ವ್ಯಕ್ತಿತ್ವ

ಅವನು ಬಹಳ ಬುದ್ದಿವಂತ; ಆದರೆ ತುಂಬಾ ಕೆಟ್ಟ ಮನುಷ್ಯ ಎಂಬ ಮಾತುಗಳನ್ನು ನಮ್ಮ ಸ್ನೇಹಿತರೊಬ್ಬರ ಬಾಯಿಂದ ಕೇಳಿದಾಗ ತುಂಬಾ ಆಶ್ಚರ್ಯವಾಗುತ್ತದೆ. ಅವರು ವ್ಯಕ್ತಿಯ ವ್ಯಕ್ತಿತ್ವದಲ್ಲಿನ ಎರಡು ಪ್ರಧಾನವಾದ ಲಕ್ಷಣಗಳನ್ನು ಬೇರೆ ಬೇರೆಯಾಗಿ ವಿಂಗಡಿಸಿ ಬೆಲೆ ಕಟ್ಟಿದ್ದರು. ಅವನ ಗ್ರಹಿಕೆ, ಕಲಿಯುವಿಕೆ, ಚಿಂತನೆ, ಜ್ಞಾನಪಕಶಕ್ತಿ ಮತ್ತು ಮಾತಿನ ಕೌಶಲ್ಯಗಳೆಲ್ಲವೂ ಬಹಳ ಚೆನ್ನಾಗಿವೆ. ಆದರೆ ತನ್ನ ನಿತ್ಯ ಜೀವನದಲ್ಲಿ ಸಹ ಮಾನವರಿಗೆ ಕೇಡನ್ನು ಮಾಡುತ್ತಿರುವ ವ್ಯಕ್ತಿಯಾಗಿದ್ದಾನೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಜೀವಿಗಳ ಜಗತ್ತಿನಲ್ಲಿ ಮನುಷ್ಯ ಪ್ರಾಣಿಯೊಂದನ್ನು ಬಿಟ್ಟು, ಉಳಿದೆಲ್ಲಾ ಪಕ್ಷಿ ಪ್ರಾಣಿಗಳ ಗುಣ ಸ್ವಭಾವದಲ್ಲಿನ ಪ್ರಧಾನ ಅಂಶಗಳನ್ನು ಬಹುತೇಕ ಸಂದರ್ಭಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಉದಾಹರಣೆಗೆ ಹುಲಿ-ದುಷ್ಟಪ್ರಾಣಿ, ನಾಗರಹಾವು-ವಿಷಜಂತು, ಮೊಲ-ಸಾಧುಪ್ರಾಣಿ, ಇತ್ಯಾದಿ. ಆದರೆ ಅತ್ಯಂತ ಸಂಕೀರ್ಣ ಸ್ವಭಾವಗಳಿಂದ ಕೂಡಿರುವ ಮನುಷ್ಯರ ವ್ಯಕ್ತಿತ್ವದ ಗುಣ ಲಕ್ಷಣಗಳನ್ನು ಖಚಿತವಾಗಿ ಗುರುತಿಸುವುದಾಗಲಿ ಅಥವಾ ಕರಾರುವಾಕ್ಕಾಗಿ ನಿರ್ಧರಿಸುವುದಾಗಲಿ ತುಂಬಾ ಕಷ್ಟಕರವಾದ ಕಾರ್ಯ. ಏಕೆಂದರೆ ನಾನಾ ಬಗೆಯ ಕ್ರಿಯೆಗಳ ಮತ್ತು ಮಾತಿನ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿ ಹೇಗೆ ಪ್ರತಿಕ್ರಿಯಿಸು ತ್ತಾರೆ ಅಥವಾ ಅವರ ವರ್ತನೆಗಳು ಹೇಗಿರುತ್ತವೆ ಎಂಬುದನ್ನು ನಿರ್ದಿಷ್ಟವಾಗಿ ಮೊದಲೇ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ವ್ಯಕ್ತಿಯ ದೈಹಿಕ, ಭಾಷಿಕ ಮತ್ತು ಸಾಮಾಜಿಕ ವರ್ತನೆಗಳನ್ನು ಸಮಗ್ರವಾಗಿ ಗಮನಿಸಿ, ಅವುಗಳಲ್ಲಿ ಪ್ರಧಾನವಾಗಿ ಕಂಡು ಬರುವ ಗುಣ ಲಕ್ಷಣಗಳ ಮೂಲಕ ವ್ಯಕ್ತಿತ್ವವನ್ನು ಅಂದಾಜು ಮಾಡಬಹುದು. ಆದರೆ ವಿವಿಧ ಬಗೆಯ ಆಕರ್ಷಣೆಗಳು ಮತ್ತು  ಒತ್ತಡಗಳು ಎದುರಾದಾಗ ತಾನು ಹೇಗೆ ವರ್ತಿಸುತ್ತೇನೆ ಎಂಬುದು ಆ ವ್ಯಕ್ತಿಗೆ ತಿಳಿದಿರುವುದಿಲ್ಲ.

