೧೯೨೭ – ೧೯೨೮ನೆಯ ವರ್ಷವಿರಬೇಕು. ಆಗ ಮರಿಮಲ್ಲಪ್ಪ ಹೈಸ್ಕೂಲಿನ ಪಕ್ಕದ ಬಾಡಿಗೆಮನೆಯಲ್ಲಿತ್ತು ಶ್ರೀ ರಾಮಕೃಷ್ಣಾಶ್ರಮ. ಸ್ವಾಮಿ ಸಿದ್ಧೇಶ್ವರಾನಂದರ ಕೃಪೆಯಿಂದ ನಾನು ಆಶ್ರಮವಾಸಿಯಾಗಿ ಎರಡು ವರ್ಷದ ಮೇಲಾಗಿತ್ತು. ಒಂದು ದಿನ ಬೆಳಗ್ಗೆ ಸಮಾರು ೯ ಗಂಟೆಯ ಸಮಯದಲ್ಲಿ ಸ್ವಾಮಿ ಸಿದ್ಧೇಶ್ವರಾನಂದರು ನಾನಿದ್ದ ಕೊಠಡಿಗೆ ಬಂದು ‘ವೆಕಣ್ಣಯ್ಯ – ಕೃಷ್ಣಶಾಸ್ತ್ರಿ ಬಂದಿದ್ದಾರೆ. ನಿನ್ನನ್ನು ಕಾಣಬೇಕಂತೆ’ ಎಂದರು. ಆಗತಾನೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭವಾಗಿದ್ದ ಕನ್ನಡ ಎಂ.ಎ. ಮೊದಲನೆಯ ತರಗತಿಗೆ ಸೇರಿದ್ದು ವಿದ್ಯಾರ್ಥಿಯಾಗಿದ್ದ ನನಗೆ ಸಂಭ್ರಮ ಮತ್ತು ವಿಸ್ಮಯ! ಮಹಾರಾಜಾ ಕಾಲೇಜಿನಲ್ಲಿ ನನಗೆ ಅಧ್ಯಾಪಕರಾಗಿದ್ದ ಕೃಷ್ಣಶಾಸ್ತ್ರಿಗಳು ಬೆಂಗಳೂರು ಸೆಂಟ್ರಲ್ ಕಾಲೇಜಿನ ಅಧ್ಯಾಪಕರೂ ಮತ್ತು ಅಲ್ಲಿಯ ಕರ್ಣಾಟಕ ಸಂಘದ ಅಧ್ಯಕ್ಷರೆಂದು ಕೀರ್ತಿವೆತ್ತಿದ್ದವರೂ ಆಗಿದ್ದ ಪ್ರೊಫೆಸರ್ ವೆಂಕಣ್ಣಯ್ಯನವರೊಡನೆ ನನ್ನನ್ನು ನೋಡಲು ಬಂದಿದ್ದಾರೆಯೆ? ಏಕೆ? ನನಗೆ ಭಾವಾವೇಗ, ಸಂಭ್ರಮ, ವಿಸ್ಮಯ!.

‘ವೆಂಕಣ್ಣಯ್ಯ – ಕೃಷ್ಣಶಾಸ್ತ್ರಿ’ ಈ ಎರಡು ಹೆಸರು ಆವೊತ್ತಿಗಾಗಲೆ ಜೋಡಿಗೊಂಡು ಕೇಳಿ ಬರುತ್ತಿದ್ದುವು. ಆದರೆ ನನ್ನ ಮಟ್ಟಿಗೆ ಹೇಳುವುದಾದರೆ ಆ ಜೋಡಿಗೊಳಿಕೆಗೆ ಕಾರಣ, ಅವರಿಬ್ಬರೂ ಕನ್ನಡಕ್ಕಾಗಿ ಒಟ್ಟಿಗೆ ದುಡಿಯುತ್ತಿದ್ದು, ಕನ್ನಡ ನವೋದಯದ ಪ್ರೇರಕಶಕ್ತಿಗಳಾಗಿ, ಯಮಳತಾರೆಗಳಂತೆ ಮೂಡಿದ್ದರು ಎಂಬುದಕ್ಕೆ ಸೀಮಿತವಾಗಿರಲಿಲ್ಲ. ನನಗೆ ಮುಖ್ಯವಾಗಿ ಆ ಎರಡು ಹೆಸರುಗಳು ಒಟ್ಟುಗೂಡಿದ್ದುದು ಕನ್ನಡದಲ್ಲಿ ಮೊತ್ತಮೊದಲನೆಯ ಕಿರುಹೊತ್ತಿಗೆ ಶ್ರೀ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಯನ್ನು ಬರಿದುದಕ್ಕಾಗಿ. ಅದನ್ನು ಓದಿದ್ದ ನನಗೆ ಅವರಿಬ್ಬರೂ ಬರಿಯ ಪ್ರಾಧ್ಯಾಪಕರಾಗಿ ಗೌರವಾನ್ವಿತರಷ್ಟೆ ಆಗಿರದೆ ಆಧಾತ್ಮಿಕವಾದ ಪೂಜ್ಯಭಾವನೆಗೂ ಭಾಜನರಾಗಿದ್ದರು.

ಕೃಷ್ಣಶಾಸ್ತ್ರಿಗಳೇನೊ ನನಗೆ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ಪರಿಚಿತರಾಗಿದ್ದರು. ಆದರೆ ವೆಂಕಣ್ಣಯ್ಯನವರು ಹೆಸರಿನಿಂದ ಮಾತ್ರ ಪರಿಚಿತರಾಗಿದ್ದರು. ಅದುವರೆಗೂ ನಾನು ಅವರನ್ನು ನೋಡಿರಲಿಲ್ಲ. ಕನ್ನಡ ಎಂ.ಎ. ತರಗತಿ ಆಗತಾನೆ ಪ್ರಾರಂಭವಾಗಿದ್ದು, ವೆಂಕಣ್ಣಯ್ಯ ಕೃಷ್ಣಶಾಸ್ತ್ರಿಗಳ ವರ್ಗಾವರ್ಗಿ ಇನ್ನೂ ನಡೆದಿರಲಿಲ್ಲ.

ಸ್ವಾಮಿ ಸಿದ್ಧೇಶ್ವರಾನಂದರು ಕರೆದೊಡನೆ ನಾನು ಆಶ್ರಮದ ಮುಂಭಾಗದ ಜಗುಲಿಗೆ ಹೋದೆ. ಆಗ ಆಶ್ರಮ ‘ಬಡತನ’ದಲ್ಲಿತ್ತು. ಕುರ್ಚಿ ಮೇಜು ಮೊದಲಾದ ಪೀಠೋಪಕರಣಗಳಾವುವೂ ಇರಲಿಲ್ಲ. ಬಂದವರಿಗೆ ಕೂರಲು ಎರಡು ಹಳೆಯ ಬೆಂಚುಗಳನ್ನಷ್ಟೆ ಎರವಲುತಂದು ಹಾಕಿದ್ದರು. ಅಂತಹ ಒಂದು ಬೆಂಚಿನ ಮೇಲೆ ಇಬ್ಬರೂ ಕುಳಿತಿದ್ದರು. ನಾನು ನಮಸ್ಕರಿಸಿದೊಡನೆ ಕೃಷ್ಣಶಾಸ್ತ್ರಿಗಳು ಔಪಚಾರಿಕ ಪರಿಚಯವನ್ನೇನೂ ಮಾಡಿಕೊಡುವ ಗೋಜಿಗೆ ಹೋಗದೆ, ವೆಂಕಣ್ಣಯ್ಯನವರು ಆಶ್ರಮಕ್ಕೆ ಆಗಮಿಸಿದ್ದೇಕೆ ಎಂಬುದನ್ನು ಎರಡು ಮಾತುಗಳಲ್ಲಿ ಹೇಳಿದರು.

“ಏನು ಪುಟ್ಟಪ್ಪ. ನೀವು ಮುದ್ದಣ ಸ್ವರ್ಣಪದಕ ತೆಗೆದು ಕೊಳ್ಳಲು ಸೆಂಟ್ರಲ್‌ ಕಾಲೇಜಿನ ಕರ್ಣಾಟಕ ಸಂಘದ ವಾರ್ಷಿಕೋತ್ಸವಕ್ಕೆ ಹೋಗಲೆ ಇಲ್ಲವಂತೆ!” ಎಂದು ಮೊದಲು ಮಾಡಿ. “ವೆಕಣ್ಣಯ್ಯನವರು ಆ ಸ್ವರ್ಣಪದಕವನ್ನು ನಿಮಗೆ ಕೊಡಲು ಬಂದಿದ್ದಾರೆ.” ಎಂದು ತಿಳಿಸಿದರು.

ಸಿದ್ಧೇಶ್ವರಾನಂದಜಿಯರೊಡನೆ ನಾನು ಎದುರುಗಡೆಯ ಬೆಂಚಿನಲ್ಲಿ ಕೂತುಕೊಂಡು ಅದುವರೆಗೂ ಮಾತಾಡದೆ ಮುಗುಳುನಗುತ್ತಲೆ ಇದ್ದ ಪ್ರಶಾಂತಮೂರ್ತಿ ವೆಂಕಣ್ಣಯ್ಯನವರನ್ನು ಈಕ್ಷಿಸುತ್ತಾ ಕುಳಿತಿದ್ದೆ.

ಸಣ್ಣ ಜರಿಯಿದ್ದ ಬಿಳಿಯ ಪೇಟ ಕಟ್ಟಿ, ಮುಚ್ಚಿದ ಕಾಲರಿನ ಕರಿಯ ಕೋಟು ಹಾಕಿಕೊಂಡು ಕೆಂಪು ಅಂಚಿನ ಕಚ್ಚೆಪಂಚೆ ಉಟ್ಟು, ಮುಂಗಡಗೆ ನೀಳ್ದ ಉತ್ತರೀಯ ಇಳಿಯಬಿಟ್ಟು, ಕಾಲು ಮೇಲೆ ಕಾಲು ಹಾಕಿ, ಕತ್ತು ನಸುಬಾಗಿ ಕುಳಿತಿದ್ದರು ವೆಂಕಣಯ್ಯನವರು, ವಿನಯತಾ ಪ್ರತಿಮೆಯಂತೆ. ಅವರ ಔನ್ಯತ್ಯದ ದೆಸೆಯಿಂದಲೆ ಅವರು ತುಸು ಬಾಗಿದ್ದುದು ಮತ್ತು ಕಾಲುಮೇಲೆ ಕಾಲುಹಾಕಿದ್ದುದು! ತುಂಬ ಎತ್ತರವಾಗಿದ್ದ ಅವರು ಗಿಡ್ಡ ಬೆಂಚಿನಮೇಲೆ ಬೇರೆಯ ರೀತಿಯಲ್ಲಿ ಕೂರಲು ಸಾಧ್ಯವೆ ಇರಲಿಲ್ಲ ಎಂಬುದು ಯಾರಿಗಾದರೂ ಭೌತವಾಗಿಯೆ ಸ್ಪಷ್ಟವಾಗುವಂತಿತ್ತು ಅವರ ಬಂಗಿ!

ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘ ಏರ್ಪಡಿಸಿದ್ದ ಸಣ್ಣಕಥೆಗಳ ಸ್ಪರ್ಧೆಗೆ ನಾನು ಬರೆದಿದ್ದ ‘ಲಿಂಗ ಅಥವಾ ಯಾರೂ ಅರಿಯದ ವೀರ’ ಎಂಬ ಕಥೆಯನ್ನು ಮಿತ್ರರ ಒತ್ತಾಯಕ್ಕಾಗಿ ಕಳಿಸಲಾಗಿತ್ತು. ಅದಕ್ಕೆ ಪ್ರಥಮ ಬಹುಮಾನ ಬಂದಿತ್ತು. ಪಾರಿತೋಷಕ ವಿತರಣ ಸಮಾರಂಭಕ್ಕೆ ನನಗೂ ಆಹ್ವಾನಪತ್ರಿಕೆ ಬಂದಿತ್ತು. ಆದರೆ ಸ್ಥಾವರ ಪ್ರಕೃತಿಯ ನಾನು ಬೆಂಗಳೂರಿಗೆ ಹೋಗಿ ಅದನ್ನು ಸ್ವೀಕರಿಸುವ ತೊಂದರೆ ತೆಗೆದುಕೊಳ್ಳದಿರುವಷ್ಟು ಉದಾಸೀನನೋ ಅಥವಾ ಸೋಮಾರಿಯೋ ಆಗಿದ್ದೆ. ಅದಕ್ಕಾಗಿ ಖುದ್ದು ಕರ್ಣಾಟಕ ಸಂಘದ ಅಧ್ಯಕ್ಷರೇ ಬರಬೇಕೇ ಅದನ್ನು ಕೊಡವುದಕ್ಕೆ? ಕೃಷ್ಣಶಾಸ್ತ್ರಿಗಳ ಮುಖಾಂತರ ನನಗೆ ತಲುಪಿಸಬಹುದಿತ್ತು. ಆದರೆ……?!.

ನಾನು ಶ್ರೀ ರಾಮಕೃಷ್ಣ ಪರಮಹಂಸರ ಪ್ರಪ್ರಥಮ ಜೀವನ ಚರಿತ್ರೆಯನ್ನು ಕನ್ನಡಿಗರಿಗೆ ಕೊಟ್ಟ ಪೂಜ್ಯ ವೆಂಕಣ್ಣಯ್ಯನವರನ್ನು ಕಂಡಿದ್ದು ಅದೇ ಮೊದಲು, ಆಶ್ರಮದ ಪವಿತ್ರ ಪ್ರಶಾಂತ ವಾತಾವರಣದಲ್ಲಿ! ಆಕಸ್ಮಿಕದಂತೆ ತೋರುವ ಆ ಘಟನೆ ಶಕುನಪೂರ್ಣವಾಗಿದೆ, ಧ್ವನಿಪೂರ್ಣವಾಗಿದೆ. ಏಕೆಂದರೆ ತರುವಾಯ ಬದುಕಿನ ನನ್ನ ಅವರ ಸಂಬಂಧ ಮುಖ್ಯವಾಗಿ ಆಧ್ಯಾತ್ಮಿಕ ಸ್ತರದಲ್ಲಿಯೆ ಸಾಗಿತ್ತು. ಉಳಿದ ಇತರ ರೀತಿಯ ಸಂಬಂಧಗಳೆಲ್ಲ – ವಿದ್ಯಾರ್ಥಿ ಅಧ್ಯಾಪಕ ಸಂಬಂಧದಂತೆ – ಆಧ್ಯಾತ್ಮಿಕ ಸಂಬಂಧದಷ್ಟೇನೊ ಆಂತರಿಕವಾಗಿರಲಿಲ್ಲ!

