ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನಾನು ಸಲ್ಲಿಸಿರುವ ಸೇವೆಯನ್ನು ತಾವೆಲ್ಲರೂ ಔದಾರ್ಯದಿಂದ ಕಂಡು ಈ ಗೌರವ ಡಾಕ್ಟರೇಟ್ ಪದವಿಯನ್ನು ನೀಡುವ ಕೃಪೆ ಮಾಡಿರುವುದಕ್ಕಾಗಿ ತಮಗೆಲ್ಲರಿಗೂ ಅತ್ಯಂತ ಕೃತಜ್ಞತೆಯ ವಂದನೆಗಳನ್ನರ್ಪಿಸುತ್ತೇನೆ. ಈ ಗೌರವಕ್ಕೆ ಪಾತ್ರನಾದ ನಾನು ನಿಮಿತ್ತ ಮಾತ್ರನೆಂಬುದು ನನಗೆ ಗೊತ್ತಿದೆ. ವಾಸ್ತವವಾಗಿ ಇದು ದೇಶಭಾಷೆಗಳಿಗೆ ಸಲ್ಲುತ್ತಿರುವ ಗೌರವವಾಗಿದೆ. ಇದುವರೆಗೆ ತಮ್ಮತಮ್ಮ ಮನೆಗಳಲ್ಲಿಯೆ ಅತಿಥಿಗಳೆಂದು ಬಂದವರ ದುರಾಕ್ರಮಣಕ್ಕೆ ಸಿಕ್ಕಿ ದಾಸ್ಯದೈನ್ಯಗಳಿಗೆ ಭಾಜನವಾಗಿ ದಿಕ್ಕರಿಸಲ್ಪಟ್ಟಿದ್ದ ದೇಶ ಭಾಷಾ ಮಾತೆಯರೆಲ್ಲ ಮತ್ತೊಮ್ಮೆ ತಮ್ಮ ಯಾಜಮಾನ್ಯದ ಸಿಂಹಾಸನಕ್ಕೆ ಏರುತ್ತಿದ್ದಾರೆ ಎಂಬುದಕ್ಕೆ ಇಂದಿನ ಸಮಾರಂಭ ಒಂದು ಅಭಿಷೇಕ ಸಾಕ್ಷಿಯಾಗಿದೆ.

ಅಚಿರಪೂರ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ವಿಶ್ವ ವಿದ್ಯಾನಿಲಯವು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ವಿಶೇಷ ಅನುಭವ ಪಡೆದಿರುವ ಸಮರ್ಥರೊಬ್ಬರ ನೇತೃತ್ವಕ್ಕೆ ಅಧೀನವಾಗಿರುವುದು ಅತ್ಯಂತ ಸಮಾಧಾನದ ಮತ್ತು ಸಂತೋಷದ ಸಂಗತಿ. ಕನ್ನಡ ನಾಡಿನ ರಾಜಧಾನಿಯಲ್ಲಿ ಕನ್ನಡವೇ ಅಗ್ರಗಣ್ಯ ಮತ್ತು ಅಗ್ರಮಾನ್ಯ; ಆಡಳಿತ ಭಾಷೆಯಿಂದ ಹಿಡಿದು ಶಿಕ್ಷಣ ಮಾಧ್ಯಮದವರೆಗೂ ಸರ್ವಕ್ಷೇತ್ರಗಳಲ್ಲಿಯೂ ಸರ್ವಸ್ತರಗಳಲ್ಲಿಯೂ ಕನ್ನಡ ಭಾಷೆಗೇ ಅಗ್ರಸ್ಥಾನ – ಈ ಧ್ಯೇಯಗಳನ್ನು ದೂರದೃಷ್ಟಿಯಿಂದಲೂ ಮತ್ತು ಧೈರ್ಯದಿಂದಲೂ ಅವರು ಕಾರ್ಯಗತಗೊಳಿಸುತ್ತಾರೆ ಎಂದು ನಾನು ಸಂಪೂರ್ಣವಾಗಿ ಭರವಸೆ ಹೊಂದಿದ್ದೇನೆ.

