ತಮ್ಮ ವಿಶ್ವಾಸ ಔದಾರ್ಯಗಳು ನನಗೆ ದಯಾಪಾಲಿಸಿರುವ ಈ ಗೌರವ ಡಾಕ್ಟರೇಟ್ ಪದವಿಯ ಮಹತ್ ಕೃಪೆಗಾಗಿ ನಾನು ತಮ್ಮೆಲ್ಲರಿಗೂ ಹೃತ್ಪೂರ್ವಕವಾದ ಕೃತಜ್ಞತೆಯನ್ನು ನಿವೇದಿಸುತ್ತೇನೆ. ಉತ್ತರಕರ್ಣಾಟಕದ ವಿದ್ಯಾ ಸಂಸ್ಕೃತಿ ಕೇಂದ್ರವಾದ  ಈ ನಗರಕ್ಕೆ ಸುಮಾರು ಎರಡು ವರ್ಷಗಳ ಹಿಂದೆಯೆ ನಾನು ಆಗಮಿಸಿ ಕರ್ಣಾಟಕ  ವಿಶ್ವವಿದ್ಯಾನಿಲಯದ ಈ ಗೌರವ ಪದವಿಯನ್ನು ಸ್ವೀಕರಿಸಬೇಕಾಗಿತ್ತು. ಆದರೆ ನಾನೇ ಕಾರಾಣವಾಗಿ ತಂದೊಡ್ಡಿದ ಕೆಲವು ಅಡೆತಡೆಗಳಿಂದ ಅದು ಮುಂದಕ್ಕೆ ಹೋಗಬೇಕಾಗಿ  ಬಂತು.

ಅದರ ಏನು ಏತಕ್ಕೆ ಎಂಬುದನ್ನು ಕುರಿತು ಎರಡು ಮಾತು ಆಡಿದರೆ ಅಪ್ರಕೃತವಾಗಲಾರದು. ಅಪ್ರಕೃತವಾಗುವುದಿರಲಿ, ಅದನ್ನು ಈ ಸಂದರ್ಭದಲ್ಲಿ ಜನತೆಗೆ ತಿಳಿಸಬೇಕಾದ್ದೂ ತುಂಬ ಪ್ರಕೃತವೂ ಅಗಿದೆ ಎಂದು ನನ್ನ ಅಭಿಪ್ರಾಯ ಆದ್ದರಿಂದ ನನಗೂ ವೈಸ್ ಛಾನ್ಸಲರ್ ಡಾ.ಪಾವಟೆಯವರಿಗೂ ನಡೆದ ಪತ್ರವ್ಯವಹಾರದ ಸಾರಾಂಶವನ್ನು ಇಲ್ಲಿ ಹೊರಗೆಡಹಲು ತಮ್ಮ ಅನುಮತಿ ಬೇಡುತ್ತೇನೆ.

ನಾನು ಪತ್ರ ಬರೆದೆ:

ಕರ್ಣಾಟಕ ವಿಶ್ವವಿದ್ಯಾನಿಲಯವು ನನ್ನನ್ನು ಗೌರವಿಸುತ್ತಿರುವುದಕ್ಕಾಗಿ ಕೃತಜ್ಞನಾಗಿದ್ದೇನೆ. ಅದರೆ ಈ ಗೌರವ ನನಗೆ ಯಾವ ಕಾರಣಕ್ಕಾಗಿ ಸಲ್ಲುತ್ತಿದೆಯೋ ಆ ಕಾರಣ ಅಥವಾ ಕಾರಣಗಳು ಇನ್ನೂ ತಮ್ಮ ಪರಿಪೂರ್ಣತೆಯನ್ನು ಸಾಧಿಸಿಲ್ಲ. ಆ ಪರಿಪೂರ್ಣತೆ ಸಾಧಿತವಾದ ಮೇಲೆ ಸಂತೋಷದಿಂದ ತಮ್ಮಲ್ಲಿಗೆ ಬಂದು ಗೌರವ ಪದವಿಯನ್ನು ಹೆಮ್ಮೆಯಿಂದ ಸ್ವೀಕರಿಸಿತ್ತೇನೆ. ಅಲ್ಲಿಯವರೆಗೆ ದಯವಿಟ್ಟು ತಡೆಯಿರಿ, ನಾನೆ ವೈಯಕ್ತಿಕವಾಗಿ ಹಾಜರಾಗಬೇಕು ಎಂಬ ಆಶಯವಿದ್ದ ಪಕ್ಷದಲ್ಲಿ. ಹಾಗಿಲ್ಲದ ಪಕ್ಷದಲ್ಲಿ ನನ್ನ ಗೈರುಹಾಜರಿಯಲ್ಲಿಯೆ ತಾವು ಗೌರವ ಪದವಿಯನ್ನು ದಯಪಾಲಿಸ ಬಹುದು.

ಡಾ. ಪಾವಟೆಯವರು ಹಾಗೆಲ್ಲ ಸುಲಭದಲ್ಲಿ ಸೋಲೊಪ್ಪಿಕೊಳ್ಳುವವರಲ್ಲ ಎಂಬುದು ನಿಮಗೆಲ್ಲ ಅನುಭವತಃ ಗೊತ್ತಿರಬೇಕಲ್ಲವೆ? ಈ ವಿಶ್ವವಿದ್ಯಾನಿಲಯದ  ಬೃಹದಾಕಾರದ ಮಹದ್ ಭವ್ಯ ಸೌಧಸ್ವರೂಪವೆ ಅದಕ್ಕೆ ಶೈಲಸಾಕ್ಷಿಯಾಗಿ ನಿಂತಿರುವುದನ್ನು ನಾವೆಲ್ಲ ಕಾಣುತ್ತಿದ್ದೇವೆ.

ಅವರು ಉತ್ತರ ಬರೆದರು, ವಿಶೇಷ ಘಟಿಕೋತ್ಸವವನ್ನಾದರೂ ಏರ್ಪಡಿಸುತ್ತೇವೆ; ನೀವು ಅನುಕೂಲಮಾಡಿಕೊಂಡು ಬರಲೇಬೇಕು ಎಂದು.

ನನ್ನ ಆಗಮನಕ್ಕೆ ನಾಲ್ಕು ಗುರುತರ ಉಪಾಧಿಗಳನ್ನೆ ಒಡ್ಡಿದ್ದೆ. ಒಟ್ಟುಗೂಡಿದ ನಾಡಿನ ಹೆಸರು ಅಧಿಕೃತವಾಗಿ ಕರ್ನಾಟಕ ಎಂದಾಗಬೇಕೆಂದೂ, ಸರ್ಕಾರ ಕನ್ನಡವನ್ನು ಅಧಿಕೃತಭಾಷೆಯೆಂದು ಘೋಷಿಸಬೇಕೆಂದೂ, ರಾಜ್ಯಾಂಗದ ಪ್ರಕಾರ ರಾಜ್ಯಪಾಲರ ನೇಮಕವಾಗಬೇಕೆಂದೂ ಮತ್ತು ವಿಶ್ವವಿದ್ಯಾನಿಲಯದ ಮಟ್ಟದಲ್ಲಿ, ಸದ್ಯಕ್ಕೆ ಇಂಗ್ಲೀಷಿನ ಜೊತೆಗೆ, ಪ್ರಾದೇಶಿಕ ಭಾಷೆಯೂ ಶಿಕ್ಷಣ ಮಾಧ್ಯಮವಾಗಬೇಕೆಂದು.

ಆ ಆಶೆಗಳು ಕೈಗೂಡುವ ನಿರೀಕ್ಷೆಯಲ್ಲಿ ಒಂದು ವರುಷವೇ ಕಳೆಯಿತು.

ಮರುವರ್ಷ ಮತ್ತೆ ಬಂದಿತು ಉಪಕುಲಪತಿಗಳ ಪತ್ರಃ ಸದ್ಯದ ರಾಜಕೀಯ ಪರಿಸ್ಥಿಯನ್ನೂ, ರಾಜಕಾರಣಿಗಳ ಗೊಂದಲಮಯ ಮನೋಧರ್ಮವನ್ನೂ ಗಮನಿಸಿದರೆ ನಿಮ್ಮ ಆಶೆಗಳ ನೆರವೇರಿಕೆ ಇನ್ನೆಷ್ಟುಕಾಲ ಕಾಯಬೇಕಾಗುತ್ತದೆಯೋ? ಆದ್ದರಿಂದ ನಿಮ್ಮ ಗೈರುಹಾಜರಿಯಲ್ಲಿಯೆ ನಮ್ಮ ವಿಶ್ವವಿದ್ಯಾನಿಲಯವು ನಿಮಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲು ನಿಶ್ಚಯಿಸಿದೆ ಎಂದು.

ಆದರೆ ಈ ಸಾರಿ ನಾನು ಅದಕ್ಕೆ ಸಿದ್ಧನಿರಲಿಲ್ಲ.

