ಬೇಸಿಗೆಯ ರಜವನ್ನು ಸಹ್ಯಾದ್ರಿಯ ಗುಡ್ಡಬೆಟ್ಟಕಾಡುಗಳಲ್ಲಿ – ಹತ್ತಿ ಇಳಿದು  ಅಲೆದು ಬೇಟೆಯಾಡಿ ತಿರುಗಾಡಿ ಕಾಯಿಲೆ ಬಿದ್ದು ಮತ್ತೆ ಹುಷಾರಾಗಿ – ಕಳೆದು, ಆಗತಾನೆ ಮೈಸೂರಿಗೆ ಬಂದಿದ್ದೆ. ಸ್ವಾಮಿ ಸಿದ್ಧೇಶ್ವರಾನಂದರ ಪವಿತ್ರ ಸ್ನೇಹಮಯ ಸಾನ್ನಿಧ್ಯದ ಶ್ರಿ ರಾಮಕೃಣ್ಣಾಶ್ರಮದಲ್ಲಿ – ಆಗ ಅದು ಮರಿಮಲ್ಲಪ್ಪ ಹೈಸ್ಕೂಲಿನ ಎಡಪಕ್ಕದ  ಬೀದಿಯಲ್ಲಿತ್ತು, ಕಾಲೇಜಿಗೆ ತುಂಬ ಹತ್ತಿರವಾಗಿ – ನನ್ನ ವಾಸ. ನಾನು ಬಿ.ಎ. ತರಗತಿಯಲ್ಲಿ ಉತ್ತಮವಾಗಿಯೆ (ಅಂದರೆ ಎರಡು ಭಾಗಗಳಲ್ಲಿಯೂ ದ್ವಿತೀಯ ಶ್ರೇಣೆಯಲ್ಲಿ!) ತೇರ್ಗಡೆಯಾಗಿದ್ದೆ. (ದ್ವಿತೀಯಶ್ರೇಣೆಯಲ್ಲಿ ತೇರ್ಗಡೆಯಾಗುವುದನ್ನು ‘ಉತ್ತಮ’ ಎಂದು ವರ್ಣಿಸಿದುದಕ್ಕೆ ಈಗ ಯಾರಾದರೂ ನಗಬಹುದು. ಆದರೆ ನನ್ನ ಅಧ್ಯಯನದ ರೀತಿಯಲ್ಲಿ, ವಸ್ತುವಿನಲ್ಲಿ ಮತ್ತು ಉದ್ದೇಶದಲ್ಲಿ ಪರೀಕ್ಷೆಯ ಫಲಿತಾಂಶ ಎಂದೂ ‘ಗಮ್ಯ’ ವಾಗಿರಲಿಲ್ಲ ಎಂಬುದನ್ನು ಭಾವಿಸಿದರೆ ಸೆಕೆಂಡ್ ಕ್ಲಾಸಿನಲ್ಲಿ ಪಾಸಾಗಿದ್ದುದನ್ನು ಉತ್ತಮ ಎಂದೇ ಭಾವಿಸಬೇಕು.) ‘ಉತ್ತಮ ‘ ವಾಗಿಯೆ ತೇರ್ಗಡೆಯಾದುದರಿಂದ ಎಂ.ಎ.ಗೆ ಸೀಟು ಸಿಗುವುದರಲ್ಲಿ ಅಷ್ಟೇನೂ ಕಷ್ಟವಾಗುವುದಿಲ್ಲ ಎಂಬ ಧೈರ್ಯವಿತ್ತು. ಯಾವ ಎಂ.ಎ.ಗೆ ಸೇರಿಕೊಳ್ಳುವುದು ಎಂಬ ವಿಚಾರದಲ್ಲಿಯೂ ನನ್ನಲ್ಲಿ ಹೆಚ್ಚು ಜಿಜ್ಞಾಸೆಗೆ ಅವಕಾಶವಿರಲಿಲ್ಲ. ನನ್ನ ಆಸಕ್ತಿಯೆಲ್ಲ ತತ್ತ್ವ, ಆಧ್ಯಾತ್ಮ, ಆಶ್ರಮ, ಶ್ರೀರಾಮಕೃಷ್ಣ – ವಿವೇಕಾನಂದ ಇತ್ಯಾದಿ ‘ಅಲೋಕ’ ವಿಷಯವಲಯಗಳಲ್ಲಿ ಕೇಂದ್ರೀಕೃತ ವಾಗಿತ್ತಾದ್ದರಿಂದಲೂ, ನನ್ನ ಚೇತನದ ಅಭೀಪ್ಸೆ ಯೋಗಾಭಿಮುಖವಾಗಿದ್ದುದರಿಂದಲೂ, ನಾನು ಮೂರನೆಯ ವರ್ಷದ ಬಿ.ಎ. ಗೆ ತೆಗೆದುಕೊಂಡಿದ್ದು ಐಚ್ಛಿಕ ವಿಷಯಗಳಲ್ಲಿ – ಫಿಲಸಫಿ, ಪೊಲಿಟಿಕ್ಸ್, ಸಾಮಾನ್ಯ ಸೈಕಾಲಜಿ – ತತ್ವಶಾಸ್ತ್ರವೆ (ಆಗ ಮನಶ್ಯಾಸ್ತ್ರ ಪ್ರತ್ಯೇಕವಾಗಿರದೆ ತತ್ತ್ವಶಾಸ್ತ್ರದ ಒಂದು ಉಪಾಂಗವಾಗಿತ್ತು! ಸಮಾಜಶಾಸ್ತ್ರವಂತೂ ಭ್ರೂಣಾವಸ್ಥೆಗೂ ಅತೀತವಾಗಿ ಅಂತರ್ಗತವಾಗಿತ್ತು!) ನನ್ನ ಅಭಿರುಚಿಯ ಮುಖ್ಯವಸ್ತು ವಾಗಿತ್ತು. ಸ್ವಾಮಿಜಿಯ ಅನುಮೋದನೆಯೂ ಪ್ರೋತ್ಸಾಹವಿತ್ತಿತ್ತು.

