ಮನಸು ಶೂನ್ಯವಾಗಿದೆ-
ಏಕೊ, ಏನೊ, ಇಂದು ಇಂತು
ಬರಿ ನೀರಸವಾಗಿದೆ.

ಮಗಿಲ ಮನದಿ ಮೋಡ ತುಂಬಿ
ಗುಡುಗುಮಿಂಚುಗಳನು ಹಡೆದು
ಮಳೆಯ ಕಾವ್ಯಧಾರೆಯಲ್ಲಿ
ತಿರೆಯ ತಣಿಸುತಿದ್ದರೂ-

ಮನಸು ಶೂನ್ಯವಾಗಿದೆ
ತಪಿಸುವಂತೆ ತೋರಿದೆ.

ಕಪ್ಪೆಗೊರಳಿನೋಂಕಾರ
ಇರುಳಿನಂಧಕಾರದಲ್ಲಿ
ಪರ್ಜನ್ಯ ವೇದಘೋಷ
ದಂತೆ ಮೊಳಗುತಿದ್ದರೂ-

ಮನಸು ಶೂನ್ಯವಾಗಿದೆ
ಬರಿಯ ಮೂಕವಾಗಿದೆ.

ಸುತ್ತೆತ್ತಲು ಹಸರಿ ನಿಂತ
ಉಸಿರಾಡುವ ಹಸಿರ ಪಯಿರು
ಕಾಡಿನೊಡಲ ತೊರೆಯ ತೆರದಿ
ಮಂಜುಳರವ ಗೈದರೂ-

ಮನಸು ಶೂನ್ಯವಾಗಿದೆ
ರವವಿಹೀನವಾಗಿದೆ.

ಕೆರೆಯ ತೆರೆಯ ಕೆನ್ನೆಯಲ್ಲಿ
ಹೊಂಬಿಸಿಲಿನ ಬಿಂಬಾಧರ
ಚುಂಬಿಸುತ್ತ ತೆರೆಯ ಮನವ
ರೋಮಾಂಚನಗೈದರೂ-

ಮನಸು ಶೂನ್ಯವಾಗಿದೆ
ವಿರಹಿಯಂತೆ ತೋರಿದೆ.

ಗಿಡ ಗಿಡಗಳ ಎದೆ ಎದೆಯಲಿ
ಶ್ರಾವಣದುಸಿರಾಡುವಂತೆ
ಶ್ರವಣಸುಧಾಗೀತೆಯಂತೆ
ಮಂದಾನಿಲ ನಲಿದರೂ-

ಮನಸು ಶೂನ್ಯವಾಗಿದೆ
ಎಲೆಮಿಡುಕದವೋಲಿದೆ.

ಕಿರುಮಕ್ಕಳು ಧೂಳಿನಾಟ-
ದಲ್ಲಿ ತೊಡಗಿ ನಲಿದಿರೆ,
ಇದನು ಕಂಡು ಮೇಲೆ ಮೋಡ
ಮುಗುಳುನಗೆಯ ನಕ್ಕರೂ-

ಮನಸು ಶೂನ್ಯವಾಗಿದೆ
ಮುಗುಳು ಮಲರದಂತಿದೆ.

ಸಂಗಮದಲಿ ಇಂಥ ವಿರಹ-
ವೇಕೆ ಎದೆಯ ತುಂಬಿತೋ,
ಮನದ ಬನಕೆ ಇದ್ದಕ್ಕಿದ್ದ-
ಹಾಗೆ ಮಾಗಿ ಬಂದಿತೋ
ಏಕೊ ಏನೊ ಇಂದು ಇಂತು
ಮನಸು ಶೂನ್ಯವಾಗಿದೆ
ಬರಿ ನೀರಸವಾಗಿದೆ.