ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವದ ಅಂಗವಾಗಿ ಏರ್ಪಟ್ಟಿರುವ ಈ ಕನ್ನಡ ಲೇಖಕರ ಸಮ್ಮೇಳನಕ್ಕೆ ತಾವೆಲ್ಲ ಬಂದಿರುವುದಕ್ಕೆ ನನಗೆ ತುಂಬ ಸಂತೋಷವಾಗುತ್ತಿದೆ. ನಾಡಿನ ಲೇಖಕರನ್ನು ಒಂದು ವಿಶ್ವವಿದ್ಯಾನಿಲಯ ಆಹ್ವಾನಿಸಿ ಈ ಪ್ರಮಾಣದಲ್ಲಿ ಸಮಾರಂಭ ಏರ್ಪಡಿಸಿರುವುದು ಇದೇ ಮೊದಲೆಂದು ಕಾಣುತ್ತದೆ. ವಿಶ್ವವಿದ್ಯಾನಿಲಯ ಬೆಳೆಯಬೇಕಾದರೆ ಅದಕ್ಕೆ ಪ್ರಧಾನವಾಗಿ ಮೂರು ಅಂಗಗಳಿರಬೇಕೆಂದು ನಾನು ಹೇಳುತ್ತಲೆ ಇರುವುದುಂಟು: ಬೋಧನಾಂಗ, ಸಂಶೋಧನಾಂಗ, ಪ್ರಸಾರಾಂಗ.

ವಿಶ್ವವಿದ್ಯಾನಿಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಸಮರ್ಥವಾದ ಸುಪುಷ್ಟವಾದ ವಿದ್ಯೆಯನ್ನು ಎರೆಯುವುದು ಬೋಧನಾಂಗದ ಕರ್ತವ್ಯವಾದರೆ, ಈ ಬೋಧನೆಗೆ ಬೆನ್ನೆಲುಬಾಗಿರುವ ಸಂಶೋಧನಾಂಗದ ಕರ್ತವ್ಯವಾದರೆ, ಈ ಬೋಧನೆಗೆ ಬೆನ್ನೆಲುಬಾಗಿರುವ ಸಂಶೋಧನಾಂಗದ ಆದ್ಯಕರ್ತವ್ಯವೆಂದರೆ, ಅತೀತವಾದ ಜ್ಞಾನಲೋಕಗಳನ್ನು ನಮ್ಮ ಲೋಕಕ್ಕೆ ಇಳಿಸುವುದು; ಜ್ಞಾನದಿಗಂತಗಳನ್ನು ವಿಸ್ತರಿಸುವುದು. ಗಂಗೋತ್ರಿಯಂತೆ ಈ ಸಂಶೋಧನಾಂಗ. ಅಂದರೆ, ಎಲ್ಲಿಗೆ ದೇವಗಂಗೆ ಆ ಅತೀತಜೆ ಮತ್ತು ಅತೀತಗೆ ಅಪಗೆಯಾಗಿ ಇಳಿದುಬರುತ್ತಾಳೊ ಆ ಶಿಖರಸ್ಥಾನ ಎಂದು. ಆದ್ದರಿಂದಲೆ ಈ ಸಂಶೋಧನ ಕ್ಷೇತ್ರಕ್ಕೆ ‘ಮಾನಸ ಗಂಗೋತ್ರಿ’ ಎಂದು ಹೆಸರಿಟ್ಟದ್ದು. ಇದು ಬರಿಯ ಹೆಸರಲ್ಲ: ‘ಇಟ್ಟ ಹೆಸರೆ ಕೊಟ್ಟ ಮಂತ್ರ’. ಇಂಥ ಮಾನಸಗಂಗೋತ್ರಿಯಲ್ಲಿ ವ್ಯಕ್ತಿ ವ್ಯಕ್ತಿಗಳ ಮೂಲಕ ಅವತರಿಸಿ ಬರುವ ಜ್ಞಾನಗಂಗೆಯನ್ನು ಬೋಧನ ಪಾತ್ರಗಳಲ್ಲಿ, ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ವಿಶ್ವವಿದ್ಯಾನಿಲಯಗಳಿಗೆ ಬರಲಾರದ ನಾಡಿನ ಎಲ್ಲ ಜನತೆಗೂ ಪ್ರಸಾರಾಂಗದ ಮೂಲಕ ಹರಿಸುವುದೇ ಉದ್ದೇಶ.

ಆದರೆ, ವಿಶ್ವವಿದ್ಯಾನಿಲಯಗಳು ಮಾತ್ರವೆ ಜ್ಞಾನಂಗಂಗೋತ್ರಿಗಳಾಗಿವೆ ಎಂದರೆ ತಪ್ಪಾಗುತ್ತದೆ. ವಿಶ್ವವಿದ್ಯಾನಿಲಯಗಳ ಹೊರಗೆ ಇದ್ದು ನಾನಾ ಪ್ರಮಾಣದಲ್ಲಿ ಶಕ್ತಿ ಪಾತ್ರಗಳಾಗಿ ಪ್ರವಹಿಸುತ್ತಿರುವ ಚೇತನಗಳುಂಟು. ಪೂರ್ಣಪ್ರವಾಹದಂತೆ ಅಲ್ಲದಿದ್ದರು ಹೊಳೆಯಂತೆ, ನಾಲೆಗಳಂತೆ, ಕಿರುಕಾಲುವೆಗಳಂತೆ ಇರುವವರೂ ಉಂಟು. ವಿಶ್ವವಿದ್ಯಾನಿಲಯಗಳೂ ಮಾಡದ ಮಹತ್‌ಕಾರ್ಯವನ್ನು ಮಾಡುತ್ತಿರುವ ಸಂಘಸಂಸ್ಥೆಗಳುಂಟು. ಕಾರಂತರಂಥ ಪ್ರವಾಹೋಪಮ ವ್ಯಕ್ತಿಗಳನ್ನೆ ನೆನೆಯಬಹುದು: ನಾಗೇಗೌಡರು, ಚೆನ್ನಬಸಪ್ಪನವರು ಇತ್ಯಾದಿ ಮಹನೀಯರೂ ಇದ್ದಾರೆ. ಇಂಥವರೆನ್ನಲ್ಲ ವಿಶ್ವವಿದ್ಯಾನಿಲಯ ತನ್ನ ನಿಧಿಯನ್ನಾಗಿ ಮಾಡಿಕೊಳ್ಳಬೇಕು; ತನ್ನ ಪರಿಧಿಯಲ್ಲಿ ಸೇರಿಸಿಕೊಳ್ಳಬೇಕು. ಹಾಗೆ ಮಾಡದೆ ಮಡಿವಂತಿಕೆಯನ್ನು ತೋರಿದರೆ ಮಹಾ ನಷ್ಟವಾಗುವುದು ಖಂಡಿತ. ಹಾಗಾಗದಿರಲಿ; ಹಾಗಾಗದೆಂಬುದಕ್ಕೆ ಈ ಲೇಖಕ ಸಮ್ಮೇಳನವೆ ಸಾಕ್ಷಿ.

