ್ಷಣ ಜ್ಞಾನದ ಜೊತೆಗೇ ಲಕ್ಷ್ಯಜ್ಞಾನವೂ ಬೆಳೆದುಕೊಂಡು ಬರುವುದರ ಕಡೆ ಅವರು ಗಮನ ಕೊಡುತ್ತಿದ್ದರು. ಮಧುರೆಗೆ ಸಂಗೀತ ಕಚೇರಿ ಮಾಡಲು ಯಾವ ಖ್ಯಾತ ಸಂಗೀತ ವಿದ್ವಾಂಸರು ಬಂದರೂ, ಭಾಗವತರನ್ನು ಕಾಣದೆ, ಅವರ ಆತಿಥ್ಯವನ್ನು ಪಡೆಯದೆ ಇರುತ್ತಿರಲಿಲ್ಲ. ಈ ಕಾರಣದಿಂದ ಭಾಗವತರ ಶಿಷ್ಯರಿಗೆ ಅನೇಕ ಹಿರಿಯ ವಿದ್ವಾಂಸರ ಹಾಡಿಕೆಯನ್ನು ಕೇಳುವ ಅವಕಾಶ ದೊರಕುತ್ತಿದ್ದಿತು. ವಿಶೇಷ ಶ್ರದ್ದೆಯಿಂದ ಕೇಳುವಂತಹ ಶಿಷ್ಯರು, ಅವರೆಲ್ಲರ ಶೈಲಿಗಳ ವಿಶೇಷಾಂಶವನ್ನು ಗ್ರಹಿಸಿ ಅರ್ಥಮಾಡಿಕೊಂಡು ಪ್ರಯೋಜನ ಪಡೆಯಬಹುದಾಗಿತ್ತು. ಎಷ್ಟೋಬಾರಿ ಹಿರಿಯ ವಿದ್ವಾಂಸರ ಕಚೇರಿಗಳಿಗೆ ಭಾಗವತರೇ ಸ್ವತಃ ಟಿಕೆಟಿಗೆ ಹಣಕೊಟ್ಟು ತಮ್ಮ ಶಿಷ್ಯರನ್ನು ಕಳುಹಿಸುತ್ತಿದ್ದುದೂ ಉಂಟು. ಹಾಗೆ ಕಳುಹಿಸಿದಾಗಲೆಲ್ಲ, ಕಚೇರಿಯಿಂದ ಹಿಂತಿರುಗಿದ ಮೇಲೆ ಆಯಾ ಗಾಯಕರ ಹಾಡಿಕೆಯಲ್ಲಿ ತಮ್ಮ ಶಿಷ್ಯರು ಗಮನಿಸಿದ ವಿಶೇಷವಾದ, ಉತ್ತಮವಾದ ಅಂಶಗಳೇನು ಎಂದು ಕೇಳಿ ವಿವರಿಸುವಂತೆ ಮಾಡುತ್ತಿದ್ದರು. ಇದು ಶಿಷ್ಯರು ವೈಯಕ್ತಿಕವಾದ ಮನೋಧರ್ಮವನ್ನು ಬೆಳೆಸಿಕೊಳ್ಳಲು ಸಹಾಯಮಾಡಿತು. ಸಾಮಾನ್ಯವಾಗಿ ಒಬ್ಬ ಗುರುವಿನ ಬಳಿ ಸಂಗೀತ ಕಲಿತ ಶಿಷ್ಯರ ಶೈಲಿ ಒಂದೇ ರೀತಿಯಾಗಿರುತ್ತದೆ. ಮುತ್ತಯ್ಯ ಭಾಗವತರು ಅನುಸರಿಸಿದ ವಿಧಾನದಿಂದ ಒಬ್ಬರೆ ಗುರುವಿನ ಇಬ್ಬರು ಶಿಷ್ಯರು ಬೇರೆಬೇರೆ ಶೈಲಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು. ಮಣಿ ಅಯ್ಯರವರು ಈ ಕ್ರಮದ ಪೂರ್ಣ ಪ್ರಯೋಜನ ಪಡೆದರು.

ಮುತ್ತಯ್ಯ ಭಾಗವತರು ಸ್ವತಃ ಉತ್ತಮ ಗಾಯಕರು, ಹರಿಕಾಥಾ ವಿದ್ವಾಂಸರು, ವಾಗ್ಗೇಯಕಾರರು ಆಗಿದ್ದರು. ಅವರು ನೂರಾರು ಕೀರ್ತನೆಗಳನ್ನು ರಚಿಸಿದ್ದಾರೆ. ಅನೇಕ ಹೊಸ ರಾಗಗಳಿಗೆ ಈ ಕೀರ್ತನೆಗಳ ಮೂಲಕ ಸ್ವರೂಪವನ್ನು ಕೊಟ್ಟಿದ್ದಾರೆ. ಮುಂದೆ ಮಣಿ ಅಯ್ಯರ್ ಸಂಗೀತ ಕಚೇರಿಗಳನ್ನು ಮಾಡಲು ಪ್ರಾರಂಭಿಸಿದಾಗ ತಮ್ಮ ಗುರುಗಳ ಕೃತಿಗಳ ಪೈಕಿ ಒಂದೆರಡನ್ನಾದರೂ ತಪ್ಪದೆ ಹಾಡುತ್ತಿದ್ದರು. ಆಗ ಅವು ಇತರ ಸಂಗೀತಗಾರರಿಗೂ ಶ್ರೋತೃಗಳಿಗೂ ಪರಿಚಯವಾದವು.

ಮಣಿ ಅಯ್ಯರ್ರವರು ಶಾಲಾ ವಿದ್ಯಾಭ್ಯಾಸವನ್ನು ಐದನೆಯ ತರಗತಿಗೆ ನಿಲ್ಲಿಸಿ ಪೂರ್ತಿಯಾಗಿ ಸಂಗೀತದ ಕಡೆಗೇ ಗಮನಕೊಟ್ಟರು.

ಹುಡುಗನ ಕಚೇರಿಗಳು

ತಂದೆ, ರಾಜಂ ಭಾಗವತರ್ ಮತ್ತು ಮುತ್ತಯ್ಯ ಭಾಗವತರ್ – ಹೀಗೆ ಮೂವರ ಪ್ರಭಾವದ ತ್ರಿವೇಣಿ ಸಂಗಮವಾಗಿ ಸಂಗೀತಕಲೆಯನ್ನು ಕರಗತ ಮಾಡಿಕೊಂಡ ಮಣಿ ಅಯ್ಯರ್ ತಮ್ಮ ಹನ್ನೆರಡನೆಯ ವಯಸ್ಸಿನಲ್ಲೇ ವೇದಿಕೆ ಹತ್ತಿ ಕಚೇರಿ ಮಾಡಲು ಪ್ರಾರಂಭಿಸಿದರು. ಶಿವಗಂಗಾ ಸಂಸ್ಥಾನಕ್ಕೆ ಸೇರಿದ ’ಅಲವಾಕ್ಕೋಟ್ಟೆ’ ಎಂಬ ಊರಿನ ದೇವಸ್ಥಾನದಲ್ಲಿ ಕುಂಭಾಭಿಷೇಕ ನಡೆಯಿತು. ಅಂದು ಮಣಿ ಅಯ್ಯರರ ರಂಗಪ್ರವೇಶ ಕಚೇರಿ ಏರ್ಪಾಡಾಯಿತು. ಇದು ನಡೆದುದು ೧೯೨೪ ರಲ್ಲಿ. ಅಂದಿನಿಂದ ಎಡಬಿಡದೆ ಅವರ ಕಚೇರಿಗಳು ನಡೆಯಲಾರಂಭಿಸಿದವು.

‘ಹುಡಗ’ನ ಕಚೇರಿ

ಕುಂಭಾಭಿಷೇಕದ ಕಚೇರಿಯಿಂದ ಪ್ರಾರಂಭಿಸಿ ಇವರ ಆಕರ್ಷಕ ಶೈಲಿಯ ಕೀರ್ತಿಯು ಎಲ್ಲ ಕಡೆಯೂ ಹರಡ ತೊಡಗಿತು. ಕಂಚಿ ಕಾಮಕೋಟಿ ಪೀಠಾಧಿಪತಿಗಳ ಸಮ್ಮುಖದಲ್ಲಿ ಹಾಡಿ ಚಿನ್ನದ ಪದಕವನ್ನು ಪಡೆದರು. ೧೯೨೭ ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನ ಮದರಾಸಿನಲ್ಲಿ ನಡೆಯಿತು. ಇದರ ಅಂಗವಾಗಿ ’ಸಂಗೀತ ವಿದ್ವತ್ಸಭೆ’ (ಮ್ಯೂಸಿಕ್ ಅಕಾಡೆಮಿ) ಎಂಬ ಹೊಸ ಸಂಸ್ಥೆಯು ಸ್ಥಾಪಿತವಾಯಿತು. ಭಾರತದ ಎಲ್ಲ ಕಡೆಗಳಿಂದಲೂ ಬಂದಿದ್ದ ಕಾಂಗ್ರೆಸ್ ಪ್ರತಿನಿಧಿಗಳು ಮತ್ತು ಪ್ರೇಕ್ಷಕರಿಗೆ ಅನೇಕ ಸಂಗೀತ ಕರ್ಯಕ್ರಮಗಳನ್ನು ಏರ್ಪಡಿಸಿ ಮನರಂಜನೆಯನ್ನು ಒದಗಿಸುವ ವ್ಯವಸ್ಥೆಯನ್ನು ಈ ಸಂಸ್ಥೆಯು ವಹಿಸಿಕೊಂಡಿತ್ತು. ಆ ಸಮ್ಮೇಳನಕ್ಕೆ ಮಣಿ ಅಯ್ಯರರ ತಂದೆ ರಾಮಸ್ವಾಮಿ ಅಯ್ಯರ್ರವರು ಆಹ್ವಾನಿತರಾಗಿದ್ದರು. ಅವರು ಸಂಗೀತಕ್ಕೆ ಸಂಬಂಧಿಸಿದ ಒಂದು ವಿದ್ವತ್ಪೂರ್ಣವಾದ ಪ್ರಬಂಧವನ್ನು ಸಭೆಯಲ್ಲಿ ಓದಿದರು. ತಂದೆಯ ಜೊತೆಗೆ ಬಂದಿದ್ದ ಹದಿನೈದು ವಯಸ್ಸಿನ ಬಾಲಕ ಮಣಿ ಒಂದು ಪುಟ್ಟ ಕಚೇರಿಯನ್ನು ಮಾಡಿ ಚಿನ್ನದ ಪದಕವನ್ನು ಸಂಪಾದಿಸಿಕೊಂಡನು. ಅಲ್ಲದೆ, ಅನೇಕರ ಮೆಚ್ಚುಗೆಗೆ ಪಾತ್ರನಾದನು. ಅಲ್ಲಿ ನೆರೆದಿದ್ದ ವಿದ್ವಾಂಸರೂ, ರಸಿಕರೂ, ಮಣಿ ಅಯ್ಯರ್ ಅವರ ಹಾಡಿಕೆಯಲ್ಲಿ ಸಂಪ್ರದಾಯದ ಜೊತೆಗೆ ನಾವೀನ್ಯ, ತನ್ಮಯತೆ, ಹೊಸದೊಂದು ಶೈಲಿಯ ಆಕರ್ಷಣೆ ಇರುವುದನ್ನು ಕಂಡರು. ಕ್ರಮೇಣ ಅವರು ಕಿರಿಯ, ತರುಣ ವಿದ್ವಾಂಸರು ಎಂಬ ಹಂತದಿಂದ ಹಿರಿಯ ವಿದ್ವಾಂಸರ ವರ್ಗಕ್ಕೆ ಏರಿದರು.