ಭಾರತದಂತಹ ವೈವಿಧ್ಯಮಯವಾದ ವಿಶಾಲ ರಾಷ್ಟ್ರದ ದೊಡ್ಡ ದೊಡ್ಡ ಔದ್ಯೋಗಿಕ ನಗರಗಳೆಲ್ಲ ವೇಷ ಭೂಷಣ ಭಾಷೆ ಸಂಸ್ಕೃತಿ ಮೊದಲಾದವುಗಳಲ್ಲಿ ಸಂಕ್ಷಿಪ್ತ ಭಾರತಗಳೇ ಆಗಿರಬೇಕಾದುದು ಅನಿವಾರ್ಯ. ಕನ್ನಡನಾಡಿನ ರಾಜಧಾನಿಯಾದ ಬೆಂಗಳೂರು ನಗರವೂ ಅಂಥ ಒಂದು ಸಂಕ್ಷಿಪ್ತ ಭಾರತವೇ ಆಗಿದೆ. ಇಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಅಲ್ಪ ಸಂಖ್ಯಾತರಿರುವುದು ಸಹಜ. ಆ ಎಲ್ಲ ಭಾಷೆಗಳಿಗೂ ಸಲ್ಲಬೇಕಾದುದನ್ನು ಸಲ್ಲಿಸಬೇಕಾದುದು ನಮ್ಮ ಕರ್ತವ್ಯವಾದರೂ ಇಲ್ಲಿ ಕನ್ನಡವೇ ಸಾರ್ವಜನಿಕ ಕ್ಷೇತ್ರದ ಸಾರ್ವಭೌಮ ಭಾಷೆಯಾಗಿರಬೇಕಾಗುತ್ತದೆ; ಕನ್ನಡಕ್ಕೆ ಮೊದಲ ಮನ್ನಣೆ ಸಲ್ಲಬೇಕಾದದ್ದು ಅಗತ್ಯವಾಗುತ್ತದೆ.

ಈ ಮಾತು ಕನ್ನಡಿಗರಿಗೆ ಮಾತ್ರ ಅನ್ವಯಿಸುವುದಿಲ್ಲ. ಎಲ್ಲ ರಾಜ್ಯಗಳ, ಎಲ್ಲ ನಗರಗಳ ವಿಚಾರದಲ್ಲಿಯೂ ಇದೇ ಸೂತ್ರ ಆವಶ್ಯಕ. ಆಯಾ ರಾಜ್ಯದಲ್ಲಿ ಅಯಾ ರಾಜ್ಯಭಾಷೆಗಳೇ ಪ್ರಥಮ ಮತ್ತು ಪ್ರಧಾನ. ಬೆಂಗಳೂರಿನಲ್ಲಿ ಅನ್ಯ ಭಾಷೆಗಳನ್ನಾಡುವ ಜನರಿದ್ದಾರೆ ಎಂದರೆ ಅದು ನಮ್ಮ ಅತಿಥ್ಯದ ಔದಾರ್ಯವನ್ನು ಸೂಚಿಸುತ್ತದೆ; ಅದು ನಮಗೆ ಹೆಮ್ಮೆ ಹಾಗೂ ಗೌರವ. ಆದರೆ ಇದೇ ಕಾರಣದಿಂದಾಗಿ ಕನ್ನಡಕ್ಕೆ ನ್ಯಾಯವಾಗಿ ದೊರಕಬೇಕಾದ ಸ್ಥಾನಮಾನಗಳಿಗೆ ಯಾವ ಅಡಚಣೆಯೂ ಉಂಟಾಗಬಾರದು. ಮುಂಬಯಿನಲ್ಲೊ ಮದ್ರಾಸಿನಲ್ಲೊ ಅಥವಾ ಬೇರೆ ಇನ್ನೆಲ್ಲೊ ಕನ್ನಡಿಗರು ಹೋಗಿ ವಾಸಿಸುತ್ತಿದ್ದರೆ ಅವರ ಇರುವಿಕೆ ಆ ಪ್ರದೇಶದ ಭಾಷೆಯ ಪ್ರಗತಿಗೆ ತಡೆಯಾಗಬಾರದು. ಕನ್ನಡಿಗರು ಕನ್ನಡನಾಡಿನ ಹೊರಗಿದ್ದಾಗ ವೈಯಕ್ತಿಕವಾಗಿ ಕನ್ನಡಿಗರು, ಅಷ್ಟೆ. ಪ್ರಾದೇಶಿಕವಾಗಿ ಅವರು ತಾವು ಇರುವ ಪ್ರದೇಶದವರೇ. ಈ ಮಾತು ಕನ್ನಡ ನಾಡಿನಲ್ಲಿರುವ ಅನ್ಯ ಭಾಷೀಯರಿಗೂ ಅನ್ವಯವಾಗುತ್ತದೆ. ಅವರು ತಮ್ಮ ಮಾತೃಭಾಷೆಯ, ಪ್ರಾದೇಶಿಕ ಸಂಸ್ಕೃತಿಯ ದೃಷ್ಟಿಯಿಂದ ಯಾರೇ ಆಗಿರಲಿ ಇಲ್ಲಿ ಅವರು ಕನ್ನಡನಾಡಿನವರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಎಲ್ಲದರ ಪ್ರಗತಿಯಲ್ಲಿಯೂ ಅವರು ಭಾಗಿಗಳಾಗಿರಬೇಕು. ಅವರಿದ್ದಾರೆ ಎನ್ನುವುದು ಕನ್ನಡಕ್ಕೆ ಕಾಲ್ತೊಡಕಾಗಬಾರದು.