ವ್ಯಕ್ತಿತ್ವವನ್ನು ಅಂದಾಜು ಮಾಡುವುದರಲ್ಲಿ ಇಷ್ಟೆಲ್ಲಾ ತೊಡಕುಗಳಿದ್ದರೂ, ಪ್ರತಿಯೊಂದು ಮಾತಿನ ಸಮುದಾಯದವರೂ ತಮ್ಮದೇ ಆದ ರೂಢಿಗತ ಭಾವನೆ, ಕಲ್ಪನೆ ಮತ್ತು ಅಭಿಪ್ರಾಯಗಳನ್ನಿಟ್ಟುಕೊಂಡು, ವ್ಯಕ್ತಿಗಳ ಗುಣ ಲಕ್ಷಣಗಳನ್ನು ಗುರುತಿಸಿ, ವ್ಯಕ್ತಿತ್ವವನ್ನು ನಿರ್ಧರಿಸುತ್ತಾರೆ. ಇದು ಆಯಾಯ ಮಾತಿನ ಸಮುದಾಯದಲ್ಲಿರುವ ಸಾಮಾಜಿಕ, ಧಾರ್ಮಿಕ ಮತ್ತು ನೈತಿಕ ಕಟ್ಟುಪಾಡುಗಳ ಜೊತೆಗೆ, ಆ ಸಮುದಾಯವು ಸಮ್ಮತಿಸಿರುವ ದೈಹಿಕ ಮತ್ತು ಭಾಷಿಕ ವರ್ತನೆಗಳಿಗೆ ಅನುಸಾರವಾಗಿರುತ್ತದೆ.

ವಿವಿಧ ಕ್ಷೇತ್ರಗಳಲ್ಲಿನ ವಿಜ್ಞಾನಿಗಳು ಈ ದಿಶೆಯಲ್ಲಿ ನಡೆಸಿರುವ ಸಂಶೋಧನೆ ಗಳು ಅಚ್ಚರಿದಾಯಕವಾದ ಫಲಿತಾಂಶಗಳನ್ನು ನೀಡಿವೆ. ಒಬ್ಬ ವ್ಯಕ್ತಿಯ ವರ್ತನೆಗಿಂತ ಮತ್ತೊಬ್ಬರ ವರ್ತನೆಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ಅಧ್ಯಯನ ಮಾಡತೊಡಗಿದಾಗ, ಸುಮಾರು ಹದಿನೆಂಟು ಸಾವಿರ (18,000) ಬಗೆಯ ಭಿನ್ನ ಭಿನ್ನ ಲಕ್ಷಣಗಳು ಕಂಡು ಬಂದವು. ಇವುಗಳಲ್ಲಿ ಹಲವಾರು ಗುಣಗಳು ಒಂದರೊಡನೆ ಮತ್ತೊಂದು ಹೆಣೆದುಕೊಂಡಿದ್ದವು. ಇವನ್ನೆಲ್ಲಾ ಆದಷ್ಟು ಒಟ್ಟುಗೂಡಿಸಿ, ಅತಿ ಚಿಕ್ಕ ಚಿಕ್ಕ ಘಟಕಗಳನ್ನಾಗಿ ಮಾಡಿ, ಪ್ರಧಾನವಾಗಿ ಎರಡು ವಿಧದ ವ್ಯಕ್ತಿತ್ವವನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.