ಅಷ್ಟು ಹೊತ್ತಿಗಾಗಲೆ ನನ್ನ ನಾಲ್ಕು ಆಶೆಗಳಲ್ಲಿ ಎರಡು ಈಡೇರಿದ್ದುವು. ಕರ್ಣಾಟಕದ ಏಕೀಕೆರಣಕ್ಕೆ ರಾಜಕೀಯ ಭೂಮಿಕೆಯಲ್ಲಿ ದುಡಿದ ಹಿರಿಯ ವ್ಯಕ್ತಿಗಳಲ್ಲಿ ಅಗ್ರಮಾನ್ಯರಾಗಿರುವ ಶ್ರೀ ನಿಜಲಿಂಗಪ್ಪನವರು ಮುಖ್ಯ ಕರ್ಣಧಾರರಾಗಿ ಸರಕಾರದ ಸೂತ್ರಗಳನ್ನು ಕೈಗೆ ತೆಗೆದುಕೊಂಡ ತರುವಾಯ, ರಾಜ್ಯಾಂಗದ ಪ್ರಕಾರ ರಾಜ್ಯಪಾಲರ ನೇಮಕವಾಗಿ ಕನ್ನಡ ಅಧಿಕೃತ ಭಾಷೆ ಎಂದು ಘೋಷಿಸಿತವಾಗಿತ್ತು. ಪ್ರಾದೇಶಿಕ ಭಾಷೆಯ ಶಿಕ್ಷಣ ಮಾಧ್ಯಮವೂ ಅರ್ಧಂಬರ್ಧವಾಗಿ ತೇಪೆ ತೇಪೆಯಾಗಿ ಕೈಗೂಡುವ ಹಾದಿ ಹಿಡಿದಂತೆ ತೋರುತ್ತಿತ್ತು. ರಾಜ್ಯದ ಹೆಸರಿನ ವಿಷಯ ಮಾತ್ರ ವಿಧಾನ ಸಭೆಯ ಟಕ್ಕಾಟಿಕ್ಕಿಯಲ್ಲಿ ಅಧಿವೇಶನದಿಂದ ಅಧಿವೇಶನಕ್ಕೆ ಜೋಲಿ ಹೊಡೆಯುತ್ತಿತ್ತು, ಪಕ್ಷ ವಿಪಕ್ಷಗಳ ಕ್ರೀಡಾ ಸ್ಪರ್ಧೆಯೆಂಬಂತೆ.

ನಾನು ಡಾ.ಪಾವಟೆಯವರಿಗೆ ಬರೆದ ಮರು ಉತ್ತರದಲ್ಲಿ ಅವರು ಅಷ್ಟೊಂದು ನಿರಾಶರಾಗಬಾರದೆಂದೂ, ನಮ್ಮ ಆಶೆಗಳಲ್ಲಿ ಎರಡು ತಕ್ಕ ಮಟ್ಟಿಗೆ ಪೂರ್ಣವಾಗಿವೆಯೆಂದೂ, ಒಂದು ಕೈಗೂಡುವ ದಾರಿಯಲ್ಲಿ ಅರೆಬರೆಯಾದರೂ ಸಾಗಿದೆಯೆಂದೂ, ಇನ್ನೊಂದೂ ಇಂದೊ ನಾಳೆಯೊ ಕೈಗೂಡುವುದರಲ್ಲಿ ಸಂದೇಹವಿಲ್ಲವೆಂದೂ, ಸ್ವಲ್ಪ ಸಾವಧಾನವಾದರೂ ಚಿಂತೆಯಿಲ್ಲ, ಇನ್ನೊಂದು ವರ್ಷವಾದರೂ ಕಾದು ನೋಡುವ ಅವಕಾಶ ಕೊಡಬೇಕಂದೂ ಕ್ಷಮಾಯಾಚನೆ ಮಾಡಿದೆ.

ಅಷ್ಟರಲ್ಲಿ ದುರದೃಷ್ಟವಶಾತ್ ಭಾರತ ರಾಷ್ಟ್ರದ ಅಸ್ತಿಸ್ವವನ್ನೆ ಅಲುಗಾಡಿಸುವಂತಹ ಪೀಡಾಕರ ಕ್ಷೋಭೆಗಳು ತಮ್ಮ ಕರಾಳ ಛಾಯೆಗಳಿಂದ ಸಮಗ್ರ ದೇಶಜೀವನವನ್ನೆ ಮುಸುಗಿ ಉತ್ತರ ಪಶ್ಚಿಮ ದಿಗಂತಗಳಲ್ಲಿ ಭಯಂಕರವಾಗಿ ಕಾಣಿಸಿಕೊಂಡು ಮೇಲ್ವಾಯ ತೋಡಗಿದುವು. ಜೋತೆಗೆ ರಾಷ್ಟ್ರದ ಜೀವಸ್ವರೂಪದಂತಿದ್ದ ನಾಯಕತ್ವವನ್ನೂ ವಿಧಿ ಕಸಿದುಕೊಂಡು ನಮ್ಮನ್ನು ದುಃಖ ಸಾಗರದಲ್ಲಿ ಮುಳುಗಿಸಿಬಿಟ್ಟಿತು. ರಕ್ಷಣೆ ಮತ್ತು  ಆಹಾರದಂತಹ ಅತ್ಯಂತ ಪ್ರಮುಖ ಸಮಸ್ಯೆಗಳಿಂದಲೂ ರಾಷ್ಟ್ರ ಜೀವನ ತಾಡಿತವಾಗಿ ತತ್ತರಿಸಿತು. ಸಮಗ್ರ ರಾಷ್ಟ್ರಜೀವನದ ಸಾವು ಬದಿಕಿನ ಪ್ರಶ್ನೆಯ ಮುಂದೆ ನಮ್ಮ ಈ ಸಣ್ಣಪುಟ್ಟ ಆಶಾ ಸಮಸ್ಯೆಗಳೆಲ್ಲ ಬಾಲ ಮುದುರಿಕೊಂಡು ಮೂಲೆ ಸೇರಲೆಬಾಕಾಯಿತು.

ನಾನು ಒಳಗೊಳಗೆ ತುಸು ಹರ್ಷದಿಂದಲೆ ಭಾವಿಸಿದ್ದೆ, ಸದ್ಯಕ್ಕೆ ಡಾ.ಪಾವಟೆಯವರು ಗೌರವ ಪದವೀಪ್ರದಾನ ಸಮಾರಂಭವನ್ನು ಕೈಬಿಟ್ಟಿರಬೇಕು ಎಂದು. ಆದರೆ ಒಂದುದಿನ ಕರ್ಣಾಟಕ ವಿಶ್ವವಿದ್ಯಾನಿಲಯದ ದೃಢಮನಸ್ಸಿನ ಉಪಕುಲಪತಿಗಳ ಸುದೃಢ ವಿಗ್ರಹ ಮೈಸೂರಿನ ನಮ್ಮಮನೆ ‘ಉದಯರವಿ’ ಯಲ್ಲಿಯೆ ಪ್ರತ್ಯಕ್ಷವಾಯಿತು. ಒಂದೆರಡು ಘಂಟೆಯ ಕಾಲದ ಮಾತುತತೆಯಲ್ಲಿ ಅವರ ಸರಳತೆ, ಅವರ ವಿಶ್ವಾಸ, ಅವರ ಹೃತ್ಪೂರ್ವಕ ಪ್ರೇಮ, ಅವರ ಅದಮ್ಯ ಶ್ರದ್ಧೆ ಇವುಗಳು ನನ್ನ ಸಂಕಲ್ಪದ ನಿಷ್ಠುರತೆಯನ್ನು ಪಳಗಿಸಿದುವು. ಆ ಅಹೇತುಕವಾದ ಅಕ್ಕರೆಗೆ ನಾನು ಸೋಲದಿರಲು ಸಾಧ್ಯವಾಗಲಿಲ್ಲ. ಯಾರ ಅವಿರಾಮ ಶ್ರಮದಿಂದ, ಯಾರ ಅಚಂಚಲ ನಿಷ್ಠೇಯಿಂದ, ಯಾರ ಬಹುವರ್ಷಗಳ ಶ್ರದ್ದಾಮಯ ತಪಸ್ಯೆ ಮತ್ತು ವ್ಯವಹಾರ ಚಾತುರ್ಯಗಳಿಂದ ಕರ್ಣಾಟಕ ವಿಶ್ವವಿದ್ಯಾನಿಲಯದಂತಹ ಸಹ್ಯಾಚಲಸ್ಪರ್ಧಿಯಾದ ಮಹಾಸಂಸ್ಥೆ ಕಟ್ಟಲ್ಪಟ್ಟು ಅಭಿವೃಧ್ಧವಾಗಿ ಕೀರ್ತಿ ಶಿಖರಸ್ಥಾಯಿಯಾಗಿದೆಯೋ ಅಂತಹ ಮಹಾನುಭಾವರು ಉಪಕುಲಪತಿ ಸ್ಥಾನದಲ್ಲಿರುವಾಗ ಅವರ ಕೈಯಿಂದ ಗೌರವ ಪದವಿಯನ್ನು ಗೈರುಹಾಜರಿಯಲ್ಲಿ ಪಡೆಯುವ ದೌರ್ಭಾಗ್ಯಕ್ಕೆ ನನ್ನ ಮನಸ್ಸು ಒಪ್ಪಲಿಲ್ಲ. ಧಾರವಾಡಕ್ಕೆ ಬಂದು ವಿಶೇಷ ಘಟಿಕೋತ್ಸವದಲ್ಲಿ ಗೌರವಪದವಿಯನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ ಎಂದು ಮಾತು ಕೊಟ್ಟಮೇಲೆಯೆ ಅವರು ‘ಉದಯರವಿ’ಯ ಮೆಟ್ಟಿಲಿಳಿದರು.

