ಕರ್ಣಾಟಕ ಭಾಷಾ ಸಾಹಿತ್ಯಗಳಿಗೂ ತನ್ಮೂಲಕ ಮಹಾಮಾತೃ ಸದೃಶಳಾಗಿರುವ ಭಾರತಮಾತೆಗೂ ನಾನು ಸಲ್ಲಿಸಿರುವ ಸೇವೆಗಾಗಿ ನನಗೆ ‘ರಾಷ್ಟ್ರ ಕವಿ’ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿರುವ ತಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ವಂದಿಸುತ್ತೇನೆ. ಸಾಹಿತ್ಯ, ಸಂಸ್ಕ್ರತಿ, ನಾಡು, ನುಡಿಗಳಿಗೆ ತಾವು ತೋರಿಸುತ್ತಿರುವ ಗೌರವಾದರಗಳ ಸಂಕೇತವಾಗಿ ಈ ತೀರ್ಮಾನವನ್ನು ಕೈಗೋಂಡಿದ್ದೀರೆಂದು ಭಾವಿಸಿ, ತಾವು ನೀಡುವ ಪ್ರಶಸ್ತಿಯನ್ನು ಅತ್ಯಂತ ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ.

ರಾಜ್ಯದ ಸುಭದ್ರತೆಗೆ ಆವಶ್ಯಕವಾದ ಮನೋಧರ್ಮವನ್ನು ಶಿಥಿಲಗೊಳಿಸಿ, ಭಾವಲಾಲಿತ್ಯ ಮತ್ತು ಭಾವಾತಿರೇಕಗಳನ್ನು ಉದ್ರೇಕಿಸಿ, ಸುಖಲೋಲುಪತ್ವ ಮತ್ತು ಹೃದಯಮೃದುತ್ವಗಳನ್ನು ಉಲ್ಬಣ ಮಾಡಿ, ರಾಷ್ಟ್ರ ರಕ್ಷಣೆಗೆ ಬೇಕಾಗುವ ಪೌರುಷತೆ ಕಠೋರತೆಗಳಿಗೆ ಬದಲಾಗಿ ಸ್ತ್ರೈಣಮಾಧುರ್ಯಭಿರುಚಿಗಳು ವರ್ಧಿಸುವಂತೆ ಮಾಡುತ್ತಾರೆಂದು ಒಬ್ಬ ಗ್ರೀಕ್ ತತ್ತ್ವ ಜ್ಞಾನಿ ಕವಿಗಳನ್ನೆಲ್ಲ ಗಡಿಪಾರು ಮಾಡಲು ಸಲಹೆ ಕೊಟ್ಟಿದ್ದನಂತೆ! ಅದಕ್ಕೆ ಉತ್ತರವಾಗಿ ಅವನ ಶಿಷ್ಯನಾಗಿದ್ದ ಮತ್ತೊಬ್ಬ ಗ್ರೀಕ್ ತತ್ತ್ವಜ್ಞಾನಿ ತನ್ನ ಗುರುವಿನ ಮತವನ್ನು ಖಂಡಿಸಿ, ಅದಕ್ಕೆ ವಿರುದ್ಧವಾಗಿ, ಕವಿಗಳನ್ನು ಉತ್ಸಾಹದ ಮತ್ತು ಉಲ್ಲಾಸದ ನಿಧಿಗಳೆಂದೂ ಅವರಿಂದೊದಗುವ ಭಾವಪುಷ್ಟಿ ಮತ್ತು  ಭಾವಸಂಸ್ಕಾರಗಳಿಂದ ನಾಡಿನ ಜನತೆಯ ಚೇತನ ಉದ್ದೀಪಿತವಾಗಿ ಕವಿಹೃದಯದ ಆಶಾವಾದದ ಧೀರಧ್ವನಿಯಿಂದ ಸ್ಫೂರ್ತಿಗೊಂಡ ರಾಷ್ಟ್ರದಲ್ಲಿ ಸುಖ ಕ್ಷೇಮ ಶಾಂತಿಗಳು ಸ್ಥಾಪಿತವಾಗುತ್ತವೆಂದೂ ಪ್ರತಿವಾದಘೋಷ ಮಾಡಿದ್ದನಂತೆ!

ಕ್ರಾಂತದರ್ಶಿಯಾದ ಇನ್ನೊಬ್ಬ ಇಂಗ್ಲಿಷ್ ಕವಿ, ಕವಿಗಳನ್ನು ಅನಧಿಕೃತ ಶಾಸನಕರ್ತರೆಂದೂ, ಕವಿಗಳು ಭವಿಷತ್ತು ವರ್ತಮಾನದ ಮೇಲೆ ಹಾಯಿಸುವ ಬೃಹಚ್ಛಾಯೆಗಳಂತೆ ಇದ್ದಾರೆಂದೂ ಶ್ಲಾಘಿಸಿದ್ದಾನೆ.

ಪ್ಲೇಟೊ, ಅರಿಸ್ಟಾಟಲ್, ಶೆಲ್ಲಿ ಇವರೆಲ್ಲರ ಅನುಭವಗಳನ್ನೂ ಒಟ್ಟಿಗೆ ಪಡೆದು, ತನ್ನ ಕಾಲದ ಮತ್ತು ದೇಶದ ಕಾವ್ಯ ಮತ್ತು ರಾಜಕೀಯ ಪ್ರಪಂಚಗಳೆರಡಲ್ಲಿಯೂ ಶಿಖರ ವ್ಯಕ್ತಿಯಾಗಿ, ಕವಿಯೂ ಕಲಿಯೂ ಆಗಿದ್ದ ಕನ್ನಡದ ಆದಿಯ ಮಹಾಕವಿ ಪಂಪ ‘ಸೇವಿಪುದೆ ಕಷ್ಟಮಿಖಾಧಿನಾಥರಂ!’ ಎಂದೂ ಉದ್ಗಾರ ತೆಗೆದಿದ್ದಾನೆ.

ಭಾರತೀಯ ಕಾವ್ಯನಿಮಾಂಸೆ ‘ಋಷಿಯಲ್ಲದವನು ಕವಿಯಾಗಲಾರ’ ಎಂಬರ್ಥದ ಮಾತನ್ನೂ ಆಡಿದೆ.

ಈ ಶ್ಲಾಘನೆ ಖಂಡನೆ ನಿಂದೆ ಸ್ತುತಿ ಪರಾಕು ಹತಾಶೆ ಇವುಗಳನ್ನು ಗಮನಿಸಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ: ಕವಿತೆ ಅಥವಾ ಸಾಹಿತ್ಯ ಸ್ವರೂಪತಃ ಕೆಟ್ಟದ್ದೂ ಆಲ್ಲ, ಒಳ್ಳೆಯದೂ ಅಲ್ಲ: ಅದೊಂದು ಶಕ್ತಿ, ಪ್ರಯೋಗಿಸುವವರ ಮತ್ತು ಉಪಯೋಗಿಸುವವರ ಪ್ರಜ್ಞಾನುಗುಣವಾಗಿ ಪರಸ್ಪರ ವಿರುದ್ಧವಾದ ಫಲಿತಾಂಶಗಳನ್ನು ಉಂಟುಮಾಡಬಲ್ಲದು. ಕಾಲದಿಂದ ಕಾಲಕ್ಕೆ ಅದನ್ನು ಪರಿಶೀಲಿಸಿ ಆ ಶಕ್ತಿ ನಮ್ಮನ್ನು ತಪ್ಪುದಾರಿಗೆ ಕರೆದೊಯ್ಯದಂತೆ ನೋಡಿಕೊಳ್ಳಬೇಕಾಗುತ್ತದೆ, ಲೋಕಹೃದಯದ ಆಚಾರ್ಯಪ್ರಜ್ಞೆ. ಆ ಪ್ರಜ್ಞೆ ವ್ಯಕ್ತಿ ವ್ಯಕ್ತಿ ಗಳಲ್ಲಿ ಪ್ರಕಟಗೊಂಡರೂ ಅದು ವ್ಯಷ್ಟಿನಿಷ್ಠವಾಗಿರದೆ  ಸಮಷ್ಟಿರೂಪದಲಿ ಅಭಿವ್ಯಾಕ್ತವಾಗುತ್ತದೆ. ರಾಜ್ಯ ರಾಜ್ಯಗಳಲ್ಲಿ ಪ್ರಾತಿನಿಧಿಕವಾಗಿರುವ ಇಂತಹ ಮಹಾ ಸಭಾ ಸಂಸ್ಥೆಗಳು ಆ ಆಚಾರ್ಯಪ್ರಜ್ಞೆಯ ಮುಖಪಾತ್ರಗಳಾಗಿತ್ತವೆ.

