ಏಳು ಶತಕಗಳ ಹಿಂದಿನ ಮಾತು. ಆಗಲೇ ಉತ್ತರದ ಹಲವೆಡೆ ಇಸ್ಲಾಂ ಧರ್ಮ ಆಗಮಿಸಿತ್ತು.

ಒಮ್ಮೆ ಹೀಗೆ ನಡೆಯಿತು. ಗಂಗೆಯ ತೀರ.ಆಚೆಯ ತಡಿಯಲ್ಲಿ ಮುಸ್ಲಿಂ ದೊರೆಯೊಬ್ಬನ (ಈತ ಜಲಾಲುದ್ದೀನ್ ಖಿಲ್ಜಿ ಇರಬೇಕು ಎಂದು ವಿದ್ವಾಂಸರ ಅಭಿಪ್ರಾಯ) ರಾಜ್ಯ. ನದಿಯಗುಂಟ ಸೈನಿಕರ ಭದ್ರಕಾವಲು. ದಾಟಲು ದೋಣಿಯ ವ್ಯವಸ್ಥೆಯೂ ಇಲ್ಲ. ಎಲ್ಲ ನೆರೆಯ ಹಿಂದು ರಾಜನ ಗೂಢಚಾರರು ಬಂದುಬಿಡುತ್ತಾರೋ ಎನ್ನುವ ಭಯ!

ಈಚೆಯ ತಡಿಯಲ್ಲಿ ಧೀರ ಸನ್ಯಾಸಿಯೊಬ್ಬರು ಶಿಷ್ಯ ಪರಿವಾರದೊಡನೆ ನಿಂತಿದ್ದಾರೆ. ಮುಂದೆ ಸಾಗುವ ಬಗೆ ಹೇಗೆ? ಶಿಷ್ಯರಿಗೆ ಚಿಂತೆ.

ಶಿಷ್ಯರ ಕಳವಳ ಗುರುವಿಗೆ ಅರಿವಾಯಿತು. ಅವರು ತಮ್ಮ ವ್ಯಕ್ತಿತ್ವದಷ್ಟೆ ಗಂಭೀರವಾದ ದನಿಯಿಂದ ನುಡಿದರು. “ಹೆದರಬೇಡಿ. ನಾವು ಸಂಸಾರದ ನದಿಯನ್ನೆ ದಾಟಿಸುವೆವು, ಗಂಗೆಯನ್ನು ದಾಟಿಸಲಾರೆವೆಂದು ತಿಳಿದಿರಾ? ನನ್ನ ಬೆನ್ನ ಹಿಂದೆಯೆ ನೀರಿಗಿಳಿದು ಧೈರ್ಯವಾಗಿ ನಡೆದು ಬನ್ನಿ.”

ಶತ್ರು ಸೈನಿಕರ ಮುಖಂಡ  ಆಜ್ಞಾಪಿಸಿದ: “ಇವರು ನಮ್ಮ ಶತ್ರುರಾಜ್ಯದ ಗೂಢಚರರಿರಬೇಕು. ಅದಕ್ಕೆಂದೆ ಈ ಮೋಸದ ಬೈರಾಗಿಯ ವೇಷ. ಇವರನ್ನು ಬರಗೊಡಬೇಡಿ.ದಡ ಸೇರುವ ಮುನ್ನ ಈ ಬೈರಾಗಿಗಳ ಕಥೆ ಮುಗಿಸಿಬಿಡಿ.”

ನೀರಿನಲ್ಲಿ ನಡೆದುಬರುತ್ತಿದ್ದ ಸಂನ್ಯಾಸಿ ಸೈನಿಕರ ಈ ಕೋಪಾಟೋಪವನ್ನು ಕಂಡರು. ಕಂಡು ಕನಿಕರದಿಂದ ಹೀಗೆ ಕೂಗಿ ಹೇಳಿದರು: “ಸುಮ್ಮನೆ ದುಡುಕಿ ನೀರಿಗೆ ಬಿದ್ದು ಸಾಯಬೇಡಿ. ಹೇಳಿ ಕೇಳಿ ನಾವಿರುವುದು ಬೆರಳೆಣಿಕೆಯ ಮಂದಿ. ನಿಮಗೇಕೆ ನಮ್ಮಿಂದ ಭಯ? ನಾವೂ ನಿಮ್ಮ ದೊರೆಯನ್ನು ಕಾಣಲೆಂದೇ ಬಂದವರು. ಜಗಳವಾಡ ಬಂದವರಲ್ಲ.”

ಈ ಧೀರವಾಣಿಯಿಂದ ಸೈನಿಕರು ಬೆರಗಾದರು, ತಮ್ಮ ಕರ್ತವ್ಯವನ್ನು ಮರೆತು ಸ್ತಬ್ಧರಾಗಿ ನಿಂತುಬಿಟ್ಟರು. ಅವರು ನೋಡುತ್ತಿದ್ದಂತೆಯೇ ಈ ಧೀರ ಸಂನ್ಯಾಸಿ ಶಿಷ್ಯರನ್ನು ಸಾವಿನ ಭಯದಿಂದ ಮತ್ತು ಗಂಗೆಯ ಪ್ರವಾಹದಿಂದ ಪಾರುಗಾಣಿಸಿ ಮುನ್ನಡೆದರು. ನೂರಾರು ಸೈನಿಕರು ಇವರ ಸುತ್ತ ಕತ್ತಿ ಹಿಡಿದು ನಡೆದುಬಂದರು.

ನಿನ್ನ ದೇವರೇ ನನ್ನ ದೇವರು

ರಾಜಬೀದಿಯಲ್ಲಿ ನಡೆದು ಬರುತ್ತಿರುವ ಈ ದಿಟ್ಟ ಸಂನ್ಯಾಸಿಯನ್ನು, ಶಿಷ್ಯ ಪರಿವಾರವನ್ನು, ಸುತ್ತುವರಿದಿರುವ ತನ್ನ ಸೈನಿಕರನ್ನು ಅರಮನೆಯ ಅಟ್ಟ (ಮಹಡಿ)ದ ಮೇಲೆ ನಿಂತ ದೊರೆ ಕಂಡ. ಕಂಡು ಅಚ್ಚರಿಗೊಂಡ. ಸೈನಿಕರ ಕಾವಲನ್ನು ಮೀರಿ ರಾಜ್ಯದ ಗಡಿಯೊಳಗೆ ಪ್ರವೇಶಿಸುವುದು ಈ ಹಿಂದು ಬೈರಾಗಿಗೆ ಹೇಗೆ ಸಾಧ್ಯವಾಯಿತು? ಅವನು ಅಟ್ಟದ ಮೇಲೆಯೆ ನಿಂತು ಸಂನ್ಯಾಸಿಯನ್ನು ಕುರಿತು ನುಡಿದ:

“ನೆರೆಯ ಶತ್ರುರಾಜನ ಗೂಢಚರರ ಇತ್ತ ಸುಳಿಯದಂತೆ ನಾನು ನದಿಯಗುಂಟ ಸೈನಿಕರನ್ನಿಟ್ಟಿದ್ದೇನೆ. ಅವರ ಕೈಯಿಂದ ತಪ್ಪಿಸಿಕೊಂಡು, ಜೀವ ಉಳಿಸಿಕೊಂಡು ಯಾವೊಬ್ಬನೂ ಈ ತನಕ ಇತ್ತ ಬಂದುದಿಲ್ಲ. ಆದರೆ ಓ ಬೈರಾಗಿ, ನೀನು ಹೇಗೆ ಅವರಿಂದ ಪಾರಾಗಿ ಬಂದೆ? ದೋಣಿಯಿಲ್ಲದೆ ನದಿಯನ್ನು ದಾಟುವುದು ಹೇಗೆ ಸಾಧ್ಯವಾಯಿತು? ಇತ್ತ ಬಂದ ಉದ್ದೇಶವಾದರೂ ಏನು?”

ಸಂನ್ಯಾಸಿ ನಗುತ್ತ, ಸೂರ್ಯನತ್ತ ಬೆರಳು ತೋರಿಸಿ ದೊರೆಯ ಆಡು ಭಾಷೆಯಲ್ಲೇ (ಪರ್ಷಿಯನ್) ಉತ್ತರಿಸಿದರು. “ನಿನ್ನ, ನನ್ನ, ನಮ್ಮೆಲ್ಲರ  ದೇವರು – ಜಗತ್ತನ್ನೆ ಬೆಳಗುವ ಭಗವಂತ ಅಲ್ಲಿದ್ದಾನೆ. ನಿನಗೆ ಅವನು ಅಲ್ಲಾ. ನನಗೆ ನಾರಾಯಣ. ಯಾವ ಹೆಸರಿನಿಂದ ಕರೆದರೂ ಓಗೊಡುವ ದೇವರು ಒಬ್ಬನೇ. ತಲೆಗೊಬ್ಬ ದೇವರಿಲ್ಲ. ನೀನು, ನಾನು, ನಾವೆಲ್ಲ ಅವನ ರಾಜ್ಯದ ಪ್ರಜೆಗಳು. ಅವನ ಅನುಗ್ರಹದಿಂದಲೇ ನಾವು ದೋಣಿ ಇಲ್ಲದೆ ನದಿಯನ್ನು ದಾಟಿದೆವು; ಕೊಲ್ಲ ಬಂದ ನಿನ್ನ ಸೈನಿಕರ ಮನವೊಲಿಸಿ ಇತ್ತ ಬಂದೆವು. ಇದೆಲ್ಲ ಅವನ ಕರುಣೆ. ನಾವು ನಿನ್ನ ರಾಜ್ಯದ ಮಾರ್ಗವಾಗಿ ಉತ್ತರಕ್ಕೆ ಹೊರಟವರು……..”

ಆ ಗಾಂಭೀರ್ಯ, ಎದೆಗಾರಿಕೆ, ಆತ್ಮಶಕ್ತಿ, ದಿವ್ಯ ತೇಜಸ್ಸು ಕಂಡು, ಆ ಮೋಡಿಯ ಮಾತುಗಳನ್ನು ಕೇಳಿ ಮುಸ್ಲಿಂ ದೊರೆ ಬೆರಗಾದ. ಅಟ್ಟದಿಂದ  ಇಳಿದು ಬಂದು ಸಂನ್ಯಾಸಿಯನ್ನು ರಾಜಸಭೆಗೆ ಕರೆಸಿದ. ಪರಿಪರಿಯಾಗಿ ಸತ್ಕರಿಸಿದ. ತನ್ನ ರಾಜ್ಯದಲ್ಲೇ ಬಹುದೊಡ್ಡ ಜಹಗೀರನ್ನು ಬಿಟ್ಟು ಅಲ್ಲೆ ಆಶ್ರಮ ಕಟ್ಟಿಕೊಂಡಿರುವಂತೆ ಭಿನ್ನವಿಸಿಕೊಂಡ.

ಈ ಧೀರ ಸಂನ್ಯಾಸಿ ರಾಜನ ಈ ಕೊಡುಗೆಯನ್ನು ಸೌಜನ್ಯದಿಂದಲೆ ಬೇಡವೆಂದರು. ಶಿಷ್ಯ ಪರಿವಾರದೊಡನೆ ಉತ್ತರಾಭಿಮುಖವಾಗಿ ಬದರಿಯತ್ತ ಹೊರಟೇಬಿಟ್ಟರು.

ಯಾರಿವರು?

ಯಾರಿವರು? ಇವರೇ ಆಚಾರ್ಯ ಮಧ್ವರು. ಯಾವ ಭಾಷೆಯಲ್ಲಿ, ಯಾವ ಹೆಸರಿನಲ್ಲಿ ಕರೆದರೂ ಭಗವಂತನಿಗೆ ಕೇಳಿಸುತ್ತದೆ ಎಂದು ಜಗತ್ತಿನ ಮುಂದೆ ಘೋಷಿಸಿದ ಭಾರತೀಯ ಪ್ರವಾದಿ. ಮುಂದಿನ ಜನಾಂಗಕ್ಕಾಗಿ ಅವರು ಒಂದು ಮಹಾನ್‌ಸಂದೇಶವನ್ನು ಬರೆದಿಟ್ಟರು.