ಕನ್ನಡದ ಮೊತ್ತಮೊದಲನೆಯ ಪ್ರೊಫೆಸರ್ ಆಗಿ ವೆಂಕಣ್ಣಯ್ಯ ನವರು ಮೈಸೂರಿಗೆ ಬಂದರು: ಕೃಷ್ಣಶಾಸ್ತ್ರಿಗಳು ಸೆಂಟ್ರಲ್‌ ಕಾಲೇಜಿನಲ್ಲಿದ್ದ ಕನ್ನಡ ಉಪಪ್ರಾಧ್ಯಾಪಕರ ಸ್ಥಾನಕ್ಕೆ ವರ್ಗವಾದರು. ಆಗತಾನೆ ಪ್ರರಂಭವಾಗಿದ್ದ ಮೊದಲನೆಯ ವರ್ಷದ ಎಂ.ಎ. ತರಗತಿಯಲ್ಲಿ ಮುಂದೆ ಕನ್ನಡ ಸಾರಸ್ವತ ಕ್ಷೇತ್ರದಲ್ಲಿ ಗಣ್ಯನಾಮರಾದ ಅನೇಕರು ನನ್ನ ಸಹಾಧ್ಯಾಯಿಗಳಾಗಿದ್ದರು. ವೆಂಕಣ್ಣಯ್ಯನವರ ಅಧ್ಯಾಪನದಲ್ಲಿ ನಾವೆಲ್ಲ ಕನ್ನಡ ಪ್ರಾಚೀನ ಸಾಹಿತ್ಯದ ಸಾರಸತ್ತ್ವವನ್ನು ಹೀರಿಕೊಳ್ಳುವ ಮತ್ತು ಆಗತಾನೆ ಕಣ್ದೆರೆಯುತ್ತಿದ್ದ ಆಧುನಿಕ ಸಾಹಿತ್ಯ ನವೋದಯದ ಉಷಃಕಾಂತಿಯಲ್ಲಿ ಬುದ್ಧಿಗೆ ಸಾಣೆಯನ್ನೂ ಹೃದಯಕ್ಕೆ ವಿಕಾಸವನ್ನೂ ಪಡೆದುಕೊಳ್ಳುವ ಸಾಧನೆಯಲ್ಲಿ ದೀಕ್ಷಿತರಾದೆವು.

ವೆಂಕಣ್ಣಯ್ಯನವರ ವ್ಯಕ್ತಿತ್ವ ಪ್ರಖರವಾದುದಲ್ಲ, ಸೌಮ್ಯವಾದುದು. ಸೂರ್ಯಕಾಂತಿಯಂತೆ ಕಣ್ಣು ಕೋರೈಸುತ್ತಿರಲಿಲ್ಲ, ಚಂದ್ರಕಾಂತಿಯಂತೆ ಸಂಮೋಹಕವಾಗಿತ್ತು. ಇತರ ಯಾವ ಪ್ರಧ್ಯಾಪಕರೂ ವೆಂಕಣ್ಣಯ್ಯನವರಂತೆ ನನ್ನಲ್ಲಿ ಆತ್ಮೀಯತಾಭಾವವ ನ್ನುಂಟುಮಾಡಲಿಲ್ಲ. ನನ್ನ ಪ್ರಶಂಸೆಗೂ ಗೌರವಕ್ಕೂ ಪಾತ್ರಾರಾಗಿದ್ದ ಪ್ರಾಧ್ಯಾಪಕರಲ್ಲಿಯೂ ನಾನು ವೆಂಕಣ್ಣಯ್ಯನವರಲ್ಲಿ ಅನುಭವಿಸಿದಂತೆ ‘ಆತ್ಮೀಯತೆ’ ಯನ್ನು ಅನುಭವಿಸಲು ಸಮರ್ಥನಾಗಲಿಲ್ಲ. ಇತರ ಯಾರಲ್ಲಿಯೂ ‘ನಿಕಟತ್ವ’ ಉಂಟಾಗಲಿಲ್ಲ. ವೆಂಕಣ್ಣಯ್ಯನವರಿಗೂ ನನಗೂ ಉಂಟಾದ ಸಂಬಂಧದಲ್ಲಿ ‘ಅಕ್ಕರೆ’ಯ ಸ್ವರೂಪವಿತ್ತು. ಅವರೊಡನೆ ತುಂಬ ‘ಸಲಿಗೆ’ಯಿಂದ ಇರುತ್ತಿದ್ದೆ. ಆದರೆ ಆ ‘ಸಲಿಗೆ’ಯಲ್ಲಿ ಎಂದೂ ‘ಲಘುತ್ವ’ವಾಗಲಿ ‘ಅಗೌರವ’ಭಾವವಾಗಲಿ ಇಣುಕಿಯೂ ಇರಲಿಲ್ಲ. ನನಗೆ ಅವರಲ್ಲಿ ಯಾವಾಗಲೂ ಒಂದು ವಿಶ್ವಾಸಪೂರ್ವಕವಾದ ‘ಪೂಜ್ಯ’ ಭಾವನೆಯೆ ಇರುತ್ತಿತ್ತು. ನಾನು ಗೌರವಿಸುತ್ತಿದ್ದ ಅಥವಾ ಪ್ರಶಂಸಿಸುತ್ತಿದ್ದ ಇತರ ಇಬ್ಬರೊ ಮೂವರೊ ಪ್ರಾಧ್ಯಾಪಕರಲ್ಲಿ ಆ ಗೌರವಕ್ಕೆ ಅಥವಾ ಪ್ರಶಂಸೆಗೆ ಏನಾದರೂ ಒಂದು ‘ಕಾರಣ’ ವಿರುತ್ತಿತ್ತು. ಒಬ್ಬರನ್ನು ಅವರ ಬದುಕಿನ ಶುಚಿತ್ವಕ್ಕಾಗಿಯೂ ಠಾಕುಠೀಕಾದ ವೇಷಭೂಷಣಗಳಿಂದ ಕೂಡಿದ ಪ್ರಭಾವಶಾಲಿಯಾದ ವ್ಯಕ್ತಿತ್ವಕ್ಕಾಗಿಯೂ ಪ್ರಶಂಸಿಸಿದರೆ ಮತ್ತೊಬ್ಬರನ್ನು ನಾನು ಮೆಚ್ಚಿದ ಆದರ್ಶಗಳನ್ನೆ ಅವರೂ ಮೆಚ್ಚಿದ್ದಾರೆಂಬ ಕಾರಣಕ್ಕಾಗಿ ಗೌರವಿಸುತ್ತಿದ್ದೆ. ಮಗುದೊಬ್ಬರನ್ನು ಅವರ ವಿದ್ವತ್ತಿಗಾಗಿಯೊ ವಾಗ್ಮಿತೆಗಾಗಿಯೊ ಶ್ಲಾಘಿಸುತ್ತಿದ್ದೆ. ಇನ್ನೊಬ್ಬರನ್ನು ಬಹುಶಃ ಕನ್ನಡದ ಏಳಿಗೆಗಾಗಿ ದುಡಿಯುತ್ತಿದ್ದಾರೆ ಎಂಬ ಕಾರಣಕ್ಕಾಗಿಯೊ ಅಥವಾ ದೇಶಭಕ್ತಿಯ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಚಳವಳಿಯಲ್ಲಿ ಸಹಾನುಭೂತಿ ತೋರಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿಯೊ ಮೆಚ್ಚುತ್ತಿದ್ದೆ. ಆದರೆ ವೆಂಕಣ್ಣಯ್ಯನವರಲ್ಲಿ ನನಗಿದ್ದ ‘ಆತ್ಮೀಯತೆ’ಗೆ ಯಾವ ಒಂದು ಕಾರಣವನ್ನೂ ನಾನು ಒಡ್ಡಲಾರೆ. ಅದು ‘ನಿಷ್ಕಾರಣ’ವಾಗಿತ್ತು. ಅಥವಾ ‘ಅಕಾರಣ’ವಾಗಿತ್ತು, ಅಥವಾ ‘ಅಹೇತುಕ’ವಾಗಿ ದೈವಿಕವಾಗಿತ್ತು!

ಅಂತಹ ಅಹೇತುಕ ಸ್ವರೂಪದ ವಿಶ್ವಾಸದಿಂದಲೆ ನನ್ನ ಮೇಲೆ ಪ್ರಭಾವ ಬೀರಿದವರಲ್ಲಿ ಪ್ರೊ. ವೆಂಕಣ್ಣಯ್ಯನವರು ಪೂಜ್ಯ ಸಿದ್ದೇಶ್ವರಾನಂದರಿಗೆ ದ್ವಿತೀಯ ಮಾತ್ರರಾಗಿದ್ದರು.

ವೆಂಕಣ್ಣಯ್ಯನವರು ತರಗತಿಗೆ ಬರುವಾಗಲೆಲ್ಲ ಅವರ ಪ್ರವೇಶಭಂಗಿಯೆ ಒಂದು ಸಂತೋಷಾಗಮನದಂತಿರುತ್ತಿತ್ತು. ನಮ್ಮ ಕ್ಲಾಸು ದೊಡ್ಡದಾಗಿರಲಿಲ್ಲ, ಹತ್ತು ಹನ್ನೆರಡು ವಿದ್ಯಾರ್ಥಿಗಳಿದ್ದೆವು. ಅಷ್ಟೇನೂ ದೊಡ್ಡದಲ್ಲದೆ ಸಾಧಾರಣ ಕೊಠಡಿಯಲ್ಲಿ ನಡೆಯುತ್ತಿತ್ತು, ಮಹಾರಾಜಾ ಕಾಲೇಜಿನ ಮೇಲಂತಸ್ತಿನ ಮೂಲೆಯಲ್ಲಿ. ಉದ್ದವಾಗಿ ತೋರುತ್ತಿದ್ದ ಅವರು ತಮ್ಮ ಎತ್ತರವನ್ನು ತೋರಗೊಡಬಾರದೆಂಬ ವಿನಯದ ದಾಕ್ಷಿಣ್ಯ ಭಾರಕ್ಕೆಂಬಂತೆ ತುಸುಬಾಗಿ ನಡೆದುಬಂದು ಕುರ್ಚಿಯಲ್ಲಿ ಕುಳಿತೊಡನೆ ಒಂದು ವಿಶ್ವಾಸಪೂರ್ವಕ ಗೌರವಾನುಭವದ ಭಾವೋಲ್ಲಾಸ ವಿದ್ಯಾರ್ಥಿಗಳ ಹೃದಯಸರೋವರದಲ್ಲಿ ತರಂಗಿತವಾಗಿ ಸ್ಪಂದಿಸುತ್ತಿತ್ತು. ಅವರು ಇತರ ಅನೇಕ ಪ್ರಾಧ್ಯಾಪಕರಂತೆ ಗೌನು ತೊಟ್ಟು ನಿಂತು ಠೀವಿಯಿಂದ ಉಪನ್ಯಾಸ ಮಾಡುತ್ತಿರಲಿಲ್ಲ. ಕುರ್ಚಿಯ ಮೇಲೆ ಕುಳಿತೇ ಮಾತನಾಡುತ್ತಿದ್ದರು. ಅದರಲ್ಲಿ ಉಪನ್ಯಾಸದ ಪ್ರತಿಷ್ಟೆಯಾಗಲಿ ಭಾಷಣದ ವಾಗ್ಮಿತದೋರಣೆಯಾಗಲಿ ಇರದೆ ವಿದ್ಯಾರ್ಥಿಯ ಮನಸ್ಸಿಗೆ ಹೋಗುವ ಸಂವಾದ ಸಹಜ ನಿಷ್ಠೆ ಇರುತ್ತಿತ್ತು. ಅವರು ಎಲ್ಲ ವಿದ್ಯಾರ್ಥಿಗಳನ್ನೂ ಕುರಿತು ಸಮೂಹಿಕವಾಗಿ ಮಾತಾಡುತ್ತಿದ್ದರೂ ಪ್ರತಿಯೊಬ್ಬನಿಗೂ ತನ್ನನ್ನೆ ಗಮನಿಸಿ ಗುರಿಮಾಡಿ ಸಂಭಾಷಿಸುತ್ತಿದ್ದಾರೆ ಎಂಬ ವೈಯಕ್ತಿಕ ಭಾವನೆ ಮೂಡುತ್ತಿತ್ತು. ಅದುವರೆಗೆ ಇಂಗ್ಲಿಷ್ ತರಗತಿಗಳಲ್ಲಿ ಮಾತ್ರವೆ ನಾವು ಕೇಳುತ್ತಿದ್ದ ಪಠ್ಯವಿಷಯ ಪ್ರತಿಪಾದನಾ ವಿಧಾನವನ್ನೂ ಮತ್ತು ಕಾವ್ಯ ಮೀಮಾಂಸಾತ್ಮಕವಾದ ಸಾಹಿತ್ಯ ವಿಮರ್ಶನ ರೀತಿಯನ್ನೂ ಕನ್ನಡದ ತರಗತಿಗಳಲ್ಲಿಯೂ ಕೇಳುವಂತಾಗಿ ನಮ್ಮ ಭಾಷಾಭಿಮಾನಕ್ಕೆ ಕೋಡು ಮೂಡಿದಂತಾಯಿತು; ನಮ್ಮ ಕವಿಗಳೂ ಕಾವ್ಯಾಗಳು ಇಂಗ್ಲಿಷ್‌ ಕವಿಗಳಿಗೂ ಕಾವ್ಯಗಳಿಗೂ ಬಿಟ್ಟುಕೊಡುವುದಿಲ್ಲ ಎಂಬ ಹೆಂಮ್ಮೆಯಿಂದ ಹೃದಯ ಹಿಗ್ಗುವಂತಾಯಿತು. ವೆಂಕಣ್ಣಯ್ಯನವರು ರವೀಂದ್ರನಾಥ ಠಾಕೂರರ ಸಾಹಿತ್ಯ ವಿಮರ್ಶೆಯ ಬಂಗಾಳಿ ಪ್ರಂಬಂಧಗಳನ್ನು ‘ಪ್ರಾಚೀನ ಸಾಹಿತ್ಯ’ ಎಂಬ ಹೆಸರಿಂದ ಕನ್ನಡಕ್ಕೆ ಭಾಷಾಂತರಿಸಿ ‘ಪ್ರಬುದ್ಧಕರ್ಣಾಟಕ’ದಲ್ಲಿ ಪ್ರಕಟಿಸಿದ್ದರು. ಅವುಗಳನ್ನಾಗಲೆ ಪ್ರೊ. ಕೃಷ್ಣಶಾಸ್ತ್ರಿಗಳು ಮೂರನೆಯ ವರ್ಷದ ಬಿ.ಎ. ತರಗತಿಯಲ್ಲಿ ನಮಗೆ ಪರಿಚಯ ಮಾಡಿಕೊಟ್ಟಿದ್ದರು. ಆ ಪ್ರಬಂಧಗಳ ಭಾಷೆ, ಶೈಲಿ, ದೃಷ್ಟಿ, ಧ್ವನಿ ಮತ್ತು ಅವುಗಳಲ್ಲಿ ಮೈದೋರಿದ್ದ ‘ದರ್ಶನ’ ಇವುಗಳಿಗೆ ನಾನು ಮಾರುಹೋಗಿದ್ದೆ. ನಮ್ಮ ಸಾಹಿತ್ಯದ ಉತ್ತಮ ಭಾಗಗಳನ್ನು ಕುರಿತು ವಿಮರ್ಶಿಸುವಾಗ ವೆಂಕಣ್ಣಯ್ಯನವರು ಆ ರೀತಿಯದೇ ಆದ ಮಾರ್ಗವನ್ನು ಅನುಸರಿಸಿ ನಮ್ಮನ್ನು ರಸವಶರನ್ನಾಗಿ ಮಾಡುತ್ತಿದ್ದರು.