ಅಂತಹ ಮುಖಪಾತ್ರವಾಗಿರುವ ಈ ಮಹಾಸದಸ್ಸು ತನ್ನ ನಾಡಿನ ಕವಿಯೊಬ್ಬನಿಗೆ, ಗ್ರೀಕ್ ತತ್ವಜ್ಞಾನಿಯ ಸೂಚನೆಯಂತೆ ಅವನನ್ನು ಗಡಿಪಾರು ಮಾಡುವುದಕ್ಕೆ ಬದಲಾಗಿ, ‘ರಾಷ್ಟ್ರಕವಿ’ ಪ್ರಶಸ್ತಿಯನ್ನು ನೀಡಲು ಈ ಮಹಾ ಸಮಾರಂಭದಲ್ಲಿ ನೆರೆದಿರುವ  ಸಂಗತಿ ಸಾಮಾನ್ಯವಾದುದೇನಲ್ಲ. ಸ್ವಲ್ಪ ಪರಿ ಭಾವಿಸಿದರೆ ಅದು ಎಷ್ಟು ಮಹತ್ವಪೂರ್ಣವಾದುದು ಎಂಬುದು ಹೃದಯಕ್ಕೆ ಗೋಚರವಾಗುತ್ತದೆ.

ನೆಮ್ಮದಿ, ಸಂಸ್ಕ್ರತಿ, ಶಾಂತಿ — ಇವುಗಳ ಲೌಕಿಕ ಜೇವನದ ಗಂತವ್ಯ. ಅದನ್ನು ಸಾಧಿಸಲೂ ಸಾಧಿಸಿದ್ದನ್ನು ಹೃದಯ ಹೃದಯಕ್ಕೆ ನಿವೇದಿಸಲೂ ಕವಿತೆ ಸಾಹಿತ್ಯ ಕಲೆಗಳೆ ಅಗ್ರಗಣ್ಯ ಸಾಧನಗಳಾಗಿವೆ. ಆದ್ದರಿಂದ ಯಾವ ಜನತೆ ತನ್ನ ಪ್ರಾತಿನಿಧಿಕ ಸಂಸ್ಥೆಯ ಮೂಲಕ ಸುಖ ಸಂಸ್ಕ್ರತಿ ಶಾಂತಿದೂತನಾದ ತನ್ನ ಕವಿಯನ್ನು ಸನ್ಮಾನಿಸುತ್ತದೆಯೋ ಅದು ತನ್ನ ಪೂರ್ಣತ್ವ ಸಾಧನೆಯ ಉದ್ಧಾರ ಮಾರ್ಗದಲ್ಲಿ ಬಹುದೂರ ಮುಂದುವರಿದಿದೆ ಎಂದೇ ಅರ್ಥವಾಗುತ್ತದೆ. ತಮ್ಮಂತಹ ಪ್ರತಿನಿಧಿಗಳನ್ನು ಪಡೆದಿರುವ ಜನತೆ ಧನ್ಯ! ಅಂತಹ ಜನತೆ ಇರುವ ನಾಡೂ ಧನ್ಯ! ಅಂತಹ ನಾಡಿನಲ್ಲಿ ಜನ್ಮವೆತ್ತುವ ಸುಕೃತಕ್ಕೆ ಭಾಜನನಾಗಿರುವ ಕವಿಯೂ ಧನ್ಯ!

ಸಂಸ್ಕೃತಿ ಕರ್ಣಾಟಕದ ನಿತ್ಯಚಕ್ರವರ್ತಿ ನೃಪತುಂಗದೇವನು ಸಾವಿರ ವರ್ಷಗಳ ಹಿಂದೆ (ಕ್ರಿ. ಶ. ೮೧೪)

ಕಾವೇರಿಯಿಂದಮಾ ಗೋದಾವರಿವರಮಿರ್ದು ನಾಡದಾ
ಕನ್ನಡದೊಳ್ ಭಾವಿಸಿದ ಜನಪದಂ……….ಪದನರಿದು
ನುಡಿಯಲುಂ, ನುಡಿದುದನ್ ಅರಿದು ಆರಯಲುಂ ಆರ್ಪರ್, ಆ
ನಾಡವರ್ಗಳ್ ಚದುರರ್ ನಿಜದಿ: ಕುರಿತೋದದೆಯುಂ
ಕಾವ್ಯಪ್ರಯೋಗಪರಿಣತಮತಿಗಳ್!

ಎಂದು ಹಾಡಿದುದು ಇಂದಿಗೂ ಅಸಾರ್ಥಕವಾಗಿಲ್ಲವೆಂದೆ ತೋರುತ್ತದೆ!

ಇಂದಿನ ಈ ಗುರುಸಮಾರಂಭದಲ್ಲಿ, ಅನಾಹೂತನಾಗಿದ್ದರು ಲೆಕ್ಕಿಸದೆ ಅಕ್ಕರೆಯುಕ್ಕಿಬಂದು ತನ್ನ ಸೂಕ್ಷ್ಮ ಕಾಯದಲಿ ನಿಂತು, ಅವಲೋಕಿಸಿ, ಆಶೀರ್ವದಿಸುತ್ತಿರುವ ಸಂಸ್ಕ್ರತಿ ಕರ್ಣಾಟಕದ ನಿತ್ಯ ಮುಖ್ಯಮಂತ್ರಿಯಾಗಿರುವ ಆ ಪಂಪ ಮಹಾಕವಿ ಮತ್ತೊಮ್ಮೆ ಕನ್ನಾಡನಾಡಿನಲ್ಲಿ ಹುಟ್ಟುವ ತನ್ನ ಬಯಕೆಯನ್ನು, ತಾನು ಹಿಂದೆ ಬನವಾಸಿಯನ್ನು ನೆನೆದು ಹಾಡಿದುದನ್ನೆ ತುಸು ಬದಲಿಸಿ, (ಕ್ರಿ. ಶ. ೯೪೧)

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಿಸರೆ ಮಾನಿಸರ್. ಅಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ? ತೀರದೊಡಂ ಮರಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವದು ನಂದನದೊಳ್ ‘ಕರುನಾಡ’ ದೇಶದೊಳ್

ಎಂದು ಹಿಗ್ಗಿ ಹಾಡಿಕೊಳ್ಳುತ್ತಿರುವನೆಂದು ಭಾವಿಸಿ ನಾನು ಪುಲಕಿತನಾಗುತ್ತಿದ್ದೇನೆ. ತಾವುಗಳೂ ಆಗುತ್ತಿದ್ದೀರಿ, ಅಲ್ಲವೆ?

ಭಾರತಾಂತರ್ಗತವಾಗಿರುವ ಕರ್ಣಾಟಕವನ್ನು ಹಿಂದಿನ ಆ ಕವಿಗಳೂ ಚಕ್ರವರ್ತಿಗಳೂ ಕಂಡ ಕನಸು ನನಸಾಗುವಂತೆ, ಸರ್ವಾಂಗ ಸುಂದರವನ್ನಾಗಿ ಮಾಡಲು ಶಾಸಕರಾಗಿ ತಾವೆಲ್ಲ ಕಂಕಣಬದ್ಧರಾಗಿದ್ದೀರಿ. ಆಂಗ್ಲೇಯ ಕವಿ ಶೆಲ್ಲಿ ಹೇಳಿರುವಂತೆ ‘ಅನಧಿಕೃತ ಶಾಸನಕರ್ತ’ರಲ್ಲಿ ಒಬ್ಬನಾಗಿ ನಾನೂ ಆ ಸ್ವಪ್ನವು ಲೋಕವಾಸ್ತವವಾಗಿ ಮೂಡಲು ನಿಮ್ಮೊಡನೆ ಸೇವೆ ಸಲ್ಲಿಸುತ್ತೇನೆಂದೂ, ನನ್ನ ಕ್ಷೇತ್ರದಲ್ಲಿ ಮತ್ತು ನನ್ನ ರೀತಿಯಲ್ಲಿ ಕೈಲಾದಮಟ್ಟಿಗೆ ಕೊನೆಯುಸಿರು ಇರುವವರೆಗೂ ದುಡಿಯುತ್ತೇನಂದೂ ಭರವಸೆ ಕೊಡುತ್ತೇನೆ.