“ದೇವರನ್ನು ಹೇಗೆ ಕರೆಯಲಿ ಎಂದು ಗೊಂದಲಗೆಡಬೇಕು. ಯಾವ ಭಾಷೆಯ ಯಾವ ಹೆಸರಿನಿಂದಲೂ ಅವನನ್ನು ಕರೆಯಬಹುದು. ಏಕೆಂದರೆ ಅವನ ಹೆಸರಿಲ್ಲದ ಯಾವ  ನುಡಿಯೂ ಈ ಜಗತ್ತಿನಲ್ಲಿಲ್ಲ. ನಮ್ಮ ಆಡು ಮಾತಷ್ಟೆ ಅಲ್ಲ – ಇಡಿಯ ಪ್ರಕೃತಿಯೇ ಭಗವಂತನ ಗುಣಗಾನಕ್ಕೆ ಶ್ರುತಿ ಹಿಡಿದಿದೆ. ಸಮುದ್ರದ ಮೊರೆತ, ಗಾಳಿಯ ಸುಯಿಲು, ಹಕ್ಕಿಗಳ ಚಿಲಿಪಿಲಿ, ಪ್ರಾಣಿಗಳ ಕೂಗು – ಜಗತ್ತಿನ ಎಲ್ಲ ನಾದವೂ ಭಗವಂತನ ಗುಣಗಾನ. ಎಲ್ಲ ನಾದದಲ್ಲಿ ಭಗವಂತನ ಹಿರಿಮೆಯನ್ನು, ಎಲ್ಲಡೆಯಲ್ಲೂ ಭಗವಂತನ ಇರವನ್ನು ಕಾಣಲು ಕಲಿಯಿರಿ; ಭಗವನ್ಮಯವಾಗಿ ಬಾಳಿರಿ.”

ಭಗವದ್‌ಗೀತೆಗೆ ಅವರು ಬರೆದ ಟೀಕೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಹೀಗೆ ಸಾರಿದ್ದಾರೆ: “ಜಾತಿಪದ್ಧತಿ ಎನ್ನುವುದು ದೇಹಕ್ಕಿಂತ ಹೆಚ್ಚು ಸ್ವಭಾವಕ್ಕೆ ಸಂಬಂಧಿಸಿದ್ದು. ಹುಟ್ಟಿನಿಂದ ಒಬ್ಬನು ಯಾವ ಜಾತಿ ಎನ್ನುವುದು ಮುಖ್ಯವಲ್ಲ. ಅವನ ಸ್ವಭಾವನೆ ಅವನ ಜಾತಿಯ ನಿರ್ಣಾಯಕ. ಮೂಲತಃ ಜಾತಿಪದ್ಧತಿ ಎನ್ನುವುದು ಮನುಷ್ಯನ ಸ್ವಭಾವದ ವಿಭಾಗ. ಅಧ್ಯಾತ್ಮದ ಗಂಧ ಗಾಳಿಯೂ ಇಲ್ಲದ ವೇಷಮಾತ್ರ ಬ್ರಾಹ್ಮಣನಿಗಿಂತ ಆಧ್ಯಾತ್ಮದ ದಾರಿ ತುಳಿದ ಚಂಡಾಲ ಮೇಲು”

ಜಾತಿ-ಮತ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಹದಿಮೂರನೆಯ ಶತಕದ ಸಂಪ್ರದಾಯಬದ್ಧ ಭಾರತದಲ್ಲಿ ಬದುಕಿದ್ದ ಆಚಾರ್ಯರು ಇಂಥ ಪ್ರಗತಿಶೀಲ ವಿಚಾರಗಳನ್ನು ಮಂಡಿಸಿದ್ದರು ಎನ್ನುವುದು ತುಂಬ ಆಶ್ಚರ್ಯದ ಸಂಗತಿ.

ಮಣ್ಣು ಪಡೆದ ಪುಣ್ಯ

ಭಾರತದ ಆಚಾರ್ಯ ಪುರುಷರ ಮಾಲಿಕೆಯಲ್ಲಿ ಮೂವರು ಹೆಚ್ಚು ಖ್ಯಾತರಾದವರು: ಅದ್ವೈತ ಮತ ಸ್ಥಾಪಕರಾದ ಆಚಾರ್ಯ ಶಂಕರರು, ವಿಶಿಷ್ಟಾದ್ವೈತ ಮತ ಸ್ಥಾಪಕರಾದ ಆಚಾರ್ಯ ರಾಮಾನುಜರು ಮತ್ತು ದ್ವೈತ ಮತ್ತು ಸ್ಥಾಪಕರಾದ ಆಚಾರ್ಯ ಮಧ್ವರು. ‘ಈ ವಿಶ್ವ ಬರಿಯ ಮಾಯೆ; ಭಗವಂತನೊಬ್ಬನೆ ಸತ್ಯ ಎಂದರು ಆಚಾರ್ಯ ಶಂಕರರು.’ ವಿಶ್ವಾತ್ಮನಾದ ಭಗವಂತನಿಗೆ ಈ ವಿಶ್ವವೆ ಶರೀರವಿದ್ದಂತೆ; ಆದರಿಂದ ಇದು ಸತ್ಯ ಎಂದರು ಆಚಾರ್ಯ ರಾಮಾನುಜರು. ‘ಈ ಜಗತ್ತು ಭಗವಂತನ ಲೀಲಾಸೃಷ್ಟಿ. ಇದನ್ನು ಅಪಲಾಪ ಮಾಡಿ ಅವನ ಮಹಿಮೆಗೆ ಅಪಚಾರ ಮಾಡಬೇಡಿ’ ಎಂದು ಆಚಾರ್ಯ ಮಧ್ವರು.

ಪ್ರಾಚೀನ ಗ್ರಂಥಗಳಲ್ಲಿ ಆಚಾರ್ಯ ಮಧ್ವರ ಸಿದ್ಧಾಂತವನ್ನು ದ್ವೈತವಾದ ಎನ್ನುವ ಬದಲು ತತ್ತ್ವವಾದ ಎಂದೇ ಕರೆದಿದ್ದಾರೆ. ‘ಈ ಜಗತ್ತು ಕನಸಿನ ಮಾಯೆಯಲ್ಲ, ಭಗವಂತನ ಜಾದೂಗಾರ ಅಲ್ಲ, ಅವನು ಸತ್ಯಕರ್ಮ. ಇದು ಭಗವಂತನ ಸತ್ಯಸೃಷ್ಟಿ. ಆದರಿಂದ ಇದೂ ಒಂದು ಸತ್ಯತತ್ತ್ವ. ಭಗವಂತನ ಮಹಿಮೆಯನ್ನರಿಯುವ ಶಿಕ್ಷಣ ಶಾಲೆ’ ಎನ್ನುವ ವಾದವನ್ನು ಮಂಡಿಸಿದ್ದರಿಂದ ಇದಕ್ಕೆ ತತ್ತ್ವವಾದ ಎಂದು ಹೆಸರಾಯಿತು.

ಇಂಥ ಒಬ್ಬ ಮಹಾ ದಾರ್ಶನಿಕನನ್ನು ಜಗತ್ತಿಗೆ ನೀಡಿದ  ಕೀರ್ತಿ ಕರ್ನಾಟಕಕ್ಕೆ ಸಲ್ಲಬೇಕು.

ಆಚಾರ್ಯ ಮಧ್ವರು ಅಚ್ಚ ಕನ್ನಡಿಗರು. ಕನ್ನಡನಾಡಿನ ಪಡುಕಡಲ ತೀರದ ಉಡುಪಿಯ ಸಮೀಪದ ಪುಟ್ಟಹಳ್ಳಿ ಪಾಜಕ ಆಚಾರ್ಯರ ಜನ್ಮಭೂಮಿ. ಪಾಜಕ ಪ್ರಾಕೃತಿಕವಾಗಿ ತುಂಬ ಸುಂದರವಾದ ಹಳ್ಳಿ. ಅಕ್ಕಪಕ್ಕದಲ್ಲಿ ಎರಡು ಪುಟ್ಟ ಬೆಟ್ಟಗಳು. ಒಂದರ ತುದಿಯಲ್ಲಿ ತಾಯಿ ದುರ್ಗೆಯ ಪ್ರಾಚೀನ ಗುಡಿ. ಇನ್ನೊಂದು ಬದಿಯ ಬಂಡೆಬೆಟ್ಟದಲ್ಲಿ ಪರಶುರಾಮನ ಗುಡಿ. ಎರಡು ಬೆಟ್ಟಗಳ ಬುಡದಲ್ಲಿ ಸಸ್ಯ ಶ್ಯಾಮಲವಾದ ಪುಟ್ಟಹಳ್ಳಿ ಪಾಜಕ.

ಈ ನೆಲದ ಮಣ್ಣು ಆಚಾರ್ಯರ ಪಾದಸ್ಪರ್ಶದಿಂದ ಪಾವನವಾಗಿದೆ; ಈ ನೆಲದ ಒಂದೊಂದು ಕಲ್ಲೂ ಆಚಾರ್ಯರ ಬಾಲಲೀಲೆಯ ನೂರಾರು ಕಥೆಗಳನ್ನು ಹೊತ್ತು ಮೂಕವಾದಿ ನಿಂತಿದೆ.

ಭಗವಂತ ಜತೆಗಿದ್ದ

ಆಚಾರ್ಯ ಮಧ್ವರ ತಂದೆ ನಡಿಲ್ಲಾಯ ನಾರಾಯಣ ಭಟ್ಟ;  ತಾಯಿಯ ಹೆಸರು ವೇದಾವತಿ ಎಂದು ಹೇಳುತ್ತಾರೆ. ಮನೆ ಬೆಳಗುವ ಮಗನೊಬ್ಬ ಬೇಕು ಎಂದು ಈ ದಂಪತಿಗಳು ಬಹುಕಾಲ ಹಂಬಲಿಸಿದರು. ಕಠಿಣ ವ್ರತಗಳಿಂದ ಭಗವಂತನನ್ನು ಅನ್ಯನತೆಯಿಂದ ಆರಾಧಿಸಿದರು. ಕೊನೆಗೊಮ್ಮೆ ದಂಪತಿಗಳ ತಪಸ್ಸು ಫಲಿಸಿತು. ಅವರ ಮನೆಯನ್ನಷ್ಟೆ ಅಲ್ಲ, ಮನುಕುಲವನ್ನೇ ಬೆಳಗಿದ ಮಗುವೊಂದು ಹುಟ್ಟಿತು.

ಕ್ರಿ.ಶ. ೧೨೩೮, ವಿಲಂಬಿ ಸಂವತ್ಸರ, ಅಶ್ವಯುಜ ಶುದ್ಧ ದಶಮಿ (ವಿಜಯದಶಮಿ) ಯಂದು ಮಧ್ಯಾಹ್ನ ಸಮಯದಲ್ಲಿ ಪಾಜಕ ಕ್ಷೇತ್ರದಲ್ಲಿ ಆಚಾರ್ಯ ಮಧ್ವರ ಅವತಾರವಾಯಿತು. ತಂದೆ ತಪದ ಫಲವಾಗಿ ಪಡೆದ ಮಗುವಿಗೆ ‘ವಾಸುದೇವ’ ಎಂದು ಹೆಸರಿಟ್ಟರು.

ದಿನದಿಂದ ದಿನಕ್ಕೆ ಮಗು ಮುದ್ದುಮುದ್ದಾಗಿ ಬೆಳೆಯಿತು. ಮಗುವನ್ನು ಕಂಡು ತಂದೆ-ತಾಯಿಗಷ್ಟೆ ಅಲ್ಲ; ಊರಿನವರಿಗೆಲ್ಲ ಸಂಭ್ರಮ. ಎಲ್ಲರ ಬಾಯಲ್ಲೂ ಒಂದೇ ಮಾತು. ಇಂಥ ಚೆಲುವ ಮಗುವನ್ನು ಪಡೆದ ಆ ತಾಯಿ ಎಂಥ ಪುಣ್ಯವಂತೆ!’ ಎಲ್ಲರೂ ಮಗುವಿನ ಹೊರನೋಟದ ಚೆಲುವನ್ನಷ್ಟೆ ಅರ್ಥಮಾಡಿಕೊಂಡರೇ ಹೊರತು ಒಳಗಿನ ಆಳವನ್ನು ಅರಿತುಕೊಳ್ಳಲೇ ಇಲ್ಲ.

ಒಮ್ಮೊಮ್ಮೆ ಈ ಮಗುವಿನ ಬಾಲಲೀಲೆಗಳು ತಂದೆ-ತಾಯಿಗಳನ್ನು ದಂಗುಬಡಿಸುತ್ತಿದ್ದವು. ‘ಈ ಮಗು ಎಲ್ಲರಂತಲ್ಲ’ ಎಂದು ಅವರು ಪದೇ ಪದೇ ಅಂದುಕೊಳ್ಳುವಂತಾಗುತ್ತಿತ್ತು. ಅಂಥ ಒಂದು ಮಹತ್ವದ ಘಟನೆಯನ್ನು ಇಲ್ಲಿ ಉದಾಹರಿಸಬಹುದು;

ವಾಸುದೇವನಿಗೆ ಆಗ ಮೂರು ವರ್ಷ ಇರಬಹುದು. ಒಮ್ಮೆ ನಡಿಲ್ಲಾಯ ದಂಪತಿಗಳು ಅವನನ್ನು ಕರೆದುಕೊಂಡು ನಿಡಿಯೂರಿನ ತಮ್ಮ ಬಂಧುಗಳ ಮನೆಗೆ ಸಮಾರಂಭವೊಂದರಲ್ಲಿ ಪಾಲುಗೊಳ್ಳಲು ಹೋಗಿದ್ದರು.