ಅದರ ಪರಿಣಾಮವಾಗಿ ನಾನು ಇಂದು ಇಲ್ಲಿಗೆ ಬಂದಿದ್ದೇನೆ. ತಾವು ಉತ್ಸಾಹಪೂರ್ವಕವಾಗಿ ನೀಡಿದ ಗೌರವವಾದರಗಳ ಶ್ರೀಭಾರಕ್ಕೆ ನನ್ನ ಶಿರಸ್ಸು ಧನ್ಯತೆಯನ್ನು ಅನುಭವಿಸುತ್ತಿದ್ದರೂ ದೈನ್ಯದಿಂದ ಬಾಗುತ್ತಿದೆ; ವಿಶ್ವವಿದ್ಯಾನಿಲಯ ಭಗವತಿ ಶ್ರೀ ಸರಸ್ವತಿಯ ಅಡಿದಾವರೆಯ ಕೃಪೆಗೆ ಹಣೆಯಿಟ್ಟು ನಮಿಸುತ್ತಿದೆ.

ವಿಶ್ವವಿದ್ಯಾನಿಲಯಗಳು ಅಣೆಕಟ್ಟುಗಳಂತಲ್ಲ; ಕಾಗದದ, ಉಕ್ಕಿನ ಅಥವಾ ಹೆಂಚಿನ ಕಾರ್ಖಾನೆಗಳಂತಲ್ಲ. ಅವುಗಳಿಂದ ಸಿದ್ದವಾಗುವ ತಯಾರಿಕೆಗಳನ್ನು ಕಾರ್ಖಾನೆಯ ಸಿದ್ಧ ಪದಾರ್ಥಗಳನ್ನು ಪರೀಕ್ಷಿಸುವಂತೆ ಪರಿಶೀಲಿಸಿ ಬೆಲೆಕಟ್ಟುಂವಂತಿಲ್ಲ. ಅವುಗಳಿಂದ ಹೊರಬೀಳುವ ವಸ್ತುಗಳ ಸಜೀವವಾದುವು; ಸಚೇತನವಾದುವು. ಒಂದೊಂದೂ ತನ್ನ ವಿಶಿಷ್ಟತೆಯಿಂದ ನಿರುಪಮವಾದುದು. ಸರ್ವಕ್ಕೂ ಸರ್ವ ಸಾಧಾರಣವಾದ ಕೆಲವು ಅಂಶಗಳು ಅನಿವಾರ್ಯವಾಗಿ ಇರುತ್ತವೆಯಾದರೂ, ಸಮಷ್ಟಿಯ ಐಕ್ಯತೆಯ ದೃಷ್ಟಿಯಿಂದ ಅವು ಇರಬೇಕಾದುದ್ದು ಅತ್ಯಂತ ಅವಶ್ಯಕವೆ ಆದರೂ, ಅವು ಹೇಂಚುಗಳಂತಾಗಲಿ ಉಕ್ಕಿನ ಉಪಕರಣಗಳಂತಾಗಲಿ ಕಾಗದದಂತಾಗಲಿ ಸರ್ವಸಮವಾಗಿರಲು ಸಾಧ್ಯವಿಲ್ಲ. ಜಡದಿಂದ ಭಿನ್ನವಾದ ಚೈತನ್ಯದ ಲಕ್ಷಣಗಳನ್ನು ಪರಿಭಾವಿಸುವ ಪಕ್ಷದಲ್ಲಿ, ಸರ್ವ ಸಮತ್ವ ಎಂಬುದು ಅವುಗಳಿಗೆ ಸಾವಿಗಿಂತಲೂ ಹೀನತರವಾಗದ ನೀರಸ ಸ್ಥಿತಿಯಾಗುತ್ತದೆ. ಅದರಲ್ಲಿಯೂ ವ್ಯಕ್ತಿಯ ವ್ಯಕ್ತಿತ್ವವನ್ನು ಪರಮ ಮೌಲ್ಯಗಳಲ್ಲಿ ಒಂದನ್ನಾಗಿ ಪರಿಗಣಿಸುವ ಪ್ರಜಾಸತ್ತೆಯಲ್ಲಂತೂ ವೃಷ್ಟಿಯ ವಿಶಿಷ್ಟತೆಗೆ ಸಮಷ್ಟಿಯ ಸಾಧಾರಣತೆಗೆ ಇರುವಷ್ಟೆ ಗೌರವ ಸಲ್ಲುತ್ತದೆ. ಆದ್ದರಿಂದ ಸಮಷ್ಟಿಯ ಕ್ಷೇಮವನ್ನು ಕಾಪಾಡುವ ಆತುರದಲ್ಲಿ ವ್ಯಷ್ಟಿಯನ್ನು ಬಲಿಗೊಟ್ಟು ವ್ಯಕ್ತಿಯ ವಿಶಿಷ್ಟತೆಯನ್ನು ನಿರ್ಲಕ್ಷಿಸಿದರೆ ಪ್ರಜಾಸತ್ತೆಯ ಬುಡಕ್ಕೆ ಕೊಡಲಿಯಿಟ್ಟಂತಾಗುತ್ತದೆ. ಹಸುರಾಗಿ, ವರ್ಣಮಯವಾಗಿ ವ್ಯವಿದ್ಯ ಸೌಂದರ್ಯಗಳಿಂದ ಕೂಡಿ ಕಂಗೊಳಿಸುವ ರಮಣೀಯ ಕಾನನಕ್ಕೆ ಬದಲಾಗಿ ನಿರ್ವಿಶಿಷ್ಟವೂ ಸರ್ವಸಮವೂ ನಿರ್ಜೀವವೂ ನೀರಸವೂ ಆಗಿರುವ ಕಟ್ಟಿಗೆಯ ರಾಶಿ ಸಿದ್ಧವಾಗುತ್ತದೆ.

ಸರ್ವಸಮರೂಪದ ವಸ್ತುಗಳನ್ನು ತಯಾರಿಸುವ ಮಹಾಕಾರ್ಖಾನ ಗಳನ್ನೂ ಯಂತ್ರೋಪಕರಣ ನಿರ್ಮಾಣದ ಬೃಹದ್ ಯಂತ್ರಸ್ಥಾವರಗಳನ್ನೂ ಮತ್ತು ಯಾವ ವಿಶಿಷ್ಟತೆಯನ್ನೂ ಅಪೇಕ್ಷಿಸದ ಶುದ್ಧ ವೈಜ್ಞಾನಿಕ ಸಂಸ್ಥೆಗಳನ್ನೂ ಸ್ಥಾಪಿಸುವಾಗ ನಾವು ಅಖಿಲ ಬಾರತಕ್ಕೂ ಸರ್ವಸಾಧಾರಣವಾದ ರೀತಿ, ನೀತಿ ಮತ್ತು ಧ್ಯೇಯಗಳನ್ನು ಅನುಸರಿಸುವಂತೆ ವಿಶ್ವವಿದ್ಯಾನಿಲಯಗಳ ಸ್ಥಾಪನೆಯಲ್ಲಾಗಲಿ ಸಂಚಾಲನೆಯಲ್ಲಾಗಲಿ ಅನುಸರಿಸಿದರೆ ತಪ್ಪಾಗುತ್ತದೆ. ವ್ಯಷ್ಟಿಯ ವಿಶಿಷ್ಟತೆಯ ವಿಧ್ವಂಸನದಿಂದಲೆ ಸ್ಥಾಪಿತವಾಗುವ ಆ ಐಕ್ಯತೆ ಮರುಭೂಮಿಯ ಅಚೇತನ ಏಕರೂಪವಾಗುತ್ತದೆಯೆ ಹೊರತು ಅನೇಕ ವಿಧವಾದ ರಾಗಗಳಿಂದ ಸುಮಧುರವಾಗುವ ಸಂಗೀತದಂತೆ ಸಚೇತನ ಸುಸ್ವರಮೇಲವಾಗುವುದಿಲ್ಲ.

