ಬ್ರಹ್ಮಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ

ಸರ್ವವಿದ್ಯಾಧಿದೇವಿ ಯಾ ತಸ್ಮೈ ವಾಣ್ಯೈ ನಮೋ ನಮಃ
ಯಯಾ ವಿನಾ ಜಗತ್‌ ಸರ್ವಂ ಶಶ್ವಜ್ಜೀವನ್‌ಮೃತಂ ಭವೇತ್
ಜ್ಞಾನಾಧಿದೇವೀ ಯಾ ತಸ್ಮೈ ಸರಸ್ವತ್ಯೈ ನಮೋ ನಮಃ
ಯಾಯಾ ವಿನಾ ಜಗತ್ ಸರ್ವಂ ಮೂಕಮುನ್ಮತ್ತವತ್ ಸದಾ
ಯಾ ದೇವೀ ವಾಗಧಿಷ್ಠಾತ್ರಿ ತಸ್ಯೈ ವಾಣ್ಯೈ ನಮೋ ನಮಃ

ಮಾತರ್ ಮಾತರ್ ನಮಸ್ತೇ
ದಹ ದಹ ಜಡತಾಂ
ದೇಹಿ ಬುದ್ಧಿಂ ಪ್ರಶಾಂತಾಂ!

ವಾಗ್ದೇವಿಗೆ ನಮಸ್ಕಾರ, ಸಹೃದಯ ಬಂಧು ಭಗಿನಿಯರಿಗೆ ನಮಸ್ಕಾರ, ಸೋದರ ಸಾಹಿತಿಗಳಿಗೆ ನಮಸ್ಕಾರ:

ಕಣಾಟಕದ ಪರವಾಗಿ, ಕನ್ನಡಿಗರ ಪರವಾಗಿ, ಸರ್ವಭಾಷಾಮಯೀ ಕನ್ನಡ ಸರಸ್ವತಿಯ ಪರವಾಗಿ ಭಾರತ ಭಾರತಿಯ ಮತ್ತು ವಿಶ್ವಭಾರತಿಯ ಶ್ರೀ ಚರಣಗಳಿಗೆ ವಂದಿಸುತ್ತೇನೆ.

ಯಾರ ಘನ ಔದಾರ್ಯದಿಂದ ಮತ್ತು ಸುದೂರದರ್ಶಿತ್ವದಿಂದ ವಾಙ್ಮಯ ಲೋಕ ಕಲ್ಯಾಣಕಾರಿಯಾಗಿರುವ ‘ಭಾರತೀಯ ಜ್ಞಾನಪೀಠ’ ಸಂಸ್ಥಾಪನೆಯಾಯಿತೋ ಆ ಪುಣ್ಯಚೇತನಗಳಿಗೆ ವಂದನಾರ್ಪಣೆ ಮಾಡಿ, ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುವುದು ನನ್ನ ಮೊದಲ ಕರ್ತವ್ಯ. ಏಕೆಂದರೆ ಸ್ವಾತಂತ್ರ್ಯಾನಂತರ ಭರತ ಖಂಡದ ಭೌಗೋಲಿಕ ಸಮಗ್ರತೆಯನ್ನೂ ಐಕ್ಯತೆಯನ್ನೂ ನಮ್ಮ ರಾಜ್ಯಾಂಗ ಸಂವಿಧಾನವು ತನ್ನ ರಾಜಕೀಯ ಶಕ್ತಿಬಾಹುಗಳಿಂದ ಬಂಧಿಸಿರುವಂತೆ, ಈ ಭಾರತೀಯ ಜ್ಞಾನಪೀಠ ಸಂಸ್ಥೆಯು ದೇಶಭಾಷಾ ರೂಪಿಯಾದ ತನ್ನ ಚತುರ್ದಶ ಪ್ರೇಮ ಬಾಹುಗಳಿಂದ, ಸಾಂಸ್ಕೃತಿಕವಾಗಿ, ಸಮಗ್ರ ಭರತಖಂಡವನ್ನೂ ಒಂದುಗೂಡಿಸಲು ತಪಸ್ವಿಯಾಗಿ ನಿಂತಿದೆ. ಅಖಿಲ ಭಾರತೀಯವಾದ ಈ ಸಮಗ್ರತೆ ಐಕ್ಯತೆಗಳು ರಾಜಕೀಯವಾಗಿ ಅರ್ವಾಚೀನವಾದುವಾದರೂ ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಪ್ರಾಚೀನವಾದುವುಗಳಾಗಿವೆ. ವೇದೋಪನಿಷತ್ತು ದರ್ಶನಾದಿಗಳಿಂದ ಪರಿಪುಷ್ಟಿಗೊಂಡ ಆ ಐಕ್ಯತೆ, ಅತ್ಯಂತಛಿದ್ರವಿಚ್ಛಿದ್ರಕವಾದ ರಾಜಕೀಯ ಪರಿಸ್ಥಿತಿಯಲ್ಲಿಯೂ, ಒಂದಿನಿತೂ ಚ್ಯತಿಗೊಳ್ಳದ ರೀತಿಯಲ್ಲಿ ರಕ್ಷಿತವಾಗಿತ್ತು. ವಾಲ್ಮೀಕಿ ವ್ಯಾಸಾದಿ ಋಷಿ ಕವಿಗಳಿಂದ, ರಾಮಾಯಣ ಮಹಾಭಾರತಾದಿ ದಿವ್ಯ ಕಾವ್ಯ ಕೃತಿಗಳ ಶಿಲ್ಪ ಮಹಿಮೆಯಿಂದ. ಆ ದೃಷ್ಟಿಯಿಂದ ನೋಡಿದರೆ ಅಖಿಲ ಭಾರತದ ಸಮಗ್ರತೆ ಐಕ್ಯತೆಗಳನ್ನು ಅನಂತಕಾಲವೂ ಸಂರಕ್ಷಿಸುವ ನಿತ್ಯಶಕ್ತಿ ಎಂದರೆ ಸಾಹಿತ್ಯ ಶಕ್ತಿಯಾಗಿದೆ. ಆವಿರ್ಭವಿಸಿರುವ ಅಂತಹ ಸಾಹಿತ್ಯ ಶಕ್ತಿದೇವತೆಗೆ ಅವಿಚ್ಛಿನ್ನವಾಗಿ ಆರಾಧನೆ ನಡೆದು ಆಕೆಯನ್ನು ನಿರಂತರವೂ ಚಾಗ್ರತವಾಗಿರಿಸುವ ಅಗ್ನಿವೇದಿಕೆಯಾಗಿದೆ ಈ ಜ್ಞಾನಪೀಠ!

ಆದ್ದರಿಂದಲೆ ಈ ಜ್ಞಾನಪೀಠ ಸಂಸ್ಥಾಪನೆಗೆ ಕಾರಣರಾದ ಉದಾತ್ತ ಮಹನೀಯರನ್ನು ನನ್ನ ಆದ್ಯಕರ್ತವ್ಯವಾಗಿ ವಂದಿಸಿದ್ದು, ಮತ್ತು ಅಭಿನಂದಿಸಿದ್ದು. ಈ ಸಂದರ್ಭದಲ್ಲಿ ನನಗೆ, ಅನೇಕ ವರ್ಷಗಳ ಹಿಂದೆ, ವಿಶ್ವವಿದ್ಯಾನಿಲಯವೊಂದರ ಪ್ತತಿಷ್ಠಾಪನೆಗಾಗಿ ವಿಪುಲ ಧನಾರ್ಪಣೆ ಮಾಡಿದ ಮಹಾದಾತೃವೊಬ್ಬರ ನೆನಪಿಗಾಗಿ ರಚಿಸಿದ್ದ ಅಷ್ಟಷಟ್ಪದಿ ಒಂದರ ನೆನಪಾಗುತ್ತಿದೆ. ಅದು ಈ ಸಂದರ್ಭಕ್ಕೆ ಇನ್ನೂ ಹೆಚ್ಚು ಔಚಿತ್ಯಪೂರ್ಣವಾಗಿ ಅನ್ವಯವಾಗುವುದರಿಂದ ಅದನ್ನಿಲ್ಲಿ ತಮಗೆ ನಿವೇದಿಸಿದರೆ ತಾಳ್ಮೆಯಿಂದ ಆಲಿಸುವಿರೆಂದ ನಂಬಿತ್ತೇನೆ:

ಸರಸತಿಯ ಬೀಣೆಗೊದಗಿಸೆ ತಂತಿಯಂ, ಧನ್ಯ
ದಲ್‌ ಲಕ್ಷ್ಮಿ! ಲೌಹನಿನದಮ ವೈರಣವಮಾಗಿ
ಪೊರೆವುದು ಚಿರಂತನದ ಸುರಗಾನದಿಂ, ತ್ಯಾಗಿ,
ನಿನ್ನ ಜಸಮಂ ವಿಸ್ಮೃತಿಯ ಮೃತ್ಯುವಿಂ. ಮುನ್ನೆ
ವಿಕ್ರಮಾರ್ಚುನವಿಜಯಮಂ ಬರೆದು ಪಂಪಕವಿ
ಕೊರೆದನರಿಕೇಸರಿಯ ಪೆಸರಂ, ಚಿರಂ ಬಾಳ್ವ
ಕೃತಿಶಿಲಾಶಾಸನದಿ: ಕಾವ್ಯವೋದುವ ಕೇಳ್ವ
ಕನ್ನಡಿಗೆರಲ್ಲರ ಕೃತಜ್ಞತೆಗೆ, ಚಂದ್ರ ರವಿ
ಪೊಳೆವನ್ನೆಗಂ, ಪಾತ್ರನಾಗಿರ್ಪನಾ ನೃಪತಿ,
ತನ್ನುಳಿದ ಕಜ್ಜಗಳ್ ತನ್ನ ರಾಜ್ಯಂಗೂಡಿ
ಪೇಳೆ ಪೆಸರಿಲ್ಲದಾಗಿರ್ಪೊಡಂ. ದಿವ್ಯಕೃತಿ,
ಹೇ ಧನಿಯೆ, ನಿನ್ನ ದಾನಮನಮೃತಮಂ ಮಾಡಿ
ನಿನ್ನಾತ್ಮಕಮೃತ ತೃಪ್ತಿಯನೀವುದಾವಗಮ್:
ನಿನಗಕ್ಕೆ ಆ ಸೈಪಿನಾ ಶಾಂತಿಯಾ ಸೊಗಮ್!

ಕೊಳಲಿಗೆ ಅನೇಕ ಕಣ್ಣುಗಳಿರುವಂತೆ ಭಾರತಿಗೆ ಬಹು ಜಿಹ್ವೆಗಳಿವೆ. ಪೀಪಿ ಊದುವ ಹುಡುಗನಿಗೆ ಕೊಳಲಿಗೆ ಅನೇಕ ರಂದ್ರಗಳಿರುವುದು ತೊಂದರೆಯ ವಿಷಯವಾಗುತ್ತದೆ; ಆದರೆ ವೇಣುವಾದನ ನಿಪುಣನಿಗೆ ಆ ರಂದ್ರಗಳ ಅನೇಕತೆಯೆ ಸಂಗೀತದ ಸ್ವರಮೇಲ ಮಾಧುರ್ಯಕ್ಕೆ ಅವಶ್ಯ ಸಾಧನವಾಗುತ್ತದೆ. ಸ್ವಾತಂತ್ರ್ಯಾನಂತರ ಭಾರತದಲ್ಲಿ ಭಾಷಾನುಗಣ ರಾಜ್ಯಗಳ ರಚನೆಯಾಗಿರುವುದು ಕೆಲವು ಅರೊಚಿ – ಭೀರುಗಳಿಗೆ ರುಚಿಸುತ್ತಿಲ್ಲ; ಕೆಲವರಂತೂ ದಿಗಿಲುಗೊಂಡಿದ್ದಾರೆ. ಹೋರಾಡಿ ಸಂಪಾದಿಸಿದ ಸ್ವಾತಂತ್ರ್ಯಕ್ಕೆ ಸ್ವಭಾಷಾಪ್ರೇಮದ ಅತಿರೇಕದಿಂದ ಉಂಟಾಗಬಹುದಾದ ಅನೈಕ್ಯತೆ ಎಲ್ಲಿ ಧಕ್ಕೆ ತರುತ್ತದೆಯೊ ಎಂದು ಅವರು ಹೆದರಿದ್ದಾರೆ. ಅಂತಹರಿಗಿರುವ ಭಯವನ್ನು ಸಂಪೂರ್ಣ ಹೋಗಲಾಡಿಸುತ್ತದೆ ಜ್ಞಾನಪೀಠದ ಇಂದಿನ ಸಮಾರಂಭ.

ಜ್ಞಾನಪೀಠದ ಈ ವಿಶಾಲ ವೇದಿಕೆಯಲ್ಲಿ ಭಾರತೀಯ ಭಾಷೆಗಳೆಲ್ಲ ತಮ್ಮ ತಮ್ಮ ಸ್ನೇಹಹಸ್ತಗಳನ್ನು ಚಾಚಿ, ಕೌಟುಂಬಿಕ ಸ್ವರೂಪದ ಪರಸ್ಪರ ಭಿನ್ನತೆ ವಿವಾದಗಳನ್ನೆಲ್ಲ ಹಿಂದಿಕ್ಕಿ, ಐಕ್ಯತೆಯ ಆರತಿಯನ್ನೆತ್ತಿ ಭರತಮಾತೆಗೆ ಪೂಜೆ ಸಲ್ಲಿಸುತ್ತಿವೆ. ಆಚೆಯ ವರುಷ ಕೇರಳದೇವಿಗೂ, ಹೋದವರುಷ ವಂಗದೇವಿಗೂ ಸಲ್ಲಿಸಿದ ಗೌರವವನ್ನು ಈ ವರ್ಷ ಕರ್ಣಾಟಕ ಸೌರಾಷ್ಟ್ರದೇವಿಯರಿಗೆ ಒಟ್ಟಿಗೆ ಸಲ್ಲಿಸುತ್ತಿವೆ. ಹಾಗೆಯೆ, ಮುಂಬರುವ ಸಂವತ್ಸರಗಳಲ್ಲಿ ಒಂದಾದಮೇಲೊಂದರಂತೆ ಉಳಿದ ಇತರ ಭಾಷಾದೇವಿಯರಿಗೂ ಈ ಗೌರವ ಸಲ್ಲುವುದರಲ್ಲಿ ಸಂದೇಹವಿಲ್ಲ.

ನಾನು ರಾಜ್ಯದೃಷ್ಟಿಯಿಂದ ಕರ್ಣಾಟಕದವನು; ಭಾಷಾದೃಷ್ಟಿಯಿಂದ ಕನ್ನಡಿಗನು; ಆದರೆ ಸಂಸ್ಕೃತಿಯ ದೃಷ್ಟಿಯಿಂದ ಮತ್ತು ರಾಷ್ಟ್ರದೃಷ್ಟಿಯಿಂದ ಭಾರತೀಯನು. ನನ್ನ ಕರ್ಣಾಟಕತ್ವ ಭಾರತೀಯತ್ವಕ್ಕೆ ಎಂದಿಗೂ ಎದುರು ನಿಲ್ಲುವುದಿಲ್ಲ. ಕರ್ನಾಟಕತ್ವ ಭಾರತೀಯತ್ವಕ್ಕೆ ಎಂದೆಂದಿಗೂ ಅವಿರೋಧಿಯಾಗಿ ಸೇವೆ ಸಲ್ಲಿಸುವುದರಿಂದಲೇ ತನ್ನ ಅಸ್ತಿತ್ವವನ್ನು ರಕ್ಷಿಕೊಳ್ಳುತ್ತದೆ. ಭಾರತಿ ತಾಯಿ; ಕರ್ಣಾಟಕ ಮಗಳು. ಭಾರತಕ್ಕೆ ಧಕ್ಕೆ ಒದಗಿದರೆ ಕರ್ಣಾಟಕ ಉಳಿಯುವುದಿಲ್ಲ; ಮಗಳು ಕರ್ಣಾಟಕಕ್ಕೆ ಕೇಡಾದರೆ ತಾಯಿ ಸಹಿಸುವುದಿಲ್ಲ. ಪರಸ್ಪರ ಕ್ಷೇಮರಕ್ಷಣೆಯಿಂದಲೆ ಸರ್ವರ ಕ್ಷೇಮವೂ ರಕ್ಷಿತವಾಗುತ್ತದೆ.

ಆದ್ದರಿಂದಲೆ ಕರ್ಣಾಟಕದ ಕವಿ ‘ಜಯ ಹೇ ಕರ್ಣಾಟಕ ಮಾತೆ!’ ಎಂದು ಹಾಡಿದಾಗ ಆ ಜಯಗಾಥೆಯನ್ನು ‘ಜಯ ಭಾರತ ಜನನಿಯ ತನುಜಾತೆ!’ ಎಂದೇ ಪ್ರಾರಂಭಿಸುತ್ತಾನೆ. ಮೊದಲು ಭಾರತದ ಜನನಿಗೆ ಜಯಕಾರ. ತನ್ನ ಗಾಥೆಯ ಒಂದೊಂದು ಪದ್ಯದ ಕೊನೆಯ ಚರಣವನ್ನೂ ಭಾರತದ ಏಕತ್ವ ರಕ್ಷಣೆಯ ಮಂತ್ರವನ್ನಾಗಿ ಘೋಷಿಸಿದ್ದಾನೆ: ‘ರಾಘವ ಮಧುಸೂದನರವತರಿಸಿದ ಭಾರತ ಜನನಿಯ ತನುಜಾತೆ, ಜಯ ಹೇ ಕರ್ಣಾಟಕ ಮಾತೆ!’ ‘ಕಪಿಲ ಪತಂಜಲ ಗೌತಮ ಜಿನ ನುತ ಭಾರತ ಜನನಿಯ ತನುಜಾತೆ, ಜಯ ಹೇ ಕರ್ಣಾಟಕ ಮಾತೆ!’ ‘ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ, ಜಯ ಹೇ ಕರ್ಣಾಟಕ ಮಾತೆ!’ ‘ಚೈತನ್ಯ ಪರಮಹಂಸ ವಿವೇಕರ ಭಾರತ ಜನನಿಯ ತನುಜಾತೆ, ಜಯ ಹೇ ಕರ್ಣಾಟಕ ಮಾತೆ!’ ಇಲ್ಲಿ ಕರ್ಣಾಟಕ ಮಾತೆಗೆ ತನ್ನದೇ ಆಗಿರುವ ಪ್ರತ್ಯೇಕ ಅಸ್ತಿತ್ವ ಇಲ್ಲ; ಸರ್ವದಾ ತಾಯಿ ಭಾರತಿಯ ಮಗಳಾಗಿಯೇ ಇರುವುದರಿಂದ ಮಾತ್ರ ಆಕೆ ಅಸ್ತಿತ್ವಕ್ಕೆ ರಕ್ಷೆಯೊದಗುತ್ತದೆ; ಅದರ ಪೋಷಣೆಗೆ ಅಮೃತಸಹಾಯ ಲಭಿಸುತ್ತದೆ. ಆದ್ದರಿಂದ ಭಾಷಾನುಗುಣ ರಾಜ್ಯರಚನೆಯಿಂದ ಭಾರತರಾಷ್ಟ್ರದ ಸಮಗ್ರತೆಗೆ ಭಂಗ ಬರುತ್ತದೆ ಎಂಬುದು ಭ್ರಾಂತಿಯ ಮಾತಾಗುತ್ತದೆ; ರಚಿತವಾಗಿರುವ ಭಾಷಾ ರಾಜ್ಯಗಳನ್ನು ಮತ್ತೆ ಅಳಿಸಿ, ಭಾವೈಕ್ಯತೆಯನ್ನು ಸಾಧಿಸುತ್ತೇವೆ ಎನ್ನುವವರು ರಾಷ್ಟ್ರ ಕ್ಷೇಮವನ್ನು ಹಾನಿಗೀಡುಮಾಡುವ ದೇಶದ್ರೋಹಿಗಳಾಗುವುದರಲ್ಲಿ ಸಂದೇಹವಿಲ್ಲ.

ಕರ್ಣಾಟಕವನ್ನು ‘ಭಾರತ ಜನನಿಯ ತನುಜಾತೆ’ ಎಂದು ಹಾಡಿದ ಕವಿಯೇ ‘ಭರತ ಭೂಮಿ ನನ್ನ ತಾಯಿ’ ಎಂದೂ ಹಾಡಿದ್ದಾನೆ. ‘ಮತದ ಬಿರುಕುಗಳನು ತೊರೆವೆ; ನುಡಿಗಳೊಡಕುಗಳನು ಮರೆವೆ; ತೊತ್ತ ತೊಡಕುಗಳನು ಬಿರಿವೆ; ಜೀವನವನೆ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು!’ ಎಂದೂ ಹಾಡುತ್ತಾನೆ. ಕನ್ನಡದ ಕವಿಯಂತೆಯೆ ಇತರ ಎಲ್ಲ ಭಾರತೀಯ ಭಾಷೆಯ ಕವಿಗಳೂ ಹಾಡಿದ್ದಾರೆ ಎಂಬುದರಲ್ಲಿ ನನಗಿನಿತೂ ಶಂಕೆಯಿಲ್ಲ.

ಯಾವುದಾದರೂ ಭಾಷೆಯ ಯಾವನಾದರೂ ಒಬ್ಬ ಸಾಹಿತಿ ಸೌಹಾರ್ದಕ್ಕೆ ಭಂಗತರುವ ರೀತಿಯಲ್ಲಿ ಅಪಸ್ವರವೆತ್ತಿ ಹಾಡಿದ್ದರೆ, ಅದು ಖಂಡನೀಯ; ಅದು ಆಸುರೀ ಸಾಹಿತ್ಯವಾಗುತ್ತದೆ. ನಿಜವಾದ ಸಾಹಿತ್ಯ ಐಕ್ಯಕಾರಿ. ಸಾಮರಸ್ಯ, ಸಮನ್ವಯ, ಸಹಾನುಭೂತಿ, ಸರ್ವೋದಯಭಾವನೆ ಇವುಗಳನ್ನು ಪ್ರಚೋದಿಸುವುದು ದೈವೀ ಸಾಹಿತ್ಯದ ಲಕ್ಷಣ. ಅಸೂಯೆ, ದ್ವೇಷ, ಸ್ವಾರ್ಥತೆ, ನಿಷ್ಕರುಣೆ ಅನುಕಂಪನರಾಹಿತ್ಯ ಇತ್ಯಾದಿಗಳನ್ನು ಕೆರಳಿಸುವ ಬರೆಹ ಅಸುರೀಸಾಹಿತ್ಯವಾಗುವುದರಿಂದ ಅದು ದಮನಯೋಗ್ಯವಾಗುತ್ತದೆ.

ಈ ವರ್ಷದ ಜ್ಞಾನಪೀಠ ಪ್ರಶಸ್ತಿ ನನ್ನ ಮತ್ತು ನನ್ನ ಮಿತ್ರರ ಹೆಸರಿಗೆ ವೈಯಕ್ತಿಕವಾಗಿ ಲಭಿಸಿದಂತೆ ಪ್ರಕಟವಾಗಿದ್ದರೂ, ವಾಸ್ತವವಾಗಿ, ಅದು ಕನ್ನಡದ ಮತ್ತು ಗುಜರಾತಿಯ ಎಲ್ಲ ಕವಿ, ಎಲ್ಲ ಸಾಹಿತಿ, ಎಲ್ಲ ಲೇಖಕರ ಸಮಷ್ಟಿ ಸತ್ತ್ವಕ್ಕೂ ಇಟ್ಟ ಕಿರೀಟವಾಗಿದೆ. ನಾನು ಮತ್ತು ಶ್ರೀ ಉಮಾಶಂಕರ ಜೋಷಿಯವರು ಕನ್ನಡ ಮತ್ತು ಗುಜರಾತಿಗಳ ವಿನಮ್ರ ಪ್ರತಿನಿಧಿಗಳಾಗಿ ಮಾತ್ರವೇ ಅದನ್ನು ಹೆಮ್ಮೆಯಿಂದ, ನಮ್ಮ ನಮ್ಮ ನುಡಿಗಳಿಗೆ ದೊರೆತ ಗೌರವಕ್ಕಾಗಿ ಹೆಮ್ಮೆಪಡುತ್ತಾ, ಶಿರವೆತ್ತಿ ನಿಲ್ಲಲು, ಶಿರಬಾಗಿ ಸ್ವೀಕರಿಸುತ್ತಿದ್ದೇವೆ. ಯಾವುದಾದರೂ ಒಂದು ಕಾಲಾವಧಿಯಲ್ಲಿ ಪ್ರಕಟವಾದ ಸಾಹಿತ್ಯ ಕೃತಿಗಳಲ್ಲಿ ಸರ್ವಶ್ರೇಷ್ಠವೆಂದು ಪರಿಗಣಿತವಾದುದಕ್ಕೆ ಪ್ರಶಸ್ತಿ ಸಲ್ಲುತ್ತದೆ ಎಂಬುದು ವ್ಯಾವಹಾರಿಕವಾಗಿ ಅನಿವಾರ್ಯವಾಗಿ ಅನುಸರಿಸಬೇಕಾಗಿರುವ ಒಂದು ವಿಧಾನವೆ ಹೊರತು, ಕೇವಲವೆನ್ನಬಹುದಾದ ನಿರಪೇಕ್ಷಸತ್ಯವಾಗಲಾರದು. ಆರಿಸಿಕೊಂಡ ಹಲವಾರು ಉತ್ತಮ ಗ್ರಂಥಗಳಲ್ಲಿ ಯಾವುದಾದರೊಂದನ್ನೆ ಸರ್ವೋತ್ತಮ ಎಂದು ನಿರ್ಣಯಿಸುವುದು ಎಷ್ಟು ಕಷ್ಟದ ಮತ್ತು ಚರ್ಚಾಸ್ಪದ ವಿಷಯವಾಗುತ್ತದೆ, ಎಂಬುದು ಎಲ್ಲ ಶ್ರೇಷ್ಠ ವಿಮರ್ಶಕರಿಗೂ ತಿಳಿದ ವಿಷಯವೆ ಆಗಿರುತ್ತದೆ. ಒಂದೊಂದು ದೃಷ್ಟಿಯಿಂದ ಪರಿಶೀಲಿಸಿದಾಗ ಒಂದೊಂದು ಸರ್ವಶ್ರೇಷ್ಠವಾಗಿ ತೊರಬಹುದು. ಪ್ರಶಸ್ತಿಪ್ರದಾನದ ಅವಶ್ಯ ನಿಯಮಕ್ಕೆ ಅನುಗುಣವಾಗಿ, ಎಲ್ಲವೂ ಶ್ರೇಷ್ಠವಾಗಿರಬಹುದಾದ ಆ ಉತ್ತಮ ಕೃತಿಗಳಲ್ಲಿ ಯಾವುದಾರೊಣದನ್ನು ‘ಸರ್ವೋತ್ತಮ’ ಎಂದು ನಿರ್ಣಯಿಸಲೇಬೇಕಾಗುತ್ತದೆ. ಅಂದ ಮಾತ್ರಕ್ಕೆ ಉಳಿದವುಗಳ ಶ್ರೇಷ್ಠತ್ವಕ್ಕೆ ಚ್ಯುತಿ ಬಂದಂತಾಗುವುದಿಲ್ಲ; ಅವುಗಳ ಹಿರಿಮೆಗಳನ್ನು ಅಲ್ಲಗೆಳೆದಂತಾಯಿತೆಂದು ತಿಳಿದವರಾರೂ ತಿಳಿಯುವುದಿಲ್ಲ.