ನಿಡಿಯೂರಿನ ಮನೆಯಲ್ಲಿ ಸಂಭ್ರಮದ ಮಧ್ಯೆ ವಾಸುದೇವ ಯಾರಿಗೂ ತಿಳಿಯದಂತೆ ಮೆಲ್ಲನೆ ಮನೆಯಿಂದ ಹೊರಟುಬಿಟ್ಟ.

ಎಷ್ಟು ಹೊತ್ತು ಕಳೆಯಿತೊ! ಯಾರೋ ಬಂಧುಗಳು, “ನಿಮ್ಮ ಮಗು ಎಲ್ಲಿ, ನೋಡಲೇ ಇಲ್ಲವಲ್ಲ?” ಎಂದು ವಿಚಾರಿಸಿದಾಗಲೆ ತಾಯಿಗೆ ಎಚ್ಚರ. ಆದರೆ ಮನೆಯ ಸುತ್ತುಮುತ್ತು ಎಲ್ಲಿ ಹುಡುಕಿದರೂ ಹುಡುಗ ನಾಪತ್ತೆ!

ನಡಿಲ್ಲಾಯ ದಂಪತಿಗಳು ಕಣ್ಣಲ್ಲಿ ನೀರು ತುಂಬಿಕೊಂಡು ತಾವು ಬಂದ ದಾರಿಗುಂಟ ಮಗುವನ್ನು ಹುಡುಕತೊಡಗಿದರು. ದಾರಿಯಲ್ಲಿ ಯಾರೋ ಸಿಕ್ಕಿದವರು ಹೇಳಿದರು : “ಪುಟ್ಟ ಮಗುವೊಂದು ಕೊಡವೂರು ದೇವಾಲಯದ ಬಳಿ ಹೋಗುತ್ತಿದ್ದುದನ್ನು ನಾವು ಕಂಡೆವು.” ಕೊಡವೂರಿನಲ್ಲಿ ಮಗು ಕಾಣಲಿಲ್ಲ. ಉಡುಪಿಯಿಂದ ಬರುತ್ತಿದ್ದ ದಾರಿಗರು ಇನ್ನೊಂದು ಸುದ್ದಿ ತಂದರು: “ಗದ್ದೆ-ಬಯಲುಗಳನ್ನು ದಾಟಿಕೊಂಡು ಮೂರುವರ್ಷದ ಪುಟ್ಟ ಮಗುವೊಂದು ಬನ್ನಂಜೆಯ ದೇವಾಲಯದತ್ತ ಹೋಗುತ್ತಿತ್ತು.”

ನಡಿಲ್ಲಾಯರು ಬನ್ನಂಜೆಗೆ ಓಡಿದರು. ಅಲ್ಲಿಯೂ ಮಗು ಕಾಣಿಸಲಿಲ್ಲ.

ಅಲ್ಲಿಂದ ಉಡುಪಿಗೆ ಹತ್ತು ನಿಮಿಷದ ದಾರಿ. ನಡಿಲ್ಲಾಯರು ಹುಡುಕುತ್ತ, ವಿಚಾರಿಸುತ್ತ ಉಡುಪಿಗೆ ಬಂದುರ. ತಾನು ನಂಬಿದ ಅಧಿದೇವತೆಯಾದ ಅನಂತೇಶ್ವರನ ಗುಡಿಗೆ ಬಂದರು. ಓಹ್‌! ಎಂಥ ಅಚ್ಚರಿ! ಮಗು ವಾಸುದೇವ ಅನಂತೇಶ್ವರನ ಲಿಂಗದ ಮುಂದೆ ಕೈಮುಗಿದು ನಿಂತಿದ್ದಾನೆ.

ಅವರು ಸುರಿಸಿದ ಕಣ್ಣೀರು ಈಗ ಆನಂದಭಾಷ್ಪವಾಯಿತು. ಹೋದ ಜೀವ ಮರಳಿ ಬಂದಂತಾಯಿತು. ಯಾವ ಅನಂತೇಶ್ವರನ ಅನವರತ ಆರಾಧನೆಯ ಫಲವಾಗಿ ಈ ಮಗು ಹುಟ್ಟಿತೋ ಅವನ ಸನ್ನಿಧಿಯಲ್ಲೆ ಮತ್ತೆ ಮಗುವಿನ ದರ್ಶನ! ಏನೂ ನಡೆದಿಲ್ಲ ಎನ್ನುವಂತೆ ಸಹಜವಾಗಿ ಮುಗುಳು ನಗುತ್ತ ನಿಂತಿದೆ ಮಗು! ನಡಿಲ್ಲಾಯರು ಅಕ್ಕರೆಯಿಂದ ಕೇಳಿದರು: “ಮಗು, ವಾಸುದೇವ, ನೀನೊಬ್ಬನೆ ಇಷ್ಟು ದೂರ ಹೇಗೆ ಬಂದೆ? ದಾರಿ ಹೇಗೆ ತಿಳಿಯಿತು ನಿನಗೆ?”

“ಅಪ್ಪ, ನಾನೊಬ್ಬನೆ ಬಂದದ್ದಲ್ಲ. ಮೊದಲು ಕಾನಂಗಿಯ (ಕೊಡವೂರು) ಶಂಕರ- ನಾರಾಯಣರನ್ನು ಕಂಡೆ. ಅಲ್ಲಿಂದ ತಾಳೆಕುಡೆ (ಬನ್ನಂಜೆ)ಯ ಮಹಾಲಿಂಗೇಶ್ವರನನ್ನು ಕಂಡೆ. ಅಲ್ಲಿಂದ ಇಲ್ಲಿಗೆ ಬಂದೆ. ಚಂದ್ರಮೌಳೇಶ್ವರನನ್ನು ಕಂಡೆ. ಈ ಲಿಂಗದಲ್ಲಿ ನೆಲೆಸಿರುವ ಮಹಾದೇವ ನಾರಾಯಣನನ್ನು ಕಂಡೆ. ಈ ಎಲ್ಲ ದೇವಾಲಯಗಳಲ್ಲಿ ನೆಲೆಸಿರುವ ದೇವರ ದಾರಿ ಯುದ್ದಕ್ಕೂ ನನ್ನ ಜತೆಗಿದ್ದ. ಅವನೇ ಜತೆಗಾರನಾಗಿ ಬಂದ, ಅವನೇ ದಾರಿ ತೋರಿಸಿದ.”

 

‘ದೇವರು ದಾರಿಯುದ್ದಕ್ಕೂ ನನ್ನ ಜತೆಗಿದ್ದ.’

ಮೂವತ್ತರ ಹರಯದಲ್ಲಿ ಮುಸ್ಲಿಂ ದೊರೆಯ ಬಳಿ ಹೇಳಿದ ಮಾತು, ಮೂರರ ಹಸುಳೆಯಾಗಿ ತಂದೆಯ ಬಳಿ ಆಡಿದ ಮಾತು – ಎರಡೂ ಒಂದೇ: “ಭಗವಂತನ ಕರುಣೆಯಿಂದ ನಾವು ಬಂದೆವು. ‘ಮೊಳಕೆಯಲ್ಲಿ ಇರದ ಗುಣ ಬೆಳಕೆಯಲ್ಲಿ ಬಂದೀತೆ? ಹೌದು, ಇದು ಯಾರ ಅಂಕಿತಕ್ಕೂ ಸಿಗದ ಮಗು; ಭಗವಂತ ತೋರಿದ ದಾರಿಯಲ್ಲಿ ಮಾತ್ರವೆ ನಡೆಯಲೆಂದು ಬಂದ ಮಗು; ಭಗವಂತನೆಡೆಗೆ ದಾರಿ ತೋರಲೆಂದು ಬಂದ ಮಗು.

ಎಳೆಯ ಪ್ರತಿಭೆ

ಮಗುವಿಗೆ ಮೂರು ವರ್ಷ ತುಂಬಿದಾಗ ತಂದೆ ಅಕ್ಷರಾಭ್ಯಾಸ ಮಾಡಿಸಿದರು. ಒಂದು ದಿನದ ಪಾಠ ಮುಗಿಯಿತು. ಮಾರನೆಯ ದಿನ ಮತ್ತೆ ಅದೇ ಅಕ್ಷರಗಳನ್ನು ತಿದ್ದಿಸತೊಡಗಿದಾಗ ವಾಸುದೇವ ತಂದೆಯನ್ನು ಕೇಳಿದ: “ಅಪ್ಪಾ, ಬರೆದದ್ದನ್ನೆ ಯಾಕೆ ಬರೆಸುತ್ತೀರಿ? ಅದನ್ನು ನಿನ್ನೆ ಹೇಳಿಕೊಟ್ಟಾಯಿತಲ್ಲ. ಇವತ್ತು ಹೊಸತೇನನ್ನಾದರೂ ಹೇಳಿಕೊಡಿ.”

ತಂದೆ ನಡಿಲ್ಲಾಯರಿಗೆ ಒಂದೆಡೆ ಸಂತೋಷ; ಒಂದೆಡೆ ಆಶ್ಚರ್ಯ. ತನ್ನ ಮಗ ಎಂಥ ಪ್ರತಿಭಾಶಾಲಿ ಎಂಬ ಸಂತೋಷ. ಮೂರು ವರ್ಷದ ಹಸುಳೆಯಲ್ಲಿ ಇಂಥ ಮಿಂಚಿನ ಪ್ರತಿಭೆಯನ್ನು ಕಂಡು ಆಶ್ಚರ್ಯ. ಜತೆಗೆ ಎಲ್ಲಿ ಈ ಹುಡುಗನಿಗೆ ದೃಷ್ಟಿಯಾದೀತೋ ಎನ್ನುವ ಭಯ. ತಾಯಿ ದೃಷ್ಟಿ ನಿವಾಳಿಸಿದರೆ ತಂದೆ ಯಾರೂ ಕಾಣದ ಏಕಾಂತದಲ್ಲಿ ಮಗನಿಗೆ ಪಾಠ ಮಾಡತೊಡಗಿದರು. ಕೆಲವೇ ಸಮಯದಲ್ಲಿ ವಾಸುದೇವ ಯಾವುದೇ ಪುಸ್ತಕವನ್ನು ಸೊಗಸಾಗಿ ಓದಬಲ್ಲವನಾದ. ಅವನು ಓದುವುದನ್ನು ಕೇಳುವುದೆ ಒಂದು ಆನಂದ. ಅಂಥ ಕಂಠಮಾಧುರ್ಯ; ಅಂಥ ವಾಚನ.

ವಾಸುದೇವನಿಗೆ ಆಗ ಸುಮಾರು ಐದು ವರ್ಷ. ಅವನ ತಾಯಿ ಅವನನ್ನು ನೇಯಂಪಳ್ಳಿ ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದರು.

ಸಂಜೆಯ ಹೊತ್ತು ಪುರಾಣವಾಚನ ನಡೆದಿತ್ತು. ಮಡಿತಾಯ ಶಿವಭಟ್ಟರು ಆ ಭಾಗದಲ್ಲೆ ಪ್ರಸಿದ್ಧ ಪುರಾಣಿಕರು. ಜನರು ಆಸಕ್ತಿಯಿಂದ ಅವರ ವಾಚನವನ್ನಲಿಸುತ್ತಿದ್ದರು. ಆಗ ತಾಯಿಯ ಬಳಿ ಕುಳಿತಿದ್ದ ಪುಟ್ಟ ಬಾಲಕ ವಾಸುದೇವ ಎದ್ದುನಿಂತ; ಶಿವಭಟ್ಟರಿಗೆ ಹೇಳಿದ: “ಪುರಾಣಿಕರೆ, ಪುರಾಣದ ಅರ್ಥ ಒಂದು, ನೀವು ಹೇಳಿದ್ದು ಇನ್ನೊಂದು ಆಯಿತಲ್ಲ.”

ಶಿವಭಟ್ಟರಿಗೆ ಈ ವರ್ತನೆ ಅಧಿಕಪ್ರಸಂಗ ಅನ್ನಿಸಿರಬೇಕು. ಆದರೆ ವಾಸುದೇವ ನಿರರ್ಗಳವಾಗಿ ಶ್ಲೋಕದ ನಿಜ ಅರ್ಥವನ್ನು ಸಭೆಯ ಮುಂದೆ ವಿವರಿಸಿದ. ಜನ ತಲೆದೂಗಿದರು.