ಬೆಂಗಳೂರಿನಮತಹ ಮಹಾನಗರಗಳ ವಿಚಾರದಲ್ಲಿ ನಾವು ಈ ಮಾತನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಈ ಹಿನ್ನಲೆಯಲ್ಲಿ, ಕನ್ನಡನಾಡಿನ ರಾಜಧಾನಿಯಾದ ಬೆಂಗಳೂರಿನಲ್ಲಿ, ಅಲ್ಲಿನ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡಕ್ಕೆ ಯಾವ ಸ್ಥಾನವಿರಬೇಕೆಂದು ಯೋಚಿಸುವುದರಲ್ಲಾಗಲಿ ಚರ್ಚಿಸುವುದರಲ್ಲಾಗಲಿ ನನಗೆ ಯಾವ ಅರ್ಥವೂ ಕಾಣಿಸುವುದಿಲ್ಲ. ಕನ್ನಡ ಮಾತೃಭಾಷೆಯಲ್ಲದವರ ಶಿಕ್ಷಣಕ್ಕೆ ಇಲ್ಲಿ ಅವಕಾಶವನ್ನು ಕಲ್ಪಿಸುವುದು ನಮ್ಮ ಹೊಣೆಯಾದರೂ, ಕನ್ನಡವನ್ನು ಭಧ್ರಸ್ಥಾನದಲ್ಲಿರಿಸಬೇಕಾದುದು ಆದ್ಯ ಕರ್ತವ್ಯ. ಆ ಭದ್ರಸ್ಥಾನವು ಸಂಸ್ಥಾಪಿತವಾಗುವುದಕ್ಕೆ ಮುನ್ನ ಅದನ್ನು ಭಂಗಗೊಳಿಸುವ ಯಾವ ಕಾರ್ಯ ವ್ಯೂಹಕ್ಕೂ ಕೈಹಾಕದಿರುವುದು ಲೇಸು.

ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಕೇಂದ್ರ ವಿಶ್ವವಿದ್ಯಾನಿಲಯವನ್ನಾಗಿ ಪರಿರ್ತಿಸುವ ಯೋಜನೆಯ ಅಂಗವಾಗಿ ಅಲ್ಲಿ, ಸಂಪರ್ಕ ಭಾಷೆಯಾದ ಹಿಂದೀ ಮಾಧ್ಯಮದ ಪ್ರಸ್ತಾಪವೆತ್ತಿರುವುದನ್ನು ನಾನು ಮೊನ್ನೆ ಮೊನ್ನೆ ಪತ್ರಿಕೆಗಳಲ್ಲಿ ಓದಿದ್ದೇನೆ. ಅದೇನಾದರೂ ನಿಜವಾಗಿದ್ದ ಪಕ್ಷದಲ್ಲಿ ಅಚಾತುರ್ಯದ ನೀತಿಯೆಂದೇ ಭಾವಿಸುಬೇಕಾಗುತ್ತದೆ. ಇದು ಈ ಘಟ್ಟದಲ್ಲಿ ತುಂಬ ಅಪಾಯಕಾರಿ ಹಜ್ಜೆ ಎಂಬುದನ್ನು ನಾನು ಸ್ಪಷ್ಟಪಡಿಸಬೇಕಾಗಿದೆ. ನಾವು ಇನ್ನೂ ಇಂಗ್ಲಿಷಿನ ನೊಗದಿಂದಲೆ ಹೆಗಲು ಕಳಚಿಲ್ಲ; ಆಗಲೇ ಬೇರೊಂದು ನೊಗಕ್ಕೆ ಹೆಗಲು ಕೊಡಲು ಸಿದ್ಧರಾಗಿದ್ದೇವೆ. ಈ ದುರದೃಷ್ಟಕರ ಪರಿಸ್ಥಿತಿ ಕನ್ನಡನಾಡಿನಲ್ಲಲ್ಲದೆ ಬೇರೆ ಯಾವ ಕಡೆಯೂ ಇರಲಾರದು. ಕನ್ನಡಕ್ಕೆ ಎಂದೋ ದೊರೆಯ ಬೇಕಾಗಿದ್ದ ಗೌರವದ ಮನ್ನಣೆಯ ಸ್ಥಾನವನ್ನು ಕೊಡಲು ಇನ್ನೂ ಮೀನ ಮೇಷ ಎಣಿಸುತ್ತಿರುವ ನಾವು ಹಿಂದೀ ಮಾಧ್ಯಮದ ಬಗೆಗೆ ಕಾತರತೆ ತೋರುತ್ತಿರುವುದು ಒಂದು ಬಗೆಯ ವಿಪರ್ಯಾಸವೆ ಸರಿ. ಮುಂದೆ ಎಂದಾದರೂ ಹಿಂದೀ ಮಾಧ್ಯಮದ ತರಗತಿಗಳು ಬರಬಹುದು. ಆದರೆ ಕನ್ನಡ ನಮ್ಮ ಶಿಕ್ಷಣವನ್ನೂ ಸಮಸ್ತ ಜೀವನವನ್ನೂ ಸಂಪೂರ್ಣವಾಗಿ ಆವರಿಸಿಕೊಳ್ಳುವ ಮೊದಲೇ ಇದಕ್ಕೆ ಅವಕಾಶಕೊಡುವುದು ರಾಷ್ಟ್ರಘಾತಕವಾಗುತ್ತದೆ; ಅನೈಕ್ಯತೆಗೆ ದಾರಿಮಾಡಿ ಕೊಟ್ಟಂತಾಗುತ್ತದೆ. ಈ ದಿಸೆಯಲ್ಲಿ ಕನ್ನಡಿಗರ ಔದಾರ್ಯ ಸಲ್ಲಕ್ಷಣಗಳು ಅಸಹಾಯಕತೆಯಾಗಬಾರದು; ನಿರ್ವಿಣ್ಣತೆಯಾಗಬಾರದು.

ಕನ್ನಡ ನಾಡಿನ ವಿಶ್ವವಿದ್ಯಾನಿಲಯವಾದ ಈ ಬೆಂಗಳೂರು ವಿಶ್ವವಿದ್ಯಾನಿಲಯವು ಮೊದಲು ಈ ಪ್ರದೇಶದ ಆವಶ್ಯಕತೆಗಳನ್ನು ಗುರುತಿಸಿ ಈಡೇರಿಸಬೇಕು. ಈ ಭಾಗದ ಜನತೆಯ ಋಣ ತೀರಿಸಬೇಕು. ಅದು ಕನ್ನಡದಿಂದ ಮಾತ್ರ ಸಾಧ್ಯ; ಇನ್ನಾವ ಭಾಷೆಯಿಂದಲೂ ಸಾಧ್ಯವಿಲ್ಲ. ಫಲವಾಗಿ ವಿಶ್ವವಿದ್ಯಾನಿಲಯದ ಎಲ್ಲ ತರಗತಿಗಳಲ್ಲೂ ವ್ಯಾಪಕವಾಗಿ ಕನ್ನಡ ಮಾಧ್ಯಮ ಜಾರಿಗೆ ಬರಬೇಕು. ಮಾತೃಭಾಷೆಯ ಮೂಲಕವಾಗಿ ನಡೆಯುವ ಶಿಕ್ಷಣವೇ ಸರ್ವೋತೃಷ್ಟವಾದುದೆಂಬುದು ಎಂದೂ ಚರ್ಚೆಯ ವಿಷಯವಲ್ಲ. ಇನ್ನು ಭಾಷೆಯ ವಿಷಯವಾಗಿ ಹೇಳುವುದಾದರೆ, ನಾನು ಯಾವುದೇ ಭಾಷೆಯನ್ನು ಕಡ್ಡಾಯಮಾಡಿ ಎಂದು ಹೇಳುವುದಿಲ್ಲ. ಯಾವುದಾದರೂ ಎರಡು ಭಾಷೆಗಳನ್ನು ಆಯ್ದುಕೊಂಡು ಅಭ್ಯಾಸಮಾಡಲು ಅವಕಾಶವಿರಬೇಕೆಂಗುದಷ್ಟೇ ನನ್ನ ಅಪೇಕ್ಷೆ.