ಕನ್ನಡ ಸಾಹಿತ್ಯ ಚರಿತ್ರೆ ಹತ್ತು ಹನ್ನೊಂದು ಶತಮಾನಗಳ ಪೂರ್ವದ ಕಾಲದಿಗಂತದಲ್ಲಿ ಕಣ್ಮರೆಯಾಗುತ್ತದೆ. ಹತ್ತನೆಯ ಶತಮಾನದಲ್ಲಿಯೆ, ಜಗತ್ತಿನ ಯಾವ ಮಹಾಕಾವ್ಯಗಳಿಗೂ ಹೆಗಲೆಣೆಯಾಗಿ ನಿಲ್ಲುವಂತಹ ಮಹಾಕಾವ್ಯ ಕೃತಿಗಳು ಕನ್ನಡದಲ್ಲಿ ಸೃಷ್ಟಿಯಾಗಿರುವ ವೈಭವದ ದೃಶ್ಯ ವಿಸ್ಮಿತ ನೇತ್ರಗಳಿಗೆ ಗೋಚರವಾಗುತ್ತದೆ. ಷೇಕ್ಸ್‌ಸ್ಪಿಯರ್ ಮಹಾಕವಿ ಹುಟ್ಟುವುದಕ್ಕೆ ಆರುನೂರು ವರ್ಷಗಳ ಮುನ್ನವೆ ಮಹಾಕವಿ ಪಂಪ ಜನಿಸಿದ್ದನೆಂಬುದನ್ನು ನೆನೆದರೆ ನಿಮಗೆ ಕನ್ನಡ ಸಾಹಿತ್ಯದ ಹಿರಿಮೆ ಗರಿಮೆಗಳ ಸ್ವರೂಪ ಇನಿತಾದರೂ ಮನೋಗೋಚರವಾಗಬಹುದು. ಪಂಪನ ಮಹಾಕಾವ್ಯ ಕ್ರಿ.ಶ. ೯೪೧ ರಲ್ಲಿ ಹುಟ್ಟಿದ್ದರೆ, ಷೇಕ್ಸ್‌ಸ್ಪಿಯರನ ಮೊದಲ ಕೃತಿ ಹುಟ್ಟಿದ್ದು ಕ್ರಿ.ಶ. ೧೫೯೩ರಲ್ಲಿ. ‘ಗದಾಯುದ್ಧ’ ಕಾವ್ಯದ ಅದ್ಭುತ ಕವಿ ರನ್ನನ ಕಾಲ (ಕ್ರಿ.ಶ. ೯೯೩) ಹತ್ತನೆ ಶತಮಾನದ ಕೊನೆಯ ಭಾಗವಾದರೆ, ‘ಪ್ಯಾರಡೈಸ್ ಲಾಸ್ಟ್’ ಮಹಾಕಾವ್ಯದ ಕರ್ತೃ ಮಿಲ್ಟನ್ ಕವಿಯ ಕಾಲ (ಕ್ರಿ.ಶ. ೧೬೦೮) ಹದಿನೇಳನೆಯ ಶತಮಾನದ ಆದಿಭಾಗವಾಗುತ್ತದೆ. ಕನ್ನಡದಂತೆಯೆ ನಮ್ಮ ಇತರ ಅನೇಕ ಪ್ರದೇಶ ಭಾಷೆಗಳೂ ಪ್ರಾಚೀನತೆಯಲ್ಲಿ, ಶ್ರೀಮಂತತೆಯಲ್ಲಿ, ಶಕ್ತಿಸಾಮರ್ಥ್ಯಗಳಲ್ಲಿ ಮೇಲುಮಟ್ಟದಲ್ಲಿವೆ ಎಂದು ನಾನು ನಂಬುತ್ತೇನೆ. ನನ್ನ ನಂಬುಗೆ ಬರಿಯ ಭಾವೋಲ್ಲಾಸ ವಿಷಯವಲ್ಲ, ವಾಸ್ತವಾದದ್ದು; ಎಂಬುದಕ್ಕೆ ಈ ಜ್ಞಾನಪೀಠವೆ ಸಾಕ್ಷಿ ಒದಗಿಸುತ್ತಿದೆ, ತನ್ನ ಪ್ರಾಚೀನ ಗ್ರಂಥಗಳ ಸಂಪಾದನೆ ಮತ್ತು ಪ್ರಕಾಶನಗಳಿಂದ. ಅದು ಪ್ರಕಟಿಸುತ್ತಿರುವ ಮತ್ತು ಪ್ರಕಟಿಸಲು ಕಾರ್ಯಕ್ರಮ ಹಾಕಿಕೊಂಡಿರುವ ಗ್ರಂಥಪಟ್ಟಿ ಎಂತಹವರನ್ನೂ ವಿಸ್ಮಯಗೊಳಿಸುವಂತಹುದಾಗಿದೆ.

ಇಷ್ಟು ಪೂರ್ವಿಕತೆ ಮತ್ತು ಸಾಹಿತ್ಯಸಮೃದ್ಧಿ ಇರುವ ದೇಶಭಾಷೆಗಳು ರಾಜಕೀಯ ಕಾರಣಗಳಿಂದಲೂ ಜನಜೀವನದ ಅವನತಿಯಿಂದಲು ಕ್ರಮೇಣ ಅಪಗತಿಗಿಳಿದು, ಬ್ರಿಟಿಷರು ಭರತಖಂಡವನ್ನು ಆಕ್ರಮಿಸಿ ಆಳತೊಡಗಿದ ಮೇಲೆ, ಜ್ಞಾನ ವಿಜ್ಙಾನ ಸಂಪನ್ನವೂ ನವಜೀವನ ಸತ್ವಪೂರ್ಣವೂ ಆಗಿದ್ದು ಅಧಿಕೃತ ಭಾಷಾಪಟ್ಟಕ್ಕೂ ಏರಿದ ಇಂಗ್ಲಿಷಿನ ಮುಂದೆ ಕಾತಿಹೀನವಾಗಿ, ಬಡವಾಗಿ, ದಾಸಸ್ಥಾನಕ್ಕೆ ಬಿದ್ದು, ತನ್ನವರಿಂದಲೆ ಅವಹೇಳನಕ್ಕೂ ತಿರಸ್ಕಾರಕ್ಕೂ ಪಕ್ಕಾಗಿ ಮೂಲೆ ಸೇರಿದವು. ಆ ದುರಂತಕಥೆ ಸಾಹಿತ್ಯ ಪ್ರೇಮಿಗಳೆಲ್ಲರಿಗೂ ತಿಳಿದ ವಿಷಯವೆ ಆಗಿದೆ. ಆ ಕತ್ತಲೆಯಲ್ಲಿಯೂ ದೈವೀಕೃಪೆಯಂತೆ ಹೊಳೆಯುತ್ತಿದ್ದ ಒಂದು ಆಶಾಕಿರಣವಿದ್ದುದು ನಮ್ಮ ಭಾಗ್ಯ; ಅದೆಂದರೆ, ರಾಜಕಾರಣಕ್ಕಲ್ಲದೆ ಮತಪ್ರಚಾರಕ್ಕಾಗಿ ಬಂದಿದ್ದ ಆ ವಿದೇಶಿಯರಲ್ಲಿ ಕೆಲವು ಮಹನೀಯರು ನಮ್ಮ ದೇಶಭಾಷೆಗಳ ಪ್ರಾಚೀನತೆಯನ್ನೂ ಅವುಗಳ ಮಹತ್ತನ್ನೂ ಗ್ರಹಿಸಿ, ತಮ್ಮ ತಪಸ್ಯಾಸದೃಶವಾದ ಅನ್ವೇಷಕ ಶ್ರಮದಿಂದ, ನಶಿಸಿ ಹೋಗುತ್ತಿದ್ದ ಹಳೆಯ ಓಲೆಯ ಗ್ರಂಥಗಳನ್ನು ಉದ್ಧರಿಸಿ, ಪ್ರಕಟಿಸಿ, ವ್ಯಾಕರಣಾದಿಗಳನ್ನು ಬರೆದು, ನಿಘಂಟುಗಳನ್ನು ರಚಿಸಿ, ಅವುಗಳು ಸಂಪೂರ್ಣವಾಗಿ ಖಿಲವಾಗದಂತೆ ನೋಡಿಕೊಂಡದ್ದು.