ಇನ್ನೊಮ್ಮೆ ತಂದೆ ನಡಿಯಲ್ಲಾಯರೆ ಈ ಮಗನ ಕೈಯಲ್ಲಿ ಬೇಸ್ತುಬಿದ್ದರು. ಅವರೂ ಆ ಕಾಲದ ಪ್ರಸಿದ್ಧ ಪುರಾಣಿಕರು. ಒಮ್ಮೆ ಪುರಾಣವಚನ ನಡೆದಿತ್ತು. ಒಂದು ಶಬ್ದ ಅರ್ಥ ಅವರಿಗೆ ಆ ಕ್ಷಣ ಹೊಳೆಯಲಿಲ್ಲ. ಅವರು ಆ ಶಬ್ದವನ್ನು ಬಿಟ್ಟೇ ಮುಂದುವರಿಸಿದರು. ತಕ್ಷಣ ವಾಸುದೇವ ಎದ್ದುನಿಂತು ನುಡಿದ: “ಅಪ್ಪಾ, ನಿವು ಎಲ್ಲಾ ಮರಗಳ ಹೆಸರನ್ನು ಅನುವಾದಿಸಿದರಿ. ‘ಲಕುಚ’ ಶಬ್ದದ ಅರ್ಥವನ್ನು ಮಾತ್ರ ಹೇಳಲೇ ಬಿಲ್ಲ. ‘ಹೆಬ್ಬಲಸು’ ಎಂದಲ್ಲವೆ ಅಪ್ಪಾ, ಅದರ ಅರ್ಥ?”

ತಂದೆ ನಾಚಿಕೆಯೆನ್ನಿಸಲಿಲ್ಲ. ಮಗನಿಂದ ಒಂದು ಹೊಸ ಶಬ್ದದ ಅರ್ಥ ತಿಳಿಯಿತಲ್ಲ ಎಂದು ಸಂತೋಷವಾಯಿತು. ಇಂಥ ಮಗನ ತಂದೆಯಾದುದಕ್ಕಾಗಿ ಹೆಮ್ಮೆಯೆನಿಸಿತು.

ವಾಸುದೇವನಿಗೆ ಏಳು ವರ್ಷವಾಯಿತು. ನಡಿಲ್ಲಾಯರು ಮಗನಿಗೆ ಸಕಾಲದಲ್ಲಿ ಉಪನಯನ ಮಾಡಿದರು. ಅನಂತರ ವೇದಾಧ್ಯಯನಕ್ಕಾಗಿ ಗುರುಕುಲವಾಸ. ಆ ಕಾಲದ ಹಿರಿಯ ವೇದಜ್ಞರಾದ ತೋಟಂತಿಲ್ಲಾಯರಲ್ಲಿ ವಾಸುದೇವನ ಅಧ್ಯನ ಪ್ರಾರಂಭವಾಯಿತು.

ವಾಸುದೇವನ ಕ್ರಮ ತೋಟಂತಿಲ್ಲಾಯರಿಗೆ ವಿಚಿತ್ರವೆನಿಸಿತು. ಪಾಠದ ಹೊತ್ತಿಗಷ್ಟೆ ಗುರುಗಳ ಎದುರು ಮುಖ ತೋರಿಸುತ್ತಿದ್ದ. ಉಳಿದ ಸಮಯವೆಲ್ಲ ಆಟದ ಬಯಲಲ್ಲಿ.

ವಯಸ್ಸಿಗೆ ಮೀರಿ ದೃಢಕಾಯನಾದ ವಾಸುದೇವ ಆಟದ ಬಯಲಿಗೆ ಇಳಿದನೆದರೆ ಸಹಪಾಠಿಗಳೆಲ್ಲ ಅವನ ಸುತ್ತುವರಿಯುತ್ತಿದ್ದರು. ಒಂದೊಂದು ದಿನ ಒಂದೊಂದು ಬಗೆಯ ಆಟ. ಒಂದು ದಿನ ವೇಗದ ಓಟದ ಸ್ಪರ್ಧೆ. ಮೊದಲು ಗುರಿ ಮುಟ್ಟಿದವ ವಾಸುದೇವ. ಇನ್ನೊಮ್ಮೆ ಈ ಜಾಟದ ಸ್ಪರ್ಧೆ. ಅದರಲ್ಲೂ ಮೊದಲು ತುದಿ ಮುಟ್ಟಿದವ ವಾಸುದೇವ. ಮತ್ತೊಮ್ಮೆ ಜಟ್ಟಿಕಾಳಗ. ಎಲ್ಲ ಸಹಪಾಠಿಗಳು ಜತೆಯಾಗಿ ಮೇಲೆರಗಿದರೂ ವಾಸುದೇವ ಮಿಸುಕಾಡಲಿಲ್ಲ. ಆದರೆ ವಾಸುದೇವನ ಒಂದು ಹೊಡೆತಕ್ಕೆ ಎಲ್ಲರೂ ಮುಗ್ಗರಿಸಿ ಬಿದ್ದರು. “ನೀರು ದಾಟುವುದರಲ್ಲಿ ಇವ ಆಂಜನೇಯ, ಭಾರ ಎತ್ತುವುದರಲ್ಲಿ ಭೀಮಸೇನ” ಎಂದು ಸಹಪಾಠಿಗಳು ಮೂಗಿಗೆ ಬೆರಳೇರಿಸಿದರು.

ಗುರು ತೋಟಂತಿಲ್ಲಾಯರಿಗೆ ಇದು ಸರಿಬರಲಿಲ್ಲ. ಹುಡುಗ ಓದುವುದಿಲ್ಲ ಎಂದು ಅವರ ಆಕ್ಷೇಪ. ಒಮ್ಮೆ ಅವರು ಹಂಗಿಸುವ ದನಿಯಲ್ಲಿ ಹೇಳಿದರು : “ಓಹೋ, ಭಾರೀ ಬೃಹಸ್ಪತಿ ನೀನು. ಓದದೆಯೆ ಎಲ್ಲ ಬಂದುಬಿಡುತ್ತದೆ– ಅಲ್ಲವೇ? ಹಾಗಾದರೆ ಈ ಮೊದಲು ಆದ ಸೂಕ್ತಗಳನ್ನು ಹೇಳಿ ತೋರಿಸು ನೋಡೋಣ.”

ವಾಸುದೇವ ಪದ್ಮಾನ ಹಾಕಿ ಕುಳಿತ. ಅವರು ಕೇಳಿದ ಎಲ್ಲ ಸೂಕ್ತಗಳನ್ನೂ ಸ್ವರಶುದ್ಧವಾಗಿ ಹೇಳಿ ತೋರಿಸಿದ. ಅಂದಿನಿಂದ ತೋಟಂತಿಲ್ಲಾಯರು ಈ ಶಿಷ್ಯನನ್ನು ಪರೀಕ್ಷೆ ಮಾಡುವ ಸಾಹಸಕ್ಕೆ ಇಳಿಯಲಿಲ್ಲ. ಅವನ ಆಟ–ಪಾಠಗಳು ಸಾಂಗವಾಗಿ ನಡೆದವು.

 

‘ಯಾವ ಹೆಸರಿನಿಂದ ಕರೆದರೂ ಓಗೊಡುವ ದೇವರು ಒಬ್ಬನೇ.’

ಗುರುಶಿಷ್ಯರ ಮಲ್ಲಯುದ್ಧ

 

ಆಚಾರ್ಯ ಮಧ್ವರು ದೇಹದಾರ್ಢ್ಯಕ್ಕೆ ತುಂಬ ಮಹತ್ವವನ್ನು ಕೊಟ್ಟವರು. ದೇಶದ ಜನಾಂಗ ಬೌದ್ಧಿಕವಾಗಿ ಮಾತ್ರವಲ್ಲ, ದೈಹಿಕವಾಗಿ ಕೂಡ ಸಶಕ್ತವಾಗಿರಬೇಕು ಎನ್ನುವುದು ಅವರ ಜೀವನಸಂದೇಶವಾಗಿತ್ತು. ದುರ್ಬಲ ದೇಹದಲ್ಲಿ ಬುದ್ಧಿಯೂ ಬಲಿಷ್ಠವಾಗಿ ಬೆಳೆಯಲಾರದು. ದೇಹ ಬಲಿಷ್ಠವಾಗಿರಬೇಕು. ಆದರೆ ದೇಹ ಮಾತ್ರವೇ ಬಲಿಷ್ಠವಾಗದಂತೆ ಎಚ್ಚರ ವಹಿಸಬೇಕು.

ಆಚಾರ್ಯರು ತಮ್ಮ ಸಂನ್ಯಾಸಿ ಶಿಷ್ಯರಿಗೆ ಕೂಡ ಈ ಅಂಗಸಾಧನೆಯ ನಿಯಮವನ್ನು ಕಡ್ಡಾಯವಾಗಿ ಕಲಿಸುತ್ತಿದ್ದರು. ‘ಜಗತ್ತಿನಲ್ಲಿ ಭಗವಂತನಿಗಲ್ಲದೆ ಇನ್ನೊಬ್ಬನಿಗೆ ತಲೆ ತಗ್ಗಿಸಬೇಡಿ. ಎದೆ ಸೆಟೆದು ನಿರ್ಭಯವಾಗಿ ನಿಲ್ಲಲು ಕಲಿಯಿರಿ’ ಎಂದು ಅವರು ಸದಾ ಬೋಧಿಸುತ್ತಿದ್ದರು.

ಆಚಾರ್ಯರ ನಲವತ್ತರ ಹರೆಯದಲ್ಲಿ ಒಮ್ಮೆ ಹೀಗೆ ನಡೆಯಿತು: ಹದಿನೈದು ಮಂದಿ ಶಿಷ್ಯರ ಜೊತೆ ಆಗ ಅವರು ವಾರಣಾಸಿಯಲ್ಲಿ ವಾಸವಾಗಿದ್ದರು. ಶಿಷ್ಯರು ತಮ್ಮ ದೇಹದಾರ್ಢ್ಯದ ಬಗೆಗೆ ಕೊಚ್ಚಿಕೊಳ್ಳುತ್ತಿರುವುದು ಒಮ್ಮೆ ಅವರ ಕಿವಿಗೆ ಬಿತ್ತು. ಅವರ ಕಣ್ಣು ತೆರೆಯಿಸಬೇಕು ಎನ್ನಿಸಿತು ಆಚಾರ್ಯರಿಗೆ. ಅವರು ಶಿಷ್ಯರನ್ನು ಕರೆದು ವಿನೋದವಾಗಿ ನುಡಿದರು: “ನಿಮ್ಮ ಬುದ್ಧಿಬಲವನ್ನು ನಾನು ಹಲವು ಬಾರಿ ಪರೀಕ್ಷಿಸಿದ್ದುಂಟು. ದೇಹ ಬಲವನ್ನೀಗ ಪರೀಕ್ಷಿಸಬೇಕಾಗಿದೆ. ನೀವು ಇಷ್ಟೂ ಮಂದಿ ಏಕಕಾಲದಲ್ಲಿ ನನ್ನ ಜತೆ ಹೋರಾಡಬೇಕು. ಯಾರಾದರೂ ಹಿಂದೆಗೆದರೆ ಗುರ್ವಾಜ್ಞೆಯನ್ನು ಉಲ್ಲಂಘಿಸಿದಂತಾದೀತು.”

ಇಪ್ಪತ್ತರ ಆಚೆ ಈಚೆ ಅಂಚಿನಲ್ಲಿರುವ ಹದಿನೈದು ಮಂದಿ ಶಿಷ್ಯರಿಗೂ ನಲವತ್ತರ ಗುರುವಿಗೂ ನಡುವೆ ಅಪೂರ್ವವಾದ ಮಲ್ಲಯುದ್ಧ. ತನ್ನ ಮೇಲೆ ಎರಗಬಂದ ಶಿಷ್ಯರನ್ನು ಆಚಾರ್ಯರು ಹಿಂದೇ ಕೈಯಿಂದ ತಡೆದು ತಳ್ಳಿದರು. ಹದಿನೈದು ಮಂದಿಯೂ ಉರುಳಿದರು.

ಆಚಾರ್ಯರು ಕೈಯ ಒತ್ತಡವನ್ನು ಬಿಗಿಗೊಳಿಸಿ ನಗುತ್ತ ನುಡಿದರು: “ಏಕೆ ಬಿದ್ದೇ ಇದ್ದೀರಿ? ನನ್ನ ಕೈಯ ಹಿಡಿತವನ್ನು ತಪ್ಪಿಸಿಕೊಂಡು ಎದ್ದು ನಿಲ್ಲಿ.” ಶಿಷ್ಯರು ಮಲಗಿದ್ದಲ್ಲೆ ಭಿನ್ನವಿಸಿಕೊಂಡರು: “ತಮ್ಮ ಒಂದೊಂದು ಬೆರಳೂ ಬೆಟ್ಟದ ಭಾರದಿಂದ ನಮ್ಮನ್ನು ಅದುಮಿ ಹಿಡಿದಿದೆ. ನಮಗೆ ಉಸಿರಾಡುವುದೂ ಕಷ್ಟವಾಗಿದೆ. ದಯವಿಟ್ಟು ಕೈಯ ಹಿಡಿತವನ್ನು ಸಡಿಲಗೊಳಿಸಿರಿ.”

