‘ಹಲಸಂಗಿ’ ಎಂಬ ಗ್ರಾಮವನ್ನು ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ಚಿರಸ್ಮರಣೀಯವಾಗುವಂತೆ ಅಂಕಿತಗೊಳಿಸಿದವರು ಮಧುರ ಚನ್ನರು. ಹಲಸಂಗಿ  ಮಧುರ ಚನ್ನರ ಕರ್ಮಭೂಮಿ, ಯೋಗಭೂಮಿ ಮತ್ತೆ  ಅರ್ಧಶತಮಾನಕ್ಕೂ ಹಿಂದೆ ಈ ಹೊತ್ತಿನಂತೆ ಯಾವ ಸಂಪರ್ಕ ಸಾಧನಗಳೂ ಇಲ್ಲದಿದ್ದ ಕಾಲದಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಂದ ಮಧುರ ಚನ್ನರು ಹೊಸ ಎಚ್ಚರವನ್ನು ಹುಟ್ಟಿಸಿದ ಪ್ರಯೋಗ ಭೂಮಿ. ಕೇವಲ ಮುಲ್ಕಿ ಪರೀಕ್ಷೆಯನ್ನಷ್ಟೆ ಮಾಡಿಕೊಂಡ ಈ ವ್ಯಕ್ತಿ, ಸ್ವಯಂ ಅಧ್ಯಯನದಿಂದ ಮೈಗೂಡಿಸಿಕೊಂಡ ತಿಳಿವು ವಿಪುಲವಾದದ್ದು. ವೇದೋಪನಿಷತ್ತುಗಳನ್ನು, ಭಾರತೀಯ  ಹಾಗೂ ಪಾಶ್ಚಾತ್ಯ ತತ್ವಶಾಸ್ತ್ರವನ್ನು ಹಾಗೂ ಶ್ರೀ ಅರವಿಂದರ ಬರೆಹಗಳನ್ನು ಮೂಲದಲ್ಲಿಯೇ ಓದಿ ಕರಗತ ಮಾಡಿಕೊಳ್ಳುವಷ್ಟು ಪರಿಣತಿಯನ್ನು ಪಡೆದುಕೊಂಡ ಮಧುರ ಚನ್ನರು ಬದುಕಿನ ಉದ್ದಕ್ಕೂ ಅಧ್ಯಾತ್ಮ ಸಾಧನೆಯಲ್ಲಿ ತೊಡಗಿಕೊಳ್ಳುವ ಅಂತರ್ಮುಖ ಪ್ರವೃತ್ತಿಯುಳ್ಳವರಾದರೂ, ಹಲಸಂಗಿಯಂಥ ಗ್ರಾಮದ ಪರಿಸರದಲ್ಲಿ ಹೊಸ ಸಾಂಸ್ಕೃತಿಕ ಎಚ್ಚರವನ್ನು ಹುಟ್ಟಿಸುವುದರಲ್ಲಿಯೂ ಕ್ರಿಯಾಶೀಲವಾಗಿ ದುಡಿದ ಕ್ರಮ ಆಶ್ಚರ್ಯಕರವಾಗಿದೆ. ೧೯೨೧ರಲ್ಲಿ ಪ್ರಾರಂಭವಾದ  ಧಾರವಾಡದ ಬೇಂದ್ರೆಯವರ ಗೆಳೆಯರ ಗುಂಪಿಗೆ ಸಮಾನಾಂತರವಾಗಿ, ೧೯೨೨ರಲ್ಲಿ ಮಧುರಚನ್ನರು ‘ಹಲಸಂಗಿಯ ಗೆಳೆಯರ ಗುಂಪನ್ನು’ ಪ್ರಾರಂಭ ಮಾಡಿ  ಹಲಸಂಗಿಯಲ್ಲೊಂದು ವಾಚನಾಲಯವನ್ನು ಸ್ಥಾಪಿಸಿದರು; ‘ಮೊಗ್ಗು’ ಮತ್ತು ‘ವಿಶ್ವಾಮಿತ್ರ’ ಎಂಬ ಹೆಸರಿನ ಕೈ ಬರೆಹದ ಪತ್ರಿಕೆಗಳನ್ನು ಪ್ರಾರಂಭಿಸಿದರು; ಜನರ ಮೂಢನಂಬಿಕೆಗಳನ್ನು ಹೋಗಲಾಡಿಸಿ ಅವರಲ್ಲಿ ವೈಚಾರಿಕತೆಯನ್ನೆಚ್ಚರಿಸುವ ಕಾರ್ಯಕ್ರಮಗಳನ್ನು ರೂಪಿಸಿದರು; ಶ್ರೀ ರಾಮಕೃಷ್ಣ ವಿವೇಕಾನಂದರ ಜನ್ಮ ದಿನೋತ್ಸವಗಳನ್ನೇರ್ಪಡಿಸಿದರು; ಶ್ರೀ ಅರವಿಂದರ ವಿಚಾರಗಳನ್ನು ಪ್ರಸಾರ ಮಾಡಲು ‘ಅರವಿಂದ ಮಂಡಲ’ವನ್ನು ಪ್ರಾರಂಭಿಸಿದರು;  ನಾಡಹಬ್ಬವನ್ನೇರ್ಪಡಿಸಿ ಕರ್ನಾಟಕದ ಅಂದಿನ ದೊಡ್ಡ ದೊಡ್ಡ ಸಾಹಿತಿಗಳನ್ನು ಈ ಗ್ರಾಮಕ್ಕೆ ಬರಮಾಡಿಕೊಂಡರು; ‘ಅರವಿಂದ ಗ್ರಂಥಮಾಲೆ’ಯ ಮೂಲಕ ಪ್ರಕಟಣ ಕಾರ‍್ಯವನ್ನು ಕೈಕೊಂಡರು; ತಾವೇ ಅನನ್ಯವಾದ ಅನುಭಾವ ಕಾವ್ಯವನ್ನು ಸೃಜಿಸಿ, ಕನ್ನಡದ ಸಹೃದಯರ ಗಮನ ಮತ್ತು ಗೌರವಗಳನ್ನು ಗೆದ್ದು ಕೊಂಡರು. ಈ ಎಲ್ಲ ಕ್ರಮಗಳಿಂದಾಗಿ ಈ ದಿನ ಹಲಸಂಗಿ ಎಂಬ ಗ್ರಾಮ ಕರ್ನಾಟಕದ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸ್ಮರಣೆಯಾಗಿ ಜನಮನದಲ್ಲಿ ಸ್ಥಾಯಿಯಾಗಿದೆ. ಅಂದು ಮಧುರ ಚನ್ನರು ಹುಟ್ಟಿಸಿದ ಸಾಂಸ್ಕೃತಿಕ ಎಚ್ಚರವು ಇಂದಿಗೂ ಜೀವಂತವಾಗಿ ಅಲ್ಲಿ ಮುಂದುವರಿಯುತ್ತಿದೆ ಹಾಗೂ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ.