ಸ್ವಾತಂತ್ರ್ಯಪೂರ್ವದಲ್ಲಿಯೆ ಪೂಜ್ಯ ಗಾಧೀಜಿಯೆ ಮೊದಲಾಗಿ ಅನೇಕ ದೇಶೀಯ ಮತ್ತು ವಿದೇಶೀಯ ವಿದ್ಯಾತಜ್ಞರು ನಮ್ಮ ದೇಶಭಾಷೆಗಳಿಗೆ ಶಿಕ್ಷಣ ಮಾಧ್ಯಮದಿಂದ ಹಿಡಿದು ಆಡಳಿತ ಭಾಷೆಯವರೆಗೆ ಬದುಕಿನ ಎಲ್ಲ ರಂಗಗಳಲ್ಲಿಯೂ ಪ್ರಥಮಸ್ಥಾನ ಕೊಡಬೇಕೆಂದು ವಾದಿಸಿದ್ದರು. ಇಂಗ್ಲಷಿಗೆ ಇತರ ವಿದೇಶೀ ಭಾಷೆಗಳೊಂದಿಗೆ ನಮ್ಮ ವಿದ್ಯಾಭ್ಯಾಸ ಕ್ರಮದಲ್ಲಿ ಐಚ್ಛಿಕಸ್ಥಾನ ಕೊಡಬೇಕೆಂಬುದೂ ಅವರ ಮತವಾಗಿತ್ತು.

ಆದರೆ ಸ್ವಾತಂತ್ರ್ಯಾನಂತರ ಸ್ವಾತಂತ್ರ್ಯಶಿಲ್ಪಿ ಬಾಪೂಜಿಯ ಎದೆಗೆ ಹೊಕ್ಕ ಗುಂಡು ಸ್ವಾತಂತ್ರ್ಯಪೂರ್ವದಲ್ಲಿದ್ದ ನಮ್ಮ ಅನೇಕ ಆದರ್ಶ, ಆಶಯ ಮತ್ತು ಧ್ಯೇಯಗಳ ಗುಂಡಿಗೆಗೂ ತಗುಲಿದೆಂತಿದೆ!

ಇಂಗ್ಲಿಷನ್ನು ಶಿಕ್ಷಣಮಾಧ್ಯಮ ಸ್ಥಾನದಿಂದ ತೆಗೆದುಹಾಕಿ ಪ್ರಾದೇಶಿಕ ಭಾಷೆಗಳಿಗೆ ಆ ಸ್ಥಾನ ನೀಡುವ ಮಾತಂತಿರಲಿ, ಇಂಗ್ಲಿಷನ್ನು ಈಗ ಅದಕ್ಕಿರುವ ಬಲತ್ಕಾರದ ಸ್ಥಾನದಿಂದ ಐಚ್ಛಿಕ ಸ್ಥಾನಕ್ಕೆ ಇಳಿಸಲೂ ಒಪ್ಪದೆ, ಅದಕ್ಕಿರುವ ಬಲತ್ಕಾರದ ಸ್ಥಾನವನ್ನೆ ಸರ್ವಕಾಲಕ್ಕೂ ಶಾಶ್ವತಗೊಳಿಸುವ, ನಾಡಿನ ಏಳಿಗೆಗೆ ಅತ್ಯಂತ ಹಾನಿಕರವಾದ ನಿರ್ಣಯವನ್ನೂ ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಕೈಕೊಳ್ಳುವ ಸಂಭವ ತೋರುತ್ತಿದೆ. ಅಂತಹ ಚಿರಂತನ ಅಪಾಯದಿಂದ ನಮ್ಮ ರಾಷ್ಟ್ರವನ್ನು ಪಾರುಮಾಡಿ ರಕ್ಷಿಸಲಿ ಎಂದು ಈ ಭಾರತೀಯ ಜ್ಞಾನಪೀಠದ ಪವಿತ್ರವೇದಿಕೆಯಿಂದ ಶ್ರೀ ವಾಗ್ದೇವಿಗೆ ನಾನು ಪ್ರಾರ್ಥಿಸಿ ಮೊರೆಯಿಡುತ್ತೇನೆ.

ಕಳೆದ ಇಪ್ಪತ್ತು ಮೂವತ್ತು ವರ್ಷಗಳಿಂದ, ಇಂಗ್ಲಷ್ ಭಾಷಾ ಸಾಹಿತ್ಯದ ಪ್ರೇರಣೆಯಿಂದಲೆ, ನಮ್ಮ ದೇಶಭಾಷೆಗಳು ತಮ್ಮ ಗತಪೂರ್ವದ ಸಂಸ್ಕೃತಿಯ ಪುನರುಜ್ಜೀವನದೊಂದಿಗೆ ನವೀನ ಪ್ರಪಂಚದ ಜ್ಞಾನ ವಿಜ್ಞಾನ ಸಂಸ್ಕೃತಿಗಳಿಂದ ಉತ್ತೇಜಿತವಾಗಿ, ಸಶಕ್ತವಾಗಿ ಊರ್ಜಿತಗೊಂಡಿವೆ; ದಿನದಿನವೂ ಮೇಲಮೇಲಕ್ಕೇರುತ್ತಿವೆ. ಕೆಲವು ಭಾಷೆಗಳಲ್ಲಿ, ಅದರಲ್ಲಿಯೂ ಸಾಹಿತ್ಯಕ್ಷೇತ್ರದಲ್ಲಿ, ಅಲ್ಪಸ್ ಪರ್ವತ ಶಿಖರಗಳನ್ನು ನಾಚಿಸುವ ಹಿಮಾಲಯ ಪರ್ವತ ಶಿಖರಗಳಂತೆ, ಯಾವ ಪಾಶ್ಚಾತ್ಯ ಸಾಹಿತ್ಯ ಕೃತಿಯೂ ಇದುವರೆಗೂ ಏರಲಾರದಂತಹ ಮಹೋನ್ನತಿಗೆ ಕೆಲವಾದರೂ ಸಾಹಿತ್ಯ ಕೃತಿಗಳು ಏರಿನಿಂತಿವೆ. ಅತಿಶಯ ಎಂದು ಕೆಲವರಿಗೆ ತೋರಬಹುದಾದ ಈ ಉಕ್ತಿಯ ಸತ್ಯ ಗೊತ್ತಾಗಬೇಕಾದರೆ, ನಮ್ಮ ಪ್ರದೇಶ ಭಾಷಾ ಸಾಹಿತ್ಯಗಳ ಪರಿಚಯ ಪರಸ್ಪರರಿಗೆ ಅರಿವಾಗುವಂತೆ ಅನುವಾದ ಕಾರ್ಯ ನಡೆಯಬೇಕಾಗಿದೆ. ಈ ಕಾರ್ಯ ಈಗಾಗಲೆ ಅಲ್ಪಸ್ವಲ್ಪವಾಗಿ ನಾನಾ ಸಂಸ್ಥೆಗಳ ಮುಖಾಂತರ ಪ್ರಾರಂಭವಾಗಿದೆ. ಸಾಹಿತ್ಯ ಅಕಾಡೆಮಿಯಂತೆ ಭಾರತೀಯ ಜ್ಞಾನಪೀಠವೂ ಆ ಗುರಿಯತ್ತ ಭರದಿಂದ ಸಾಗುತ್ತಿದೆ.

ನನಗೆ ತಿಳಿದಿರುವ ಮಟ್ಟಿಗೆ, ನಮ್ಮ ಪ್ರದೇಶ ಭಾಷೆಗಳು, ರಾಷ್ಟ್ರವು ತಮ್ಮ ಮೇಲೆ ಹೊರಿಸಬಹುದಾದ ಎಲ್ಲ ಹೊರೆ ಹೊಣೆಗಳನ್ನೂ
ಭರಿಸಲು ಸಮರ್ಥವಾಗಿವೆ. ಅಭ್ಯಾಸಕ್ಕೂ ಪ್ರಯೋಗಕ್ಕೂ ಅವಕಾಶ ಕೊಟ್ಟರೆ ಅತ್ಯಲ್ಪ ಕಾಲದಲ್ಲಿಯೆ ಅವು ವಿಶ್ವವಿದ್ಯಾನಿಲಯಗಳ ಬೋಧನಾಂಗ, ಸಂಶೋಧನಾಂಗ ಮತ್ತು ಪ್ರಸಾರಾಂಗದ ಎಲ್ಲ ಕಾರ್ಯಗಳನ್ನೂ, ಇನ್ನೂ ಸಂಪೂರ್ಣತರ ಸಾಮರ್ಥ್ಯದಿಂದ ನಿರ್ವಹಿಸುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಅಂತಹ ಅಭ್ಯಾಸ ಮತ್ತು ಪ್ರಯೋಗಗಳನ್ನು ನಿರ್ವಹಿಸುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಅಂತಹ ಅಭ್ಯಾಸ ಮತ್ತು ಪ್ರಯೋಗಗಳನ್ನು ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷಗಳಿಂದಲೂ ನಡೆಸಿ ಜಯಪ್ರದವಾಗಿ ಮುನ್ನಡೆಯುತ್ತಿರುವ ಒಂದು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿ, ಅಧ್ಯಾಪಕನಾಗಿ, ಪ್ರಾಧ್ಯಾಪಕನಾಗಿ, ಪ್ರಿನ್ಸಿಪಾಲ್ ಆಗಿ, ಉಪಕುಲಪತಿಯಾಗಿ ಸಕ್ರಿಯ ಭಾಗವಹಿಸುವ ಸುಯೋಗ ನನ್ನದಾಗಿದ್ದುದರಿಂದ ಇದನ್ನು ಅಧಿಕಾರವಾಣಿಯಿಂದ ಘೋಷಿಸಿದರೆ ಕ್ಷಮಿಸುವಿರೆಂದು ನಂಬುತ್ತೇನೆ.