ಗುರುಗಳು ವೇದಾಂತದಲ್ಲಿ ಗಟ್ಟಿ ಎನ್ನುವುದು ಶಿಷ್ಯರಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಅವರು ಅಗತ್ಯ ಬಂದಾಗ ಜಟ್ಟಿಯೂ ಆಗಬಲ್ಲರು ಎನ್ನುವುದು ಈಗ ಅವರಿಗೆ ತಿಳಿಯಿತು

ದಂಡ ಹಿಡಿದ ಕೈಯಲ್ಲಿ ಕೊಡಲಿ

ಜೀವನದಲ್ಲಿ ಆಪತ್ತು ಒದಗಿದಾಗ ಹೇಗೆ ಎದುರಿಸಬೇಕು ಎನ್ನುವುದನ್ನು ಅವರು ಶಿಷ್ಯರಿಗೆ ಕಲಿಸಿದ ಇನ್ನೊಂದು ಘಟನೆ ಅದ್ಭುತವಾದದ್ದು: ಬದರಿಯ ಕಡೆ ಬಯಣ ಹೊರಟಿತ್ತು. ಹಿಮಾಲಯದ ಏರು ತಗ್ಗುಗಳ ದುರ್ಗಮ ಅರಣ್ಯದಲ್ಲಿ ಸಂನ್ಯಾಸಿಗಳ ಪಡೆ ನಡೆದಿತ್ತು. ಶಿಷ್ಯರ ತಲೆ ಮೇಲೆ ಪೂಜೆ ವಸ್ತುಗಳ ಗಂಟು. ಇದ್ದಕ್ಕಿದ್ದಂತೆ ದರೋಡೆಗಾರರ ಗುಂಪೊಂದು ಇವರನ್ನು ಅಡ್ಡಗಟ್ಟಿತು. ಕೈಯಲ್ಲಿ ಕೊಡಲಿ ಹಿಡಿದು ಎದುರಾದ ಈ ಕಂಟಕವನ್ನು ಕಂಡು ಶಿಷ್ಯರು ಗಲಿಬಿಲಿಗೊಂಡರು. ಆಚಾರ್ಯರ ಮುಖದಲ್ಲಿ ಮಾತ್ರ ಮಂದಹಾಸ ಮಾಸಲಿಲ್ಲ. ಅವರು ತಮ್ಮ ಶಿಷ್ಯರಲ್ಲಿ ಒಬ್ಬರಾದ ಉಪೇಂದ್ರತೀರ್ಥರನ್ನು ಕರೆದು ನುಡಿದರು: “ಉಪೇಂದ್ರ, ನಿನ್ನ ಸಹಯಾತ್ರಿಕರಿಗೆ ಆಪತ್ತು ಬಂದಾಗ ಏನು ನೋಡುತ್ತ ನಿಂತಿರುವೆ? ದಂಡ ಹಿಡಿದ ಕಯಗೆ ಕೊಡಲಿ ಹಿಡಿಯುವುದೂ ತಿಳಿದಿರಬೇಕು. ನಡೆ ಮುಂದೆ.”

ಗುರುನಿದೇಶದಿಂದ ಉಪೇಂದ್ರತೀರ್ಥರಿಗೆ ವೀರಾವೇಶ ಬಂದಂತಾಯಿತು. ಅವರು ಗಾಳಿಯಂತೆ ರೊಯ್ಯನೆ ಮುನ್ನುಗ್ಗಿ ಒಬ್ಬ ದರೋಡೆಗಾರನ ಕೈಯಲ್ಲಿದ್ದ ಕೊಡಲಿಯನ್ನೇ ಕಿತ್ತುಕೊಂಡು ಬೀಸತೊಡಗಿದರು. ಈ ಸಂನ್ಯಾಸಿಯ ಬೀರ(ಶೌರ್ಯ) ವನ್ನು ಕಂಡು ಕಂಗಾಲಾದ ದರೋಡೆಗಾರರು ಕಾಲಿಗೆ ಬುದ್ಧಿ ಹೇಳಿದರು.

ನಾನು ಸಂನ್ಯಾಸಿಯಾಗಲಿದ್ದೇನೆ

ಹೀಗೆ ವೇದಾಂತ ಸಾಮ್ರಾಜ್ಯದ ವೀರಸೇನಾನಿಯಂತೆ ಬದುಕಿದ ಆಚಾರ್ಯರು ದಂಡಪಾಣಿಗಳಾಗಿ ಸಂನ್ಯಾಸ ಸ್ವೀಕರಿಸಿದ ಕಥೆಯೂ ಒಂದು ವಿಚಿತ್ರವೆ.

ಆಗ ವಾಸುದೇವನಿಗೆ ಇನ್ನೊಂದು ವರ್ಷ. ಒಂದು ಮುಂಜಾನೆ ಎದ್ದವನೆ ಅವನು ನೇರ ಮನೆಯಿಂದ ಉಡುಪಿಗೆ ಬಂದ. ಉಡುಪಿನಲ್ಲಿ ಆಗ ಅಚ್ಯುತ ಪ್ರಜ್ಞರೆಂಬ ಖ್ಯಾತ ಯತಿಗಳು ನೆಲಸಿದ್ದರು. ವಾಸುದೇವ ಅವರ ಶಿಷ್ಯತ್ವ ಸ್ವೀಕರಿಸಿ ಮಠದಲ್ಲೆ ನಿಂತುಬಿಟ್ಟ. ಮನೆಯಲ್ಲಿ ಮಗ ಕಾಣೆಯಾದದ್ದನ್ನು ಕಂಡು ನಡಿಲ್ಲಾಯರು ಹುಡುಕಿಕೊಂಡು ಬಂದರು. ಮಗನ ಉತ್ತರ: “ನನ್ನ ಬದುಕಿನ ಉದ್ದೇಶವನ್ನು ನಾನು ಪೂರೈಸಬೇಕಾಗಿದೆ. ನನ್ನನ್ನು ನನ್ನಷ್ಟಕ್ಕೆಯೆ ಬಿಟ್ಟುಬಿಡಿ. ನಾನು ಸಂನ್ಯಾಸಿಯಾಗಲಿದ್ದೇನೆ.”

ವಾಸುದೇವನ ಅನಂತರ ಹುಟ್ಟಿದ್ದ ಇಬ್ಬರು ಗಂಡು ಮಕ್ಕಳೂ ಚಿಕ್ಕಂದಿನಲ್ಲೆ ತೀರಿಕೊಂಡಿದ್ದರು. ಇದ್ದ ಒಬ್ಬ ಮಗನೂ ಸಂನ್ಯಾಸಿಯಾಗುತ್ತಾನೆ ಎಂದರೆ ಮುದಿ ತಂದೆಗೆ ಹೇಗಾಗಬೇಡ? ಆದರೆ ಈ ಮಗ ತಾನು ಹಿಡಿದ ಛಲವನ್ನು ಬಿಡುವವನಲ್ಲ. ಹೇಗೆ ಇವನ ಮನವೊಲಿಸುವುದು ಎಂದು ತೋಚದೆ ದಿಕ್ಕುಗೆಟ್ಟು, ನಡಿಲ್ಲಾಯರು ಮಗನ ಕಾಲಿಗೆ ಅಡ್ಡಬಿದ್ದು ಗೋಗರೆದರು: “ನಿನ್ನ ದಮ್ಮಯ್ಯ, ಸಂನ್ಯಾಸ ತೆಗೆದುಕೊಂಡು ನಮ್ಮನ್ನು ದಾರಿಯಲ್ಲಿ ಹಾಕಬೇಡ.”

ವಾಸುದೇವನ ಉತ್ತರ ಸಿದ್ಧವಾಗಿತ್ತು: “ಅಪ್ಪಾ, ಸಂನ್ಯಾಸಿಯಲ್ಲದ ಮಗನಿಗೆ ತಂದೆ ನಮಸ್ಕರಿಸುವುದು ತಪ್ಪು. ನೀವೀಗ ನನಗೆ ನಮಸ್ಕರಿಸಿದ್ದರಿಂದ ನನ್ನನ್ನು ಸಂನ್ಯಾಸಿ ಎಂದು ಒಪ್ಪಿಕೊಂಡಂತೆಯೇ ಆಯಿತು.”

ತಂದೆ-ಮಗನಲ್ಲಿ ಎಷ್ಟೋ ವಾದ ನಡೆಯಿತು. ವಾಸುದೇವ ಎಲ್ಲ ವಾದಗಳಿಗೂ ಉತ್ತರ ಕೊಟ್ಟ.

ನಡಿಲ್ಲಾಯರಿಗೆ ಈಗ ಒಂದೇ. ಆಸೆಯ ತಂತು ಉಳಿದಿತ್ತು. ಅದನ್ನು ಪ್ರಯೋಗಿಸಿ ನೋಡಿದರು. “ನಾನೇನೋ ಮನಸ್ಸು ಗಟ್ಟಿಮಾಡಿಕೊಂಡು ಒಪ್ಪಿಗೆ ಕೊಡಬಲ್ಲೆ. ಆದರೆ ನಿನ್ನ ತಾಯಿಯನ್ನು ಒಪ್ಪಿಸುವುದು ಅಸಾಧ್ಯ.”

“ತಾಯಿಯನ್ನು ಒಪ್ಪಿಸುವ ಕೆಲಸ ನನಗೆ ಬಿಡಿ” ಎಂದ ವಾಸದೇವ. ನಡಿಲ್ಲಾಯರು ಮನೆಗೆ ಬಂದು ಹೆಂಡತಿಯನ್ನು ಎಚ್ಚರಿಸಿದರು: “ವಾಸುದೇವ ಬಂದು ಕೇಳಿದರೆ ಎಷ್ಟು ಮಾತ್ರಕ್ಕೂ ಸಂನ್ಯಾಸಕ್ಕೆ ಒಪ್ಪಿಗೆ ಕೊಡಬೇಡ.”

ಆದರೆ ವಾಸುದೇವನಿಗೆ ಗೊತ್ತು – ತನ್ನ ಕಾರ್ಯ ಹೇಗೆ ಸಾಧಿಸಬೇಕು ಎನ್ನುವುದು. ಅವನು ತಾಯಿಯ ಬಳಿ ಬಂದ. ತಾಯಿ ಸಿದ್ಧಮಾಡಿಟ್ಟ ಅಸ್ತ್ರ ಹೊರಬರುವ ಮುನ್ನವೆ ಅವನ ಅಸ್ತ್ರ ಹೊರಬಿತ್ತು: “ಅಮ್ಮ, ನಿನಗೆ ಈ ಮಗ ನಿನ್ನ ಕಣ್ಣ ಮುಂದೆ ಇರಬೇಕು ಎಂಬ ಆಸೆ ಇದ್ದರೆ ಸಂನ್ಯಾಸಕ್ಕೆ ಒಪ್ಪಿಗೆ ಕೊಡು. ಇಲ್ಲ, ಈ ಮಗನ ಆಸೆ ಬಿಟ್ಟುಬಿಡು. ಎಂದೆಂದಿಗೂ ನಾನು ನಿನ್ನ ಪಾಲಿಗೆ ಇಲ್ಲವಾದಂತೆಯೆ ಎಂದು ತಿಳಿ. “ಅಸ್ತ್ರ ಪರಿಣಾಮ ಬೀರಿತು. ತಾಯಿ ನಿರುಪಾಯರಾಗಿ ಒಪ್ಪಿಗೆ ನೀಡಿದರು. ಆದರೆ ಅವರದು ಒಂದೇ ಕೊರಗು. “ಮುಪ್ಪಿನಲ್ಲಿ ತಮ್ಮನ್ನು ನೋಡಿಕೊಳ್ಳಲು ಇದ್ದ ಒಬ್ಬ ಮಗನೂ ದಕ್ಕಲಿಲ್ಲವಲ್ಲ’ ಎಂದು. ಇದಕ್ಕೂ ವಾಸುದೇವನ ಬಳಿ ಪರಿಹಾರ ಸಿದ್ಧವಾಗಿತ್ತು” ನಿಮ್ಮನ್ನು ನೋಡಿಕೊಳ್ಳಲು ಇನ್ನೊಬ್ಬ ಮಗ ಹುಟ್ಟುವತನಕ ನಾನು ಸಂನ್ಯಾಸಿಯಾಗುವುದಿಲ್ಲ. ಸರಿ ತಾನೆ?”