ಕನ್ನಡ ನವೋದಯ ಸಾಹಿತ್ಯವನ್ನು ಕುರಿತು ಮಾತನಾಡುವಾಗ ಸಾಹಿತ್ಯ ಚರಿತ್ರಕಾರರು ಮುಖ್ಯವಾಗಿ ಮೂರು ಕೇಂದ್ರಗಳನ್ನು ಗುರುತಿಸುತ್ತಾರೆ; ಒಂದು ಆಚಾರ್ಯ ಬಿ.ಎಂ.ಶ್ರೀಯವರು ತಮ್ಮ ‘ಇಂಗ್ಲಿಷ್ ಗೀತಗಳು’ ಮೂಲಕ ಪ್ರಾರಂಭಿಸಿದ ಮೈಸೂರು ವಲಯದ ಒಂದು ಕೇಂದ್ರ. ಮಾಸ್ತಿ, ಡಿವಿಜಿ, ಪುತಿನ, ಕುವೆಂಪು, ಕೆಎಸ್.ನ. ಇವರು ಈ ಕೇಂದ್ರದ ಪ್ರೇರಣೆಗೆ ಒಳಗಾದವರು, ಎರಡನೆಯದು ದಕ್ಷಿಣ ಕನ್ನಡ ಜಿಲ್ಲೆಯ ಗೋವಿಂದ ಪೈ, ಪಂಜೆ, ಕಡೆಂಗೋಡ್ಲು ಶಂಕರ ಭಟ್ಟ ಅವರ ಮಂಗಳೂರು ಕೇಂದ್ರ; ಮೂರನೆಯಂದು ಬೇಂದ್ರೆ-ಗೋಕಾಕ-ಮುಗುಳಿ-ಆನಂದಕಂದ ಇವರನ್ನೊಳಗೊಂಡ ಗೆಳೆಯರ ಗುಂಪಿಂದ ಧಾರವಾಡದ ಕೇಂದ್ರ. ಆದರೆ ಇವುಗಳ ಜೊತೆಗೆ, ಮಧುರ ಚನ್ನರ ಗೆಳೆಯರ ಬಳಗದ (ಸಿಂಪಿ ಲಿಂಗಣ್ಣ, ಕಾಪಸೆ ರೇವಪ್ಪ ಮತ್ತು ಇತರರನ್ನು ಒಳಗೊಂಡ) ಹಲಸಂಗಿಯನ್ನು ಕನ್ನಡ ನವೋದಯದ ನಾಲ್ಕನೆಯ ಕೇಂದ್ರ ಎಂದು ಪರಿಗಣಿಸುವುದು ಅತ್ಯಗತ್ಯವಾಗಿದೆ. ಯಾಕೆಂದರೆ, ಈ ನಾಲ್ಕನೆಯ ಕೇಂದ್ರ ಕನ್ನಡ ನವೋದಯಕ್ಕೆ ‘ಅನುಭಾವ’ ಕಾವ್ಯಧಾರೆಯೊಂದನ್ನು ಸೇರಿಸಿದ್ದಲ್ಲದೆ,. ಜಾನಪದ ಜೀವಸತ್ವವನ್ನು ತುಂಬುವ ‘ಜನಪದ ಸಾಹಿತ್ಯ ಸಂಗ್ರಹ’ ಹಾಗೂ ಆ ಕುರಿತ ಜಾನಪದ ಅಧ್ಯಯನವನ್ನು ಕನ್ನಡದ ಸಂದರ್ಭದಲ್ಲಿ ಮೊಟ್ಟ ಮೊದಲಿಗೆ ಪ್ರಾರಂಭಿಸಿತು.[1] ‘ನವೋದಯ’ವನ್ನು ಕುರಿತು ಈ ಹೊತ್ತು ವಿಚಾರ ಮಾಡುವ ನಾವು ಅದರ ಬಹುಮುಖತ್ವವನ್ನು ಗುರುತಿಸದಿದ್ದರೆ ತಪ್ಪಾಗುತ್ತದೆ.

‘ನಾಕುತಂತಿ’ ಕವನ ಸಂಗ್ರಹದ ಮುನ್ನುಡಿಯಲ್ಲಿ ದ.ರಾ. ಬೇಂದ್ರೆಯವರು ಹೇಳುತ್ತಾರೆ: ‘ಭೋಗಸಾಧನೆಯ ಕವನ ಭಂಡಾರವೂ ಇದೆ; ಯೋಗ ಸಾಧನೆಯ ಕವನ ಮಾರ್ಗವೂ ಇದೆ’ ಎಂದು. ಹಾಗೆಯೇ ಅವರು ಕವಿಗಳನ್ನು ‘ಭಕ್ತ ಕವಿಗಳು’ ಮತ್ತು ‘ಸಾಹಿತ್ಯ ಕವಿಗಳು’ ಎಂದು ವಿಭಾಗಿಸುತ್ತಾರೆ. ಈ ವರ್ಗೀಕರಣದಲ್ಲಿ ಬೇಂದ್ರೆಯವರು ಮೂಲತಃ ಒಲಿದದ್ದು ಭಕ್ತ ಕವಿಗಳ ಯೋಗಸಾಧನೆಯ ಕವನ ಮಾರ್ಗದ ಕಡೆಗೆ. ಆದರೆ ಅವರು, ಅವರ ಸಮಕಾಲೀನರಾದ ಕುವೆಂಪು, ಪುತಿನ ಅವರಂತೆ ಸಮಗ್ರ ಬದುಕಿನ ಬಿರುಗಾಳಿಗೆ ತಮ್ಮನ್ನು ಒಡ್ಡಿಕೊಂಡವರು. ಕರ್ನಾಟಕದ ಹಾಗೂ  ಭಾರತೀಯವಾದ ಸಾಂಸ್ಕೃತಿಕ ಸ್ಪಂದನಗಳಿಗೆ ತೆರೆದುಕೊಂಡವರು. ನವೋದಯ ಕನ್ನಡದ ಸಾಹಿತ್ಯದ ಸೀಮಾರೇಖೆಗಳನ್ನು ತಮ್ಮ ಬಹುಮುಖ ಪ್ರತಿಭೆಯಿಂದ ವಿಸ್ತರಿಸಿದವರು. ಬೇಂದ್ರೆ-ಕುವೆಂಪು-ಪುತಿನ ಈ ಮೂವರಲ್ಲೂ ಆಧ್ಯಾತ್ಮಿಕವಾದ ಹಾಗೂ ಆನುಭಾವಿಕವಾದ ತುಡಿತಗಳು, ಹೊಳಹುಗಳು ಕಾಣಿಸಿಕೊಂಡದ್ದು ನಿಜವಾದರೂ, ಅದೊಂದೇ ಅವರ ಕೇಂದ್ರ ಕಾಳಜಿಯಾಗಿತ್ತೆಂದು ಹೇಳಲು ಬರುವುದಿಲ್ಲ.

