ಮಿತ್ರರಲ್ಲಿ ವಿಜ್ಞಾಪನೆ. ಇದುವರೆಗಿನ ಸೈನ್ಯದ ಸಜ್ಜಿನ ವಿಚಾರ ಇವುಗಳನ್ನೆಲ್ಲ ಕುರಿತು ಮಾನಪ್ಪನಾಯಕರು ಮತ್ತು ಲಕ್ಞ್ಮಣರಾಯರು ಮಾತನಾಡಿದ್ದಾರೆ. ಇಲ್ಲಿ ನೀವು ನೆರದಿರುವುದು ಪ್ರಾರಂಭವಾಗಲಿರುವ ಕದನಕ್ಕೆ ಮುಂದೆ ನುಗ್ಗುವ ಸೂಚನೆ ಕೊಡುವ ತೊರ್ಯಧ್ವನಿಗಾಗಿ.

ಸ್ವಾತಂತ್ರ್ಯಾನಂತರ ಎಷ್ಟೋ ಕ್ಷೇತ್ರಗಳಲ್ಲಿ ಅನಾಹುತಗಳನ್ನು ಕೂಡ ಅನುಭವಿಸಿ ಕೊಂಡು ನಮ್ಮ ದೇಶ ಮುಂದೆ ಹೋಗಿತ್ತಾ ಇದೆ. ತಕ್ಕಮಟ್ಟಿಗೆ ಬಹಿಃ ಸ್ವಾತಂತ್ರ್ಯವನ್ನೇನೊ ಸಾಧಿಸಿಕೊಂಡಿದ್ದೇವೆ ಆದರೆ ಅಂತಃಸ್ವಾತಂತ್ರ್ಯದ ವಿಚಾರದಲ್ಲಿ ನಾವು ಸಿದ್ಧಿಸಿಕೊಳ್ಳಬೇಕಾದುದು ಬಹಳ ಇದೆ. ಈ ಭಾಷೆ, ಸಾಹಿತ್ಯ ಅಥವಾ ಶಿಕ್ಷಣಮಾಧ್ಯಮ ಅನ್ನುವುದರ ಅಂತರಾರ್ಥ ಈ ಸ್ವಾತಂತ್ರವನ್ನು ಸಂಪಾದಿಸಿಕೊಳ್ಳುವ ವಿಧಾನ ಮಾತ್ರವಾಗಿದೆ. ಬಹುಕಾಲದಿಂದ ರೂಢಿಯಲ್ಲಿರುವ ಯಾವುದಾದರೂ ಒಂದು ಅಭ್ಯಾಸವನ್ನು ಬಿಟ್ಟುಕೊಡುವುದು ಸಾಮಾನ್ಯಚೇತನಗಳಿಗೆ ಬಹಳ ಕಷ್ಟದ ವಿಷಯ . ನಾವೆಲ್ಲ ನಿಮ್ಮಂತೆಯೆ, ನಿಮ್ಮಲ್ಲಿರುವ ಕೆಲವರಂತೆಯಾದರೂ, ಆಗತಾನೆ ವಿದ್ಯಾರ್ಥಿದಶೆಯಿಂದ ಹೊರಗೆ ಬಂದ ಕಾಲದಿಂದ ಹಿಡಿದು ಇವತ್ತಿನವರೆಗೂ, ಸುಮಾರು ನಲವತ್ತು ವರ್ಷಗಳಿಂದ, ಇದಕ್ಕಾಗಿ ನಾನಾರೀತಿಗಳಲ್ಲಿ, ಸಭ್ಯವಾಗಿಯೊ ಅಸಭ್ಯವಾಗಿಯೊ, ಪ್ರಯತ್ನಗಳನ್ನು ನಡೆಸುತ್ತ ಬಂದಿದ್ದೇವೆ. ನಾನಾ ತರಹದ ಅಸಂತೃಪ್ತಿಗಳೂ ಮಿನಮೇಷಗಳೂ ಎಲ್ಲ ನಡೆದಿವೆ. ಮೊದಮೊದಲು ಈ ಕಾರ್ಯಮಾಡಬೇಕು ಅನ್ನುವವರೆಲ್ಲ ಒಂದು ಅಭಿಮಾನದಿಂದ – ದೇಶಾಭಿಮಾನ, ಭಾಷಾಭಿಮಾನ, ಸಾಹಿತ್ಯಾಭಿಮಾನ , ನಮ್ಮದು, ನಮ್ಮ ಭಾಷೆ, ನಮ್ಮ ನಾಡು ಅನ್ನೋ ಅಭಿಮಾನದಿಂದಲೇ – ಪ್ರಾರಂಭ ಮಾಡುತ್ತಿದ್ದೆವು. ಲಾಭ ಏನೂ ಇರಲಿಲ್ಲ. ಅಷ್ಟೇ ಅಲ್ಲ, ಅದಕ್ಕೆ ತದ್ವಿರುದ್ದವಾಗಿ ನಷ್ಟವೂ ಕೂಡ ಆಗುತ್ತಾ ಇತ್ತು. ಆದರೆ ಸದಾಕಾಲವೂ ಅಭಿಮಾನಕ್ಕೋಸ್ಕರವಾಗಿಯೇ ದುಡಿಯಿರಿ ಎಂದು ಕೇಳಿಕೊಳ್ಳುವುದು ಅಷ್ಟು ಸಭ್ಯತೆಯೂ ಅಲ್ಲ. ಇತ್ತೀಚೆಗೆ ಸ್ವಲ್ಪಮಟ್ಟಿಗೆ ಅಭಿಮಾನಕ್ಕೆ ತಕ್ಕ ಪ್ರತಿಫಲವೂ ದೊರೆಯಲು ಪ್ರಾರಂಭವಾಗಿದೆ.  ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಈ ಕನ್ನಡ ಮಾದ್ಯಮದ ಮುಖಾಂತರವಾಗಿ ಪ್ರಚಾರೋಪನ್ಯಾಸಗಳನ್ನು ಏರ್ಪಡಿಸಿ ಆ ಭಾಷಣಗಳನ್ನು ಸಣ್ಣಸಣ್ಣ ಪುಸ್ತಕಗಳ ರೂಪದಲ್ಲಿ ಬರೆಸಿ ಪ್ರಕಟಿಸುತ್ತಿದ್ದಾರೆ. ಸುಮಾರು ೪೫ – ೫೦ ವರ್ಷಗಳಿಂದ ಈ ಕೆಲಸ ನಡೆಯುತ್ತಾ ಇದೆ.ಆದ್ದರಿಂದಲೆ ಭರತಖಂಡದ ಇನ್ನಾವ ವಿಶ್ವವಿದ್ಯಾನಿಲಯದಲ್ಲೂ ನಡೆಯದೆ ಇದ್ದ ಕೆಲಸ ಇಲ್ಲಿ ನಡೆಯಿತು, ನಡೆಯುತ್ತಾ ಇದೆ. ವಿಶ್ವವುದ್ಯಾನಿಲಯಗಳಲ್ಲಿ ಅನೇಕ ಕಡೆಗಳಲ್ಲಿ ಬಹುಶಃ ಬೋಧನಾಂಗವೆ ಪ್ರಧಾನವಾಗಿ ಕೆಲಸ ಮಾಡುತ್ತಾ ಇದೆ. ಸ್ನಾತಕೋತ್ತರ ಸಂಶೋಧನಾಂಗವೂ  ಅನೇಕ ಕಡೆಗಳಲ್ಲಿ ಇದೆ. ಆದರೆ ಈ ಪ್ರಸಾರಯೊಜನೆ ಬೇರೆ ಕಡೆಗಳಲ್ಲಿ ಇರಲಿಲ್ಲ. ಪ್ರಿನ್ಸಿಪಾಲ್ ಜೆ.ಸಿ. ರಾಲೊ ಅವರು ಇಂಗ್ಲೆಂಡಿಗೆ ಹೋಗಿ ಅಲ್ಲಿ ಯಾವುದೊ ಒಂದು ವಿದ್ಯಾಸಮ್ಮೇಳನದಲ್ಲಿ ನಮ್ಮ ಈ ಯೋಜನೆಯನ್ನು ಕುರಿತು ಮಾತನಾಡಿದಾಗ ಅವರು ಕೂಡ ಇಂಥ ಕೆಲಸ ಬಹಳ ಅವೂರ್ವವಾದುದು ಎಂದು ಪ್ರಶಂಸಿಸಿದರಂತೆ. ವಿಶ್ವವಿದ್ಯಾನಿಲಯವನ್ನು ಸಾಮಾನ್ಯ ಜನವರ್ಗದ ಬಳಿಗೆ ತೆಗೆದುಕೊಂಡು ಹೋಗತಕ್ಕ ವಿಧಾನ ಎಂದು ಅವರು ಶಿಫಾರಸ್ಸನ್ನು ಕೂಡ ಪಡೆದುಕೊಂಡು ಬಂದಿದ್ದರು. ಆದರೆ ಅಂದು ನಮ್ಮವರೆ ಆದಂತಹ ಪ್ರಚ್ಛನ್ನ ವಿರೋಧಿಗಳು ನಾನಾರೂಪದಲ್ಲಿ ಎದುರುಕೆಲಸ ಮಾಡುತ್ತಾ ಇದ್ದರು. ಅಲ್ಲಿ ಕೆಲವರು ಚಕ್ರ ಮುಂದೆ ಹೋಗೋದಕ್ಕೆ ತಳ್ಳುತ್ತಾ ಇದ್ದರೆ, ಕೈಯೇನೊ ತಳ್ಳುತ್ತಾ ಇದ್ದ ಹಾಗೆ  ಕಾಣುತ್ತಿತ್ತು! ಆದರೆ ವಾಸ್ತವವಾಗಿ ಅವರು ಮಾಡುತ್ತಿದ್ದ ಕೆಲಸ ಹಿಂದಕ್ಕೆ ಜಗ್ಗುತ್ತಾ ಇದ್ದದ್ದು. ಅಪಾಯವಾಗದೆ ಇರುವಂತೆ, ಅತೀವೇಗದಲ್ಲಿ ಹೋಗಿ ಮುಗ್ಗರಿಸಿ ಉರುಳದೆ ಇರುವಂತೆ ಮಾಡಲು ಬಿರಿಯೂ ಅಷ್ಟೇ ಆವಶ್ಯಕ. ಆದರೆ ಚಕ್ರದ ಕೆಲಸ ಮಾಡುವವರಿಗಿಂತ ಬಿರಿಯ ಕೆಲಸ ಮಾಡುವವರೆ ಹೆಚ್ಚಾದರೆ ಪ್ರಗತಿಯೆ ಆಗುವುದಿಲ್ಲ. ಈಗ ಆ ಸ್ಥಿತಿ ಇಲ್ಲ. ನಾವೀಗ ವೀರಾವೇಶ ಮಾಡಬೇಕಾದಂತಹ ಸ್ಥಿತಿಯಿಲ್ಲ. ಆದರೂ ಈ ಯುದ್ಧ ನಾಡೆಯುತ್ತದೆ. ಇನ್ನೂ ಎಷ್ಟೋ ವರ್ಷಗಳವರೆಗೆ ನಡೆಯುವಂತೆ ಕಾಣುತ್ತದೆ. ಅದರಲ್ಲಿ ಮುನ್ನುಗ್ಗುವುದಕ್ಕೋಸ್ಕರವಾಗಿ ಈಗ ಕಲಸ ನಡೆಯುತ್ತಾ ಇದೆ. ಈಗ ಜನರ  ಮನಸ್ಸಿನಲ್ಲಿ ಈ ವಿಚಾರವಾಗಿ ಒಂದು ನಿರ್ದಿಷ್ಟವಾದ ಇತ್ಯರ್ಥ ಒದಗಿದೆ. ಏನೆಂದರೆ, ಆಯಾ ರಾಜ್ಯಗಳಲ್ಲಿ ರಾಜ್ಯಭಾಷೆಯೆ ಅಧಿಕೃತ ಭಾಷೆ, ಪ್ರಥಮ ಭಾಷೆ, ಶಿಕ್ಷಣದ ಮಾಧ್ಯಮದ ಭಾಷೆ, ಕೋರ್ಟ ಮತ್ತಿತರ ಎಲ್ಲ ವ್ಯವಹಾರಗಳ ಭಾಷೆಯಾಗಬೇಕು ಎಂಬುದು. ಈಗ ಕೇಂದ್ರ ಸರ್ಕಾರವೆ ಒಂದೊಂದು ರಾಜ್ಯಕ್ಕೆ ಒಂದೊಂದು ಕೋಟಿ ರೂಪಾಯಿಗಳನ್ನು ಕೊಡುತ್ತಾ ಇದೆ. ಮೂರು ಹೊತ್ತೂ ಮೂರುಕಾಸು ಅಂದ್ರೇನೆ ಹೆಚ್ಚು ಅನ್ನುವವರಿಗೆ ಒಂದು ಕೋಟಿ ರೂಪಾಯಿ ಅಂದರೆ ಬಹಳ ದೊಡ್ಡದಾಗಿ ಕಾಣುತ್ತದೆ. ಆದರೆ ಉಳಿದ ದೇಶಗಳಲ್ಲಿ ಅವರು ಇದಕ್ಕೆಲ್ಲ ಖರ್ಚುಮಾಡುತ್ತಾ ಇರುವುದನ್ನು ನೋಡಿದರೆ, ನಮ್ಮ ಒಂದು ಕೋಟಿರೂಪಾಯಿ ವಾಸ್ತವವಾಗಿ ಹೆಚ್ಚಲ್ಲ. ಸೈನ್ಯಕ್ಕೆ, ನಮ್ಮನಮ್ಮ ಅವಿವೇಕದ ಜಗಳಗಳನ್ನು ಬಗೆಹರಿಸುವುದಕ್ಕೆ, ಎಷ್ಟೋ ಕೋಟಿರೂಪಾಯಿಗಳನ್ನು ಖರ್ಚು ಮಾಡುತ್ತಾ ಇದ್ದೇವೆ. ಹೀಗೆ ನಿಷೇಧಾತ್ಮಕವಾದ ಕಾರ್ಯಗಳಿಗೆ ಎಷ್ಟೊಂದು ಖರ್ಚು ಆಗುತ್ತಾ ಇದೆ! ಆದರೆ ಈ ಕಾರ್ಯ ನಿಷೇಧಾತ್ಮಕವಾದುದಲ್ಲ. ಇದರಿಂದ ಏನೊ ಒಂದು ರಚನಾತ್ಮಕವಾದದ್ದು ನಡೆಯುತ್ತದೆ. ಈ ಕೆಲಸಕ್ಕೆ ಒಂದು ಕೋಟಿ ಹೆಚ್ಚಲ್ಲ. ಆದರೂ ನಾವು ಹಿಂದೆ ಇದ್ದ ಸ್ಥಿತಿಯನ್ನು ನೋಡಿದರೆ, ನಿಜಕ್ಕೂ ನಾವು ತಕ್ಕಮಟ್ಟಿಗೆ ಶ್ರೀಮಂತರಾಗಿದ್ದೇವೆ ಎಂದುಕೊಳ್ಳಬಹುದು. ಈಗ ಆ ರೀತಿಯ ಕಾರ್ಯಗಳಿಗೆ ಹಣದ ಕೊರತೆಯೇನೂ ಇಲ್ಲ. ಕೆಲಸಕ್ಕೆ ಜನ ಒದಗುವುದು ಸಾಲದಾಗಿದೆ. ಈಚೀಚೆಗೆ ವ್ಯಕ್ತಿಗಳಿಗೆ ಬರಿ ಅಭಿಮಾನ, ಉತ್ಸಾಹ ಅನ್ನುವುದು ಮಾತ್ರವಲ್ಲದೆ, ಅದರಿಂದ ಪ್ರತಿಫಲವೂ ಲಭಿಸುತ್ತಿದೆ. ಪ್ರಸಾರಾಂಗ ದಿಂದಾಗಲಿ ಅಥವಾ ಅಧ್ಯಯನಸಂಸ್ಥೆಯಿಂದಾಗಲಿ ಒಂದು ಪುಸ್ತಕ ಪ್ರಕಟವಾದರೆ ಅದರ ಮುಖಬೆಲೆಯ ಮೇಲೆ ಶೇಕಾಡಾ ಇಂತಿಷ್ಟು ಅಂತಾ ತಕ್ಷಣ ಸಂಭಾವನೆ ದೊರೆಯುತ್ತದೆ. ಇದನ್ನು ನಾವು ಹಿಂದೆ ಕನಸಿನಲ್ಲೂ ಆಲೋಚನೆ ಮಾಡುವುದಕೆ ಆಗುತ್ತಿರಲಿಲ್ಲ. ಎಷ್ಟರೆಮಟ್ಟಿಗೆ ಎಂದರೆ ೨೦ – ೩೦ ವರ್ಷಗಳಿಗೆ ಹಿಂದೆ ನಮ್ಮ ಬರಹವನ್ನು ಯಾರಾದರೂ ಕಿವಿಗೊಟ್ಟು ಕೇಳುತ್ತಾರೆ ಅಂದರೇ  ಸಂತೋಷವಾಗುತ್ತಿತ್ತು; ಯಾರಾದರೂ ಅಚ್ಚು ಹಾಕಿಸುತ್ತಾರೆ ಇನ್ನು ಅದಕ್ಕಿಂತಲೂ ನಮಗೆ ‘ವೈಕುಂಠಪ್ರಾಪ್ತಿ’ ಮತ್ತೊಂದಿಲ್ಲ ಎಂಬಷ್ಟು ಆನಂದವಾಗುತ್ತಿತ್ತು! ಯಾರಾದರೂ ನಮ್ಮ ಪದ್ಯವನ್ನೊ ಲೇಖನವನ್ನೊ ತೆಗೆದುಕೊಂಡು ಅದಕ್ಕೆ ಪ್ರತಿಯಾಗಿ ಗೌರವಧನ ಕೊಡುತ್ತಾರೆ ಅಂದುಬಿಟ್ಟರಂತೂ ನಮಗಂತೂ ಭಯಂಕರವಾದ ಆಶ್ಚರ್ಯವಾಗುತ್ತಿತ್ತು! ಬೆಲೆಯೇ ಇಲ್ಲದ ವಸ್ತು, ಅದಕ್ಕೆ ದುಡ್ಡು ಬೇರೆ ಕೊಡುತ್ತಾರೆಯೇ ಎಂಬಂಥ ಸ್ಥಿತಿ ಇತ್ತು. ಆ ಸ್ಥಿತಿಯಿಲ್ಲ ಈಗ. ಬಹಳ ದೂರ ಬಂದಿದ್ದೇವೆ.