ತಾಯಿ ವೇದಾವತಿ ಮುಂದಿನ ವರ್ಷವೆ ಒಂದು ಗಂಡು ಮಗುವನ್ನು ಹೆತ್ತರು. ಈ ಮಗನೆ ಕೊನೆಯ ಕಾಲದ ತನಕ ತಂದೆ ತಾಯಿಗಳ ಸೇವೆ ಮಾಡಿ ಕೊನೆಗೆ ತಾನೂ ಆಚಾರ್ಯರ ಬಳಿ ಸಂನ್ಯಾಸ ಸ್ವೀಕರಿಸಿದರು. ಇವರೇ ವಿಷ್ಣುತೀರ್ಥರೆಂದು ಪ್ರಸಿದ್ಧರಾದವರು. ಜೀವಮಾನವೆಲ್ಲ ಎಲೆ-ಹಣ್ಣು ತಿಂದು ಕಠಿಣ ತಪಸ್ಸನ್ನಾಚರಿಸಿದ ಮಹಾಯೋಗಿಗಳು, ಅಣ್ಣನಿಗೆ ತಕ್ಕ ತಮ್ಮ.

ಪೂರ್ಣಪ್ರಜ್ಞ ಆನಂದತೀರ್ಥಮಧ್ವ

ಕೊನೆಗೂ ತಂದೆ ತಾಯಿ ಸೋತರು. ವಾಸುದೇವ ಅಚ್ಯುತಪ್ರಜ್ಞರ ಬಳಿ ಸಂನ್ಯಾಸ ದೀಕ್ಷೆ ಪಡೆದು ದಂಡಧಾರಿಯಾದ ನಡಿಲ್ಲಾಯ ವಾಸುದೇವ ಭಟ್ಟ ‘ಪೂರ್ಣಪ್ರಜ್ಞ’ ರಾದರು.

ಆಗಿನ್ನೂ ಪೂರ್ಣಪ್ರಜ್ಞರಿಗೆ ಹನ್ನೆರಡು ವರ್ಷ. ಸಂನ್ಯಾಸಿ ಆಗಿ ನಲವತ್ತು ದಿನಗಳಷ್ಟೆ ಸಂದಿವೆ. ಆ ಸಮಯದಲ್ಲಿ ಪ್ರಚಂಡ ತಾರ್ಕಿಕರಾದ ವಾಸುದೇವ ಪಂಡಿತ ಮುಂತಾದವರು ವಿಜಯ ಪತ್ರದೊಡನೆ ಉಡುಪಿಗೆ ಬಂದರು. ಅಚ್ಯುತಪ್ರಜ್ಞರು ತನ್ನ ಹೊಸ ಶಿಷ್ಯನನ್ನು ಅವರ ಜತೆ ವಾದಕ್ಕೆ ಕಳುಹಿಸಿದರು. ಹನ್ನೆರಡರ ಶಿಷ್ಯನನ್ನು ಅವರ ಜತೆ ವಾದಕ್ಕೆ ಕಳುಹಿಸಿದರು. ಹನ್ನೆರಡರ ಹರಯದ ಪೂರ್ಣಪ್ರಜ್ಞರು ದಿಗಂತಖ್ಯಾತಿಯ ದಿಗ್ಗಜ ಪಂಡಿತರನ್ನು ಸುಲಭದಲ್ಲಿಯೇ ನಿರುತ್ತರಗೊಳಿಸಿದರು.

ಹನ್ನೆರಡರ ಹರಯದಲ್ಲೆ ಅರಳಿನಿಂತ ಈ ಪೂರ್ಣಪ್ರತಿಭೆಯನ್ನು ಕಂಡು ಅಚ್ಯುತಪ್ರಜ್ಞರು ಆನಂದ ತುಂದಿಲರಾದರು. ಎಂದೇ ಅವರು ಪೂರ್ಣಪ್ರಜ್ಞರನ್ನು ವೇದಾಂತ ಪೀಠದಲ್ಲಿ ಕುಳ್ಳಿರಿಸಿ ಅಭಿಷೇಕ ಗೈದು ‘ಆನಂದತೀರ್ಥ’ ಎಂದು ನಾಮಕರಣ ಮಾಡಿದರು.

ಹೀಗೆ ಆಚಾರ್ಯರ ಆಶ್ರಮ ನಾಮಧೇಯ ಪೂರ್ಣಪ್ರಜ್ಞ, ವೇದಾಂತ ಸಾಮ್ರಾಜ್ಯದಲ್ಲಿ ಅಭಿಷಿಕ್ತರಾದಾಗ ಇಟ್ಟ ಹೆಸರು ಆನಂದತೀರ್ಥ. ಮಧ್ವ ಎನ್ನುವುದು ಅವರ ವೈದಿಕ ನಾಮಧೇಯ. ಮುಂದೆ ಈ ಹೆಸರಿನಿಂದಲೇ ಅವರು ಪ್ರಸಿದ್ಧರಾದರು.

ಅಂದಿನಿಂದ ಆಚಾರ್ಯ ಮಧ್ವರ ಜೀವನದ ಪ್ರತಿಕ್ಷಣವೂ ವೇದ ಧರ್ಮದ ಪ್ರಚಾರಕ್ಕಾಗಿ ಮೀಸಲಾಯಿತು. ಆಚಾರ್ಯರು ಯಾರನ್ನೂ ಕಾಲು ಕೆದಕಿ ವಾದಕ್ಕೆ ಕರೆಯುತ್ತಿರಲಿಲ್ಲ. ವಾದದ ಪೊಳ್ಳುತನ ಅವರಿಗೆ ಚೆನ್ನಾಗಿ ಗೊತ್ತು. ಆದರೆ ಯಾರಾದರೂ ತಾವಾಗಿಯೇ ಅವರಿಗೆ ಚೆನ್ನಾಗಿ ಗೊತ್ತು. ಆದರೆ ಯಾರಾದರೂ ತಾವಾಗಿಯೇ ಬಂದು ವಾದಕ್ಕೆ ನಿಂತರೆ ಆಚಾರ್ಯರು ಸುಮ್ಮನೆ ಕೂತವರಲ್ಲ. ಹೀಗೆ ಆಚಾರ್ಯರ ಬಳಿ ವಾದಕ್ಕೆಂದು ಹೆಡೆಯರಳಿ ಬುಸುಗುಡತ್ತ ಬಂದು ಬಾಲ ಮಡಚಿಕೊಂಡು ಮರಳಿದವರು ನೂರಾರು ಮಂದಿ.

ಧರ್ಮಜಾಗೃತಿಗಾಗಿ ದೇಶಸಂಚಾರ

ಆಚಾರ್ಯ ಮಧ್ವರು ತಮ್ಮ ತತ್ತ್ವವಾದದ ಪ್ರಚಾರಕ್ಕಾಗಿ ದೇಶದಾದ್ಯಂತ ಸಂಚರಿಸಿದರು. ಬಯಸಿ ಬಂದ ಮಂದಿಗೆಲ್ಲ ತತ್ತ್ವದ ತನಿರಸವನ್ನು ಉಣಿಸಿದರು. ಪಾಠ ಪ್ರವಚನಗಳಿಂದ ಶಿಷ್ಯರನ್ನು ತರಬೇತುಗೊಳಿಸಿದರು. ಮುಂದಿನ ಪೀಳಿಗೆಗಾಗಿ ನಲ್ವತ್ತು ಗ್ರಂಥಗಳನ್ನು ಬರೆದಿಟ್ಟರು. ಮೇಲುನೋಟಕ್ಕೆ ಮಕ್ಕಳಿಗೂ ಅರ್ಥವಾಗುವಂಥ ಸರಳ ಗ್ರಂಥಗಳು; ಓದಿದಷ್ಟು ಆಳಕ್ಕೆ ಕೊಂಡೊಯ್ಯಬಲ್ಲ, ಪಂಡಿತರಿಗೂ ದುರೂಹ್ಯವಾದ ಮಹಾಗ್ರಂಥಗಳು.

ಸಂನ್ಯಾಸಿಯಾದ ತರುಣದಲ್ಲೆ ಕನ್ಯಾಕುಮಾರಿ, ರಾಮೇಶ್ವರ, ಅನಂತ ಶಯನ, ಶ್ರೀರಂಗ ಇತ್ಯಾದಿ ದಕ್ಷಿಣದ ಎಲ್ಲ ಕ್ಷೇತ್ರಗಳನ್ನೂ ಸಂದರ್ಶಿಸಿದರು. ಒಟ್ಟು ಮೂರು ಬಾರಿ ಉತ್ತರದ ತುತ್ತತುದಿಯ  ಬದರಿಯ ತನಕ ಸಂಚರಿಸಿ ಬಂದರು. ಉಡುಪಿಯಲ್ಲೆ ಬರೆದ ಪ್ರಥಮ ಕೃತಿ ಗೀತಾ ಭಾಷ್ಯವನ್ನು ಬದರಿಯಲ್ಲಿ ಗುರು ವೇದವ್ಯಾಸರಿಗೆ ಅರ್ಪಿಸಿದರು. ಅಲ್ಲೆ ನಿಂತು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದರು.

ಹೋದೆಡೆಯಲ್ಲೆಲ್ಲ ಅಚಾರ್ಯರ ಅದ್ಭುತ ಪ್ರವಚನವನ್ನು ಕೇಳಿ ಜನ ಮೈಮರೆತರು. ಅತ್ತ ಇಸ್ಲಾಂ ಧರ್ಮ ಭಾರತದ ಮೇಲೆ ದಾಳಿ ನಡೆಸಿತ್ತು. ಸ್ವಲ್ಪ ಮಟ್ಟಿಗೆ ಕ್ರೈಸ್ತ ಧರ್ಮವೂ ಕಾಲೂರಿತ್ತು. ಹೀಗೆ ವಿದೇಶೀಯ ಧರ್ಮಗಳ ಪ್ರಭಾವದಿಂದ ಭಾರತದಲ್ಲಿ ಒಂದು ಬಗೆಯ ಸಂದಿಗ್ಧತೆ ನೆಲೆಸಿತ್ತು. ಜತೆಗೆ ಭಾರತೀಯರಲ್ಲೆ ಹತ್ತು ಹಲವು ಪಂಥಗಳ ಒಳಜಗಳದಿಂದ ಜನಸಾಮಾನ್ಯರಲ್ಲಿ ಒಂದು ಬಗೆಯ ಅತಂತ್ರ ಸ್ಥಿತಿ ನಿರ್ಮಾಣಗೊಂಡಿತ್ತು. ಈ ತಾತ್ತ್ವಿಕ ಅಭದ್ರತೆಯ ವಾತಾವರಣದಲ್ಲಿ ಆಚಾರ್ಯರು ದೇಶದಾದ್ಯಂತ ಸಂಚರಿಸಿ ಜನತೆಯಲ್ಲಿ ಭರವಸೆ ಮೂಡಿಸಿದರು. ಆಚಾರ್ಯರ ವ್ಯಕ್ತಿತ್ವವನ್ನು ಕಂಡು ಜನ ತಲೆದೂಗಿದರು: ಪ್ರವಚನವನ್ನು ಕೇಳಿ ತಲೆಬಾಗಿದರು. ಹೋದೆಡೆಯಲ್ಲೆಲ್ಲ ಶಿಷ್ಯಸಂಪತ್ತು ಬೆಳೆಯಿತು.

ಆಚಾರ್ಯರು ಉಡುಪಿಗೆ ಮರಳಿ ಬಂದಾಗ ತಮ್ಮ ಶಿಷ್ಯನ ಭಾಷ್ಯಕೃತಿಯನ್ನು ಗುರು ಅಚ್ಯುತಪ್ರಜ್ಞರೂ ಓದಿದರು. ಆಚಾರ್ಯರೊಡನೆ ಚರ್ಚೆ ನಡೆಸಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಂಡು ತಾವೂ ಆಚಾರ್ಯರ ಸಿದ್ಧಾಂತದ ಅನುಯಾಯಿಯಾದರು. ಗುರುವಿಗೇ ಸಿದ್ಧಾಂತದ ದೀಕ್ಷೆಕೊಟ್ಟ ಈ ಶಿಷ್ಯ ಜನತೆಯ ಹೃದಯದಲ್ಲಿ ಸ್ಥಿರವಾದ ಸ್ಥಾನವನ್ನು ಪಡೆದರು.

ಪದ್ಮನಾಭತೀರ್ಥರೆಂಬುದು ಆಚಾರ್ಯರ ಪ್ರಮುಖ ಶಿಷ್ಯರು. ಅಲ್ಲದೆ ಇನ್ನೂ ಎಂಟು ಮಂದಿ ಆಚಾರ್ಯರ ಅಂತರಂಗ ಶಿಷ್ಯರಿದ್ದರು. ಹೃಷಿಕೇಶತೀರ್ಥ, ನರಸಿಂಹತೀರ್ಥ, ಜನಾರ್ಧನತೀರ್ಥ, ಉಪೇಂದ್ರತೀರ್ಥ, ವಾಮನತೀರ್ಥ, ವಿಷ್ಣುತೀರ್ಥ, ರಾಮತೀರ್ಥ ಮತ್ತು ಅಧೋಕ್ಷಜ ತೀರ್ಥ. ಈ ಎಂಟು ಮಂದಿ ಯತಿಗಳೇ ಮುಂದೆ ಕೃಷ್ಣಪೂಜೆಯ ಹೊಣೆಹೊತ್ತು ಉಡುಪಿಯ ಅಷ್ಟಮಠಗಳು ಮೂಲಪುರುಷರಾದರು.