ಆದರೆ ಎಚ್ಚರಿಕೆ! ವೆಂಕಣ್ಣಯ್ಯನವರು ನಮ್ಮ ಕವಿಕಾವ್ಯಗಳನ್ನು ಹೊಸ ಬೆಳಕಿನಲ್ಲಿಟ್ಟು ಉಜ್ವಲಗೊಳಿಸುತ್ತಿದ್ದರೆಂದ ಮಾತ್ರಕ್ಕೆ ಅವರು ‘ಸತೃಣಾಭ್ಯವಹಾರಿ’ಗಳಾಗಿದ್ದರೆಂದು ಯಾರೂ ಭಾವಿಸದಿರಲಿ. ಅವರು ಚಾಮರ ಬೀಸುತ್ತಿದ್ದಂತೆಯೆ ಪೊರಕೆಯನ್ನೂ ಹಿಡಿದು ಗುಡಿಸುತ್ತಿದ್ದರು. ಕುಕವಿ ಕುಕಾವ್ಯಗಳನ್ನೂ ಪಾಂಡಿತ್ಯ ಪ್ರದರ್ಶನದ ಕಸರತ್ತನ್ನೂ ಮತಭ್ರಾಂತಿಯ ಕ್ಷುದ್ರಕಾವ್ಯಟೋಪಗಳನ್ನು ರಸವಿಹೀನ ಕೃತಕತೆಯನ್ನೂ ಸಂಧಿಸಿದಾಗ ಅವರ ಕೈಗೆ ಅಗ್ನಿಖಡ್ಗ ಬರುತ್ತಿತ್ತು. ನಾಲಗೆ ಮೂದಲಿಕೆಯ ಕರವಾಳವಾಗಿ ಜಳಪಿಸುತ್ತಿತ್ತು! ದ್ವಿತೀಯ ವರ್ಗದ ಕವಿಕಾವ್ಯಗಳಂತಿರಲಿ, ಪ್ರಥಮವರ್ಗದ ಮಹಾಕವಿಗಳೂ ಅವರ ರಸಾವೇಶವಿಹೀನವಾದ ಆಲಸ್ಯಸಮಯದ ಸೃಜನಭಾಗಗಳಲ್ಲಿ ತಕ್ಕ ‘ಶಾಸ್ತಿ’ಗೆ ಓಳಗಾಗುತ್ತಿದ್ದರು. ಪೊನ್ನ, ಚಾಮರಸ, ಷಡಕ್ಷರದೇವನಂತಹರೂ ಅವರ ಉಗ್ರ ಟೀಕೆಯ ಗಾಣಕ್ಕೆ ತಲೆಯೊಡ್ಡಿ ಜರ್ಜರಿತರಾಗುತ್ತಿದ್ದರೆಂದಮೇಲೆ ಮತ್ತೆ ಉಳಿದವರ ಪಾಡೇನು.?

ನಿದರ್ಶನವಾಗಿ ಒಂದು ಸಂಗತಿ ನೆನಪಿಗೆ ಬರುತ್ತಿದೆ: ಒಮ್ಮೆ ನನ್ನ ‘ಚಿತ್ರಾಂಗದಾ’ ಕಾವ್ಯವನ್ನು ಹಸ್ತಪ್ರತಿಯಲ್ಲಿಯೆ ಓದಿಸಿ ಕೇಳಿ “ಇಂಥಹದನ್ನೆಲ್ಲ ಬರೆಯುವ ನೀವು ‘ಹರಿಶ್ಚಂದ್ರಕಾವ್ಯ’ವನ್ನು ಆ ಪಾಟಿ ಹೇಗೆ ಹೊಗಳುತ್ತೀರಪ್ಪಾ?” ಎಂದು ಮೆಲ್ಲನೆ ಉಸುರಿದರು ಆಗ ನಾನು ರಾಘವಾಂಕನ ‘ಮಹಾ’ ಅಲ್ಲದಿದ್ದರೂ ಕನ್ನಡದ ಅತ್ಯುತ್ತಮ ಕಾವ್ಯಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ, ‘ಹರಿಶ್ಚಂದ್ರಕಾವ್ಯ’ದ ಮೇಲೆ ಪ್ರಶಂಸಾಪೂರ್ವಕವಾದ ವಿಮರ್ಶೆ ಬರೆದು ಪ್ರಕಟಿಸಿದ್ದೆ. ‘ಪ್ರಬುದ್ಧ ಕರ್ನಾಟಕ’ದಲ್ಲಿ. ನಾನು ಅಚ್ಚರಿಗೊಂಡು, ಅವರ ಆ ಉಕ್ತಿಗೆ ನನ್ನ ಪರವಾದ ಒಲವರವೆ ಕಾಣವಾಗಿರಬೇಕು ಎಂದುಕೊಂಡಿದ್ದೆ! ಅದರೆ ಬರಿಯ ಒಲವರಕ್ಕೆ ಶರಣಾಗುತ್ತಿದ್ದ ಚೇತನ ಅವರದಾಗಿರಲಿಲ್ಲ. ಅವರ ಮೇಧಾಶಕ್ತಿ ಮತ್ತು ವಿಚಾರ ತೀಕ್ಷ್ಣತೆ ಯಾವ ಮೋಹಕ್ಕೂ ಸಿಕ್ಕಿ ತಮ್ಮ ನಿಶಿತತ್ವವನ್ನು ಮೊಂಡುಗೊಳಿಸಿಕೊಳ್ಳುತ್ತಿರಲಿಲ್ಲ. ಮೇಲೆ ಹೇಳಿದ ಘಟನೆ ನಡೆಯುವುದಕ್ಕೆ ಕೆಲವು ವರ್ಷಗಳ ಹಿಂದೆ, ನನ್ನ ಮಿತ್ರರಲ್ಲಿ ಒಬ್ಬರಾಗಿದ್ದು ಸೆಂಟ್ರಲ್‌ ಕಾಲೇಜಿನ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿದ್ದ ಭೂಪಾಳಂ ಚಂದ್ರಶೇಖರಯ್ಯನವರು ನಾನು ೧೯೨೪ರಲ್ಲಿ ಗೋವಿನಕಥೆಯ ಮಟ್ಟಿನಲ್ಲಿ ಬರೆದಿದ್ದ ‘ಅಮಲನ ಕಥೆ’ ಎಂಬ ಒಂದು ಬಾಲಕ ಪ್ರಯತ್ನವನ್ನು ತುಂಬಾ ಮೆಚ್ಚಿಕೊಂಡು ತಮ್ಮ ಗುರುಗಳಿಗೆ ಕೊಟ್ಟು ಅವರ ಅಭಿಪ್ರಾಯ ಕೇಳಿದರಂತೆ. ವೆಂಕಣ್ಣಯ್ಯನವರು ಅದನ್ನು ಅಮೂಲಾಗ್ರವಾಗಿ ಓದಿ, ಮೂದಲಿಸುವಂತೆ ನಕ್ಕು, ‘ಅಯ್ಯೋ ಬಿಡಪ್ಪಾ, ಎಲ್ಲಾರೂ ಪದ್ಯ ಬರೆಯುವವರ!” ಎಂದು ಬಿಟ್ಟರಂತೆ. ಆಮೇಲೆ ಕೆಲವು ವರ್ಷಗಳ ತರುವಾಯ ನನ್ನ ಕವನಗಳೂ ನಾಟಕಗಳೂ ಲೇಖನಗಳೂ ‘ಪ್ರಬುದ್ಧ ಕರ್ನಾಟಕ’ ಮುಂತಾದ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿ ಸಾಹಿತ್ಯ ಪ್ರೇಮಿಗಳ ಗಮನ ಸೆಳೆದ ಸಮಯದಲ್ಲಿ ಅದೇ ವೆಂಕಣ್ಣಯ್ಯನವರೆ ಭೂಪಾಳಂ ಚಂದ್ರಶೇಖರಯ್ಯನವರನ್ನು ಒಂದು ಸಾಹಿತ್ಯಕ ಸಂದರ್ಭದಲ್ಲಿ ಶಿವಮೊಗ್ಗೆಯಲ್ಲಿ ಸಂಧಿಸಿದಾಗ – ನನಗೂ ಚಂದ್ರಶೇಖರಯ್ಯನವರಿಗೂ ಇದ್ದ ನಿಕಟಸ್ನೇಹದ ವಿಚಾರ ಅವರಿಗಿನ್ನೂ ಗೊತ್ತಾಗಿರಲಿಲ್ಲ – ನನ್ನನ್ನು ಬಹುವಾಗಿ ಪ್ರಶಂಸಿಸಿ, ಯಾವ ಇಂಗ್ಲಿಷ್ ಕವಿಗೂ ಬಿಟ್ಟುಕೊಡುವುದಿಲ್ಲ ಎಂದು ಹೆಮ್ಮೆಯಿಂದ ಹೇಳಿದರಂತೆ. ವೆಂಕಣ್ಣಯ್ಯನವರು ಮುಖ ನೋಡಿ ಮಣೆ ಹಾಕುವವರ ಜಾತಿಗೆ ಸೇರಿರಲಿಲ್ಲ!

ನಿಜವಾದ ಪ್ರತಿಭೆಯನ್ನು, – ಅದು ಎಲ್ಲಿಯೆ ಇರಲಿ, ಯಾರಲ್ಲಿಯೆ ಇರಲಿ – ಕಾಣುವ ವಿಶಾಲ ಬುದ್ದಿಯೂ ಗುರುತಿಸುವ ಉದಾರ ಹೃದಯವೂ ವೆಂಕಣ್ಣಯ್ಯನವರಿಗೆ ದೈವದತ್ತವಾಗಿದ್ದುವು; ಸಣ್ಣ ಮನಸ್ಸು ಮತ್ತು ಸಂಕುಚಿತಭಾವ ಅವರ ಬಳಿ ಸುಳಿಯುತ್ತಿರಲಿಲ್ಲ. ಚೇತನಗಳಿಗೆ ಪ್ರೋತ್ಸಾಹದ ಗೊಬ್ಬರ ಹಾಕಿ, ಪ್ರಶಂಸೆಯ ನೀರೆರೆದು ನಿರ್ಮತ್ಸರವಾಗಿ ಪೋಷಿಸುತ್ತಿದ್ದರು. ಆದರೆ ಕಸಿಮಾಡುವ ಕತ್ತರಿಯನ್ನೂ ಹಿಡಿದಿರುತಿದ್ದರು, ರೋಗಿಷ್ಠ ರಂಬೆಗಳನ್ನು ನಿಷ್ಠುರವಾಗಿ ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಿ ಗಿಡ ಆರೋಗ್ಯವಾಗಿ ಸುದೃಢವಾಗಿ ಅಭಿವರ್ಧಿಸುವಂತೆ ಮಾಡಲು. ಅವರ ಆ ಮಾತೃಲಕ್ಷಣದ ಹೊಂಬಿಸಲಲ್ಲಿ ಚಳಿ ಕಾಯಿಸಿಕೊಂಡು ಬದಿಕಿ ಬಾಳಿದ ಅನೇಕ ಚೇತನಗಳಲ್ಲಿ ನಾನೂ ಒಬ್ಬನು.