ಗಾತ್ರದಲ್ಲಿ ಅಲ್ಲದೆ ಇದ್ದರೂ ಗುಣದಲ್ಲಿ ನಮ್ಮ ಸಾಹಿತ್ಯದಲ್ಲಿ ೩೦ – ೩೫ ವರ್ಷಗಳಿಂದ ಏನೇನು ಸೃಷ್ಟಿಯಾಗಿದೆ? ಎಷ್ಟೆಷ್ಟು ವೈವಿಧ್ಯ ಇದೆ? ಅನ್ನುವುದರ ವಿವರಣಾತ್ಮಕ ಅಧ್ಯಯನ ಮಾಡಬೇಕಾಗಿದೆ. ವಿವಿಧ ಪ್ರಕಾರದ ವಿವಿಧ ಸಾಹಿತ್ಯವನ್ನು ತೆಗೆದುಕೊಂಡರೆ ನಮ್ಮ ಸಾಹಿತ್ಯ ಯಾವ ಸಾಹಿತ್ಯದ ಮಟ್ಟಕ್ಕೂ ಕಿರಿದಲ್ಲ. ಭಾಷೆಯ ಪ್ರಯೋಗ – ಉಪಯೋಗಗಳ ವಿಚಾರವನ್ನು ತೆಗೆದುಕೊಂದರೆ, ಇಂಗ್ಲಿಷ್ ಸಾಹಿತ್ಯದ ಉತ್ಕ್ರಷ್ಟ ಕೃತಿಗಳಲ್ಲಿ ಏನೇನು ಹೇಳಲು ಸಾಧ್ಯವಾಗಿದೆಯೋ ಅದನ್ನೆಲ್ಲ ಅದಕ್ಕಿಂತಲೂ ಸಮರ್ಥವಾದ ರೀತಿಯಲ್ಲಿ ಹೇಳುವ ಶಕ್ತಿ ಕನ್ನಡ ಸಾಹಿತ್ಯಕ್ಕಿದೆ ಎನ್ನುವುದನ್ನು ನಮ್ಮ ಲೇಖಕರು ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಆ ಪಾಶ್ಚಾತ್ಯದೇಶಗಳ ಸಾಹಿತ್ಯಗಳಿಗೆ ಎಂದೆಂದೂ ಕನಸಿನಲ್ಲಿಯೂ ಎಟುಕಲಾರದಂಥ ಕೆಲವು ಭಾವಗಳು, ಕೆಲವು ಸತ್ಯಗಳು ಕೆಲವು ಅನುಭಾವಗಳು ಇವುಗಳನ್ನೆಲ್ಲ, ನಾವು ನಮ್ಮ ಹಿರಿಯರಿಂದ ಪಡೆಯುವುದರಿಂದ (ಅವರಿಗಿಂತ ನಾವು ದೊಡ್ಡವರು ಎಂದೇನೂ ಅರ್ಥವಲ್ಲ!) ನಮ್ಮ ಸಾಹಿತ್ಯದ ಶಿಖರಗಳಲ್ಲಿ ನಿಂತಾಗ ಅವರ ಸಾಹಿತ್ಯದ ಶಿಖರಗಳಿಗಿಂತಲೂ ನಾವು ಹೆಚ್ಚಿನ ಮಟ್ಟದಲ್ಲಿ ಹೆಚ್ಚಿನ ಎತ್ತರದಲ್ಲಿ ನಿಂತಿದ್ದೇವೆ ಎನ್ನಿಸುತ್ತದೆ. ಅವರಲ್ಲಿ ಅತ್ಯಂತ ಉನ್ನತವಾದವನು ನಿಂತರೂ ಆಲ್ಪ್ಸ್ ಪರ್ವತದ ಮೇಲೆ ನಿಲ್ಲುತ್ತಾನೆ; ನಮ್ಮಲ್ಲಿ ಅತ್ಯಂತ ಕುಬ್ಜನಾದವನು ನಿಂತರೂ ಹಿಮಾಲಯದ ಶಿಖರದ ಮೇಲೆ ನಿಲ್ಲುತ್ತಾನೆ! ಆದ್ದರಿಂದ ಎಂದಿದ್ದರೂ ನಾವು ಅವರಿಗಿಂತ ಎತ್ತರವಾಗಿಯೆ ಇರುತ್ತೇವೆ. ಅದು ನಮ್ಮ ಪಿತ್ರಾರ್ಜಿವಾದ ವೈಶಿಷ್ಟ್ಯ. ಆದ್ದರಿಂದ ಆ ವಿಚಾರದಲ್ಲಿ ತಿಳಿದವರು ಯಾರೂ ನಮ್ಮ ಭಾಷೆಗೆ ಬಡತನವಿದೆ, ದೌರ್ಬಲ್ಯವಿದೆ ಎಂಬ ಮಾತುಗಳನ್ನು ಆಡಲಾರರು. ಇನ್ನು ನಮ್ಮ ತತ್ತ್ವಶಾಸ್ತ್ರ, ನಮ್ಮ  ತರ್ಕಶಾಸ್ತ್ರ, ನಮ್ಮ ಯೋಗಶಾಸ್ತ್ರ ಇವುಗಳು ಮಾಡಿರುವ ಕೆಲಸ, ಇವುಗಳ ಪರಿಭಾಷೆ, ಇವುಗಳ ಮುಂದೆ ಪಾಶ್ಚಾತ್ಯರ ಬಡತನ ಎದ್ದು ಕಾಣುತ್ತದೆ. ಆ ವಿಚಾರದಲ್ಲಿ ನಾವು  ಅವರಿಂದ ಪಡೆಯಬೇಕಾದ್ದಿಲ್ಲ; ಕೊಡಬೇಕಾದ್ದು ಬೇಕಾದಷ್ಟು ಇದೆ. ವಿಜ್ಞಾನದ ವಿಚಾರದಲ್ಲಿ ಮಾತ್ರ ನಾವು ಅವರಿಂದ ಪಡೆಯಬೇಕಾದ್ದು, ಅವರಿಂದ ಕಲಿಯಬೇಕಾದ್ದು ಬೇಕಾದಷ್ಟು ಇದೆ. ಇನ್ನೂ ಆ ಮಟ್ಟಕ್ಕೆ ನಾವು ಏರಬೇಕಾದರೆ ಬಹಳಷ್ಟು ವರ್ಷಗಳೆ ಬೇಕಾಗುತ್ತವೆ.

ನಾನು ಕುಲಪತಿಯಾಗಿದ್ದಾಗ ಕನ್ನಡ ಮಾಧ್ಯಮ ಯೋಜನೆಯನ್ನು ಜಾರಿಗೆ ತಂದೆ. ವಿದ್ವಾಂಸರು ಆರು ತಿಂಗಳಲ್ಲಿ ಇಂಟರ್ ಮೀಡಿಯಟ್ ಅಥವಾ ಪಿ.ಯು.ಸಿ. ಮಟ್ಟದ ಪುಸ್ತಕಗಳನ್ನೂ ಬರೆದುಕೊಟ್ಟರು. ವಿಜ್ಞಾನವನ್ನು ಸರಳ ಶೈಲಿಯಲ್ಲಿ ಹೇಳುವ ಮೂಲಭೂತ ಕಾರ್ಯ ನಮ್ಮ ಪ್ರಚಾರೋಪನ್ಯಾಸಮಾಲೆಯಲ್ಲಿ ಆಗಲೇ  ಅಗಿದ್ದುದರಿಂದ ಈ ಕಾರ್ಯ ಶೀಘ್ರವಾಗಿ ಸಾಧ್ಯವಾಯಿತು. ಈಗಂತೂ ವಾಸ್ತವವಾಗಿ ನಾವು ಒಂದು ಕದನವನ್ನೆ ಪ್ರಾರಂಭ ಮಾಡುತ್ತಾ ಇದ್ದೇವೆ. ಪರಿಭಾಷೆಯ ವಿಚಾರವನ್ನು ತೆಗೆದುಕೊಂಡು ಇದನ್ನು ಹೇಗೆ ಹೇಳುತ್ತೀರಿ? ಅದನ್ನು ಹೇಗೆ ಹೇಳುತ್ತೀರಿ? ಎನ್ನುತ್ತಿದ್ದರು. ನಾನು ಅಂದು ಹೇಳುತ್ತಾ ಇದ್ದದ್ದನ್ನೇ ಇಂದೂ ಹೇಳುತ್ತೇನೆ. ಒಂದು ರೀತಿಯಲ್ಲಿ ಪರಿಭಾಷಿಕ ಶಬ್ದಗಳು ಅಂಕಿತನಾಮಗಳಿದ್ದಂತೆ. ಏನೋ ಒಂದು ಕೆಲಸ, ಅದನ್ನೆಲ್ಲಾ ವಿವರಿಸುವುದಕ್ಕೆ ಬದಲಾಗಿ ಒಂದು ಹೆಸರು. ಆ ಹೆಸರನ್ನು ಅಂಕಿತನಾಮದಂತೆ ಹಾಗೆಯೇ ಉಪಯೋಗಿಸಬಹುದು. ಅದನ್ನು ನಾನು ತಮಾಷೆಯಾಗಿ ಹೇಳುತ್ತಿದ್ದುದುಂಟು: ನೀವು ‘ವಾಟರ್’ ತೆಗೆದುಕೊಂಡು ‘ಟೆಸ್ಟ್ ಟ್ಯೂಬ್’ಗೆ ‘ಪೋರ್’ ಮಾಡಿ ಅಂತ ಹೇಳಿದರೂ ಸಂತೋಷ. ನನಗೇನೂ ಅಭ್ಯಂತರ ಇಲ್ಲ. ಯಾಕೆ ಅಂದರೆ ಹುಡುಗರಿಗೆ ವಿಜ್ಞಾನದ ವಿಷಯ ತಿಳಿಯಬೇಕು ಅನ್ನುವುದು ನಮ್ಮ ಉದ್ದೇಶವೆ ಹೊರತು, ಆಂಡಯ್ಯ ‘ಕಬ್ಬಿಗರ ಕಾವ’ ಬರೆದ ಹಾಗೆ ಎಲ್ಲವನ್ನೂ ಕನ್ನಡದಲ್ಲಿ ಬರೆಯುತ್ತೇವೆ, ಎಲ್ಲವನ್ನೂ ಕನ್ನಡದಲ್ಲಿ ಮಾಡುತ್ತೇವೆ ಎಂಬ ಛಲವಲ್ಲ. ಅವನಿಗೆ ಸೌಲಭ್ಯವನ್ನು ಒದಗಿಸಿಕೊಡುವುದು ಮುಖ್ಯ. ಬೇರೆ ಮಾತನ್ನು ಉಪಯೊಗಿಸಲು ಸಾಧ್ಯವಿಲ್ಲದೆ ಇದ್ದರೆ ಆ ಶಬ್ದಗಳನ್ನು ಹಾಗೆಯೇ ಬಳಸಿ. ಹೇಗೆ ಸೂರ್ಯ, ಚಂದ್ರ ಅನ್ನೋ ಪದಗಳು ಕನ್ನಡ ಆಗಿ ಬಿಟ್ಟಿವೆಯೇ ಹಾಗೆ ಸ್ವಿಚ್ಚು, ಬಲ್ಪು, ಬೋರ್ಡು, ಇವೆಲ್ಲ ಕನ್ನಡ ಪದಗಳೆ! ಅವನ್ನು ಯಾರೂ ಇಂಗ್ಲಿಷ್ ಅನ್ನುವುದಿಲ್ಲ. ಹಾಗೆಯೆ ಈ ಪಾರಿಭಾಷಿಕ ಪದಗಳೂ ಸಂಪೂರ್ಣವಾಗಿ ಕನ್ನಡವೇ ಆಗುತ್ತವೆ. ಆದ್ದರಿಂದ ಆದಷ್ಟುಮಟ್ಟಿಗೂ ಅಂತರರಾಷ್ಟ್ರೀಯ ಪರಿಭಾಷೆಯನ್ನೂ, ಸಂಕೇತಗಳನ್ನೂ, ಪ್ಲಸ್, ಮೈನಸ್ ಸ್ಕ್ವೇರ್ ರೂಟ್ ಇವನ್ನೆಲ್ಲಾ – ಹಾಗೆ ಹಾಗೆ ಉಪಯೋಗಿಸುವುದರಿಂದ ಏನೂ ತೊಂದರೆಯಿಲ್ಲ. ಮೊದಮೊದಲು ವಿನೂತನವಾಗಿ ಕಾಣಬಹುದು. ಮುಂದಿನ ತಲೆಮಾರಿನ ಹೊತ್ತಿಗೆ ಅವೆಲ್ಲ ನಮ್ಮವೇ ಆಗಿರುತ್ತವೆ.