ಸಾಧಿತವಾಗಬೇಕಾಗಿರುವ ಕಲ್ಯಾಣವೊ ಅಪಾರವಾಗಿದೆ. ನೂರಾರು ಮಂಗಲದ ಮುಖಗಳು ನಮ್ಮ ನಿರಂತರ ವ್ಯವಸಾಯವನ್ನು ಹಾರೈಸುತ್ತಿವೆ. ಪರಿಹರಿಸಿಕೊಳ್ಳ ಬೇಕಾಗಿರುವ ಅನಿಷ್ಟಗಳೂ ಅನೇಕವಿದ್ದು ಸಾಕಷ್ಟು ಕಾಡುತ್ತಿವೆ. ಸಣ್ಣ ಪುಟ್ಟ ವಿವರಗಳಲ್ಲಿ ನಮ್ಮೆಲ್ಲರಿಗೂ ಒಮ್ಮನ ಒಕ್ಕೊರಲು ಇರದಿದ್ದರೂ ರಾಷ್ಟ್ರಕ್ಷೇಮಸಾಧನೆಯ ವಿಷಯದಲ್ಲಿ  ನಾವೆಲ್ಲ ಏಕಹೃದಯರೆ! ಸರ್ವಾಧಿಕಾರ ಮಾರ್ಗದಲ್ಲಿ ಸತ್ ಫಲವಾಗಲಿ ದುಷ್ಫಲವಾಗಲಿ ಶೀಘ್ರಸಿದ್ಧವಾಗುವಂತೆ ಪ್ರಜಾಸತ್ತೆಯ ವಿಧಾನಮಾರ್ಗದಲ್ಲಿ ಆಗಲು ಸಾಧ್ಯವಿಲ್ಲವೆಂದು ಅರಿತಿರುವ ನಾವೆಲ್ಲರೂ, ಕ್ಷೇಮಕಾತರತೆಯಲ್ಲಾಗಲಿ ಅದನ್ನು ಬೇಗ ಸಾಧಿಸಬೇಕೆಂಬ ತೀವ್ರಾತುರದಲ್ಲಾಗಲಿ ಮಂದಜಡರಾಗದೆ, ನಿರ್ವೈರವಾದ ಮೈತ್ರಿಯ ಮೂಲಾಧಾರದ ಮೇಲೆ ಮುಂದುವರಿಯುತ್ತಿದ್ದೇವೆ ಎಂಬುದರಲ್ಲಿ ಸಂದೇಹವಿಲ್ಲ.

ನಿಮ್ಮಲ್ಲಿ ಅನೇಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಲಾಳುಗಳಾಗಿ ದಳಪತಿಗಳಾಗಿ ಹೋರಾಡಿದ್ದೀರಿ; ಕೆಲವರಂತೂ ಆತಿರಥ ಮಹಾರಥರಾಗಿ ಹೋರಾಡಿ ಹೆಸರುಗಳಿಸಿದ್ದೀರಿ. ಕೆಲವರು ದೇಶಸೇವೆಗಾಗಿ ಮನೆಮಾರು ಜೀವನವೃತ್ತಿಗಳನ್ನು ತ್ಯಾಗಮಾಡಿದ್ದೀರಿ; ಕೆಲವರು ಲಾಠಿಯೇಟು ತಿಂದಿದ್ದೀರಿ; ಕೆಲವರು ಸೆರೆಮನೆಗಳಲ್ಲಿ ತಪಸ್ಸುಮಾಡಿದ್ದೀರಿ; ಮತ್ತೆ ಕೆಲವರು ನೇರವಾಗಿ ಸಂಗ್ರಾಮದಲ್ಲಿ ಭಾಗವಹಿಸದಿದ್ದರೂ ಮನ ಧನ ಸುತ ಬಂಧು ಮಿತ್ರರನ್ನು ಸ್ವಾತಂತ್ರ್ಯಕಾಳಿಗೆ ಬಲಿದೆತ್ತು ದುಃಖಗ್ನಿಯಲ್ಲಿ ಬೆಂದಿದ್ದೀರಿ. ಅವರಿವರಿರಲಿ, ಯಃಕಶ್ಚಿತರು ಕೂಡ, ಆಯಸ್ಕಾಂತದ ಪ್ರಭಾವಕ್ಕೆ ಸಿಲುಕಿದ ಸಾಮಾನ್ಯ ಲೋಹವೂ ಕಾಂತತ್ವ ಪಡೆಯುವಂತೆ, ಮಹಾತ್ಮಾ ಗಾಂಧೀಜಿಯ ತಪೋಮಯ ಸಾನ್ನಿಧ್ಯದ ಪ್ರಭಾವಕ್ಕೆ ಒಳಗಾಗಿ ಪೌರಾಣಿಕಸದೃಶವಾದ ಮಹಾ ವೀರತ್ವದಿಂದ ಅದ್ಭುತ ಸಾಹಸಗಳನ್ನೆಸಗಿ ಹೋಗಿದ್ದಾರೆ. ಅವರೆಲ್ಲರ ಬಲಿದಾನದ ಮುಂದೆ ನನ್ನಂತಹ ಸೇವೆ, ಹಾಲಿನ ಮುಂದೆ ನೀರಿನಂತೆ, ನಗಣ್ಯ ಎಂಬುದನ್ನು ಚೆನ್ನಾಗಿ ಮನಸ್ಸಿನಲ್ಲಿಟ್ಟುಕೊಂಡು, ನಾನು ಮುಂದೆ ಆಡಲಿರುವ ನಾಲ್ಕು ಮಾತುಗಳಿಗೆ ಅಪಾರ್ಥವನ್ನಾಗಲಿ ಅಹಂಕಾರವನ್ನಾಗಲಿ ಆರೋಪಿಸದಿರಲಿ ಎಂಬುವ ಉದ್ದೇಶದಿಂದ ಆತ್ಮಕಥಾರೂಪವಾದ ಒಂದೆರಡು ಮಾತು ಹೇಳುತ್ತೇನೆ, ಕ್ಷಮಿಸಬೇಕು.

ನಾನು ಲಾಠಿಯೇಟು ತಿಂದಿಲ್ಲ; ಸೆರೆಮನೆಗೆ ಹೋಗಿಲ್ಲ; ಬ್ರಿಟಿಷರ ವಿರುದ್ಧವಾಗಿ ತಿಲಕರ ಮತ್ತು ಗಾಂಧೀಜಿಯ ಪ್ರಭಾವವು ಪ್ರಚೋದಿಸಿದ ವಿದ್ಯಾರ್ಥಿಮೆರವಣೆಗೆಗಳಲ್ಲಿ ಕೂಗಿಕೊಂಡು ಅಲೆದಿದ್ದೇನೆ. ವಿದೇಶಿ ವಸ್ತ್ರದಹನ ಯಜ್ಞಗಳಲ್ಲಿ ಭಾಗವಹಿಸಿ, ಪ್ರೇಕ್ಷಕನಾಗಿನಿಂತಿದ್ದು, ಪಕ್ಕದಲ್ಲಿ ನಿಂತಿದ್ದ ಮಿತ್ರರು ಹುರಿದುಂಬಿಸಿದ್ದಕ್ಕಾಗಿ ತಾತ್ಕಾಲಿಕ ಭಾವಾವೇಶಕ್ಕೆ ಒಳಗಾಗಿ ಇದ್ದದ್ದೊಂದು ಅಂಗಿಯನ್ನು ಟೋಪಿಯನ್ನೂ ಬೆಂಕಿಗೆ ಎಸೆದದ್ದೂ ಉಂಟು!