ಈ ಎರಡು ಪ್ರಮುಖ ವ್ಯಕ್ತಿತ್ವದೊಳಗೆ ಉಳಿದ ಗುಣಲಕ್ಷಣಗಳನ್ನು ಅಳವಡಿಸಿದ್ದಾರೆ.

1.  ಅಂತರ್ಮುಖ ವ್ಯಕ್ತಿತ್ವ

2.  ಬಹಿರ್ಮುಖ ವ್ಯಕ್ತಿತ್ವ

ಬ್ರಿಟಿಷ್ ಮನಶ್ಯಾಸ್ತ್ರಜ್ಞ ಹನ್ಸ್ ಐಸೆನ್ಕ್ (1916) ಎಂಬಾತನು ಈ ಕೆಳಕಂಡ ದೊಡ್ಡ ಮತ್ತು ಚಿಕ್ಕ ವೃತ್ತಗಳನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿಕೊಂಡು ರಚಿಸಿರುವ ರೇಖಾಚಿತ್ರದಲ್ಲಿ ವ್ಯಕ್ತಿತ್ವದ ಲಕ್ಷಣಗಳನ್ನು ನಿರೂಪಿಸಿದ್ದಾರೆ.

ಭಾಷೆ ಮತ್ತು ಉಚ್ಚಾರಣೆ

ಮಾತಿನ ಸಂದರ್ಭಗಳಲ್ಲಿ ವ್ಯಕ್ತಿಗಳು ಆಡುವ ಭಾಷೆ ಮತ್ತು ಬಳಸುವ ಉಚ್ಚಾರಣಾ ಧ್ವನಿಯ ರೀತಿಯನ್ನು ಆಧಾರವಾಗಿಟ್ಟುಕೊಂಡು, ವ್ಯಕ್ತಿತ್ವವನ್ನು ಪರಿಭಾವಿಸುವ ರೂಢಿಯು ಮಾತಿನ ಸಮುದಾಯಗಳಲ್ಲಿ ಕಂಡು ಬರುತ್ತದೆ. ಆಕರ್ಷಕವಾದ ಉಚ್ಚಾರಣಾ ಧ್ವನಿಯಲ್ಲಿ ಶಿಷ್ಟಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ವ್ಯಕ್ತಿಗಳನ್ನು ದಕ್ಷರು ಮತ್ತು ಕ್ರಿಯಾತ್ಮಕ ವ್ಯಕ್ತಿತ್ವವುಳ್ಳವರೆಂದು ಭಾವಿಸಲಾಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಆಕರ್ಷಕವಲ್ಲದ ಉಚ್ಚಾರಣಾ ಧ್ವನಿಯಲ್ಲಿ ಉಪಭಾಷೆಗಳನ್ನು ತಡವರಿಸುತ್ತಾ ಮಾತನಾಡುವ ವ್ಯಕ್ತಿಗಳನ್ನು ಅಸಮರ್ಥರು ಮತ್ತು ಉತ್ತಮ ಸ್ಥಾನವನ್ನು ಪಡೆಯಲು ಅನರ್ಹರೆಂದು ಭಾವಿಸುವುದುಂಟು.

ಉದಾಹರಣೆ :

1. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ವಾಜಪೇಯಿ ಅವರು ಮಾತನಾಡುತ್ತಿರುವುದನ್ನು ದೂರದರ್ಶನದಲ್ಲಿ ವೀಕ್ಷಿಸುತ್ತಿರುವಾಗ, ಪ್ರೇಕ್ಷಕರೊಬ್ಬರ ಪ್ರತಿಕ್ರಿಯೆ:

“ನೋಡ್ರಿ, ವಾಜಪೇಯಿ ಅವರು ಮಾತನಾಡುವುದಕ್ಕೆ ಎದ್ದು ನಿಂತ ಕೂಡ್ಲೆ, ಇಡೀ ಸಭೆ ಹೇಗೆ ಮೌನವಾಯಿತು! ಎಲ್ಲರೂ ಹೇಗೆ ಗಮನವಿಟ್ಟು ಕೇಳುತ್ತಿದ್ದಾರೆ. ಅಬ್ಬಾ! ಅವರ ಮಾತಿನ ಶೈಲಿ…..ಅವರ ಆ ಹಾವಭಾವ….. ಯಾವುದೇ ವಿಷಯವನ್ನಾಗಲಿ ಸಮರ್ಥವಾಗಿ ಪ್ರತಿಪಾದಿಸಿದ ರೀತಿ…..ಇನ್ಯಾರಲ್ಲಿ ಇದೇರಿ?…. ನಮ್ಮ ದೇಶಕ್ಕೆ ಪ್ರಧಾನಿಯಾಗಲು ಇವರೇ ಯೋಗ್ಯವಾದ ವ್ಯಕ್ತಿ.”

ನಮ್ಮ ದೇಶದ ಪ್ರಧಾನಿಯಾಗುವ ವ್ಯಕ್ತಿಗೆ ಇರಬೇಕಾದ ನಾನಾ ಬಗೆಯ ಗುಣಗಳಲ್ಲಿ ‘ಸೊಗಸಾದ ಮಾತುಗಾರಿಕೆ’ಯೂ ಒಂದು ಪ್ರಮುಖ ಗುಣವೆಂಬ ಅಭಿಪ್ರಾಯ ನಮ್ಮ ಮಾತಿನ ಸಮುದಾಯದ ಬಹುತೇಕರಲ್ಲಿದೆ.

2. ಕಾಲೇಜಿನ ವಿದ್ಯಾರ್ಥಿಗಳಿಗೆ ಇಬ್ಬರು ಅತಿಥಿಗಳಿಂದ ಉಪನ್ಯಾಸವನ್ನು ಏರ್ಪಡಿಸಿದ್ದ ಸಂದರ್ಭದಲ್ಲಿ ಸಭಿಕರಿಂದ ವ್ಯಕ್ತಗೊಂಡ ಪ್ರತಿಕ್ರಿಯೆ:

ಉಪನ್ಯಾಸಕರಲ್ಲಿ ಒಬ್ಬರು ಸಂಪೂರ್ಣವಾಗಿ ಕನ್ನಡದಲ್ಲಿ ಮಾತನಾಡಿದರು. ಮತ್ತೊಬ್ಬರು ಕನ್ನಡದ ಜೊತೆ ಜೊತೆಗೆ ಇಂಗ್ಲಿಶಿನ ಸುಪ್ರಸಿದ್ಧ ವಾಕ್ಯಗಳನ್ನು ಆಕರ್ಷಕವಾಗಿ ಉಚ್ಚರಿಸುತ್ತಾ, ಉಪನ್ಯಾಸ ನೀಡಿದರು.

ಉಪನ್ಯಾಸ ಮುಗಿದ ನಂತರ, ಸಭಿಕರಾಗಿದ್ದ ಅಧ್ಯಾಪಕ ಮತ್ತು ವಿದ್ಯಾರ್ಥಿ ಸಮುದಾಯದಲ್ಲಿ ಇಂಗ್ಲಿಶ್ ವಾಕ್ಯಗಳನ್ನು ಆಕರ್ಷಕವಾಗಿ ಬಳಸಿ ಮಾತನಾಡಿದ ವ್ಯಕ್ತಿಯು ಹೆಚ್ಚು ಓದಿಕೊಂಡಿದ್ದಾರೆಂದು ಮತ್ತು ಬುದ್ದಿವಂತರೆಂದು ಮೆಚ್ಚುಗೆ ವ್ಯಕ್ತವಾಯಿತು.

ಯಾವುದೇ ವ್ಯಕ್ತಿಯು ಅನೇಕ ಭಾಷೆಗಳನ್ನು ಕಲಿತುಕೊಂಡು, ಸೊಗಸಾಗಿ ಮಾತನಾಡುವುದಕ್ಕೂ ಮತ್ತು ಅವರ ಕ್ರಿಯಾಶೀಲ ವ್ಯಕ್ತಿತ್ವಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಜನ ಸಮುದಾಯದಲ್ಲಿ ಈ ರೀತಿ ವ್ಯಕ್ತಿಯ ಭಾಷಿಕ ಲಕ್ಷಣಗಳ ಆಧಾರದ ಮೇಲೆ, ಇಂತಹ ರೂಢಿಬದ್ಧವಾದ ಅಭಿಪ್ರಾಯಗಳನ್ನು ಹೊಂದಿರುವುದು ಒಂದು ಸಹಜ ಸಂಗತಿಯಾಗಿದೆ.