ಮಣಿ ಅಯ್ಯರ್ ಬಾಣಿ

ಜನರನ್ನು ಈ ರೀತಿ ಆಕರ್ಷಿಸಿದ ಅವರ ಹಾಡು ಗಾರಿಕೆಯ ಶೈಲಿಯ ಅಥವಾ ’ಬಾಣಿ’ಯ ವೈಶಿಷ್ಟ್ಯ ವೇನೆಂದು ಇಲ್ಲಿ ಸ್ವಲ್ಪ ವಿವರಿಸುವುದು ಆವಶ್ಯಕ. ವೇದಿಕೆಯ ಮೇಲೆ ಕುಳಿತು ಹಾಡುವಾಗ, ಕಲಿತ ವಿದ್ಯೆಯನ್ನೆಲ್ಲ ಪ್ರದರ್ಶಿಸಿ, ಪಂಡಿತರನ್ನು ಮಾತ್ರ ತೃಪ್ತಿಪಡಿಸುವಂತೆ ಹಾಡಿದರೆ ಸಾಲದು. ಶ್ರೀಸಾಮಾನ್ಯ – ಅಂದರೆ ಸಂಗೀತದ ವಿಷಯದಲ್ಲಿ ಆಳವಾದ ಜ್ಞಾನವಿಲ್ಲದಿದ್ದರೂ ಅದನ್ನು ಸ್ವಲ್ಪಮಟ್ಟಿಗೆ ತಿಳಿದುಕೊಂಡ ಸಂಗೀತಪ್ರೇಮಿ ರಸಿಕ- ತಮ್ಮ ಹಾಡಿಕೆಯನ್ನು ಕೇಳಿ, ಅನುಭವಿಸಿ, ಆನಂದಪಡುವಂತಾಗಬೆಕು ಎಂಬುದು ಅವರ ಧ್ಯೇಯವಾಗಿತ್ತು. ಸಂಗೀತಕ್ಕೆ ಶ್ರುತಿ ಮತ್ತು ಲಯ ಇವೆರಡೂ ಆಧಾರ ಸ್ತಂಭಗಳು. ಇವುಗಳಿಗೆ ವಿಶೇಷ ಗಮನಕೊಟ್ಟು ಹಾಡುತ್ತಿದ್ದವರು ಮಣಿ ಅಯ್ಯರ್. ಅವರ ಸಮಕಾಲೀನ ವಿದ್ವಾಂಸರಿಂದಲೇ ಶ್ರುತಿ ಶುದ್ಧತೆಗೆ ಮೆಚ್ಚುಗೆ ಪಡೆದಿದ್ದರು. ಅವರು ಹಾಡುವಾಗ ನಡುವೆ ’ಯಾ’, ’ಉಯ್’ ಮುಂತಾದ ಶಬ್ದಗಳನ್ನು ಹೊರಡಿಸುವುದು ವಾಡಿಕೆ. ಮೊದಲಬಾರಿಗೆ ಕೇಳುವಾಗ ಇದು ಸ್ವಲ್ಪ ವಿಚಿತ್ರವೆನಿಸಿದರೂ ತಮ್ಮ ಹಾಡಿಕೆ ಶ್ರುತಿಯೊಡನೆ ಲೀನವಾಗಿದೆಯೇ ಎಂದು ಪರಿಶೀಲಿಸಿಕೊಳ್ಳುವ ರೀತಿ ಅದು ಎಂದು ಸುಲಭವಾಗಿ ಊಹಿಸಬಹುದಾಗಿತ್ತು.

ಸ್ವರ ಹಾಡುವುದು ಕರ್ಣಾಟಕದ ಸಂಗೀತದಲ್ಲಿ ಒಂದು ಮುಖ್ಯವಾದ ಅಂಶ. ಆರಿಸಿಕೊಂಡ ಕೃತಿ ಅಥವಾ ಪಲ್ಲವಿಯ ತಾಳದ ಚೌಕಟ್ಟಿನಲ್ಲಿ ಆಯಾ ರಾಗಗಳ ಆರೋಹಣ ಮತ್ತು ಅವರೋಹಣಗಳಲ್ಲಿ ಬರತಕ್ಕ ಸ್ವರಗಳನ್ನು ವಿವಿಧ ರೀತಿಯಲ್ಲಿ ಹೆಣೆದು ಮನರಂಜನೀಯವಾಗಿ ಹಾಡುವುದು ಒಂದು ಕಲೆ. ಮಣಿ ಅಯ್ಯರ್ರವರ ಸ್ವರಹಾಡುವಿಕೆ ಸರಳವಾಗಿ, ನಿರರ್ಗಳವಾಗಿ ’ಸರ್ವ ಲಘು’ ಎನಿಸಿಕೊಳ್ಳುವ ನಾಲ್ಕು ನಾಲ್ಕು ಸ್ವರಗಳ ಹಲವು ಬಗೆಯ ಜೋಡಣೆಗಳಿಂದ ಶ್ರೋತೃಗಳನ್ನು ತಲೆದೂಗುವಂತೆ ಮಾಡುತ್ತಿದ್ದಿತು. ಈ ಧಾಟಿಯ ಪ್ರಭಾವ ಎಷ್ಟಿತ್ತೆಂದರೆ ಅದರಿಂದ ಸ್ಫೂರ್ತಿ ಪಡೆದು ಪಕ್ಕವಾದ್ಯ ನುಡಿಸುವವರೂ ಅದೇ ಗತಿಯಲ್ಲಿ ನುಡಿಸುತ್ತಿದ್ದರು. ಇದರಿಂದಾಗಿ ಒಟ್ಟಿನಲ್ಲಿ ಮಣಿ ಅಯ್ಯರ್ರವರ ಪ್ರತಿ ಕಚೇರಿಯೂ ಆಕರ್ಷಕವಾಗಿ ಇರುತ್ತಿದ್ದಿತು. ಅವರು ರೂಪಿಸಿಕೊಂಡ ಶೈಲಿ, ಧ್ವನಿವರ್ಧಕದ ಮೂಲಕ ಬರುವಾಗ ಹೆಚ್ಚು ಪರಿಣಾಮಕಾರಿಯಾಗಿ ಕೇಳಿಬರುತ್ತಿತ್ತು. ಈ ಸೂಕ್ಷ್ಮವನ್ನು ಸ್ವತಃ ಅವರೂ ಮನಗಂಡು ಅದರ ಪೂರ್ಣ ಪ್ರಯೋಜನ ಪಡೆಯುತ್ತಿದ್ದರು. ಇದು ಶ್ರೋತೃಗಳ ಮನರಂಜನೆಗೂ ಬಹುಮಟ್ಟಿಗೆ ಕಾರಣವಾಗುತ್ತಿತ್ತು.

ಈಶ್ವರನಿಗೆ ’ಸದ್ಯೋಜಾತ’ ಮೊದಲಾದ ಐದು ಮುಖಗಳುಂಟು. ಈ ಐದು ಮುಖಗಳಿಂದ ಹೊರಟು ಬಂದ ಸ, ರಿ, ಗ, ಮ, ಪ, ದ, ನಿ ಎಂಬ ಏಳು ಸ್ವರಗಳು ಸಂಗೀತಕ್ಕೆ ಆಧಾರ ಎಂದು ನಮ್ಮಲ್ಲಿ ನಂಬಿಕೆ. ಈ ಮಾತನ್ನೇ ತ್ಯಾಗರಾಜ ಸ್ವಾಮಿಗಳು ’ಚಿತ್ತರಂಜನಿ’ ರಾಗದ ’ನಾದ ತನುಮನಿಶಂ ಶಂಕರಂ’ ಕೃತಿಯಲ್ಲೂ ಹೇಳಿದ್ದಾರೆ. ಮಣಿ ಅಯ್ಯರರ ಹಿಂದಿನ ಪೀಳಿಗೆಯ ಗಾಯಕರು ಅಥವಾ ಅವರ ಜೊತೆಯ ಸಂಗೀತಗಾರರು ಈ ಹಾಡನ್ನು ಹೆಚ್ಚಾಗಿ ಹಾಡುತ್ತಿದ್ದರೋ ಇಲ್ಲವೋ ಹೇಳುವಂತಿಲ್ಲ. ಆದರೆ ಈ ಹಾಡನ್ನು ಜನಗಳ ನಡುವೆ ಪ್ರಚಲಿತಗೊಳಿಸಿದ ಕೀರ್ತಿ ಮಣಿ ಅಯ್ಯರರಿಗೇ ಸೇರುತ್ತದೆ. ಏಕೆಂದರೆ ಅವರು ಈ ಹಾಡಿಗೆ ತಮ್ಮ ವೈಯಕ್ತಿಕ ಮನೋಧರ್ಮದ, ಶೈಲಿಯ, ಮುದ್ರೆಯನ್ನು ಒತ್ತಿದ್ದರು. ಶ್ರೋತೃಗಳು ಅದರಲ್ಲಿ ಒಂದು ಬಗೆಯ ಆಕರ್ಷಣೆಯನ್ನು ಕಂಡು ಮತ್ತೆ ಮತ್ತೆ ಪ್ರತಿ ಕಚೇರಿಯಲ್ಲೂ ಅದನ್ನು ಹಾಡುವಂತೆ ಕೇಳಿ ಹಾಡಿಸುವುದು ವಾಡಿಕೆಯಾಗಿತ್ತು.