ಆದರೆ ದೇಶದಲ್ಲಿ ನಡೆಯುತ್ತಿದ್ದದ್ದು ಏನು ಎಂಬುದರ ಅರ್ಥದ ಅರಿವು ಮಲೆನಾಡಿನ ಕಾಡಿನ ಮೂಲೆಯ ಹಳ್ಳಿಯಿಂದ ಬಂದಿದ್ದ ಬಾಲಕನ ಗ್ರಾಮಿಣ ಪ್ರಜ್ಞೆಗೆ ಗೋಚರವಾದ ಮೇಲೆ, ಸುಮಾರು ೧೯೨೫ – ೨೬ ರಿಂದ ೧೯೪೭ – ೪೮ರವರೆಗೆ ನಡೆದ ಭಾರತದ ಜಗನ್ಮಹಾದ್ಭುತ ಸ್ವಾತಂತ್ರ್ಯ ಸಂಗ್ರಾಮದ ಚಿತ್ಸಾಗರದಲ್ಲಿ ನನ್ನ ಕವಿಚೇತನಸಮುದ್ರ ಸಂಪೂರ್ಣ ಮಗ್ನವಾಗಿಬಿಟ್ಟಿತು. ಆ ಬೃಹತ್ಸಾಗರದ ಸಂಮಥನ ಕ್ಷೋಭೆಯಿಂದ ಉಲ್ಲೋಲಕಲ್ಲೋಲವಾದ ಮಹಾತರಂಗಗಳೆಲ್ಲ ಈ ಕವಿಚೇತನ ಸಮುದ್ರದಲ್ಲಿಯೂ ಪ್ರತಿಫಲಿತವಾಗಿ ಸಾವಿರಾರು ಕವನರಾಶಿ ಪುಂಜೀಭೂತವಾದುವು, ಸಾಹಿತ್ಯವೇಲೆಯಲ್ಲಿ. ಆ ಕಾಲದಲ್ಲಿ ನಡೆದ ಯಾವ ಮಹಾಘಟನೆಯೂ ಬಹುಶಃ ನನ್ನ ಲೀಖನಿಯಿಂದ ವಂಚಿತವಾಗಿಲ್ಲ. ವಿಭೂತಿ ಪ್ರಮಾಣದ ಯಾವ ಮಹದ್ ವ್ಯಕ್ತಿಯಾಗಲಿ ಯವ ಮಹತ್ ಸಂಗತಿಯಾಗಲಿ ಈ ಕವಿಚೇತನದಲ್ಲಿ ಪ್ರತಿಸ್ಪಂದಿತವಾಗದೆ ಹೋಗಿಲ್ಲ. ‘ಪಾಂಚಜನ್ಯ’, ‘ಕೋಗಿಲೆ ಮತ್ತು ಸೋವಿಯಟ್ ರಷ್ಯಾ’,  ‘ಕೃತ್ತಿಕೆ’, ಮತ್ತು  ‘ಇಕ್ಷುಗಂಗೋತ್ರಿ’ ಈ ಕವನ ಸಂಗ್ರಹಗಳಲ್ಲಿ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಚಿರಸ್ಮರಣೀಯವಾದ ಸನ್ನಿವೇಶಗಳೂ ಘಟನೆಗಳೂ ವ್ಯಕ್ತಿಗಳೂ ವ್ಯಕ್ತಿಜೀವನದ ಭವ್ಯವ್ಯಾಪಾರಗಳೂ ಕಂಡರಣೆಗೊಂಡು, ಆ ಸಂಗ್ರಾಮದ ಇತಿಹಾಸವನ್ನು ಶಾಶ್ವತಗೈಯ್ಯುವ ಸ್ತಂಭದೀಪಿಕೆಗಳಂತೆ ಪಂಕ್ತಿಗೊಂಡು ನಿಂತಿವೆ. ಅರುವತ್ತು ದಿವಸದ ಉಪವಾಸಾನಂತರ ಜೈಲಿನಲ್ಲಿಯೆ ಹುತಾತ್ಮನಾದ ಜತೀಂದ್ರನಾಥದಾಸನಿಂದ ೨೦ – ೧೯ – ೧೯೨೯ರಲ್ಲಿ ಪ್ರೇರಿತವಾದ ‘ಪಾಂಚಜನ್ಯ’ ಎಂಬ ವೀರಕವನದಿಂದ ಹಿಡಿದು ಸಾವಿರದ ಒಂಭೈನೂರ ನಾಲ್ವತ್ತೇಳನೆಯ ಆಗಸ್ಟ್ ಹದಿನೈದರ ಮಧ್ಯರಾತ್ರಿಯ ಜಗದ್ ಭವ್ಯ ಮಹಾಸಮಾರಂಭದಿಂದ ಪ್ರಚೋದಿತವಾದ ‘ಸ್ವಾತಂತ್ರ್ಯೋತ್ಸವ ಮಹಾಪ್ರಗಾಥ’ದ ವರೆಗೂ ವ್ಯಾಪಿಸಿದೆ. ಆ ಜ್ಯೋತಿಃಪಂಕ್ತಿ.

ಅಖಿಲ ಬಾರತಿಯ ಮಟ್ಟದಲಿ ಮಾತ್ರವಲ್ಲ,  ಪ್ರಾದೇಶಿಕ ಮಟ್ಟಕ್ಕೂ ಅದು ವ್ಯಾಪಿಸುತ್ತದೆ. ಇನ್ನೂ ಎಲ್ಲಿಯೂ ಪ್ರಕಟವಾಗದಿರುವ ಒಂದು ಕವನದ ಮೊದಲನೆಯ  ಎರಡು ಪಂಕ್ತಿಗಳು ನನ್ನ ನೆನಪಿಗೆ ಬರುತ್ತಿವೆ. ಮೈಸೂರು ಕಾಂಗ್ರೆಸ್ಸಿನ ಹೋರಾಟಕ್ಕೆ ಸೇರಿದ್ದವು ಅವು:

ಈ ಧ್ವಜಗೌರವವನು ಕಾಯಿ;
ಶಿವನೆದೆ ತಲ್ಲಣಿಪುದು, ತಾಯಿ!

ಬಹುಶಃ ಆ ಕವನ ಶಿವಪುರದ ಕಾಂಗ್ರೆಸ್ ಅಧಿವೇಶನದಲ್ಲಿ ಕಾಂಗ್ರೆಸ್ ಧ್ವಜಾರೋಹಣಕ್ಕೆ ಸಂಬಂಧಪಟ್ಟಿದ್ದೆಂದು ತೋರುತ್ತದೆ. ಪತ್ರಿಕೆಗಳಲ್ಲಿ ಓದಿದ್ದ ಜ್ಞಾಪಕ ನನಗೆ. ಮಹಿಳೆಯೊಬ್ಬರು ಧ್ವಜಧಾರಿಯಾಗಿ ಆರೋಹಿಸಲು ಮುನ್ನುಗ್ಗುತ್ತಿದ್ದಾಗ ಗುಂಡು ಹಾರಿಸಲು ಸಿದ್ಧರಾಗಿ ಕೋವಿಯ ಬಿಲ್ಲೆತ್ತಿ ನಿಂತಿದ್ದ ಪೋಲೀಸರು ತಡೆದ ಸಂರ್ಭವಿರಬೇಕು. ಬಹುಶಃ ಮಿರ್ಜಾ ಸಾಹೇಬರ ವಿವೇಕಪೂರ್ಣವಾದ ಸದ್ಭಾವದಿಂದ ಗುಂಡು ಹಾರುವುದು ತಪ್ಪಿ ಆ ಮಾನ್ಯ ಮಹಿಳೆ ಇಂದು ಉಚ್ಚ ಸ್ಥಾನದಲ್ಲಿ ಅಧಿಕಾರಾಢರಾಗಿರಲು ಸಾಧ್ಯವಾಯಿತೆಂದು ತೋರುತ್ತದೆ.