ಜೊತೆಗೆ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಪ್ರೋಫೆಸರ್ ಎ.ಆರ್. ವಾಡಿಯಾ ಅವರು ಆಶ್ರಮಕ್ಕೆ ಬಂದು ಹೋಗಿ ಮಾಡುತ್ತಿದ್ದು, ಶ್ರೀರಾಮಕೃಷ್ಣ ಮಿಶನ್ನಿನ ಸ್ವಾಮಿಗಳೊಡನೆ ಸಸ್ನೇಹ ಸಂಪರ್ಕ ಹೊಂದಿದ್ದು, ನನ್ನನ್ನು ಆಶ್ರಮದ ವಿದ್ಯಾರ್ಥಿ ಎಂದು ಸುವಿಶೇಷ ವಿಶ್ವಾಸದಿಂದ ಕಾಣುತ್ತಿದ್ದುದೂ ಒಂದು ಸುಸೂಕ್ಷ್ಮ ಲೌಕಿಕ ಪ್ರಯೋಜನದ ಕಾರಣವಾಗಿತ್ತು ಎನ್ನಬಹುದು. ಪ್ರೊ. ವಾಡಿಯಾರವರ ವಿದ್ಯಾರ್ಥಿಗಳಾಗಿದ್ದ ನಮಗೆ ಅವರಲ್ಲಿ ವಿಶೇಷ ಗೌರವವಿತ್ತು. ಅವರ ವರ್ಣ, ಆಕಾರ, ವೇಷ ಭೂಷಣ, ನಡೆ ನುಡಿ, ಭಾಷಣದ ವೈಖರಿ, ಮೀಸೆ, ಕ್ರಾಪು, ಅವರದೇ ಆಗಿರುತ್ತಿದ್ದ ಒಂದು ಆತ್ಮವಿಶ್ವಾಸದ ಭಂಗಿ, ಮತ್ತು  ವಿಶ್ವವಿದ್ಯಾನಿಲಯದ ಮಹೋನ್ನತ ಪ್ರಾಧ್ಯಾಪಕರಾಗಿ, ಪಾರ್ಸಿಗಳಾಗಿ ಅಹಿಂದುಗಳಾಗಿದ್ದರೂ ಆಗ ನಡೆಯುತ್ತಿದ್ದ ಬ್ರಾಹ್ಮಣ ಬ್ರಾಹ್ಮಣೇತರ ಚಳವಳಿಯಲ್ಲಿ ಹಿಂದುಳಿದ ಪಂಗಡಗಳ ಪರವಾಗಿ ಅವರು ತೋರುತ್ತಿದ್ದ ವೀರಾಭಿಮಾನ ಇವುಗಳಿಗೆ ಮಾತ್ರವಾಗಿ ಅಲ್ಲದೆ ಅವರ ವೈಯಕ್ತಿಕ ಜೀವನದ ‘ಶುಭ್ರತೆ, ಸ್ವಚ್ಛತೆ, ನೀತಿ ನಿಷ್ಠೆ’ಗಳಾಗಿಯೂ ಅವರಲ್ಲಿ ನಮಗೆ ವಿಶೇಷವಾದ ಆಕರ್ಷಣೆ ಇತ್ತು. ಸರಿ; ಫಿಲಾಸಫಿಯನ್ನೆ ಎಂ.ಎ.ಗೆ ಆರಿಸುವುದೆಂದು ನಿರ್ಧರಿಸಿ ದಾರಿಯಲ್ಲಿ ಕೂಡಿಕೊಂಡ ಅನೇಕ ಮಿತ್ರಸಂಗಿಗಳೊಡನೆ ವಾದಿಸುತ್ತಾ ಹರಟುತ್ತಾ ಉಲ್ಲಾಸ ಉತ್ಸಾಹ ತಾರುಣ್ಯಗಳ ತ್ರಿವೇಣೀ ಸ್ರೋತದಲ್ಲಿ ತೇಲಿ ಕಾಲೇಜಿಗೆ ಹೋದೆ.