ಸ್ವಭಾವತಃ ಹಿಂಜರಿದು ಮರೆಸೇರುವ ಪ್ರವೃತ್ತಿಯವನಾಗಿದ್ದ ನನ್ನನ್ನು ಬಯಲಿನ ಕಣಕ್ಕೆ ಎಳೆದು ನೂಕಿದ ಹಿರಿಯರಲ್ಲಿ ಸ್ವಾಮಿ ಸಿದ್ಧೇಶ್ವರಾನಂದಜಿ, ನಾ. ಕಸ್ತೂರಿ ಅವರನ್ನು ಬಿಟ್ಟರೆ ವೆಂಕಣ್ಣಯ್ಯ ಕೃಷ್ಣಶಾಸ್ತ್ರಿಗಳಿಗೆ ಪ್ರಧಾನಸ್ಥಾನ ಮೀಸಲಾಗುತ್ತದೆ. ಕೃಷ್ಣಶಾಸ್ತ್ರಿಗಳದ್ದು ಕೂಗಿ ಕರೆವ ರೀತಿಯಾದರೆ ವೆಂಕಣ್ಣಯ್ಯನವರದ್ದು ಕಿವಿಯಲ್ಲಿ ಪಿಸುಗುಟ್ಟಿ ಪ್ರೇರಿಸುವ  ರೀತಿಯದು. ಅವರು ಬಲಾತ್ಕರಿಸುತ್ತಿದ್ದಾರೆ ಎಂಬುದರ ಅರಿವೇ ಇಲ್ಲದೆ ಅವರ ಬಲಾತ್ಕಾರಕ್ಕೆ ಅವಶವಾದಂತೆ ವಶನಾಗುತ್ತಿದ್ದೆ. ಶ್ರೀಯುತ ಕೃಷ್ಣಶಾಸ್ತ್ರಿಗಳು  ಬೆಂಗಳೂರು ಸೆಂಟ್ರಲ್ ಕಾಲೇಜಿಗೆ ಹೋದ ಮೇಲೆ ಅವರು ಕರ್ಣಾಟಕ ಸಂಘದ ಆಶ್ರಯದಲ್ಲಿ ಒಂದು ವಿದ್ಯಾರ್ಥಿಕವಿ ಸಮ್ಮೇಳನ ಏರ್ಪಡಿಸಿ ಆದರ ಅಧ್ಯಕ್ಷತೆ ವಹಿಸಬೇಕೆಂದು ಮೊದಲನೆಯ ವರ್ಷದ ಎಂ.ಎ. ತರಗತಿಯ ವಿದ್ಯಾರ್ಥಿಯಾಗಿದ್ದ ನನಗೆ ಕಾಗದ ಬರೆದರು. ನನಗೆ ದಿಗಿಲಾಯ್ತು. ನಾನು ಅದುವರೆಗೆ ಅಂತಹ ಯಾವ ಸಾರ್ವಜನಿಕ ಸಭೆಯಲ್ಲಿಯೂ ವೇದಿಕೆಯ ಮೇಲೆ ನಿಂತು  ಭಾಷಣ ಮಾಡಿರಲಿಲ್ಲ. ಪೂಜ್ಯ ಸಿದ್ಧೇಶ್ವರಾನಂದರ ಮತ್ತು ಅಂದು ಶ್ರೀರಾಮಕೃಷ್ಣಾಶ್ರಮದ ಚಟುವಟಿಕೆಗಳಲ್ಲಿ  ಅಗ್ರೇಸರಸ್ಥಾನ ವಹಿಸುತ್ತಿದ್ದ ನಾ. ಕಸ್ತೂರಿಯವರ ಹಿರಿದುಂಬಿಸುವಿಕೆಯಿಂದ ಆಶ್ರಮದ  ಉತ್ಸವದ ಸಭೆಗಳಲ್ಲಿ ನಾನು ರಚಿಸಿದ್ದ ಶ್ರೀ ರಾಮಕೃಷ್ಣ – ವಿವೇಕಾನಂದ ವಿಷಯಕವಾದ  ಕವನಗಳನ್ನು ವಾಚಿಸಿದ್ದೆನೆಷ್ಟೋ ಅಷ್ಟೇ. ಜಯಪ್ರದವಾಗುವಂತೆ ಅಧ್ಯಕ್ಷತೆ ವಹಿಸುವ  ವಿಚಾರದಲ್ಲಿ ನನಗೆ ನಂಬಿಕೆಯಿರಲಿಲ್ಲ; ಅದಕ್ಕಾಗಿ ಪ್ರಯಾಣ ಕೈಕೊಳ್ಳುವ ಮೊದಲಾದ ‘ತೊಂದರೆ’ ಗಳಿಗೊಳಗಾಗಲೂ ನನಗೆ ಇಷ್ಟವಿರಲಿಲ್ಲ. ಆದರೆ ನನ್ನ ಸ್ವಭಾವದ ಲಕ್ಷಣ ವನ್ನು ಅರಿತಿದ್ದ ಕೃಷ್ಣಶಾಸ್ತ್ರಿಗಳು ವೆಂಕಣ್ಣಯ್ಯನವರಿಗೆ ಕಾಗದ ಬರೆದು, ಹೇಗಾದರೂ  ಮಾಡಿ ನನ್ನನ್ನು ಒಪ್ಪಿಸುವಂತೆ ಕೇಳಿಕೊಂಡರು. ಸರಿ, ಶಾಸ್ತ್ರಿಗಳು ತಮಗೆ ಬರೆದಿದ್ದ ಕಾಗದದ ವಿಚಾರವನ್ನು ಒಂದಿನಿತೂ ಬಯಲು ಮಾಡದೆ, ಅವರು ನನಗೆ ಬರೆದಿದ್ದ ಕಾಗದವನ್ನು ನಾನು ತೋರಿಸಲು, ಆ ವಿಚಾರದಲ್ಲಿ ಸಂಪೂರ್ಣ ಅನಾಸಕ್ತರಾದಂತೆ ತೋರಿಸಿಕೊಂಡು, ನಿಷ್ಪಕ್ಷಪಾತವಾಗಿ ಸಲಹೆ ಕೊಡುವವರಂತೆ ವರ್ತಿಸಿದರು. ಭಾವ ಲವಲೇಶವಿಲ್ಲದ ಪ್ರಶಾಂತ ಧ್ವನಿಯಿಂದ, ನಾನು ಕವಿ ಸಮ್ಮೇಲನದ ಅಧ್ಯಕ್ಷತೆ ವಹಿಸುವುದು ಅನೇಕ ದೃಷ್ಟಿಗಳಿಂದ ಒಳಿತು ಎಂದು, ಮಂತ್ರದೀಕ್ಷೆ ಕೊಡುವಂತೆ, ಮನಸ್ಸಿನ ಆಳಕ್ಕೆ ಹೋಗುವಂತೆ ಮೆಲ್ಲನೆ ಸೂಚಿಸಿದರು. ಅವರು ಸೂಚಿಸಿದ ರೀತಿಯಲ್ಲಿ ಹೋಗುವ ಅಥವಾ ಹೋಗದಿರುವ ವಾದವಿವಾದಕ್ಕೆ ಅವಕಾಶವೆ ಇಲ್ಲವಾಗಿತ್ತು! ನೇರವಾಗಿ ‘ಅಧ್ಯಕ್ಷಭಾಷಣ ಬರೆದು ತಾ. ನಾನು ನೋಡುತ್ತೇನೆ’ ಎಂದೂ ಬಿಟ್ಟರು. ವೆಂಕಣ್ಣಯ್ಯನವರ  ಮನಸ್ಸಿಗೆ ಸಂತೋಷವಾಗುತ್ತದೆ ಎಂದರೆ ನಾನು ಏನನ್ನೂ ಮಾಡಲು ಹೇಸುತ್ತಿರಲಿಲ್ಲವೆಂದು ತೋರುತ್ತದೆ. ಭಾಷಣ ಬರೆದು ತೋರಿಸಿದೆ. ನನ್ನ ತಲೆ ತಿರುಗುವಂತೆ ಅದನು ಹೊಗಳಿಬಿಟ್ಟರು. ಮಂಗನಿಗೆ ಭಂಗಿ ಕುಡಿಸಿದಂತಾಯಿತು. ಬೆಂಗಳೂರಿಗೆ ಹೋದೆ. ೧೯೨೮ನೆಯ ಇಸವಿ ಡಿಸೆಂಬರ್ ೧೫ರಂದು ನಡೆದ ಕವಿ ಸಮ್ಮೇಲನದ ಅಧ್ಯಕ್ಷತೆ ವಹಿಸಿದೆ. ಅದು ತುಂಬ ಯಶಸ್ವಿಯಾಗಿಯೆ ಜರುಗಿತ್ತು, ವೆಂಕಣ್ಣಯ್ಯನವರ ಹೆಮ್ಮೆ ಮುಗಿಲು ಮುಟ್ಟುವಂತೆ!

ಆವೊತ್ತಿನಿಂದ ಅಧ್ಯಕ್ಷನಾಗಿಯೊ ಮುಖ್ಯ ಆತಿಥಿಯಾಗಿಯೊ ಅನೇಕ ಕನ್ನಡ ನವೋದಯದ ಸಮಾರಂಭಗಳಲ್ಲಿ ನಾನು ಭಾಗವಹಿಸುವಂತೆ ಪ್ರೋತ್ಸಾಹವಿತ್ತವರು ವೆಂಕಣ್ಣಯ್ಯನವರ. ಬಿ.ಎಂ.ಶ್ರೀಯವರು ಅಧ್ಯಕತೆ ವಹಿಸಿದ್ದ ಗುಲ್ಬರ್ಗದ ಸಾಹಿತ್ಯ ಸಮ್ಮೇಲನದಲ್ಲಿ ನನ್ನ ‘ಯಮನ ಸೂಲು’ ನಾಟಕದಲ್ಲಿ ನಾನೆ ಸತ್ಯವಾನನ ಪಾತ್ರ ವಹಿಸುವಂತೆ ಮಾಡಿದ್ದೂ ವೆಂಕಣ್ಣಯ್ಯನವರೆ, ಬೇಸಿಗೆ ರಜಾಕ್ಕೆ ಊರಿಗೆ ಹೋಗಿ ಮಲೆನಾಡಿನ ಕಾಡುಮಲೆಗಳಲ್ಲಿ ಹುದುಗಿ ಅಲೆಯುತ್ತಿದ್ದವನನ್ನು ಟೆಲಿಗ್ರಾಂ ಕೊಟ್ಟು ಕರೆಯಿಸಿಕೊಂಡು! ಹುಬ್ಬಳ್ಳಿಯ ಸಾಹಿತ್ಯ ಸಮ್ಮೇಲನದಲ್ಲಿ ಕವಿ ಸಮ್ಮೇಲನದ ಅಧ್ಯಕ್ಷತೆ ವಹಿಸಿ ‘ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ’ ಎಂಬ ನನ್ನ ಭಾಷಣ ಸರ್ವತೋಮುಖ ಪ್ರಶಂಸೆಗೆ ಭಾಜನವಾಗುವಂತೆ ಮಾಡಿದವರೂ ಅವರೆ. ಆಗ ಶಿವಮೊಗ್ಗದಿಂದ ನನ್ನನ್ನು ಬಸ್ಸಿನಲ್ಲಿ ಹರಿಹರಕ್ಕೆ ಕರೆದೊಯ್ದು, ಅಲ್ಲಿಂದ ರೈಲಿನಲ್ಲಿ ಹುಬ್ಬಳ್ಳಿಗೆ ತಡವಾಗಿ ಹೋಗಿ, ಸಮಿತಿಯವರು ಏರ್ಪಡಿಸಿದ್ದ ಆನೆಯ ಮೇಲೇರುವ ಮೆರವಣಿಗೆಯಿಂದ ನಾನು ಪಾರಾಗುವಂತೆ ಕೃಪೆ ಮಾಡಿದ್ದು ವೆಂಕಣ್ಣಯ್ಯನವರೆ! ಬಹುಶಃ ವೆಂಕಣ್ಣಯ್ಯನವರು ಹೋಗದಿದ್ದ ಯಾವ ಸಾಹಿತ್ಯ ಸಮ್ಮೇಲನಕ್ಕೂ ನಾನು ಹೋಗಿಲ್ಲವೆಂದು ಕಾಣುತ್ತದೆ, ಅವರು ಬದುಕಿದ್ದಷ್ಟು ಕಾಲವೂ!

ಪೂಜ್ಯ ವೆಂಕಣ್ಣಯ್ಯನವರ ವಿಚಾರವಾಗಿ ಅನೇಕ ಔದಾರ್ಯದ ಕಥೆಗಳನ್ನು ಕೇಳಿದ್ದೇನೆ. ಬಲಗೈ ಕೊಟ್ಟದ್ದನ್ನು ಎಡಗೈ ಅರಿಯಬಾರದು ಎಂಬುದಕ್ಕೆ ಅವರು ಜೀವಂತ ಸಾಕ್ಷಿಯಾಗಿದ್ದರು. ಎಷ್ಟು ಜನ ವಿದ್ಯಾರ್ಥಿಗಳು, ಮತ್ತೆಷ್ಟು ಆರ್ತರು ಯಾರೂ ಅರಿಯದ ರೀತಿಯಲ್ಲಿ ಅವರಿಂದ ಉಪಕೃತರಾಗಿದ್ದಾರೆಯೋ ಭಗವಂತನೊಬ್ಬನಿಗೇ ಗೊತ್ತು. ತಮಗೆ ಬರುತ್ತಿದ್ದ ಮಿತ ಆದಾಯದ ದೃಷ್ಟಿಯಿಂದ ನೋಡಿದರೆ, ಅವರು ಮಾಡುತ್ತಿದ್ದ ದಾನ ಅಮಿತವಾಗಿತ್ತೆಂದೇ ಹೇಳಬೇಕಾಗುತ್ತದೆ. ಗಂಭೀರ ಸಂದರ್ಭಗಳ ಮತ್ತು ದೊಡ್ಡ ದೊಡ್ಡ ಕೊಡುಗೆಗಳ ಮಾತಂತಿರಲಿ, ಅತ್ಯಂತ ಅಲ್ಪವೆಂದು ತೋರುವ ಈ ಒಂದು ಲಘು ನಿದರ್ಶನದಲ್ಲಿಯೂ ಅವರ ಔದಾರ್ಯದ ಸ್ವರೂಪ ಎಂತಹ ಅಲಘು ಪ್ರಮಾಣದಲ್ಲಿ ವ್ಯಕ್ತವಾಗುತ್ತದೆ ಎಂಬುದನ್ನು ಗ್ರಹಿಸಬಹುದು, ಘಟನಾಧ್ವನಿ ಗ್ರಹಣ ಸಾಮರ್ಥ್ಯವುಳ್ಳ ಸಹೃದಯ ಚೇತನ.

ಗುಲ್ಬರ್ಗ ಸಾಹಿತ್ಯ ಸಮ್ಮೇಲನದಲ್ಲಿ ಮಹಾರಾಜ ಕಾಲೇಜಿನ ಕರ್ಣಾಟಕ ಸಂಘದವರು ನನ್ನ ‘ಯಮನ ಸೋಲು’ ನಾಟಕವನ್ನು ಆಡುವುದೆಂದು ಗೊತ್ತಾಗಿತ್ತು. ಆಗ ಬೇಸಗೆಯ ರಜದ ಕಾಲವಾದ್ದರಿಂದ ವಿದ್ಯಾರ್ಥಿಗಳು ಅವರವರ ಊರಿಗೆ ಹೋಗಿದ್ದರು; ಆದ್ದರಿಂದ ನಾಟಕದಲ್ಲಿ ಪಾತ್ರವಹಿಸುವವರು ಈ ಸಮ್ಮೇಲನಕ್ಕೆ ಮೊದಲೆ ಗುಲ್ಬರ್ಗಕ್ಕೆ ತಾವುತಾವೆ ಬಿಡಬಿಡಿಯಾಗಿ ಹೊಗುವುದೆಂದು ಗೊತ್ತಾಗಿತ್ತು. ಆದರೆ ಸತ್ಯವಾನ ಪಾತ್ರಧಾರಿ ಕಾಯಿಲೆ ಬಿದ್ದುದರಿಂದ ತಾನು ಬರುವ ಸ್ಥಿತಿಯಲ್ಲಿಲ್ಲ ಎಂದು ಕೊನೆಯ ಗಳಿಗೆಯಲ್ಲಿ ತಿಳಿಸಿಬಿಟ್ಟನಂತೆ. ಮತ್ತೊಬ್ಬನನ್ನು ಆ ಪಾತ್ರ ವಹಿಸುವಂತೆ ಮಾಡಿ, ಅವನಿಗೆ ಅಭ್ಯಾಸ ಕೊಡುವಷ್ಟು ಸಮಯವೂ ಇರಲಿಲ್ಲ. ಆದ್ದರಿಂದ ವೆಂಕಣ್ಣಯ್ಯನವರು ತಂತಿ ಕೊಟ್ಟರು, ಕುಪ್ಪಳಿಯ ಮಲೆಗಳಲ್ಲಿ ಅಲೆಯುತ್ತಿದ್ದ ನನಗೆ. ಪರಿಸ್ಥಿತಿಯ ಮಿಷಮತೆಯನ್ನರಿತು ನಾನೂ, ಶಿವಮೊಗ್ಗದ ಇಬ್ಬರು ಮಿತ್ರರೊಡನೆ, ಗುಲ್ಬರ್ಗಕ್ಕೆ ಧಾವಿಸಿದೆ. ವೆಂಕಣ್ಣಯ್ಯನವರಿಗೆ ಮಹಾದಾನಂದ!