ಸದ್ಯಕ್ಕೆ ಅದಿರಲಿ.ಎಂತೋ ಅಂತು ಆ ದಾರುಣ ದಿವ್ಯ ಕಥೆ ಮುಗಿದು ನಾವೀಗ ಭವ್ಯ ಸ್ವತಂತ್ರ ಭಾರತದ ಪುಣ್ಯವಂತ ಪ್ರಜೆಗಳಾಗಿದ್ದೇವೆ. ಸಮಾಜವಾದ ಸ್ವರೂಪದ ಸ್ವತಂತ್ರ ಪ್ರಜಾಸತ್ತೆಯ ಸರ್ವಧರ್ಮ ಸಮನ್ವಯದ ಮತ್ತು ಸರ್ವೊದಯದ ಲೌಕಿಕ ಕ್ಷೇಮ ರಾಷ್ಟ್ರವನ್ನು ನಿರ್ಮಿಸಲು ವ್ರತತೊಟ್ಟು ಕಾರ್ಯೊನ್ಮುಖರಾಗಿದ್ದೇವೆ. ಎಡರು ತೊಡರುಗಳೇನೆ ಇರಲಿ, ಕ್ಷೇಮ ಕಷ್ಟಗಳೇನೆ ಬರಲಿ, ಅದು ಸಿದ್ಧಿಸುವುದರಲ್ಲಿ ಸಂದೇಹವಿಲ್ಲ. ಕವಿ ಸರ್ವನಾಶದ ಇದಿರಿನಲ್ಲಿಯೂ ಅಶಾವಾದಿಯೆ! ಆಟಂ ಬಾಂಬಿನ ಮೃತ್ಯುಗರ್ಭದಲ್ಲಿಯೂ ಅಮೃತೋದ್ಭವವಾಗುವ ಹಾರೈಕೆಯನ್ನು ಕೈಬಿಡುವುದಿಲ್ಲ.

ಕನ್ನಡನಾಡು ಒಟ್ಟಾಗಿದೆ. ಕನ್ನಡವನ್ನು ಅಧಿಕೃತ ಭಾಷೆ ಎಂದು ಘೋಷಿಸಿದ್ದೀರಿ. ಇತರ ರಾಜ್ಯಗಳಂತೆ ಕರ್ಣಾಟಕವೂ ರಾಜ್ಯಾಂಗದ ಪ್ರಕಾರ ತನ್ನ ರಾಜ್ಯಪಾಲರನ್ನು ಪಡೆದು, ಪ್ರಜಾಸತ್ತೆಯಲ್ಲಿ ಉಳಿದ ರಾಜ್ಯಾಗಳಿಗೆ ಹಿಂದೆ ಬೀಳದೆ ಸಮಾನತೆಯನ್ನು ಸಾಧಿಸಿದೆ. ಇನ್ನು ‘ಕರ್ಣಾಟಕ’ ಎಂದು ಹೆಸರಿಡುವ ವಿಚಾರದಲ್ಲಿ ಏನೋ ಒಂದು ತರಹದ ಒಲಿದು ಒಂದಾದವರ ಮುನಿಸಿನ ಕಚ್ಚಾಟ ನಡೆಯ್ಯುತ್ತಿರುವಂತೆ ತೋರುತ್ತಿದೆ. ಆರ್ಷೇಯ ಕಾಲದಿಂದಲೂ, ಭೌಗೋಲಿಕವಾಗಿ ಬೇರೆ ಬೇರೆ ಹೆಸರಿದ್ದ ಬಹು ರಾಜ್ಯಗಳಲ್ಲಿ ಹಂಚಿ ಹೋಗಿದ್ದಾಗಲೂ, ಯಾವ ಪ್ರದೇಶವನ್ನು ಕವಿಗಳೂ ಸಾಹಿತಿಗಳೂ ಮತಪ್ರಚಾರಕರೂ ಜಗದ್ಗುರುಗಳೂ ಮಹಾಜನರೂ  ಇತಿಹಾಸಕಾರರೂ ವಿದೇಶಿಯ ಪವಾಸಿಗಳೂ  ‘ಕರ್ಣಾಟಕ’ ಎಂದು ಕರೆದೂ ಕರೆದೂ ಅದನ್ನೊಂದು ‘ಮಂತ್ರ’ವನ್ನಾಗಿ ಮಾಡಿ, ಅದಕ್ಕೆ ‘ಶಕ್ತಿ’ ನೀಡಿದ್ದಾರೆಯೊ ಆ ಪ್ರದೇಶಕ್ಕೆ ಕರ್ಣಾಟಕ ಎಂಬ ಹೆಸರು ಅತ್ಯಂತ ಸಮಂಜಸವೂ ಉಚಿತವೂ ಆಗಿರುವುದರಿಂದ  ಇಂದೊ ನಾಳೆಯೊ ಅದು, ರಾಜಕೀಯದ ಸ್ಪರ್ಧಾಭಾವದಿಂದಲ್ಲದೆ, ಸಾಂಸ್ಕ್ರತಿಕವಾದ ಮೈತ್ರಿಯಿಂದಲೆಯೆ ಸರ್ವಸಂತೋಷದಿಂದ ಸರ್ವಸಮ್ಮತವಾಗಿ ಘೋಷಿತವಾಗುತ್ತದೆ ಎಂಬುದು ಕವಿಯ ಶ್ರದ್ಧೆ.

ಈ  ನಮ್ಮ ಕರ್ಣಾಟಕತ್ವ ಎಂದೆಂದಿಗೂ ಭಾರತೀಯತ್ವಕ್ಕೆ ಅವಿರುದ್ಧವಾಗಿ ನಿಲ್ಲುತ್ತದೆ. ಕರ್ಣಾಟಕ ಮಾತೆಗೆ ಜಯಘೋಷ ಮಾಡುವಾಗಲೆಲ್ಲ ಭಾರತಮಾತೆಯ ಪುತ್ರಿಯೆಂದು ಮೊದಲೆ ಘೋಷಿತಳಾಗುತ್ತಾಳೆ.

ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ! —

ನಾವು ಮಕ್ಕಳಾಗಿದ್ದಾಗ ಕೆಲವರು ಕಿತಾಪತಿಯ ದೊಡ್ಡವರು ತಮಾಷೆ ನೋಡುವುದಕ್ಕಾಗಿ ನಮಗೊಂದು ಪ್ರಶ್ನೆ ಹಾಕುತ್ತಿದ್ದರು: “ನೀನು ಅವ್ವನ ಮಗನೋ? ಅಪ್ಪಯ್ಯನ ಮಗನೋ?” ಎಂದು. ನಾವು ಕಕ್ಕಾಬಿಕ್ಕಿಯಾಗುತ್ತಿದ್ದೆವು. ಪ್ರಶ್ನೆ ಕೇಳುವವರಿಗೆ ಬೇಕಾಗಿದ್ದುದೂ ಅದೇಯೆ. ನಾವು ನಮ್ಮ ಪುಟ್ಟ ಮಿದುಳಿನಿಂದಲೆ ಸ್ವಲ್ಪ ಯೋಚನೆ ಮಾಡಿ — ಹುಟ್ಟಿದಂದಿನಿಂದಲೂ ಹಾಲುಕೊಟ್ಟು ಹತ್ತಿರ ಮಲಗಿಸಿಕೊಳ್ಳುವವಳು ಅವ್ವ ತಾನೆ? — ‘ನಾನು ಅವ್ವನ ಮಗ!’ ಎಂದರೆ, ಕೇಕೆಹಾಕಿ ಕೈ ಚಪ್ಪಾಳೆ ಹೊಡೆದು ನಗುತ್ತಿದ್ದರು. ಅರೆ! ಅರೆ! ಏನೋ ತಪ್ಪು ಹೇಳಿಬಿಟ್ಟೆನಲ್ಲಾ ಎಂದು, ಅದನ್ನು ಬೇಗನೆ ತಿದ್ದಿಕೊಳ್ಳಲೆಂದು ‘ಅಲ್ಲ, ಅಲ್ಲ; ನಾನು ಅಪ್ಪಯ್ಯನ ಮಗ!’ ಎಂದರೆ ಇನ್ನೂ ಗಟ್ಟಿಯಾಗಿ ಕೇಕೆ ಹಾಕಿ ಕೈ ಚಪ್ಪಾಳೆ ಕುಟ್ಟಿ, ನಕ್ಕು, ನಮ್ಮನ್ನು ಕಂಗಾಲು ಮಾಡುತ್ತಿದ್ದರು. ಹಾಗೆಯೆ ಈ ತಂದುಹಾಕುತನದ ಕಿತಾಪತಿಯ ಜನ ನಮ್ಮ ಕರ್ಣಾತಕತ್ವ ಮಹಾರಾಷ್ಟ್ರತ್ವ ಆಂಧ್ರತ್ವಗಳಿಗೂ ನಮ್ಮ ಭಾರತೀಯತ್ವಕ್ಕೂ ವಿರೋಧ ಭಾವದ ಆರೋಪಣೆ ಮಾಡುತ್ತಾರೆ, ತಮ್ಮ ಸ್ವಾರ್ಥಸಾಧನೆಗಾಗಿ ಅಂತಹ ಕುಹಕದ ಕೂಣಿಗೆ ಬೀಳದಂತೆ ನಮ್ಮ ರಾಷ್ಟ್ರನಿಷ್ಠೆಯನ್ನು ರಕ್ಷಿಸಿಕೊಂಡು ನಾವು ವಿವೇಕಶಾಲಿಗಳಾಗಿ ಮುಂಬರಿಯಬೇಕು.

