ರಾಧಾಕೃಷ್ಣರ ಮಧುರ ಮಿಲನವಿದೊ ನಿಧುವನದಿ !
ಅನುಪಮ ರೂಪರು, ಅನಂತ ಪೇಮದ ಮೂರ್ತಿಗಳು
ಕಟ್ಟ ಕಡೆಯಲಿ ಒಂದಾಗಿರುವರು
ಈ ಅತಿಸುಂದರ ನಿಧುವನದಿ !

ಕನಕವರ್ಣದಲಿ ರಂಜಿಸೆ ರಾಧೆ,
ನೀಲ ಮಣಿಯವೊಲು ಹೊಳೆವನು ಕೃಷ್ಣ !
ಒಂದೆಡೆ ತೂಗುತಲಿದೆ ವನಮಾಲೆ
ಮತ್ತೊಂದೆಡೆ ಕಂಠೀಹಾರ ;
ಒಂದೆಡೆ ಶೋಭಿಸೆ ಕರ್ಣಕುಂಡಲವು,
ಮತ್ತೊಂದೆಡೆ ರನ್ನದ ಬೆಂಡೋಲೆ !

ಒಂದು ಕೆನ್ನೆಯಲಿ ಮೂಡುವ ಸೂರ‍್ಯ,
ಮತ್ತೊಂದರೊಳೊ, ಮೂಡುವ ಚಂದ್ರ
ಒಂದೆಡೆ ರಾಜಿಸೆ ಮಯೂರ ಪಿಂಛ,
ಮತ್ತೊಂದೆಡೆಯೊಳು ಫಣಿವೇಣೀ.
ಓಹೋ ನೋಡಿರೆ, ರಾಧಾಕೃಷ್ಣರ
ಮಧುರ ಮಿಲನವಿದೊ ನಿಧುವನದಿ !