ಕೃಷ್ಣಪ್ರತಿಷ್ಠೆ

ಪ್ರಾಚೀನ ದಾಖಲೆಗಳಲ್ಲಿ ಕಂಡುಬರುವಂತೆ ಉಡುಪಿಯಲ್ಲಿ ಕೃಷ್ಣಪ್ರತಿಷ್ಠೆಯ ಕಥೆ ಹೀಗಿದೆ:

ದ್ವಾರಕೆಯಿಂದ ಹಡಗೊಂದು ಹೊರಟಿತು. ಸಾಮಾನಿನ ಜೊತೆಗೆ ಕೆಲವು ಗೋಪಿಚಂದನದ ಗಟ್ಟಿಗಳನ್ನು ಅದರಲ್ಲಿರಿಸಿದ್ದರು. ಉಡುಪಿಯಿಂದ ಮೂರು ಮೈಲಿ ಪಶ್ಚಿಮದಲ್ಲಿ ಮಲ್ಪೆಯ ಸಮುದ್ರತೀರದಲ್ಲಿ ಈ ದೋಣಿ ಸಾಗುತ್ತಿದ್ದಾಗ ಗಾಳಿಯ ಸುಳಿಗೆ ಸಿಕ್ಕ ದೋಣಿ ದಾರಿ ತಪ್ಪಿ ಬಂಡೆಯೊಂದಕ್ಕೆ ಬಡಿಯಿತು. ದೋಣಿ ಒಡೆದು ಸಮುದ್ರತಳವನ್ನು ಸೇರಿತು.

ಒಂದು ದಿನ ಧ್ಯಾನಯೋಗದಿಂದ ಎದ್ದ ಆಚಾರ್ಯರು ಇದ್ದಕ್ಕಿದ್ದಂತೆ ಮಲ್ಪೆಯತ್ತ ಹೊರಟರು. ಸಮುದ್ರತಳದಲ್ಲಿ ಮುಳುಗಿದ್ದ ಭಗವಂತನನ್ನು ಉಪ್ಪುನೀರಿನಿಂದ ತೆಗೆಸಿ ಉಡುಪಿಗೆ ಹೊತ್ತು ತಂದರು. ಜಲಾಧಿವಾಸದ ಅನಂತರ ತನ್ನ ಮಠದಲ್ಲಿ ಪ್ರತಿಷ್ಠಿಸಿದರು. ಹೀಗೆ ಹಲವು ವರ್ಷಗಳ ಕಾಲ ಶ್ರೀಕೃಷ್ಣನನ್ನು ಆಚಾರ್ಯರು ಸ್ವಯಂ ಪೂಜಿಸಿದರು.

ಹೀಗೆ ಏಳು ಶತಕಗಳಿಂದ ಶ್ರೀಕೃಷ್ಣ ಉಡುಪಿಯ ಅಧಿದೈವವಾಗಿ ನಾಡಿನ ಭಕ್ತರಿಗೆ-ಭಾವುಕರಿಗೆ ಅಭೀಷ್ಟ ಪ್ರಧಾನ ದೀಕ್ಷಿತನಾಗಿ ಉಡುಪಿಯಲ್ಲಿ ನೆಲೆಸಿದ್ದಾನೆ. ಇದು ಅತ್ಯಂತ ಪುರಾತನ ಪುರಾವೆಗಳಲ್ಲಿ ದೊರೆಯುವ, ಸಂಪ್ರದಾಯಜ್ಞರು ಒಪ್ಪಿಕೊಂಡು ಬಂದ ಐತಿಹ್ಯ.

ಪುಸ್ತಕಗಳನ್ನೆ ಕದ್ದರು

ಹೀಗೆ ಆಚಾರ್ಯ ಮಧ್ವರು ಉಡುಪಿಯನ್ನೆ ಕೇಂದ್ರವಾಗಿಟ್ಟುಕೊಂಡು ತಮ್ಮ ತತ್ತ್ವಪ್ರಸಾರದ ಕಾರ್ಯವನ್ನು ಕೈಗೊಂಡರು. ಆದರೆ ಅವರು ತಮ್ಮ ಈ ಧರ್ಮ ಪ್ರಚಾರಕಾರ್ಯದಲ್ಲಿ ಸಾಕಷ್ಟು ವಿರೋಧವನ್ನು ಎದುರಿಸಬೇಕಾಯಿತು. ಸಮಾಜ ನಿಂತನೀರಾಗಿ ಮಡುಗಟ್ಟಿದಾಗ ಅದಕ್ಕೆ ಹೊಸ ಚಾಲನೆಯನ್ನು ಕೊಡಲೆಂದು ಮಹಾಪುರುಷರು ಅವತರಿಸಿ ಬರುತ್ತಾರೆ. ಹೀಗೆ ಸಮಾಜವನ್ನು ತಿದ್ದುವ ಕಾರ್ಯದಲ್ಲಿ ಕೈಹಾಕಿದ ಪ್ರತಿಯೊಬ್ಬರೂ ಜನಪ್ರಿಯತೆಯಂತೆಯೇ ಸಮಾಜ ವಿರೋಧವನ್ನೂ ಅನಿವಾರ್ಯವಾಗಿ ಕಟ್ಟಿಕೊಳ್ಳಬೇಕಾಗುತ್ತದೆ. ಆಚಾರ್ಯರು ಇದಕ್ಕೆ ಅಪವಾದವಾಗಿರಲಿಲ್ಲ.

ಅನೂಚಾನವಾಗಿ ನಡೆದುಬಂದ ಸಂಪ್ರದಾಯವನ್ನು ಇವರು ಹಾಳುಗೆಡವುತ್ತಿದ್ದಾರೆ ಎಂದು ಹಲವರು ಹುಯಿಲೆಬ್ಬಿಸಿದರು. ಆಚಾರ್ಯರನ್ನು ಶಾಸ್ತ್ರದ ಬಲದಿಂದ ಸೋಲಿಸುವುದು ಅಸಾಧ್ಯವಾದಾಗ ಕೆಟ್ಟ ಮಾರ್ಗದ ಪ್ರಯತ್ನಗಳೂ ನಡೆದವು. ಅವರ ದಂಡವನ್ನು ಮುರಿಯುವ ಸಂಚು ನಡೆಯಿತು. ಜಟ್ಟಿಗಳಾದ ಕೊಡಿಂಜಾಡಿ ಸೋದರರಿಂದ ಅವರನ್ನು ಕೊಲ್ಲಿಸುವ ಪ್ರಯತ್ನ ನಡೆಯಿತು. ಅವರ ಬಗೆಗೆ ಅಪಪ್ರಚಾರವನ್ನು ಹಬ್ಬಿಸಲಾಯಿತು. ಆಚಾರ್ಯರು ಈ ಯಾವ ತಂತ್ರಕ್ಕೂ ಮಣಿಯಲಿಲ್ಲ. ಕೊನೆಗೂ ವಿರೋಧಿಗಳೇ ಸೋಲಬೇಕಾಯಿತು.

ಆಚಾರ್ಯರ ಬಳಿ ಈ ಕಾಲದಲ್ಲೆ ಅಪೂರ್ವವಾದ ಪುಸ್ತಕ ಸಂಗ್ರಹವಿತ್ತು. ಕನ್ಯಾಕುಮಾರಿಯಿಂದ ಹಿಮಾಲಯದ ತನಕ ಸಂಚರಿಸಿ ಮೂಲಪಾಠದ ಶೋಧಕ್ಕಾಗಿ ತಾವು ಅನೇಕ ಅಪೂರ್ವ ಗ್ರಂಥಗಳನ್ನು ಪರಿಶೀಲಿಸಿದ್ದಾಗಿ ಅವರೇ ಹೇಳಿಕೊಂಡಿದ್ದಾರೆ. ಆ ತನಕ ಎಲ್ಲೂ ಉಪಲಬ್ಧವಿಲ್ಲದಿದ್ದ ಅನೇಕ ಪ್ರಾಚೀನ ಗ್ರಂಥಗಳನ್ನು ಅವರು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ಆಚಾರ್ಯರ ದೊಡ್ಡ ಸಂಪತ್ತು ಎಂದರೆ ಅವರ ಬಳಿಯಿದ್ದ ಈ ಪುಸ್ತಕ ಭಂಡಾರವೆ ಆಗಿತ್ತು. ಪದ್ಮತೀರ್ಥ ಎಂಬುವರು ಅವರ ಗ್ರಂಥಗಳನ್ನೆ ಅಪಹರಿಸಿದರು.

ಶ್ರೀಕೃಷ್ಣನನ್ನು ಆಚಾರ್ಯರು ಸ್ವಯಂ ಪೂಜಿಸಿದರು.

ಕಂಡ ಕಣ್ಣು ಸಾರ್ಥಕ

 

ತುಳುನಾಡಿನ ದೊರೆ ಜಯಸಿಂಹನಿಗೆ ತನ್ನ ರಾಜಧಾನಿ ಕಾಸರಗೋಡಿನಲ್ಲಿ ನಡೆದ ಈ ಕಳವಿನ ಸುದ್ದಿ ಮುಟ್ಟಿತು. ಈ ಆಕೃತ್ಯಕ್ಕಾಗಿ ಆತ ಮರುಗಿದ. ಆಚಾರ್ಯರಿಗೆ ಮರಳಿಸಲೆಂದು ಪದ್ಮತೀರ್ಥರಿಂದ ಆತ ಪುಸ್ತಕಗಳನ್ನು ಸ್ವಾಧೀನಪಡಿಸಿಕೊಂಡ. ಆಚಾರ್ಯರಿಗೆ ಸುದ್ದಿ ತಿಳಿಸಿ ರಾಜ್ಯಕ್ಕೆ ಬರಬೇಕೆಂದು ಬೇಡಿದ.

ಆಚಾರ್ಯರು ಕಾಸರಗೋಡಿಗೆ ಬಂದರು. ತನ್ನ ರಾಜಧಾನಿಗೆ ಬಂದ ಆಚಾರ್ಯರನ್ನು ಜಯಸಿಂಹ ರಾಜ ವೈಭವದಿಂದ ಸ್ವಾಗತಿಸಿದ.

ತಾನು ಮೇನೆಯಿಂದ ಮೊದಲೇ ಇಳಿದು ಆಚಾರ್ಯರ ಬಳಿಗೆ ನಡೆದು ಬಂದ. ಇಕ್ಕೆಲದಲ್ಲಿ ಸೈನಿಕರು ಸರಿದು ನಿಂತರು. ತಲೆಬಾಗಿ ನಿಂತ ದೊರೆಯನ್ನು ಹರಸಿದ ಆಚಾರ್ಯರು ಅವನ ಜತೆ ವಿಷ್ಣುಮಂಗಲ ದೇವಾಲಯದತ್ತ ತೆರಳಿದರು. ಇಡಿಯ ರಾಜಧಾನಿಯ ಜನತೆ ಈ ಅಪೂರ್ವ ದೃಶ್ಯವನ್ನು ಕಾಣಲು ಬೀದಿಗಳಲ್ಲಿ ಸಂದಣಿಸಿತ್ತು. ಮುಂದುಗಡೆ ದೇವರ ಸ್ತೋತ್ರಗಳನ್ನು ಹಾಡುತ್ತ ಕುಣಿಯುತ್ತ ಬರುತ್ತಿರುವ ಶಿಷ್ಯವೃಂದ. ಹಿಂದೆ ಕೈಮುಗಿದು ಬರುತ್ತಿರುವ ಮಹಾರಾಜನ ಜತೆಗೆ ಆಚಾರ್ಯ ಮಧ್ವರು. ನೋಡಿದ ಜನ ಬೆರಗಾದರು.

ಕಣ್ಣು ಸವಿದಷ್ಟೂ ತಣಿಯದ, ಆದರೆ ಮಾತು ವಿವರಿಸಲಾಗದ ಚೆಲುವು. ಇಡಿಯ ಗುಂಪಿನಲ್ಲೆ ಪ್ರತ್ಯೇಕವಾಗಿ ಎದ್ದು ಕಾಣುವ ವ್ಯಕ್ತಿತ್ವ. ಗಂಭೀರವಾದ ಬೀಸುಗಾಲಿನ ನಡೆ. ಲಕ್ಷಣಶಾಸ್ತ್ರಕ್ಕೆ ತಕ್ಕಂತೆ ಶಿಲ್ಪಿ ಕಡೆದಿಟ್ಟ ಹಾಗೆ ಮಾಟವಾದ ಮೈಕಟ್ಟು. ಉಬ್ಬಿದ ಎದೆಯ ಮೇಲೆ ಹರವಾದ ಹೆಗಲು, ಅಜಾನುಬಾಹು. ಬೆಳದಿಂಗಳಿನಂತೆ ತಂಪೆರಚುವ ಮುಗುಳು ನಗೆಯ ಚೆಲುಮೋರೆ. ಇಂಥ ರೂಪವನ್ನು ಕಂಡ ಕಣ್ಣು ಸಾರ್ಥಕವಾಯಿತು; ಬಾಳು ಪಾವನವಾಯಿತು.

