ಇದೋ ವಾಗ್ದೇವಿಯ ಹರಕೆಯ ಶಿಶುವಾಗಿ ನಿನಗೆ ಕೈಮುಗಿದು ನಮಸ್ಕರಿಸಿ ಬಿನ್ನವಿಸುತ್ತೇನೆ: ನನ್ನ ನಮಸ್ಕರಕ್ಕಾದರೂ ನಿನ್ನ ‘ಅಲ್ಪತೆ’ ತೊಲಗಲಿ; ನಿನ್ನ ಹೃದಯದಲ್ಲಿ ‘ಭೂಮ’ ಚೇತನ ಉದ್ದೀಪನವಾಗಿ ತೊಳಗಲಿ; ಕನ್ನಡ ನುಡಿದೀವಿಗೆಯಿಂದ ನಾಡ ಬಾಳು ಬೆಳಗಲಿ! ನನ್ನ ನಮಸ್ಕಾರದಿಂದ ನಿನ್ನ ಆಹಂಕಾರವಳಿದು ಅಲ್ಲಿ ದೇವತ್ವ ಸಂಚಾರವಾಗುತ್ತದೆಂದು ನಂಬಿ ಭಗವತಿ ಶ್ರೀ ಸರಸ್ವತಿಯ ಈ ಹರಕೆಯನ್ನು ನಿನ್ನಲ್ಲಿ ಬಿನ್ನವಿಸುತ್ತಿದ್ದೇನೆ.

ಹೇ ರಾಜಕಾರಣಿ, ಹೇ ಮಂತ್ರಿವರೇಣ್ಯ, ಹೇ ಅಧಿಕಾರಿ ಸರ್ವೋತ್ತಮ, ಹೇ ವಣಿಗ್ವರ, ಹೇ ಶ್ರಮಜೀವಿ, ಹೇ ಅಧ್ಯಾಪಕ ಮಹಾಶಯ, ಓ ನೇಗಿಲ ಯೋಗಿ, ನೀನು ಯಾರೆ ಆಗಿರು, ಎಲ್ಲಿಯೆ ಇರು, ಕನ್ನಡವನ್ನು ಕೈಬಿಡದಿರು.

ನಾಳೆ ಎಂದರಾಗದು; ಮುಂದೆ ಎಂದಾರಗದು; ಇಂದೆ ನೀನು ನಿರ್ಣಯಿಸಬೇಕು. ಇಂದೆ ಎತ್ತಿ ಪೊರೆಯಬೇಕು. ಬೆಂಕಿಗೆ ಬಿದ್ದವರನ್ನು ನಾಳೆ ಎತ್ತುತ್ತೇನೆಂದರೆ ದೊರೆಯುವುದೇನು? ಬೂದಿಯಲ್ಲವೆ! ನೀರಿಗೆ ಬಿದ್ದವರನ್ನು ನಾಳೆ ಎತ್ತುತ್ತೇನೆಂದರೆ ಲಭಿಸುವುದೇನು? ಹೆಣವಲ್ಲವೆ!

ಇದು ನಿನ್ನ ಭಾಷೆ; ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯಭಾಷೆ; ಇದು ಮಹಾಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿದಾರ್ಶನಿಕರನ್ನೂ ಹಡೆದಿರುವ ಭಾಷೆ! ಏನೊ ನಡುವೆ ನಾಲ್ಕು ದಿನ ವಿಧಿ ಮುನಿಯೆ ಸಿರಿಯಳಿದು, ಮನೆ ಮುರಿಯೆ ಬೀದಿ ಸೇರಿದ ಮಾತ್ರದಿಂದ ನಿನ್ನತಾಯಿ ರಾಣಿಯಾಗಿದ್ದಳೆಂಬುದನ್ನು ಮರೆತುಬಿಡುವೆಯ? ಸ್ವತಂತ್ರನಾದಮೇಲೆಯೂ ಆಕೆಯನ್ನು ತೊತ್ತಾಗಿರಿಸುವೆಯ?

ಅನ್ಯಮೋಹಕ್ಕೆ ಇಂದು ಅಕಾಶವಿಲ್ಲ. ಮೀನಮೇಷಕೆ ಇದು ಸಮಯವಲ್ಲ. ಧೈರ್ಯವಿರಲಿ; ಶ್ರದ್ಧೆಯಿರಲಿ; ಮನಸ್ಸು ಚಂಚಲವಾಗದಿರಲಿ!

ಕನ್ನಡಕ್ಕಾಗಿ ಕೈಯೆತ್ತು; ನಿನ್ನಕೈ ಕಲ್ಪವೃಕ್ಷವಾಗುತ್ತದೆ! ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ! ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು ಇಂದು ಅದೆ ಗೋವರ್ಧನಗಿರಿಧಾರಿಯಾಗಿತ್ತದೆ.

ಇಂದು; ನಾಳೆಯಲ್ಲ. ತಿಳಿ, ತಿಳಿ! ತಿಳಿದು ಉಳಿ, ಇಲ್ಲ ಅಳಿ!
ಏಳ್! ಗೆಲ್ ! ಬಾಳ್ ! ಓಂ ಶಾಂತಿಃ ಶಾಂತಿಃ ಶಾಂತಿಃ


* ದೇಜಗೌ ಅವರ “ಕನ್ನಡಿಗರೆ, ಎಚ್ಚರಗೊಳ್ಳಿ!” ಎಂಬ ಪುಸ್ತಕಕ್ಕೆ ಬರೆದ ಮುನ್ನುಡಿ. ಮೈಸೂರು: ಮಾರ್ಚಿ ೨೦, ೧೯೫೧.