ಹೊಸ ರಾಗಗಳು

ಮೇಲಿನ ಮಾತನ್ನು ಅವರು ಹಾಡಿ ಜನಪ್ರಿಯಗೊಳಿಸಿದ ಇತರ ಕೆಲವು ಹಾಡುಗಳ ಬಗ್ಗೆಯೂ ಹೇಳಬಹುದು. ಕಾಪಿನಾರಾಯಣಿ ರಾಗದ ’ಸರಸಸಾಮದಾನ’ ಮುಂತಾದುವು ಈ ವರ್ಗಕ್ಕೆ ಸೇರಿದುವು. ಮುಖ್ಯವಾಗಿ ತಮ್ಮ ಗುರುಗಳಾದ ಮುತ್ತಯ್ಯ ಭಾಗವತರ ಅನೆಕ ರಚನೆಗಳನ್ನು ತಮ್ಮ ಪ್ರಯತ್ನದಿಂದ ಬೆಳಕಿಗೆ ತಂದರು. ದೇವಿಯ ಮೇಲೆ ಮುತ್ತಯ್ಯ ಭಾಗವತರು ರಚಿಸಿದ ಕನ್ನಡದ ಕೀರ್ತನೆಗಳಾದ, ’ಭುವನೇಶ್ವರಿಯ ನೆನೆ ಮಾನಸವೇ’, ’ಸಹಸ್ರ ಕರ ಮಂಡಿತೇ’, ’ರತ್ನ ಕಂಚುಕ ಧಾರಿಣಿ’, ’ವಿಜಯಾಂಬಿಕೇ’, ’ಜಾಲಂಧರ ಸುಪೀಠಸ್ತೆ’, ’ಸುಧಾಮಯಿ’ ಇವುಗಳನ್ನು ಉದಾಹರಣೆಯಾಗಿ ಹೇಳಬಹುದು. ಇಂತಹ ಕೃತಿಗಳ ಮೂಲಕ ’ಮೋಹನ ಕಲ್ಯಾಣಿ’, ’ವಿಜಯನಾಗರಿ’, ’ನಿರೋಷ್ಠಿ’, ’ವಲಜಿ’, ’ಗೌಡಮಲ್ಹಾರ್’, ’ಹಂಸಾನಂದಿ’, ಮುಂತಾದ ಭಾಗವತರು ರೂಪಿಸಿದ ಹೊಸ ರಾಗಗಳು ಸಹ ಪ್ರಚಾರಕ್ಕೆ ಬಂದುವ. ಸಂಗೀತಗಾರರೂ ಸಂಗೀತ ಪ್ರೇಮಿಗಳೂ ಇವನ್ನು ಉತ್ಸಾಹದಿಂದ ಸ್ವಾಗತಿಸಿದರು. ಇದು ಸಂಗೀತ ಕಲೆಗೆ ಮಣಿ ಅಯ್ಯರ್ರವರ ಮಹತ್ತರ ಸೇವೆ ಎನ್ನಬಹುದು.

ಬಳಕೆಯಲ್ಲಿಲ್ಲದ ರಾಗಗಳು

ಮತ್ತೆ ಬಳಕೆಯಲ್ಲಿಲ್ಲದ ಕೆಲವು ರಾಗಗಳು ಮಣಿ ಅಯ್ಯರರ ಮೂಲಕ ಹೊಸ ಜೀವನವನ್ನು ತಳೆದು ಪ್ರಚಾರಕ್ಕೆ ಬಂದವು. ಅವುಗಳೆಂದರೆ ’ಚಿತ್ತರಂಜಿನಿ’ ’ಕಾಪಿ ನಾರಾಯಣಿ’, ’ಜೋನ್ಪುರಿ’ ’ಉಮಾಭರಣ’, ’ಬಹುದಾರಿ’. ತ್ಯಾಗರಾಜು ’ನಿಜಮರ್ಮಮುಲನು’ ಮತ್ತು ’ಬ್ರೋವಭಾರಮಾ’ ಕೃತಿಗಳನ್ನು ಕ್ರಮವಾಗಿ ’ಉಮಾಭರಣ’ ಮತ್ತು ’ಬಹುದಾರಿ’ ರಾಗಗಳಲ್ಲಿ ರಚಿಸಿದ್ದುದನ್ನು ಹಲವಾರು ಬಲ್ಲರಾದರೂ ಅವನ್ನು ಆಕರ್ಷಕವಾಗಿ ವೇದಿಕೆಯ ಮೇಲೆ ಮೊದಲು ಹಾಡಿ ತೋರಿಸಿದವರು ಮಣಿ ಅಯ್ಯರ್ ಅವರೇ. ದೀಕ್ಷಿತರ ನವಗ್ರಹ ಮತ್ತ ನವಾವರಣ ಕೃತಿಗಳು ಮುಂತಾದುವನ್ನೊಳಗೊಂಡು ಅವರ ಕಚೇರಿಗಳಲ್ಲಿ ಹಾಡುಗಳ ಪಟ್ಟಿ ವೈವಿಧ್ಯದಿಂದ ಕೂಡಿರುತ್ತಿತ್ತು. ತಮ್ಮ ಸಮಕಾಲೀನ ವಿದ್ವಾಂಸರು ಹಾಡಿ ಪ್ರಸಿದ್ಧಿಗೆ ತಂದ ಹಾಡುಗಳನ್ನು ಸಾಧ್ಯವಾದಷ್ಟು ತಾವು ಹಾಡುತ್ತಿರಲಿಲ್ಲ. ಅಪೂರ್ವ ಕೃತಿಗಳನ್ನು ಆಯ್ದು ಮೆರುಗುಕೊಟ್ಟು ಹಾಡಿ, ಅವುಗಳನ್ನು ಕೇಳುವಾಗಲೆಲ್ಲ ಶ್ರೋತೃಗಳಿಗೆ ತಮ್ಮ ನೆನಪು ಬರುವಂತೆ ಮಾಡಿದರು. 

‘ಸರಿಯಾಗಿ ಕಲಿಯದೆ ಹಾಡುವುದು ಅಪಚಾರ’

ಹೊಸ ರೀತಿ

ಸಂಗೀತ ಶಿಕ್ಷಣದಲ್ಲಿ ಆರಂಭ ಪಾಠಗಳಾದ ಸರಳೆ ಜಂಟಿ ಮತ್ತು ದಾಟು ವರಸೆಗಳು ಮತ್ತು ಅಲಂಕಾರ ಇವುಗಳ ಪ್ರಾಮುಖ್ಯತೆ ಎಷ್ಟು ಎಂಬುದನ್ನು ಮುಂದೆ ಅವು ವೇದಿಕೆಯ ಮೇಲೆ ಯಶಸ್ವಿಯಾಗಿ ಕಚೇರಿ ಮಾಡಲು ಹೇಗೆ ನೆರವಿಗೆ ಬರಬಲ್ಲವು ಎಂಬುದನ್ನೂ ಮಣಿ ಅಯ್ಯರ್ ಅವರು ನಿದರ್ಶನವಾಗಿ ತೋರಿಸಿಕೊಡುತ್ತಿದ್ದರು. ಯಾವ ರಾಗದಲ್ಲಿ ಹಾಡಿದರೂ ಆಯಾ ರಾಗದ ಪೂರ್ಣ ಸ್ವರೂಪವನ್ನು ಪೋಷಿಸುವುದಕ್ಕೂ, ಸ್ವರ ಹಾಡುವಾಗ ಕೇಳುವರಿಗೆ ಬೇಸರಬಾರದೆ ಆಕರ್ಷಕ ಜೋಡಣೆಗಳನ್ನು ಮಾಡುವಲ್ಲಿಯೂ, ಆರಂಭಪಾಠದ ವರಸೆಗಳನ್ನು ನಯವಾಗಿ, ಮಿತವಾಗಿ, ನವಿರಾಗಿ ಉಪಯೋಗಿಸುವಲ್ಲಿಯೂ ಯಶಸ್ವಿಯಾಗಿದ್ದರು. ಸ್ವರ ಹಾಡುವಿಕೆಯಲ್ಲಿ ಅವರು ಗಳಿಸಿದ ಅದ್ವಿತೀಯ ಕೀರ್ತಿಯ ಹಿನ್ನೆಲೆ ಇದೇ. ಈ ದಿಸೆಯಲ್ಲಿ ಅನೇಕ ಗಾಯಕರೂ ವಾದಕರೂ ಪರೋಕ್ಷವಾಗಿ ಇವರ ಶಿಷ್ಯರಾದರು ಎನ್ನಬಹುದು.

ಅವರು ಆಗಿಂದಾಗ್ಗೆ ಕಚೇರಿಗಳಲ್ಲಿ ಹಾಡುತ್ತಿದ್ದ ಒಂದು ಹಾಡು ’ಪೂರ್ವೀಕಲ್ಯಾಣಿ’ ರಾಗದ ’ಮೀನಾಕ್ಷಿ ಮೇ ಮುದಂ ದೇಹಿ’ ಎಂಬ ದೀಕ್ಷಿತರ ಕೃತಿ. ಇದರ ಚರಣದಲ್ಲಿ ’ಮಧುರಾಪುರಿ ನಿಲಯೇ ಮಣಿ ವಲಯೇ’ ಎಂಬ ಸಾಹಿತ್ಯ ಭಾಗವನ್ನು ಹಾಡುವಾಗ ’ಮಧುರ’ ಮತ್ತು ’ಮಣಿ’ ಎಂಬ ಮಾತುಗಳನ್ನು ಒತ್ತಿ ವಿನ್ಯಾಸ ಮಾಡಿ ಹಾಡಿ, ಅವು ತಮ್ಮ ಹೆಸರನ್ನೊಳಗೊಂಡಿವೆಯೆಂದು ವಿನೋಧವಾಗಿ ಸೂಚಿಸುತ್ತಿದ್ದರು. ಸಭಿಕರಿಗು ಇದು ಸ್ವಾರಸ್ಯವಾಗಿರುತ್ತಿತ್ತು.

