ಯಾವುದೇ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸುವಾಗ, ಆ ವ್ಯಕ್ತಿ ಮಾಡುವ ಕಾರ್ಯಗಳನ್ನು ಮತ್ತು ಆಡುವ ಮಾತುಗಳನ್ನು ಗಮನಿಸಲಾಗುತ್ತದೆ. ನಿತ್ಯ ಜೀವನದಲ್ಲಿ ಬಹು ಬಗೆಯ ಕ್ರಿಯೆಗಳಲ್ಲಿ ಮತ್ತು ಮಾತಿನ ಸಂದರ್ಭಗಳಲ್ಲಿ ತೊಡಗುವ ವ್ಯಕ್ತಿಯು ದೈಹಿಕವಾಗಿ ಮತ್ತು ಭಾಷಿಕವಾಗಿ ವರ್ತಿಸುವ ರೀತಿಗಳನ್ನು ಗಮನಿಸಿ, ಒಟ್ಟಾರೆಯಾಗಿ ವ್ಯಕ್ತಿತ್ವದ ಮಟ್ಟವನ್ನು ನಿರ್ಧರಿಸ ಲಾಗುತ್ತದೆ.

ವ್ಯಕ್ತಿತ್ವವನ್ನು ನಿರ್ಧರಿಸುವ ಹಂತದಲ್ಲಿ ವ್ಯಕ್ತಿಯ ದೈಹಿಕ ಶಕ್ತಿಸಾಮರ್ಥ್ಯ ಗಳ ಜೊತೆಗೆ, ಅವರು ಬುದ್ದಿವಂತರೇ, ಅವರಲ್ಲಿ ಒಳ್ಳೆಯ ಏಕಾಗ್ರತೆ ಇದೆಯೇ, ಆಸಕ್ತಿಯಿಂದ ಮುನ್ನುಗ್ಗುವ ಪ್ರವೃತ್ತಿ ಇದೆಯೇ, ನೆನಪಿನ ಶಕ್ತಿ ಚೆನ್ನಾಗಿದೆಯೇ, ಮುಂತಾದ ಮನೋಸಂಬಂಧಿಯಾದ ಲಕ್ಷಣಗಳನ್ನು ಪ್ರಮುಖವಾಗಿ ಗಮನಿಸಲಾಗುತ್ತದೆ. ವ್ಯಕ್ತಿತ್ವವನ್ನು ನಿರ್ಧರಿಸುವ ಎಲ್ಲಾ ಸಂದರ್ಭಗಳಲ್ಲಿಯೂ ‘ಕಾರ್ಯಗಳನ್ನು ಮತ್ತು ಮಾತುಗಳನ್ನು’ ಸಮ ಪ್ರಮಾಣದಲ್ಲಿ ಪರಿಶೀಲಿಸ ಬೇಕಾದ ಅಗತ್ಯವಿಲ್ಲ. ಏಕೆಂದರೆ ಕೆಲವು ಬಗೆಯ ಕಾರ್ಯಗಳ ನಿರ್ವಹಣೆಗೆ ಭಾಷಿಕ ಕೌಶಲ್ಯದ ಅಗತ್ಯವಿಲ್ಲ. ಅಂತೆಯೇ ಕೆಲವು ಕಾರ್ಯಗಳಿಗೆ ದೈಹಿಕ ಶಕ್ತಿಯನ್ನು ಪ್ರಯೋಗಿಸಬೇಕಾಗಿಲ್ಲ. ಆದ್ದರಿಂದ ವ್ಯಕ್ತಿಯು ಪ್ರಯೋಗಿಸುವ ಭಾಷಿಕ ರೂಪಗಳನ್ನು ಅಗತ್ಯವಿದ್ದಾಗ ಮಾತ್ರ, ವ್ಯಕ್ತಿತ್ವ ನಿರ್ಧಾರದ ಹಂತದಲ್ಲಿ ಪೂರಕವಾಗಿ ಬಳಸಿಕೊಳ್ಳಲಾಗುತ್ತದೆ.