ನಾಡಿನ ಎಲ್ಲ ಲೇಖಕರೂ ಇಲ್ಲಿ ನೆರೆದಿಲ್ಲ. ಕನ್ನಡ ನಾಡಿನಲ್ಲಿ ಎಷ್ಟು ಲೇಖಕರಿಲ್ಲ! ನಾಲ್ಕರಲ್ಲೊಂದು ಪಾಲೊ, ಹತ್ತರಲ್ಲೊಂದು ಪಾಲೊ ಲೇಖಕರು ಇಲ್ಲಿ ನೆರೆದಿದ್ದೀರಿ. ಇಷ್ಟಾದರೂ ಪ್ರಮಾಣದಲ್ಲಿ ಮಾನಸಗಂಗೋತ್ರಿಯಲ್ಲಿ ಇಷ್ಟು ಬೇಗ ನಾಡಿನ ಲೇಖಕರು ಕೂಡುವುದು ಸಾಧ್ಯವಾಯಿತಲ್ಲ ಎಂದಷ್ಟೆ ತೃಪ್ತಿ. ಮಾನಸಗಂಗೊತ್ರಿಯ ಪ್ರಾರಂಭೋತ್ಸವ ಭಾಷಣಮಾಡುತ್ತಿದ್ದಾಗ, ಆಗ – ಐದಾರು ವರ್ಷದ ಹಿಂದೆ – ನೆರೆದಿದ್ದ ಸಭಾಸದರು ಇಲ್ಲಿ ಸೇರಿರುವ ಸಭಿಕರಲ್ಲಿ ಹತ್ತರಲೊಂದು ಪಾಲು. ಆ ದಿನ ನಾವು ಇಂಥ ದಿನವನ್ನು ಇಷ್ಟುಬೇಗ ಕಾಣಬಲ್ಲವೇ ಎಂದೆ ಆಶ್ಚರ್ಯವಾಗುತ್ತಿತ್ತು. ಮಾನಸಗಂಗೋತ್ರಿಯ ಈ ಕ್ಷೇತ್ರದಲ್ಲಿ ಕತೆಗಾರ. ಕಾದಂಬರಿಕಾರ, ನಾಟಕಕಾರಾದಿ ಕವಿ ಲೇಖಕರು ಹೀಗೆ ಕಲೆಯುತ್ತಾರೆಂದು ಕನಸು ಕಂಡು ಹಾರೈಸಿದ್ದೆ. ಈಗ ನಿಮ್ಮನ್ನೆಲ್ಲ ಕಂಡು ಕನಸು ನನಸಾಗಿ ನನಗೆ ಅತ್ಯಂತ ಸಂತೋಷವಾಗಿದೆ.

ಈ ರೀತಿಯ ಲೇಖಕ ಸಮ್ಮೇಳನವನ್ನು ಮೈಸೂರು ವಿಶ್ವವಿದ್ಯಾನಿಲಯ ಮಾತ್ರವೇ ಅಲ್ಲ ರಾಷ್ಟ್ರದ ಎಲ್ಲ ವಿಶ್ವವಿದ್ಯಾನಿಲಯಗಳೂ – ಅವುಗಳಲ್ಲಿ ಪ್ರಮುಖವಾದುವಾದರೂ – ನಡೆಸುವ ಯೋಗ್ಯ ಸಂಪ್ರದಾಯವನ್ನು ಆರಂಭಿಸಬೇಕು. ಮೈಸೂರು ವಿಶ್ವವಿದ್ಯಾನಿಲಯ – ಈ ಪ್ರಮಾಣದಲ್ಲಿ ಅಲ್ಲದಿದ್ದರೂ – ಇಂತಹ ಸಮ್ಮೇಳನಗಳನ್ನು ಮುಂದೆಯೂ ನಡೆಸುತ್ತದೆಂದು ಆಶಿಸುತ್ತೇನೆ.

ಲೇಖಕರು ಈ ಸಮ್ಮೇಳನದ ಅಂಗವಾಗಿ ನಡೆಯುವ ಕವಿಕೋಷ್ಠಿಯ ಅಧ್ಯಕ್ಷತೆವಹಿಸಬೇಕೆಂದು ನನ್ನನ್ನಿಲ್ಲಿಗೆ ಆಹ್ವಾನಿಸಿದರು. ಏನು ಮಾತನಾಡುವುದು ಕವಿಗೊಷ್ಠಿಯನ್ನು ಕುರಿತು? ಸಾಂಪ್ರದಾಯಿಕವಾದ ಮಾತುಗಳೀಗ ಅಗತ್ಯ ಎನಿಸುವುದಿಲ್ಲ. ನಮ್ಮ ಸುತ್ತಲೂ ಉರಿದೇಳುತ್ತಿರುವ ಸಮಸ್ಯೆಗಳತ್ತ ನಿಮ್ಮ ಗಮನ ಹರಿಸುವಂತಷ್ಟೆ ಮಾಡುವ ಉದ್ದೇಶ ನನ್ನದು. ಲೇಖಕರು ಜನತೆಗೆ ಈ ಎಲ್ಲ ಸಮಸ್ಯೆಯನ್ನೂ ವೈಜ್ಞಾನಿಕ ದೃಷ್ಟಿಯಿಂದ ಪರಿಭಾವಿಸಿ ಪ್ರಸಾರ ಮಾಡಬೇಕು. ಮೊನ್ನೆಯ ದಿವಸ ಆದ ಒಂದು ಚರ್ಚಾಸ್ಪರ್ಧೆಗೆ (ಶ್ರೀ ತಿ.ನಂ.ಶ್ರೀ. ಸ್ಮಾರಕ ಅಂತರ ಕಾಲೇಜು ಕನ್ನಡ ಚರ್ಚಾಸ್ಪರ್ಧೆಗೆ) ನಾನು ಈ ದೃಷ್ಟಿಯಿಂದಲೆ ಇಂಥದೊಂದು ವಿಷಯವನ್ನು ಕೊಟ್ಟಿದ್ದೆ: “ವೈಜ್ಞಾನಿಕ ದೃಷ್ಟಿ ಮತ್ತು ವೈಚಾರಿಕ ಬುದ್ಧಿ ಇವನ್ನಾಶ್ರಯಿಸಿ, ವರ್ಣಾಶ್ರಮಧರ್ಮ ಮತ್ತು ಜಾತಿ ಪದ್ಧತಿಯಂತಹ ಸಮಾಜ ವಿಚ್ಛಿದ್ರಕಾರಕವಾದ ನೀಚಭಾವನೆಗಳನ್ನು ತಿರಸ್ಕರಿಸಿ ವೇದಾಮತದರ್ಶನದ ವಿಶಾಲತತ್ವಗಳ ತಳಹದಿಯಮೇಲೆ ನಿಲ್ಲದಿದ್ದರೆ ಹಿಂದೂ ಧರ್ಮವು ಕ್ರಮೇಣವಾಗಿಯಾದರೂ ಸಂಪೂರ್ಣವಾಗಿ ವಿನಾಶಹೊಂದುತ್ತದೆ.”