ಕನ್ನಡ ಮಾತಿನ ಸಮುದಾಯದಲ್ಲಿ ತಾಯ್ನುಡಿಯಾದ ಕನ್ನಡದ ಬಗ್ಗೆ ಒಂದು ಬಗೆಯ ಉಪೇಕ್ಷೆಯೂ ಇಂಗ್ಲಿಶ್ ಭಾಷೆಯ ಬಗ್ಗೆ ವ್ಯಾಮೋಹವೂ ಸಂಸ್ಕೃತ ಭಾಷೆಯ ಬಗ್ಗೆ ಗೌರವ ಭಾವನೆಯೂ ಇದೆ. ಇವತ್ತಿನ ಸಂದರ್ಭದಲ್ಲಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದ ಇಂತಹ ದೃಷ್ಟಿಕೋನಗಳು ಜನ ಸಮುದಾಯದಲ್ಲಿ ಉಂಟಾಗಿವೆ. ಇಂಗ್ಲಿಶ್‌ನ್ನು ಕಲಿತವರಿಗೆ ಲಭಿಸುವ ಉತ್ತಮ ಉದ್ಯೋಗದ ಅವಕಾಶಗಳು, ಕೇವಲ ಕನ್ನಡವನ್ನು ಕಲಿತವರ ಪಾಲಿಗಿಲ್ಲ; ಸಂಸ್ಕೃತ ಶ್ಲೋಕಗಳನ್ನು ಆಡುವ ವ್ಯಕ್ತಿಗಳ ಬಗ್ಗೆ ಬರುವ ಪೂಜ್ಯಭಾವನೆಯು, ಕನ್ನಡ ಕಾವ್ಯಗಳ ಸಾಲುಗಳನ್ನು ಹೇಳುವವರ ಬಗ್ಗೆ ಬರುವುದಿಲ್ಲ.

ಮನಸ್ಸಿನ ವಿವಿಧ ಸ್ಥಿತಿಗಳನ್ನು ಗುರುತಿಸಲು ಧ್ವನಿಯು ಬಹುವೇಳೆ ಒಳ್ಳೆಯ ಸೂಚಕವಾಗಿ ಕಾರ್ಯ ನಿರ್ವಹಿಸುತ್ತದೆ. ಭಯ, ಉದ್ವೇಗ, ಕೋಪ, ದೈನ್ಯ, ತಿರಸ್ಕಾರ ಇವೇ ಮುಂತಾದ ಭಾವಗಳನ್ನು ಮಾತಿನಿಂದ ಸೂಚಿಸಬಹುದು; ಮಾತಿನಿಂದ ಅಂಥ ಭಾವಗಳು ಇರುವುದನ್ನು ಗುರುತಿಸಬಹುದು.

ಮನೋರೋಗಿಗಳ ಧ್ವನಿಯೂ ಸಾಮಾನ್ಯರ ಧ್ವನಿಗಿಂತ ಭಿನ್ನವಾಗಿರುವುದು ಗಮನಕ್ಕೆ ಬರುವ ಸಂಗತಿ. ಏರಿಳಿತಗಳಲ್ಲದೆ, ನಿಶಕ್ತವಾದ, ತಡೆತಡೆದು ಬರುವ ಧ್ವನಿಯಲ್ಲಿ ನಿಧಾನವಾಗಿ ಮಾತಾಡುತ್ತಾರವರು. ಇದೊಂದು ಪೂರಕ ಮಾಹಿತಿ ಯಾಗಿ ಕೆಲಸ ಮಾಡಬಲ್ಲದು. ಆದರೆ ಮನಸ್ಸಿನ ಅಪಸಾಮಾನ್ಯತೆಯನ್ನು ನಿರ್ಧರಿಸಲು ಮಾತು ನಿರ್ಣಾಯಕ ಸಾಕ್ಷ್ಯವಾಗಲಾರದೆಂದೇ ಮನಶಾಸ್ತ್ರಜ್ಞರ ಅಭಿಮತ.

