ನಾಲ್ಕುಚಣ ನಸುಮುನಿಸು, ಮರುಚಣವೆ ಮಂಜು ಮೈ-
ತಿಳಿದು ಹೂಬಿಸಿಲು ಹೊಮ್ಮಿದೊಲು ನಗೆಯಬಗೆ ! ; ಮೈ-
ಗೊಂಡ ಮಿಂಚಿನಂತಹ ನಡಿಗೆ. ಅಷ್ಟಮಿಯ ಶಶಿ
ತನ್ನ ತೆಳುವೆಳಗಿನಲಿ ತಿರೆಯ ಮೈಮರೆಯಿಸುವ
ಮೃದುಮಂದಹಾಸ ಸಮ್ಮೋಹಕತೆ; ಸೆರೆವಿಡಿವ
ಸೌಮ್ಯಶ್ರೀ. ಕಣ್ಣೀರಿನಲಿ ತನ್ನ ದೃಷ್ಟಿಯಸಿ-
ಯನು ಮಸೆದು ಝಳಪಿಸುವ ಜಾಣ್ಮೆ ; ಎದೆಯ ಕರಗಿಸಿ
ಸೂರೆಗೊಳುವಂತೆಸೆವ ನಲ್ವಾತು ; ಮೋಹವಶಿ
ಯಾದಂತೆ ಮನೆಗೆಲಸದಲಿ ಗುಣುಗುಣಿಪ ರಾಗ-
ದಾಲಾಪ. ಕಾವ್ಯ ಕನ್ನೆಯ ಕಮನೀಯ ಕುಣಿತ
ನಿಸ್ವನದಂತೆ ಬಳೆಯ ಕಾಲುಂಗರದ ಕ್ವಣಿತ.
ಇಂತಿರುವ ಮನದನ್ನೆ ಒಲೆಯ ಬಳಿ ಕುಳಿತಾಗ
ಪ್ರಾಚೀನ ಋಷಿಕನ್ಯೆ ! ಮಧುರ ಮಂಗಳಮೂರ್ತಿ
ಜೀವ ಯಾತ್ರೆಯ ಪಥಕೆ ಸಹಯಾತ್ರಿ ಮೇಣ್ ಸ್ಫೂರ್ತಿ.