ಬಿ.ಎಂ.ಶ್ರೀಯವರ ಅಧ್ಯಕ್ಷತೆಯ ಭಾಷಣ ಮತ್ತು ‘ಗದಾಯುದ್ಧ’ ‘ಯಮನಸೋಲು’ ನಾಟಕಗಳ ಪ್ರದರ್ಶನದ ರೋಮಾಂಚಕ ಸ್ವಾರಸ್ಯದ ಕಥೆ ಇಲ್ಲಿ ಬೇಡ.

ಗುಲ್ಬರ್ಗವನ್ನು ಕಲ್ಬುರ್ಗಿ ಎಂದು ಕರೆಯುತ್ತಾರೆ. ಎಲ್ಲಿ ನೋಡಿದರು ಕಲ್ಲು, ಕಡಪಾ ಕಲ್ಲು! ನೆಲಕ್ಕೆ ಕಲ್ಲು, ಕಿಟಕಿಗೆ ಕಲ್ಲು, ಬಾಗಿಲಿಗೆ ಕಲ್ಲು, ಮೇಲೆ ತಾರಸಿಗೂ ಕಲ್ಲು! ಎಲ್ಲೆಲ್ಲೂ ಕಲ್ಲು, ಕಲ್ಲು! ಜೊತೆಗೆ ಕಡುಬೇಸಗೆ! ಸುಡುಬಿಸಿಲು! ಉರಿ, ಉರಿ, ಉರಿ! ನಲ್ಲಿ ತಿರುಗಿಸಿದರೆ, ನಡುಹಗಲಿರಲಿ. ಪ್ರಾತಃಕಾಲದಲ್ಲಿಯೂ ಕೊತ ಕೊತ ಕೊತ ಕುದಿಯುತ್ತಿದ್ದ ನೀರು! ಅದಕ್ಕೆ ಬೆರಸಿಕೊಳ್ಳಲು ತಣ್ಣೀರು ತರುವುದೆಲ್ಲಿಂದ? ನಮಗೆ ಒಂದು ಸ್ಕೂಲಿನ ಕಟ್ಟಡ ಬಿಟ್ಟುಕೊಟ್ಟಿದ್ದರು ಇಳಿದುಕೊಳ್ಳುವುದಕ್ಕೆ. ಹಗಲಲ್ಲಿ ಅದರೊಳಗೆ ಉರಿಬಿಸಿಲಿನಿಂದ ತಪ್ಪಿಸಿಕೊಳ್ಳಲು ಅನಿವಾರ್ಯವಾಗಿ ಇರಲೇಬೇಕಾಗಿತ್ತು. ಆದರೆ ಇರಳು ಇಣಿಕಿದೊಡನೆಯೆ ಹೊರ ವರಾಂಡರೂಪದ ಮುಂಗಡೆಯ ಅಂಗಳಕ್ಕೆ ಹಾಸಗೆ ಸಮೇತ ಓಡಿಬಿಡುತ್ತಿದ್ದೆವು, ರಾತ್ರಿಯೆಲ್ಲಾ ತುಸುವೂ ಹೊದಿಕೆಯಿಲ್ಲದೆ ಮಾನ ಹೊರತಾಗಿ ಬತ್ತಲೆ ಮಲಗಲು, ಸಾಕಷ್ಟು ತಂಪಿನಲ್ಲಿ; ಅಥವಾ ಹಗಲಿನ ಉರಿಬಿಸಿಲಿಗೆ ಹೋಲಿಸದರೆ ತಂಪು ಎಂಬ ವಿಶೇಷಣಕ್ಕೆ ಆಲಂಕಾರಿಕವಾಗಿ ಮಾತ್ರ ಪಕ್ಕಾಗಬಹುದಾಗಿ ಬೀಸುತ್ತಿದ್ದ ಬಿಸಿಗಾಳಿಯಲ್ಲಿ!

ಅಲ್ಲಿ ಮಿದ್ಯುದ್ದೀಪಗಳಿರಲಿಲ್ಲ. ಲಾಟೀನು ಲ್ಯಾಂಪು ಲಾಂದ್ರಗಳನ್ನು ಕೊಟ್ಟಿದ್ದರು. ಒಂದು ಲಾಟೀನಿನ ಮಂದ ಬೆಳಕಿನ ಸುತ್ತ ನಮ್ಮ ನಮ್ಮ ಹಾಸಗೆ ಹಾಕಿಕೊಂಡು ನಾವು ಕೆಲವರು – ನಾರಾಯಣಶಾಸ್ತ್ರಿ, ಕೃಷ್ಣಮೂರ್ತಿ, ಪುಟ್ಟನಂಜಪ್ಪ ಇತ್ಯಾದಿ – ಕುಳಿತು ಹರಟುತ್ತಿದ್ದೆವು. ಸ್ವಲ್ಪ ದೂರದಲ್ಲಿ ಮತ್ತೊಂದು ಬೆಳಕಿನ ಪಕ್ಕದಲ್ಲಿ ವೆಂಕಣ್ಣಯ್ಯನವರೂ ಕೃಷ್ಣಶಾಸ್ತ್ರಿಗಳೂ ತಮ್ಮ ಹಾಸಗೆಗಳಿಗೆ ಒರಗಿ ಏನನ್ನೊ ಮಾತಾಡಿಕೊಳ್ಳುತ್ತಿದ್ದರು.

ಇದ್ದಕ್ಕಿದ್ದಹಾಗೆ ನನಗೆ ದಿಕ್ಕು ತೋಚದಂತಾಯ್ತು! ಗಾಬರಿಯಾಯ್ತು! ಮುಂದೇನು ಮಾಡುವುದು? ನನ್ನ ನಶ್ಯದ ಡಬ್ಬಿ ಖಾಲಿಯಗಿದೆ! ಕೆರಸಿದರೂ ಒಂದೂ ಚೂರೂ ನಶ್ಯ ಬರುತ್ತಿಲ್ಲ! ಏನು ಮಾಡುವುದು? ಜೊತೆಯಲ್ಲಿದ್ದ ಯಾರನ್ನೂ ಕೇಳಿದರೂ ಯಾರೂ ನಶ್ಯ ಹಾಕುವವರಿರಲಿಲ್ಲ! ಬೇರೆ ದುಶ್ಚಟಗಳಲ್ಲಿ ನಿಷ್ಣಾತರಾದವರಿದ್ದರೂ ಇದೊಂದನ್ನು ಮಾತ್ರ ತ್ಯಾಗ ಮಾಡಿರಬೇಕೇ ಅವರು? ಒಟ್ಟು ನನ್ನ ದುರದೃಷ್ಟ! ನನಗಂತೂ ಬದುಕೇ ಶೂನ್ಯವಾದಂತಾಗುತ್ತಿತ್ತು, ನಶ್ಯ ಇಲ್ಲದ್ದರಿಂದ ಅದರಲ್ಲಿಯೂ ಡಬ್ಬಿಯಲ್ಲಿ ನಶ್ಯ ಇದ್ದಾಗ, ಬೇಕೆಂದರೆ ಸ್ವಲ್ಪ ಸಂಯಮ ತೋರಿಸಲು ಸಾಧ್ಯವಾಗುತ್ತಿತ್ತು. ದೊಡ್ಡವರ ಸಮ್ಮುಖದಲ್ಲಿ ಹೇಗೆ ಸೇದುವುದು ಎಂದು ಒಂದು ಹತ್ತೋ ಇಪ್ಪತ್ತೋ ನಿಮಿಷ ತಡೆದರೂ ತಡೆಯಬಹುದಾಗಿತ್ತು. ಆದರೆ ಈಗ? ಡಬ್ಬಿಯಲ್ಲಿ ನಶ್ಯ ಏನೂ ಇಲ್ಲ ಎಂದು ತಿಳಿದೊಡನೆ, ನಶ್ಯಹಾಕುವ ಚಟ ನೆತ್ತಿಗೇರಿಬಿಟ್ಟಿತ್ತು. ನಶ್ಯವಿಲ್ಲದಿದ್ದರೆ ಯಾವುದಾದರೂ ಒಳಗಿದ ಎಲೆಯನ್ನೆ ಕಡೆಗೆ ಮಣ್ಣಾದರೆ ಮಣ್ಣನ್ನೆ, ಪುಡಿಮಾಡಿ ಹಾಕಿಕೊಳ್ಳಲೇ ಎಂಬಂತಾಗುತ್ತಿತ್ತು.

ಅಷ್ಟರಲ್ಲಿ ಕಂಡಿತು, ಸ್ವರ್ಗದ್ವಾರ ಬಾಗಿಲು ತೆರೆದದ್ದು! ಅವರ ಲಾಟೀನಿನ ಮಂದಕಾಂತಿಯ ಪರಿವೇಷದಲ್ಲಿ ‘ಷಿಲೊಟ್ಟೆ’ಯಾಗಿ ಕಾಣಿಸಿತು, ನಶ್ಯದ ಚಿಟಿಗೆ ಹಿಡಿದು, ವರದ ಹಸ್ತವೆಂಬಂತೆ, ಮೂಗಿನೆಡಗೇರುತ್ತಿದ್ದ ವೆಂಕಣ್ಣಯ್ಯನವರ ಕೈ!

ಅವರು ನಮ್ಮೊಡನೆ ಎಷ್ಟು ಸಲಿಗೆಯಿಂದ ನಡೆದುಕೊಳ್ಳುತ್ತಿದ್ದರೂ ಪ್ರೊಫೆಸರ್ ಆದವರಿಂದ ನಶ್ಯ ಕೇಳುವ ಮಟ್ಟಕ್ಕೆ ಏರಿರಲಿಲ್ಲ ನಮ್ಮ ವಿದ್ಯಾರ್ಥಿತ್ವ, ಆಗಿನ ಕಾಲದಲ್ಲಿ. ವಿದ್ಯಾರ್ಥಿಯಾದವನಿಗೆ ನಶ್ಯಹಾಕುವ ದುರಭ್ಯಾಸವೂ ನಿಷಿದ್ಧ ಧರ್ಮ ಎಂಬ ಭಾವನೆ ನನಗೆ. ನಾನು ನಶ್ಯಹಾಕುತ್ತಿದ್ದುದು ವೆಂಕಣ್ಣಯ್ಯನವರಿಗೆ ಏನೇನೂ ತಿಳಿಯದೆಂದೂ ಭಾವಿಸದ್ದೆ! ಅವರ ಕಣ್ಣಿಗೆ ಅಷ್ಟು ಶುಚಿಭೂರ್ತನಾಗಿದ್ದ ನಾನು, ನನ್ನನ್ನು ಅಷ್ಟೊಂದು ಮೆಚ್ಚಿಕೊಂಡಿದ್ದ ಅವರಿಗೆ, ಅವರು ಎಂದೆಂದೂ ನಿರೀಕ್ಷಿಸದೆ ಇದ್ದ ನನ್ನ ಆ ವರ್ತನೆಯಿಂದ ಮಾನಸಾಘಾತ ಉಂಟುಮಾಡಿಬಿಡುತ್ತೇನೆಯೊ ಎಂಬ ಅಳುಕು. ಆದರೂ ನಶ್ಯದ ಚಟದ ನಿಷ್ಪೀಡನೆಗೆ ಸಿಕ್ಕಿದ್ದು ಲಿವಿಲಿವಿ ಇದ್ದಾಡಿಕೊಳ್ಳುತ್ತಿದ್ದ ನನ್ನಾತ್ಮ ತನ್ನ ಮನಸ್ಸು ಗಟ್ಟಿಮಾಡಿಕೊಂಡು ಮಿತ್ರರ ಧೈರ್ಯಪ್ರಚೋದನೆಯ ಮುಚ್ಚುನಗೆಯನ್ನೆ ನಿಜವೆಂದು ನಂಬಿ, ನೆಮ್ಮಿ, ಎದ್ದು ಬಳಿಸಾರಿದೆ. ಬಳಿಗೆ ಬಂದು ನಿಂತ ನನ್ನನ್ನು ನೋಡಿ “ಏನು ಪುಟ್ಟಪ್ಪ!” ಎಂದು ಕತ್ತೆತ್ತಿ ನೋಡಿದರು. “ಸ್ವಲ್ಪ ಶೀತ ಆಗಿದೆ ಸಾರ್ ಒಂದು ಚುಟಿಕೆ ನಶ್ಯ ಬೇಕಿತ್ತು!” ಎಂದು ಹಲ್ಲುಬಿಟ್ಟೆ. ಆ ಬೆಟ್ಟ ಬೇಸಗೆಯಲ್ಲಿ ಅದರಲ್ಲಿಯೂ ಗುಲ್ಬರ್ಗದ ಉರಿಯಲ್ಲಿ ಶೀತವಂತೆ! ಅವರಿಗೆ ಎಲ್ಲವೂ ತಿಳಿದುಹೋಗಿತ್ತು!! ನಾನು ಕೇಳಿದ್ದಂತೆ ಅವರೆಲ್ಲಿಯಾದರೂ ಒಂದೇ ಚುಟಿಕೆ ನಶ್ಯ ಕೊಟ್ಟು ಕಳಿಸಿದ್ದರೆ ಏನು ಗತಿ! ನಾನು ತಿಳಿದುಕೊಂಡಿದ್ದೆ, ಅವರು ಎಡಗೈಯಲ್ಲಿ ಹಿಡಿದುಕೊಂಡಿದ್ದ ಅವರ ಸಣ್ಣ ನಶ್ಯದ ಡಬ್ಬಿಯಿಂದಲೆ ಒಂದು ಚುಟಿಕೆ ತೆಗೆದುಕೊಡುತ್ತಾರೆ ಎಂದು. ಅವರು ಹೇಳಿದರು, ಗುಟ್ಟಾವುದನ್ನೂ ಗ್ರಹಿಸಲಿಲ್ಲ ಎಂಬಂತೆ ನಿರ್ಭಾವವಾಗಿ, ನನ್ನ ಮರ್ಯಾದೆಗೆ ಇನಿತೂ ಧಕ್ಕೆಯಾಗದಂತೆ: “ನೋಡಿ, ಅಲ್ಲಿ, ನನ್ನ ಟ್ಟಂಕ್‌ ಇದೆ. ಅದರಿಂದ ತೆಗೆದುಕೊಳ್ಳಿ!” ಎಂದು. ನನಗೋ ಗಣಿಗೇ ಆಹ್ವಾನಕೊಟ್ಟಂತಾಯ್ತು! ನಾನು ಅವರ ಟ್ರಂಕಿನ ಬಾಗಿಲು ಎತ್ತಿನೋಡಿದೆ, ಮೆರೆಯುತ್ತಿತ್ತು ದೊಡ್ಡದೊಂದು ಟಿನ್‌ ಡಬ್ಬಿ! ಅದರಿಂದೇನೋ ಒಂದು ಚಿಟಿಕೆ, ಬಲವಾದ ಒಂದು ಚಿಟಿಕೆ ನಶ್ಯ ತೆಗೆದುಕೊಂಡೆ, ಆದರೆ ನನ್ನ ಡಬ್ಬಿಗೆ ಗಿತ್ತುಗರ್ದು ಒತ್ತಿ ಒತ್ತಿ ಇನ್ನೊಂದು ಚೂರೂ ತುಂಬಲು ಸಾಧ್ಯವಿಲ್ಲ ಎಂದು ಖಾತ್ರಿ ಮಾಡಿಕೊಂಡು ತರುವಾಯವೆ!!