ಈ ಹಿನ್ನೆಲೆಯಿಂದ ನೋಡಿದರೆ, ಹೊಸಗನ್ನಡ ಸಾಹಿತ್ಯದಲ್ಲಿ ಯೋಗಸಾಧನೆಯ ಕವನ ಮಾರ್ಗವನ್ನು ತಮ್ಮ ಬದುಕಿನ ಕೇಂದ್ರವನ್ನಾಗಿ ಮಾಡಿಕೊಂಡು, ನಿಜವಾದ ಅರ್ಥದಲ್ಲಿ ‘ಅನುಭಾವಿ ಕವಿ’ ಎಂದು ಕರೆಯಿಸಿಕೊಳ್ಳಲು ಅರ್ಹವಾದ ವ್ಯಕ್ತಿಯೆಂದರೆ ಮಧುರ ಚನ್ನರೊಬ್ಬರೇ ಎಂದು ಹೇಳಬಹುದು. ನಮ್ಮ ಹಿಂದಿನ ಸಾಹಿತ್ಯ ಪರಂಪರೆಯಲ್ಲಿ ಅಲ್ಲಲ್ಲಿ ಆಂಶಿಕವಾಗಿ ಅನುಭಾವದ ಹೊಳಹುಗಳಿದ್ದರೂ, ಅವುಗಳಲ್ಲಿ ಯಾವುದನ್ನೂ ಇಂದಿನ ಅರ್ಥದಲ್ಲಿ ಅನುಭಾವ ಕಾವ್ಯ ಎಂದು ಕರೆಯುವುದು ಕಷ್ಟವಾಗುತ್ತದೆ. ಅಕ್ಕಮಹಾದೇವಿ ಅಲ್ಲಮರಲ್ಲಿ ಪ್ರಖರವಾಗಿ ಕಾಣಿಸಿಕೊಳ್ಳುವ, ಭರತೇಶ ವೈಭವದ ರತ್ನಾಕರವರ್ಣಿಗೆ ಮನೋಗೋಚರವಾಗುವ, ಹತ್ತೊಂಬತ್ತನೆ ಶತಮಾನದ ಕೆಲವು ಸಂತರಲ್ಲಿ ಹಾಗೂ ತತ್ವಪದಕಾರರಲ್ಲಿ ಮಿಂಚುವ, ಆ ಅನುಭಾವದ ಮೂಲಸೆಲೆಗಳ ಅಮೂರ್ತ ಯೌಗಿಕ ಜಗತ್ತನ್ನು, ತಮ್ಮ ಗದ್ಯಪದ್ಯಗಳಲ್ಲಿ ಮಧುರ ಚನ್ನರು ಮೂರ್ತಗೊಳಿಸಿರುವ ಕ್ರಮ, ‘ಸಾಹಿತ್ಯ’ವೂ ಆಗಿರುವುದು ಹೊಸಗನ್ನಡ ಸಾಹಿತ್ಯದ ಆಶ್ಚರ್ಯಗಳಲ್ಲಿ ಒಂದು. ಅಷ್ಟೇ ಅಲ್ಲ; ಅವರ ಕವಿತೆಗಳು ಹತ್ತೊಂಬತ್ತನೆ ಶತಮಾನದ ಸಂತರ-ಸೂಫಿಗಳ ಹಾಗೂ ಅದಕ್ಕೂ ಹಿಂದಿನ ತತ್ವಪದಕಾರರ ಅನುಭಾವ ಕಾವ್ಯದ ‘ಮಾಡರನ್ ವರ್ಶನ್’ದ ಹಾಗೆ ತೋರುತ್ತವೆ.

ಶ್ರೀ ಅರವಿಂದರು ತಮ್ಮ Future Poetry ಎಂಬ ಕೃತಿಯಲ್ಲಿ ‘ಸಚ್ಚಿದಾನಂದದಿಂದ ಉದ್ಭೂತವಾಗುವ  ಅಧ್ಯಾತ್ಮ ರಾಜ್ಯದ ಕವಿತೆಯೇ ಏಕಮೇವಾ ದ್ವಿತೀಯವಾಗಿ ನಾಳಿನ ಸಿರಿಪಟ್ಟವನ್ನೇರುವುದೆಂದು’ ಹೇಳಿದ ಮಾತು ಮಧುರ ಚನ್ನರ ಕಾವ್ಯ ಶ್ರದ್ಧೆಯ ಬುನಾದಿಯಾಗಿದೆ. ಈ ಮಾತನ್ನು ಮಧುರ ಚನ್ನರು ಬೆಳಗಾವಿ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ (೧೯೪೭) ಪ್ರಸ್ತಾಪಿಸುತ್ತಾರೆ. ಮತ್ತೆ ೧೯೫೦ರಲ್ಲಿ ಸೊಲ್ಲಾಪುರದ ೩೩ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ಅರವಿಂದರು ತಮ್ಮ Letters of Aurobindo III ದಲ್ಲಿ (೧೯೪೯) ಅನುಭಾವ ಕಾವ್ಯದ ಬಗ್ಗೆ ಹೇಳಿದ ಮಾತುಗಳನ್ನು ಸಭೆಯ ಗಮನಕ್ಕೆ ತರುತ್ತಾರೆ.

(ಅ) ಅಂತರ್ ಹೃದಯದಿಂದ (ಹೃತ್‌ಕಮಲದಿಂದ) ಬಂದ ಕಾವ್ಯ (ಆ) ಮಸ್ತುಕೋರ್ಧ್ವದಿಂದ (ಸಹಸ್ರದಳ ಕಮಲ)ದಿಂದ, ಹಾಗೂ ಅದಕ್ಕೂ ಮೇಲಿನಿಂದ ಬಂದ ಕಾವ್ಯ-ಇವು ಅನುಭಾವ ಕಾವ್ಯದ ಎರಡು ಪ್ರಕಾರಗಳು. ಇವುಗಳಲ್ಲಿ ಮೊದಲನೆ ಪ್ರಕಾರದ ಕವಿತೆಗಳು ಅತ್ಯಂತ ಮಧುರವಾಗಿಯೂ, ಸರಳವಾಗಿಯೂ, ನಯವಾಗಿಯೂ ಇರುತ್ತವೆ. ಆದರೆ ಎರಡನೆಯ ಪ್ರಕಾರದ ಕವಿತೆಗಳಲ್ಲಿ ಔನ್ನತ್ಯ, ತೇಜಸ್ಸು, ಗಂಭೀರತೆ, ವಿಶಾಲತೆಗಳು ತುಂಬಿ ತುಳುಕುತ್ತವೆ. ಒಮ್ಮೊಮ್ಮೆ ತೀರಾ ಸಾಧಾರಣ ವಿಷಯಗಳನ್ನೂ ಸಹ ಎರಡನೆಯ ಪ್ರಕಾರದಲ್ಲಿ ಆರಿಸಿಕೊಂಡಿರುವುದುಂಟು. ಯಾಕೆಂದರೆ, ಅದು ಆತ್ಮದೃಷ್ಟಿ. ಆತ್ಮನಿಗೆ ಎಲ್ಲದರಲ್ಲಿಯೂ ಪರಮಾತ್ಮನ ವಾಸ್ತವ್ಯವು ಗೋಚರಿಸುತ್ತದೆ. ಒಟ್ಟಿನಲ್ಲಿ ಮೊದಲನೆಯದನ್ನು ಭಕ್ತಿದೃಷ್ಟಿ ಎಂದೂ ಎರಡನೆಯದನ್ನು ಧ್ಯಾನದೃಷ್ಟಿ ಅಥವಾ ದಿವ್ಯದೃಷ್ಟಿಯೆಂದೂ ಕಲ್ಪಿಸಿಕೊಳ್ಳಬಹುದು. ಮೊದಲನೆಯದಕ್ಕೆ ರಾಮಾಯಣವನ್ನೂ ಎರಡನೆಯದಕ್ಕೆ ಮಹಾಭಾರತ, ಭಗವದ್ಗೀತೆ, ಉಪನಿಷತ್ತುಗಳನ್ನು ಉದಾಹರಣೆ ಎಂದು ತೆಗೆದುಕೊಳ್ಳಬಹುದು. ಬಸವಣ್ಣನವರ ವಚನಗಳು, ದಾಸರ ಕೀರ್ತನೆಗಳನ್ನು ಮೊದಲ ವಿಭಾಗಕ್ಕೂ, ಪ್ರಭುದೇವರ ವಚನಗಳು, ಕನಕದಾಸರ ಕೀರ್ತನೆಗಳನ್ನು ಎರಡನೆ ವಿಭಾಗಕ್ಕೂ,  ಬಸವರಾಜದೇವರ ರಗಳೆ, ಹರಿಕಥಾಮೃತಸಾರ ಮೊದಲ ವಿಭಾಗಕ್ಕೂ ಭರತೇಶ ವೈಭವ, ಶೂನ್ಯ ಸಂಪಾದನೆಗಳನ್ನು ಎರಡನೆಯ ವಿಭಾಗಕ್ಕೂ ಸೇರಿಸಬಹುದು. (ಮಧುರ ಚನ್ನರ ಲೇಖನಗಳು, ೧೯೫೦ ಪು. ೩೧೩)