ಅಖಿಲ ಭಾರತದ ಸಮಗ್ರತೆಯ ಮತ್ತು ಭಾವೈಕ್ವದ ಸಾಧನೆಗಾಗಿ ಬೇರೆ ಬೇರೆಯ ಭಾಷಾ ಪ್ರದೇಶಗಳಲ್ಲಿ ಮತ್ತು ರಾಜ್ಯಗಳಲ್ಲಿ ಇರುವ ಮತ್ತು ಮುಂದೆ ಬರುವ ಎಲ್ಲ ವಿಶ್ವವಿದ್ಯಾನಿಲಯಗಳೂ, ಒಂದರಂತೆ ಒಂದು, ಅಚ್ಚೊತ್ತಿದಂತೆ ಇರಬೇಕು ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಕಾರ್ಖಾನೆಯ ರೂಪದ ಮತ್ತು ತಾಂತ್ರಿಕ ಲಕ್ಷಣದ ಶುದ್ಧ ವೈಜ್ಞಾನಿಕ ಸಂಸ್ಥೆಗಳಿಗೆ ಆ ತತ್ವ ಅನ್ವಯವಾಗುವುದರಲ್ಲಿ ಅರ್ಥವಿದೆ. ವಿಶ್ವವಿದ್ಯಾನಿಲಯಗಳಲ್ಲಿಯೂ ಶುದ್ಧ ವಿಜ್ಞಾನ ವಿಷಯಕವಾದ ವಿಭಾಗಗಳಿಗೂ ಅದು ಬಹುಮಟ್ಟಿಗೆ ಅನ್ವಯವಾಗುತ್ತದೆ. ಆದರೆ ಭಾಷಾ ಸಾಹಿತ್ಯ ಸಂಸ್ಕೃತಿ ದರ್ಶನ ಇತಿಹಾಸಾದಿ ಹೃದಯ ಸಂಸ್ಕಾರ ಮತ್ತು ಬುದ್ಧಿ ವಿಚಾರಗಳಿಗೆ ಸಂಬಂದಪಟ್ಟ ಮಾನವೀಯ ಶಾಸ್ತ್ರ ಭಾಗಗಳಿಗೆ ಆ ಯಾಂತ್ರಿಕತ್ವ ಒಂದಿನಿತೂ ಅನ್ವಯವಾಗುವುದಿಲ್ಲ. ವ್ಯಕ್ತಿರೂಪದ ವ್ಯಷ್ಟಿಯ ವ್ಯಕ್ತಿತ್ವಕ್ಕೂ ಮತ್ತು ಹೃದಯ ಬುದ್ಧಿ ಸಂಸ್ಕಾರಗಳಿಗೂ ವೈಜ್ಞಾನಿಕ ವಿಷಯಗಳಿಗೆ ಇಲ್ಲದ ಒಂದು ವಿಶಿಷ್ಟತೆ ಇರುತ್ತದೆ. ಆ ವೈಶಿಷ್ಟ್ಯದ ಪಾಲನೆ, ರಕ್ಷಣೆ, ಪೊಷಣೆ, ಸಂಶೋಧನೆ ಮತ್ತು ಪ್ರಸಾರ ಇವು ಆಯಾ ಭಾಷಾ ಪ್ರದೇಶದ ರಾಜ್ಯಗಳಲ್ಲಿರುವ ವಿಶ್ವವಿದ್ಯಾನಿಲಯಗಳ ಆದ್ಯಕರ್ತವ್ಯವಾಗಿರಬೇಕು. ಆ ವಿಚಾರದಲ್ಲಿ ಔದಾಸಿನ್ಯ ಸಲ್ಲದು. ತಿರಸ್ಕಾರವಂತೂ ಅಕ್ಷಮ್ಯ ಜನತಾದ್ರೋಹವಾಗುತ್ತದೆ.

ಭಾಷಾನುಗಣವಾಗಿ ರಾಜ್ಯಗಳನ್ನು ವಿಂಗಡಿಸಿದಾಗಲೇ ನಮ್ಮ ಪ್ರಜಾಸತ್ತಾತ್ಮಕವಾದ ರಾಜ್ಯಾಂಗ ಈ ಪ್ರಾದೇಶಿಕ ವ್ಯಶಿಷ್ಟ್ಯವನ್ನು ಕಾನೂನುಬದ್ಧವಾಗಿಯೆ ಗುರುತಿಸಿದಂತಾಗಿದೆ. ಆದ್ದರಿಂದ ಆಯಾ ಭಾಷಾ ಪ್ರದೇಶದ ರಾಜ್ಯಗಳಲ್ಲಿರುವ ವಿಶ್ವವಿದ್ಯಾನಿಲಯಗಳು ಆಯಾ ಪ್ರದೇಶದ ಭಾಷಾ ಸಾಹಿತ್ಯ ಕಲಾ ಸಂಸ್ಕೃತಿಗಳಿಗೆ ವಿಶೇಷ ಪ್ರೋತ್ಸಾಹವಿಯುವುದು ಅತ್ಯಗತ್ಯ. ಏಕೆಂದರೆ ಆಯಾ ಪ್ರಾದೇಶಿಕ ವಿಶ್ವವಿದ್ಯಾನಿಲಯಗಳು ಆ ಕೆಲಸವನ್ನು ಕೈಕೊಳ್ಳದಿದ್ದರೆ ಪ್ರಪಂಚದ ಇನ್ನಾವ ವಿದ್ಯಾಸಂಸ್ಥೆಗಳೂ ಅದನ್ನು ಕೈಕೊಳ್ಳುವುದಿಲ್ಲ. ಕರ್ಣಾಟಕದಲ್ಲಿರುವ ವಿಶ್ವವಿದ್ಯಾನಿಲಯಗಳು ಕನ್ನಡ ನುಡಿಯ, ಸಾಹಿತ್ಯದ, ಇತಿಹಾಸದ, ಕಲೆಯ ಮತ್ತು ಸಂಸ್ಕೃತಿಯ ರಕ್ಷಣೆ ಪೋಷಣೆಗಳನ್ನು ನಿರ್ಲಕ್ಷಿಸಿದರೆ ಅದು ಕಡಲ ಪಾಲಾದಂತೆಯೆ. ಇಂಗ್ಲಿಷ್ ಭಾಷೆ ತನ್ನ ಅಭಿವೃದ್ಧಿಗೆ ಕರ್ಣಾಟಕ ಅಥವಾ ಮೈಸೂರು ವಿಶ್ವವಿದ್ಯಾನಿಲಯಗಳ ಕೈ ಹಾರೈಸುವುದಿಲ್ಲ. ಜಗತ್ತಿನ ಇತರ ಸಾವಿರಾರು ಸಂಸ್ಥೆಗಳಲ್ಲಿ ಅದು ಸುಪುಷ್ಟವಾಗಿ ಮುಂದುವರಿದೇವರಿಯುತ್ತದೆ; ಭೌತ ರಸಾಯನಾದಿ ವಿಜ್ಞಾನ ವಿಷಯಗಳ ಸಂಶೋಧನೆ ಇಲ್ಲಿ ನಡೆಯದಿದ್ದರೆ ಜಗತ್ತಿನ ಇತರ ಲಕ್ಷಾಂತರ ಸಂಸ್ಥೆಗಳಲ್ಲಿ ಅದು ನಡೆಯುತ್ತಲೆ ಇರುತ್ತದೆ. ಹಿಂದಿಗೆ ಅದರ ಏಳಿಗೆಗಾಗಿ ಇಲ್ಲಿ ನಾವು ಪ್ರೋತ್ಸಾಹವೀಯಬೇಕಾಗಿಲ್ಲ; ಭಾರತದ ಸಾವಿರಾರು ಇತರ ಕಡೆಗಳಲ್ಲಿ ಅದು ರಕ್ಷಿತ ಪೋಷಿತವಾಗುತ್ತಿದೆ. ಕಡೆಗೆ ಉರ್ದುವಿನಂತಹ ಭಾಷೆಗಿರುವ ಆ ರಕ್ಷೆ ನಮ್ಮ ಕನ್ನಡಕ್ಕಾಗಲಿ, ಮರಾಠಿ, ತಮಿಳು, ಮಲೆಯಾಳಗಳಿಗಾಗಲಿ ಇಲ್ಲ. ಪಾಕಿಸ್ಥಾನದ ಮಾತಿರಲಿ, ಭಾರತದಲ್ಲಿಯೆ ಇರುವ ನಾಲ್ವತ್ತೈವತ್ತು ವಿಶ್ವವಿದ್ಯಾನಿಲಯಗಳಲ್ಲಿ ಒಂದೊಂದು ವಿಶ್ವವಿದ್ಯಾನಿಲಯದಲ್ಲಿಯೂ ಅದಕ್ಕೆ ಅಯಾ ಪ್ರಾದೇಶಿಕ ಭಾಷೆಗಳಿಗಿರುವಂತೆಯೆ ಸಮಾನಸ್ಥಾನ ಒದಗಿ, ಒಟ್ಟು ಮೊತ್ತದಲ್ಲಿ ನೋಡಿದರೆ ಅದಕ್ಕೆ ಪ್ರಾದೇಶಿಕ ಭಾಷೆಗಳಿಗೆ ಲಭಿಸುವ ಪ್ರೋತ್ಸಾಹಕ್ಕೆ ನಾಲ್ವತ್ತೈವತ್ತರಷ್ಟು ಹೆಚ್ಚಿನ ಪ್ರೋತ್ಸಾಹ ಒದಗುತ್ತದೆ. ಕನ್ನಡಕ್ಕೆ ಕನ್ನಡ ನಾಡಿನಲ್ಲಿ ಹೆಚ್ಚು ಎಂದರೆ ಮೂರು ನಾಲ್ಕು ವಿಶ್ವವಿದ್ಯಾನಿಲಯ ಮಟ್ಟದ ಪ್ರಾಧ್ಯಪಕ ಸ್ಥಾನಗಳಿದ್ದರೆ ಉರ್ದು ಹಿಂದಿಯಂತಹ ಭಾಷೆಗಳಿಗೆ ಭಾರತದಲ್ಲಿಯೆ ನಾಲ್ವತ್ತೊ ಐವತ್ತೊ ಪ್ರಾಧ್ಯಾಪಕ ಸ್ಥಾನಗಳು ಮೀಸಲಾಗಿರುತ್ತವೆ. ಇನ್ನು ಇಂಗ್ಲಷಿನಂತಹ ಭಾಷೆಗಳಂತೂ ಕೇಳುವುದೇ ಬೇಡ. ಪ್ರಪಂಚದಲ್ಲಿ ಅದಕ್ಕೆ ಲಕ್ಷಾಂತರ ಪ್ರಾಧ್ಯಾಪಕ ಸ್ಥಾನಗಳಿವೆ. ಇರಲಿ, ನಮಗೇನೂ ಹೊಟ್ಟೆಕಿಚ್ಚಿಲ್ಲ. ಒಂದು ನಿದರ್ಶನಕ್ಕಾಗಿ ಅಂಕೆ ಅಂಶಗಳ ರೂಪದಲ್ಲಿ ನಾನು ಅದನ್ನು ಉಲ್ಲೇಖಿಸುತ್ತಿರುವುದರ ಉದ್ದೇಶ ಅಸೂಯೆಯಿಂದ ಸಂಭವಿಸಿದ್ದು ಎಂದು ಯಾರೂ ಭಾವಿಸಬಾರದು; ನಮ್ಮ ಪ್ರಾದೇಶಿಕ ವಿಶ್ವವಿದ್ಯಾನಿಲಯಗಳು ತಮ್ಮ ಪ್ರಾದೇಶಿಕ ಭಾಷೆ ಸಾಹಿತ್ಯ ಇತಿಹಾಸ ಕಲಾ. ಸಂಸ್ಕ್ರತಿಗಳನ್ನು ನಿರ್ಲಕ್ಷಿಸಿದರೆ, ಅವುಗಳಿಗೆ ವಿಶೇಷ ಗಮನ ನೀಡಿ ಪ್ರೋತ್ಸಾಹಿಸದಿದ್ದರೆ ಅವಕ್ಕೆ ಉಳಿಗತಿಯಿಲ್ಲ; ಬೇರೆ ಯಾರೂ ಅವನ್ನು ಮೂಸಿಯೂ ನೋಡುವುದಿಲ್ಲ. ಅವು ದುರ್ಗತಿಗಿಳಿದು, ಅವಮಾನಿತವಾಗಿ ಇತರ ಸಶಕ್ತ ಮತ್ತು ಪ್ರಗತಿರರ ಭಾಷೆಗಳಿಟ್ಟ ಧಾಳಿಗೆ ಸಿಕ್ಕಿ, ಹೇಳ ಹೆಸರಿಲ್ಲದಂತೆ ವಿಲುಪ್ತವಾಗುತ್ತದೆ ಎಂಬ ಕಠೋರ ಸತ್ಯವನ್ನು ತಮ್ಮ ಗಮನಕ್ಕೆ ತರುವ ಆಶಯದಿಂದಲೆ ಈ ಕೆಲಸ ಮಾಡಿದ್ದೇನೆ: “ಏಳಿ! ಎಚ್ಚರಗೊಳ್ಳಿ! ಇಲ್ಲದಿದ್ದರೆ ಅನಂತಕಾಲವೂ ಪತಿತರಾಗಿ ಸರ್ವನಾಶವಾಗಿ ಹೋಗುತ್ತೇವೆ!”