ಇದು ಚರ್ಚೆಯ ವಿಷಯ ಮಾತ್ರವೆ ಅಲ್ಲ, ಸತ್ಯವೂ ಅಹುದು. ನಮ್ಮ ದೇಶವನ್ನು ‘ಸೆಕ್ಯುಲರ್’ ರಾಜ್ಯಾಂಗದ ಮೇಲೆ ಕಟ್ಟಿರುವ ನಾವು ಅವೈಜ್ಞಾನಿಕ ಮತ್ತು ಅವೈಚಾರಿಕವಾದ ಮೌಢ್ಯಗಳಿಗೆ ಹೇಗೆ ಈಡಾಗುತ್ತಿದ್ದೇವೆ ನೋಡಿದರೆ ವಿಷಾದವಾಗುತ್ತದೆ. ಈಗ ರಾಷ್ಟ್ರದಲ್ಲಿ ದಳ್ಳುರಿಯಾಗಿ ಭುಗಿಲೆದ್ದಿರುವ ಗೋಹತ್ಯಾ ಸಮಸ್ಯೆಯನ್ನೇ ತೆಗೆದುಕೊಳ್ಳಬಹುದು. ಗೋವುಗಳನ್ನು ಕೊಲ್ಲಬಾರದು; ಸರಿ. ಚೆನ್ನಾಗಿ ಸಾಕಲುಬಾರದೆ? ಜನಸಂಖ್ಯೆಯನ್ನು ಬಿಟ್ಟರೆ ನಮ್ಮಲ್ಲಿ ಗೋ ಸಂಖ್ಯೆಯೇ ಅಧಿಕ. ಆದರೆ ಫಲ? ಜನಗಳಂತೆಯೇ ದನಗಳೂ ಬಡಕಲು. ಸಾಕಲಾರದೆ ಬೀದಿಗಟ್ಟುತ್ತೇವೆ. ಬಡಕಲು ದನ ನರಳಿ ಸಾಯುತ್ತಿದ್ದರೂ ಗೋಹತ್ಯಾ ನಿಷೇಧಕ್ಕೆ ಚಳವಳಿ ಮಾಡುತ್ತೇವೆ. ಎಷ್ಟೋ ಅಂಥ ಮೂಳೆ ಚಕ್ಕಳದ ದಿಕ್ಕೆಟ್ಟ ದನಗಳಿಗೆ ಸಾವೇ ಮುಕ್ತಿಯಾಗಿರುತ್ತದೆ. ಮಹಾತ್ಮಾಗಾಂಧಿಯವರು ಅಹಿಂಸಾತತ್ವದ ಪ್ರವರ್ತಕರಾಗಿದ್ದರೂ, ಒಮ್ಮೆ ಒಂದು ಕರು ಮರಣಯಾತನೆ ಅನುಭವಿಸುತ್ತಿದ್ದುದನ್ನು ನೋಡಲಾರದೆ ಅದರ ಹಿತಕ್ಕಾಗಿ, ಬೇಗ ಸಾವುಂಟುಮಾಡುವ ಇಂಜೆಕ್ಷನ್ ಕೊಡಿಸುತ್ತಾರೆ ಅದಕ್ಕೆ. ಮೃತ್ಯು ಆಸನ್ನವಾಗಿ ಉಳಿಗತಿಯಿಲ್ಲದೆ ಸಂಕಟಪಡುತ್ತಿರುವ ಬಹುತೇಕ ನಮ್ಮ ಗೋವೃಂದಕ್ಕೆ ಗತಿಯೇನು? ಕಟುಕನ ಕತ್ತಿಯ ಕ್ರೌರ್ಯವೆ ಜಗದ್ಗುರುಗಳ ಕನಿಕರಕ್ಕಿಂತಲೂ ಅವುಗಳಿಗೆ ದಯಾಮಯವಾಗುತ್ತದೆ ಅಲ್ಲವೇ? ಹಾಲು ಕರೆದು ಬರಡಾಗಿ ಮುದಿಯಾದಮೇಲೆ ಹಣೆಗೆ ಕುಂಕುಮ ಹಚ್ಚಿಸಿಕೊಂಡು, ಹೊಟ್ಟೆಗಿಲ್ಲದೆ ಹೊಲದಲ್ಲಿ ಕಾಲುಗೆಟ್ಟು ಕಂಗಾಲಾಗಿಬಿದ್ದು, ಜೀವವಿರುವಾಗಲೆ ಕಾಗೆ ಹದ್ದುಗಳಿಂದ ಕೊಕ್ಕಿಸಿಕೊಳ್ಳುತ್ತಿರುವ ಗೋಮಾತೆಯರನ್ನು ಕೇಳಿ!