‘ಜ್ಞಾನಂ ವಿಜ್ಞಾನಸಹಿತಂ ಯತ್ ಜ್ಞಾತ್ವಾ ಮೋಕ್ಷ್ಯಸೇsಶುಭಾತ್’ ಎಂದು ಸಾರುತ್ತದೆ ಗೀತೆ. ಒಂದುಕಾಲದಲ್ಲಿ, ಪಾಶ್ಚಾತ್ಯ ದೇಶಗಳಿನ್ನೂ ಅರ್ಧ ಬರ್ಬರ ಸ್ಥಿತಿಯಲ್ಲಿದ್ದ ಸಮಯದಲ್ಲಿ, ನಮ್ಮ ದೇಶ ಜ್ಞಾನ ವಿಜ್ಞಾನಗಳಲ್ಲಿ ಮುಂದಾಳಾಗಿ ಮುಂದುವರಿಯುತ್ತಿತ್ತು. ತರುವಾಯ, ಮಧ್ಯಂತರ ಯುಗದಲ್ಲಿ, ರಾಜಕೀಯ ರೂಪದ ಅನೈಕ್ಯತೆ ಅಂತಃಕಲಹಗಳಿಂದಲೊ, ಮತೀಯ ಸ್ವರೂಪದ ಅಂಧಶ್ರದ್ಧಯಿಂದ ಒದಗಿದ ಮೂಢಾಚಾರ ಮೌಢ್ಯಗಳಿಂದಲೊ ನಡೆಗಟ್ಟು ಹಿಂದೆಬಿದ್ದಿತು. ಜನತೆ ಧರ್ಮದ ಹೆಸರಿನಲ್ಲಿ ತಮಸ್ಸಿಗೆ ಪಟ್ಟಕಟ್ಟಿತು; ವೈರಾಗ್ಯದ ವೇಷತೊಟ್ಟು, ತಪಸ್ಸಿನ ಹೆಸರಿಟ್ಟು, ಜೀವನ ಸ್ರೋತವು ಚಲನಹೀನವಾಗಿ, ಮಡುಗಟ್ಟಿ ನಾರುವಂತಾಯಿತು. ಬ್ರಿಟಿಷರ ಆಗಮನದ ಅನಂತರ ಪಾಶ್ಚಾತ್ಯ ನಾಗರಿಕತೆಯ ಪ್ರಭಾವದ ಪರಿಣಾಮವಾಗಿ ನಮ್ಮಲ್ಲಿ ಒಂದು ಪುನರುತ್ಥಾನ ಮತ್ತು ನವೋದಯ ಪ್ರಾರಂಭವಾಗಿ, ರಾಜಕೀಯ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮವಾಗಿಯೂ ಧಾರ್ಮಿಕ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಆಂದೋಲನ ವಾಗಿಯೂ ಜನತೆಯನ್ನು ಎಚ್ಚರಗೊಳಿಸಿ, ಹುರಿದುಂಬಿಸಿ, ನವಚೇತನ ದೀಪ್ತರನ್ನಾಗಿ ಮಾಡಿ, ಹೊಸ ಸಾಹಸಗಳತ್ತ ಮೂನ್ನೂಕಿತು.

ಆಶ್ಚರ್ಯದ ಸಂಗತಿ ಎಂದರೆ, ಭರತಖಂಡದ ಇತ್ತೀಚಿನ ಇತಿಹಾಸದಲ್ಲಿ ಸ್ವಾತಂತ್ರ್ಯ ಪೂರ್ವದ ಸುಮಾರು ಒಂದು ಶತಮಾನದಲ್ಲಿ, ಯಾವ ಕಾಲಮಾನವನ್ನು ನಾವು ರಾಜಕೀಯದಲ್ಲಿ ದಾಸ್ಯ, ಆರ್ಥಿಕದಲ್ಲಿ ದಾರಿದ್ರ್ಯ, ಸಾಮಾಜಿಕದಲ್ಲಿ ಛಿದ್ರ, ಧಾರ್ಮಿಕದಲ್ಲಿ, ಕ್ಷುದ್ರ ಎಂದು ವರ್ಣಿಸುತ್ತೇವೆಯೊ ಆ ಕಾಲಮಾನದಲ್ಲಿ, ನಮ್ಮ ದೇಶದಲ್ಲಿ ಗೋಚರವಾದ ಆತ್ಮಶ್ರೀಗೆ ಸಮಾನ ತೇಜಸ್ಸಿನ ಆತ್ಮಶ್ರೀ ಪ್ರಪಂಚದ ಮತ್ತಾವ ಭಾಗದಲ್ಲಿಯೂ ಆವಿರ್ಭೂತವಾಗಲಿಲ್ಲ ಎಂಬುದು: ರಾಜಾರಾಮಹೋಹನರಾಯ್‌, ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಋಷಿ ದಯಾನಂದ ಸರಸ್ವತಿ, ಕವಿ ರವೀದ್ರನಾಥಠಾಕೂರ್, ಶ್ರೀ ರಮಣ ಮಹರ್ಷಿ, ಶ್ರೀ ಅರವಿಂದರು, ಮಹಾತ್ಮಾ ಗಾಂಧೀಜಿ – ಈ ಒಂದೊಂದೂ ಹೆಸರಿನ ಹಿಂದೆ ಎಂತಹ ವಿಭೂತಿಪ್ರಮಾಣದ ಭವ್ಯ ತೇಜಸ್ಸು ಸ್ಪುರಿಸುತ್ತದೆ ಎಂಬುದನ್ನು ಗ್ರಹಿಸಲು ನಾವು ಸಮರ್ಥರಾದರೆ ಮೇಲೆ ಹೇಳಿದ ಮಾತಿನ ಸತ್ಯಾಂಶ ಸ್ವಸಂವೇದ್ಯವಾಗುತ್ತದೆ.

ಪಾಂಚಜನ್ಯ ಸದೃಶವಾದ ಆ ವಿಭೂತಿಪುರಷರ ಕರೆಗೆ ಓಗೊಟ್ಟು ನಾಡು, ರಾಜಕೀಯಾದಿ ಕ್ಷೇತ್ರಗಳಲ್ಲಿ ಕಾರ್ಯೋನ್ಮುಖಿಯಾದಂತೆಯೆ, ಕಲಾ ಭಾಷಾ ಸಾಹಿತ್ಯಾದಿ ಕ್ಷೇತ್ರಗಳಲ್ಲಿಯೂ ಎಚ್ಚತ್ತು ಎದ್ದು, ಹೊಸ ಹೊಸ ಸಾಹಸಗಳಿಗೆ ಸೊಂಟಕಟ್ಟಿ ಮುನ್ನಡೆಯತೊಡಗಿತು. ಆ ಸಾಹಿತ್ಯಕ ಪ್ರಗತಿ ನಮ್ಮ ಎಲ್ಲ ದೇಶಭಾಷೆಗಳಲ್ಲಿಯೂ ತುಸು ಹೆಚ್ಚು ಕಡಮೆ ಒಂದೇ ರೀತಿಯಲ್ಲಿ ಸಾಗಿದಂತೆ ತೋರುತ್ತದೆ. ಯಾರು ಬಲ್ಲರು? ಬಹುಶಃ ವರ್ಷಕ್ಕೆ ಹದಿನಾಲ್ಕು ಜ್ಞಾನಪೀಠ ಪ್ರಶಸ್ತಿಗಳಿದ್ದ ಪಕ್ಷದಲ್ಲಿ ಪ್ರತಿವರ್ಷವೂ ಹದಿನಾಲ್ಕು ಬಾಷೆಗಳೂ ಆ ಬಹುಮಾನ ಪಡೆಯಲು ಅರ್ಹವಾಗುತ್ತಿದ್ದುವೊ ಏನೊ?