ಕನ್ನಡಮ್ಮ ಅಗೋಚರೆಯಾಗಿ ಮಂದಸ್ಮಿತೆಯಾಗಿ ತನ್ನ ಕಂದನ ಮಸ್ತಕದ ಮೇಲೆ ಆಶೀರ್ವಾದದ ಮುದ್ರೆಯ ತನ್ನ ಕಾವ್ಯಕೋಮಲ ಮಾತೃಹಸ್ತವನ್ನಿಟ್ಟು ಹಿಂಬಾಲಿಸಿ ಬಂದಳೆಂದು ತೋರುತ್ತದೆ ಮಹಾರಾಜಾ ಕಾಲೇಜಿಗೆ!

ಕಾಲೇಜು ತುಮುಲ ಶಬ್ದಮಯವಾಗಿತ್ತು; ಎಂಟ್ರೆನ್ಸ ಪಾಸು ಮಾಡಿ ಹೊಸದಾಗಿ ಕಾಲೇಜು ಮೆಟ್ಟಲು ಹತ್ತುತಿದ್ದ ಕೊಲಿಜಿಯೇಟ್ ಹೈಸ್ಕೂಲುಗಳ ಹುಡುಗರು, ಎರಡನೆಯ ವರ್ಷಕ್ಕೆ ಮತ್ತು ಮೂರನೆಯ ವರ್ಷಕ್ಕೆ ಸೇರಲು ಬಂದಿದ್ದ ‘ಹಳೆಯರು’. ಮತ್ತು ಎಂ.ಎ. ತರಗತಿಗಳಿಗೆ ಅರ್ಜಿಹಾಕಲು ನೆರೆದಿದ್ದ ಸ್ನಾತಕೋತ್ತರ ವಿದ್ಯಾರ್ಥಿಗಳು ….. ವರಾಂಡಗಳಲ್ಲಿ ಕಾರಿಡಾರುಗಳಲ್ಲಿ ಉಪ್ಪರಿಗೆಯಲ್ಲಿ, ಕೆಳಗೆ ಮೇಲೆ ಅಲ್ಲಿ ಇಲ್ಲಿ ನೆರಿದಿದ್ದರು. ಇಬ್ಬಿಬ್ಬರು, ಮೂವರು ನಾಲ್ವರು, ಸಣ್ಣ ಸಣ್ಣ ಗುಂಪುಗಳು ನಾನಾರೀತಿಯ ಸಂಭಾಷಣೆಗಳಲ್ಲಿ ತೊಡಗಿದ್ದರೂ ಹೊಸ ಮುಖಗಳನ್ನು ಕುತೂಹಲದಿಂದ ನೋಡುವುದನ್ನಾಗಲಿ, ಹಳೆಯುವುಗಳನ್ನು ಗುರುತಿಸಿ ನಗೆಮೊಗರಾಗಿ ಸ್ವಾಗತಿಸುವುದ್ದನ್ನಾಗಲಿ ಮರೆಯುತ್ತಿರಲಿಲ್ಲ. “ನಿನಗೆ ಕಾಯಿಲೆಯಾಗಿತ್ತಂತೆ? ಈಗ ಹೇಗಿದ್ದೀಯಾ?” “ನೀನು ಯಾವ ಸಬ್ಜೆಕ್ಟ್ ಆರಿಸಿಕೊಳ್ತೀಯಪ್ಪಾ?” “ಥ್ಚೂ! ಅದು ಬೇಡಪ್ಪಾ. ಆ ಪ್ರೊಫೆಸರ …. ” “ಅವರು ತುಂಬಾ ಚೆನ್ನಾಗಿ ಲೆಕ್ಚರ್ ಕೊಡ್ತಾರೆ…” “ನೋಡಲ್ಲಿ ಹೋಗ್ತಿದಾನೆ ಫಸ್ಟ್‌ಕ್ಲಾಸ್‌ ಬಂದುಬಿಟ್ಟಿದೆ ಅಂತ ಏನು ಜಂಭ ಅಂತೀಯಾ?” ಇಂತಹ ಸಂಭಾಷಣೆಯ ತುಣುಕುಗಳು ಗದ್ದಲದ ಹೊಳೆಯಿಂದೇಳುವ ಬುದ್ಬುದಗಳಂತೆ ಕೇಳಿಬರುತ್ತಿದ್ದವು.

ನಡುನಡುವೆ, ಈ ಹುಡುಗ ಹಿಂಡಿನ ಮಧ್ಯೆ, ಆಗಾಗ ಅಧ್ಯಾಪಕರು ಕಾಣಿಸಿಕೊಂಡಾಗ ನಮಸ್ಕಾರಾದಿಗಳು ಸಾಗುತ್ತಿದ್ದುವು. ಪ್ರಾಧ್ಯಾಪಕರು ತಮ್ಮ ತಮ್ಮ ಮೀಸಲು ಕೊಠಡಿಗಳಿಗೆ ಠೀವಿಯಿಂದ ಹೋಗುತ್ತಿದ್ದರೆ, ಉಪಪ್ರಾಧ್ಯಾಪಕರು ಮತ್ತು ಲೆಕ್ಚರರು ತಮ್ಮೆಲ್ಲರಿಗಾಗಿ ಒಟ್ಟಿಗೆ ಮೀಸಲಾಗಿದ್ದ ದೊಡ್ಡ ದೊಡ್ಡಿ ಕೊಠಡಿಯೊಂದಕ್ಕೆ ಹೋಗುತ್ತಿದ್ದರು. ಅಧ್ಯಾಪಕ ಮಾತ್ರರಾಗಿದ್ದ ಶ್ರೀಯುತ ಎ.ರ್.ಕೃಷ್ಣಶಾಸ್ತ್ರಿಗಳು ಹೋಗುತ್ತಿದ್ದುದನ್ನು ಕಂಡು ನಾನಿದ್ದ ನಮ್ಮ ಗುಂಪು ಒಟ್ಟಿಗೆ ಸಶಬ್ದವಾಗಿ ನಮಸ್ಕಾರ ಮಾಡಿತು. ಅವರ ಬೆಳ್ಳನೆಯ ಕಚ್ಚೆಪಂಚೆ, ಉತ್ತರೀಯ ಕರಿಯ ಕ್ಲೋಸ್‌ಕಾಲರ್ ಕೋಟು, ನೀಟಾಗಿ ಕಟ್ಟಿದ ಜರಿಯ ಪೇಟ – ಅವರನ್ನು ಯಾವ ಗುಂಪಿನಲ್ಲಿಯೂ ಎದ್ದು ಕಾಣುವಂತೆ ಮಾಡುತ್ತಿದ್ದುವು.