ಮೊನ್ನೆ ಈ ‘ವಿಜ್ಞಾನ ಕರ್ಣಾಟಕ’ದಲ್ಲಿ ಅರ್. ಎಲ್. ನರಸಿಂಹಯ್ಯನವರ ಬಗ್ಗೆ ಒಳ್ಳೊಳ್ಳೆ ಲೇಖನಗಳನ್ನೆಲ್ಲ ನೋಡುತ್ತಾ ಇದ್ದೆ. ಅದರಲ್ಲಿ ಎ.ಎ‌ನ್. ಮೂರ್ತಿರಾಯರು ಬರೆದ ಒಂದು ಲೇಖನ ಇದೆ. ಆರ್. ಎಲ್. ನರಸಿಂಹಯ್ಯನವರು ಒಂದುಕೋಶವನ್ನು ಮಾಡುತ್ತಾ ಇದ್ದರು ಎಂದು ಹೇಳಿದ್ದಾರೆ. ಅಲ್ಲಿ ಅವರು Electro – encephalograph  ಎಂಬುದನ್ನು ‘ವಿದ್ಯುನ್ ಮಸ್ತಿಷ್ಕ ರೇಖಾ’ ಎಂದುಮಾಡಿದ್ದರಂತೆ. ಮೂರ್ತಿರಾಯರು ‘ಇದಕ್ಕಿಂತಲೂ ಅದೇ ಹೆಸರಿಟ್ಟುಕೊಳ್ಳೋಣ’ ಎಂದು ಹೇಳಿದರಂತೆ. ಇವರು ‘ಇಲ್ಲ, ನಾನೇನೋ ಇದನ್ನೇ ಉಪಯೋಗಿಸಿತ್ತೀನಿ. ಆಮೇಲೆ ಬೇಕಾದರೆ ಏನಬೇಕಾದರೂ ಮಾಡಿಕೊಳ್ಳಿ’ ಅಂದರಂತೆ. ಎಲ್ಲಿ ಪರಿಭಾಷೆ ಅರ್ಥನಿಷ್ಠವಾಗಿರುತ್ತದೆಯೊ ಅಲ್ಲಿ ನಮ್ಮ  ಭಾಷೆಯನ್ನು ಉಪಯೋಗಿಸಿಕೊಳ್ಳುವುದು ವಾಸಿ ಅಂತ ಕಾಣಿಸುತ್ತದೆ. ಏಕೆಂದರೆ ‘Electro – encephalograph’ ಅಂತ ಹೇಳಿದಾಗ ಅರ್ಥವಾಗದಿದ್ದ ವಿಷಯ ‘ವಿದ್ಯುನ್ ಮಸ್ತಿಷ್ಕ ರೇಖಾ’ ಎಂದು ಹೇಳಿದಾಗ ವಿವರಿಸಿದಂತಾಗಿ ಏನೋ ಒಂದು ಸ್ವಲ್ಪ ಅರ್ಥವಾಗುತ್ತದೆ. ಮೊನ್ನೆ ಒಂಬತ್ತೂಕಾಲು ಘಂಟೆಯಿಂದ ಒಂಬತ್ತೂವರೆಯ ವರೆಗೆ ಮೂರು ಜನ ಜೆಟ್ ವಿಮಾನದ ವಿಚಾರದಲ್ಲಿ – ನೀವು ಕೇಳಿದಿರೋ ಬಿಟ್ಟಿರೋ ಗೊತ್ತಿಲ್ಲ – ಅತ್ಯಂತ ಕ್ಲಿಷ್ಟ, ಗಹನ ಸೂಕ್ಷ್ಮ ವಿಚಾರಗಳನ್ನೆಲ್ಲ  ಕುರುತು ಸಂವಾದ ಮಾಡಿದರು. ನನಗೆ ಎಲ್ಲಕ್ಕೂ ಆಶ್ಚರ್ಯವಾದದ್ದು, ಆ ಮೂರು ಜನ ಮಾತನಾಡುತ್ತಿದ್ದುದನ್ನು ನೋಡಿದರೆ ಬಹುಕಾಲದಿಂದ ಕನ್ನಡ ಪ್ರಾಧ್ಯಾಪಕರಾಗಿದ್ದರೂ ಆ ರೀತಿಯಲ್ಲಿ ಅಷ್ಟೊಂದು ಸುಲಭವಾಗಿ ಸ್ಪಷ್ಟವಾಗಿ ಮಾತನಾಡುತ್ತಿದ್ದರೋ ಇಲ್ಲವೋ ಅನ್ನೋ ಹಾಗೆ ಮಾತನಾಡುತ್ತಾ ಇದ್ದರು. ಈಗ ಅತ್ಯಂತ ಗಹನವಾದ ವಿಜ್ಞಾನದ ವಿಚಾರಗಳನ್ನೂ ಕನ್ನಡದಲ್ಲಿ ಹೇಳಬಹುದು. ಹುಡುಗರು, ಇಂಗ್ಲಿಷ್‌ನಲ್ಲಿ ಹೇಳುತ್ತಾ ಇರೋವಾಗ ಸುಮ್ಮನೆ ತಟಸ್ಥರಾಗಿ ಸಮಾಧಿಸ್ಥಿಯಲ್ಲಿ ಎಂಬಂತೆ  ಕುಳಿತಿರುತ್ತಾರೆ, ಅನೇಸ್ತೀಯಾ ಕೊಟ್ಟಂತೆ, ಏನಾದರೂ ಹೇಳಿಕೊಳ್ಳಲಿ ಅನ್ನುವಂತೆ. ಅದನ್ನೇ ನೀವು ಕನ್ನಡದಲ್ಲಿ ಹೇಳಲು ಶುರುಮಾಡಿದಾಗ ಕಣ್ಣಿನಲಿ ಹೊಳಪು ಬರುತ್ತದೆ. ಮುಖದಲ್ಲಿ ನಗೆ ಮೂಡುತ್ತದೆ; ಒಂದು ತಿಳುವಳಿಕೆ ಉಂಟಾಗುತ್ತದೆ. ಅವನು ಎದ್ದು  ಪ್ರಶ್ನೆ ಕೇಳುತ್ತಾನೆ. ಇಂಗ್ಲಿಷಿನಲ್ಲೇ ಮಾತನಾಡುತ್ತಾ ಇದ್ದರೆ, ಅವನು ಪ್ರಶ್ನೆಯನ್ನೂ ಕೇಳುವ ಗೋಜಿಗೇ ಹೋಗುವುದಿಲ್ಲ. ಎಲ್ಲವನ್ನೂ ತಿಳಿದುಕೊಂಡವನ ಹಾಗೆ ಸುಮ್ಮನಿದ್ದುಬಿಡುತ್ತಾನೆ. ಅಪ್ಪಿ ತಪ್ಪಿ ಪ್ರಶ್ನೆ ಕೇಳಿದರೆ, ಕೇಳುವಾಗ ಪ್ರಶ್ನೆಯಲ್ಲಿಯೇ ಎಲ್ಲಿ ತಪ್ಪಾಗಿ ಎಲ್ಲರೂ ನಕ್ಕುಬಿಡುತ್ತಾರೋ ಎಂಬ ಭಯದಿಂದ ಅದರ ತಂಟೆಗೇ ಹೋಗುವುದಿಲ್ಲ. ಇಂಗ್ಲಿಷ್‌ನಲ್ಲಿ ನೀವು ಪಾಠ ಹೇಳುತ್ತಾ ಇದ್ದರೆ, ಹುಡುಗರಿಗೆ ಅನೇಸ್ತೀಸಿಯಾ ಕೊಟ್ಟಹಾಗೆ ಇರುತ್ತೆ. ಏನು ಆಪರೇಷನ್ ಬೇಕಾದರೂ ಮಾಡಿ! ಎಲ್ಲ ಮಕ್ಕಳೂ ಒಂದುಘಂಟೆ ಆದಮೇಲೆ ಎಚ್ಚರಗೊಳ್ಳುತ್ತಾರೆ. ಆಮೇಲೆ ಕಣ್ಣುಬಿಟ್ಟುಕೊಂಡು ಹೊರಗೆ ಬರುತ್ತಾರೆ. ಮುಂದೆ ಏನು ಮಾಡಬೇಕು? ಯಾರಾದರೂ ಒಬ್ಬರ ಹತ್ತಿರ ಹೋಗಿ ಒಂದಷ್ಟು ದುಡ್ಡುಕೊಟ್ಟು, ದಮ್ಮಯ್ಯ ಗುಡ್ಡೆಹಾಕಿ ಒಂದು ಪ್ರಬಂಧ ಬರೆಸಿಕೊಂಡು ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ಒಪ್ಪ್ಸುತ್ತಾರೆ.

ಈ ಪರಿಭಾಷೆಯ ವಿಚಾರದಲ್ಲಿ ಮತ್ತೊಂದು ಮಾತು ಹೇಳಬೇಕು. ಈ ಮೂರು ವಿಶ್ವವಿದ್ಯಾನಿಲಯದವರು ಪಠ್ಯಪುಸ್ತಕಗಳನ್ನು ಬರೆಯುವವರು – ಒಬ್ಬೊಬ್ಬರು ಒಂದೊಂದು ಪರಿಭಾಷೆಯನ್ನು ಉಪಯೋಗಿಸುವುದು ಖಂಡಿತಾ ಕೂಡದು . ಅದು ಮಾತ್ರ ನಿಶ್ಚಯ. ಎಲ್ಲರಿಗೂ ಕಡೆಗೆ ಕನ್ನಡದಲ್ಲಾದರೂ, ಒಂದೇ ಒಂದು ಪರಿಭಾಷೆ ಇರಬೇಕು. ಇದನ್ನು ನಾವು ಸಾಧಿಸಲೇಬೇಕು. ಕರ್ಣಾಟಕ ವಿಶ್ವವಿದ್ಯಾನಿಲಯದವರು ‘ಪ್ರಾಣವಾಯು’ ಅನ್ನುವುದು, ಮೈಸೂರು ವಿಶ್ವವಿದ್ಯಾನಿಲಯದವರು ‘ಆಮ್ಲಜನಕ’ ಅನ್ನುವುದು ಇದು ಅಗಬಾರದು. ಆಕ್ಸಿಜನ್, ಹೈಡ್ರೋಜನ್, ಕ್ಲೋರಿನ್ ಇಂಥ ಮಾತುಗಳನ್ನು ಹಾಗೆ  ಹಾಗೆ ಉಪಯೋಗಿಸಿದರೆ ವಾಸಿ. ಅದು ಅಂತರರಾಷ್ಟ್ರೀಯವಾಯಿತು, ಅಖಿಲ ಭಾರತೀಯವಾಯಿತು. ನಮಗೂ ರಗಳೆ ತಪ್ಪಿತು. ಇನ್ನು ಸಂಕೇತಗಳು ಸಿಂಬಲ್ಸ್, ABC ಅಥವಾ ಪ್ಲಸ್, ಮೈನಸ್ ಇತ್ಯಾದಿ. ಅವನ್ನು ಮಾತ್ರ ಅಂತರರಾಷ್ಟ್ರೀಯವಾದದ್ದನು ಹಾಗೆ ಹಾಗೆಯೇ ಇಟ್ಟುಕೊಳ್ಳಬೇಕು. ನಾನು ಹಿಂದೆ ಕನ್ನಡಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಧಾರವಾಡಕ್ಕೆ ಹೋದಾಗ ಅಲ್ಲೊಂದು ಪುಸ್ತಕ ಪ್ರದರ್ಶನ ನಡೆಯಿತು. ನಾನೊಂದು ‘ಆಲ್ಜೀಬ್ರಾ’ ಪುಸ್ತಕವನ್ನು ತೆಗೆದು ನೋಡಿದೆ. ಅ,ಬ,ಕ, ಎಂದಿತ್ತು  a, b,c, ಎನ್ನುವುದಕ್ಕೆ! ನಾನು ಅಂದೇ ಹೇಳಿದೆ: “ನೋಡಿ ಇದು ಕನ್ನಡ ಮಾಧ್ಯಮ ಆದರೆ, ನಾನು ಇದಕ್ಕೆ ಸಂಪೂರ್ಣ ವಿರೋಧಿ. ಇಂಗ್ಲಿಷ್ ಮಾಧ್ಯಮವೆ ಇರಲಿ ಅಂತ ಹೇಳ್ತೀನೆ. ಖಂಡಿತಾ ಬೇಡ ಇದು.” ಈ ಅಕ್ಷರಗಳು, ಎಬಿಸಿ, ಸಿಂಬಲ್ಸ್, ಇವೆಲ್ಲ ಹಾಗೆ ಹಾಗೆ ಇರಬೇಕು.