ಗೋಮಾಂಸ ಭಕ್ಷಣೆ ಮಾಡುವ ರಾಷ್ಟ್ರಗಳಲ್ಲಿ ಗೋವುಗಳನ್ನು ಹೇಗೆ ಸಾಕುತ್ತಾರೆ ಎಂಬುದನ್ನು ಚಿತ್ರದಲ್ಲಿ ನೋಡಿದ್ದೇನೆ: ಎಷ್ಟು ಪುಷ್ಟ, ಎಷ್ಟು ಹೃಷ್ಟವಾಗಿರುತ್ತವೆ ಅವು! ಹಸುಗಳನ್ನು ಪೂಜಿಸುವ ನಾವು ಹಾಲು ಕರೆದುಕೊಂಡ ಮೇಲೆ ಹಗ್ಗಕಳಚಿ ಬೀದಿಗೆ ಬಿಡುತ್ತೇವೆ. ಯಾವ ಕಾಂಪೌಂಡಿನ ಬಳಿಯೊ ಮತ್ತಾವ ಬೇಲಿಯ ಬಳಿಯೊ ಕತ್ತುಚಾಚಿ ಆ ಬಡಹಸು ತನ್ನ ಹೊಟ್ಟೆ ತುಂಬಬೇಕು. ಕಂಡವರು ಅದರ ಮುಖಕ್ಕೆ ಬಡಿದಟ್ಟುತ್ತಾರೆ. ಹಣೆಯ ಮೇಲೆ ಮಾತ್ರ ಕುಂಕುಮವಿರುತ್ತೆ. ಹೊಟ್ಟೆ ಬರಿದಾಗಿದ್ದರೂ! ಅದು ತೂರಾಡುತ್ತ ತಾರಾಡುತ್ತ ಬೀದಿ ಬಿಕಾರಿಯಾಗಿ ಅಲೆಯುತ್ತಿದ್ದರೂ!

ಪಟ್ಟಣಗಳಲ್ಲಿ ಹಸು ಎಮ್ಮೆ ಸಾಕಿರುವವರು ಹೇಗೆ ಅವುಗಳನ್ನು ಬೆಳಸಿರುತ್ತಾರೆಂಬುದನ್ನು ನೋಡಬೇಕು. ಆ ಎಮ್ಮೆ ಕರು ಹಾಕಿರುತ್ತೆ; ಮೂರು ಪಾವು ಹಾಲು ಕೊಡುವುದಾಗಿ ಗೌಳಿಗ ‘ವರ್ತನೆ’ ಮಾಡಿಕೊಂಡಿರುತ್ತಾನೆ; ಅದು ಕೊಡುವುದು ಎರಡೇ ಪಾವು. ಹಾಗೆಂದು ಗೊತ್ತಾದ ಮನೆಗೆ ಹಾಲು ಒಪ್ಪಿಸುವುದೆ? ಹೇಗಾದರೂ ಕೊಡದೆ ಇದ್ದರೆ ಹೇಗೆ! ಆತನೂ ಅಂತೂ ಹೇಗೊ, ಪಾಪ, ಅನುಸರಿಸುತ್ತಾನೆ. ಆದರೆ, ಆಗತಾನೆ ಹುಟ್ಟಿದ ಕರುವಿಗೆ ಹಾಲು? ಮೊದಲೆರಡು ದಿನ ಅದು ಚಂಗಚಂಗನೆ ಹಾರಾಡಿಕೊಂಡು ಬರುತ್ತದೆ; ಕೆಚ್ಚಲು ಉಣ್ಣಲು ಹೋದರೆ ಅದನ್ನು ಸಾಕಿದಾತ ಬಾಯಿ ಹಿಡಿದೆಳೆಯುತ್ತಾನೆ. ನಾಲ್ಕಾರು ದಿನದಲ್ಲೆ ಅದರ ನಡೆ ನಿಂತುಬಿಡುತ್ತದೆ. ಮನೆಯಲ್ಲೆ ಅದನ್ನು ಬಿಟ್ಟು ಬಂದರೆ ಎಮ್ಮೆ ಹಾಲು ಕೊಡುವಿದಿಲ್ಲ. ಮನೆಯಹಾಲಿಗೆ (ಅಂದರೆ, ಕೈಹಾಲಿಗೆ) ವರ್ತನೆ ಮನೆಯವರು ಒಪ್ಪುವುದಿಲ್ಲ. ಸರಿ. ಹೀಗಾಗಿ ಕರುವನ್ನು ಹೊತ್ತು ತರುತ್ತಾನೆ ಗೌಳಿಗ, ಕಡೆಗೆ ಅದೂ ಸಾಯುತ್ತದೆ. ಆದರೆ ಅದರ ಚರ್ಮ ಉಪಯೋಗಕ್ಕೆ ಬರುತ್ತದೆ. ಆ ಚಕ್ಕಳವನ್ನೆ ಸುಲಿಸಿ ಒಳಕ್ಕೆ ಹುಲ್ಲು ತುರುಕಿಸಿ ಒಂದಂಥದೆ ಕರುವಿನ ನೆನಪುಂಟುಮಾಡುವ ಆಕಾರ ಮಾಡಿಸಿ ಅದನ್ನೆ ಎಮ್ಮೆಯ ಮುಂದೆ ಹೊತ್ತು ತರುತ್ತಾನೆ. ಅದನ್ನು ನೋಡಿ ಎಮ್ಮೆಗೆ ಕರುವಿನ ನೆನಪೊ ಭ್ರಾಂತಿಯೊ ಉಂಟಾಗುತ್ತದೆ ಎಂಬಂತೆ ಕಾಣುತ್ತೆ. ಅದರಿಂದ ಒಂದಷ್ಟು ಹಾಲು ಇಳಿಸುತ್ತದೆ; ಗೌಳಿಗ ಹಿಂಡಿ ಕೊಳ್ಳುತ್ತಾನೆ. ತನ್ನ ಮುಂದಿನ ತೋರ್ಕೆಕರುವಿನ ಮೈನೆಕ್ಕುತ್ತಲೆ ಇರುವ ಎಮ್ಮೆಗೆ ಒಮ್ಮೆಲೆ ಕಾಣಿಸುತ್ತದೆ, ಆ ಕರುವಿನ ಮೈಯಿಂದೆಲ್ಲೊ ಹುಲ್ಲುತುಣುಕು ಇಣುಕುತ್ತಿರುವುದು! ಅದನ್ನೆ ನಾಲಗೆ ಚಾಚಿ ಎಟುಕಿಸಿ ತಿನ್ನುತ್ತದೆ ಎಮ್ಮೆ! ಅದಕ್ಕಾಶ್ಚರ್ಯವಿರಬೇಕು, ಇದೇನು ನನ್ನ ಕರುವಿನ ಹೊಟ್ಟೆಯಿಂದ ಹುಲ್ಲು ಹಿಂಡುತ್ತಿದೆಯಲ್ಲ; ಇದ್ದರೂ ಇರಬಹುದೆ, ಎಂದು. ಎಂಥ ದಾರುಣದೃಶ್ಯ ಅದು! ಹಣೆಗೆ ಕುಂಕುಮವಿಟ್ಟು ಹಸುವಿನ ಪೂಜೆ ಮಾಡುತ್ತೇವೆ, ಆಮೇಲೆ ಹಗ್ಗ ಕಳಚಿ ಬೀದಿಗೆ ಬಿಟ್ಟು ಬಿಡುತ್ತೇವೆ, ಎಂದು ಆಗಲೆ ಹೇಳಿದೆ. ನಿಃತ್ರಾಣವಾದ, ಮುದಿಯಾದ, ರೋಗಕಾರಣದಿಂದಲೊ ಹೊಟ್ಟೆಗಿಲ್ಲದೆಯೊ ದುರ್ಬಲವಾದ ಹಸು ಕಡೆಗೆ ಯಾವುದೊ ಹೊಲದಲ್ಲಿ ಅನಾಥವಾಗಿ ಸಾಯುತ್ತದೆ. ಅದೂ ಒಂದೇ ಬಾರಿಗಲ್ಲ. ಶಕ್ತಿಯುಡುಗಿ ಕಾಲು ಮುದುರಿ ಬಿದ್ದುಕೊಂಡಿತು ಹಸು ಎಂದೊಡನೆಯೆ ಆಕಾಶದಲ್ಲಿ ಹದ್ದು ರಣಹದ್ದು ಕಾಗೆಗಳು ಎಲ್ಲ ಗಸ್ತು ಸುತ್ತುವುದಕ್ಕಾರಂಭಿಸುತ್ತವೆ. ಹದ್ದುಗಳೊಂದಷ್ಟು ವಾಸಿ, ಹಸುವಿಗೆ ಪ್ರಾಣವಿರುವ ತನಕವೂ ಅವು ಅದನ್ನು ಮುಟ್ಟದೆ ಮೇಲೇ ಹಾರುತ್ತಿರುತ್ತವೆ. ಆದರೆ ಆ ಕಾಗೆಗಳಿಗೆ ಆ ದಡ್ಡತನವಿಲ್ಲವೇ ಇಲ್ಲ! ದಾಕ್ಷಿಣ್ಯವೂ ಇಲ್ಲ! ಕಾಲಬಳಿ ಬಾಲದ ಬುಡದಲ್ಲಿ, ಮುಖದ ಸಂದಿನಲ್ಲಿ, ಕೆಚ್ಚಲ ಹತ್ತಿರ ಕುಳಿತು ಕುಕ್ಕುವುದಕ್ಕೆ ಆಗಲೇ ಆರಂಭಿಸಿಬಿಡುತ್ತವೆ. ಆ ನಿರ್ಗತಿಕ ನಿಶ್ಯಕ್ತ ಪ್ರಾಣಿ, ಅಲುಗಲೂ ಆಗದಿರುತ್ತದೆ; ಕಿವಿಯನ್ನಷ್ಟೆ ಹಾಗೆ ಹೀಗೆ ಒಂದಷ್ಟು ಬೀಸುತ್ತದೆ. ಅದಷ್ಟರಿಂದಲೇ ಏನು ತಾನೆ ಅಂಜಿಯಾವು, ಆ ಮಾಂಸ ಕಾತರ ಖಗೇಂದ್ರರು! ಕಡೆಗೆ, ಸರಿ, ಹದ್ದುಗಳೂ ಎರಗುತ್ತವೆ. ಇದು ನಮ್ಮ ಗೋಭಕ್ತಿಯ ಪರ್ಯವಾಸನ!