ಯಾವ ‘ನಾಳಿನ ಕಾವ್ಯ ಪ್ರಕಾರ’ ಎಂದು ಅರವಿಂದರು ೧೯೪೯ರ ವೇಳೆಗೆ ಪ್ರಕಟವಾದ ತಮ್ಮ ಕೃತಿಯಲ್ಲಿ ಸೂಚಿಸಿದರೋ, ಆ ಅನುಭಾವ ಕಾವ್ಯವನ್ನು ೧೯೨೯-೩೦ರಷ್ಟು ಹಿಂದೆಯೇ ‘ನನ್ನ ನಲ್ಲ’, ‘ಮಧುರ ಗೀತ’ ಎಂಬ ಕಾವ್ಯಗುಚ್ಛಗಳ ಮೂಲಕ ಮಧುರ ಚನ್ನರು ಆಗಲೇ ಬರೆದು ಮುಗಿಸಿದ್ದರು. ಶ್ರೀ ಅರವಿಂದರ ಅನುಭಾವ ಕಾವ್ಯದ ನಿರ್ವಚನ ಮಧುರ ಚನ್ನರು ಆಗಲೇ ಬರೆದ ಕಾವ್ಯವನ್ನು ದೃಡೀಕರಿಸಿದ್ದಲ್ಲದೆ, ಅರವಿಂದರು ಸೂಚಿಸಿದ ಅನುಭಾವ ಕಾವ್ಯದ ವರ್ಗೀಕರಣವನ್ನು ತಮಗೆ ಪರಿಚಿತವಾದ ಸಾಹಿತ್ಯ ಪರಂಪರೆಗೆ ಮಧುರ ಚನ್ನರು ಅನ್ವಯಿಸಿ ವಿವರಿಸಿದ್ದು ಅರ್ಥಪೂರ್ಣವಾಗಿದೆ.

ಮಧುರ ಚನ್ನರು ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ ಮೂಲತಃ ಹುಟ್ಟು ಅನುಭಾವಿಯಾದವರೆನ್ನುವುದೆ ಅವರ ವಿಶೇಷತೆಯಾಗಿದೆ. ಅವರು ತಮ್ಮ ಆತ್ಮಕಥನವಾದ ‘ಆತ್ಮಶೋಧ’ದಲ್ಲಿ ಒಂದೆಡೆ ‘ಈತನಿಗೆ ಈ ಜನ್ಮದಲ್ಲಿ ಪರಮಾತ್ಮನ ಪ್ರತ್ಯಕ್ಷ ಅನುಭವವನ್ನು ಪಡೆಯುವುದಕ್ಕಿಂತ ಹೆಚ್ಚಿನದೇನೂ ಇಲ್ಲವೆಂದು   ಮನವರಿಕೆಯಾಗಹತ್ತಿತ್ತು’ (ಪುಟ.೧೫೨) ಎಂದು ಬರೆದುಕೊಂಡುದನ್ನು ಇಲ್ಲಿ ಗಮನಿಸಬಹುದು. ಕವಿತೆ ಬರೆದು ‘ಸಾಹಿತಿ’ ಅನ್ನಿಸಿಕೊಳ್ಳುವುದಕ್ಕಿಂತ, ತಮ್ಮ ಅನುಭಾವ ಸಾಧನೆಯ ಮೂಲಕ ಪರಾತ್ಪರವನ್ನು ಮುಟ್ಟುವುದೇ ಅವರಿಗೆ ಮುಖ್ಯ. ಹೀಗಾಗಿ ಅವರು ತಮ್ಮ ಇಡೀ ಐವತ್ತು ವರ್ಷಗಳ ಜೀವಮಾನದಲ್ಲಿ ಪ್ರಕಟಿಸಿದ ಕವನ ಸಂಗ್ರಹ ಒಂದೇ  ಒಂದು. ಅದು ‘ನನ್ನ ನಲ್ಲ’. ಅದನ್ನವರು ಬರೆದದ್ದು ೧೯೨೯-೩೦ರ ಕಾಲಮಾನದಲ್ಲಿ. ಆಗ ಅವರ ವಯಸ್ಸುಕೇವಲ ೨೬. ಇಪ್ಪತ್ತಾರನೆಯ ವರ್ಷ ಅವರ ಸಾಧಕ ಜೀವನದಲ್ಲಿ ಒಂದು ವಿಶೇಷಾನುಭವ ದೊರೆತ ಸಂದರ್ಭ. ಈ ಕುರಿತು-

ಹನ್ನೆರಡು ತುಂಬಿಲ್ಲ ಕನ್ನಕ್ಕಿ ನಾನಂದು
ನನ್ನ ನಲ್ಲನ ಕತೆಗೆ ಮರುಳುಗೊಂಡೆ
ಇನ್ನೇನು ಹೇಳುವೆನು ಇಂದಿಗಿಪ್ಪತ್ತಾರು
ಈಸೊಂದು ದಿನ ಕೊರಗಿ ಗೊತ್ತುಗಂಡೆ

ಎಂದು ತಮ್ಮ ಹದಿಮೂರನೆಯ ವಯಸ್ಸಿಗೆ ಪ್ರಾರಂಭವಾದ ಆಧ್ಯಾತ್ಮಿಕ ಅನ್ವೇಷಣೆಯ ಹುಚ್ಚು ತಮ್ಮ ಇಪ್ಪತ್ತಾರನೆಯ ವಯಸ್ಸಿನಲ್ಲಿ ಒಂದು ನಿಶ್ಚಿತವಾದ ನೆಲೆಯನ್ನು ಕಂಡ ಪರಿಯನ್ನು ‘ನನ್ನ ನಲ್ಲ’ ಕವಿತೆಯ ಒಂದು ಹಂತದಲ್ಲಿ ವರ್ಣಿಸಿದ್ದಾರೆ. ಈ ಕವಿತೆಯಲ್ಲದೆ ಮತ್ತೂ ಒಂದಿಷ್ಟು ಕವನಗಳು, ಹಾಗೂ ಅವರ ವ್ಯಕ್ತಿತ್ವದ ಇನ್ನೊಂದು ಮುಖವನ್ನು ಅನಾವರಣ ಮಾಡುವ ಗದ್ಯ ಬರಹವೂ ಸಾಕಷ್ಟಿದೆ. ತಮ್ಮ ಮೂವತ್ತರ  ಹರೆಯಲ್ಲಿ ಬರೆದ ‘ಪೂರ್ವರಂಗ’, ‘ಕಾಳರಾತ್ರಿ’, ‘ಬೆಳಗು’, ಹಾಗೂ ಅವರ ನಲವತ್ತಾರನೆಯ ವಯಸ್ಸಿನಲ್ಲಿ ಬರೆದ ‘ಆತ್ಮಶೋಧನ’- ಈ ಎಲ್ಲವೂ ಸಾಧಕನೊಬ್ಬನ ಆತ್ಮಕಥೆಗಳಾಗಿವೆ. ಈ ಎಲ್ಲ ಬರಹಗಳನ್ನು ದೀಪ್ತಗೊಳಿಸುತ್ತಿರುವುದು ಮಧುರ ಚನ್ನರ ಅನುಭಾವವೆಂಬ ವಿದ್ಯುತ್ತು.