ಸ್ವಾತಂತ್ರ್ಯೋತ್ತರ ಭಾರತಕ್ಕೆ, ರಸಶಸ್ವಾದನವೀಯುವ ಸೃಜನಾತ್ಮಕ ಸಾಹಿತ್ಯದ ಸೃಷ್ಟಿಯಷ್ಟೇ ಅವಶ್ಯಕವಾಗಿ, ಅಥವಾ ಅದಕ್ಕಿಂತಲೂ ಹೆಚ್ಚು ಅವಶ್ಯಕವಾಗಿ, ಜ್ಞಾನವಿಜ್ಞಾನ ಪ್ರಧಾನವಾದ ವಿಚಾರಾತ್ಮಕ ವಾಙ್ಮಯದ ರಚನೆಯಾಗಬೇಕಾಗಿದೆ. ನಮ್ಮ ಮಕ್ಕಳ ಶಿಕ್ಷಣವೆಲ್ಲ ಆಯಾ ಪ್ರದೇಶ ಭಾಷೆಯಲ್ಲಿಯೆ ನಡೆದು, ಅವರು ಜ್ಞಾನ ವಿಜ್ಞಾನ ಬೋಧೆಯನ್ನು ಅನುತ್ತೀರ್ಣರಾಗಿ ತಮಗೂ ರಾಷ್ಟ್ರಕ್ಕೂ ಉಂಟಾಗುತ್ತಿರುವ ಆರ್ಥಿಕ ಮತ್ತು ಮಾನಸಿಕ ರೂಪದ ಮಹಾನಷ್ಟವನ್ನು ತಪ್ಪಿಸಬೇಕಾದರೆ ಲೇಖಕವರ್ಗ ಬೌದ್ಧಿಕ ಸಾಹಿತ್ಯ ಸೃಷ್ಟಿಗೆ ಆದ್ಯಗಮನ ಕೊಡಬೇಕಾಗಿದೆ ಮಹತ್ ಪ್ರತಿಭಾಶಕ್ತಿಯಿಂದ ಹೊಮ್ಮುವ ಸೃಜನಾತ್ಮಕ ಸಾಹಿತ್ಯವು ಅದಮ್ಯ ಸ್ಪೂರ್ತಿಯಿಂದ ಪ್ರೇರಿತವಾಗುವುದರಿಂದ ಅದಕ್ಕೆ ಬಹುಮಾನ ಪ್ರಶಸ್ತಿ ಪ್ರಶಂಸೆ ಕೀರ್ತಿ ಮೆಚ್ಚುಗೆಗಳ ಬೆನ್ನುತಟ್ಟು ಇಲ್ಲದಿದ್ದರೂ ಅದರ ಅಭಿವ್ಯಕ್ತಿ ತಿರೋಹಿತವಾಗುವುದಿಲ್ಲ; ಅದರ ಪ್ರಕಾಶನಕ್ಕೆ ಚ್ಯುತಿ ಬರುವುದಿಲ್ಲ. ಆದರೆ ವೈಜ್ಞಾನಿಕವೂ ಬೌದ್ಧಿಕವೂ ಆದ ವೈಚಾರಿಕ ಸಾಹಿತ್ಯಕ್ಕೆ ಅಧಿಕೃತ ಪ್ರೋತ್ಸಾಹ ಅವಶ್ಯಕ; ಅದು ಫಲಾಪೇಕ್ಷಿಯಾದುದು: ಪ್ರಯೋಜನವನ್ನೂ ನಿರೀಕ್ಷಿಸುತ್ತದೆ. ಪ್ರಯೋಜನವೇ ಅದರ ಪರಮ ಗುರಿ. ಕಾವ್ಯಕ್ಕೆ ರಸವೇ ‘ಸಕಲ ಪ್ರಯೋಜನಮೌಲಿಭೂತ’ವಾದದ್ದು ಎಂಬರ್ಥದಲ್ಲಿ. “All Art is Useless” ಎನ್ನುವಂತೆ, “All Science must be useful” ಎಲ್ಲ ವಿಜ್ಞಾನವೂ ಲೌಕಿಕವಾದ ಪ್ರತ್ಯಕ್ಷ ಫಲದಾಯಿಯಾಗಿರಬೇಕು ಎಂಬರ್ಥದಲ್ಲಿ. ಜ್ಞಾನಪೀಠವು ಸೃಜನ ಸಾಹಿತ್ಯಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ವಿಶ್ವವಿದ್ಯಾನಿಲಯಗಳು ವೈಚಾರಿಕ, ಬೌದ್ಧಿಕ ಮತ್ತು ವೈಜ್ಞಾನಿಕ ಸಾಹಿತ್ಯ ಸೃಷ್ಟಿಗೆ ನೀಡುತ್ತವೆ ಎಂದು ಹಾರೈಸುತ್ತೇನೆ.

ಜ್ಞಾನಪೀಠಪ್ರಶಸ್ತಿ ಮಹತ್ ಕೃತಿಗಳನ್ನು ಸೃಷ್ಟಿಸುವುದಿಲ್ಲವಾದರೂ ಸೃಷ್ಟಿಯಾದ ಮಹತ್ ಕೃತಿಗಳನ್ನು ಮರೆಯಿಂದ ಹೊರಗೆ ಬೆಳಕಿಗೆ ತಂದು, ಬಹುಜನರ ಕಣ್ಣಿಗೆ ಅದು ಬೀಳುವಂತೆ ಮಾಡಿ, ಬೇರೆ ಬೇರೆ ಭಾಷೆಯ ಸಹೃದಯರ ಗಮನವನ್ನು ಅದರತ್ತ ಸೆಳೆಯುವ ಮಹೋಪಕಾರ ಮಾಡುವುದರಲ್ಲಿ ಸಂದೇಹವಿಲ್ಲ. ನಮ್ಮ ಪ್ರಾಚೀನ ಕಾವ್ಯಮೀಮಾಂಸಕರು ಕಾವ್ಯಪ್ರಯೋಜನಗಳನ್ನು ಕುರಿತು ಹೇಳುವಾಗ

ಕಾವ್ಯಂ ಯಶಸೇsರ್ಥಕೃತೇ ವ್ಯವಹಾರವಿದೇ ಶಿವೇತರಕ್ಷತಯೇ |
ಸದ್ಯಃಪರನಿರ್ವೃತಯೇ ಕಾಂತಾಸಮ್ಮಿತತಯೋಪದೇಶಯುಜೇ! |

ಎಂದು – ಕೀರ್ತಿ, ಧನ, ಲೋಕವ್ಯವಹಾರ ಜ್ಞಾನ, ಶಿವೇತರ ಕ್ಷತಿ, ಸದ್ಯಃಪರವಾದ ಆನಂದ, ಕಾಂತ ಸಮ್ಮಿತದಂತಹ ಉಪದೇಶ – ಇವುಗಳನ್ನು ಹೆಸರಿಸಿದ್ದಾರೆ. ವೈಯಕ್ತಿಕವಾದ ಪ್ರತಿಷ್ಠೆಯನ್ನು ಅಪೇಕ್ಷಿಸುವ ಮತ್ತು ಸವಿಯುವ ಕವಿ ಕೀರ್ತಿಗೂ ಬೆಲೆ ಕೊಡುತ್ತಾನೆ. ಆದರೆ ಕೀರ್ತಿಯ ವಿಚಾರದಲ್ಲಿ ಅಷ್ಟೇನೂ ಆಸಕ್ತನಲ್ಲದ ಆತ್ಮ ಸುಖಕ್ಕಾಗಿ ಹಾಡುವ ಕವಿಗೆ ಅದು ಉಪಲಕ್ಷ್ಯವೂ ಆಗದಿರಬಹುದು; ಮುಖ್ಯ ಲಕ್ಷ್ಯವಂತೂ ಎಂದಿಗೂ ಆಗುವುದಿಲ್ಲ. ಆದರೂ, ಶ್ರೀ ಅರವಿಂದರು ತಮ್ಮ ಸಂವಾದ ಒಂದರಲ್ಲಿ ಹೇಳುವಂತೆ, ಕೀರ್ತಿಗೆ ಬೇರೊಂದು ಜನೋಪಕಾರಿಯಾದ ಪ್ರಯೋಜನವಿದೆ. ಆ ಪ್ರಯೋಜನ ವ್ಯಕ್ತಿಪ್ರತಿಷ್ಠೆಗೆ ಸಂಬಂಧಿಸಿಲ್ಲ; ಅದು ಲೋಕಕಲ್ಯಾಣಕರ ಸ್ವರೂಪದ್ದು; ಅಧ್ಯಾತ್ಮ ಕ್ಷೇತ್ರದಲ್ಲಿಯೆ ಆಗಲಿ, ಸಾಹಿತ್ಯಾದಿ ಕಲಾಕ್ಷೇತ್ರಗಳಲ್ಲಿಯೆ ಆಗಲಿ, ಎಲೆಮರೆಯ ಹೂವಾಗಿ ಯಾರ ಕಣ್ಣಿಗೂ ಬೀಳದೆ ಹೋಗುತ್ತಿದ್ದ ಮಹಾಪುರಷನನ್ನೂ ಮಹಾಮೇರುಕೃತಿಯನ್ನೂ ಲೋಕಲೋಚನಗಳಿಗೆ ಗೋಚರವಾಗುವಂತೆ ಮಾಡಿ ಜನರನ್ನು ಆ ಎಡೆಗೆ ಆಕರ್ಷಿಸಿ, ಆ ವಿಭೂತಿಪರುಷನಿಂದ ಅಥವಾ ಆ ಮೇರುಕೃತಿಯಿಂದ ಲಭಿಸುವ ಜ್ಞಾನ ಮತ್ತು ಆನಂದಗಳ ಪೀಯೂಷಪಾನದಿಂದ ಅವರು ಧನ್ಯರಾಗುವಂತೆ ಮಾಡುತ್ತದೆ.