ಲೋಕಸೇವೆಯ ಸಂದೇಶ

ತ್ರಿವಿಕ್ರಮ ಪಂಡಿತ ಎಂಬವರು ಆಚಾರ್ಯರ ಗ್ರಂಥಪಾಲರಾದ ಶಂಕರಪಂಡಿತರ ಸೋದರರು. ಅವರಂಥ ಪಂಡಿತರು ಆ ಪ್ರಾಂತದಲ್ಲೆ ಇನ್ನೊಬ್ಬರಿರಲಿಲ್ಲ.

ತ್ರಿವಿಕ್ರಮ ಪಂಡಿತರು ಆಚಾರ್ಯರೊಡನೆ ವಾದಕ್ಕಿಳಿದು ಪ್ರಶ್ನೆಗಳ ಸುರಿಮಳೆಯನ್ನೆ ಸುರಿಸಿದರು. ಆಚಾರ್ಯರು ಶಾಂತರಾಗಿ ಮುಗುಳುನಗುತ್ತಲೇ ಒಂದೊಂದೆ ಪ್ರಶ್ನೆಯನ್ನು ಉತ್ತರಿಸಿದರು. ಒಂದಲ್ಲ, ಎರಡಲ್ಲ, ಹದಿನೈದು ದಿನಗಳ ಕಾಲವಾದ ನಡೆಯಿತು. ಕೊನೆಗೂ ತ್ರಿವಿಕ್ರಮ ಪಂಡಿತರು ಸಂಶಯಗಳನ್ನೆಲ್ಲ ಪರಿಹರಿಸಿಕೊಂಡು ಆಚಾರ್ಯರ ಶಿಷ್ಯರಾದರು.

ತ್ರಿವಿಕ್ರಮ ಪಂಡಿತರಿಗಾಗಿ ಆಚಾರ್ಯರು ನೀಡಿದ ಪ್ರವಚನ ತ್ರಿವಿಕ್ರಮ ಪಂಡಿತರಷ್ಟೆ ಅಲ್ಲ. ಇಡಿಯ ಜನತೆಯ ಕಣ್ಣನ್ನೇ ತೆರೆಯಿಸಿತು.

“ಗುಣಪೂರ್ಣವಾದ ಭಗವಂತನೊಬ್ಬನಿದ್ದಾನೆ, ಅವನನ್ನು ‘ನಾರಾಯಣ’ ಎಂದು ಹೆಸರಿಸುತ್ತಾರೆ. ಈಶ್ವರ, ಬ್ರಹ್ಮ, ವಿಷ್ಣು ಇವೆಲ್ಲವೂ ಅವನದೇ ಹೆಸರು. ದೇವರನ್ನು ಯಾವ ಹೆಸರಿನಿಂದ ಕರೆದರೂ ಸರಿಯೆ.

“ಈ ಜೀವ ಒಂದು ಪ್ರತಿಬಿಂಬ. ಭಗವಂತ ಅದರ ಬಿಂಬ. ಪ್ರತಿಬಿಂಬದ ಮೂಲಕವೆ ಬಿಂಬದ ಅರಿವು. ಜೀವದ ಅರಿವಿಲ್ಲದೆ ದೇವನ ಅರಿವು ಸಾಧ್ಯವಿಲ್ಲ. ಮೊದಲು ‘ನಾನು’ ತಿಳಿಯಬೇಕು. ಆಗ ಅವನು ತಿಳಿಯಲ್ಪಡುತ್ತಾನೆ.”

“ವೇದಗಳು ಮೂಲ ಪ್ರಮಾಣಗಳು. ತತ್ತ್ವವನ್ನು ತಿಳಿಯಲೆಂದು ತರ್ಕಕ್ಕೆ ಶರಣಾಗಬೇಡ. ತರ್ಕ ದಾರಿ ತಪ್ಪಿಸುವ ಭಯವುಂಟು. ಸತ್ಯದ ಅರಿವಿಗಾಗಿ ವೇದಗಳಿಗೇ ಶರಣಾಗಬೇಕು.”

“ಕರ್ತವ್ಯ, ಕರ್ಮವನ್ನು ಎಂದೂ ಮರೆಯಬೇಡ. ನಿನಗಿಂತ ಹೆಚ್ಚು ಕಷ್ಟದಲ್ಲಿರುವವರ ಸೇವೆಯೆ ನಿಜವಾದ ಕರ್ತವ್ಯ ಕರ್ಮ. ನೀನು ಭಗವಂತನ ರಾಜ್ಯದ ಪ್ರಜೆಯಾದುದಕ್ಕಾಗಿ ಅವನಿಗೆ ಸಲ್ಲಿಸಬೇಕಾದ ಕಂದಾಯವೆ ಈ ಲೋಕಸೇವೆ.”

“ಈ ಜಗತ್ತು ಭಗವಂತನ ಅದ್ಭುತ ಸೃಷ್ಟಿ. ಭಗವಂತನ ಹಿರಿಮೆಯನ್ನು ಅರಿತುಕೊ. ನಿನ್ನ ಸೀಮೆಯನ್ನೂ ಅರಿತುಕೊ. ಆ ಮಹಾ ಶಕ್ತಿಗೆ ಶರಣಾಗು. ಬಾಳಿನ ಬಂಧನವನ್ನು ದಾಟಲು ಇದೊಂದೇ ದಾರಿ.”

ಮೈಮರೆಸುವ ಸಂಗೀತ

ತನ್ನ ತತ್ತ್ವವಾದವನ್ನು ಜನರಿಗೆ ತಿಳಿಯಪಡಿಸಲು ಆಚಾರ್ಯರು ‘ಪ್ರಸ್ಥಾನತ್ರಯ’ (ಗೀತೆ, ದಶೋಪನಿಷತ್ತುಗಳು ಮತ್ತು ಬ್ರಹ್ಮಸೂತ್ರ)ಗಳಿಗೆ ಭಾಷ್ಯ ಬರೆದರು. ಮಹಾಭಾರತ, ಪುರಾಣಗಳ ತಾತ್ತ್ವಿಕ ವಿಮರ್ಶೆಗಾಗಿ “ಮಹಾಭಾರತ ತಾತ್ಪರ್ಯ ನಿರ್ಣಯ” ಬರೆದರು. ಭಾಗವತಕ್ಕೆ ತಾತ್ಪರ್ಯ ಬರೆದರು. ಋಗ್ವೇದಕ್ಕೆ ಭಾಷ್ಯ ಬರೆದರು. ಯಮಕ ಕಾವ್ಯವೊಂದನ್ನೂ ಹಾಡು ಗಬ್ಬಗಳನ್ನೂ ರಚಿಸಿದರು. ಪುರಾಣ ಶ್ಲೋಕಗಳನ್ನು ಸಂಗ್ರಹಿಸಿ ‘ಕೃಷ್ಣಾಮೃತ ಮಹಾರ್ಣವ’ ಬರೆದರು. ವಾಸ್ತುಶಿಲ್ಪ -ಪ್ರತಿಮಾಶಿಲ್ಪದ ಅಪೂರ್ವ ವಿವರಗಳನ್ನೊಳಗೊಂಡ ‘ತಂತ್ರಸಾರಸಂಗ್ರಹ’ ಬರೆದರು. ಅಪೂರ್ವ ಗಣಿತ ಗ್ರಂಥ ‘ತಿಥಿ ನಿರ್ಣಯ’ವನ್ನೂ ಬರೆದರು. ಇನ್ನೂ ಅನೇಕ ಗ್ರಂಥಗಳನ್ನು ಬರೆದರು. ಇಷ್ಟೆ ಅಲ್ಲ, ಸಂಗೀತದಲ್ಲೂ ಅವರ ವಿದ್ವತ್ತು ಅಸಾಧಾರಣವಾಗಿತ್ತು. ಶ್ರೇಷ್ಠ ಗೇಯಕಾವ್ಯವಾದ ದ್ವಾದಶ ಸ್ತೋತ್ರಗಳ ರಚನೆ, ಇಷ್ಟೇ ಅಲ್ಲದೆ ಅವನ ಜೀವನದ ಒಂದು ಘಟನೆಯೂ ಇದಕ್ಕೆ ಸಾಕ್ಷಿ ಹೇಳುತ್ತದೆ.

ಗೋವೆಯಿಂದ ಹೊರಟ ಆಚಾರ್ಯರು ಪಶುಪೆ ಎಂಬಲ್ಲಿ ತಂಗಿದ್ದರು. ಆಚಾರ್ಯರ ಕಂಠ ಮಾಧುರ್ಯ – ಸಂಗೀತ ಪಾಂಡಿತ್ಯಗಳ ಬಗೆಗೆ ಕೇಳಿ ತಿಳಿದಿದ್ದ ಜನ ಅವರ ಸಂಗೀತವನ್ನೆ ಕೇಳಬಯಸಿದರು. ಜನರ ಬಯಕೆಯಂತೆ ಆಚಾರ್ಯರು ಹಾಡತೊಡಗಿದರು. ಕೇಳಿದ ಜನ ಮೈಮರೆಯುವಂತಹ ಮಾಧುರ್ಯ. ಕೇಳದಿದ್ದವರು ‘ಗಂಡಸರು ಇಷ್ಟು ಮಧುರವಾಗಿ ಹಾಡುತ್ತಾರೆ’ ಎಂದು ನಂಬಲು ಆಗದಷ್ಟು ಮಾಧುರ್ಯ.

ಕೊನೆಯ ಬಾರಿ ಬದರಿಗೆ

ಹೀಗೆ ಆಚಾರ್ಯರು ತಮ್ಮ ಜೀವನದುದ್ದಕ್ಕೂ ಭಗವಂತನ ಗುಣಗಾನವನ್ನು ಮಾಡಿದರು. ಈ ಕಾರ್ಯಕ್ಕೆ ಎದುರಾದ ಅಡ್ಡಿ-ಆತಂಕಗಳನ್ನು ಧೀರತೆಯಿಂದ ಎದುರಿಸಿದರು. ಚಿಕ್ಕ ಹುಡುಗನಾಗಿದ್ದಾಗಲೆ ತಮ್ಮನ್ನು ಕಡಿಯಲೆಂದು ಬಂದ ಕಾಳಿಂಗ ಸರ್ಪವನ್ನು ಕಾಲಲ್ಲಿ ಹೊಸಕಿ ಹಾಕಿದ ಆಚಾರ್ಯರಿಗೆ ಭಯವೆಂದರೇನೆಂದು ತಿಳಿಯದು. ಅವರು ಯಾವ ಆತಂಕಕ್ಕೂ ಎದೆಗೆಡಲಿಲ್ಲ. ಎಂದೂ ಇನ್ನೊಬ್ಬರಿಗೆ ತಲೆಬಾಗಲಿಲ್ಲ. ತಮ್ಮ ಜೀವನದ ಉದ್ದೇಶ ಅವರಿಗೆ ಸ್ಫುಟವಾಗಿತ್ತು. ಅದನ್ನು ಸಾಧಿಸುವ ಬಗೆಯೂ ತಿಳಿದಿತ್ತು. ತಾವು ಧೀರ ಸಂನ್ಯಾಸಿಯಾಗಿ ಬದುಕಿದರು. ತನ್ನ ಬಳಿ ಬಂದವರಿಗೆಲ್ಲ ಭರವಸೆಯನ್ನು ತುಂಬಿದರು.

೭೯ ವರ್ಷಗಳ ಕಾಲ ಇಂಥ ಸಾರ್ಥಕ ಬದುಕನ್ನು ಬಾಳಿ ಪಿಂಗಲ ಸಂವತ್ಸರದ (ಕ್ರಿ.ಶ. ೧೩೧೭) ಮಾಘ ಶುದ್ಧನವಮಿಯಂದು ಎಲ್ಲ ಶಿಷ್ಯರನ್ನು ಬೀಳ್ಕೊಟ್ಟು  ಬದರಿಗೆಂದು ತೆರಳಿದರು. ಅನಂತರ ಅವರನ್ನು ಕಂಡವರಿಲ್ಲ. ಇಂದಿಗೂ ಈ ದಿನವನ್ನು ‘ಮಧ್ವನವಮಿ’ ಎಂದು ಅವರ ಪುಣ್ಯತಿಥಿಯನ್ನಾಗಿ ಆಚರಿಸಲಾಗುತ್ತಿದೆ.