ಕಲಿಕೆಯ ಭಾಷೆಯಾಗಿ ಇಂಗ್ಲಿಷ್ ಬಲಾತ್ಕಾರದ್ದಾಗಿ ಉಳಿಯುವುದು ಬೇಡ. ಬೇಕೆಂದರೆ ನೂರಕ್ಕೆ ನೂರು ಜನರೂ ಅದನ್ನೇ ಆರಿಸಿಕೊಳ್ಳಲಿ; ಬೇಡವಾದರೆ ಒಬ್ಬನಿಗಾದರೂ ಅದನ್ನು ಬಿಡುವ ಅವಕಾಶವಿರಲಿ. ಇಂಗ್ಲಿಷನ್ನು ಬಲಾತ್ಕಾರದ ಸ್ಥಾನದಿಂದ ಐಚ್ಛಿಕಸ್ಥಾನಕ್ಕೆ ಇಳಿಸುವುದಷ್ಟೆ ಈಗ ಆಗಬೇಕಾದ ಕೆಲಸ. ಇಂಗ್ಲಿಷ್ ಬೇಡ ಎನ್ನುವವರ ಗುಂಪಿಗೆ ನಾನು ಸೇರಿದವನಲ್ಲ. ಆದರೆ ಯಾವುದೇ ಭಾಷೆಯನ್ನಾದರೂ ಯಾರಿಗೆ? ಎಷ್ಟು? ಏಕೆ? ಎನ್ನುವ ತತ್ವದ ಒರೆಗಲ್ಲಿಗೆ ಹಚ್ಚದೆ ಮುಂದುವರಿಯುವುದು ಕ್ಷೇಮವಲ್ಲ. ಬಲಾತ್ಕಾರದ ಅಂಶವಂತೂ ಪ್ರಜಾಸತ್ತೆಗೆ ಮಾರಕವಾಗುತ್ತದೆ.

‘ಜ್ಞಾನಂ ವಿಜ್ಞಾನಸಹಿತಂ’ ಎಂಬುದು ಈ ವಿಶ್ವವಿದ್ಯಾನಿಲಯದ ಧ್ಯೇಯೋಕ್ತಿಯಾಗಿದೆ. ವಿಜ್ಞಾನಕ್ಕೆ ಮೂಲಭೂತವಾದ ಮನೊಧರ್ಮ – ವೈಚಾರಿಕ ಬುದ್ಧಿ. ಅದನ್ನು ಜಾಗ್ರತಗೊಳಿಸಬೇಕಾದುದು ವಿಶ್ವವಿದ್ಯಾನಿಲಯಗಳ ಕರ್ತವ್ಯ. ಕಾರ್ಖಾನೆಗಳು, ವೈಜ್ಞಾನಿಕ ತಾಂತ್ರಿಕ ಸಂಸ್ಥೆಗಳು, ಸಂಶೋಧನಾಲಯಗಳು ಇವುಗಳಷ್ಟರಿಂದಲೇ ವಿಜ್ಞಾನ ಸಿದ್ಧಿಸುವುದಿಲ್ಲ. ಲೌಕಿಕ ಅಭ್ಯುದಯಗಳ ಸಾಧನೆಯಿಂದಲೇ ವೈಜ್ಞಾನಿಕ ದೃಷ್ಟಿ ಬೆಳೆದಂತಾಗುವುದಿಲ್ಲ. ವಿಚಾರ ಮತ್ತು ವಿಜ್ಞಾನಗಳು ಮನೋಬುದ್ಧಿಗಳನ್ನು ಸಂಪೂರ್ಣವಾಗಿ ಪ್ರವೇಶಿಸಿ ಪರಿವರ್ತಿಸಿದಾಗಲೆ ವೈಜ್ಞಾನಿಕ ದೃಷ್ಟಿಗೆ ಅರ್ಥ ಬರುವುದು. ಶತಶತಮಾನಗಳಿಂದ ನಮ್ಮಲ್ಲಿ ಬೆಳೆದು ಬಂದಿರುವ ಜಾತಿ ಮತ ಆಚಾರ ಸಂಪ್ರದಾಯಗಳ ಹೆಸರಿನಲ್ಲಿ ನಡೆಯುತ್ತಿರುವ ಮೌಢ್ಯಮೂಲವಾದ ಅವೈಜ್ಞಾನಿಕ ಘಟನೆಗಳು ನಮ್ಮ ಪ್ರಗತಿಗೆ ಕಂಟಕಪ್ರಾಯವಾಗಿದೆ. ಆದಷ್ಟು ಬೇಗ ನಾವು ಇವುಗಳಿಂದ ಪಾರಾಗಬೇಕು. ಇದು ವೈಜ್ಞಾನಿಕ ದೃಷ್ಟಿ, ವಿಚಾರಬುದ್ಧಿಗಳಿಂದ ಮಾತ್ರ ಸಾಧ್ಯವೆ ಹೊರತು ಲೌಕಿಕ ಪ್ರಯೋಜನಕಾರಿಯಾದ ವಿಜ್ಞಾನವಿದ್ಯೆ ಮತ್ತು ಯಂತ್ರವಿದ್ಯೆಗಳಷ್ಟರಿಂದಲೆ ನಡೆಯುತ್ತದೆಂದು ಭಾವಿಸವುದು ತಪ್ಪಾಗುತ್ತದೆ. ಪ್ರತ್ಯೇಕ ವಿಶ್ವವಿದ್ಯಾನಿಲಯವಾಗಿ ಅಸ್ತಿತ್ವಕ್ಕೆ ಬರುವುದಕ್ಕೆ ಮೊದಲಿನಿಂದಲೆ ವಿಜ್ಞಾನವಿದ್ಯೆಗೆ ಕೇಂದ್ರವಾಗಿದ್ದ ಬೆಂಗಳೂರು ವಿಶ್ವವಿದ್ಯಾನಿಲಯವು ನವದೃಷ್ಟಿ, ನವವಿಚಾರಗಳ ನೆಲೆಯಾಗಿ ತನ್ನ ಧ್ಯೇಯೋಕ್ತಿಯನ್ನು ಸಾರ್ಥಕಪಡಿಸಿಕೊಳ್ಳಲೆಂದು ನಾನು ಹಾರೈಸುತ್ತೇನೆ.