ತುಸು ಹೊತ್ತಾಗುವುದರೊಳಗೆ ಮಿತ್ರರೊಬ್ಬರು ಬಂದು “ಕೃಷ್ಣ ಶಾಸ್ತ್ರಿಗಳು ನಿಮ್ಮನ್ನು ಕರೆಯುತ್ತಿದ್ದಾರೆ” ಎಂದರು.

“ಯಾಕೆ?”

“ಯಾಕೊ ಗೊತ್ತಿಲ್ಲ. ಲೇಖನಗೀಕನ ಪದ್ಯಗಿದ್ಯದ ಮಿಚಾರಕ್ಕಾಗಿರಬಹುದು.”

ಟೀಚರ್ಸ ರೂಮಿಗೆ ಹೋದೆ, ಸಕಾತರ ಕುತೂಹಲದಿಂದಲೆ.

ತಮ್ಮ ಮೇಜಿನ ಹಿಂದೆ ಕುರ್ಚಿಯ ಮೇಲೆ ಕುಳಿತಿದ್ದವರು ನಗುಮೊಗರಾಗಿ ವಿಶ್ವಾಸದಿಂದ ಸ್ವಾಗತಿಸಿದರು. “ಈಗ ಹೇಗಿದ್ದೀರಿ, ಪುಟ್ಟಪ್ಪಾ? ಮೈ ಸರಿಯಾಗಿರಲಿಲ್ಲವೆಂದು ಕೇಳಿದೆ.”

“ಹೌದು, ಸಾರ್. ಊರಿಗೆ ಹೋದಾಗ ಡಬ್ಬಲ್ ನ್ಯೂಮೋನಿಯಾ ಆಗಿ ಸ್ವಲ್ಪ ಕಷ್ಟವಾಗಿತ್ತು.”

“ಎಂ.ಎ.ಗೆ ಅಪ್ಲಿಕೇಷನ್ ಹಾಕಿದಿರಾ?”

“ಹೌದು ಹಾಕಿದ್ದೇನೆ”

“ಯಾವುದಕ್ಕೆ?”

“ಫಿಲಾಸಫಿಗೆ”

“ಈ ವರ್ಷದಿಂದ ಕನ್ನಡ ಎಂ.ಎ. ತೆರೆಯುತ್ತಿದೆ ಯೂನಿವರ್ಸಿಟಿ. ಸಾಕಷ್ಟು ವಿದ್ಯಾರ್ಥಿಗಳು ಬೇಕು ಅದಕ್ಕೆ. ನೀವು ಯಾಕೆ ಕನ್ನಡ ಎಂ.ಎ.ಗೆ ಬರಬಾರದು?”

“ಫಿಲಾಸಫಿಗೆ ಹಾಕಿದ್ದೇನೆ. ನಮ್ಮ ಪ್ರೊಫೆಸರ್ ಸೀಟು ಕೊಟ್ಟೂ ಆಗಿದೆಯಂತೆ. . . .”