ತನ್ಮಯತೆ

ಒಮ್ಮೆ ಜಗದ್ಗುರು ಕಂಚಿ ಶಂಕಾರಾಚಾರ್ಯರು ಮದರಾಸಿನಲ್ಲಿ ತಂಗಿದ್ದಾಗ, ನಿತ್ಯವೂ ಸುಪ್ರಸಿದ್ಧ ಸಂಗೀತಗಾರರು ಅವರ ಪೂಜೆಯಲ್ಲಿ ಭಾಗವಹಿಸಿ ನಾದಸೇವೆ ಸಲ್ಲಿಸುತ್ತಿದ್ದರು. ಮಣಿ ಅಯ್ಯರ್ ಅವರ ಸರದಿಯ ದಿನ ಅವರು ಎಂಟು ಗಂಟೆಗೆ ಸಂಗೀತವನ್ನು ಪ್ರಾರಂಭಿಸಿ ಪ್ರಖ್ಯಾತ ವಾಗ್ಗೇಯಗಾರರ ದೇವೀಸ್ತುತಿಗಳನ್ನು ಭಕ್ತಿ ಶ್ರದ್ಧೆಯಿಂದ ಹಾಡುತ್ತಿದ್ದರು. ಅವರ ಜೊತೆಗೆ ಪಿಟೀಲು ನುಡಿಸುತ್ತಿದ್ದ ವಿದ್ವಾಂಸರು ಮದರಾಸಿನ ಆಕಾಶವಾಣಿ ಕೇಂದ್ರದಲ್ಲಿ ಕೆಲಸದಲ್ಲಿದ್ದರು. ಒಂಬತ್ತೂವರೆ ಗಂಟೆಗೆ ತಮಗೆ ಆಕಾಶವಾಣಿಯಲ್ಲಿ ಕಾರ್ಯಕ್ರಮವಿರುವುದಾಗಿ ಅವರು ಜಗದ್ಗುರುಗಳಲ್ಲಿ ಬಿನ್ನವಿಸಿಕೊಂಡರು. ಜಗದ್ಗುರುಗಳಾದರೋ ಮಣಿ ಅಯ್ಯರರ ಗಾಯನ ಬಹಳ ಭಾವ ಪೂರ್ಣವಾಗಿ ನಡೆಯುತ್ತಿದ್ದುದಕ್ಕೆ ಭಂಗತರಲು ಇಷ್ಟ ಪಡಲಿಲ್ಲ. ಆದ್ದರಿಂದ, ಪಿಟೀಲು ವಿದ್ವಾಂಸರಿಗೂ ತೊಂದರೆಯಾಗಬಾರದೆಂದು ಯೋಚಿಸಿ, ಪಕ್ಕವಾದ್ಯವಿಲ್ಲದೆಯೇ ಸಂಗೀತ ಮುಂದುವರಿಯಲಿ ಎಂದು ಅಪ್ಪಣೆ ಮಾಡಿದರು. ಮಣಿ ಅಯ್ಯರ್ ಅವರು ತನ್ಮಯತೆಯಿಂದ ಹಾಡುತ್ತಿದ್ದುದಕ್ಕೆ ಇದ್ಕಿಂತ ಹೆಚ್ಚಿನ ಸಾಕ್ಷಿ ಬೇಕೆ?

ಪಾಶ್ಚಾತ್ಯ ಸಂಗೀತವನ್ನು ಹೋಲುವಂತಹ ಸ್ವರ ಸಮೂಹಗಳನ್ನು ಕರ್ನಾಟಕ ಸಂಗೀತದಲ್ಲೂ ಅಳವಡಿಸಿ ಅದನ್ನು ಕಚೇರಿಗಳಲ್ಲಿ ಹಾಡುವ ಮತ್ತು ನುಡಿಸುವ ಅಭ್ಯಾಸವೊಂದು ಆ ಕಾಲದಲ್ಲಿ ಬಳಕೆಯಲ್ಲಿತ್ತು. ಇದನ್ನು ’ಇಂಗ್ಲಿಷ್ ನೋಟ್’ ಎಂದೇ ಕರೆಯುವರು. ಮಣಿ ಅಯ್ಯರ್ ಅವರು ಇದನ್ನು ಹಾಡುತ್ತಿದ್ದ ಸೊಬಗೇ ಸೊಬಗು! ಬ್ಯಾಂಡ್ ಸಂಗೀತದ ಹುರುಪು ಮತ್ತು ಗತಿಯನ್ನು ಹೊಂದಿರುವ ಈ ಕಾರ್ಯಕ್ರಮವು ಅವರ ಪ್ರತಿ ಕಚೇರಿಯಲ್ಲೂ ಮಂಗಳ ಹಾಡುವುದಕ್ಕೆ ಮೊದು ಇರಲೇಬೇಕಾದ ಒಂದು ಅಂಶ ಎನ್ನುವಷ್ಟು ಜನಪ್ಇರಯವಾಗಿತ್ತು.

ಮಣಿ ಎಂದರೆ….

ಒಮ್ಮೆ ಮಣಿ ಅಯ್ಯರ್ ಅವರ ಸಂಗೀತ ಕಾರ್ಯಕ್ರಮ ಒಂದಕ್ಕೆ ಹಿರಿಯ ವಿದ್ವಾಂಸರಾದ ದಿವಂಗತ ಅರಿಯಕ್ಕುಡಿ ರಾಮಾನುಜ ಅಯ್ಯಂಗಾರ್ಯರು ಅಧ್ಯಕ್ಷತೆ ವಹಿಸಿದ್ದರು. ಆಗ, ಸಂಗೀತದ ವಿಷಯದಲ್ಲಿ ಮಣಿ ಅಯ್ಯರವರಿಗೆ ಇದ್ದ ಶ್ರದ್ಧೆಯನ್ನು ಕುರಿತು ತಮ್ಮ ಅಧ್ಯಕ್ಷ ಭಾಷಣದಲ್ಲಿ (ತಮಿಲಿನಲ್ಲಿ) ರೀತಿ ಹೇಳಿದರು: “ನಮ್ಮ ಮಣಿ ಅಯ್ಯರ್ ಹಾಡು ಹೆಚ್ಚು ಮನಿ (ಹಣ) ಕೇಳುವುದಿಲ್ಲ. ಹಾಡುವಾಗ ಮಣಿ (ಗಡಿಯಾರ)ಯನ್ನು ನೋಡುತ್ತಾ ಹಾಡುವುದಿಲ್ಲ. ಆದರೂ ಮಣಿಯಾಗಿ (ಮುದ್ದಾಗಿ) ಹಾಡುತ್ತಾರೆ.” ಈ ಮಾತುಗಳಲ್ಲಿ ’ಮಣಿ’ ಎಂಬ ಪದದ ಚಮತ್ಕಾರದ ಪ್ರಯೋಗದ ಜೊತೆಗೆ ಮಣಿ ಅಯ್ಯರ್ ಅವರ ಜನಪ್ರಿಯತೆಯ ಗುಟ್ಟೂ ಅಡಗಿದೆ.

ಬಿರುದು, ಸನ್ಮಾನ

ಮಣಿ ಅಯ್ಯರ್ರವರಿಗೆ ದಕ್ಷಿಣ ಭಾರತದ ಎಲ್ಲ ಊರುಗಳಲ್ಲೂ ಕಚೇರಿ ಮಾಡಿ ಖ್ಯಾತಿ ಪಡೆಯುವ ಅವಕಾಶಗಳು ದೊರೆತವು. ಕೀರ್ತಿ ಹೆಚ್ಚಾದಂತೆಲ್ಲಾ ಬಿರುದುಗಳೂ ಸನ್ಮಾನಗಳೂ ತಾವಾಗಿಯೇ ಅವರನ್ನು ಅರಸಿಕೊಂಡು ಬಂದವು. ೧೯೪೩ ರಲ್ಲಿ ತಂಜಾವೂರಿನ ರಸಿಕರು ಸಾರ್ವಜನಿಕ ಸಭೆಯೊಂದರಲ್ಲಿ ಅವರಿಗೆ ’ಗಾನ ಕಲಾಧರ’ ಎಂಬ ಬಿರುದನ್ನು ಕೊಟ್ಟರು. ಮುಂದೆ ೧೯೫೯ ರಲ್ಲಿ ಮದರಾಸಿನ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ’ಸಂಗೀತ ಕಲಾನಿಧಿ’ ಎಂಬ ಬಿರುದನ್ನು ಪಡೆದರು. ಇದನ್ನು ಹಿಂಬಾಲಿಸಿ ೧೯೬೦ ರಲ್ಲಿ ಭಾರತ ಸರ್ಕಾರದ ಪುರಸ್ಕಾರ ದೊರೆಯಿತು. ಅನಂತರ ಮದರಾಸಿನ ತಮಿಳು ಇಶೈ ಸಂಘ ತನ್ನ ವಾರ್ಷಿಕ ಸಮ್ಮೇಳನದಲ್ಲಿ ’ಇಶೈ ಪೇರರಿಜ್ಞರ್’ (ಸಂಗೀತ ಮಹಾವಿದ್ವಾಂಸ) ಎಂಬ ಬಿರುದಿನಿಂದ ಅವರನ್ನು ಗೌರವಿಸಿತು.