ನನ್ನದು ಇನ್ನೊಂದು ಸೂಚನೆ ಇದೆ. ವರ್ಣಮಾಲೆಯಲ್ಲಿ ನಮ್ಮ ಮಕ್ಕಳಿಗೆ ನಾವು ಅ ಆ ಇ ಈ ಕಲಿಸುತ್ತೇವೆ. ಇನ್ನು ಒಂದು, ಎರಡು, ಮೂರು, ನಾಲ್ಕು ಅಂತ ಕಲಿಸುತ್ತೇವೆ. ಕನ್ನಡ ಅಂಕಿಗಳನ್ನೂ ಕಲಿಸುತ್ತೇವೆ. ರೋಮನ್ ಮತ್ತು ಅರಾಬಿಕ್ ಅಂಕಿಗಳನ್ನೂ ಕಲಿಸುತ್ತೇವೆ. ಅದೇನೂ ಕಷ್ಟ ಇಲ್ಲ. ಹಾಗೆಯೆ ಎಬಿಸಿ ಯಿಂದ ಜಡ್ ವರೆಗೆ ಇಪ್ಪತ್ತಾರು ಅಕ್ಷರಗಳನ್ನು ಕಲಿಸುವುದು, ಕಲಿತುಕೊಳ್ಳುವುದೂ ಏನೂ ಕಷ್ಟವಲ್ಲ. ಆದ್ದರಿಂದ ನಮ್ಮ ವರ್ಣಮಾಲೆಯಲ್ಲಿ ಕನ್ನಡದ ವರ್ಣಮಾಲೆಯ ಜೊತೆಗೆ ಇಂಗ್ಲಿಷ್ ವರ್ಣಮಾಲೆಯನ್ನೂ ಸೇರಿಸಿ ಹೇಳಿಕೊಡಿ. ಎಬಿಸಿ ಮುಂತಾದವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಬಳಸಬೇಕಾಗುತ್ತದೆ. ಆದ್ದರಿಂದ ಕನ್ನಡದ ವರ್ಣಮಾಲೆಯಲ್ಲಿ ೨೬ ಇಂಗ್ಲಿಷ್ ಅಕ್ಷರಗಳನ್ನು ಸೇರಿಸಿ ಹೇಳಿಕೊಟ್ಟುಬಿಟ್ಟರಾಯಿತು. ಇಂಗ್ಲಿಷ್ ಭಾಷೆ ತನ್ನ ಅಂತಃಸತ್ವದಿಂದ ಅಂತರ್ ಮೌಲ್ಯದಿಂದಲೇ ಒಂದು ರೀತಿಯಲ್ಲಿ ವಿಶಿಷ್ಟ ಭಾಷೆಯಾಗಿಬಿಟ್ಟಿದೆ. ಅದರ ಸ್ಥಾನ ಎಂದಿಗೂ ಚ್ಯುತವಾಗುವುದಿಲ್ಲ. ನಿಶ್ಚಯ ಅದು. ಆ ಧೈರ್ಯ ಇಂಗ್ಲಿಷ್ ಮಾಧ್ಯಮವಾದಿಗಳಿಗಿಲ್ಲ, ನಮಗಿದೆ ಅದು. ಆದ್ದರಿಂದ ಅದನ್ನು  ನಾನು ಹೇಳಿದೆ ಅಷ್ಟೆ. ಕನ್ನಡ ಮಾಧ್ಯಮ ಜಾರಿಗೆ ಬಂದಾಗ ಮೊದಲು ತರ್ಕಶಾಸ್ತ್ರವನ್ನು  ಕನ್ನಡದಲ್ಲಿ ಬೋಧಿಸುವುದಕ್ಕೆ ಶುರು ಮಾಡಿದೆವು. ದಿವಂಗತ ಯಾಮುನಾಚಾರ್ಯರು ಪುಸ್ತಕ ಬರೆದುಕೊಟ್ಟರು. ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ೭೦ – ೮೦ರ  ಮೇಲೆ ಅಂಕಗಳನ್ನು ತೆಗೆದುಕೊಂಡಿದ್ದರು. ಆಮೇಲೆ ಇದು ಹೇಗೆ ಸಾಧ್ಯವಾಯಿತು ಎಂದು ಆ ಹುಡುಗರನ್ನು ನಾನು ಕೇಳಿದೆ. ತರ್ಕಶಾಸ್ತ್ರ ಇಂಗ್ಲಿಷ್ ಮಾಧ್ಯಮದವರಿಗೆ ಕಷ್ಟ; ನಮಗೇನು ನೀರು ಕುಡಿದ ಹಾಗೆ. ಇಂಗ್ಲಿಷ್ ಭಾಷೆಯಲ್ಲಿ ಆ ಲ್ಯಾಟಿನ್ ಟರ್ಮ್ಸ್ ನಲ್ಲಿ ಬಾಯಿಪಾಠ ಮಾಡಿಕೊಂಡು ಅದನ್ನು ಹಾಗೆ ಹಾಗೆ ನೆನಪಿಟ್ಟುಕೊಂಡು ಬರೆಯಬೇಕು. ಅಂಥ ಕ್ಲೇಶ ಕನ್ನಡ ಮಾಧ್ಯಮದಲ್ಲಿ ಇಲ್ಲ  ಎಂದರು. ಪಾಶ್ಚಾತ್ಯರಲ್ಲಿ ಅನೇಕರು, ವಿಶ್ವವಿದ್ಯಾನಿಯಗಳ ಮೆಟ್ಟಿಲನ್ನು ಕೂಡ ಹತ್ತದೇ ಇರುವವರು, ಎಷ್ಟೋಜನ ವಿಜ್ಞಾನದಲ್ಲಿ ದೊಡ್ಡ ಆವಿಷ್ಕಾರಗಳನ್ನು ಮಾಡಿದ್ದಾರೆ. ಕಾರಣ ಏನೆಂದರೆ ಅವರವರ ಭಾಷೆಗಳಲ್ಲಿ ಅವರು ಚಿಂತನ ನಡೆಸಿದ್ದಾರೆ. ಪುಸ್ತಕಗಳು ಕನ್ನಡದಲ್ಲಿ ಎಲ್ಲಕಡೆಯೂ ಇದ್ದರೆ ಪ್ರತಿಭೆ ಇರುವವನು ತಾನೇ ಓದಿಕೊಳ್ಳುತ್ತಾನೆ, ತಾನೇ ಕೆಲಸ ಮಾಡುತ್ತಾನೆ. ಈಗ ವಿಜ್ಞಾನದ ಜ್ಞಾನ ಸಾರ್ವತ್ರಿಕವಾದದ್ದು. ಜನಗಳಲ್ಲಿ ಹಬ್ಬುವಂತದ್ದು . ನಮ್ಮ ಜನ ಜೀವನದಲ್ಲಿಯೂ ಇದರ ಆವಶ್ಯಕತೆ ಎಷ್ಟಿದೆ? ಕಡೆಗೆ ಒಬ್ಬ ರೈತ, ಕೃಷಿಕ ಅವನೂ ಈಗ ಒಂದು ‘ಟಿಲ್ಲರ್’ ಉಪಯೋಗುಸುತ್ತಾನೆ. ಅದೇನಾದರೂ ಸ್ವಲ್ಪ ಕೆಟ್ಟು ಹೋದರೆ, ನಿಮ್ಮ ಕನ್ನಡ ವಿಜ್ಞಾನ ಪುಸ್ತಕ ಓದಿ ಸರಿಮಾಡಿಕೊಳ್ಳುತ್ತಾನೆ. ಈಗ ಏನಾಗಿದೆ ಅಂದರೆ ಅವನೆಗೆ ಅದು ಗೊತ್ತೂ ಇಲ್ಲ. ಅವನು ಯಾರನ್ನಾದರೂ ಕರೆದುಕೊಂಡು ಬರಬೇಕಾದರೆ, ಎಲ್ಲೋ ಬೆಂಗಳೂರಿಗೋ ಮೈಸೂರಿಗೋ ಬಂದು ಮಹರ್ಷಿಗಳನ್ನು  ಕರೆದುಕೊಂಡು ಹೋಗುತ್ತಿದ್ದಂತೆ ಮೆಕ್ಯಾನಿಕ್ ಮಹಾರಾಜನನ್ನು ಕರೆದುಕೊಂಡು  ಹೋಗಬೇಕು. ಒಂದು ನಿಮಿಷದಲ್ಲೊ ಎರಡು ನಿಮಿಷದಲ್ಲೊ ಮಾಡುವ ಕಲಸವನ್ನು ಈ ಮೆಕ್ಯಾನಿಕ್ ಮಹಾರಾಜ ಎರಡು ದಿವಸಾನೋ ಮೂರು ದಿವಸಾನೋ ಆರು ದಿವಸಾನೋ ಮಾಡ್ತಾನೆ. ಹೀಗಾಗಿ ಎಷ್ಟೋ ಟ್ರಾಕ್ಟರುಗಳು – ೧೦ ಸಾವಿರ ಇಪ್ಪತ್ತು ಸಾವಿರ  ಕೊಟ್ಟು ತೆಗೆದುಕೊಂಡು ಬಂದ ಟ್ರಾಕ್ಟರುಗಳು – ಗದ್ದೆ ಒಳ್ಗೆ ನಿಂತುಬಿಟ್ಟಿರುತ್ತವೆ. ನಾಲ್ಕುವರ್ಷ ಆಗುತ್ತಿದ್ದ ಹಾಗೆ ಅವು ಯಾತಕ್ಕೂ ಬರದ ಹಾಗೆ ಆಗುತ್ತವೆ. ಯೋಚನೆಮಾಡಿ. ಎಷ್ಟೊಂದು ನಷ್ಟ ಆಗುತ್ತಾ ಇದೆ. ಆದ್ದರಿಂದ ಈ ವಿಜ್ಞಾನದಿಂದ ಸಮಸ್ತ ಜನರಿಗೂ ಸಾಕಷ್ಟು ಸಹಾಯವಾಗುತ್ತದೆ. ಬರೀ ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ ಇದು. ನಮ್ಮ ದೇಶದಲ್ಲಿ ಮತಮೌಢ್ಯದಿಂದ ರೂಢಿ ಸಂಪ್ರದಾಯಗಳಿಂದ ಅವಿವೇಕದ ಪರಂಪರೆಗಳನ್ನೂ ನಾವು ಏಷ್ಟೋ ನಂಬಿಕೆಯಿಂದ ನಡೆಸಿಕೊಂಡು ಹೋಗುತ್ತಾ ಇದ್ದೇವೆ. ಸಾಮನ್ಯ ಜನರಲ್ಲಂತೂ ಇಷ್ಟೊಂದು ಕಲಹ, ಹೊಡೆದಾಟ ನಮ್ಮ ದೇಶದಲ್ಲಿ ಆಗುತ್ತ ಇರುವುದಕ್ಕೆ ವೈಜ್ಞಾನಿಕ ಮನೋಧರ್ಮ ವೈಜ್ಞಾನಿಕ ಶಿಕ್ಷಣ ಇಲ್ಲದಿರುವುದೇ ಕಾರಣ. ಈ ವೈಜ್ಞಾನಿಕದೃಷ್ಟಿ ಬಂದುಬಿಟ್ಟರೆ ಆ  ತೊಂದರೆಗಳೆಲ್ಲಾ ಪರಿಹಾರವಾಗಿಬಿಡುತ್ತವೆ. ವೈಜ್ಞಾನಿಕದೃಷ್ಟಿ ಮತ್ತು ವಿಚಾರಬುದ್ಧಿ ಇವು ವಿಜ್ಞಾನದಿಂದಲೇ ಸಾಧ್ಯ. ಈ ವಿಜ್ಞಾನದ  ಮನೋಧರ್ಮ, ವೈಜ್ಞಾನಿಕದೃಷ್ಟಿ, ವಿಚಾರಬುದ್ಧಿಯುಳ್ಳವರು ನಮ್ಮಲ್ಲಿ ಇಲ್ಲ ಎಂದಲ್ಲ; ವೇದಾಂತಗಳಲ್ಲಿ ಪರಮವಿಚಾರ ಬುದ್ಧಿಯನ್ನು ಪಡೆದಂಥವರು ಸಾವಿರಾರು ಜನ ದೊಡ್ಡ  ದೊಡ್ಡವರೆಲ್ಲ ಆಗಿಹೋಗಿದ್ದಾರೆ. ಆದರೆ ಆ ‘ವಿಚಾರಬುದ್ಧಿ’ ಸಾಮಾನ್ಯ ಜನತೆಗೂ ಬರಬೇಕಷ್ಟೆ. ಇದು ಅತ್ಯಂತ ಆವಶ್ಯಕ.