ಈ ಪ್ರಾದೇಶಿಕತೆಯ ವೈಶಿಷ್ಟ್ಯದ ರಕ್ಷಣೆಯಿಂದ ಅಖಿಲ ಭಾರತದ ಸಮಗ್ರತೆಗೂ ಐಕ್ಯತೆಗೂ ಹಾನಿ ಉಂಟಾಗುತ್ತದೆ ಎಂದು ಗೊಂದಲವೆಬ್ಬಿಸುವವರ ಹೃದಯದಲ್ಲಿರುವ ಗುಟ್ಟು ಏನು ಎಂಬುದನ್ನು ನಾವು ಹೊಕ್ಕು ನೋಡಿದರೆ ಆದರ ಹೊಳ್ಳು ಹೊರದೋರುತ್ತದೆ. ಅದರ ದುರುದ್ದೇಶ ಬಯಲಾಗುತ್ತದೆ. ಹಾಗೆ ಕೂಗಾಡುವರ ಒಲವೆಲ್ಲ ಸಾಮಾನ್ಯಗಾಗಿ ವಿದೇಶೀ ಭಾಷಿಯೊಂದರ ಪರವಾಗಿರುತ್ತದೆ. ಅವರೂ ಆ ವರ್ಗಕ್ಕೆ ಸೇರಿದವರೂ ಪರಕೀಯ ಆಳರಸರ ಕಾಲದಲ್ಲಿ ಆ ಭಾಷೆಯನ್ನು ಕಲಿತು ಅದರಿಂದ ಸ್ಥಾನಮಾನ ಲಾಭಗಳನ್ನು ಪಡೆದು ಕೃತಕೃತ್ಯರಾಗಿದ್ದಾರೆ. ಆ ಸ್ಥಾನ ಮಾನ ಲಾಭಗಳನ್ನು ಇನ್ನು ಮುಂದೆಯೂ ಉಳಿಸಿಕೊಂಡು ಹೋಗಲೂ, ಈಗಾಗಲೆ ಕಷ್ಟಪಟ್ಟು ಕಲಿತಿರುವ ಆ ಭಾಷೆಯನ್ನು ಮುಂದಯೂ ಮೊದಲಿನಂತೆಯೆ ಉಪಯೋಗಿಸುವಂತೆ ಮಾಡಿ, ಇತರರಿಗಿಂತ ಮುನ್ನವೆ ಸುಭಧ್ರವಾಗಿ ನೆಲಸಿ, ಅದರ ಲಾಭ ಪ್ರಯೋಜನ ಪಡೆಯಬೇಕೆಂದೂ ಅವರ ಅಂತರರಾಷ್ಟ್ರೀಯತಾ ವಾದದ ಹಿಂದಿರುವ ಹೃದಯರಹಸ್ಯವಾಗಿರುತ್ತದೆ. ಸಂಖ್ಯೆಯಲ್ಲಿ ನೋರಕ್ಕೆ ಒಂದರಷ್ಟೂ ಇಲ್ಲದ ಆ ವರ್ಗದ ಜನರಿಗೆ ಉಳಿದ ತೊಂಬತ್ತೊಂಬತ್ತರಷ್ಟು ಸಾಮಾನ್ಯ ಜನರ ಕ್ಷೇಮ ಚಿಂತನೆ ಬೇಡವಾಗಿದೆ.

ಆದರೆ ನಿಜವಾಗಿ ಆಲೋಚಿಸಿ ನೋಡಿದರೆ, ಈ ಪ್ರಾದೇಶಿಕ ವ್ಯಶಿಷ್ಟ್ಯದ ರಕ್ಷಣೆಯಿಂದ ಅಖಿಲ ಭಾರತೀಯ ಐಕ್ಯತೆಗೆ ಒಂದಿನಿಂತೂ ವ್ಯಾಘಾತ ಒದಗುವುದಿಲ್ಲ ಎಂಬುದು ವಿದಿತವಾಗುತ್ತದೆ. ಏಕೆಂದರೆ ಭಾಷೆಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿದ್ದರೂ ಬೇರೆ ಬೇರೆಯ ಪ್ರದೇಶ ಮತ್ತು ರಾಜ್ಯಗಳ ಕಲಾ ಮತ್ತು ಸಾಹಿತ್ಯಾದಿಗಳ ವಸ್ತು ಮತ್ತು ದೃಷ್ಟಿಗಳಲ್ಲಿ ಅಖಿಲ ಭಾರತೀಯವಾದ ಏಕೈಕ ಮೂಲ ಸಂಸ್ಕೃತಿಯ ಶೇಕಡ ತೊಂಬತ್ತೈದಕಿಂತಲೂ ಹೆಚ್ಚಾಗಿ ಸರ್ವಸಾಧಾರಣವಾಗಿದೆ. ಆ ಮೂಲಸಂಸ್ಕೃತಿಯ ವಜ್ರಬೆಸುಗೆ ನಮ್ಮ ಒಗ್ಗಟ್ಟನ್ನು ಎಂದೆಂದಿಗೂ ಒಡೆಯಲು ಬಿಡುವುದಿಲ್ಲ. ಅಷ್ಟೇ ಅಲ್ಲ. ನಮಗೀಗ ಒದಗಿರುವ ರಾಜಕೀಯ ಅಖಂಡತೆಗೂ ಐಕ್ಯತೆಗೂ ಮೂಲಕಾರಣವೂ ಆ ಅಖಿಲ ಭಾರತೀಯವಾಗಿರುವ ಸಂಸ್ಕೃತಿಯ ಮೂಲದಲ್ಲಿಯೆ ಇದೆ ಎಂಬುದನ್ನು ನಮ್ಮ ಇತಿಹಾಸ ಎಂತಹ ಮಂದಮತಿಗೂ ಸುಗೋಚರವಾಗುವಂತೆ ಪ್ರದರ್ಶಿಸುತ್ತದೆ.