ಅಪಚಾರ ಮಾಡಬಾರದು

ಬೆಂಗಳೂರಿನಲ್ಲಿ ಶ್ರೀ ರಾಮನವಮಿ ಸಂಗೀತ ಉತ್ಸವದ ಸಂದರ್ಭ. ಮಣಿ ಅಯ್ಯರ್ ಅಮೋಘವಾಗಿ ಹಾಡುತ್ತಿದ್ದಾರೆ. ನಡುವೆ, ಉತ್ಸಾಹೀ ಶ್ರೋತೃವೊಬ್ಬರು ಎದ್ದು ನಿಂತು “ಪುರಂದರದಾಸರ ದೇವರನಾಮವನ್ನು ಹಾಡಿ” ಎಂದು ಕೂಗಿದರು. ಅವರ ನಡವಳಿಕೆಯಿಂದ ಬೇಸರಗೊಳ್ಳದೆ, ಮಣಿ ಅಯ್ಯರ್ ತಮಗೆ ದೇವರನಾಮ ಹಾಡಲು ಬರುವುದಿಲ್ಲವೆಂಬುದನ್ನು ಆತನಿಗೆ ನಯವಾಗಿ ತಿಳಿಸಿದರು. “ಪುರಂದರದಾಸರು ಸಂಗೀತದ ಪಿತಾಮಹರು ಎನಿಸಿಕೊಂಡವರು. ನಾನು ಬೆಳೆದ ವಾತಾವರಣದಲ್ಲಿ ನನಗೆ ಅವರ ರಚನೆಗಳನ್ನು ಕಲಿಯುವ ಅವಕಾಶ ಸಿಗಲಿಲ್ಲ. ಆ ಕೊರತೆ ನನಗೂ ಅರಿವಾಗುತ್ತಿದೆ. ಆದರೆ ಈಗ ನಾನು ದಕ್ಷರಾದವರಿಂದ ಅದನ್ನು ಕಲಿಯದೆ, ಕೇಳಿ ಬರೆದಿಟ್ಟು ಕೊಂಡು ಹಾಡಿದರೆ, ದಾಸರಿಗೂ ಅಪಚಾರ, ಕನ್ನಡ ನುಡಿಗೂ ಅಪಚಾರ. ಸರಿಯಾಗಿ ಕಲಿಯದೆ ಹಾಡುವುದು ಅಪಚಾರ. ಕ್ಷಮಿಸಿ, ಮುಂದೆ ಸರಿಯಾಗಿ ಕಲಿತು ಹಾಡಲು ಪ್ರಯತ್ನಿಸುತ್ತೇನೆ. ನಿಮಗೆ ಬೇಕಾದುದು ಕನ್ನಡ ಹಾಡಾದ ಪಕ್ಷದಲ್ಲಿ ನನ್ನ ಗುರು ಶ್ರೀ ಮುತ್ತಯ್ಯ ಭಾಗವತರಿಂದ ಕಲಿತ ಅವರದೇ ಕನ್ನಡ ರಚನೆಯನ್ನು ಹಾಡಬಲ್ಲೆ” ಎಂದರು. ’ಮೋಹನ ಕಲ್ಯಾಣಿ’ ರಾಗದ ’ಭುವನೇಶ್ವರಿಯ ನೆನೆ ಮಾನಸವೇ’ ಕೃತಿಯನ್ನು ಮನೋಜ್ಞವಾಗಿ ಹಾಡಿದರು.

ವ್ಯಕ್ತಿತ್ವ

ಮಣಿ ಅಯ್ಯರರ ಮೈಬಣ್ಣ ಬಿಳುಪು. ದುಂಡನೆಯ ಮುಖ. ಮುಗ್ಧನೋಟ. ಅಷ್ಟೇನೂ ಎತ್ತರವಲ್ಲದ ನಿಲುವು, ಖಾದಿಯ ಉಡುಪು, ನಗುಮುಖ, ಶಾಂತವಾದ, ನಿಧಾನವಾದ ನಡೆ-ನುಡಿ. ನಿರಾಡಂಬರ ವ್ಯಕ್ತಿ. ಯಾರ ಮನಸ್ಸನ್ನೂ ನೋಯಿಸುತ್ತಿರಲಿಲ್ಲ. ಇದರಿಂದಾಗಿಯೇ ’ಅಜಾತ ಶತ್ರು’ ಎಂದು ಹೆಸರು ಪಡೆದಿದ್ದರು. ಅಂದರೆ, ಆ ಕಾಲದ ಹಿರಿಯ ಕಿರಿಯ ವಿದ್ವಾಂಸರೂ, ಎಲ್ಲ ವರ್ಗಗಳ ಸಂಗೀತ ಪ್ರೇಮಿಗಳೂ ಅವರನ್ನು ಗೌರವಿಸಿ ವಿಶ್ವಾಸತೋರಿಸಿದರು. ಇವರಿಗೆ ಪಕ್ಕವಾದ್ಯ ನುಡಿಸದ ವಿದ್ವಾಂಸರೇ ಇಲ್ಲವೆನ್ನಬಹುದು. ಹಿರಿಯ, ಕಿರಿಯ, ಖ್ಯಾತ, ಅನಾಮ ಧೇಯ ಎಂಬ ಭೇದಭಾವವಿಲ್ಲದೆ, ಎಲ್ಲ ಪಕ್ಕವಾದ್ಯಗಾರರೊಡನೆ ಸಹಕರಿಸಿ, ಉತ್ಸಾಹದ ಮಾತುಗಳನ್ನಾಡುತ್ತಿದ್ದರು.

ಸಭಿಕರ ಕರತಾಡನ ಮತ್ತು ಮೆಚ್ಚುಗೆ ಅವರಿಗೂ ದೊರೆಯಲು ಅವಕಾಶ ಮಾಡಿಕೊಡುತ್ತಿದ್ದರು. ತಾವು ಸುಪ್ರಸಿದ್ಧ ಸಂಗೀತ ವಿದ್ವಾಂಸರಾಗಿದ್ದರೂ ವಿನಯಶೀಲ ರಾಗಿದ್ದರು.

ಸ್ವಯಂ ಶಿಕ್ಷಣ

ಇವರು ಸಂಗೀತಕ್ಕಾಗಿ ಶಾಲಾ ವಿದ್ಯಾಭ್ಯಾಸವನ್ನು ಚಿಕ್ಕಂದಿನಲ್ಲೇ ಬಿಡಬೇಕಾಯಿತು. ಆದರೂ ದೊಡ್ಡವರಾದ ಮೇಲೆ ಸ್ವಂತ ಪ್ರಯತ್ನದಿಂದ ತಮಿಳು ಮತ್ತು ಆಂಗ್ಲಭಾಷೆಗಳಲ್ಲಿ ಪರಿಶ್ರಮವನ್ನು ಪಡೆದರು. ವೃತ್ತ ಪತ್ರಿಕೆಗಳನ್ನು ತಪ್ಪದೇ ಓದುವುದರ ಮೂಲಕವೇ ಪ್ರಾಪಂಚಿಕ ಜ್ಞಾನವನ್ನು ಪಡೆದರು. ರಾಜಕೀಯ ಸುದ್ದಿಗಳನ್ನು ಬಹಳ ಆಸಕ್ತಿಯಿಂದ ಓದುತ್ತಿದ್ದರು. ಅವುಗಳ ಬಗ್ಗೆ ಕೂಲಂಕಷವಾಗಿ ವಿಮರ್ಶಿಸುತ್ತಲೂ ಇದ್ದರು. ಅವರ ದೃಷ್ಟಿಶಕ್ತಿ ಮಂದವಾದ ಮೇಲೂ, ಬೇರೆಯವರಿಂದ ಪತ್ರಿಕೆಗಳನ್ನು ಓದಿಸಿ ಸುದ್ದಿಗಳನ್ನು ತಿಳಿದುಕೊಳ್ಳುತ್ತಿದ್ದರು.

ತಮಿಳು ಸಾಹಿತ್ಯದಲ್ಲಿ ಅವರಿಗೆ ಅಪಾರ ಆಸಕ್ತಿ ಇದ್ದಿತು. ಅಂತೆಯೇ ಆಂಗ್ಲ ಸಾಹಿತ್ಯದಲ್ಲಿ ಬರ್ನಾಡ್ಷಾರ ಬರಗಳನ್ನು ಮೆಚ್ಚಿ ಓದುತ್ತಿದ್ದರು. ಅವರ ಮೆಚ್ಚಿನ ನಟ ಚಾರ್ಲಿ ಚಾಪ್ಲಿನ್. ಸಾಮಾನ್ಯವಾಗಿ ಚಲನಚಿತ್ರಗಳಿಗೆ ಹೋಗುವವರಲ್ಲದಿದ್ದರೂ ಚಾಪ್ಲಿನ್ರ ಚಿತ್ರಗಳೆಂದರೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ಸಮಯ ಸಿಕ್ಕಿದಾಗಲೆಲ್ಲ ಮದರಾಸಿನ ಸುಪ್ರಸಿದ್ಧ ಕಾನಿಮರಾ ಲೈಬ್ರಿಯಲ್ಲಿ ಕುಳಿತು “ಇಲುಸ್ಟ್ರೇಟೆಡ್ ಲಂಡನ್ ಟೈಂಸ್’ ಪತ್ರಿಕೆಯನ್ನು ಓದುವುದು ಯೌವನದಲ್ಲಿ ಅವರಿಗೆ ಬಲು ಪ್ರಿಯವಾದ ಕೆಲಸವಾಗಿದ್ದಿತು.

ಕ್ರಿಕೆಟ್ ಆಟದ ಬಗ್ಗೆ ತೀವ್ರ ಆಸಕ್ತಿಯನ್ನು ಅವರು ಬೆಳೆಸಿಕೊಂಡಿದ್ದರು. ಊಟ ತಿಂಡಿ ಕ್ಲುಪ್ತ, ಆದರೆ ಒಳ್ಳೆಯ ಅಭಿರುಚಿ ಅವರದು.