ವಿವಿಧ ಭಾಷೆಗಳ ಬಗೆಗೆ ಇರುವ ಈ ತರತಮ ಭಾವನೆಗಳೇ, ಒಂದೇ ಭಾಷೆಯಲ್ಲಿನ ಉಪಭಾಷೆಗಳ ಬಗ್ಗೆಯೂ ಇರುತ್ತವೆ. ಪ್ರಾದೇಶಿಕ ಉಪಭಾಷೆ ಗಳಲ್ಲಿ, ಯಾವ ಒಂದು ಉಪಭಾಷೆಯನ್ನು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಂಘಟನೆ ಮತ್ತು ಶಕ್ತಿಯುಳ್ಳ ಸಮುದಾಯ ಬಳಸುತ್ತದೆಯೋ, ಅದನ್ನೇ ಶಿಷ್ಟಭಾಷೆಯೆಂದು ಗೌರವಿಸಿ ಶಿಕ್ಷಣ, ಆಡಳಿತ ಮತ್ತು ಸಮೂಹ ಮಾಧ್ಯಮಗಳಾದ ಪತ್ರಿಕೆ, ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಪ್ರಧಾನವಾಗಿ ಬಳಲಾಗುತ್ತದೆ. ಉಳಿದ ಉಪಭಾಷೆಗಳಿಗೆ ಈ ಬಗೆಯ ಮನ್ನಣೆ ದೊರಕುವುದಿಲ್ಲ.

ಇದೇ ರೀತಿ ಸಾಮಾಜಿಕ ಉಪಭಾಷೆಗಳ ಬಗ್ಗೆಯೂ ಭೇದಭಾವಗಳಿವೆ. ಜಾತಿಯಲ್ಲಿ ಉತ್ತಮರೆನಿಸಿಕೊಂಡವರು ಆಡುವ ಭಾಷೆಗಿರುವ ಮರ್ಯಾದೆ, ಕೆಳಜಾತಿಯವರು ಆಡುವ ಭಾಷೆಗೆ ಇರುವುದಿಲ್ಲ. ಸಮಾಜದ ಜನ ಸಮುದಾಯದಲ್ಲಿ ವರ್ಗ ಮತ್ತು ಜಾತಿಗಳು ಪಡೆದಿರುವ ಸ್ಥಾನಮಾನಗಳನ್ನೇ ಸಾಮಾಜಿಕ ಉಪಭಾಷೆಗಳು ಹೊಂದಿರುತ್ತವೆ. ಈ ಉಪಭಾಷೆಗಳನ್ನು ಬಳಸುವ ವ್ಯಕ್ತಿಗಳ ಬಗ್ಗೆಯೂ ಮೇಲು ಕೀಳಿನ ಮಾನದಂಡಗಳನ್ನು ಬಳಸುವುದು ಮಾತಿನ ಸಮುದಾಯದಲ್ಲಿ ರೂಢಿಗತವಾಗಿದೆ.

ಯಾವುದೇ ಮಾತಿನ ಸಂದರ್ಭದಲ್ಲಿ ವ್ಯಕ್ತಿಯು ಮಾತನಾಡುತ್ತಿರುವಾಗ ಕೇಳಿ ಬರುವ ಅವನ ಮಾತಿನ ಧ್ವನಿಗಳ ಏರಿಳಿತಗಳ ಮೂಲಕವೇ, ಆ ವ್ಯಕ್ತಿಯು ಆಗ ಹೊಂದಿರುವಂಥ ನೋವು, ನಲಿವು, ಆಕ್ರೋಶ, ಆಶೆ, ನಿರಾಶೆ, ಭಯ, ಧೈರ್ಯ ಮುಂತಾದ ಬಹು ಬಗೆಯ ಮನಸ್ಸಿನ ಸ್ಥಿತಿಗತಿಗಳನ್ನು ಗ್ರಹಿಸುವ ರೂಢಿಯು ನಮ್ಮ ಮಾತಿನ ಸಮುದಾಯದಲ್ಲಿದೆ