ಗೋಹತ್ಯೆಯನ್ನು ಉಗ್ರವಾಗಿ ಮತೀಯವಾಗಿ ಪ್ರತಿಪಾದಿಸುತ್ತಿರುವವರು ತಿಳಿಯರು, ವೇದದ ಕಾಲ್ಲದಲ್ಲಿ ಗೋಹತ್ಯೆ ಮಂತ್ರಪೂತವಾಗಿಯೇ ನಡೆದಿತ್ತು ಎಂಬುದನ್ನು, ಮಂತ್ರವತ್ತಾಗಿಯೇ ನಡೆದಿತ್ತು ಎಂಬುದನ್ನು. ಅತಿಥಿಗೆ ಸಂಸ್ಕೃತದಲ್ಲಿ ಗೋಘ್ನ ಎಂದು ಹೇಳುತ್ತಿದ್ದರು. ಅಂದರೆ, ಅತಿಥಿಗೆ ಗೋವನ್ನುಣಬಡಿಸುವುದು ಇತ್ತೆಂದಾಯಿತು. ವಸಿಷ್ಠರಂಥ ಋಷಿಗಳೂ ಗೋಮಾಂಸ ತಿನ್ನುತ್ತಿದ್ದರೆಂಬುದನ್ನು ಒಂದು ಸಂಸ್ಕೃತ ನಾಟಕದಲ್ಲಿ (‘ಉತ್ತಮರಾಮ ಚರಿತ’ದಲ್ಲಿ) ಸೂಚಿಸಿದೆ. ಆಶ್ರಮದಲ್ಲಿ ಇಬ್ಬರು ವಟುಗಳು ಮಾತನಾಡುತ್ತಿರುವಾಗ ದೂರದಲ್ಲಿ ವೃದ್ದ ವಸಿಷ್ಠರು ಬರುತ್ತಿರುತ್ತಾರೆ. ಅದನ್ನು ಕಂಡೊಬ್ಬ ವಟು ಹೇಳುತ್ತಾನೆ, ‘ಹುಲಿ ಬರುತ್ತಿದೆ’ ಎಂದು. ಮತ್ತೊಬ್ಬ ವಟು ವಸಿಷ್ಠರನ್ನು ಕುರಿತು ಹಾಗೆಲ್ಲ ಹೇಳಬೇಡ ಎನ್ನುತ್ತಾನೆ. ಆದರೆ ವಸಿಷ್ಠರು ಹಾಗೇಕೆ ಆ ವಟುವಿಗೆ ಕಾಣಿಸಿಕೊಂಡರು ಎಂದರೆ, ಅವರು ಅತಿಥಿ, ಆಶ್ರಮಕ್ಕೆ ಬಂದಮೇಲೆ ಗೋಮಾಂಸ ಉಣಬಡಿಸಬೇಕು; ವೃದ್ಧರಾದ್ದರಿಂದ ಬೆಳದ ಗೂಳಿಯ ಮಾಂಸ ಹಲ್ಲಿಗೆ ಹರಿಯದಾಗಿ ಕರುವಿನ ಮಾಂಸವೇ ಮೃದು ಮತ್ತು ಸ್ವಾದುವಾಗಿರುತ್ತದೆ. ಹೀಗೆಂದರೆ ತಾವು ಸಾಕಿದ ಕರುವಿನ ಹತ್ಯೆ ಆಗುತ್ತದೆ – ಅಂತಲೆ, ಅಂತ ಅತಿಥಿ ಋಷಿಯಾದರೂ ಬ್ರಹ್ಮರ್ಷಿಯಾದರೂ ಹುಲಿಯಾಗಿ ಕಾಣುತ್ತಾನೆ ತರುಣ ವಟುವಿಗೆ. ಆದ್ದರಿಂದಲೇ ಅತಿಥಿ ಗೋಘ್ನ. ಯಜ್ಞಗಳಲ್ಲಿ ಗೋವನ್ನು ಮಂತ್ರವತ್ತಾಗಿ ಕೊಂದರು. ಕತ್ತರಿಸುವುದಕ್ಕೂ ಮಂತ್ರ. ಕೊಚ್ಚುವುದಕ್ಕೂ ಮಂತ್ರ. ಹೆಚ್ಚುವುದಕ್ಕೂ ಮಂತ್ರ. ಅಂತೂ ಗೋವಧೆ ಮಂತ್ರಮಯವಾಗಿ ಹೋಗಿತ್ತು.