ದೇಶಭಕ್ತಿ

ಮಣಿ ಅಯ್ಯರ್ ಬಾಲ್ಯದಿಂದಲೂ ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ವಿವಿಧ ಮುಖಗಳನ್ನು ಗಮನಿಸುತ್ತಾ ಬಂದಿದ್ದರು. ಆ ವಾತಾವರಣ ಆಗಲೇ ರಾಷ್ಟ್ರಪ್ರೇಮದ ಬೀಜವನ್ನು ಅವರ ಮನಸ್ಸಿನಲ್ಲಿ ಬಿತ್ತಿತ್ತು. ಅವರು ದೊಡ್ಡವರಾದಂತೆ ಅವರ ರಾಷ್ಟ್ರಪ್ರೇಮವೂ ಸಹ ಮೊಳಕೆಯೊಡೆದು ಚಿಗುರಿತು. ಅವರು ಕಚೇರಿ ಮಾಡಲು ಪ್ರಾರಂಭಿಸಿದ ಮೇಲೆ ತಮ್ಮ ಭಾವನೆಗಳನ್ನು ಹೊರತರಲು ಅವರಿಗೆ ಅವಕಾಶಸಿಕ್ಕಿತು. ಪೂರ್ತಿಯಾಗಿ ಖಾದಿ ಬಟ್ಟೆಗಳನ್ನೇ ಉಡುವುದೆಂದು ನಿರ್ಧರಿಸಿ ಹಾಗೆಯೇ ಮಾಡುತ್ತಿದ್ದರು. ತಮ್ಮ ಸಂಗೀತ ಕಚೇರಿಗಳಲ್ಲಿ ದೇಶಭಕ್ತಿ ಗೀತೆಗಳನ್ನು ತಪ್ಪದೆ ಹಾಡಲಾರಂಭಿಸಿದರು. ಮುಖ್ಯವಾಗಿ ಸುಬ್ರಹ್ಮಣ್ಯಭಾರತಿಯರ ಸುಪ್ರಸಿದ್ಧ ತಮಿಳು ರಚನೆಗಳು ದೇಶಭಕ್ತಿಯನ್ನು ಉಕ್ಕಿಸುವಂತಹವು. ಅವನ್ನು ಅವರು ಭಾವಪೂರ್ಣವಾಗಿ ಹಾಡುತ್ತಿದ್ದರು. ಪಲ್ಲವಿಗೆ ಸಹ ರಾಷ್ಟ್ರೀಯ ಭಾವನೆಯನ್ನು ಸೂಚಿಸುವ ಸಾಹಿತ್ಯವನ್ನು ಆರಿಸಿಕೊಳ್ಳುತ್ತಿದ್ದರು.

ಸ್ನೇಹಪರತೆ

ಮಣಿ ಅಯ್ಯರವರು ಸ್ವಭಾವತಃ ಹೆಚ್ಚು ಮಾತನಾಡುವವರಲ್ಲ. ಅದರೆ ತಮ್ಮ ಮಿತ್ರರೊಡನೆಯೂ ಬಂಧುಗಳೊಡನೆಯೂ ಮಾತನಾಡುವಾಗ ಸರಳವಾಗಿ, ಸರಸವಾಗಿ, ಬಿಚ್ಚು ಮನಸ್ಸಿನಿಂದ ಮಾತನಾಡುತ್ತಿದ್ದರು. ಮಾತಿನ ನಡುವೆ ತಿಳಿ ಹಾಸ್ಯದ ಚಟಾಕಿಗಳನ್ನು ಹಾರಿಸುವುದರಲ್ಲಿ ನಿಸ್ಸೀಮರು. ಸ್ನೇಹಿತರು ಯಾವ ಸಮಯದಲ್ಲಿ ಕೇಳಿದರೂ ಬಿಗುಮಾನವಿಲ್ಲದೆ ಹಾಡುತ್ತಿದ್ದರು. ತಮಗೆ ಎಷ್ಟು ಬಿರುದು ಬಾವಲಿಗಳು ಬಂದರೂ ತಮಗಿಂತ ಹಿರಿಯ ವಿದ್ವಾಂಸರಿಗೆ ಗೌರವವನ್ನು ತೋರಿಸುತ್ತಿದ್ದರು. ಅವರು ಸಹಕಲಾವಿದರ ವಿಷಯದಲ್ಲಿ ಎಂದೂ ದೂಷಣೆಯನ್ನು ಮಾಡುತ್ತಿರಲಿಲ್ಲ.

ಒಂದು ಸಲ ಮೈಸೂರಿನಲ್ಲಿ ಅವರ ಕಚೇರಿ  ನಡೆಯುತ್ತಿತ್ತು. ಅವರು ಒಂದು ರಾಗವನ್ನು ವಿಸ್ತಾರವಾಗಿ ಆಲಾಪನೆ ಮಾಡಿದರು. ಪಿಟೀಲು ನುಡಿಸುತ್ತಿದ್ದ ಜನಪ್ರಿಯ ವಿದ್ವಾಂಸರೂ ಅವರನ್ನು ಹಿಂಬಾಲಿಸಿ ನುಡಿಸುತ್ತ ಬಂದರು. ಕೊನೆಯ ಭಾಗವನ್ನು ಹಾಡಿದ ಮೇಲೆ ಮಣಿ ಅಯ್ಯರ್ ಪಿಟೀಲಿನವರಿಗೆ ಸರದಿ ಬಿಡದೆ ಕೃತಿಯನ್ನು ಹಾಡತೊಡಗಿದರು. ಪಿಟೀಲಿನವರು ಇದರ ಬಗ್ಗೆ ಆಕ್ಷೇಪಿಸಲಿಲ್ಲ. ಆದರೆ ಆ ಪಿಟೀಲು ವಿದ್ವಾಂಸರ ತೀವ್ರ ಅಭಿಮಾನಿಯೊಬ್ಬನಿಗೆ ಇದು ಸಹಿಸಲಿಲ್ಲ. ತನ್ನ ಮೆಚ್ಚಿನ ಕಲಾವಿದರಿಗೆ ಗಾಯಕರು ಅನ್ಯಾಯ ಮಾಡಿಬಿಟ್ಟರು ಎಂದು ಆತನಿಗೆ ತೋರಿತೋ ಏನೋ ತಟ್ಟನೆ ಎದ್ದು ನಿಂತು, “ಪಿಟೀಲಿ ನವರಿಗೂ ಚಾನ್ಸ್ (ಅವಕಾಶ) ಕೊಡಿ. ಅವರ ವಾದನವನ್ನೂ ಕೇಳುವುದಕ್ಕೆ ನಾವು ಬಂದಿರುವುದು” ಎಂದು ಆಕ್ರೋಶದಿಂದ ಕೇಳಿದನು. ಮಣಿ ಅಯ್ಯರ್ ಆತನ ಮೇಲೆ ಅಸಮಾಧಾನಗೊಳ್ಳಲಿಲ್ಲ. ಅವನನ್ನು ನಿರ್ಲಕ್ಷಿಸಲೂ ಇಲ್ಲ. ಅವನಿಗೆ ಸಮಾಧಾನದ ಮಾತುಗಳನ್ನು ಹೇಳಿದರು. “ಈ ಪಿಟೀಲು ವಿದ್ವಾಂಸರಿಗೆ ನಾನು ಚಾನ್ಸ್ ಕೊಡುವುದೆಂದರೇನು? ಅವರು ನನಗಿಂತ ವಯಸ್ಸಿನಲ್ಲಿ ಚಿಕ್ಕವರು. ಉತ್ಸಾಹ ತುಂಬಿದ ತರುಣರು. ಅವರ ಸಂಗೀತಜ್ಞಾನ ಅಪಾರವಾದುದು. ನಾದ ಸರಸ್ವತಿ ಅವರಿಗೆ ಪೂರ್ಣವಾಗಿ ಒಲಿದಿದ್ದಾಳೆ. ಅವರ ವಾದನಕ್ಕೆ ಸರಿಯಾಗಿ ನನ್ನ ಹಾಡಿಕೆಯೂ ನಿಮಗೆ ಮೆಚ್ಚುಗೆಯಾಗುವಂತೆ ಅವರಲ್ಲವೇ ನನಗೆ ಅವಕಾಶಕೊಡಬೇಕು?” ಈ ಮಾತುಗಳನ್ನು ಕೇಳಿ, ಪಿಟೀಲು ವಿದ್ವಾಂಸರನ್ನೊಳಗೊಂಡು ಇಡೀ ಸಭೆಯೇ ನಗೆಗಡಲಲ್ಲಿ ಮುಳುಗಿತು.

‘ಅವರ ಸಂಗೀತಜ್ಞಾನ ಅಪಾರವಾದದು’

ಶ್ರೋತೃಗಳನ್ನು ತೃಪ್ತಿಪಡಿಸುವುದನ್ನು ತಮ್ಮ ಮೊದಲ ಕರ್ತವ್ಯವಾಗಿ ಬಗೆದ ಅವರು, ಅದಕ್ಕಾಗಿ ತಮಗೆ ಶ್ರಮವಾದರೂ ಪರವಾಗಿಲ್ಲವೆಂದು ಭಾವಿಸುತ್ತಿದ್ದರು. ಮಳೆಗಾಳಿ ಏನೇ ಬಂದರೂ ಶ್ರೋತೃಗಳು ಅದನ್ನು ಲೆಕ್ಕಿಸದೆ ಕೇಳಲು ಕಾದಿರುವಾಗ ಹಾಡಿಕೆಯನ್ನು ನಿಲ್ಲಿಸದೆ ಮುಂದುವರೆಸುವುದೇ ತಾವು ಶ್ರೋತೃಗಳಿಗೆ ತೋರುವ ಗೌರವ ಎನ್ನುತ್ತಿದ್ದರು.

ಆಶಾವಾದಿ

ಮಣಿ ಅಯ್ಯರ್ರವರ ಆರೋಗ್ಯ ಚೆನ್ನಾಗಿರಲಿಲ್ಲ. ಇದರಿಂದ ಅವರ ಜೀವನ ಸಂತೋಷದಿಂದ ಕೂಡಿರಲಿಲ್ಲ. ಆದರೆ ಅವರು ಅದಕ್ಕಾಗಿ ಜುಗುಪ್ಸೆಗೊಳ್ಳಲಿಲ್ಲ. ಜೀವಿಸುವುದರಲ್ಲಿ ಅವರಿಗೆ ಅತ್ಯಂತ ಆಸಕ್ತಿ ಇತ್ತು. ಜೀವನ ದೇವರು ನಮಗೆ ಕೊಟ್ಟಿರುವ ಒಂದು ಸುಂದರವಾದ ವರ ಎಂದು ಅವರು ಭಾವಿಸುತ್ತಿದ್ದರು. ಎಂತಹ ಕಷ್ಟ ಬಂದಾಗಲೂ ಎದೆಗುಂದದೆ ಅದನ್ನು ಎದುರಿಸಬೇಕೆಂಬುದು ಅವರ ವಾದ. ರಾಗಗಳ ಪೈಕಿಯೂ ಅವರು ಉತ್ಸಾಹವನ್ನು, ಹರ್ಷವನ್ನೂ ಮೂಡಿಸುವ ರಾಗಗಳನ್ನೇ ಹಾಡಲು ಇಷ್ಟಪಡುತ್ತಿದ್ದರು. ಅದೇ ಕಾರಣಕ್ಕಾಗಿಯೋ ಏನೋ ’ಮುಖಾರಿ’, ’ಆಹಿರಿ’, ’ಘಂಟಾ’, ಮುಂತಾದ ರಾಗಗಳನ್ನು ಅವರು ಕಚೇರಿಗಳಲ್ಲಿ ಹಾಡುತ್ತಿರಲಿಲ್ಲ.