ಮಧುರ ಚನ್ನರ  ಅನುಭಾವೀ ಆತ್ಮ ಕಥನ ಎನ್ನುವುದು ಮೂಲತಃ ಅವರು ಒಬ್ಬ ದಿವ್ಯತ್ವದ ಸಾಧಕನಾಗಿ ನಡೆಯಿಸಿದ ಆತ್ಮ ಶೋಧವೇ. ಡಾ.ಕಾಪಸೆಯವರು ಇತ್ತೀಚೆಗೆ ಸಂಪಾದಿಸಿ ಪ್ರಕಟಿಸಿದ ಮಧುರ ಚನ್ನರ  ಕವಿತೆ ಹಾಗೂ ಆತ್ಮ ಕಥನ ಗದ್ಯ ಬರಹದ ಸಂಪುಟಕ್ಕೆ ‘ಆತ್ಮ ಶೋಧ’ವೆಂಬ ಹೆಸರಿಟ್ಟಿರುವುದು ಅರ್ಥಪೂರ್ಣವಾಗಿದೆ. ‘ಅನುಭಾವ’ವೆಂದರೆ ಈ ಎಚ್ಚರದೊಳಗೊಂದು ಹೊಸ ಎಚ್ಚರಹುಟ್ಟಿ, ಆ ಎಚ್ಚರದ ಬೆಳಕಿನಲ್ಲಿ, ಈ ಎಚ್ಚರದ ಮೂಲಕ್ಕೆ ಹೋಗಿ ಮುಟ್ಟಲು ಸಾಧಕನು ಕೈಕೊಳ್ಳುವ ಒಂದು ಮಹಾಪ್ರಯಾಣವೇ -ಎನ್ನಬಹುದು. ಈ ಪ್ರಯಾಣದ ಹಾದಿಯಲ್ಲಿ ಜೀವವು ಪಡುವ ಕಾತರ, ವ್ಯಾಕುಲ, ತೊಳಲಾಟ, ಸಂಘರ್ಷ, ಸತ್ಯದ ಸಕೃದ್ದರ್ಶನ, ಅದರ ಬೆನ್ನಿಗೇ ಬಂದು ಕವಿಯುವ ಕತ್ತಲೆ, ಮತ್ತೆ ತಳಮಳದ ಕತ್ತಲು ಕಳೆದು ಮೂಡುವ ಸಾಕ್ಷಾತ್ಕಾರದ ಸೂರ್ಯೋದಯದ ಸಂಭ್ರಮ-ಇತ್ಯಾದಿಗಳೆಲ್ಲವೂ ಅನುಭಾವಿಯ ಅನುಭವಕ್ಕೆ ಬರಕತಕ್ಕ ಸಂಗತಿಗಳು. ಜೈನ ಕಾವ್ಯಗಳು, ಅರ್ಹಂತನಾಗಿ ವಿಕಾಸ ಹೊಂದುವ ಜೀವದ ಮಹಾಯಾತ್ರೆಯನ್ನು ಒಂದು ರೀತಿಯಲ್ಲಿ ಚಿತ್ರಿಸುತ್ತವೆ. ಮಧುರ ಚನ್ನರಿಗೆ ಪ್ರಿಯವಾದ, ಜಾನ್ ಬನಿಯನ್ನನ  Piligrims Progress ಎಂಬ ಕೃತಿ ಈ ಆತ್ಮ ಶೋಧನೆಯ ದುರ್ಗಮ ಪಥಗಳ ಚಿತ್ರಣವಾಗಿದೆ. ಹಾಗೆಯೇ ಭಾರತೀಯರಾದ ಎಷ್ಟೋ ಸಂತರ ಜೀವನ ಚರಿತ್ರೆಯೊಳಗೂ ಇದರ ವರ್ಣನೆಗಳಿವೆ. ವಚನಕಾರರ-ಅದರಲ್ಲೂ ಬಸವ, ಅಕ್ಕಮಹಾದೇವಿಯರ ವಚನಗಳಲ್ಲಿ ಆನುಭಾವಿಕ ತಲ್ಲಣಗಳು ಹಾದುಹೋಗುತ್ತವೆ. ಮಧುರ ಚನ್ನರ  ಕವಿತೆಗಳಲ್ಲಿ ಉಜ್ವಲವಾಗಿ ಮತ್ತು ದಟ್ಟವಾಗಿ, ಅವರ ಗದ್ಯಬರೆಹಗಳಲ್ಲಿ ವಾಸ್ತವ ವಿವರಗಳಾಗಿ ಈ ಅನುಭಾವ ಜಗತ್ತು ಸಾಹಿತ್ಯದ ಸಮಸ್ತ ಲಕ್ಷಣ ಸಮನ್ವಿತವಾಗಿ ಪ್ರಕಟಗೊಂಡಿರುವುದು ಕನ್ನಡದಲ್ಲಿ ಬಹುಶಃ ಇದೇ ಮೊದಲು ಎನ್ನಬಹುದು.

‘ಆತ್ಮಶೋಧ’ ಎಂಬ ಹೆಸರಿನಿಂದ ಪ್ರಕಟಗೊಂಡಿರುವ ಮಧುರ ಚನ್ನರ ಆತ್ಮ ಕಥನವು-ಪೂರ್ವ ರಂಗ, ಕಾಳರಾತ್ರಿ, ಬೆಳಗು ಮತ್ತು ಆತ್ಮಸಂಶೋಧನೆ ಎಂಬ ನಾಲ್ಕು ಉಪವಿಭಾಗಗಳಲ್ಲಿ ರೂಪಿತವಾಗಿದೆ. ‘ನನ್ನ ನಲ್ಲ’ದಂಥ ಕವಿತೆಯಲ್ಲಿ ಅತ್ಯಂತ ಕಾವ್ಯಮಯವಾಗಿ ಅವರ ಅನುಭಾವ ಸಾಧನೆ ಮತ್ತು ಶೋಧನೆಗಳು ಅಭಿವ್ಯಕ್ತಗೊಂಡಿದ್ದರೂ, ಮತ್ತೆ ಗದ್ಯದಲ್ಲಿ ತಮ್ಮ ಆತ್ಮಕಥನವನ್ನು ಬರೆಯುವುದಕ್ಕೆ ಕಾರಣವಾದ ಸಂಗತಿಗಳನ್ನು ಹಾಗೂ ಇದನ್ನು ಬರೆಯುವರಲ್ಲಿ ತಮ್ಮ ನಿಲುವು ಏನು ಎಂಬ ವಿಷಯವನ್ನು ಕುರಿತು ಅವರು ಹೀಗೆ ಹೇಳುತ್ತಾರೆ:

‘ಹಿಂದೆ ಸ್ವಾನುಭವದ ಆತ್ಮಗೀತೆ (ನನ್ನ ನಲ್ಲ)ಯನ್ನು ಬರೆದು ಪ್ರಕಟಿಸಿದನಷ್ಟೆ? ಆದರೆ ನಾಡಿನಲ್ಲಿ ಎಷ್ಟೋ ಜನರಿಗೆ ಅದರ ಹೊಲಬೇ ತಿಳಿಯಲಿಲ್ಲ. ಅದಕ್ಕಂತಲೇ ಅವನು ಗದ್ಯದಲ್ಲೊಂದು ಆತ್ಮಕಥೆಯನ್ನು ಬರೆಯಬೇಕೆಂದು ಆಶಿಸುತ್ತಿದ್ದನು’. (ಪುಟ:೩೧೬)