“ಫಿಲಾಸಫಿ ಏನಪ್ಪ? ನೀವೇ ಓದಿಕೊಳ್ಳುವ ಸಾಮರ್ಥ್ಯ ಪಡೆದಿದ್ದೀರಿ. ಹೇಗಿದ್ದರೂ ಆಶ್ರಮದಲ್ಲಿದ್ದೀರಿ. ಅಲ್ಲೇನು ಮೂರು ಹೊತ್ತೂ ಅದರ ಅಧ್ಯಯನ ತಾನೆ? ನೀವು ಎಂತಿದ್ದರೂ ಕವಿಗಳು. ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಸೇವೆ ಸಲ್ಲಿಸಬಹುದು, ಫಿಲಾಸಫಿಗಿಂತಲೂ ಕನ್ನಡಕ್ಕೆ ನಿಮ್ಮ ಅವಶ್ಯಕತೆ ಹೆಚ್ಚು.”

ಸ್ವಲ್ಪ ಹಿಂದು ಮುಂದು ನೋಡಿ ಹೇಳಿದೆ “ಆಲೋಚಿಸಿ ಆಮೇಲೆ ಹೇಳ್ತೀನಿ, ಸಾರ್.”

“ನೋಡಿಯಪ್ಪಾ, ತುಂಬ ಪ್ರಯತ್ನದ ಪರಿಣಾಮವಾಗಿ ಕನ್ನಡ ಎಂ.ಎ. ಪ್ರಾರಂಭಿಸುತ್ತಿದ್ದೇವೆ. ನಮಗೀಗ ನಿಮ್ಮಂಥ ವಿದ್ಯಾರ್ಥಿಗಳೇ ಬೇಕಾಗಿದ್ದಾರೆ.”

ಆಕರ್ಷಣೀಯ ಆಹ್ವಾನದಂತಿದ್ದ ಅವರ ಮುಗುಳುನಗೆಯ ದಾಕ್ಷಿಣ್ಯಕ್ಕೆ ವಶವಾಗುತ್ತಿದ್ದ ನಾನು ನಮಸ್ಕಾರ ಹೇಳಿ ಹೊರಗೆ ಬಂದೆ.

ವಿಷಯ ಏನು ಎಂಬುದನ್ನು ಕೇಳಿ ತಿಳಿದ ಮಿತ್ರರು ನಕ್ಕುಬಿಟ್ಟರು: ಫಿಲಾಸಫಿಯಂತಹ ಅಖಿಲಭಾರತೀಯವೂ ಅಂತರರಾಷ್ಟ್ರೀಯವೂ ಆಗಿರುವ ಸಬ್ಜೆಕ್ಟನ್ನು ಬಿಟ್ಟು, ಪ್ರೊ. ವಾಡಿಯಾ ಅವರಂತಹ ಸುಪ್ರಸಿದ್ಧ ಪ್ರಾಧ್ಯಾಪಕರ ಕೈಕೆಳಗೆ ಅಧ್ಯಯನ ಮಾಡುವ ಗೌರವಕರವಾದ ಸುಯೋಗವನ್ನು ತ್ಯಜಿಸಿ, ಆಪ್ಷನಲ್ ಸಬ್ಜಕ್ಟಿನ ಮಟ್ಟಕ್ಕೂ ಏರದೆ ಬರಿಯ ಸೆಕೆಂಡ್ ಲ್ಯಾಂಗ್ವೇಜ್ ಆಗಿರುವ ಕನ್ನಡದ – ಅದರಲ್ಲಿಯೂ ಹೊಸದಾಗಿ ಪ್ರಾರಂಭಿಸಲಿರುವ – ಎಂ.ಎ.ಗೆ ಸೇರುವುದೆ? ನಿನ್ನಂಥ ಪ್ರತಿಭಾಶಾಲಿ? ಇಂಗ್ಲೀಷಿನಲ್ಲಿ ಆಗಲೆ ಕವನಗಳನ್ನು ಅಚ್ಚು ಹಾಕಿಸಿರುವ, ಮುಂದೆ ಜಗತ್‌ಪ್ರಸಿದ್ಧನಾಗಲಿರುವ ಕವಿ?