ಗೊಪೂಜೆಮಾಡುವಾಗ ಭಾವಿಸುವುದುಂಟು, ಅದರ ಒಂದೊಂದು ಅಂಗದಲ್ಲೂ ಒಂದೊಂದು ವರ್ಗದ ದೇವತೆಗಳಿದ್ದಾರೆ ಎಂದು. ಹೊಲದಲ್ಲಿ ಬಿದ್ದು ಸಾಯುವ ಹಸುವಿನ ಮೈಯ ಯಾವ ಭಾಗದಲ್ಲೂ ಯಾವ ದೇವತೆಯೂ ಇಲ್ಲ ಎಂಬುದು ಕುಕ್ಕಿತಿನ್ನುವ ಆ ಕಾಗೆಗಳಿಗೆ ಗೊತ್ತು – ನಮ್ಮ ಅವೈಜ್ಞಾನಿಕ ಮೌಢ್ಯಕ್ಕೆ ಏನೆನ್ನಬೇಕು? ಹಸುವನ್ನು ಚೆನ್ನಾಗಿ ಸಾಕಲಾಗದಿದ್ದರೂ ಪೂಜೆ ಮಾತ್ರ ಮಾಡುತ್ತೇವೆ. ಕಾರಣ, ಅದೊಂದನ್ನೆ ಪೂಜಿಸುವುದರಿಂದಲೇ ಅದರ ಮೈಯೊಳಗಿರುವ ಮೂವತ್ತುಮೂರುಕೋಟಿ ದೇವತೆಗಳನ್ನೆಲ್ಲ ಪೂಜಿಸಿದಂತಾಗುತ್ತದೆ, ಎಂಬ ಸುಲಭ ಸಿದ್ಧಿಯ ಬಯಕೆ. ಸಮಾರಾಧನೆ ಮಾಡಿಸಲು ವೆಚ್ಚವಾಗುತ್ತದೆ. ಆದ್ದರಿಂದ ಒಂದುಹಿಡಿ ಅಕ್ಕಿಹಿಟ್ಟನ್ನು ಇರುವೆ ಗೂಡಿನ ಬಳಿ ಚೆಲ್ಲಿ ನೂರಾರು ಜೀವಿಗಳಿಗೆ ಒಮ್ಮೆಲೆ ಅನ್ನಸಂತರ್ಪಣೆ ಮಾಡಿಸಿದಂತಾಯಿತೆಂದು ತೃಪ್ತಿಪಟ್ಟುಕೊಳ್ಳುವ ರೀತಿ ಇದು.

ಈ ಗೋರಕ್ಷಾದೀಕ್ಷೆ ಇದ್ದಕಿಂದ್ದಂತೆಯೆ ಚುನಾವಣೆಗಳ ಕಾಲದಲ್ಲಿ ಉದ್ಭವಿಸುತ್ತದೆ! ಶ್ರೀಮತಿ ಇಂದಿರಾಗಾಂಧಿ ಹೇಳಿದ್ದು ಸರಿ: ‘ನಮ್ಮ ಜನಕ್ಕೆ ಐದು ವರ್ಷಕ್ಕೊಮ್ಮೆ ಈ ಗೋರಕ್ಷಾ ಬುದ್ಧಿ ಪ್ರಬಲವಾಗುತ್ತದೆ.’ ಮತವಳರ ಕೈಯಲ್ಲಿ ಗೋವು ಎಂಥ ಭಯಂಕರ ಅಸ್ತ್ರವಾಗುತ್ತಿದೆ?