ಈ ಅರಿಕೆಯೊಳಗಣ ವ್ಯಕ್ತಿಯ ನಿಲುವು ‘ನಾನು’ ಎಂಬ ನೆಲೆ ಅಲ್ಲ. ‘ಅವನು’ ಎಂಬುದು. ಇಡೀ ಬರಹವನ್ನು ‘ಯಾರದೋ’ ಕಥನವೆಂಬಂತೆ, ತನ್ನ ಅನುಭವಗಳನ್ನು ತಕ್ಕ ‘ದೂರ’ದಲ್ಲಿ ಇರಿಸಿಕೊಂಡು ‘ಅಹಂ’ ನಿರಸನದ ವಿನಯದಲ್ಲಿ ನಿರೂಪಿಸಿರುವುದು ಇದರ ವಿಶೇಷವಾಗಿದೆ. ಅಷ್ಟೇ ಅಲ್ಲ ಉದ್ದಕ್ಕೂ ತಮ್ಮನ್ನು ತಾವು ಒಬ್ಬ ‘ಜ್ಞಾನ ಭಿಕ್ಷು’ ಎಂದು ಕರೆದುಕೊಂಡಿದ್ದಾರೆ.[2] ಅವರು ಈ ಮೊದಲೇ ಬರೆದ ‘ನನ್ನ ನಲ್ಲ’ದೊಳಗೆ ಯಾವ ಅನುಭವಗಳು ಅತ್ಯಂತ ತೀವ್ರವೂ, ಗಾಢವೂ ಆಗಿ ಅಭಿವ್ಯಕ್ತವಾಗಿವೆಯೋ ಆ ಅನುಭವಗಳಿಗೆ ಹಿನ್ನೆಲೆಯಾದ ತಮ್ಮ ಸಾಧಕ ಹಾಗೂ ಸಾಂಸಾರಿಕ ಜೀವನದ ವಿವರಗಳನ್ನು ಯಥಾವತ್ತಾಗಿ ಈ ಆತ್ಮಕಥನದ ಗದ್ಯದೊಳಗೆ ಮಧುರ ಚನ್ನರು ಬರೆಸಿದ್ದಾರೆ. ತಮಗೆ ಅದು ಹೇಗೋ ಹುಟ್ಟಿಕೊಂಡ ಈ ಅಧ್ಯಾತ್ಮದ ಹಂಬಲದ ಅನ್ವೇಷಣೆಯ ಹಾದಿಯಲ್ಲಿ ಭೆಟ್ಟಿಯಾದ ವ್ಯಕ್ತಿಗಳ, ದೊರೆತ ಮಾರ್ಗದರ್ಶನಗಳ, ನಡೆಯಿಸಿದ ವಿಸ್ತಾರವಾದ ಶಾಸ್ತ್ರಾಧ್ಯಯನಗಳ, ಎದುರಾದ ವ್ಯಥೆಗಳ, ದೊರೆತ ದಿವ್ಯಾನುಭವಗಳ ಅನೇಕ ವಿವರಗಳು ದಾಖಲಾಗುತ್ತ ನಾವು ಯಾವುದೋ ಪ್ರಾಚೀನ ಕಾಲದ ಸಂತನೊಬ್ಬನ ಜೀವನವನ್ನು ಓದುತ್ತಿರುವಂತೆ ಬಾಸವಾಗುತ್ತದೆ. ಅಷ್ಟೇ ಅಲ್ಲ ಪೂರ್ವರಂಗ-ಕಾಳರಾತ್ರಿ-ಬೆಳಗು ಎಂಬ ಮೂರು ಹಂತಗಳಲ್ಲಿ ನಿರೂಪಿತ- ವಾಗಿರುವ  ಮಧುರ ಚನ್ನರ ಅನುಭಾವ ಯಾತ್ರೆಯು, ಜಗತ್ತಿನ ಎಷ್ಟೋ ಸಾಧು ಸಂತರ ಬದುಕಿನ ಅನುಭವಗಳೊಂದಿಗೆ ಸಂವಾದಿಯಾಗುತ್ತ ಅತ್ಯಂತ ಅಧಿಕೃತವಾಗುತ್ತದೆ. ಮಧುರ ಚನ್ನರೇ ಉದ್ದಕ್ಕೂ ತಮ್ಮ ಅನುಭಾವವನ್ನು ಜಗತ್ತಿನ ಇತರ ಅನುಭಾವಿಗಳ ಅವಸ್ಥೆಗಳೊಂದಿಗೆ ಹೋಲಿಸುತ್ತ ಈ ಅನುಭಾವ ಎನ್ನುವುದು ಹೇಗೆ ಸಾರ್ವಕಾಲಿಕ-ಸಾರ್ವದೇಶಿಕ ಲಕ್ಷಣಗಳನ್ನು ಪಡೆದುಕೊಂಡಿದೆ ಎಂಬುದನ್ನು ತೋರಿಸಿಕೊಡುತ್ತಾರೆ.[3]

ಈ ಗದ್ಯ ರೂಪದ  ಬರೆಹವು ಅವರ ಕವಿತೆಗಳಿಗೆ ಮಾತ್ರವಲ್ಲ, ಅವುಗಳಿಗೆ ಬರೆದ ವಿವರಣಾತ್ಮಕವಾದ ವ್ಯಾಖ್ಯಾನದಂತೆಯೂ ಪ್ರವರ್ತಿಸುತ್ತದೆ. ಮತ್ತು ಅವರ ಕವಿತೆಗಳಿಗೆ ಒಂದು ಬಗೆಯ ಪೂರ್ವ ಪೀಠಿಕೆಯೂ ಆಗಿದೆ.

ಈ ಬರೆಹದ ಮೂಲಕ ನಿಷ್ಪನ್ನವಾಗುವ ಮಧುರ ಚನ್ನರ ಅನುಭಾವೀ ವ್ಯಕ್ತಿತ್ವದ ಒಂದು ಮುಖ್ಯವಾದ ಲಕ್ಷಣವೆಂದರೆ, ಅನುಭಾವ ಎನ್ನುವುದು ಎಲ್ಲ ಬಗೆಯ ಅಧೀನತೆಗಳನ್ನೂ, ಗಡಿಗಳನ್ನೂ, ಉಪಾಧಿಗಳನ್ನೂ ಮೀರಿದ ನೆಲೆಯಲ್ಲಿ ನಿಲ್ಲುವ ದಿಟ್ಟತನ. ಅದೊಂದು ರೀತಿಯಲ್ಲಿ ಜಾತಿ-ಮತ-ದೇಶಗಳನ್ನು ಮೀರಿ, ತನ್ನ ವ್ಯಕ್ತಿತ್ವ ವಿಕಾಸಕ್ಕೆ ಬೆಳಕನ್ನು ಎಲ್ಲಿಂದಲಾದರೂ ಧಾರಾಳವಾಗಿ ಪಡೆದುಕೊಳ್ಳುವ ನಿಲುವು.ಹೀಗಾಗಿ ಮಧುರ ಚನ್ನರು ವೇದ ಮುಂತಾದ ಹಿಂದೂ ಧರ್ಮದ ಶಾಸ್ತ್ರ ಕೃತಿಗಳನ್ನು ಹೇಗೋ ಕುರಾನ್ ಬೈಬಲ್ಲುಗಳನ್ನೂ ಅಧ್ಯಯನ ಮಾಡಿದರು. ಒಂದು ಹಂತದಲ್ಲಿ ಅವರು ತಾವು ಹುಟ್ಟಿ ಬೆಳೆದ ಮತ ಧರ್ಮದ ಧಾರ್ಮಿಕ ಲಾಂಛನವನ್ನು ಕಿತ್ತೆಸೆದರು. ಆ ಕಾರಣದಿಂದ -ಆ ಕಾಲಕ್ಕೆ ಎದ್ದ ಕೋಲಾಹಲದ ಮಧ್ಯೆ, ಮಠಾಧಿಪತಿಗಳೊಬ್ಬರು ಇವರನ್ನು ಕರೆಕಳುಹಿಸಿ ವಿಚಾರಿಸಿದಾಗ, ಮಧುರ ಚನ್ನರ ಪ್ರತಿಕ್ರಿಯೆ ಅವರ ಆತ್ಮಕಥನದಲ್ಲಿ ಹೀಗೆ ದಾಖಲಾಗಿದೆ:

“ಆ ಭಾಗದಲ್ಲೆಲ್ಲ ಖ್ಯಾತಿ ಹೊಂದಿದವರಾದ ತರುಣ ಮಠಾಧೀಶರಿದ್ದರು. ಅವರು  ಈಗ ಜ್ಞಾನಭಿಕ್ಷುವಿನ ಭೆಟ್ಟಿಗೆಂದು ಕರೆಯಿಸಿಕೊಂಡು, ‘ಜನತೆಯಲ್ಲೆಲ್ಲ ಗದ್ದಲ ಆಗುವಂತೆ ಹೀಗೇಕೆ ಮಾಡುವುದು’ ಎಂದು ಕೇಳಿದರು. ಅದಕ್ಕೆ ಆತನು ನಾನೇನೂ ಧರ್ಮ ಚಿಹ್ನವನ್ನು ಬಿಟ್ಟೇಬಿಡಬೇಕೆಂಬ ಸಿದ್ಧಾಂತಕ್ಕೂ ಬಂದಿಲ್ಲ. ಅದಿಲ್ಲದೆ ಉನ್ನತಿಯೇ ಸಾಧ್ಯವಿಲ್ಲವೆಂದೂ ಗ್ರಹಿಸಿಲ್ಲ. ನನ್ನ ಮಟ್ಟಿಗೆ ಅದೊಂದು ಸಾಮಾಜಿಕ ಚಿಹ್ನವೇ ಹೊರತು ಧಾರ್ಮಿಕವೇನೂ ಅಲ್ಲ.”

“ನನಗೇನೋ ಇಂಥದೊಂದು ಜಾತಿಮತದವನೆಂದು ಹೇಳಿಕೊಳ್ಳುವುದಕ್ಕೆ ಜೀವನದಲ್ಲಿ ಸಮ್ಮತಿಯಿಲ್ಲ. ಸರ್ವಮಾನವರೆಲ್ಲಾ ಒಂದೇ ಜಾತಿ. ಮನುಷ್ಯ ಜಾತಿಯೆಂಬುದೊಂದೇ ಒಂದು. ಈಗಿರುವ ಸರ್ವದೇಶಗಳ-ಜನಾಂಗಗಳ ಗ್ರಂಥಗಳ ಸತ್ಯತೆಯು ಸರ್ವರಿಗೆ ವಿದಿತವಾಗಿ ಇನ್ನು ಮುಂದೆ ಒಂದೇ ಮನೆಯಲ್ಲಿ ಒಬ್ಬೊಬ್ಬರು ತಮ್ಮ ತಮ್ಮ ಅಭಿರುಚಿಯಂತೆ, ಬೇರೆ ಬೇರೆ ಹೇಳಿದ ಪದ್ಧತಿಯಂತೆ ಸಾಧನವನ್ನು ಮಾಡುತ್ತಲಿರಬಹುದಾದ ಕಾಲವೊಂದು ಬೇಗನೆಯೆ ಬರುವುದರಲ್ಲಿ ನನಗೆ ಎಳ್ಳಷ್ಟೂ ಸಂದೇಹವು ತೋರುವುದಿಲ್ಲ. ಕಾಲವೇ ಹಾಗೆ ಹೊರಳುತ್ತಿದೆಯೆಂದು ಈಗಿನ ಮಹಾಪುರುಷರ ಮನಸ್ಸಿನ ಒಲವಿನ ಮೇಲಿನಿಂದ ಸ್ಪಷ್ಟವಾಗಿ ತಿಳಿದುಕೊಳ್ಳಬಹುದಾಗಿದೆ.” (ಪುಟ: ೩೧೫)

ಮತಧರ್ಮಗಳ ಹೆಸರಿನಲ್ಲಿ ಮನುಷ್ಯ ಮನುಷ್ಯರನ್ನು ವಿಭಜಿಸುತ್ತಿರುವ ಧಾರ್ಮಿಕ ಮೂಲಭೂತವಾದಿಗಳ ಆಕ್ರಮಣದ ಇಂದಿನ ದಿನಗಳಲ್ಲಿ, ಧರ್ಮವನ್ನು ಕುರಿತ ಮಧುರ ಚನ್ನರ ಈ ವ್ಯಾಖ್ಯಾನ ಅತ್ಯಂತ ಪ್ರಸ್ತುತವಾಗಿದೆ ಎಂಬುದನ್ನು ನಾವು ಗಮನಿಸಬೇಕಾಗಿದೆ. ತಮ್ಮ ಆತ್ಮಕಥನದ ‘ಆನುಭಾವಿಕ ಪ್ರಯೋಜನದ ಬಗ್ಗೆ ಮಧುರ ಚನ್ನರು ಇನ್ನೂ ಒಂದೂ ಮಾತನ್ನು ಹೇಳುತ್ತಾರೆ:

“ಅಣ್ಣಗಳಿರಾ ನಾನು ಎಲ್ಲಕ್ಕಿಂತ ಮೊದಲು ಅರಿಕೆ ಮಾಡುವುದೇನೆಂದರೆ, ಅನುಭಾವಿ ಎಂದು ಅನ್ನಿಸಿಕೊಳ್ಳುವ ಸಲುವಾಗಿ ನಾನು ಆತ್ಮಕಥೆಯನ್ನು ಬರೆದಿಲ್ಲ. ಅನುಭಾವ ರಾಜ್ಯದ ಅಸ್ತಿತ್ವದ ಸತ್ಯಾಸತ್ಯತೆಯನ್ನು ಅರಿಯಲೆಳಸಿ, ನನ್ನಂತೆ ಬಳಲಿ ಬೆಂದು ಬೆಂಡಾಗುತ್ತಿರುವ ತರುಣ ಜಿಜ್ಞಾಸುಗಳಿಗೆ ತಿಲ ಮಾತ್ರವಾದರೂ ಉಪಯೋಗವಾಗಬೇಕೆಂಬ ಹೃದಯದ ಊರ್ಮಿಯ ಹೊರತು ಇದಕ್ಕೆ ಅನ್ಯ ಅಹಂಕಾರದ ಸೋಂಕು ಲೇಶಮಾತ್ರವೂ ಇಲ್ಲವೆಂದು ನಾನು ಸತ್ಯವಾಗಿ ಹೇಳುತ್ತೇನೆ” (ಪುಟ: ೨೨೩-೨೨೪)