’ಜೀವನ ನಶ್ವರ’, ’ನಾಳೆ ಏನಾಗುವುದೆಂದು ಬಲ್ಲವರು ಯಾರು?’ ಮುಂತಾದ ವೈರಾಗ್ಯದ ಮಾತುಗಳನ್ನೊಳಗೊಂಡ ಸಾಹಿತ್ಯವನ್ನು ಅವರು ಕಚೇರಿಗಳಲ್ಲಿ ಹಾಡುತ್ತಿರಲಿಲ್ಲ. ಸಂಗೀತ ಕಿವಿಗೆ ಇಂಪು. ಕೇಳಲು ಬರುವ ಜನರೂ ಕೆಲಹೊತ್ತು ತಮ್ಮ ಕಷ್ಟಗಳನ್ನು ಮರೆತು ಸಂತೋಷ ಪಡೆಯಲು ಬರುತ್ತಾರೆ. ಅವರಿಗೆ ಸ್ವಲ್ಪವಾದರೂ ಮನರಂಜನೆ ನೀಡುವುದೇ ಸಂಗೀತಗಾರರ ಕರ್ತವ್ಯವೆಂದು ಅವರು ನಂಬಿದ್ದರು. ತ್ಯಾಗರಾಜರ ಕಲ್ಯಾಣಿ ರಾಗದ ಸುಪ್ರಸಿದ್ಧ ರಚನೆ ’ನಿಧಿಚಾಲ ಸುಖಮಾ’ವನ್ನು ಅವರು ಒಮ್ಮೆಯೂ ಹಾಡಲಿಲ್ಲ. ಇದೇಕೆ ಹೀಗೆ ಎಂದು ಯಾರಾದರೂ ಅವರನ್ನು ಪ್ರಶ್ನಿಸಿದರೆ, ಅವರು “ನಾನು ವೃತ್ತಿಯಾಗಿ ಸಂಗೀತವನ್ನು ಸ್ವೀಕರಿಸಿದವನು. ಪ್ರತಿ ಕಚೇರಿಗೂ ನಿಗದಿಯಾದ ಸಂಭಾವನೆ ತೆಗೆದುಕೊಳ್ಳುತ್ತೇನೆ. ಹಾಗಿರುವಾಗ ’ಐಶ್ವರ್ಯ ಏನು ಸುಖ ಸುಖ ಕೊಟ್ಟೀತು’ ಎನ್ನುವ ಅರ್ಥ ಬರುವ ಹಡನ್ನು ಸಭೆಯಲ್ಲಿ ಹಾಡುವುದು ಆತ್ಮವಂಚನೆಯಾದೀತು” ಎನ್ನುತ್ತಿದ್ದರು. ಸಂಗೀತಸಭೆಯ ಕಚೇರಿಗಳು, ಮದುವೆ ಮುಂಜಿ ಕಚೇರಿಗಳು, ದೇವಸ್ಥಾನದ ಉತ್ಸವ ಕಚೇರಿಗಳು, ಹೀಗೆ ಹಲವು ಬಗೆಯ ವೇದಿಕೆಗಳಲ್ಲಿ ಮಣಿ ಅಯ್ಯರ್ ಹಾಡುತ್ತಿದ್ದರು. ಸಮಾಜಕ್ಕೆ ಉಪಕಾರವಾಗುವಂತಹ ಕೆಲಸ ಮಾಡುವವರಿಗಾಗಿ ಸಹಾಯಾರ್ಥ ಕಚೇರಿ ನಡೆಸಿ ಬಂದ ಹಣವನ್ನು ಅವರಿಗೆ ಕೊಡುತ್ತಿದ್ದರು.

ಶ್ರೋತೃಗಳಿಗೆ ಸುಲಭವಾಗಿ ಅರ್ಥವಾದೀತೆಂಬ ಕಾರಣದಿಂದ ಅವರಿಗೆ ತಮಿಳು ರಚನೆಗಳಲ್ಲಿ ವಿಶೇಷ ಅಭಿಮಾನವಿತ್ತು. ಪಾಪನಾಶಂ ಶಿವನ್, ಸುಬ್ರಹ್ಮಣ್ಯ ಭಾರತಿ, ಗೋಪಾಲಕೃಷ್ಣ ಭಾರತಿ ಮುಂತಾದವರ ರಚನೆಗಳನ್ನು ಜೀವತುಂಬಿ ಹಾಡುತ್ತಿದ್ದರು. ಮದರಾಸಿನಲ್ಲಿ ನಂತರ ಬಹಳ ಬಿರುಸಾಗಿ ಆಚರಣೆಗೆ ಬಂದ ’ತಮಿಲು ಇಶೈ’ ಚಳವಳಿಗೆ, ತುಂಬ ಹಿಂದೆಯೇ ಸ್ಫೂರ್ತಿ ಕೊಟ್ಟವರು ಮಣಿ ಅಯ್ಯರ್ ಎಂದು ಹೇಳಬಹುದು. ಮುಖ್ಯವಾಗಿ ಅವರು ಹಾಡುತ್ತಿದ್ದ ’ಕಾಣಕ್ಕಣ್ ಕೋಡಿವೇಡುಂ’ ಎಂಬ ಕಾಂಬೋಧಿ ಮತ್ತು ತೋಡಿ ರಾಗಗಳು ಅವರಿಗೆ ಬಲು ಪ್ರಿಯವಾದವು.  ಅವೆರಡನ್ನೂ ಹಾಡುವಾಗ ಮನತುಮಬಿ ಹಾಡುತ್ತಿದ್ದರು.

ನಡೆದು ಬಂದ ದಾರಿ

ಮಣಿ ಅಯ್ಯರಿಗೆ ಅಸಾಧಾರಣ ಶಾರೀರ ಸಂಪತ್ತು ಇತ್ತೆಂದು ಹೇಳುವಂತಿಲ್ಲ. ಪರಿಣಿತರಾದ ಹಿರಿಯ ಗುರುಗಳಿಮದ ಅಪಾರವಾದ ಸಂಗೀತ ಜ್ಞಾನವನ್ನು ಪಡೆದು ಕೊಂಡಿದ್ದರು ನಿಜ ಅವರುಗಳ ಬಳಿ ಗುರುಕುಲವಾಸ ಮಾಡಿ, ಸತತವಾಗಿ ಅಭ್ಯಾಸ ಮಾಡಿ, ಕಲಿತ ಕಲೆಯನ್ನು ಹದ ಮಾಡಿಕೊಂಡಿದ್ದರು. ಆದರೆ ಕಚೇರಿ ಮಾಡುವ …..ಮದಲ್ಲಿ ಯಾರನ್ನೂ ಅನುಸರಿಸಲು ಅವರು ಪ್ರಯತ್ನಿಸಲಿಲ್ಲ. ಅವರ ಪ್ರಗತಿಯ ದಾರಿ ಬಹಳ ದುರ್ಗಮವಾಗಿಯೇ ಇತ್ತು. ಅವರು ಕಚೇರಿ ಮಾಡತೊಡಗಿದ ಸಮಯದಲ್ಲಿ ಆಗಲೇ ಅನೇಕ ಹಿರಿಯ ವಿದ್ವಾಂಸರು ತಮ್ಮ ತಮ್ಮ ಶೈಲಿಗಳನ್ನು ಜನರಿಗೆ ಪರಿಚಯ ಮಾಡಿಕೊಟ್ಟು ಕೀರ್ತಿ ಪಡೆದು ಉಚ್ಚ ಶ್ರೇಣಿಯಲ್ಲಿದ್ದರು. ಅವರ ನಡುವೆ ತಾವೂ ಒಂದು ವಿಶಿಷ್ಟ ಸ್ಥಾನವನ್ನು ಪಡೆದು ಜನರ ಮೆಚ್ಚುಗೆಗೆ ಪಾತ್ರರಾಗಬೇಕಾದರೆ ತಮ್ಮ ಶೈಲಿ ಅವರೆಲ್ಲರ ಶೈಲಿಗಳಿಗಿಂತ ಭಿನ್ನವಾಗಿರಬೇಕೆಂಬುದರ ಆವಶ್ಯಕತೆಯನ್ನು ಮಣಿ ಅಯ್ಯರ್ ಮನಗಂಡರು. ಆದರೆ ಭಿನ್ನವಾಗಿರಬೇಕೆಂದ ತಾವು ಹಿಡಿಯುವ ದಾರಿಯು ಶಾಸ್ತ್ರ ಮತ್ತು ಸಂಪ್ರದಾಯಗಳಿಗೆ ವಿರುದ್ಧವಾಗಿ ಇರಬಾರದು ಎಂಬುದನ್ನೂ ಅವರು ಮರೆಯಲಿಲ್ಲ.

ತಮ್ಮ ಕಂಠದ ಸಾಧ್ಯಾಸಾಧ್ಯತೆಗಳು ಏನೆಂಬುದನ್ನು ಮಣಿ ಅಯ್ಯರ್ ಚೆನ್ನಾಗಿ ಅರಿತಿದ್ದರು. ಸುಲಭಸಾಧ್ಯವಾದ ಶ್ರುತಿಯನ್ನಿಟ್ಟುಕೊಂಡು ಮಂದ್ರಸ್ಥಾಯಿ ಸಂಚಾರಗಳಿರುವ ಹಾಡುಗಳನ್ನೇ ಸಾಮಾನ್ಯವಾಗಿ ಆರಿಸಿಕೊಲ್ಳುತ್ತಿದ್ದರು. ಕಿವಿಗೆ ಹಿತವಾಗಿ ಕೇಳುವವರಿಗೆ ಅರ್ಥವಾಗುವಂತೆ, ತೃಪ್ತಿಕೊಡುವಂತೆ ಹಾಡುತ್ತಿದ್ದರು. ಆ ಶೈಲಿಯ ಆಕರ್ಷಣೆಯೇ ಅವರನ್ನು ಬಹಳ ಬೇಗನೆ ಅಗ್ರಸ್ಥಾನಕ್ಕೆ ತಂದಿತು. ಕಾಲೇಜು ವಿದ್ಯಾರ್ಥಿಗಳೂ, ತರುಣ ಪೀಳಿಗೆಯವರೂ, ಹಳ್ಳಿಯವರೂ ಸಹ ಶಾಸ್ತ್ರೀಯ ಕರ್ನಾಟಕ ಸಂಗೀತದಲ್ಲಿ ಆಸಕ್ತಿ ತೋರಿಸುವಂತೆ ಮಾಡಲು ಮಣಿ ಅಯ್ಯರ್ ಅವರ ಸಂಗೀತವೂ ತಕ್ಕ ಮಟ್ಟಿಗೆ ಕಾರಣವಾಯಿತು.