ವೆಂಕಣ್ಣಯ್ಯನವರಿಗೆ ನನ್ನ ಮೇಲೆ ಅಪಾರ ಆಬಿಮಾನ. ನನ್ನ ಪರೋಕ್ಷದಲ್ಲಿ ಇತರರೊಡನೆ ನನ್ನನ್ನು ನಿರ್ದೇಶಿಸಿ ‘ಹಿಂದೆ ಇರಲಿಲ್ಲ, ಮುಂದೆ ಬರುವುದಿಲ್ಲ’: ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಮೆಚ್ಚುತ್ತಿದ್ದರು ಎಂಬುದನ್ನೂ ಕೇಳಿದ್ದೇನೆ. ಅದು ಎಷ್ಟರಮಟ್ಟಿಗೆ ದಿಟವೋ ಸಟೆಯೋ ನಾನು ಹೇಳಲಾರೆ. ಏಕೆಂದರೆ ಅವರು ತೀರಕೊಳ್ಳುವುದಕ್ಕೆ ಮೊದಲು ನನ್ನ ಕೆಲವು ಉತ್ಕೃಷ್ಟ ಕೃತಿಗಳು ಇನ್ನೂ ಹೊರಬಂದಿರಲಿಲ್ಲ. ‘ಕಾನೂರು ಹೆಗ್ಗಡಿತಿ’ ಯನ್ನು ಅವರು ಅರ್ಧಮಾತ್ರ ಓದಿದ್ದರು. ಅದು ನಾಲ್ಕೈದು ಪುಸ್ತಕಗಳಲ್ಲಿ ಬೇರೆ ಬೇರೆಯಾಗಿ ಅಚ್ಚಾಗುತ್ತಿತ್ತು. ಮಧ್ಯೆ ಒಮ್ಮೆ ಆಗತಾನೆ ಅಚ್ಚಾದ ಎರಡು ಮೂರನೆಯ ಭಾಗಗಳನ್ನು ಅವರಿಗೆ ಕಳಿಸಿದಾಗ, ಅವನ್ನು ಗುಳುಕ್ಕನೆ ಓದಿ ಪೂರೈಸಿ, ಹೇಳಿದರಂತೆ: “ಅವರಿಗೆ ಹೇಳು, ಇಷ್ಟು ಸ್ವಲ್ಪ ಗ್ರಾಸ ನಮಗೆ ಸಾಲದು ಅಂತಾ.”

‘ಮಲೆನಾಡಿನ ಚಿತ್ರ’ಗಳಂತೂ ಅವರ ಪ್ರೇರಣೆಯಿಂದ ಅವರಿಗಾಗಿಯೆ ಬರೆದದ್ದು ಎನ್ನಬಹುದು. ಅದನ್ನು ಆ ಪುಸ್ತಕದ ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದೇನೆ. ಒಮ್ಮೆ ಅವರು ಚಿಕ್ಕಮಗಳೂರಿನಲ್ಲಿ ಬೇಸಗೆ ಸಮಯದಲ್ಲಿ ನಡೆದ ಪ್ರಚಾರೋಪನ್ಯಾಸ ಸಪ್ತಾಹಕ್ಕೆ ಬಂದಿದ್ದರು. ನಾನು ಕೆಲವು ಮಿತ್ರರೊಡನೆ ಅವರ ಕಾರಿನಲ್ಲಿ ಅಲ್ಲಿಗೆ ಹೋಗಿದ್ದೆ. ಕಾರ್ಯಕ್ರಮದಲ್ಲಿ ನನ್ನದೇನೂ ಅಚ್ಚಾಗಿರಲಿಲ್ಲ. ಆದರೆ ವೆಂಕಣ್ಣಯ್ಯನವರ ಅನುರೋಧದ ಮೇಲೆ ನಾನು ಕಾಘವಾಂಕನ ‘ಹರಿಶ್ಚಂದ್ರ ಕಾವ್ಯ’ವನ್ನು ಕುರಿತು ಮಾತಾಡಿದೆ. ಅದು ಎಲ್ಲರಿಗೂ ತುಂಬ ಮೆಚ್ಚುಗೆಯಾಯಿತು. ನನ್ನ ನೆನಪು ಸರಿಯಾದರೆ, ಬಹುಶಃ ಆ ಸಭೆಯಲ್ಲಿ ಶ್ರೀ ಮಾಸ್ತಿ ವೆಂಕಟೇಶ ಐಯ್ಯಂಗಾರ್ಯರು (ಅವರು ಆ ಜಿಲ್ಲೆಯ ಮುಖ್ಯಾಧಿಕಾರಿಯಾಗಿದ್ದರೆಂದು ತೋರುತ್ತದೆ) ಸರ್ ಕೆ.ಪಿ. ಪುಟ್ಟಣ್ಣಶೆಟ್ಟರೂ ಇದ್ದರೆಂದು ತೋರುತ್ತದೆ. ಆ ಸಪ್ತಾಹ ಮುಗಿದ ಮೇಲೆ ವೆಂಕಣ್ಣಯ್ಯನವರನ್ನು ನಮ್ಮೂರಿಗೆ ಕರೆದೊಯ್ದೆವು. ತೀ.ನಂ. ಶ್ರೀಕಂಠಯ್ಯ, ಜಿ. ಹನುಮಂತರಾಯರು, ನಾ. ಕಸ್ತೂರಿ ಇವರೂ ಜೊತೆ ಬಂದಿದ್ದರು. ಆಗ ಕುಪ್ಪಳಿಯ ಬಳಿ ಕವಿಶೈಲಕ್ಕೂ ಸಂಜೆಗಿರಗೂ ಹೋಗಿ ಅರಣ್ಯಗಿರಿ ಶ್ರೇಣಿಗಳಲ್ಲಿ ಸಂಧ್ಯಾಸೂರ್ಯನ ಇಳಿದು ಮುಳುಗುವ ದೃಶ್ಯವನ್ನು ಅವರು ದರ್ಶಿಸಿ, ನನ್ನ ಕಾವ್ಯದಲ್ಲಿ ಬರು ಪ್ರಕೃತಿ ವೈಭವದ ವರ್ಣನೆಗಳಿಗೆ ಮೂಲ ಆಕರವನ್ನು ಗುರುತಿಸಿದ್ದರು.

ಕುಪ್ಪಳಿಯಿಂದ ಇಂಗ್ಲಾದಿಗೆ ಹೋಗಿ, ರಾತ್ರಿ ದಿವಂಗತ ಡಿ.ಆರ್. ವೆಂಕಟಯ್ಯನವರ ಅತಿಥಿಗಳಾಗಿದ್ದು, ಬೆಳಿಗ್ಗೆ ಮುಂಚೆ ಅಂದರೆ ಸಮಾರು ನಾಲ್ಕು ಗಂಟೆಗೇ ಎದ್ದು, ಎರಡು ಮೈಲಿ ದೂರವಿರುವ ‘ನವಿಲುಕಲ್ಲಿ’ನ ನೆತ್ತಿಗೆ ನಡೆದುಕೊಂಡೆ ಹೋಗಿ ಉಷಃಕಾಲಕ್ಕೆ ಮುನ್ನವೆ ಸೇರಿದೆವು: ಉಷೆಯ, ಅರುಣೋದಯದ ಮತ್ತು ಸೂರ್ಯೋದಯದ, ಮಾತೆಂಜಲಾಗಲು ಎಂದಿಗೂ ಸಾಧ್ಯವಲ್ಲದ ದೇವವೈಭವದ ಸೌಂದರ್ಯವನ್ನು, ಗಂಟೆ ಗಟ್ಟಲೆ, ಮಾತು ಸತ್ತು, ಕಣ್ಣೊಂದೆಯಾಗಿ ಕಂಡೆವು. ತುದಿಯಲ್ಲಿ ನಿಟ್ಟುಸಿರು ಬಿಟ್ಟು ಮೌನಭಂಗ ಮಾಡಿದರು ವೆಂಕಣ್ಣಯ್ಯನವರು “ಪುಟ್ಟಪ್ಪ, ಇದನ್ನು ಹಿಡಿದಿಟ್ಟುಕೊ!”

ವೆಂಕಣ್ಣಯ್ಯನವರು ನನ್ನ ಭಾವಗೀತೆಗಳಲ್ಲಿ ಪ್ರಕೃತಿ ಸೌಂದರ್ಯವರ್ಣನೆಗಳನ್ನು ಕೇಳಿದಾಗಲೆಲ್ಲ ಭಾವವಶರಾದಂತೆ ಆಗುತ್ತಿದ್ದರು. ಒಮ್ಮೆ ‘ತಾನಾಜಿ’ಯನ್ನು ಅವರಿಗೆ ಓದುತ್ತಿದ್ದಾಗ ಅಲ್ಲಿ ಬರುವ ಕೃಷ್ಣಪಕ್ಷದ ನವಮಿಯ ಚಂದ್ರೋದಯದ ವರ್ಣನೆಯನ್ನು ಕೇಳಿ ಭಾವಸಮಾಧಿಸ್ಥರಾದಂತೆ ಆಗಿದ್ದರು. ಇನ್ನೊಮ್ಮೆ ‘ಫಾಲ್ಗುಣ ಸೋರ್ಯೋದಯ’ವನ್ನು ನಾನು ಭಾವಪೂರ್ಣವಾಗಿ ವಾಚಿಸಲು, ಕುರ್ಚಿಯಿಂದ ನೆಗೆದೆದ್ದು, ಮೂಗಿಗೆ ನಶ್ಯ ಏರಿಸುತ್ತಾ, ನಾನೆ ಅವರ ಎದುರಾಳಿ ಎಂಬಂತೆ “ಹೇಳ್ರಿ! ಹೇಳ್ರಿ! ಎಲ್ಲಿದೆ ಇಂತಹ ಕಾವ್ಯ, ಹಿಂದಿನವರಲ್ಲಾಗಲಿ, ಇಂದಿನವರಲ್ಲಾಗಲಿ?” ಎಂದು ನನಗೇನೆ ಮುಡಿಗೆ ಎಸೆದಿದ್ದರು!

ವೆಂಕಣ್ಣಯ್ಯನವರೂ ನಾನು ಇಬ್ಬರೆ ಸೇರಿದ್ದಾಗ ನಾವು ಯಾವಾಗಲೂ ಆಧ್ಯಾತ್ಮಿಕ ಮತ್ತು ಸಾಹಿತ್ಯಕ ವಿಚಾರಗಳನ್ನಲ್ಲದೆ ಬೇರೆ ಕಾಡುಹರಟೆಯ ಹವ್ಯಾಸಕ್ಕೆ ಹೋಗುತ್ತಲೆ ಇರಲಿಲ್ಲ. ಸ್ಥಾನ, ಮಾನ, ವೃತ್ತಿ, ದರ್ಜೆ, ಸಂಬಳ, ಬಡ್ತಿ, ಪ್ರಮೋಷನ್ ಗಿಮೋಷನ್ ಇವೊಂದೂ ಅಲ್ಲಿ ಸುಳಿಯುತ್ತಿರಲಿಲ್ಲ.

ಒಮ್ಮೆ ಶ್ರೀರಂಗಪಟ್ಟಣದಲ್ಲಿ ಯುವಜನ ಸಮ್ಮೇಲನದ ಸಂದರ್ಭದಲ್ಲಿ ಬಿ.ಎಂ. ಶ್ರೀಯವರ ಅಧ್ಯಕ್ಷತೆಯಲ್ಲಿ ನಾನು ‘ಯುವಕರು ನಿರಂಕುಶಮತಿಗಳಾಗಬೇಕು!’ ಎಂಬ ಭಾಷಣ ಮಾಡಿದೆ. ಪತ್ರಿಕೆಗಳಲ್ಲಿ ಕ್ರೋಧಯುಕ್ತವಾದ ಅನೇಕ ಟೀಕೆಗಳು ಬಂದು ಕೋಲಾಹಲವೆದ್ದಿತು. ದೂರು ವಿಶ್ವವಿದ್ಯಾನಿಲಕ್ಕೂ ಹೋಯಿತು. ವಿಶ್ವವಿದ್ಯಾನಿಲಯ ತನಿಖೆ ನಡೆಸಲು ಇಲಾಖೆಯ ಮುಖ್ಯಸ್ಥರೂ ಪ್ರೊಫೆಸರೂ ಆಗಿದ್ದ ವೆಂಕಣ್ಣಯ್ಯನವರನ್ನು ನೇಮಿಸಿತು. ಅವರು ಆ ಭಾಷಣದ ಪ್ರತಿ ತರಿಸಿಕೊಂಡು ಓದಿ ವಿಶ್ವವಿದ್ಯಾನಿಲಕ್ಕೆ ಬರೆದರಂತೆ. “ನನ್ನ ಮಗನಿಗೆ ನಾನು ಬುದ್ಧಿ ಹೇಳಬೇಕಾದರೆ ಇದಕ್ಕಿಂತಲೂ ಉತ್ತಮವಾಗಿ ಮತ್ತು ಸಮರ್ಥವಾಗಿ ನಾನು ಏನನ್ನೂ ಹೇಳಲಾರೆ.” ಎಂದು.