ಇಂಗ್ಲೆಂಡಿನಲ್ಲಿ ಲ್ಯಾಟಿನ್ ಭಾಷೆಯೇ ಪ್ರಧಾನವಾಗಿದ್ದ ಕಾಲದಲ್ಲಿ, ಲ್ಯಾಟಿನ್, ಗ್ರೀಕ್ ತೆಗೆದುಕೊಳ್ಳುವವರೆಲ್ಲ ಮೇಲ್ಮಟ್ಟದ ವಿದ್ಯಾರ್ಥಿಗಳು; ಇಂಗ್ಲಿಷ್ ಅನ್ನು  ತೆಗೆದುಕೊಳ್ಳುವವರು ದಡ್ಡರು, ಇವನು ದಡ್ಡ ಎಂದು ಇವನನ್ನು ಇಂಗ್ಲಿಷ್‌ಗೆ  ಹಾಕಿದ್ದರಂತೆ!  ಬಹಳ ಮೇಲ್ಮಟ್ಟದವರಿಗೆ ಲ್ಯಾಟಿನ್ ಗ್ರೀಕ್ ಕೊಡುತ್ತಾ ಇದ್ದರು ಎಂದು ಚರ್ಚ್‌ಹಿಲ್ ತನ್ನ ಆತ್ಮಕಥೆಯಲ್ಲಿ ಬರೆಯುತ್ತಾನೆ, ಅಂದು ಅಲ್ಲಿ ಇಂಥ ಸ್ಥಿತಿ ಇತ್ತು. ಅವರು ಆಗ ಇದ್ದ ಸ್ಥಿತಿಯಲ್ಲಿ ನಾವು ಈಗ ಇದ್ದೇವೆ. ಬಹುಶಃ ಇನ್ನೂರು ವರ್ಷ ಹಿಂದೆಯೂ ಇದ್ದೇವೆ. ಮುಂದೆ ನಮ್ಮ ದೇಶವೂ ಅಂಥ ಸ್ಥಿತಿಗೆ ಬಂದಾಗ ನಮಗೇ ಆಶ್ಚರ್ಯವಾಗುತ್ತದೆ. ಸ್ವಲ್ಪ ನಗುವೂ ಬರುತ್ತದೆ! ಆದರೆ ಈಗ ಐವತ್ತು ವರ್ಷದಿಂದ ತಕ್ಕಮಟ್ಟಿಗೆ ಕೆಲಸ ನಡೆದುಕೊಂಡು ಹೋಗುತ್ತಾ ಇದೆ. ಸದ್ಯಕ್ಕೆ ಪರವಾ ಇಲ್ಲ. ದೇಶ, ಜನ, ಸರ್ಕಾರ, ವಿಶ್ವವಿದ್ಯಾನಿಲಯಗಳು ಎಲ್ಲರೂ – ಇಷ್ಟವಿರಲಿ ಇಲ್ಲದೆ ಇರಲಿ – ಒಪ್ಪಿಕೊಂಡುಬಿಟ್ಟಿದ್ದಾರೆ. ಈಗ ಯಾರೂ ಅದನ್ನು ಪ್ರಶ್ನೆ ಮಾಡುತ್ತಾ ಇಲ್ಲ. ಕೆಲವರಂತೂ ಚಕ್ರವನ್ನ ಮುಂದಕ್ಕೆ ನೂಕುವ ನೆವದಲ್ಲಿ ಅದನ್ನು ಹಿಡಿದುಕೊಂಡು ಜಗ್ಗುತ್ತಾ ಇದ್ದಾರೆ! ಅಂದರೆ, ಸಾಕಷ್ಟು ಪುಸ್ತಕಗಳು ಬರಲಿ, ಆಮೇಲೆ ಪ್ರಾರಂಭ ಮಾಡೋಣ; ಸಾಕಷ್ಟು ವಿದ್ಯಾರ್ಥಿಗಳು ಬರಲಿ, ಆಮೇಲೆ ಪ್ರಾರಂಭ ಮಾಡೋಣ; ಎಂದೆಲ್ಲಾ ಹೇಳುತ್ತಾ  ಬಿರಿಯಿಕ್ಕಲು ಯತ್ನಿಸುತ್ತಾ ಇದ್ದಾರೆ. ಅವರ ಉದ್ದೇಶವೇ ಬೇರೆ. ಆದರೆ ನೀವು ಪುಸ್ತಕ  ಬರೆಯಬೇಕು, ಪಾಠ ಹೇಳಬೇಕು, ಪ್ರಚಾರ ಮಾಡಬೇಕು. ಈ ಕಲಸ ಇನ್ನೂ ಒಂದು ನೂರುವರ್ಷದವರೆಗೆ ಒಂದೇ ಸಮನೆ ನಡೆಯಬೇಕು. ನೂರು ವರ್ಷ ಆಗಲಾರದು  ಅಂತ ಕಾಣುತ್ತೆ. ನಾಳೆ ನೀವು ಶಾಲೆಯಲ್ಲಿಯೊ ಕಾಲೇಜಿನಲ್ಲಿಯೊ ಕನ್ನಡ ಮಾಧ್ಯಮದ  ತರಗತಿಗಳನ್ನು ತೆಗೆಸುವ ಕಲಸ ಮಾಡಬೇಕು. ಅಧ್ಯಾಪಕರ ಉತ್ಸಾಹ, ಶ್ರದ್ಧೆಯಮೇಲೆ  ಇವುಗಳ ಯಶಸ್ಸು ನಿಂತಿರುತ್ತದೆ. ಕನ್ನಡ ಮಾಧ್ಯಮದಲ್ಲಿ ಚೆನ್ನಾಗಿ ಪಾಠ ಹೇಳುತ್ತಾರೆ  ಅಂದರೆ ಎಲ್ಲ ವಿದ್ಯಾರ್ಥಿಗಳೂ ಅಲ್ಲಿಗೆ ಹೋಗುತ್ತಾರೆ. ಉಪಾಧ್ಯಾಯರಾಗಿರುವವರು ಈ ವಿಚಾರದಲ್ಲಿ ಒಂದೊಂದು ಕಾಲೇಜಿನಲ್ಲೂ  ಸಂಘದ ಮುಖಾಂತರವಾಗಿಯೋ, ಬೇರೆ ಯಾವುದಾದರೂ ವ್ಯವಸ್ಥೆಯ ಮೂಲಕವೋ ಎಚ್ಚರದಿಂದಿದ್ದು ಕಾರ್ಯ ನಿರ್ವಹಿಸಬೇಕು ಏಕೆಂದರೆ ಕರಣಿಕರಿಂದಾದಿಯಾಗಿ ಉಪದೇಶ ಹೇಳುತ್ತಾರೆ, ಹೊಸದಾಗಿ  ಬರುವ ಹುಡುಗರಿಗೆ: “ಯಾಕೆ ಕನ್ನಡ ತೆಗೆದುಕೊಳ್ಳುತ್ತಿರೊ? ಮುಂದೆ ಇಲ್ಲದ ಕಷ್ಟಕ್ಕೆ ಸಿಕ್ಕುವುದು ಯಾಕೆ? ಅದರ ಬದಲು ಇಂಗ್ಲಿಷ್ ತೆಗೆದುಕೊಳ್ಳಿ?” ಪಾಪ, ಹುಡುಗ  ಹೊಸದಾಗಿ ಬಂದಿರುತ್ತಾನೆ. ಕರಣಿಕ ಮಹಾಶಯನ್ನೇ ಮಾರ್ಗದರ್ಶಿ ಎಂದು ಭಾವಿಸಿ ಮೋಸ ಹೋಗುತ್ತಾನೆ.