ಶಿಕ್ಷಣ ವಿಧಾನ

ಅವರು ತಮ್ಮ ಶಿಷ್ಯರಿಗೆ ಕಲಿಸುವಾಗಲೂ ಲಲಿತವಾದ, ರಂಜಕವಾದ ರೀತಿಯಲ್ಲಿ ಹೇಳಿಕೊಡುತ್ತಿದ್ದರು. ಸಾಮಾನ್ಯವಾಗಿ ಸಂಗೀತ ವಿದ್ಯಾರ್ಥಿಗಳಿಗೆ ಬೇಸರ ತರಿಸುತ್ತಿದ್ದ ಆರಂಭ ಪಾಟಗಳನ್ನೂ ಸ್ವಾರಸ್ಯವಾಗಿ ಕಾಣುವಂತೆ ಹೇಳಿಕೊಡುತ್ತಿದ್ದರು. ಯಾವುದಾದರೂ ರಾಗವನ್ನು ತೆಗೆದುಕೊಂಡರೆ, ಅದರ ಮುಖ್ಯ ಅಂಶಗಳು ಸ್ಪಷ್ಟವಾಗುವಂತೆ ತಾವೇ ಹಾಡಿ ತೋರಿಸಿ, ಕೀರ್ತನೆ ಹೇಳಿಕೊಡುವ ವೇಳೆಗೆ ಆ ರಾಗದ ಪರಿಚಯ ಪೂರ್ತಿಯಾಗಿ ಆಗಿರುವಂತೆ ಮಾಡುತ್ತಿದ್ದರು. ಇವರ ಶಿಷ್ಯರ ಪೈಕಿ ವಿಶೇಷ ಕೀರ್ತಿ ಪಡೆದವರೆಂದರೆ, ರೈಲ್ವೆ ಅಪಘಾತದಲ್ಲಿ ಅಕಾಲಮೃತ್ಯುವಿಗೆ ತುತ್ತಾದ ಶ್ರೀಮತಿ ಸಾವಿತ್ರ ಗಣೇಶನ್, ಇವರ ಸೋದರಳಿಯನಾದ ಟಿ.ವಿ. ಶಂಕರನಾರಾಯಣನ್ ಮತ್ತು ತಿರುವೆಂಗಾಡು ಜಯರಾಮನ್.

ನಾದಯೋಗಿ

ಮಣಿ ಅಯ್ಯರ್ ಸಂಗೀತವನ್ನು ವೃತ್ತಿಯಾಗಿ ಸ್ವೀಕರಿಸಿ ಯಶಸ್ವಿಯಾದ ಕೆಲವೇ ವರ್ಷಗಳಲ್ಲಿ ಅವರ ತಂದೆ ತೀರಿಕೊಂಡರು. ವೃತ್ತಿಗೆ ತಕ್ಕ ಪ್ರೋತ್ಸಾಹ ಸಿಗಲೆಂದು ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಮಣಿ ಅಯ್ಯರ್ ಮಧುರೆಯಿಂದ ಮದರಾಸಿಗೆ ಹೋಗಿ ನೆಲೆಸಿದರು. ಅಲ್ಲೇ ಒಂದು ಮನೆಯನ್ನು ತಮ್ಮ ವಾಸಕ್ಕೆಂದು ಕಟ್ಟಿಸಿದರು.

ದುರ್ದೈವವಶಾತ್ ಬಾಲ್ಯದಲ್ಲಿಯೇ ಒಂದು ಭೀಕರ ರೋಗವು ಅವರನ್ನು ಆವರಿಸಿತು. ವೈದ್ಯಕಿಯ ಅನುಕೂಲಗಳ ಬಗ್ಗೆಯಾಗಲಿ, ರೋಗದ ಗಂಭೀರತೆಯ ಬಗ್ಗೆಯಾಗಲಿ ಹೆಚ್ಚಿನ ತಿಳುವಳಿಕೆಯಿಲ್ಲದ ಕಾರಣ ಅದನ್ನು ನಿರ್ಲಕ್ಷಿಸಿದರು. ಆದರೆ ಯೌವನದಲ್ಲಿ ಕಾಲಿಡುವಾಗಲೇ ತಮ್ಮ ಆರೋಗ್ಯದ ಮೇಲೆ ಇದರ ಪ್ರಭಾವ ಏನು ಎಂದು ಅವರಿಗೆ ಅರಿವಾಯಿತು. ತಾವು ಮದುವೆಯಾಗುವುದಿಲ್ಲ ಎಂದು ತೀರ್ಮಾನಿಸಿಬಿಟ್ಟರು. ನಾದೋಪಾಸನೆಯಲ್ಲೇ ತಮ್ಮ ಆಯುಷ್ಯವನ್ನೆಲ್ಲ ಕಳೆದರು. ತಮ್ಮ ಸಹೋದರಿಯನ್ನು ಅವಳ ಪತಿ ವೇಂಬು ಅಯ್ಯರರನ್ನೂ ತಮ್ಮೊಡನೆಯೇ ಇರಿಸಿಕೊಂಡರು. ಅವರಿಗೆ ವೇಂಬು ಅಯ್ಯರ್ ಅಂಗರಕ್ಷಕರಂತೆ ನೆರವಾಗುತ್ತಿದ್ದರು. ರೋಗವು ತೀವ್ರಗೊಂಡು, ಮಣಿ ಅಯ್ಯರಿಗೆ ದೃಷ್ಟ ಮಂದವಾದ ಮೇಲೆ, ಅವರೊಡನೆ ಊರೂರಿಗೆ ಹೋಗಿ, ವೇದಿಕೆಗೆ ಅವರನ್ನು ಕೈ ಹಿಡಿದು ಕರೆದುಕೊಂಡು ಹೋಗಿ ಕುಳ್ಳಿರಿಸಿ ಸಹಾಯಕ್ಕೆ ಹಿಂಬದಿಯಲ್ಲೂ ಹಾಡುತ್ತಿದ್ದರು. ಇವರ ಮಗ ಶಂಕರ ನಾರಾಯಣನ್ ಮಣಿ ಅಯ್ಯರರ ಪಟ್ಟ ಶಿಷ್ಯನೂ ಆಸ್ತಿಗೆ ಉತ್ತರಾಧಿಕಾರಿಯೂ ಆದರು.

ಮಣಿ ಅಯ್ಯರ್ ಅವರು ಕಚೇರಿಗಳ ಮೂಲಕ ಬೇಕಾದಷ್ಟು ಹಣ ಗಳಿಸಿದರು. ಆದರೂ ಸರಳ ಜೀವನವನ್ನು ನಡೆಸಿದರು. ಯಾರು ಕರೆದರೂ ಒಲ್ಲೆನೆನ್ನದೆ ಹೋಗಿ ಹಾಡುತ್ತಿದ್ದರು. ಹೀಗೆ ಸುಮಾರು ನಲವತ್ತ ನಾಲ್ಕು ವರ್ಷಗಳ ಕಾಲ ಕರ್ನಾಟಕ ಸಂಗೀತದ ಸವಿಯನ್ನು ದೇಶದ ಮೂಲೆ ಮೂಲೆಗೂ ಹರಡಿ ಸಂಗೀತವೇ ಒಂದು ಜೀವನ ಮಾರ್ಗ ಮತ್ತು ತಪಸ್ಸೆಂದು ತಿಳಿದು ಕಲಾಸೇವೆ ಮಾಡಿದ ಮಣಿ ಅಯ್ಯರ್ ೧೯೬೮ ನೇ ಇಸವಿ ಜೂನ್ ಎಂಟರಂದು ತಮ್ಮ ಐವತ್ತಾರನೆಯ ವಯಸ್ಸಿನಲ್ಲಿ ನಾದಬ್ರಹ್ಮನಲ್ಲಿ ಐಕ್ಯರಾದರು.

ಮಧುರೆ ಮಣಿ ಅಯ್ಯರವರು ನಿಜವಾದ ನಾದ ಯೋಗಿ, ಒಬ್ಬ ವ್ಯಕ್ತಿಯ ಜೀವನವು ಪ್ರಕೃತಿಯ ಆಘಾತಕ್ಕೆ ಒಳಪಟ್ಟಾಗಲೂ, ದೃಢ ಆತ್ಮವಿಶ್ವಾಸದಿಂದ ಅದನ್ನು ಎದುರಿಸಿ, ಆತ್ಮತೃಪ್ತಿಯನ್ನು ಹೊಂದಿ ಇತರರನ್ನೂ ತೃಪ್ತಿ ಪಡಿಸಿ ಕೀರ್ತಿ ಪಡೆಯಬಹುದೆಂಬುದಕ್ಕೆ ಮಣಿ ಅಯ್ಯರ್ ರವರ ಜೀವನ ಒಂದು ಉತ್ತಮ ನಿದರ್ಶನ. ಕರ್ನಾಟಕ ಸಂಗೀತಕ್ಕೆ ಅವರು ಸಲ್ಲಿಸಿದ ಸೇವೆ ಅಪಾರವಾದುದು.

ಕರ್ನಾಟಕ ಸಂಗೀತದ ಇತಿಹಾಸದಲ್ಲಿ ಮಣಿ ಅಯ್ಯರ್ ಅವರ ಹೆಸರು ಚಿರಸ್ಥಾಯಿಯಾದುದು. ಮುಂದಿನ ಪೀಳಿಗೆಯ ಗಾಯಕರಿಗೆ ಅವರ ಕಚೇರಿಗಳ ಧ್ವನಿಮುದ್ರಣಗಳು ಎಂದಿಗೂ ಮಾರ್ಗದರ್ಶಿಯಾಗಿರುತ್ತವೆ.