ಇದೇ ಬಗೆಯ ಅವೈಜ್ಞಾನಿಕ ದೃಷ್ಟಿ ಕುಟುಂಬಯೋಜನೆಯ ವಿಚಾರದಲ್ಲೂ ಬೆಳೆದಿದೆ. ವಂಕಿಯನ್ನೊ ಅಪರೇಷನ್ನನ್ನೊ ಯಾರು ಯಾರು ಕೈಗೊಳ್ಳಬೇಕು? ಉತ್ತಮ ವರ್ಗದವರೇ? ಮಧ್ಯಮ ವರ್ಗದವರೇ? ಬಡ ಜನತೆಯೇ? ಶ್ರೀಮಂತರೇ? ಉತ್ತಮ ವರ್ಗದವರಿಗೆ ಅನಿಸುತ್ತದೆ, ತಾವಷ್ಟೇ ಜನನ ನಿಯಂತ್ರಣ ಮಾಡುವುದರಿಂದ ಹಾಗೂ ಉಳಿದವರೆಲ್ಲ ಹಾಗೆಯೇ ಅನಿಯಂತ್ರಿತವಾಗುಳಿಯುವುದರಿಂದ ಕಷ್ಟ ಪರಂಪರೆಯೇ ಉಂಟಾಗುತ್ತದಲ್ಲ ಎಂದು. ಮಧ್ಯಮವರ್ಗದವರಿಗೆ ಈ ನಿಯಂತ್ರಣದಿಂದ ತಮ್ಮ ವರ್ಗದ ಸಂತಾನವೆಲ್ಲ ಕ್ಷೀಣಿಸಿ ಉಳಿದ ಅಧಮವರ್ಗದ ಸಂತಾನವೇ ಯಥೇಚ್ಛವಾಗುತ್ತದಲ್ಲ ಎಂಬ ಭಯ; ರಾಷ್ಟ್ರವನ್ನೆಲ್ಲಾ ಅಂತಾಗಿ ಸಂಸ್ಕಾರಹೀನ ಕ್ಷೀಣ ಸಂತಾನವೇ ತುಂಬಿಕೊಳ್ಳುತ್ತದಲ್ಲ ಎಂಬ ಆತಂಕ; ರಾಷ್ಟ್ರೀಯ ಚಿಂತೆ: ಅವರಿಗೆ ತಾವೇ ರಾಷ್ಟ್ರದ ಸಂಸ್ಕೃತಿಯ ಜನಕರೆಂಬ ಭಾವನೆ. ದಲಿತರಿಗಾದರೂ ಮಕ್ಕಳೂ ಕೊಡುವವನೂ ದೇವರೆ! ಆದ್ದರಿಂದ ಈ ಕೃತಕ ನಿಯಂತ್ರಣದ ಯೋಚನೆಯಿಂದೇನೂ ಫಲವಿಲ್ಲ! ಶ್ರೀಮಂತರೆನ್ನುತ್ತಾರೆ, ತಮಗೇನೂ ನಿಯಂತ್ರಣದ ಅಗತ್ಯವೇ ಇಲ್ಲ ಎಂದು. ಮತ್ತೆ ಕೆಲವರೆನ್ನುತ್ತಾರೆ – ಇತರ ಮತೀಯರಾದ ಮಹಮದೀಯರು, ಕ್ಯಾಥೊಲಿಕ ಕ್ರಿಶ್ಚಿಯನ್ನರು ಈ ಜನನ ನಿಯಂತ್ರಣಕ್ಕೆ ಮತೀಯ ಕಾರಣದಿಂದ ಒಪ್ಪದಿರುವುದರಿಂದ, ಇನ್ನು ಕೆಲವೇ ವರ್ಷಗಳಲ್ಲೆ ಅವರ ಸಂಖ್ಯೆಯೇ ಬೆಳೆದು ನಾವೆ ಅಲ್ಪಸಂಖ್ಯಾತರಾಗಬೇಕಾಗುತ್ತದೆಂದು. ಅಂತೂ ಇದಕ್ಕೂ ರಾಜಕೀಯ, ಮತೀಯಬಣ್ಣ: ಎಂಥ ಅವೈಜ್ಞಾನಿಕ ಮೌಢ್ಯ ಆವರಿಸಿಕೊಂಡಿದೆ ನಮ್ಮನ್ನಿಂದು!

ಆದ್ದರಿಂದ ಸಾಹಿತಿಗಳ ಕರ್ತವ್ಯ ಈಗ ಇದು: ಇನ್ನು ಐವತ್ತು ವರ್ಷವಾದರೂ ನಾವು ಈ ಜನತೆಯನ್ನು ಅವೈಜ್ಞಾನಿಕತೆಯಿಂದ ಅವಿಚಾರಬುದ್ಧಿಯಿಂದ ಪಾರುಮಾಡಲು ಶ್ರಮಿಸುವುದು. ನಾವು ನಾಸ್ತಿಕರಾದರೂ ಚಿಂತೆಯಿಲ್ಲ, ಮತ ಭ್ರಾತಿಯ ಮತಮೌಢ್ಯಗಳ ವಿಷದಂಷ್ಟ್ರದಿಂದ ಪಾರಾಗಲೇಬೇಕು. ನಾವು ಬರೆಯುವುದು ಎಲ್ಲವೂ ಯಾವಾಗಲೂ ತ್ರಿಕಾಲಸಾಹಿತ್ಯವೇ ಆಗಬೇಕಿಲ್ಲ. ಮಾಡಬೇಕಾದ ಈ ಕಾರ್ಯವೇನೂ ಅಲ್ಪವಲ್ಲ, ಪ್ರಚಾರ ಸಾಹಿತ್ಯ ವಿಚಾರಸಾಹಿತ್ಯ ಇದ್ದಂತೆ ಇದೊಂದು ‘ಸಕಾಲ ಸಾಹಿತ್ಯ’. ಅಂದರೆ ಈ ಕಾಲಕ್ಕೆ ಅಗತ್ಯವಾದ ಸಾಹಿತ್ಯ ಈಗ ಬೇಕಾಗಿದೆ. ಬರಹಗಾರರು ಇತ್ತಕಡೆ ಗಮನಹರಿಸಬೇಕು.