ಭಾಷೆಗಳನ್ನು ಕಲಿಯುವ  ವಿಚಾರವೇ ಬೇರೆ. ನೀವು ಬೇರೆ ಬೇರೆ ಭಾಷೆಗಳನ್ನು  ಕಲಿಯಿರಿ, ಯಾರು ಬೇಡ ಅಂತಾರೆ. ಇಂಗ್ಲಿಷ್ ಅನ್ನೂ ಕಲಿಯಿರಿ, ಅದಕ್ಕಾಗಿಯೆ ನಮ್ಮ ವಿಶ್ವ ವಿದ್ಯಾನಿಲಯದಲ್ಲಿ ಈಗ ಸದ್ಯಕ್ಕೆ ಯಾವುದಾದರೂ ಎರಡು ಭಾಷೆಗಳನ್ನು ಆರಿಕೊಳ್ಳಬಹುದು ಎಂದು ಮಾಡಿದ್ದಾರೆ. ಕೇಂದ್ರಸರ್ಕಾರದ್ದು ತ್ರಿಭಾಷಾ ಸೂತ್ರ ತ್ರಿಭಾಷಾ ಸೂತ್ರ ಅಂದರೆ ತ್ರಿಶೂಲ ಇದ್ದಹಾಗೆ ಎಂದು ನಾನು ಭಾವಿಸಿದ್ದೇನೆ. ಇಂಗ್ಲಿಷ್ ಒಂದರಿಂದಲೇ ಕಷ್ಟ ಆಗಿದೆ. ಅಂಥದ್ದರಲ್ಲಿ ಮತ್ತೊಂದನ್ನ ಕಲಿಯಿರಿ ಅಂದರೆ ಹೇಗೆ? ಕಾರಣ, ತ್ರಿಭಾಷಾ ಸೂತ್ರದಲ್ಲಿ ಕಡೆಗೆ ಕಷ್ಟಕ್ಕೆ ಒಳಗಾಗುವುದನ್ನು ನಮ್ಮ ಕನ್ನಡವೇ ಹೊರತು ಇಂಗ್ಲಿಷ್ ಅಲ್ಲ, ಹಿಂದೀನೂ ಅಲ್ಲ. ಇಂಗ್ಲಿಷ್, ಹಿಂದಿ ಕಡ್ಡಾಯಮಾಡಿ ಬಿಡೂತ್ತಾರೆ. ಹುಡುಗರೆಲ್ಲ ಅದನ್ನು ತೆಗೆದುಕೊಳ್ಳುತ್ತಾರೆ. ಕನ್ನಡವನ್ನೆ ಬಿಟ್ಟು ಬೇರೆ ಏನು ಬೇಕಾದರೂ  ತೆಗೆದುಕೊಳ್ಳಬಹುದಲ್ಲ, ಕನ್ನಡದ ಆಭಿಮಾನ ಇಲ್ಲದ ಹುಡುಗರು.

ಅದೂ ಅಲ್ಲದೆ ಇಂಗ್ಲಿಷ್ ಅನ್ನು ಎಲ್ಲರೂ ಕಲಿಯಬೇಕು; ಹಿಂದಿಯನ್ನು  ಎಲ್ಲರೂ ಕಲಿಯಬೇಕು ಅನ್ನುವುದು ನನಗೆ ಅರ್ಥವಾಗುವುದಿಲ್ಲ. ಯಾಕೆ ಹೇಳುವುದಕ್ಕೆ ಬಂದೆ ಅಂದರೆ, ಇಂಗ್ಲಿಷ್ ಅನ್ನು ಶೇಕಡಾ ಒಂದರಷ್ಟು ಕಲಿತಿದ್ದರೋ ಇಲ್ಲವೋ ಅಥವಾ ಇಂಗ್ಲಿಷ್ ಅನ್ನು ಚೆನ್ನಾಗಿ ಕಲಿತವರ ಸಂಖ್ಯೆ ಶೇಕಡಾ ೦.೦೫ ಇರಬಹುದು. ಅಷ್ಟೆ. ಇಷ್ಟು ಕಡಿಮೆ ಇಂಗ್ಲಿಷ್ ಕಲಿತವರನ್ನು ಇಟ್ಟುಕೊಂಡು ಇನ್ನೂರು ವರ್ಷ ಸಮರ್ಥವಾಗಿ ರಾಜ್ಯಭಾರ ಮಾಡಿದ್ದಾರೆ ಇಂಗ್ಲಿಷ್ ನವರು. ಶೇಕಡಾ ೦.೦೫ರಷ್ಟು ಮಂದಿ ಇತರ ಭಾಷೆಗಳನ್ನು ಕಲಿತರೆ ಸಾಕು. ಹಿಂದಿಯನ್ನಾಗಲಿ, ಇಂಗ್ಲಿಷ್ ನ್ನಾಗಲಿ ಎಲ್ಲರೂ  ಕಲಿಯಬೇಕು ಅನ್ನುವಂಥ ಅವಿವೇಕ ಮತ್ತೊಂದಿಲ್ಲ. ಆದ್ದರಿಂದ ಈ ಸ್ವಾತಂತ್ರ್ಯವನ್ನು  ಮಕ್ಕಳಿಗೆ ಮತ್ತು ಅವರ ತಂದೆ ತಾಯಿಗಳಿಗೆ ಬಿಟ್ಟುಬಿಡಿ. ಯಾವುದಾದರೂ ಎರಡು  ಭಾಷೆ ಆರಿಸಿಕೊಳ್ಳಲಿ. ಮೂರುಭಾಷೆ ಅಂತ ಬಲಾತ್ಕಾರ ಮಾಡಬೇಡಿ, ಅಂದರೆ ‘ಬಹು ಭಾಷೆಗಳಲ್ಲಿ ದ್ವಿಭಾಷೆ’ ಎನ್ನುವುದು ನನ್ನ ಸೂತ್ರ. ಆಗ ಒಬ್ಬ ಹುಡುಗ ಕನ್ನಡ ರಷ್ಯನ್ ತೆಗೆದುಕೊಳ್ಳಬಹುದು. ನಾಳೆ ದಿವಸ ಅವನು ರಷ್ಯಕ್ಕೆ ಹೋಗಿ ಏನಾದರೂ ಮಾಡಬೇಕು ಎಂಬ ಮನಸ್ಸು ಇದ್ದರೆ ಕನ್ನಡ, ರಷ್ಯನ್ ಕಲಿಯಲಿ; ಕನ್ನಡ ಜರ್ಮನ್ ಕಲಿಯಲಿ, ಕನ್ನಡ ಜಪಾನೀಸ್ ಕಲಿಯಲಿ. ಹೀಗೆ ‘ಬಹುಭಾಷೆಗಳಲ್ಲಿ  ದ್ವಿಭಾಷಾ ಸೂತ್ರ’ಕ್ಕನುಗುಣವಾಗಿ ಬೇಕಾದವರು ಬೇಕಾದ ಎರಡು ಭಾಷೆಗಳನ್ನು ತೆಗೆದುಕೊಳ್ಳಲಿ. ಕನ್ನಡದವರು ಕನ್ನಡವನ್ನೇ ಬಿಟ್ಟು ಬಿಡಬಹುದಲ್ಲ ಅನ್ನಿಸಬಹುದು. ಅಂಥವರು  ಕನ್ನಡವನ್ನು ಬಿಡುವುದರಿಂದ ಏನೂ ಅಪಾಯ ಆಗುವುದಿಲ್ಲ. ಕನ್ನಡದವನೇ ಆಗಿ ಕನ್ನಡವನ್ನೇ ಬಿಟ್ಟ ಅಂದುಕೊಳ್ಳಿ, ಹಿಂದೀನೋ ಜರ್ಮನ್ನೋ ತೆಗೆದುಕೊಂದ ಅಂತ  ಇಟ್ಟುಕೊಳ್ಳಿ, ಕನ್ನಡ ಅಧಿಕೃತ ಭಾಷೆಯಾಗಿ ಘೋಷಿತವಾದಾಗ, ಇಲ್ಲಿ ವ್ಯವಹಾರವೆಲ್ಲ ಕನ್ನಡದ ಮೂಲಕ ನಡೆಯುವಂತಾದಾಗ, ಕನ್ನಡವನ್ನು ಬಿಡುವವನು ತಾನು ಈ ದೇಶದವನಲ್ಲ, ಬೇರೆ ಕಡೆಗೆ ಹೋಗುತ್ತೇನೆ ಎಂತಲೇ ಕನ್ನಡವನ್ನು ಬಿಡುತ್ತಾನೆ. ಆದ್ದರಿಂದ ಅವನ ವಿಚಾರದಲ್ಲಿ ನಿಮಗೆ ಯಾವ ಭಯವೂ ಬೇಡ. ‘ಬಹು ಭಾಷೆಗಳಲ್ಲಿ ದ್ವಿಭಾಷೆ’ ಅನ್ನುವ ಸೂತ್ರವನ್ನು ಬಲವಾಗಿ ಹಿಡಿಯಬೇಕು.