ಕನ್ನಡ ಸಾಹಿತ್ಯದ ನವೋದಯದ ಅಂದಿನ ಉತ್ಸಾಹದ ಮತ್ತು ಉಲ್ಲಾಸದ ದಿನಗಳಲ್ಲಿ ನಾನು ಸಾವಿರಾರು ಜನರು ನೆರೆದ ಅನೇಕ ಸಭೆಗಳಲ್ಲಿ ಗಂಟೆಗಟ್ಟಲೆ ನನ್ನ ಕವನಗಳನ್ನೂ ನಾಟಕಗಳನ್ನೂ ವಾಚಿಸುತ್ತಿದ್ದುದುಂಟು. ಅಂತಹ ಅನೇಕ ಸಂದರ್ಭಗಳಲ್ಲಿ ಶ್ರೀ ವೆಂಕಣ್ಣಯ್ಯನವರು ಅಧ್ಯಕ್ಷರಾಗಿಯಾಗಲಿ ಅಥವಾ ಸನ್ಮಾನ್ಯ ಪ್ರೇಕ್ಷಕರಾಗಿಯಾಗಲಿ ಹಾಜರಿರುತ್ತಿದ್ದದೂ ಉಂಟು. ಯಾವ ಸಭೆಗಾಗಲಿ ವೆಂಕಣ್ಣಯ್ಯನವರ ನಸುವೆ ಬಾಗಿದ ಉನ್ನತ ದೇಹಶ್ರೀ ಪ್ರವೇಶಿಸಿತು ಎಂದರೆ ಅದರ ಗಾಂಭೀರ್ಯ ಅಧಿಕಗೊಳ್ಳುತ್ತಿತ್ತು: ಅದಕ್ಕೊಂದು ತೂಕ ಒದಗುತ್ತಿತ್ತು. ಅದರ ಗರುತ್ವ ಹೃದಯಗಗನ ಸ್ಪರ್ಶಿಯಾಗುತ್ತಿತ್ತು. ನನಗಂತೂ ಅವರೊಬ್ಬರ ಸಾನ್ನಿಧ್ಯವೆ ಉಳಿದ ಸಾವರಾರು ಮಂದಿಯ ಇರುವಿಕೆಯನ್ನೂ ನುಂಗಿ ನಿಂತಂತಾಗುತ್ತಿತ್ತು. ಅವರೊಬ್ಬರಿಗಾಗಿಯೆ ಗಂಟೆಗಟ್ಟಲೆ ಬೇಕಾದರೂ ಕವನ ವಾಚನ ಮಾಡುವ ಹುಮ್ಮಸ್ಸು ಉಂಟಾಗುತ್ತಿತ್ತು. ಅಂತಹ ಸಹೃದಯ ವರೇಣ್ಯರಾಗಿದ್ದರವರು: ಕುಶಾಗ್ರಮತಿಯ ವಸ್ತುಪ್ರವೇಶನಶಕ್ತಿಯೂ ಭಾವಯಿತ್ರಿಕಲ್ಪನಾ ಪ್ರತಿಭೆಯ ದರ್ಶನಧ್ವನಿ ಗ್ರಹಣಕಾರಿಯಾದ ರಸಾನುಭವಸಾಮರ್ಥ್ಯವೂ ಅವರದಾಗಿತ್ತು. ಅವರ ‘ಶ್ಲಾಘನೆ’ ಲಭಿಸಿತೆಂದರೆ ಜಗತ್ತಿನ ಒಬ್ಬ ಮಹೋನ್ನತ ಮೇಧಾವೀ ವಿಮರ್ಶಕನ ಸರ್ಟಿಫಿಕೇಟು ದೊರೆತಂತೆಯೆ ಆಗುತ್ತಿತ್ತು. ಏಕೆಂದರೆ ಅವರೇನು ಬಡಪಟ್ಟಿಗೆ ಮೆಚ್ಚುವ ಅಸಾಮಿ ಆಗಿರಲಿಲ್ಲ! ತಮ್ಮ ಸ್ವಂತ ಬರವಣಿಗೆಯೆ ಆಗಲಿ ಅನ್ಯರದ್ದೆ ಆಗಲಿ ಅವರ ಹೃದಯದ ಮತ್ತು ಬುದ್ಧಿಯ ಕಠೋರ ಒರೆಗಲ್ಲಿನಲ್ಲಿ ಮೋರೆ ತಿಕ್ಕಿಸಿಕೊಳ್ಳುವ ಉಗ್ರಪರೀಕ್ಷೆಯಲ್ಲಿ ತೇರ್ಗಡೆಯಾಗದಿದ್ದರೆ ಅವಕ್ಕೆ ಕಸದಬುಟ್ಟಿಯೆ ಪರಂಧಾಮವಾಗ ಬೇಕಾಗುತ್ತಿತ್ತು.

ಅವರು ಪರಂಧಾಮವನೈದುವ ಕಾಲಕ್ಕೆ ಸ್ವಲ್ಪ ಮುನ್ನವೆ ನನ್ನ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ರಚನೆ ಪ್ರಾರಂಭವಾಗಿತ್ತು. ಅದರ ವಿಚಾರವಾಗಿ ಒಮ್ಮೊಮ್ಮೆ ಅವರಿಗೆ ಹೇಳುತ್ತಲೂ ಇದ್ದೆ. ಒಂದು ದಿನ ಕಾಲೇಜಿನಲ್ಲಿ ನನ್ನ ಪಾಠ ಪೂರೈಸಲು ಮನೆಗೆ ಹೊರಡುವ ಮುನ್ನ ಪ್ರಾಧ್ಯಾಪಕರಿಗೆ ಮೀಸಲಾಗಿದ್ದ ಅವರ ಕೊಠಡಿಗೆ ಹೋದೆ. ಅವರು ವಿರಾಮವಾಗಿ ಕೂತಿದ್ದರು. ಎಂದಿನಂತೆ ಹಸನ್ಮುಖಿಗಳಾಗಿ ಸ್ವಾಗತಿಸಿದರು. ಅದೂ ಇದೂ ಮಾತಾಡುತ್ತಾ ನನ್ನ ಮಹಾಕಾವ್ಯ ಎಲ್ಲಿಗೆಬಂತು ಎಂದು ಕೇಳಿದರು. ನಾನು ಅಹಲ್ಯಾ ಶಾಪವಿಮೋಚನೆಯವರೆಗೆ ಬಂದಿದೆ ಎಂದು ಹೇಳಿ, ಅದರ ರೀತಿಯನ್ನು ಕುರಿತು ಎರಡು ಮಾತಾಡಿದೆ. ಆಗತಾನೆ ಬರೆದಿದ್ದುದರಿಂದ ನೆನಪಿಗೆ ಬಂದ ಕೆಲವು ಪಂಕ್ತಿಗಳನ್ನೂ ಹೇಳಿದೆ. ಆ ಘಟನೆಯಲ್ಲಿ ಹುದುಗಿರುವ ಪ್ರತಿಮಾದೃಷ್ಟಿಯನ್ನೂ ದರ್ಶನಧ್ವನಿಯನ್ನೂ ಸಾರಾಂಶವಾಗಿ ತಿಳಿಸಿದೆ. ಅವರ ಮೊದಮೊದಲ ಉದಾಸೀನತೆ ಬರುಬರುತ್ತಾ ಆಸಕ್ತಿಯಾಗಿ, ಕಡೆಕಡೆಗೆ ಅತ್ಯಂತ ರಸಾವೇಶದ ಕುತೂಹಲವಾಯಿತು. “ನಮಿಸಿದನು ರಘುಜನುಂ ಗೌತಮಸತಿಯ ಪದಕೆ ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ!” ಎಂಬ ಕೊನೆಯ ಪಂಕ್ತಿಗಳನ್ನು ಹೇಳಿ ಮುಗಿಸಿದ್ದೆನೊ ಇಲ್ಲವೊ ಕಣ್ಮುಚ್ಚಿ ಧ್ಯಾನಸ್ಥರಾದಂತೆ ಕುಳಿತರು. ತಾವು ಕೇಳಿದುದರ ಮಹತ್ತನ್ನು ಅನುಭಾವಿಸುವಂತೆ!…. ಆಮೇಲೆ ಅವರು ಏನು ಹೇಳಿದರು ಎಂಬುದನ್ನು ನಾನಿಲ್ಲಿ ಬರೆಯಲೊಲ್ಲೆ.

“ಒಂದು ದಿನ ನಿಮ್ಮ ಮನೆಗೆ ಬರುತ್ತೇನೆ. ನೀನು ಬರೆದಷ್ಟನ್ನೂ ಓದಬೇಕು” ಎಂದರು ಅತ್ಯಂತ ಹೆಮ್ಮೆಯ ಹಿಗ್ಗಿನಿಂದ ‘ಆಗಲಿ ಸಾರ್!’ ಎಂದೆ.

“ನಿಮ್ಮ ಮನೆಗೆ ಬರೋದು ಅಂದರೇ ಒಂದು ಯಾತ್ರೆ ಮಾಡಿದ ಹಾಗಾಗುತ್ತದೆ. ಎಲ್ಲೊ ಮೈಸೂರಿನಾಚೆ ಒಂಟಿಕೊಪ್ಪಲಿನಲ್ಲಿ ಮನೆಮಾಡಿಬಿಟ್ಟಿದೀಯ!” ಎಂದರು.

“ಯಾವಾಗ ಬರ್ತೀರಿ ಹೇಳಿ?” ಎಂದು ಕೇಳಿದೆ.

“ಮುಂದಿನ ಭಾನುವಾರ ಆಗಬಹುದೇ?”

“ಆಗಬಹುದು. ಬೆಳಿಗ್ಗೆ ಮುಂಚೆ ಬಂದುಬಿಡಿ. ಅಲ್ಲೇ ಕಾಫಿ ತಿಂಡಿ ಪೂರೈಸಬಹುದು.”

ಗೊತ್ತಾದ ದಿನ ಬಂದರು. ಆದರೆ ಬೆಳಿಗ್ಗೆ ಮುಂಚೆ ಬರಲಿಲ್ಲ. ಸ್ನಾನಗೀನ ಮುಗಿಸಿ ಕಾಫಿ ತಿಂಡಿ ಮಾಡಿ, ಸಮಾರು ಒಂಬತ್ತುಗಂಟೆ ಹೊತ್ತಿಗೆ ಬಂದರು. ನನ್ನ ಅಧ್ಯಯನ ಕಕ್ಷೆಯಲ್ಲಿಯೆ ಅವರು ಆರಾಮ ಕುರ್ಚಿಯಮೇಲೆ ಒರಗಿ ಕುಳಿತರು. ನಾನು ಎದುರಿಗೆ ಒಂದು ಬೆತ್ತದ ಕುರ್ಚಿಯಲ್ಲಿ ಕುಳಿತೆ. ‘ಶ್ರೀರಾಮಾಯಣ ಧರ್ಶನ’ದ ಹಸ್ತಪ್ರತಿಯನ್ನು ತೆಗೆದುಕೊಳ್ಳುತ್ತಿದ್ದಾಗ ಹೇಳಿದರು: “ನೀನು ಹೊಸದಾಗಿ ಬರೆದಿರುವ ಭಾವಗೀತೆಗಳನ್ನು ಮೊದಲು ಓದಿಬಿಡು. ಆಮೇಲೆ ರಾಮಾಯಣ ಓದುವಿಯಂತೆ.” ಹಾಗೆಯೆ ಆಗಲಿ ಅಂದು ನೋಟುಪುಸ್ತಕದಲ್ಲಿದ್ದ ಭಾವಗೀತೆಗಳನ್ನು ಓದತೊಡಗಿದೆ. ಆ ಸಂದರ್ಭದಲ್ಲಿಯೆ ಅವರು ‘ಬಾ ಫಾಲ್ಗುಣ ರವಿದರ್ಶನಕೆ’ ಎಂಬ ಭಾವಗೀತೆಯನ್ನು ಕೇಳಿ, ಕುರ್ಚಿಯಿಂದ ಎದ್ದು, ಕುರ್ಚಿಯ ಹಿಂದೆ ತಗುಲಿಹಾಕಿದ್ದ ಅವರ ಕೋಟಿನಿಂದ ನಶ್ಯದ ಡಬ್ಬಿಯನ್ನು ತೆಗೆದು ಮೂಗಿಗೆ ಏರಿಸುತ್ತಾ, ನಾನೇ ಎದುರಾಳಿ ಎಂಬಂತೆ ಪ್ರಶ್ನೆಯ ಖಡ್ಗವನ್ನು ಜಳಪಿಸಿದ್ದು!.

ಮಧ್ಯಾಹ್ನವಾಗಿ ಸಮಾರು ಒಂದೂವರೆ ಗಂಟೆಯಾದರೂ ಅವರು ಭಾವಗಿತೆಗಳನ್ನೆ ಓದುವಂತೆ ಹೇಳಿ ಆಲಿಸುತ್ತಾ ಕುಳಿತುಬಿಟ್ಟರು. ಅಷ್ಟರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದು ಸಮೀಪದಲ್ಲಿಯೆ ಮನೆ ಮಾಡಿದ್ದ ನರಸಿಂಹಶಾಸ್ತ್ರಿಗಳ ಮನೆಯಿಂದ ಕರೆ ಬಂತು ಅವರು, ವೆಂಕಣ್ಣಯ್ಯನವರು ಒಂಟಿಕೊಪ್ಪಲಿಗೆ ಬರುವುದನ್ನು ತಿಳಿದು, ಊಟಕ್ಕೆ ಆಹ್ವಾನಿಸದ್ದರಂತೆ.

ಊಟ ಮಾಡಿಕೊಂಡು ಹಿಂದಿರುಗಿದವರು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡರು. ವಿಶ್ರಾಂತಿಯ ತರುವಾಯ ನಾನೂ ಅವರೂ ಒಟ್ಟಿಗೆ ಮಧ್ಯಾಹ್ನದ ಕಾಫಿ ತಿಂಡಿ ತೆಗೆದುಕೊಂಡೆವು. ಆಗಲೂ ಅವರು ಮತ್ತೊಂದು ನೋಟು ಬುಕ್ಕಿನಲ್ಲಿದ್ದ ನನ್ನ ಕವನಗಳ ಮೇಲೆ ಕಣ್ಣಾಡಿಸಿ ಅವನ್ನೆ ಓದುವಂತೆ ಹೇಳಿ ಬಿಟ್ಟರು. ಸಾಯಂಕಾಲ ಕತ್ತಲಾಗುವವರೆಗೂ ಭಾವಗೀತೆಗಳ ವಾಚನವೆ ನಡೆಯಿತು. ದೂರದ ಕೃಷ್ಣಮೂರ್ತಿಪರುಕ್ಕೆ ಹಿಂತಿರುಗಲು ಹೊತ್ತಾಯಿತೆಂದು ತಿಳಿದುಮೇಲೆ (ಆಗ ಒಂಟಿಕೊಪ್ಪಲಿನಲ್ಲಿ ದೀಪ ರಸ್ತೆ ಟಾಂಗ ಏನೂ ಇರಲಿಲ್ಲ.) “ಇನ್ನೊಮ್ಮೆ ಬರುತ್ತೇನಪ್ಪಾ. ಆಗ ನೀನು ಬರೆದಷ್ಟು ರಾಮಾಯಣವನ್ನೂ ಕೇಳಿಬಿಡುತ್ತೇನೆ” ಎಂದು ಬೀಳ್ಕೊಂಡು ಮನೆಗೆ ಹೋದರು. ಹೋದವರು ಬರಲಿಲ್ಲ.