ಕವಿಸಮ್ಮೇಲನದ ಅಧ್ಯಕ್ಷನಾಗಿರುವುದರಿಂದ ನಾನು ಒಂದು ಪದ್ಯ ಓದಬೇಕೆಂದು ವ್ಯವಸ್ಥಾಪಕರು ತಿಳಿಸಿದ್ದರು. ‘ತ್ರಿಕಾಲಸಾಹಿತ್ಯ’ಕ್ಕೆ ಸೇರಿದ ಕವಿತೆಯಲ್ಲದಿದ್ದರೂ ‘ಸಕಾಲ ಸಾಹಿತ್ಯ’ಕ್ಕೆ ಸೇರಬಹುದಾದ ಕವಿತೆಯೊಂದನ್ನು – ‘ಪ್ರೇತ – ಕ್ಯೂ’ ಎಂದು ಅದರ ಹೆಸರು – ಓದುತ್ತೇನೆ. ಅದು ಕುಟುಂಬಯೋಜನೆಯ ಪ್ರಸಂಗಕ್ಕೆ ಸಂಬಂಧಿಸಿದ್ದು. ಜನನ ನಿಯಂತ್ರಣಕ್ಕೆ ನಾನಾ ವಿಧಾನಗಳನ್ನು ಕಂಡುಹಿಡಿಯುತ್ತಿದ್ದಾರೆ. ಜೀವಾಗಮನ ದ್ವಾರಗಳನ್ನೆಲ್ಲ ಹೇಗೆಲ್ಲಾ ಮುಚ್ಚಬಹುದೊ ಅದನ್ನೆಲ್ಲ ಯೋಚಿಸುತ್ತಿದ್ದಾರೆ. ಕವಿಯಾದರೂ ಏನುಮಾಡಬಲ್ಲ? ಈ ಲೋಕದವರು ಅಡಚಣೆಗಳನ್ನು ಒಡ್ಡುತ್ತಲೆ ಇರುತ್ತಾರೆ. ಆದ್ದರಿಂದ, ಆ ಲೋಕದವರಿಗೇ ಅಪಿಲುಮಾಡುತ್ತನೆ, ಇವರ ತಂಟೆಯೆ ಬೇಡ ಎಂದು: ಜನ್ಮಧಾರಣಕಾತರರಾಗಿ ಕ್ಯೂ ನಿಂತಿರುವ ಆ ಜೀವಿಗಳನ್ನೆ ಕೇಳಿಕೊಳ್ಳುತ್ತಾನೆ:

ಯಾಕಿಂತು
ಕ್ಯೂ ನಿಂತು
ನುಗ್ಗುತಿರುವಿರಿ ಜನ್ಮಧಾರಣೆಗೆ,
ಓ ನತದೃಷ್ಟ ಜೀವಿಗಳಿರಾ?

ನಿಮಗೆ ಕಾಣುವುದಿಲ್ಲ?
ಭೂಮಿ ತುಂಬೆಲ್ಲ
ಜನಸಂಖ್ಯೆ ಏರಿ ಕಿಕ್ಕಿರಿದು ಮೀರಿ,
ಕಂಕಾಲ ಪಂಕ್ತಿ ಹೊಟ್ಟೆಗಿಲ್ಲ:

ಏನು ಅವಸರ ನಿಮಗೆ?
ಯಾವ ಗರ್ಭವೊ ಏನೊ?
ಯಾರ ಯೋನಿಯೊ ಏನೊ?
ಅಂತು ಹುಟ್ಟಿದರಾಯ್ತು ಭೂಮಿಯಲ್ಲಿ!
ಉಸಿರು ಕಟ್ಟಿಹುದೇನು ನಿಮಗೆ ಅಲ್ಲಿ?
ಗುಂಗುರು ಕ್ರಿಮಿಕೀಟ ಕುಲವ ಹೆರುವ ಅತ್ತಿಹಣ್ಣೆ
ನಾಚಿ ಸೋಲುವಂತೆ
ಕೋಟಿ ಕೋಟಿ ಕೋಟಿ ಕೋಟಿ
ನಿಮಿಷ ನಿಮಿಷಕೆ ಹುಟ್ಟಿ ಮುಲಗುಡುವ ಶಿಶುಸಂಖ್ಯೆಯಲ್ಲಿ,
ನಮಗೇ ಇಲ್ಲಿ
ಹೊಟ್ಟೆಗಿಲ್ಲದೆ, ವಿವಿಧ ಬಟ್ಟೆಗಳಲ್ಲಿ,
ಕೆರೆ ಕಟ್ಟೆ ಬಾವಿ ಇಲಿಪಾಷಾಣ ಫಾಲಿಡಾಲು
ತಿಗಣೆಔಷಧಿ ನೇಣುರುಳು ದಾರಿಗಳಲಿ ದಿನಾಲು
ನುಗ್ಗುತಿಹೆವಲ್ಲಾ ನಿಮ್ಮತ್ತ ಕಡೆಗೇ!?
ನೀವಿತ್ತ ಬರದಂತೆ ತಡೆಗಟ್ಟಲೆಂದು
ನೀವು ಐತರುವ ಕಂಡಿಗಳನೆಲ್ಲ ಅಡಕಲೆಂದು
ರಸಾಯನಿಕ ರಬ್ಬರುಂಗರ ಕಾಂಡಮಿತ್ಯಾದಿ
ಕೃತಕ ನಾನಾ ಉಪಾಯ ಸಾಧನಗಳಿಂದೆ,
ಸಂನ್ಯಾಸ ಬ್ರಹ್ಮಚರ್ಯ ಮೋಕ್ಷಾದಿ
ಆದರ್ಶದಾಕರ್ಷಣೆಯ ಬೋಧನೆಗಳಿಂದೆ
ಮಾನವರು ಕಟ್ಟುತಿಹ ಕಟ್ಟೆಗಳನೆಲ್ಲ
ಬಿರದೊಡೆದು ಕೊಚ್ಚಿ ಹೊನಲುಕ್ಕಿ
ನುಗ್ಗುತಿಹಿರಲ್ಲಾ ಇತ್ತ ಕಡೆಗೇ?!
ಅಯ್ಯಯ್ಯೊ
ಏನು ಬಂದಿದೆ ನಿಮಗೆ ಅಲ್ಲಿ ಆತಂಕ?
ಕಾದಿರದೆ ನಿಮಗಿಲ್ಲ ಘೋರತರ ನರಕ?

ಯಾಕಿಂತು
ಕ್ಯೂ ನಿಂತು
ನುಗ್ಗುತಿರುವಿರಿ ಜನ್ಮಧಾರಣೆಗೆ,
ಓ ನತದೃಷ್ಟ ಪ್ರೇತಗಳಿರಾ?

* * *


* ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣಮಹೋತ್ಸವ ಸಮಾರಂಭಗಳ ಅಂಗವಾಗಿ ನಡೆದ ಕನ್ನಡ ಲೇಖಕರ ಸಮ್ಮೇಳನದ ಕವಿಗೋಷ್ಟಿಯ ಅಧ್ಯಕ್ಷಸ್ಥಾನದಿಂದ ಮಾಡಿದ ಮುಕ್ತಾಯ ಭಾಷಣ ಮೈಸೂರು: ಡಿಸೆಂಬರ್ ೧೦, ೧೯೬೬.