ಮಹನೀಯರೆ, ಕೊನೆಯದಾಗಿ ಅಧಿಕೃತ ಶಾಸನಕರ್ತರಾದ ನಿಮ್ಮಲ್ಲಿ ಅನಧಿಕೃತ ಶಾಸನಕರ್ತನಾದ ನನ್ನ ಒಂದು ಅಹವಾಲು: ಅದು ಇಂಗ್ಲಿಷ್ ಭಾಷೆಗೂ ಶಿಕ್ಷಣ ಮಾಧ್ಯಮಕ್ಕೂ ಸಂಬಂಧಪಟ್ಟಿದ್ದು. ವಿವರಕ್ಕಾಗಲಿ ವಾದಕ್ಕಾಗಲಿ ಜಿಜ್ಜಾಸೆಗಾಗಲಿ ನಾನೀಗ ಕೈ ಹಾಕುವುದಿಲ್ಲ. ಅದು ತತ್ಸಮಯ ಸಾಧ್ಯವೂ ಅಲ್ಲ; ಅದಕ್ಕಿಲ್ಲಿ ಕಾಲಾವಕಾಶವೂ ಇಲ್ಲ. ತಮ್ಮ ಗಮನವನ್ನು ಅತ್ತಕಡೆ ಎಳೆದು, ಅದು ತಮ್ಮ ಶೀಘ್ರ ಪರಿಶೀಲನೆಗೂ ಇತ್ಯರ್ಥಕ್ಕೂ ಒಳಗಾಗುವಂತೆ ಮಾಡುವುದೆ ನನ್ನ ಸದ್ಯಃಪ್ರಯತ್ನದ ಮುಖ್ಯ ಉದ್ದೇಶ. ಆ ವಿಚಾರವಾಗಿ ನಮ್ಮ ರಾಷ್ಟ್ರ ಪಿತನಾದಿಯಾಗಿ ಸಾವಿರಾರು ದೇಶಭಕ್ತರೂ ನೂರಾರು ಸ್ವದೇಶೀಯ ಮತ್ತು ವಿದೇಶಿಯ ವಿದ್ಯಾತಜ್ಞರೂ ಹೇಳಿದ್ದಾರೆ, ಮಾತನಾಡಿದ್ದಾರೆ, ಬರೆದಿದ್ದಾರೆ. ಹೊತ್ತಗೆ ಹೊತ್ತಗೆಗಳನ್ನೆ ಪ್ರಕಟಿಸಿಯೂ ಇದ್ದಾರೆ. ಆದರೆ ನಮ್ಮ ದೇಶದ ಪ್ರಚ್ಛನ್ನ ಶತ್ರುಗಳಾದ ಸ್ವಾರ್ಥಸಾಧಕ ಪಟ್ಟಭದ್ರಹಿತಾಸಕ್ತ ಪ್ರತಿಗಾಮಿ ಶಕ್ತಿಗಳು, ಮಕ್ಕಳಿಗೆ ಹಾಲುಣಿಸುವ ನೆವದಿಂದ ಅವಳನ್ನು ಕೊಲ್ಲುತ್ತಿದ್ದ ಭಾಗವತ ಪುರಾಣದ ಪೂತನಿಯಂತೆ, ಬಲಾತ್ಕಾರದ ಇಂಗ್ಲಿಷ್ ಬಾಷೆಯಿಂದಲೂ ಇಂಗ್ಲಿಷ್ ಮಾಧ್ಯಮದಿಂದಲೂ ವರ್ಷ  ವರ್ಷವೂ ಪರೀಕ್ಷೇಯ ಜಿಲೊಟಿನ್ನಿಗೆ ಕೋಟ್ಯಂತರ ಬಾಲಕರ ಮತ್ತು ತರುಣರ ತಲೆಗಳನ್ನು ಬಲಿಕೊಡುತ್ತಿದ್ದಾರೆ. ಆ ನಷ್ಟದ ಪರಿಮಾಣವನ್ನು ಊಹಿಸಲೂ ಸಾಧ್ಯವಿಲ್ಲ. ಬಹುಶಃ, ಸರಿಯಾಗಿ ಲೆಕ್ಕ ಹಾಕಿದರೆ, ನಾಲ್ಕಾರು ಪಾಂಚವಾರ್ಷಿಕ ಯೋಜನೆಗಳ ಮೊತ್ತವೆ ಆದರೂ ಅಗಬಹುದೇನೋ!

ಇಂಗ್ಲಿಷ್ ಭಾಷೆ ಬಲತ್ಕಾರದ ಸ್ಥಾನದಿಂದ ಐಚ್ಛಿಕ ಸ್ಥಾನಕ್ಕೆ ನಿಯಂತ್ರಣ ಗೊಳ್ಳದಿದ್ದರೆ, ಇಂಗ್ಲಿಷ್ ಶಿಕ್ಷಣ ಮಾಧ್ಯಮ ತೊಲಗಿ ಪ್ರಾದೇಶಿಕ ಭಾಷೆಗೆ ಆ ಸ್ಥಾನ ಲಭಿಸದಿದ್ದರೆ, ನಮ್ಮ ದೇಶ ಹತ್ತೇ ವರ್ಷಗಳಲ್ಲಿ ಸಾಧಿಸಬೇಕಾದುದನ್ನು ಇನ್ನೊಂದು ನೂರು ವರ್ಷಗಳಲ್ಲಿಯೂ ಸಾಧಿಸಲಾರದೆ ನಿತ್ಯರೋಗಿಯಂತಿರಬೇಕಾಗುತ್ತದೆ. ಅಲ್ಲದೆ ಮತ್ತೂ ಒಂದನ್ನು ಕಂಡಂತೆ ಹೇಳುತ್ತೇನೆ ತಮಗೆ; ನಮ್ಮ ಕಾರ್ಖಾನೆಗಳನ್ನೆಲ್ಲ ನಿಲ್ಲಿಸಿ, ಅಣೆಕಟ್ಟುಗಳನ್ನೆಲ್ಲ ತಡೆಹಿಡಿದು, ಪ್ರಯೋಗಶಾಲೆ ಸಂಶೋಧನಾಗಾರಗಳನ್ನೆಲ್ಲ ವಜಾಮಾಡಿ, ಹಲವು ಪಾಂಚವಾರ್ಷಿಕ ಯೋಜನೆಗಳ ಆ ಹಣವನ್ನೆಲ್ಲ ಇಂಗ್ಲಿಷ್  ಸ್ಟಾಂಡರ್ಡ್ ಅನ್ನು ಉತ್ತಮಗೊಳಿಸುವುದಕ್ಕಾಗಿಯೆ ವೆಚ್ಚಮಾಡಿದರೂ, ಇನ್ನು ನೂರು ವರ್ಷಗಳ ಅನಂತರವೂ ನಮ್ಮ ಮಕ್ಕಳ ಇಂಗ್ಲಿಷಿನ ಮಟ್ಟ ಈಗಿರುವುದಕ್ಕಿಂತ ಮೇಲಕ್ಕೇರುವುದಿಲ್ಲ! ಅಲ್ಲದೆ, ಸಂಖ್ಯೆಯೂ ವಿಸ್ತಾರವೂ ಹೆಚ್ಚುತ್ತಿರುವುದನ್ನು ಗಮನಿಸಿದರೆ, ಈಗಿರುವ ಮಟ್ಟವೂ ಇಳಿದು ದುರ್ಗತಿಹೊಂದುವುದರಲ್ಲಿ ಸಂದೇಹವಿಲ್ಲ.