ಅವರು ತೀರಿಕೊಳ್ಳುವ ಹಿಂದಿನ ದಿನವೊ ಅಥವಾ ಅದರ ಹಿಂದಿನ ದಿನವೊ ಅವರನ್ನು ನೋಡಲು ಹೋಗಿದ್ದೆ. ನಿಂತರೆ ಎತ್ತರವಾಗಿ ಮಲಗಿದ್ದರೆ ಉದ್ದವಾಗಿ ಕಾಣುತ್ತಿದ್ದ ವೆಂಕಣ್ಣಯ್ಯನವರು ಒಣಗಿ ಮುದುಗಿ ಮಲಗಿದ್ದ ಮಂಚದರ್ಧವನ್ನೂ ತುಂಬರೆಂಬಂತೆ ಕಾಣಿಸಿದರು. ಆದರೆ ಮುಖದಲ್ಲಿ ಕಿರುನಗೆಯ ಸುಪ್ರಸನ್ನತೆ ನನ್ನನ್ನು ಕಣ್ಣಿನಿಂದಲೆ ಬಾಚಿ ತಬ್ಬುವಂತೆ ಸ್ವಾಗತಿಸಿತ್ತು. ನಾನು ಮಂಚಕ್ಕೆ ಮುಟ್ಟುವಂತೆ ಕುರ್ಚಿ ಎಳೆದುಕೊಂಡು ಕುಳಿತೆ. ಅವರು ಕೃಶವೋ ಕೃಶವಾಗಿ ಕಾಣುತ್ತಿದ್ದ ತಮ್ಮ ಕೈಯನ್ನು ಮೆಲ್ಲಗೆ ನೀಡಿ ನನ್ನ ಕರತಲವನ್ನಪ್ಪಿ ಹಿಡಿದುಕೊಂಡರು. ಒಬ್ಬರನ್ನೊಬ್ಬರು ನೋಡುತ್ತ ಕಣ್ಣಿಂದಲೆ ಮಾತಾಡುತ್ತಾ ಇದ್ದೆವು. ತುಸು ಹೊತ್ತಿನಲ್ಲಿಯೆ, ಅವರ ಹಿಂದೆ ಗೋಡೆಗೆ ತಗುಲಿ ಹಾಕಿದ್ದ ‘ಮಹಾಮಾತೆ’ಯ ಭಾವಚಿತ್ರ ನನ್ನ ಕಣ್ಣಿಗೆ ಬಿದ್ದು ಅದನ್ನೇ ನೋಡತೊಡಗಿದೆ. ನನ್ನ ದೃಷ್ಟಿಯ ಪ್ರಾರ್ಥನಾ ಭಂಗಿಯನ್ನು ಗಮನಿಸಿ ಅವರು ಸ್ವಲ್ಪ ಪ್ರಯಾಸದಿಂದಲೆ ಕತ್ತು ತಿರುಗಿಸಿ ‘ಮಹಾಮಾತೆ’ಯತ್ತ ತುಸು ಹೊತ್ತು ನೋಡಿ, ತನ್ನ ಕಡೆಗೆ ತಿರುಗಿದರು. ಬಹಳ ಹೊತ್ತಾದಮೇಲೆ ನನ್ನನ್ನು ಹಿಡಿದಿದ್ದ ಕೈ ಸಡಿಲಿಸಿ ಹಿಂದಕ್ಕೆಳೆದುಕೊಂಡರು. ಹೋಗಿ ಬರುತ್ತೇನೆ ಎಂದು ಬೀಳ್ಕೊಂಡು ಬಂದೆ.

ಅವರು ದೇಹತ್ಯಾಗ ಮಾಡಿದರು. ಆಗ ‘ಶ್ರೀ ರಾಮಾಯಣದರ್ಶನಂ’ ಇನ್ನೂ ಕಾಲುಪಾಲೂ ಮುಗಿದಿರಲಿಲ್ಲ. ಆದರೂ ಅವರಿಗೆ ಅದನ್ನು ಅರ್ಪಿಸಿ “ಇದೊ ಮುಗಿಸಿ ತಂದಿಹೆನ್ ಈ ಬೃಹದ್ ಗಾನಮಂ ನಿಮ್ಮ ಸಿರಿಯಡಿಗೊಪ್ಪಿಸಲ್ಕೆ, ಓ ಪ್ರಿಯಗುರುವೆ” ಎಂದು ಪ್ರಾರಂಭಿಸಿದೆ. ಅದನ್ನವರು ‘ತಥಾಸ್ತು’ ‘ವಿಶ್ವವಾಣಿಗೆ ಮುಡಿಯ ಮಣಿ’ ಯಾಗು ಎಂದು ಹರಿಸಿದರು. ಅವರ ಆಶೀರ್ವಾದಮಹಿಮೆ ಲೋಕವರಿಯುವಂತೆ ಹೇಗೆ ಕೈಗೂಡಿತೆಂಬದಕ್ಕೆ ‘ಶ್ರೀ ರಾಮಾಯಣದರ್ಶನಂ’ ಮಹಾಕಾವ್ಯವೆ ಮೇರು ಸಾಕ್ಷಿಯಾಗಿ ನಿಂತಿದೆ!.

ವೆಂಕಣ್ಣಯ್ಯನವರು ತೀರಿಕೊಂಡಾಗ, ನಗರ ಪಟ್ಟಣಗಳಲ್ಲಿರಲಿ, ಮೂಲೆ ಮೂಲೆಯ ಕೊಂಪೆಗಳಲ್ಲಿಯೂ ಸಂತಾಪಸೂಚಕ ಸಭೆಗಳು ನಡೆಯುತ್ತಿದ್ದುದರ ವರದಿಗಳು ಪತ್ತಿಕೆಗಳಲ್ಲಿ ಮೂರು ನಾಲ್ಕು ತಿಂಗಳುಗಳವರೆಗೂ ದಿನದಿನವೂ ಬರುತ್ತಿದ್ದುವು ಎಂಬುದನ್ನು ಗಮನಿಸಿದರೆ ಅವರು ಎಷ್ಟು ಜನಪ್ರಿಯರಾಗಿದ್ದರು, ಅವರ ವ್ಯಕ್ತಿತ್ವ ಕನ್ನಡಿಗರ ಮೇಲೆ ಎಂತಹ ಪ್ರಭಾವ ಬೀರಿತ್ತು ಎಂದು ಗೊತ್ತಾಗುತ್ತದೆ. ಅದಕ್ಕೆ ಕಾರಣ, ಅವರು ಉದ್ಧಾಮ ರಸಸಾಹಿತ್ಯ ಸೃಷ್ಟಿಕರ್ತರಾಗಿದ್ದರು ಎಂದಲ್ಲ, ಕನ್ನಡ ನವೋದಯದ ಕಾಲದಲ್ಲಿ ಅವರೂ ಕೃಷ್ಣಶಾಸ್ತ್ರಿಗಳೂ ಬಿ.ಎಂ.ಶ್ರೀಯವರೊಡನೆ ಸಹಕರಿಸಿ, ನಾಡಿನಲ್ಲೆಲ್ಲ ಸಂಚರಿಸಿ, ಭಾಷಣಗಳ ಮೂಲಕವೂ ಉಪನ್ಯಾಸಗಳ ಮೂಲಕವೂ ‘ಪ್ರಬುದ್ಧ ಕರ್ಣಾಟಕ’ದ ಮೂಲಕವೂ, ಸೆಂಟ್ರಲ್ ಮತ್ತು ಮಹಾರಾಜಾ ಕಾಲೇಜುಗಳಿಗೆ ವಿದ್ಯಾರ್ಜನೆಗಾಗಿ ಬರುತ್ತಿದ್ದ ತರುಣರಲ್ಲಿ ಕನ್ನಡದ ಪ್ರೇಮಾಭಿಮಾನಗಳು ವೃದ್ಧಿಗೊಳ್ಳುವಂತೆ ಬೋಧಿಸುತ್ತಿದ್ದ ಪಾಠ ಪ್ರವಚನಾದಿಗಳ ಮೂಲಕವೂ, ಕನ್ನಡ ನಾಡಿನ ಮೇಲೆಲ್ಲ ತಮ್ಮ ವ್ಯಕ್ತಿತ್ವದ ಪರಿವೇಷವೊಂದು ವ್ಯಾಪಿಸುವಂತೆ ಪ್ರಭಾವ ಬೀರಿದ್ದುದು ಮುಖ್ಯ ಕಾರಣವಾಗಿತ್ತು.

ಅವರ ಸಾಹಿತ್ಯಸೃಷ್ಟಿ ವಿಫುಲ ಪ್ರಮಾಣದ್ದಲ್ಲ. ಅದು ಸಂಶೋಧನೆಯ, ಪ್ರಾಚೀನ ಗ್ರಂಥಸಂಪಾದನೆಯ ಮತ್ತು ಸ್ವಲ್ಪಮಟ್ಟಿಗೆ ಸಾಹಿತ್ಯವಿಮರ್ಶೆಯ ಪರಿಮಿತವಲಯದಲ್ಲಿಯೆ ಆಬದ್ಧವಾಗಿತ್ತು. ಅವರ ಸಾಹಿತ್ಯಸೇವೆಯಲ್ಲಿ ಗಾತ್ರಕ್ಕಿಂತಲೂ ಗುಣಕ್ಕೇ ಪ್ರಾಧಾನ್ಯ. ಅವರ ಬರವಣಿಗೆ ತುಂಬ ಎಚ್ಚರಿಕೆಯಿಂದ ಸಾವಧಾನವಾಗಿ ಸಾಗುತ್ತಿತ್ತು. ಅದು ಕೀರ್ತಿಶನಿಯ ಪ್ರೇರಣೆಗೂ ಧನಪಿಶಾಚಿಯ ಅವಸರಕ್ಕೂ ದೂರವಾಗಿತ್ತು. ಅವರು ಬರೆದುದೆಲ್ಲ ಗದ್ಯವೆ ಆಗಿದ್ದರೂ ವಾಕ್ಯವಾಕ್ಯವನ್ನೂ ಬರೆದೂ ಹೊಡೆದೂ ಅಳೆದೂ ತೂಗಿ ರಚಿಸುತ್ತಿದ್ದರೂ. ‘ಹಲಗೆ ಬಳಪವ ಹಿಡಿಯದೊಂದಗ್ಗಳಿಕೆ’ಗೂ ಅವರ ಲೇಖನಿಗೂ ಎಣ್ಣೆಸೀಗೆಯ ಸಂಬಂಧವಿತ್ತು.

ಅವರು ಸ್ವತಃ ಅಷ್ಟು ಹೆಚ್ಚಾಗಿ ಸಾಹಿತ್ಯ ಕೃತಿಗಳನ್ನು ಸೃಷ್ಟಿಸದೆ ಹೋಗಿರಬಹುದು. ಅದರೆ ನನ್ನಂತಹ ಅನೇಕ ಸಾಹಿತ್ಯಸಷ್ಟಿಕರ್ತರನ್ನೆ ಸೃಷ್ಟಿಮಾಡಿ ಹೋಗಿದ್ದಾರೆ. ಎಂಬುದನ್ನು ಮರೆಯಬಾರದು.

ಅವರು ದಿವಂಗತರಾಗುವ ಅಚಿರಪೂರ್ವದಲ್ಲಿ ಬಹುಶಃ ಅವರ ದೇಹಸ್ಥಿತಿ ಅವನತವಾಗುತ್ತಿರುವುದನ್ನು ಗಮನಿಸಿ, ಯಾರೋ ಒಬ್ಬರು ಸೂಚಿಸಿದರಂತೆ: “ನೀವು ಹೋಗುವ ಮುನ್ನ ಏನಾದರೊಂದು ನಿಮ್ಮ ಹೆಸರನ್ನು ಶಾಶ್ವತಗೊಳಿಸುವ ಗ್ರಂಥರಚನಕಾವ್ಯ ಮಾಡಬೇಕು” ಎಂದು. ಅದಕ್ಕೆ ಅವರು ಎಳೆಮಕ್ಕಳ ದಡ್ಡ ಮಾತಿಗೆ ದೊಡ್ಡವರು ನಗುವಂತೆ ನಕ್ಕು “ಹೆಸರಿನ ಶಾಶ್ವತತೆಗಿಂತಲೂ ಹಿರಿದಾದುದೂ ಇದೆಯಯ್ಯಾ ಬದುಕು ಸಾಧಿಸುವುದಕ್ಕೆ!” ಎಂದರಂತೆ. ಅಂತರಂಗದಲ್ಲಿ ಅವರೊಬ್ಬ ಸಾಧಕರಾಗಿದ್ದರು.

ಅವರು ತೀರಿಹೋಗಿ ಸುಮಾರು ಮೂವತ್ತು ವರ್ಷಗಳ ಮೇಲೆ ಅವರು ಅಂದು ತಿರಸ್ಕರಿಸಿದ ಆ ಹೆಸರಿನ ಶಾಶ್ವತೆಯನ್ನು ಇಂದು ಮತ್ತೆ ಶಾಶ್ವತೆಗೊಳಿಸಲು ನಾವು ಪುನಃಶಾಶ್ವತೀಕರಣ ಪ್ರಯತ್ನವೆನ್ನಬಹುದಾದ ಈ ಸ್ಮಾರಕ ಗ್ರಂಥ ಪ್ರಕಟಣೆಯನ್ನು ಕೈಗೊಂಡಿದ್ದೇವೆ. ಆ ಲೋಕದಲ್ಲಿರುವ ಅವರು ಅಂದು ನಕ್ಕಂತೆಯೆ ಇಂದು ನಗುತ್ತಿರಬಹುದೊ ಏನೊ!.

ಆದರೆ, ನಾವು ನೆರವೇರಿಸುತ್ತಿರುವ ಈ ಶ್ರದ್ಧೆಯ ಕಾರ್ಯ ಕೀರ್ತಿಶನಿಯ ಪೂಜಾಸ್ವರೂಪದ್ದಲ್ಲ. ಯಶೋಲಕ್ಷ್ಮಿಯ ಆರ್ಶೀವಾದದ ಅವತರಣಕ್ಕೆ ಶಿಷ್ಯಸ್ತೋಮದ ಗುರುಭಕ್ತಿ ಸಾರ್ಚುತ್ತಿರುವ ಸಾರಸ್ವತ ಸೇತು ಎಂದು ಭಾವಿಸಿ, ಅವರ ಕ್ಷಮೆಬೇಡಿ, ಪೂಜ್ಯರ ಪುಣ್ಯಸ್ಮೃತಿಗೆ ಈ ಕೃತಿಯನ್ನು ಸಮರ್ಪಿಸುತ್ತೇವೆ.


* “ಸವಿನೆನಪು” ದಿವಂಗತ ಪ್ರೊಫೆಸರ್ ಟಿ.ಎಸ್‌. ವೆಂಕಣ್ಣಯ್ಯನವರ ನೆನಪಿನ ಗ್ರಂಥಕ್ಕೆ ಬರೆದ ಮುನ್ನುಡಿ. ಮೈಸೂರು. ೧೯೭೦.