ಆ ವೃಶಿಷ್ಟ್ಯ ರಕ್ಷಣೆಯ ಕರ್ತವ್ಯನಿರ್ವಹಣೆಯಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯವು ಇತರ ಭಾರತೀಯ ವಿಶ್ವವಿದ್ಯಾನಿಲಯಗಳಿಗೆ ಮಾರ್ಗದರ್ಶನ ಮಾಡಲೂ ಅರ್ಹವಾಗುವಷ್ಟರ ಮಟ್ಟಿಗೆ ಸ್ನಾತಕೊತ್ತರ ವಿಭಾಗದಲ್ಲಿ ಕಾರ್ಯ ಪ್ರಾರಂಭಮಾಡಿ ಮುಂದುವರಿಯುತ್ತಿದೆ ಎಂಬುದನ್ನು ಕೇಳಿ ನನಗೆ ಮಹದಾನಂದವಾಗಿದೆ. ಬಹುಶಃ ನನಗೆ ಇಂದು ಅದು ತೋರುತ್ತಿರುವ ಗೌರವವೂ ನೀಡಿರುವ ಪ್ರಶಸ್ತಿಯೂ ಆ ವೈಶಿಷ್ಟ್ಯ ರಕ್ಷಣೆಯ ಕರ್ತವ್ಯದ ಒಂದು ಉಪಾಂಗವೆ ಆಗಿದೆ ಎಂದು ಭಾವಿಸಿದರೆ ತಪ್ಪಾಗುವುದಿಲ್ಲ. ಏಕೆಂದರೆ ಕನ್ನಡ ನಾಡುನುಡಿಗಳಿಗೆ ಸೇವೆ ಸಲ್ಲಿಸಿದವರಿಗೆ ಕನ್ನಡನಾಡಿನ ವಿಶ್ವವಿದ್ಯಾನಿಲಯಗಳಲ್ಲದೆ ಅನ್ಯರು ಏಕೆ ಗೌರವ ತೋರಿಸುತ್ತಾರೆ? ಅನ್ಯ ಭಾಷೆಯವರಿಗೆ ಆ ಸೇವೆಗೊತ್ತಾಗುವುದದರೂ ಹೇಗೆ? ಆದ್ದರಿಂದಲೆ ಕನ್ನಡ ನಾಡಿನ ಸಾಹಿತಿ ಸಂಶೋಧಕ ಕಲಾವಿದರುಗಳಿಗೆ ಅವರ ರಚನಾತ್ಮಕ ಕಾರ್ಯದಲ್ಲಿ ಧನರೂಪದ ನೆರವಿತ್ತು ಪ್ರೋತ್ಸಾಹಿಸುವುದರ ಜೋತೆಗೆ ಅವರ ಅತ್ಯುತ್ತಮ ಕೃತಿಗಳಿಗೆ ಮಾನರೂಪದ ಗೌರವವನ್ನು ತೋರುವುದೂ ಪೂರ್ವೋಕ್ತ ವೈಶಿಷ್ಟ್ಯ ರಕ್ಷಣೆಯ ಮಾರ್ಗದಲ್ಲಿ ಒಂದು ಮುಖ್ಯ ಮೈಲಿಕಲ್ಲಾಗುತ್ತದೆ.

ಸ್ನಾತಕೋತ್ತರವಾದ ತನ್ನ ಸಂಶೋಧನಾಂಗದಲ್ಲಿ ಸರಿಯಾದ ದಿಕ್ಕಿಗೆ ಮುಖ ಮಾಡಿ ಅಡಿಯಿಟ್ಟಿರುವ ಕರ್ಣಾಟಕ ವಿಶ್ವವಿದ್ಯಾನಿಲಯವು ಸ್ನಾತಕಪೂರ್ವದ ತನ್ನ ಬೋಧನಾಂಗಲ್ಲಿಯೂ ಮತ್ತು ಕೆಲವೆ ವರ್ಷಗಳ ಹಿಂದೆ ಅದು ಪ್ರಾರಂಭಿಸಿರುವ ತನ್ನ ಪ್ರಸಾರಾಂಗದಲ್ಲಿಯೂ ಡಾ.ಪಾವಟೆಯವರಂಥ ಶಿಕ್ಷಣತಜ್ಞರ ಸಮರ್ಥ ಮಾರ್ಗದರ್ಶಿತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುವುದರಲ್ಲಿ ನನಗೆ ಸ್ವಲ್ಪವೂ ಸಂದೇಹವಿಲ್ಲ. ಆ ಯಶಸ್ಸಿನ ಕೈಗೂಡಿಕೆಗೆ ಬಹುಮಟ್ಟಿಗೆ ಕಾರಾಣವಾಗುತ್ತದೆ ಭಾಷಾ ಮಾಧ್ಯಮ ನೀತಿ. ಈ ವಿಚಾರವಾಗಿ ನಾನು ಅನೇಕ ಸಾರಿ ಮಾತನಾಡಿಯೂ ಬರೆದೂ ಇದ್ದೇನೆ. ಅವುಗಳಲ್ಲಿ ಕೆಲವಾದರೂ ಭಾಷಣಗಳೂ ಬರೆಹಗಳೂ ಅಚ್ಚಾಗಿ ಪುಸ್ತಕರೂಪದಲ್ಲಿ ದೊರೆಯುತ್ತವೆ; ನಾಡಿನ ಬಾಂಧವರಿಗೆ ಆ ವಿಚಾರವಾಗಿರುವ ನನ್ನ ಭಾವನೆಗಳೆಲ್ಲ ಸುಪರಿಚಿತವಾಗಿಯೆ ಇವೆ; ಆದ್ದರಿಂದ ಇಲ್ಲಿ ಆ ನಿರ್ವಿವಾದವಾಗಿರುವ  ದೇಶಭಾಷಾ ಶಿಕ್ಷಣಮಾಧ್ಯಮದ ಶ್ರೇಯಸ್ಸನ್ನು ಕರಿತು ವಾದಕ್ಕಾಗಲಿ ವಿವರಕ್ಕಾಗಲಿ ನಾನು ಹೋಗುವಿದಿಲ್ಲ. ಅದು ಚರ್ವಿತ ಚರ್ವಣವಾದೀತು.

ಅದೂ ಅಲ್ಲದೆ ಸದ್ಯಕ್ಕೆ ಇಲ್ಲಿಗೆ ಅದು ಅಪ್ರಕೃತ. ಏಕೆಂದರೆ ಈ ವಿಶ್ವವಿದ್ಯಾನಿಲಯದ ವಿಧಾಯಕ ಸೂತ್ರಗಳನ್ನು ತನ್ನ ಭದ್ರಮುಷ್ಟಿಯಲ್ಲಿ ಹಿಡಿದಿರುವ ಅದರ ಅಧಿನೇತೃ ವೈಸ್‌ ಛಾನ್ಸಲರ್ ಡಾ.ಪಾವಟೆಯವರಿಗೂ ನನಗೂ ಆಯಾ ಪ್ರದೇಶಗಳಲ್ಲಿ ಆಯಾ ಪ್ರಾದೇಶಿಕ ಭಾಷೆಯೆ ಶಿಕ್ಷಣಮಾಧ್ಯಮವಾಗಬೇಕು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯವಿಲ್ಲ, ಮೂಲತತ್ವದಲ್ಲಾಗಲಿ ಅಥವಾ ಅಂತಿಮ ಧ್ಯೇಯದಲ್ಲಾಗಲಿ. ಕೆಲವು ವರ್ಷಗಳ ಹಿಂದೆಯೆ ನಾನು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ಕನ್ನಡ ಮಾಧ್ಯಮವನ್ನು ಪ್ರಿಯೂನಿವರ್ಸಿಟಿ ಮತ್ತು ಡಿಗ್ರಿ ತರಗತಿಗಳಲ್ಲಿ ಪ್ರಾರಂಭಿಸಿ ಅದಕ್ಕೆ ಬೇಕಾದ ಪಠ್ಯಪುಸ್ತಕಗಳನ್ನು ಪ್ರಸಾರಾಂಗದ ಮೂಲಕ ಸಿದ್ಧಗೊಳಿಸಿದ ಕಾಲದ ತರುಣದಲ್ಲಿಯೆ ಅಖಿಲ ಭರತೀಯ ವೈಸ್‌ಛಾನ್ಸಲರುಗಳ ಸಭೆಯೊಂದರಲ್ಲಿ ಅದರ ಅಧ್ಯಕ್ಷಸ್ಥಾನದಿಂದ ಅವರು – ಪ್ರಾದೇಶಿಕ ಭಾಷೆಯೆ ಶಿಕ್ಷಣಮಾಧ್ಯಮವಾಗಬೇಕು. ಅರ್ಥವಾಗದ ವಿದೇಶಿ ಭಾಷಾ ಮಾಧ್ಯಮವೇ ವಿದ್ಯಾರ್ಥಿಗಳಲ್ಲಿ ಅಶಿಸ್ತು ಹೆಚ್ಚಾಗುವುದಕ್ಕೂ ಮತ್ತು ಇನ್ನಾವ ದೇಶದಲ್ಲಿಯೂ ಕಂಡುಬರದ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುವುದಕ್ಕೂ ಮುಖ್ಯಕಾರಣವಾಗಿದೆ – ಎಂದೆಲ್ಲ ತಮ್ಮ ಭಾಷಣದಲ್ಲಿ ತುಸು ದೀರ್ಘವಾಗಿಯೇ ಪ್ರತಿಪಾದಿಸಿದ್ದರು. ಕನ್ನಡ ಶಿಕ್ಷಣಮಾಧ್ಯಮ ಇಲ್ಲಿ ಯಶಸ್ವಿಯಾಗದಿರುವುದಕ್ಕೆ ವಿದ್ಯಾರ್ಥಿಗಳೂ ಸಾರ್ವಜನಿಕರೂ ಸರಕಾರವೂ ಸಾಕಷ್ಟು ಪ್ರಮಾಣದಲ್ಲಿ ಸಹಕರಿಸದಿರುವುದೇ ಮುಖ್ಯ ಕಾರಣವಾಗಿದೆ ಎಂಬುದು ಅವರು ದೂರು. ಕರ್ಣಾಟಕ ವಿಶ್ವವಿದ್ಯಾನಿಲಯ ತನ್ನ ಕಡೆಯಿಂದ ಅದಕ್ಕೆ ಪೂರ್ಣ ಅನುಮತಿ ನೀಡಿದೆ ಎಂದು ಅವರು ಹೇಳುತ್ತಾರೆ. ಮುಂದಿನ ಮುಂದಾಳುತನ ವಹಿಸಲಿರುವ ಇಂದಿನ ವಿದ್ಯಾರ್ಥಿವರ್ಗ ದೃಢಮನಸ್ಸು ಮಾಡಿದರೆ ಸರಕಾರ ಮತ್ತು ಸಾರ್ವಜನಿಕರು ಹಿಂಬಾಲಿಸದೆ ಇರುವುದು ಸಾಧ್ಯವಿಲ್ಲ.