ಈ ವಿಶ್ವವಿದ್ಯಾನಿಲಯವು ನನ್ನದೇ ಎಂಬ ಅಭಿಮಾನ ನನಗಿದೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಯಾವ ವಿಶ್ವವಿದ್ಯಾನಿಲಯ ನನ್ನ ವಿದ್ಯಾಮಾತೆಯೂ ಕಾರ್ಯರಂಗವೂ ಆಗಿತ್ತೋ ಆ ವೈಸೂರು ವಿಶ್ವವಿದ್ಯಾನಿಲಯದ ಭಾಗವೇ ಆಗಿತ್ತು ಇದು, ನಿನ್ನೆ ಮೊನ್ನೆಯವರೆಗೆ. ಈ ವಿಶ್ವವಿದ್ಯಾನಿಲಯದ ಎರಡು ಮುಖ್ಯ ಕಾಲೇಜುಗಳಲ್ಲಿ ನಾನು ಕೆಲವು ವರ್ಷ ಅಧ್ಯಾಪಕನಾಗಿಯೂ ಕೆಲಸ ಮಾಡಿದ ನೆನಪು ಇನ್ನೂ ಹಸುರಾಗಿದೆ. ಈಗ ಈ ಗೌರವ ಡಾಕ್ಟರೇಟ್ ಪದವಿಯಿಂದ ನಾನು ಈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೂ ಆಗಿದ್ದೇನೆ. ಇದಕ್ಕೆಂತ ಹೆಚ್ಚಿನ ಸಂತೋಷ ಗೌರವ ಇನ್ನು ಯಾವುದಿದೆ?

ನನ್ನಲ್ಲಿ ತೋರಿದ ಈ ಗೌರವಕ್ಕಾಗಿ ನಾನು ತಮ್ಮೆಲ್ಲರಿಗೂ ಮತ್ತೊಮ್ಮೆ ಕೃತಜ್ಞತೆಗಳನ್ನರ್ಪಿಸುತ್ತೇನೆ.


* ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್. ಪ್ರಶಸ್ತಿಯನ್ನು ಸ್ವೀಕರಿಸಿ ಮಾಡಿದ ಭಾಷಣ. ಬೆಂಗಳೂರು: ಜನವರಿ ೮, ೧೯೬೯.