ನನಗೆ ದೊರೆತಿರುವ ಈ ಜ್ಞಾನಪೀಠ ಪ್ರಶಸ್ತಿಯಲ್ಲಿ ನಾನು, ಪ್ರಧಾನವಾಗಿ, ಯಶಸ್ಸಿನ ಪ್ರಯೋಜನದ ಈ ಮುಖವನ್ನು ಗುರುತಿಸುತ್ತೇನೆ. ಪ್ರಾಚ್ಯ ಪಾಶ್ಚಾತ್ಯ ಪ್ರಾಚೀನ ಅರ್ವಾಚೀನಗಳ ಸಾರ್ವಕಾಲಿಕ ಮತ್ತು ಸಾರ್ವಧಾರ್ಮಿಕ ಸಮಷ್ಟಿರೂಪದ ಯುಗಪ್ರಜ್ಞೆಯ ಆವಿರ್ಭೂತಿಯಂತಿರುವ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ವ್ಯಾವಹಾರಿಕವಾಗಿ ‘ಕುವೆಂಪು ಕೃತಿ’ ಎಂದು ಕರೆಯಲಾಗಿದ್ದರೂ ಪಾರಮಾರ್ಥಿಕವಾಗಿ ನೋಡಿದರೆ ‘ಕುವೆಂಪು’ವನ್ನೆ ಅದು ಸೃಜಿಸಿದೆ. ಅದು ಯುಗಚೈತನ್ಯದ ಸಮಷ್ಟಿಪ್ರಜ್ಞೆಯ ಸೃಷ್ಟಿ. ಅದು ಶ್ರೀ ರಾಮಾಯಣದ ಅತ್ಯಂತ ಆಧುನಿಕ ಅವತಾರ; ಅದು ವೈದಿಕ ಸಂಪ್ರದಾಯದ ವಾಲ್ಮೀಕಿ ರಾಮಾಯಣಕ್ಕೆ ಋಣಿಯಾಗಿರುವಂತೆ ಜೈನ ಸಂಪ್ರದಾಯದ ರಾಮಾಯಣಗಳಿಗೂ ಋಣಿಯಾಗಿದೆ. ವ್ಯಾಸ, ವಾಲ್ಮೀಕಿ, ಪಂಪ, ನಾಗಚಂದ್ರಾದಿ ಗಳಿಗೆಂತೊ ಅಂತೆಯೆ ಹೋಮರ್, ವರ್ಜಿಲ್‌, ಡಾಂಟೆ, ಮಿಲ್ಟನ್ನರಿಗೂ ಋಣಿಯಾಗಿದೆ. ಅಲ್ಲಿ ಶ್ರೀ ರಾಮಕೃಷ್ಣ – ವಿವೇಕಾನಂದರ ಸಮನ್ವಯ ದರ್ಶನವನ್ನೆಂತೊ ಅಂತೆಯೆ ಗಾಧೀಜಿ – ವಿನೋಬಾಜಿಯವರಿಂದ ಪ್ರಣೀತವಾದ ಸರ್ವೋದಯ ಭಾವನೆಯನ್ನೂ, ಪಾಶ್ಚಾತ್ಯ ವಿಜ್ಞಾನದ ವಿಕಾಸವಾದವನ್ನೆಂತೂ ಅಂತೆ ಶ್ರೀ ಅರವಿಂದ ಪ್ರಣೀತವಾದ ಪೂರ್ಣಯೋಗ ದರ್ಶನವನ್ನೂ ಸಂದರ್ಶಿಸಬಹುದು. ಸಮನ್ವಯ, ಸರ್ವೋದಯ ಮತ್ತು ಪೂರ್ಣ ದೃಷ್ಟಿ – ಇವುಗಳೆ ‘ಶ್ರೀ ರಾಮಯಾಣ ದರ್ಶನ’ದ ತ್ರಿಣೇತ್ರಗಳಾಗಿವೆ.

ಭಾರತೀಯ ಜ್ಞಾನಪೀಠವು ಆ ಮಹಾಕಾವ್ಯಕ್ಕೆ ಈ ವರ್ಷದ ಪ್ರಶಸ್ತಿಯನ್ನು ನೀಡಿ, ಅದು ಸಮಸ್ತ ಭಾರತೀಯರ ಗಮನವನ್ನು ಆಕರ್ಷಿಸುವ ಅವಕಾಶ ಕಲ್ಪಿಸಿದೆ. ಢಾ. ಶ್ರೀಮತಿ ಸರೋಜಿನಿ ಮಹಿಷಿಯವರಂತಹ ಬಹುಭಾಷಾ ವಿದುಷಿಯರು ಅದರ ಆಯ್ದ ಕೆಲವು ಭಾಗಗಳನ್ನು ಹಿಂದಿಗೆ ಭಾಷಾಂತರಿಸಿ, ಇದುವರೆಗೆ ಕರ್ಣಾಟಕ ವ್ಯಾಪ್ತಿಯ ಸ್ಥಳೀಯವಾಗಿದ್ದ ಅದರ ಯಶೋವಲಯವನ್ನು ಅಖಿಲ ಭಾರತೀಯ ವ್ಯಾಪ್ತಿಗೆ ವಿಸ್ತರಿಸಿ, ಸಹೃದಯರೆಲ್ಲರೆ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಸಮನ್ವಯ, ಸರ್ವೋದಯ ಮತ್ತು ಪೂರ್ಣದೃಷ್ಟಿಗಳ ಅದರ ತ್ರಿವೇಣಿಯಲ್ಲಿ ಮಿಂದು, ಅಲ್ಲಿ ಅಭಿವ್ಯಕ್ತಗೊಂಡಿರುವ ಪ್ರಪ್ರಾಚೀನತಾ ಸಾರಪೂರ್ಣವಾದ ಅದರ ನವೋನವ ಆತ್ಮವಿಜ್ಞಾನ ಪ್ರಜ್ಞೆಯ ಅಗ್ನಿತೀರ್ಥದಲ್ಲಿ ಮುಳುಗಿ ಬೆಂದು ನಾಂದು, ಬುದ್ಧಿಪುಷ್ಟಿ ಮತ್ತು ಭಾವತುಷ್ಟಿಗಳನ್ನು ಪಡೆಯುವ ಭಾರತೀಯರ ಸಮಷ್ಟಿ ಚೇತನವು ತನ್ನ ತಮದಿಂದ ಮುಕ್ತವಾಗಿ ‘ದೀಪ್ಯ ದೈವೀಪ್ರಜ್ಞೆಯಮೃತ ಗೋಪುರ’ಕ್ಕೆ ಏರುವಂತಾಗಲಿ ಎಂದು ಕೈಜೋಡಿಸಿ ಪ್ರಾರ್ಥಿಸುತ್ತೇನೆ:

ಮನ್ಮನೋ ಮಂದಿರಕೆ, ಓ,
ಲೋಕ ಗುರಗಳೆಲ್ಲ ಬನ್ನಿ,
ಬನ್ನಿ, ಬನ್ನಿ, ಬನ್ನಿ!

ತುಳಿಯೆ ನಿಮ್ಮ ಪದತಲ
ದಲದಲದಲ ಅರಳ್ವುದೆನ್ನ
ಶಿರಃಕಮಲ ಕುಟ್ಮಲ:

ತಮೋತಿರಮಿರವಳಿಯಲಲ್ಲಿ
ಪರಂಜ್ಯೋತಿ ಬೆಳಗಲಿ:
ಋತದ ಶಿವದ ಆನಂದದ
ಚಿದ್ವಿಭೂತಿ ತೊಳಗಲಿ.

ಮನ್ಮನೋ ಮಂದಿರಕೆ, ಓ,
ಲೋಕ ಗುರಗಳೆಲ್ಲ ಬನ್ನಿ,
ಬನ್ನಿ, ಬನ್ನಿ, ಬನ್ನಿ!


* ಜ್ಞಾನಪೀಠ ಪ್ರಶಸ್ತಿಯನ್ನು ಸ್ವೀಕರಿಸಿ ಮಾಡಿದ ಭಾಷಣ. ನವದೆಹಲಿ: ಡಿಸೆಂಬರ್ ೨೦. ೧೯೬೮.