ಈ ಸೂತ್ರ ರಾಜಕೀಯವಾಗಿಯೂ ಪರಿಹಾರ ಒದಗಿಸುತ್ತದೆ. ಉದಾಹರಣೆಗೆ ತಮಿಳುನಾಡಿನ ಉದಾಹರಣೆಯನ್ನು ತೆಗೆದುಕೊಳ್ಳಿ. ಅವರು ಹಿಂದಿ ಬೇಡವೇಬೇಡ  ಅನ್ನುತ್ತಾರೆ. ಅವರಲ್ಲಿ ತ್ರಿಭಾಷೆಗೆ ಹೇಗೆ ಮಾಡುತ್ತೀರಿ? ‘ಬಹು ಭಾಷೆಗಳಲ್ಲಿ ದ್ವಿಭಾಷೆ’  ಎಂದಾಗ ಅವರು ಮಾತನಾಡುವ ಹಾಗೆ ಇಲ್ಲ. ನಾವು ಇಂಗ್ಲಿಷ್ ನ್ನೂ ಹೇರುತ್ತಾ ಇಲ್ಲ;  ಹಿಂದಿಯನ್ನು ಹೇರುತ್ತಾ ಇಲ್ಲ; ಯಾವುದೇ ಭಾಷೆಯನ್ನೂ  ಹೇರುತ್ತಾ ಇಲ್ಲ ಎಂದಾಗುತ್ತದೆ. ತಮಿಳುನಾಡಿನವನು ಹಿಂದಿ ಬೇಡ ಅಂದರೆ ಆಗ ಸಮಸ್ಯೆ ಆಗುವುದಿಲ್ಲ. ಅದರೆ ಮದರಾಸಿನಲ್ಲಿ ‘ಬಹುಭಾಷೆಗಳಲ್ಲಿ ದ್ವಿಭಾಷೆ’ ಅಂದಾಗ ನಾಲ್ಕು ಜನ ಹಿಂದಿಯನ್ನು  ಕಲಿಯುತ್ತೇವೆ ಎಂದರೆ ಬೇಡ ಅನ್ನುವ ಹಾಗಿರುವುದಿಲ್ಲ. ಆದ್ದರಿಂದ ರಾಜಕೀಯವಾಗಿಯೂ ಇದೊಂದು ಸಮಸ್ಯೆಯನ್ನು ಬಗೆಹರಿಸುತ್ತದೆ. ಈ ವಿಷಯಕ್ಕೆ ‘ಬಹು ಭಾಷೆಗಳಲ್ಲಿ ದ್ವಿಭಾಷೆ’ ಎನ್ನುವ ಸೂತ್ರಕ್ಕೆ ನಮ್ಮ ಪತ್ರಿಕೆಯವರು ದಪ್ಪ ದಪ್ಪ ಅಕ್ಷರಗಳಲ್ಲಿ ಎಷ್ಟು ಪ್ರಕಾರ ಕೊಡುತ್ತಾರೋ ಅಷ್ಟೂ ಒಳ್ಳೆಯದು. ತ್ರಿಭಾಷಾ ಸೂತ್ರ ಬಹು ಭಯಂಕರವಾಗುತ್ತೆ. ನಾನು ‘ಸಾಕು ಈ ಬಲತ್ಕಾರ’ ಎನ್ನುವ ಕವನದಲ್ಲಿ ಈ  ಬಲಾತ್ಕಾರ ಬೇಡ ಎನ್ನುವ ಅಂಶವನ್ನೆ ಒತ್ತಿ ಹೇಳಿದ್ದೇನೆ. ನಾವು ಇಂಗ್ಲಿಷ್ ದ್ವೇಷಿಗಳೂ  ಅಲ್ಲ, ಹಿಂದಿ ದ್ವೇಷಿಗಳೂ ಅಲ್ಲ. ಎಲ್ಲರೂ ಎಲ್ಲವನ್ನೂ ಕಲಿಯಬೇಕು ಅನ್ನುವ ಬಲವಂತ ಬೇಡ. – ಆದ್ದರಿಂದ ‘ಬಹು ಭಾಷೆಗಳಲ್ಲಿ ದ್ವಿಭಾಷೆ’ ಅನ್ನುವ ಸೂತ್ರವನ್ನು ಇಟ್ಟುಕೊಳ್ಳಿ ಅಂತ ಹೇಳಿದರೆ ಅದು ಎಲ್ಲ ರೀತಿಯ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತದೆ. ಯಾರ ಆಭಿಮಾನವನ್ನೂ ಕೆರಳಿಸುವುದಿಲ್ಲ. ಯಾರ ಸ್ವಾತಂತ್ರ್ಯವನ್ನೂ  ಕಸಿದುಕೊಳ್ಳವುದಿಲ್ಲ.

ಇನ್ನೂ ಒಂದು ಕೆಲಸ ನಡೆಯುತ್ತಾ ಇದೆ. ಅದನ್ನೂ ಹೇಳಿ ಬಿಡುತ್ತೇನೆ. ಏಕೆಂದರೆ ನೀವು ಉಪಾಧ್ಯಾಯ ವರ್ಗದವರಾಗಿರುವುದರಿಂದ ಏನೇನು ನಡೆಯುತ್ತಾ ಇದೆ ಅನ್ನುವುದನ್ನು ತಿಳಿದುಕೊಂಡಿರಬೇಕು. ಒಂದು ಹೈಸ್ಕೂಲಿನಲ್ಲಿ ಮೊದಲು ಕನ್ನಡದ ಮಾಧ್ಯಮ ಮಾತ್ರವೇ ಇತ್ತು. ಆಮೇಲೆ ಇದ್ದಕ್ಕಿದ್ದ ಹಾಗೆ ಕೆಲವರಿಗೋಸ್ಕರವಾದರೂ ಇಂಗ್ಲಿಷ್ ಮಾಧ್ಯಮ ಇರಲಿ ಎಂದು ಒಂದು ವಿಭಾಗ ತೆರೆದರು. ಇಂಗ್ಲಿಷ್ ಮಾಧ್ಯಮ ತೆರೆಯುತ್ತಾರೆ ಎಂದು ಕೇಳಿದ ತಕ್ಷಣ ಕೆಲವರೆಲ್ಲ ಹಳ್ಳಿಯವರೂ ಸೇರಿದಂತೆ ಬಂದುಬಿಟ್ಟರು – ನಮ್ಮ ಹುಡುಗನಿಗೆ ಇಂಗ್ಲಿಷ್ ಮಾಧ್ಯಮ  ಕೊಡಿ ಎಂದು! ಆಗ ಏನಾಯ್ತು ಅಂದರೆ, ಒಂದು ಇಂಗ್ಲಿಷ್ ಟೆಸ್ಟ್ ಮಾಡುತ್ತೇವೆ ಎಂದರು. ಇಂಗ್ಲಿಷ್ ನಲ್ಲಿ ಯಾರ್ಯರು ಪಾಸಾಗ್ತಾರೋ ಅವರಿಗೆಲ್ಲ ಇಂಗ್ಲಿಷ್ ಮಾಧ್ಯಮ ಎಂದೂ ಉಳಿದವರಿಗೆಲ್ಲ ಕನ್ನಡ  ಮಾಧ್ಯಮ ಎಂದೂ ಗೊತ್ತು ಮಾಡಿದರು. ಅಂದರೆ ಇದ್ದವರಲ್ಲಿ ಸ್ವಲ್ಪ ಉತ್ತಮ ಬುದ್ಧಿಶಕ್ತಿ ಇರುವ  ವಿದ್ಯಾರ್ಥಿಗಳನ್ನೆಲ್ಲ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಿಬಿಟ್ಟರು. ಇನ್ನು ಉಳಿದವರು ಹಿಂದುಳಿದ ಪಂಗಡದವರು, ಅಂದರೆ ಜಾತಿಯ ದೃಷ್ಟಿಯಿಂದಲ್ಲ,  ಯಾವುದೋ ಒಂದು ಸೆಕ್ಷನ್ ‘ಸಿ’ನೋ ‘ಡಿ’ನೋ ಆದರು. ಪರೀಕ್ಷೆಯಲ್ಲಿ ಏನು? ‘ಡಿ’ ಸೆಕ್ಷನ್ ನಲ್ಲಿ ಎಲ್ಲರೂ ಫೇಲು? ಏಕೆ? ಕನ್ನಡ ಮಾಧ್ಯಮ ತೆಗೆದುಕೊಂಡಿದ್ದಕ್ಕೆ! ನೋಡಿ ಅಪಖ್ಯಾತಿ! ಡಿ ಸೆಕ್ಷನ್ನಿನಲ್ಲಿದ್ದವರೆಲ್ಲರೂ ಕನ್ನಡ ಮಾಧ್ಯಮ ತೆಗೆದುಕೊಂಡಿದ್ದರು. ವಾಸ್ತವವಾಗಿ ಆಗಿದ್ದೇನು ಅಂದರೆ ಉತ್ತಮರನ್ನೆಲ್ಲ ಆರಸಿ, ಆರಸಿ, ಬೇರೆ ಸೆಕ್ಷನ್ನಿನಲ್ಲಿ  ಇಂಗ್ಲಿಷ್ ಕೊಟ್ಟರು. ಅಷ್ಟು ಮಾತ್ರ ಅಲ್ಲ, ಹಳೆ ಮೇಷ್ಟ್ರುಗಳನ್ನೆಲ್ಲಾ, ಚೆನ್ನಾಗಿ ಪಾಠ ಹೇಳುವವರನ್ನೆಲ್ಲಾ ಇಂಗ್ಲಿಷ್ ಪಾಠ ಹೇಳುವುದಕ್ಕೆ ಸಮರ್ಥರೇ ಬೇಕು ಎಂದುಕೊಂಡು  ಇಂಗ್ಲಿಷ್ ಮಾಧ್ಯಮದ ತರಗತಿಗೇ ಹಾಕಿದರು. ಹೊಸದಾಗಿ ಸೇರಿದವರು ಮತ್ತು ಮೇಷ್ಟುಗಳಲ್ಲಿಯೂ ‘ಹಿಂದುಳಿದ ಪಂಗಡದವರು’ ಇರುತ್ತಾರಲ್ಲಾ ಅವರನ್ನು ಈ ‘ಡಿ’ ಸೆಕ್ಷನ್ನಿಗೆ ಕಳುಹಿಸಿದರು! ಹೀಗೆ ಕನ್ನಡಕ್ಕೆ ಕೆಟ್ಟ ಹೆಸರು ತರುವುದಕ್ಕೆ ಏನೇನು ಮಾಡಬೇಕೋ ಅದನ್ನೇಲ್ಲ ಮಾಡುತ್ತಾ ಇದ್ದಾರೆ. ಆದ್ದರಿಂದ ‘ಕುಕಾರ್ಯ ಮಾಡಬೇಡಿ; ಕನ್ನಡಕ್ಕೆ  ಸರಿಯಾಗಿ ಕೆಲಸಮಾಡಿ’ ಎಂದು ಮತ್ತೆ ಮತ್ತೆ ಹೇಳಬೇಕಾಗುತ್ತದೆ.

ನನಗೆ ಈ ‘ಬಹುಭಾಷೆಗಳಲ್ಲಿ ದ್ವಿಭಾಷೆ’ ಸೂತ್ರದ ಪ್ರತಿಪಾದನೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕಾಗಿ ನಿಮಗೆ ವಂದನೆಗಳು . ನಿಮಗೆ ಯುದ್ಧದಲ್ಲಿ ಖಂಡಿತ ಜಯ ಲಭಿಸಿಯೇ ಲಭಿಸುತ್ತದೆ. ಪ್ರತಿಯೊಬ್ಬರೂ ಅದಕ್ಕಾಗಿ ಮುಂದೆ ನುಗ್ಗುವ ಯೋಧರಾಗಿ . ಜಯಲಕ್ಷ್ಮಿ ತನ್ನ ಸಾವಿರಾರು ಕರಗಳಿಂದ ನಿಮಗೆ ಜಯಮಾಲೆ ಹಾಕಲಿ ಎಂದು ಹಾರೈಸುತ್ತೇನೆ!


* ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ವ್ಯವಸ್ಥೆಗೊಳಿಸಿದ್ದ ವಿಜ್ಞಾನಲೇಖಕರ ಮೊದಲ ಕಾರ್ಯಶಿಬಿರವನ್ನು ಉದ್ಘಾಟಿಸಿ ಮಾಡಿದ ಭಾಷಣ, ಮೈಸೂರು: ಜೂನ್ ೧, ೧೯೭೦.