[ಆಗಿನ್ನೂ ವಿದ್ಯಾರ್ಥಿಗಳಿಗೆ ಸೈನ್ಸ್, ಮೆಡಿಸನ್, ಎಂಜಿನೀರಿಂಗ್ ವಿಷಯಗಳು ಅಷ್ಟು ಗೌರವ ಭಾಜನವಾಗಿರಲಿಲ್ಲ!] ಮಿತ್ರರ ಮೂದಲಿಕೆ ನನ್ನ ಹೃದಯಕ್ಕೂ ಚುಚ್ಚಿತು. ಆದರೆ ಶ್ರೀ ಕೃಷ್ಣಶಾಸ್ತ್ರಿಗಳು ಅದಾವ ಅಮೃತ ಕ್ಷಣದಲ್ಲಿ ನನಗೆ ಶ್ರೇಯಸ್ಕರ ಸೂಚನೆ ನೀಡುವಂತೆ ಮಾಡಿತ್ತೋ ಏನೋ ವಿಧಿ? ಈ ವರ್ಷ ಕನ್ನಡದ ಎಂ.ಎ.ಗೆ ಸೇರಿ, ಮುಂದಿನ ವರ್ಷ ಫಿಲಾಸಫಿ ಎಂ.ಎ.ಗೆ ಸೇರಿ, ಒಟ್ಟು ಮೂರು ವರ್ಷಗಳಲ್ಲಿ (ಆಗ ಅವಕಾಶವಿತ್ತು.) ಎರಡೂ ಎಂ.ಎ.ಗಳನ್ನು ಪಾಸುಮಾಡಲು ನಿರ್ಧರಿಸಿದೆ!

ಎರಡೂ ಮೂರು ದಶಕಗಳ ತರುವಾಯ, ಮೊನ್ನೆ, ಮೊನ್ನೆ, ಅವರು ದಿವಂಗತರಾಗು ಪೂರ್ವದಲ್ಲಿ ಈ ಸಂಗತಿಯನ್ನು ಅವರಿಗೆ ತಿಳಿಸಿ, “ಜೆ.ಎಚ್.ಕಸಿನ್ಸ್‌ರವರು ನಾನು ಇಂಗ್ಲಿಷಿನಲ್ಲಿ ಬರಿಯುವುದನ್ನು ಬಿಟ್ಟು ಕನ್ನಡದಲ್ಲಿ ಬರೆಯುವುದಕ್ಕೆ ಹೇಗೆ ನಿಮಿತ್ತರಾದರೂ, ತಾವೂ ಹಾಗೆಯೆ ನಾನು ಕನ್ನಡ ಎಂ.ಎ. ತೆಗೆದುಕೊಳ್ಳುವುದಕ್ಕೆ ನಿಮಿತ್ತರಾದಿರಿ” ಎಂದು ತಿಳಿಸಿದಾಗ, ಶಾಸ್ತ್ರಿಗಳು ಆಶ್ಚರ್ಯಪಟ್ಟು “ಹೌದೆ? ನನಗೆ ನೆನಪೇ ಬರುವುದಿಲ್ಲವಲ್ಲಾ!” ಎಂದರು. ಶ್ರೀ ಕೃಷ್ಟಶಾಸ್ತ್ರಿಗಳು ನನ್ನಂತಹ ಎಷ್ಟು ವಿದ್ಯಾರ್ಥಿಗಳಿಗೆ ಯಾವಯಾವ ರೀತಿಯಲ್ಲಿ ನೆರವಾಗಿ ಕನ್ನಡ ನವೋದಯದ ಹೊಂಬೆಳಗಳನ್ನು ಹೊತ್ತಿಸಿ ಉಜ್ವಲಗಳೊಳಿಸಿದರೋ ಅದನ್ನು ಅವರಾದರೂ ಲೆಕ್ಕವಿಟ್ಟುಕೊಳ್ಳಲಾಗಲಿ ನೆನಪಿಟ್ಟುಕೊಳ್ಳಲಾಗಲಿ ಸಾಧ್ಯವೆ? ಅವರು ಅದನ್ನೆಲ್ಲ ಒಂದು ವಿಶೇಷಕಾರ್ಯ ಎಂಬಂತೆ ಎಸಗಿರಲಿಲ್ಲ; ಉಸಿರಾಡುವಂತೆ, ಒಂದು ಅಪ್ರಯತ್ನಪೂರ್ವಕವಾದ ಸಹಜತೆಯಿಂದ ಮಾಡಿದ್ದರು.