ವಿಶ್ವವಿದ್ಯಾನಿಲಯದ ಸಂಶೋಧನಾಂಗ ಮತ್ತು ಬೋಧನಾಂಗಗಳಿಗೆ ಯಾವ ವಿಧದಲ್ಲಿಯೂ ದ್ವಿತೀಯವಲ್ಲದ ಸ್ಥಾನ ಅದರ ಪ್ರಸಾರಾಂಗಕ್ಕೆ ಸಲ್ಲುತ್ತದೆ. ಅಷ್ಟೇ ಅಲ್ಲ. ಪ್ರಜಾಸತ್ತೆಯನ್ನೆ ತನ್ನ ರಾಜಕೀಯಕ್ಕೆ ತತ್ವದ ಅಡಿಗಲ್ಲನ್ನಾಗಿ ಮಾಡಿಕೊಂಡಿರುವ ನಮ್ಮ ಗಣರಾಜ್ಯದ ಅಭ್ಯುದಯವನ್ನು ಗಮನಿಸುವುದಾದರೆ ಪ್ರಸಾರಾಂಗಕ್ಕೆ ಬಹು ಮುಖ್ಯಸ್ಥಾನವನ್ನೆ ನೀಡಬೇಕಾದುದು ಅನಿವಾರ್ಯವಾಗುತ್ತದೆ. ಹಾಗಲ್ಲದೆ ನಮ್ಮ ಜನತಾ ಪ್ರಜಾಸತ್ತೆ ಯಶಸ್ವಿಯಾಗುವುದಿಲ್ಲ; ಸರ್ವೊದಯಕ್ಕೆ ಎಂದಿಗೂ ಜಯ ಲಭಿಸುವುದಿಲ್ಲ. ಮುಗಿಲಿನಿಂದ ಮಳೆಯನ್ನು ಪಡೆದು ನೀರನ್ನು ಸಂಗ್ರಹಿಸಿದ ಗಿರಿನೆತ್ತಿ, ಆ ನೀರನ್ನು ಹೊಳೆಗಳ ಮುಖಾಂತರ ಕೆಳನಾಡಿನ ಮೂಲೆಮೂಲೆಗೂ ಒಯ್ದು ಹಂಚಿ ಹುಲುಸಾದ ಬೆಳೆಗೆ ಕಾರಣವಾಗುವಂತೆ, ವಿಶ್ವವಿದ್ಯಾ ಉನ್ನತ ಕ್ಷೇತ್ರದಲ್ಲಿ ಸಂಗ್ರಹಗೊಂಡ ಜ್ಞಾನ ವಿಜ್ಞಾನಗಳು ಪ್ರಸಾರ ರೂಪದ ವಾಹಿನಿಗಳಲ್ಲಿ ಕೆಳಗಿಳಿದು ಸಂಚರಿಸಿ ಜನಸಾಮಾನ್ಯರ ಜೀವನಪ್ರವೇಶಮಾಡಿ, ಅಲ್ಲಿಯ ಮತಮೌಢ್ಯಾದಿ ಅಜ್ಞಾನವನ್ನು ಅಪಹರಿಸಿ ವೈಜ್ಞಾನಿಕ ದೃಷ್ಟಿ ಮತ್ತು ವಿಚಾರಬುದ್ಧಿಗಳನ್ನು ಸ್ಥಾಪಿಸದಿದ್ದರೆ, ರಾಜಕೀಯ ಮಾತ್ರವಾಗಿರುವ ನಮ್ಮ ಸ್ವಾತಂತ್ರ್ಯವು ಸಾಸ್ಕೃತಿಕವಾಗಿಯೂ ಸಫಲವಾಗುವುದು ಬರಿಯ ದಿಗಂತಾದರ್ಶವಾಗಿಯೆ ಉಳಿಯಬೇಕಾಗುತ್ತದೆ. ಬಹುಭಾಷೆ, ಬಹುಮತ, ಅನೇಕಾಚಾರ ಮೊದಲಾದ ಅಸಂಖ್ಯ ಭೇದಗಳಿಂದ ಕೂಡಿರುವ ನಮ್ಮ ರಾಷ್ಟ್ರಜೀವನ, ತನ್ನ ಏಕತ್ವವನ್ನು ರಕ್ಷಿಸಿಕೊಂಡು ಹೋಗಬೇಕಾದರೆ ವಿಜ್ಞಾನ ದೃಷ್ಟಿಯ ಮತ್ತು ವಿಚಾರಬುದ್ಧಿಯ ಆಧಾರದ ಮೇಲೆ ನಿಲ್ಲುವ ಮನುಜಮತಕ್ಕೂ ಮತ್ತ ವಿಶ್ವ ಪಥಕ್ಕೂ ನಮ್ಮ ಜನವನ್ನು ತಿರುಗಿಸುವುದು ಅತ್ಯಂತ ಅವಶ್ಯಕ. ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ಲೇಖನಿಯಿಂದ ಹೊಮ್ಮಿದ ಒಂದು ಕವನ ನನ್ನ ಹೃದಯದ ಆ ಆಕಾಂಕ್ಷೆಯನ್ನು ಸಮರ್ಥವಾಗಿ ಘೋಷಿಸುತ್ತದೆ. ನಿಮ್ಮ ಕ್ಷಮೆ ಬೇಡಿ, ಅನುಮತಿ ಪಡೆದು ಅದನ್ನು ಓದುತ್ತೇನೆ: ಕಿವಿಗೊಟ್ಟು ಮಾತ್ರವಲ್ಲ, ಎದೆಗೊಟ್ಟು ಆಲೈಸುವಿರೆಂದು ಆಶಿಸುತ್ತೇನೆ;

ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ,
ಬಡತನ ಬುಡಮುಟ್ಟ ಕೀಳ ಬನ್ನಿ;
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ,
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ:
ಓ ಬನ್ನಿ, ಸೋದರರೆ, ಬೇಗ ಬನ್ನಿ!

ಅದೊ ನೋಡಿ, ರಷ್ಯಾ ಜಪಾನು ತುರ್ಕಿಗಳೆಲ್ಲ
ಪೊರೆಗಳಚಿ ಹೊರಟಿಹವು ಹೊಸ ಪಯಣಕೆ;
ಬೆಳಗಿಹರು ನೆತ್ತರೆಣ್ಣೆಯ ತಿಳಿವಿನುರಿಯಲ್ಲಿ
ಕಿಚ್ಚಿಟ್ಟು ಹಳೆ ಕೊಳಕು ಬಣಗು ತೃಣಕೆ:
ಓ ಬನ್ನಿ, ಸೋದರರೆ, ರಾಷ್ಟ್ರರಣಕೆ!

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ;
ಮತಿಯಿಂದ ದುಡಿಯರೈ ಲೋಕಹಿತಕೆ.
ಆ ಮತದ ಈ ಮತದ ಹಳೆಮತವ ಸಹವಾಸ
ಸಾಕಿನ್ನು ಸೇರಿರೈ ಮನುಜ ಮತಕೆ:
ಓ ಬನ್ನಿ, ಸೋದರರೆ, ವಿಶ್ವ ಪಥಕೆ!