“ನಾನು ಕಥೆಗಾರನಲ್ಲ, ಸಂಶೋಧಕನು. ನನ್ನ ಅಧ್ಯಾತ್ಮ ಸಂಶೋಧನದ ವರದಿ ಎಂದು ಈ ಪುಸ್ತಕವನ್ನೋದಬೇಕು. ವರದಿಗೆ ಒಂದಷ್ಟು ಕಥೆಯ ನೆರಳು ಬಿದ್ದಿದೆಯೆಂದು ಮಾತ್ರ ಹೇಳಬಹುದು. ಕಥಾ ಲಕ್ಷಣವನ್ನು ಇದರಲ್ಲಿ ಹುಡುಕಾಡಿ ಫಲವಿಲ್ಲ”. (ಪುಟ:೨೨೬)

ಬೇಂದ್ರೆಯವರು ಹೇಳುತ್ತಾರೆ:

“ಕರ್ನಾಟಕದೊಳಗಿನ ಅಧ್ಯಾತ್ಮ ವಸಂತ ಸಮಯವನ್ನು ಸೂಚಿಸುವ ಕುಕಿಲು ಚಿಗುರು ಇವರ ಬರೆಹ. ಅವರ ಬರೆಹಗಳನ್ನೋದಿ ನಾಡಿನಲ್ಲಿ ವಿವೇಕವೂ ಆಧ್ಯಾತ್ಮಿಕಜಾಗೃತಿಯೂ ಕುದುರಿದರೆ ಅದಕ್ಕಿಂತ ಬೇರೆ ಸಾಫಲ್ಯ ಉಂಟೆ?”.

ಚದುರಿದ ಚಿಂತನೆಗಳು : ೨೦೦೦


[1] ಕನ್ನಡದಲ್ಲಿ ಜಾನಪದ ಅಧ್ಯಯನವನ್ನು ಪ್ರಾರಂಭಿಸಿದವರು ಯಾರು ಎಂಬ ಪ್ರಶ್ನೆಗೆ ಕೆಲವರು ಮಾಸ್ತಿಯವರು ಅನ್ನುತ್ತಾರೆ. ಆದರೆ ವಿಜಾಪುರದ ಒಂಭತ್ತನೆಯ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಬಗ್ಗೆ ಮಧುರ ಚನ್ನರು ಮಂಡಿಸಿದ ಬರೆಹ ೧೯೨೪ ರ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದರಿಂದಾಗಿ ಜಾನಪದದ ಬಗ್ಗೆ ಮೊದಲು ವಿಚಾರ ಮಾಡಿದ ಮೊದಲಿಗರು ಮಧುರ ಚನ್ನರೆ ಅನ್ನುವುದು ಸ್ಪಷ್ಟವಾಗಿದೆ. ೧೯೩೧ರಲ್ಲಿ ಮಧುರ ಚನ್ನರು, ಬೇಂದ್ರೆ, ಕಾಪಸೆ ರೇವಪ್ಪ ಇವರು ಕೂಡಿ ಪ್ರಕಟಿಸಿದ ‘ಗರತಿಯ ಹಾಡು’ ಬಹುಶಃ ಕನ್ನಡದ ಮೊಟ್ಟ ಮೊದಲ ಸಂಗ್ರಹ. ಇದರ ಯಶಸ್ಸು ಮುಖ್ಯವಾಗಿ ಚನ್ನರಿಗೇ ಸೇರಬೇಕು. ಈ ಜಾನಪದ ಸಂಗ್ರಹ ಕಾರ‍್ಯ ಬೇಂದ್ರೆಯವರ ಕಾವ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿತ್ತು. (ನೋಡಿ: ಮಧುರ ಚನ್ನ: ಮಹಾಪ್ರಬಂಧ, ಗುರುಲಿಂಗ ಕಾಪಸೆ-೧೯೭೬, ಪುಟ: ೪೯-೫೦.)

[2] ನಮ್ಮ ಕಥಾನಾಯಕನಾದ ಜ್ಞಾನಭಿಕ್ಷುವಿನ ಕ್ಷುಲ್ಲಕತನವಾದ ಬಾಲ್ಯದೊಳಗಿಂದ, ಆಕಸ್ಮಿಕವಾಗಿ, ಕೌತುಕತರವಾಗಿ ಕಿಶೋರಾವಸ್ಥೆಯು ತಲೆದೋರಿತು. (ಪು: ೧೪೫)

ಹದಿಮೂರನೆಯ ವಯಸ್ಸಿನಲ್ಲಿ ಶರಣಲೀಲಾಮೃತವನ್ನೋದಿ ಧ್ಯಾನಕ್ಕೆ ಕುಳಿತನು (ಪು:೧೪೬)

ಜ್ಞಾನಭಿಕ್ಷುವಿನ ಬುದ್ಧಿ ಚುರುಕು, ಮನಸು ಹರಕು. ಅವನಿಗೆ ೧೭ ವರುಷ. ಜ್ಞಾನಭಿಕ್ಷುವಿಗೆ ಈಗ ಇಪ್ಪತ್ತೊಂದು ವರ್ಷ. ಈತನಿಗೆ ಈ ಜನ್ಮದಲ್ಲಿ ಪರಮಾತ್ಮನ ಪ್ರತ್ಯಕ್ಷ ಅನುಭವವನ್ನು ಪಡೆಯುವುದಕ್ಕಿಂತ ಹೆಚ್ಚಿನದೇನೂ ಇಲ್ಲವೆಂದು ಮನವರಿಕೆಯಾಯಿತು. (ಪು: ೧೫೨)

ಈ ಜ್ಞಾನಭಿಕ್ಷುವಿಗೆ ಇದೀಗ ೨೩ನೆ ವರುಷ (ಪು: ೧೭೪)

ಈಗ ನಮ್ಮ ನಾಯಕನಿಗೆ ೨೬ ವರ್ಷ. ನಮ್ಮ ನಾಯಕನ ಈ ದಿವ್ಯಾನುಭವವನ್ನು ಬಣ್ಣಿಸಲಳವಲ್ಲ (ಪು: ೩೧೫)

 

[3] ನಮ್ಮನಾಯಕನೀಗ ಅನುಭಾವ ರಾಜ್ಯದ ಈ ಕಾಳರಾತ್ರಿ ಎಂಬುದು ಸಾರ್ವಕಾಲಿಕ ಹಾಗೂ ಸಾರ್ವದೇಶಿಕವಾಗಿದೆ ಎಂದರಿತು ಆ ಮೇರೆಗೆ ಬೇರೆ ಬೇರೆ ಕಾಲದೇಶಗಳ ಮಹಾನುಭಾವರ ಜೀವನ ಚರಿತ್ರೆಗಳನ್ನೆಲ್ಲ ಕೂಲಂಕಷವಾಗಿ ಪರಿಶೀಲಿಸಹತ್ತಿದನು. (ಪು:೩೬೦)

-ವೀರಶೈವ ಸಿದ್ಧಾಂತದ ಷಟ್‌ಸ್ಥಲದ ಕಲ್ಪನೆಯನ್ನು ಮಧುರ ಚನ್ನರು ತಮ್ಮ ಅನುಭಾವದ ಮೂಲಕ ವ್ಯಾಖ್ಯಾನಿಸುವ ಕ್ರಮ ವಿಶೇಷ ರೀತಿಯಾಗಿದೆ.