ನಾನು ಕನ್ನಡ ಎಂ.ಎ. ತೆಗೆದುಕೊಳ್ಳುವಂತೆ ಮಾಡಿದ್ದು ಅವರಿಗೆ ನೆನಪಿಟ್ಟುಕೊಳ್ಳಲಾರದಂತಹ ಒಂದು ಅತ್ಯಂತ ಸಾಧಾರಣ ವಿಷಯವಾಗಿದ್ದರೂ ನನಗೆ ಅದು ಒಂದು ದೈವೀಸಂಕಲ್ಪವಾಗಿಯೆ ಭಾಸವಾಗುತ್ತಿದೆ. ಏಕೆಂದರೆ, ನಾನು ಕನ್ನಡವನ್ನು ಸ್ನಾತಕೋತ್ತರ ವಿಷಯವಾಗಿ ಆಳವಾಗಿ ಅಭ್ಯಾಸ ಮಾಡದಿದ್ದರೆ, ಪಂಪ ರನ್ನ ಜನ್ನ ನಾಗವರ್ಮ ರಾಘವಾಂಕ ಕುಮಾರವ್ಯಾಸ ಲಕ್ಷ್ಮೀಶಾದಿ ಮಹಾಕವಿ ವರಕವಿಗಳ ಕೃತಿಗಳನ್ನು ಅಧ್ಯಯನ ಮಾಡದಿದ್ದರೆ, ಕೊನೆಗೆ ಕನ್ನಡ ಅಧ್ಯಾಪಕನಾಗಿ ಪಾಠ ಹೇಳದೆ ಇದ್ದಿದ್ದರೂ, ವಿಷಯ ವಸ್ತು ಭಾವಾದಿ ಸಂಪತ್ತಿಯಲ್ಲಿ ಕೊರತೆಯಿರದಿರುವ ಉತ್ತುಂಗ ಪ್ರಜ್ಞಾಸ್ಥಿತಿಗೆ ಏರಬಹುದಾಗಿದ್ದರೂ, ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಂತಹ ಮೇರುಕೃತಿಗೆ ಬೇಕಾಗುವ ಪದಸಂಪತ್ತಿಯನ್ನೂ ಮಹಾಶೈಲಿಯನ್ನೂ ಖಂಡಿತವಾಗಿಯೂ ಪಡೆಯಲಾಗುತ್ತಿರಲಿಲ್ಲ. ಬಹುಶಃ ನನ್ನ ಕಾವ್ಯಕನ್ನಿಕೆ ಬಡಕಲು ಕನ್ನಡದ ಪಂಗುಶೈಲಿಯಲ್ಲಿ ಇಂಗ್ಲಿಷಿನ ಎರವಲು ಸರಕನ್ನು ತಲೆಹೊರೆಯಲ್ಲಿ ಹೊತ್ತು ಮಾರುವ ಬೀದಿಯ ಬೇಹಾರಿಯಾಗುತ್ತಿತ್ತೊ ಏನೋ? ಪತ್ರಿಕಾಲೋಕ ಪ್ರಸಿದ್ಧವಾಗಿ!


* ಪ್ರಬುದ್ಧ ಕರ್ಣಾಟಕ’ ಎ. ಆರ್. ಕೃ. ನೆನಪಿನ ಸಂಚಿಕೆಗೆ ಬರೆದ ಲೇಖನ. ಮೈಸೂರು, ೧೯೬೮.