ಆಹಾರ ಸಮಸ್ಯೆಗಿಂತಲೂ ಚೀಣಿಯರ ಸಮಸ್ಯೆಗಿಂತಲೂ ಗುರುತರವಾದ ಸಮಸ್ಯೆ ಇದು. ಈ ಬಲತ್ಕಾರದ ಇಂಗ್ಲಿಷ್ ಶಿಕ್ಷಣದ ಪ್ರಚ್ಛನ್ನ ಭ್ರಷ್ಟಚಾರವನ್ನು ನಷ್ಟದಲ್ಲಾಗಲಿ ಹಾನಿಯಲ್ಲಾಗಲಿ, ಸರಿದೂಗುವ ಭ್ರಷ್ಟಾಚಾರ ಮತ್ತೊಂದಿಲ್ಲ. ಆದರೆ ಅದು ಪ್ರಚ್ಛನ್ನವಾದ್ದರಿಂದಲೂ, ಅದರ ದುಷ್ಪರಿಣಾಮ ದೃಗ್ಗೋಚರವಾಗುವ ಮಟ್ಟಕ್ಕೇರಲು ಸ್ವಲ್ಪ ದೀರ್ಘಕಾಲ ಹಿಡಿಯುವುದರಿಂದಲೂ, ನಾವು ಹುಸಿನೆಮ್ಮದಿಯ ಭಾವದಲ್ಲಿ ಈಗಲೆ ಎಚ್ಚರಗೋಳ್ಳದೆ ತಟಸ್ಥರಾಗಿದ್ದರೆ, ಮುಂದೆ ಮಹಾ ಪಶ್ಚಾತ್ತಾಪಕ್ಕೆ ಒಳಗಾಗಬೇಕಾಗುತ್ತದೆ.

ನಿಮ್ಮ ಕಣ್ಣು ಮುಂದೆಯೆ ನಡೆಯುತ್ತಿರುವ ಒಂದು ಖಚಿತವೂ ಮುಷ್ಟಿ ಗ್ರಾಹ್ಯವೂ ಆದ ನಿದರ್ಶನ ತೆಗೆದುಕೊಂಡರೆ ವಿಷಯ ಸ್ಪಷ್ಟತರವಾಗುತ್ತದೆ. ಈ ವರ್ಷದಿಂದ ಅನೇಕ ಹೈಸ್ಕೂಲುಗಳಲ್ಲಿ ಹನ್ನೊಂದನೆಯ ತರಗತಿಯನ್ನು ತೆರೆದಿದ್ದಾರೆ. ಹನ್ನೊಂದನೆಯ ತರಗತಿ ವಿಶ್ವವಿದ್ಯಾನಿಲಯದ ಪ್ರೀಯೂನಿವರ್ಸಿಟಿ ಕೋರ್ಸಿಗೆ ಸಮವಾದುದ್ದು. ಪಿ.ಯು.ಸಿ.ಯಲ್ಲಿಯೆ ೧೯೫೮ ರಿಂದ ಕನ್ನಡ ಶಿಕ್ಷಣ ಮಾಧ್ಯಮದ ಸೆಕ್ಷನ್‌ಗಳನ್ನು ತೆರೆಯಲಾಯಿತು. ಅದಕ್ಕೆ ಬೇಕಾದ ಎಲ್ಲ ಪಟ್ಯಪುಸ್ತಕಗಳೂ ಸಿದ್ಧವಾದವು. ಫಲಿತಾಂಶಗಳೂ ಆಶ್ಚರ್ಯವಾಗುವಮಟ್ಟಿಗೆ ಉತ್ತಮಗೊಳ್ಳುತ್ತಾ ಬಂದಿವೆ. ಹೀಗಿರುವಲ್ಲಿ, ಗಾಳಿಯಲ್ಲಿಯೂ ಇಂಗ್ಲಷಿನ ಗಂಧವಿಲ್ಲದ ಹಳ್ಳಿಗಾಡಿನ ಹೈಸ್ಕೂಲುಗಳಲ್ಲಿ, ಪಿ.ಯು.ಸಿ.ಗೆ ಸಮನಾದ ಹನ್ನೊಂದನೆಯ ತರಗತಿಗಳನ್ನು ತೆರೆದು, ಎಸ್,ಎಸ್,ಎಲ್.ಸಿ.ವರೆಗೆ ಕನ್ನಡ ಮಾಧ್ಯಮದಲ್ಲಿಯೆ ಓದಿದ್ದ ಹುಡುಗರಿಗೆ, ಇಂಗ್ಲಿಷಿನಲ್ಲಿ ಒಂದು ಸ್ವತಂತ್ರ ವಾಕ್ಯವನ್ನೂ ರಚಿಸಲು ಸಾಮರ್ಥ್ಯವಿಲ್ಲದ ವಿದ್ಯಾರ್ಥಿಗಳಿಗೆ, ಇಂಗ್ಲಿಷ್ ಮಾಧ್ಯಮವನ್ನು ಬಲತ್ತಾರವಾಗಿ ಹೇರಿ — (ಬಲತ್ತಾರವಾಗಿ ಎಂಬುದನ್ನು ತಾವು ಗಮನಿಸಬೇಕು, ಕನ್ನಡ ಮಾಧ್ಯಮವನ್ನು ಸಂಪೂರ್ಣವಾಗಿ ಬಹಿಷ್ಕರಿಸಿರುವುದು ಮಾತ್ರವಲ್ಲದೆ ಆ ತರಗತಿಗಳಲ್ಲಿ ಕನ್ನಡದಲ್ಲಿ ಮಾತನಾಡಲೆ ಕೂಡದು ಎಂಬ ಸುಗ್ರೀವಾಜ್ಞೆಯೂ ಹೊರಟಿದೆಯಂತೆ) — ಹಾಗೆ ಇಂಗ್ಲಿಷ್ ಮಾಧ್ಯಮವನ್ನು ಬಲಾತ್ಕಾರವಾಗಿ ಹೇರಿದುದರ ಉದ್ದೇಶವೇನೊ ಗೊತ್ತಾಗುವುದಿಲ್ಲ. ಮುಂದಿನ ವರ್ಷದ ಪರೀಕ್ಷೆಗಳಲ್ಲಿ ನೀವೆ ನೋಡುತ್ತೀರಿ — ಆ ಹಿಂದುಳಿದ ಗ್ರಾಮ ಪ್ರದೇಶದ ವಿದ್ಯಾರ್ಥಿಗಳು ನೂರಕ್ಕೆ ನೂರೂ ಉದುರಿಹೋಗುತ್ತಾರೆ! ಇದಕ್ಕೆ ಯಾರು ಕಾರಣರು: ಎಸ್.ಎಸ್.ಎಲ್.ಸಿ. ಕನ್ನಡ ಮಾಧ್ಯಮದಲ್ಲಿ ಫಸ್ಟ್‌ಕ್ಲಾಸಿನಲ್ಲಿ ಪಾಸಾಗಿ ನಾಲ್ಕನೆಯ ಅಥವಾ ಐದನೆಯ ರ‍್ಯಂಕ್ ಗಳಿಸಿದ ವಿದ್ಯಾರ್ಥಿ ಪಿ.ಯು.ಸಿ.ಯ ಇಂಗ್ಲಿಷ್ ಮಾಧ್ಯಮದಲ್ಲಿ ಎರಡೋ ಮೂರೋ ವರ್ಷ ಫೈಲ್ ಆದರೆ ಅದಕ್ಕೆ ಯಾರು ಕಾರಣ! ವಿದ್ಯಾರ್ಥಿಯೊ? ಇಂಗ್ಲಿಷ್ ಮಾಧ್ಯಮವನ್ನು ಬಲಾತ್ಕಾರವಾಗಿ ಹೇರಿದ ಅದೂರದೃಷ್ಟಿಯ ಅಧಿಕಾರ ವರ್ಗವೋ? ರಾಜ್ಯದ ಆಡಳಿತ ವಹಿಸಿಕೊಂಡಿರುವ ಸಚಿವ ಮಂಡಲಿಯೊ? ಆ ಸಚಿವ ಮಂಡಲಿಗೆ ಕಾರಣರಾಗ ಜನತಾ ಪ್ರತಿನಿಧಿಗಳೊ? ಆ ಪ್ರತಿನಿಧಿಗಳನ್ನು ಆರಿಸಿರುವ — ವಿದ್ಯಾರ್ಥಿವರ್ಗದ ತಂದೆ ತಾಯಿಯರೆ ಆಗಿರುವ — ಜನತೆಯೊ? ಯಾರು? ಎಂತಾದರಿರಲಿ:

ನಾಡ ಬದುಕಿನ ಬೇರನ್ನೆ ಹಿಡಿದಿರುವ ಈ ಕೇಡಿನ ಕಡೆಗೆ ತಮ್ಮ ಗಮನವನ್ನು ಸೆಳೆದಿದ್ದೇನೆ, ಅಷ್ಟೆ. ಶಾಸನಕರ್ತರಾದ ತಮಗೆ ಬಿಟ್ಟಿದ್ದು ಮುಂದಿನ ಕ್ಷೇಮಂಕರ ಕರ್ತವ್ಯ.

ಮಹನೀಯರೆ, ಔತಣದ ತುದಿಯಲ್ಲಿ ಹಾಗಲಕಾಯಿ ತಿನ್ನಿಸುವಂತೆ, ಕೃತಜ್ಞತಾ ಸೂಚನಾರ್ಥವಾಗಯೆ ಮಾಡಿರುವ ನನ್ನ ಭಾಷಣವನ್ನು ಈ ಸಮಸ್ಯಾಕಟುತ್ವದಿಂದ ಕೊನೆಗಾಣಿಸುವುದು ಅಕ್ಷಮ್ಯ ಅಪರಾಧವಾದೀತು. ಬಿಡಿಸುವ ಸಮಸ್ಯೆಗಳೇನೋ ಯಾವಾಗಲೂ ಇದ್ದೇ ಇರುತ್ತವೆ. ಎಲ್ಲ ಮುಗಿಯಿತು ಎಂಬ ಕಾಲ ಎಂದಿಗೂ ಬರುವುದಿಲ್ಲ, ನಿರಂತರ ಹೋರಾಟವೆ ಸಜೀವತ್ವದ ಲಕ್ಷಣವಲ್ಲವೆ?

ಆದರೆ ಈ ಇಪ್ಪತ್ತು ಇಪ್ಪತ್ತೈದು ವರ್ಷಗಳಲ್ಲಿ ಎಂತೆಂತಹ ಸಮಸ್ಯೆಗಳು ಪರಿಹಾರವಾಗಿವೆ? ಎಂತೆಂತಹ ಹೋರಾಟಗಳಲ್ಲಿ ಜಯಗಳಿಸಿದ್ದೇವೆ? ಎಂತೆಂತಹ ಮಹತ್ ಸಾಧನೆಗಳನ್ನು ಕೈಗೊಂಡು ಸಿದ್ಧಿ ಪಡೆದಿದ್ದೇವೆ. ಯಾವ ಯಾವ ವಲಯಗಳಲ್ಲಿ ಎಂತೆಂತಹ ನವೋದಯಗಳನ್ನು ಉತ್ಥಾನಗೊಳಿಸಿದ್ದೇವೆ. ನೆನೆದರೆ, ರೋಮಾಂಚಿತರಾಗದೆ ಇರಲು ಸಾಧ್ಯವಿಲ್ಲ. ಭಾರತದಂತಹ ಮಹಾ ರಾಷ್ಟ್ರದ ಸ್ವಾತಂತ್ರ ಸಾಧನೆಯೊಂದೇ ಸಾಲದೆ ಒಂದು ಶತಮಾನದ ಹಿಗ್ಗಿಗೆ?

ಈ ಸಮಾರಂಭಕ್ಕೆ ಪ್ರಕೃತವಾದ ಸಾಹಿತ್ಯ ಕ್ಷೇತ್ರದಲ್ಲಂತೂ ಪೂರ್ವೋಕ್ತ ಅವಧಿಯಲ್ಲಿ, ಕನ್ನಡಿಗರು ಅದ್ಭುತ ಕಾರ್ಯಸಾಧನೆ ಮಾಡಿದ್ದಾರೆ. ಇತರ ಯಾವ ದೇಶದ ಯಾವ ಸಾಹಿತ್ಯಕ್ಕೂ ಬಿಟ್ಟುಕೊಡದ ಪ್ರಮಾಣದಲ್ಲಿ ಮಹೋನ್ನತ ಶಿಖರಗಳನ್ನೇರಿ ನಿಂತಿದ್ದಾರೆ. ಧಾರವಾಡದಲ್ಲಿ ಶ್ರೀ ನಿಜಲಿಂಗಪ್ಪನವರಿಂದ ಉದ್ಘಾಟಿತವಾಗಿ ನಡೆದ ಸಾಹಿತ್ಯ ಸಮ್ಮೇಲನದ ನನ್ನ ಅಧ್ಯಕ್ಷ ಭಾಷಣದಲ್ಲಿ ಹೇಳಿದ ಮಾತನ್ನು ಇಲ್ಲಿ ಮತ್ತೊಮ್ಮೆ ಧೈರ್ಯವಾಗಿ ಘೋಷಿಸಬಯಸುತ್ತೇನೆ: “ಕನ್ನಡಿಗರು ವಿನಯಕ್ಕಾಗಿ ಬಗ್ಗಿ ನಡೆಯಬಹುದು: ಆದರೆ ರಿಕ್ತರಂತೆ ಕುಗ್ಗಿ ನಡೆಯಬೇಕಾಗಿಲ್ಲ.”

ಕನ್ನಡಿಗರ ಆ ಅಭ್ಯುದಯದ ಮತ್ತು ಶ್ರೇಯಸ್ಸಿನ ಮಹಾ ವಿಜಯಕ್ಕೆ ಕಿರೀಟಪ್ರಾಯವಾದ ಸಂಕೇತ ಸಾಕ್ಷಿಯಾಗಿದೆ, ನಾಡಿನ ಕವಿಯೊಬ್ಬನಿಗೆ ನಾಡಿನ ಮಹಾಜನರ ಪ್ರತಿನಿಧಿಗಳಾದ ತಾವು, ಇಂದು, ಈ ಸಮಾರಂಭದಲ್ಲಿ, ಆಶೀರ್ವಾದಪೂರ್ವಕವಾಗಿ ನೀಡುತ್ತಿರುವ ಈ ‘ರಾಷ್ಟ್ರಕವಿ’ ಪ್ರಶಸ್ತಿ. ಆ ಗೌರವ ಪ್ರದಾನಕ್ಕಾಗಿ ನಾನು ಮತ್ತೊಮ್ಮೆ ತಮ್ಮೆಲರಿಗೂ ನನ್ನ ಕೃತಜ್ಞತಾಪೂರ್ವಕವಾದ ಧನ್ಯವಾದಗಳನ್ನು ಅನಂತಾನಂತ ನಮಸ್ಕಾರಗಳನ್ನೂ ನಿವೇದಿಸುತ್ತೇನೆ.

ಜಯ್ ಕರ್ಣಾಟಕ!
ಜಯ್ ಹಿಂದ್!


* ‘ರಾಷ್ಟ್ರಕವಿ’ ಪ್ರಶಸ್ತಿಯನ್ನು ಸ್ವೀಕರಿಸಿ ಮಾಡಿದ ಭಾಷಣ. ಬೆಂಗಳೂರು: ಜನವರಿ ೨೭, ೧೯೬೫.