ಮನುಜ ಮತ, ವಿಶ್ವ ಪಥ, ವಿಜ್ಞಾನ ದೃಷ್ಟಿ, ವಿಚಾರ ಬುದ್ಧಿ – ಇವು ನಮ್ಮ ಜನಹೃದಯದ ನಿತ್ಯಮಂತ್ರಗಳಾಗುವಂತೆಯೂ ನಮ್ಮ ಜನಮನದ ದ್ಯೇಯೋಕ್ತಿಗಳಾಗುವಂತೆಯೂ ಮಾಡುವ ಕರ್ತವ್ಯ ವಿಶ್ವವಿದ್ಯಾ ನಿಲಯದ ಪ್ರಸಾರಂಗದ ಪಾಲಿಗೆ ಸೇರಿದ್ದು. ವಿಜ್ಞಾನ, ಸಾಹಿತ್ಯ, ಇತಿಹಾಸ, ರಾಜ್ಯಶಾಸ್ತ್ರ, ಮನಶ್ಯಾಸ್ತ್ರ, ತತ್ವಶಾಸ್ತ್ರ ಸಮಾಜಶಾಸ್ತ್ರ ಮೊದಲಾದ ಎಲ್ಲ ಶಾಸ್ತ್ರ ವಿಷಯದ ಅಧ್ಯಾಪಕರೂ ಈ ನಿಟ್ಟಿನಲ್ಲಿ ದುಡಿಯಬೇಕಾಗಿದೆ. ದೂರ, ಎತ್ತರದಲ್ಲಿ, ಸಾಮಾನ್ಯರಿಗೆ ಎಟುಕದ ಎತ್ತರದಲ್ಲಿ, ಸಾಮಾನ್ಯರಿಗೆ ನಿಲುಕದ ದೂರದಲ್ಲಿ, ಸಂಸ್ಕೃತದ ದುರ್ಗಮ ಶಿಖರಗಳಲ್ಲಿ, ಇಂಗ್ಲೀಷಿನ ಕಂಟಕಮಯ ಔನ್ನತ್ಯಗಳಲ್ಲಿ, ಅನ್ಯಭಾಷೆಗಳ ದುರ್ಜ್ಞೇಯ ಗುಹಾಂಗಣಗಳಲ್ಲಿ, ಶಿಲಾಪೀಠಸ್ಥವೋ ಸಿಂಹಾಸನಸ್ಥವೋ ತಪೋಮಗ್ನವೋ ಆಗಿರುವ ವಿಶ್ವವಿದ್ಯೆಯನ್ನು ನಾಡಿನ ಮೂಲೆಮೂಲೆಯ ಗುಡಿಸಲುಗಳಿಗೂ ಕೊಂಡೊಯ್ಯುವ ಅವಶ್ಯಕಾರ್ಯದಲ್ಲಿ ವಿಶ್ವವಿದ್ಯಾನಿಲಯಗಳು ತಮ್ಮ ಗರ್ವೋನ್ನತ ಉದಾಸೀನತೆಯನ್ನು ಕಿತ್ತೊಗೆದು, ಕಿರೀಟಶಿರ ತಾಟಸ್ತ್ಯ ದೋರಣೆಯಿಂದ ಪಾರಾಗಿ, ಅಜ್ಞಾನ ಮೌಢ್ಯ ಅವಿವೇಕಗಳ ವಿರುದ್ಧ ನಾವು ಹೂಡುವ ಯುದ್ಧದಲ್ಲಿ ಇದು ತುರ್ತುಪರಿಸ್ಥಿತಿಯೆಂದು ಭಾವಿಸಿ, ಅಚಲ ನಿಷ್ಟೆಯಿಂದ ಅವಿಲಂಬವಾಗಿ ಮುಂದುವರಿಯಲಿ ಎಂದು ನಾನು ಈ ಸಂದರ್ಭದಲ್ಲಿ ಕವಿಹೃದಯ ಕಾತರತೆಯಿಂದ ವಿಜ್ಞಾಪಿಸುತ್ತೇನೆ.

ಮೇಲೆ ಹೇಳಿದ ಆ ಎಲ್ಲ ಕಾರ್ಯಸಾಧನೆಯ ಸಾಫಲ್ಯಕ್ಕಾಗಿ ಆಯಾ ಪ್ರದೇಶದ ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಯನ್ನು ವಿದ್ಯಾಭ್ಯಾಸ ಕ್ರಮದಲ್ಲಿ ಪ್ರಪ್ರಥಮ ಸ್ಥಾನಕ್ಕೆ ಎತ್ತಬೇಕು. ಇಂಗ್ಲೀಷನ್ನು ಈಗಿರುವ ಬಲಾತ್ತಾರದ ಸ್ಥಾನದಿಂದ ತೆಗೆದು ಹಾಕಿ ಐಚ್ಛಿಕಸ್ಥಾನದಲ್ಲಿಡಬೇಕು. ಪ್ರಾದೇಶಿಕ ಭಾಷೆಯೇ ವಿದ್ಯಾಭ್ಯಾಸದ ಎಲ್ಲ ಮಟ್ಟಗಳಲ್ಲಿಯೂ ಶಿಕ್ಷಣ ಮಾಧ್ಯಮವಾಗಬೇಕು. ತಾನು ಕೈಕೊಳ್ಳಲಿರುವ ಪ್ರಚಂಡ ಕಾರ್ಯಕ್ಕೆ ಸಮರ್ಪಕವಾಗಿ ಅರ್ಹವಾಗುವಂತೆ ಪ್ರಾದೇಶಿಕಭಾಷೆಯನ್ನು ನಿಶಿತ ಗೊಳಿಸಬೇಕು; ನಿಷ್ಕೃಷ್ಟಗೊಳಿಸಬೇಕು; ಸುಲಭಗೊಳಿಸಬೇಕು; ಸಾಮಾನ್ಯಗೊಳಿಸಬೇಕು: ಜಗತ್ತಿನ ಯಾವ ಜ್ಞಾನವಾಗಲಿ ವಿಜ್ಞಾನವಾಗಲಿ ಪ್ರಾದೇಶಿಕ ಭಾಷೆಯಲ್ಲಿ ಲಭಿಸುವಂತೆ ವಿಶ್ವವಿದ್ಯಾನಿಲಯಗಳು ತಮ್ಮ ಪ್ರವೀಣ ಅಧ್ಯಾಪಕ ವರ್ಗದವರಿಂದ ಗ್ರಂಥರಚನೆ ಮಾಡಿಸುವ ಸಕ್ರಮ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು; ಅಧ್ಯಾಪಕವರ್ಗದ ಸ್ವಭಾಷಾ ಪ್ರೇಮ ಒಂದರ ಮೇಲೆಯೇ ಭಾರಹಾಕದೆ ಸ್ಥಾನ ಮಾನ ಧನಾದಿ ಲೌಕಿಕ ಆಕರ್ಷಣೆಗಳಿಂದಲೂ ಅವರು ಪ್ರೋತ್ಸಾಹಿತರಾಗುವಂತೆ ಮಾಡಬೇಕು. ಆಗ ಮಾತ್ರವೇ ನಮ್ಮ ಪ್ರಜಾಸತ್ತೆ, ಜಗತ್ತಿನಲ್ಲೆಲ್ಲ ಅತ್ಯಂತ ಹಿರಿಯದೆಂದು ಪರಿಗಣಿತವಾಗಿರುವ ಭಾರತದ ಪ್ರಜಾಸತ್ತೆ, ತನ್ನ ಸರ್ವತೋಮುಖವಾದ ಅಭ್ಯುದಯವನ್ನು ಶೀಘ್ರದಲ್ಲಿಯೆ ಸಾಧಿಸಲು ಸಮರ್ಥವಾಗುತ್ತದೆ; ಸರ್ವೋದಯ ಸಿದ್ಧಾಂತವು ಸಾಮಾನ್ಯ ಜನಜೀವನದಲ್ಲಿ ನಿತ್ಯಧರ್ಮವಾಗಿ ಪರಿಣಮಿಸಿ ಲೋಕ ಕಲ್ಯಾಣವೂ ಸಾಧಿತವಾಗುತ್ತದೆ.

ಮಹಾಶಯರೆ, ತಿಳಿದವರಾದ ತಮ್ಮ ಮುಂದೆ ಇದನ್ನೆಲ್ಲ ಹೇಳಿ, ಬೆಟ್ಟಕ್ಕೆ ಕಲ್ಲು ಹೊತ್ತೆನೋ ಏನೋ? ಏಲಾದರಾಗಲಿ ನನ್ನ ಹೃದಯವನ್ನು ಸಮಹೃದಯರ ಮುಂದೆ ತೋಡಿಕೊಂಡಿದ್ದೇನೆ ಎಂಬ ತೃಪ್ತಿ ನನ್ನದಾಗಿದೆ. ಪ್ರಶಾಂತರಾಗಿ ಕುಳಿತು, ಆಲಿಸಿ, ನನಗೆ ಆ ತೃಪ್ತಿಯನ್ನೊದಗಿಸಿದುದಕ್ಕಾಗಿ ತಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕವಾದ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಈ ಘನ ಗೌರವ ಪದವಿಯನ್ನಿತ್ತು ನನ್ನನ್ನು ಸತ್ಕರಿಸುದುದಕ್ಕಾಗಿ ಕರ್ಣಾಟಕ ವಿಶ್ವವಿದ್ಯಾನಿಲಯವನ್ನೂ, ವಿಶೇಷತಃ ಅದರ ಉಪಕುಲಪತಿಗಳಾಗಿರುವ ನನ್ನ ಸನ್ಮಿತ್ರ ಡಾ. ಪಾವಟೆಯವರನ್ನೂ ವಂದಿಸಿ ಬೇಳ್ಕೊಳ್ಳುತ್ತೇನೆ; ನಮಸ್ಕಾರ.

ಸಿರಗನ್ನಡಂಗಲ್ಗೆ! ಜಯಾಹಿಂದ್! ಜಯ್‌ಜಗತ್!


* ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್. ಪ್ರಶಸ್ತಿಯನ್ನು ಸ್ವೀಕರಿಸಿ ಮಾಡಿದ ಭಾಷಣ. ಧಾರವಾಡ: ಫೆಬ್ರವರಿ ೨೭. ೧೯೬೬.