ವ್ಯಕ್ತಿಯು ಹೊಂದಿರುವ ಏಕಾಗ್ರತೆ, ಗ್ರಹಿಕೆ, ಕಲಿಯುವಿಕೆ, ಜ್ಞಾಪಕ ಶಕ್ತಿ, ಬುದ್ದಿವಂತಿಕೆ ಮತ್ತು ಇನ್ನಿತರ ಮಾನಸಿಕ ಲಕ್ಷಣಗಳಿಗೂ ಮತ್ತು ವ್ಯಕ್ತಿಯ ಭಾಷಿಕ ಸಾಮರ್ಥ್ಯ ಹಾಗೂ ಅಭಿವ್ಯಕ್ತಿಯ ಕೌಶಲ್ಯಕ್ಕೂ ಸಂಬಂಧವಿದೆಯೇ ಎಂಬುದನ್ನು ಕುರಿತು ಅನೇಕ ಸಂಶೋಧನೆಗಳು ನಡೆದಿವೆ. ವ್ಯಕ್ತಿಗಳ ಗುಂಪಿನಲ್ಲಿ ಯಾರಿಗಿಂತ ಯಾರು ಬುದ್ದಿವಂತರು ಮತ್ತು ಸಮರ್ಥರು ಎಂಬುದನ್ನು ನಿರ್ಧರಿಸುವಾಗ, ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಅವರು ಹೇಗೆ ಪ್ರತಿಕ್ರಿಯಿಸು ತ್ತಾರೆ ಮತ್ತು ಕಾರ್ಯಗಳನ್ನು ನಿರ್ವಹಿಸುತ್ತಾರೆ ಎಂಬುದನ್ನು ಪ್ರಮುಖವಾಗಿ ಗಮನಿಸಲಾಗುತ್ತದೆ. ಬುದ್ದಿವಂತಿಕೆ ಮತ್ತು ಕಾರ್ಯ ನಿರ್ವಹಣಾ ಸಾಮರ್ಥ್ಯದ ಪರೀಕ್ಷೆಗೆ ಬಹು ಹಿಂದಿನಿಂದಲೂ ಒಂದು ಪರಂಪರೆ ಇದೆ. ಯಾವುದೇ ಕಾರ್ಯವನ್ನು ಮಾಡುವುದಕ್ಕೆ ಇರುವ ಅನೇಕ ವಿಧಾನಗಳನ್ನು ಅಥವಾ ಮಾರ್ಗೋಪಾಯಗಳನ್ನು ವ್ಯಕ್ತಿಗಳ ಮುಂದೆ ಇಡುವುದು ಅಥವಾ ಸೂಚಿಸು ವುದು. ಕಾರ್ಯವನ್ನು ಯಶಸ್ವಿಯಾಗಿ ಯಾರು ಸಾಧಿಸುತ್ತಾರೆಯೋ, ಅವರನ್ನು ಸಮರ್ಥರೆಂದು ಪರಿಗಣಿಸುವುದು. ವ್ಯಕ್ತಿಗಳ ಸಾಮರ್ಥ್ಯದ ಮಟ್ಟವನ್ನು ಅಳೆಯುವಾಗ ಎರಡು ವಿಭಿನ್ನ ರೀತಿಯ ಸ್ಪರ್ಧೆಗಳನ್ನು ಒಡ್ಡಲಾಗುತ್ತದೆ.

1. ಭಾಷೆಯ ಅಗತ್ಯವಿಲ್ಲದ ಸ್ಪರ್ಧೆಗಳು

ಅ. ಚಿತ್ರಗಳನ್ನು ರಚಿಸುವುದು ಅಥವಾ ವಸ್ತುಗಳನ್ನು ನಿರ್ಮಿಸುವುದು.

ಆ. ಮರ ಅಥವಾ ಲೋಹದಿಂದ ನಿರ್ಮಿಸಿರುವ ಬೊಂಬೆಗಳ ಬೇರ್ಪಡಿಸಿದ ಭಾಗಗಳನ್ನು ಮತ್ತೆ ಕ್ರಮವಾಗಿ ಜೋಡಿಸುವುದು.

ಇ. ರೇಖಾಚಿತ್ರದಲ್ಲಿನ ಚಕ್ರವ್ಯೆಹದ ತೊಡಕಿನ ದಾರಿಯನ್ನು ಸರಿಯಾಗಿ ಗುರುತಿಸುವುದು.

ಈ.ಎರಡು ಚಿತ್ರಗಳಲ್ಲಿನ ಸಾದೃಶ್ಯ ಮತ್ತು ವೈದ್ಯಶ್ಯಗಳನ್ನು ಗುರುತಿಸುವುದು.

2. ಭಾಷೆಯ ಅಗತ್ಯವಿರುವ ಸ್ಪರ್ಧೆಗಳು

ಅ. ವಿವಿಧ ವಿಷಯಗಳ ಪ್ರಶ್ನೆಗಳಿಗೆ ಉತ್ತರಿಸುವುದು.

ಆ. ಅಂಕಿ ಮತ್ತು ಸಂಕೇತಗಳಿಂದ ಕೂಡಿದ ಗಣಿತದ ಸಮಸ್ಯೆಗಳನ್ನು ಬಿಡಿಸುವುದು.

ಇ. ನಾನಾ ವಿಷಯಗಳನ್ನು ಕುರಿತು ಪ್ರಬಂಧಗಳನ್ನು ರಚಿಸುವುದು.

ಈ. ಪದಬಂಧ ರಚನೆಯ ಸ್ಪರ್ಧೆಯಲ್ಲಿ ಸೂಕ್ತ ಪದಗಳನ್ನು ಭರ್ತಿ ಮಾಡುವುದು.