ಮಾಡಿ ನೋಡಿ ಬಯೋಡೈಜೆಸ್ಟರ್’ :

ನೂರು ಲೀಟರ್ ನೀರು ಹಿಡಿಯುವ ಪ್ಲಾಸ್ಟಿಕ್ ಡ್ರಂ ಮಲಗಿಸಿ ಇಡಿ. ಹೊಟ್ಟೆಯ ಭಾಗದಲ್ಲಿ ಕತ್ತರಿಸಿ . ಒಂದು ತುದಿಯಲ್ಲಿ ನಲ್ಲಿ ಅಳವಡಿಸಿದ ಪಿ.ವಿ.ಸಿ.ಪೈಪನ್ನು ಮುಚ್ಚಳದ ಭಾಗದಿಂದ ಒಳಕ್ಕೆ ತೂರಿಸಿ. ಒಳ ಭಾಗಕ್ಕೆ ಬರುವ ಭಾಗದಲ್ಲಿ ಸುತ್ತಲೂ ರಂಧ್ರಗಳನ್ನು ಮಾಡಿ. ಇಷ್ಟು ಮಾಡಿದರೆ ಡೈಜೆಸ್ಟರ್ ಸಿದ್ಧ. ಕತ್ತರಿಸಿರುವ ಮೇಲ್ಭಾಗದಿಂದ ಎಲ್ಲ ರೀತಿಯ ಸೊಪ್ಪು, ಕಳೆಗಳನ್ನು ಹಾಕಿ ಮೇಲೆ ಸ್ವಲ್ಪ ಸಗಣಿ ಹಾಕಿ. ೫೦ ಲೀಟರ್ ನೀರು ಸುರಿಯಿರಿ. ಎಲ್ಲವೂ ಕಳೆಯಲು ೮-೧೦ ದಿನಗಳು ಬೇಕು. ತಯಾರಾದ ಕಶಾಯ ಪೈಪಿನ ರಂಧ್ರಗಳಿಂದ ಒಳಕ್ಕಿಳಿಯುತ್ತದೆ. ಬೇಕೆಂದಾಗ ನಲ್ಲಿ ತಿರುಗಿಸಿದರೆ ಸೋಸಿದ ಕಶಾಯ ಬರುತ್ತದೆ. ಅವಶ್ಯಕತೆಗೆ ತಕ್ಕಂತೆ ತೆಗೆದು ಬಳಸ ಬಹುದು. ಹೆಚ್ಚು ಪೋಷಕಾಂಶಗಳಿರುವ ಈ ಕಶಾಯವನ್ನು ‘ಫೋಲಿಯಾರ್ ಸ್ಪ್ರೇ’ಯಾಗಿ ಸಹ ಉಪಯೋಗಿಸ ಬಹುದು.

ಹಾಸನದ ಸುಂದರ ಪರಿಸರದಲ್ಲಿ ಬೆಳೆದ ವೇಣು ಗೆ (ವೇಣುಗೋಪಾಲ್) ಸಹಜವಾಗಿಯೇ ಹಸಿರ ಪ್ರೀತಿ. ಬೆಂಗಳೂರಿನ ಟೆಕ್ಸ್ ಟೈಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವೇಣುಗೆ ಸಂಗಾತಿಯಾಗಿದ್ದು ಉದ್ಯೋಗ ನಿರತೆ ಆಶ. ಕೆಲಸ ಹೊರತು ಪಡಿಸಿ ಬೇರೆ ಏನನ್ನಾದರೂ ಮಾಡಬೇಕು ಎಂಬ ವೇಣುವಿನ ಹಂಬಲಕ್ಕೆ ನೀರೆರೆದು ಪೋಷಿಸಿದವರು ಆಶ. ಬೆಂಗಳೂರಿನ ಜನ ಜಂಗುಳಿ, ಇಲ್ಲಿನ ವಾಯು ಮಾಲಿನ್ಯದಿಂದ ಬೇಸತ್ತ ಈ ದಂಪತಿಗಳು ಮೈಸೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಳ್ಳ ಬಯಸಿದಾಗ, ಬೇರೆ ಏನಾದರೂ ಮಾಡಬೇಕೆಂಬ ಆಸೆ ಪ್ರಬಲವಾಗಿತ್ತೇ ವಿನಹ ಯಾವದೂ ನಿರ್ದಿಷ್ಟವಾಗಿರಲಿಲ್ಲ. ಹೆಚ್ ಆರ್ ವಿಭಾಗದಲ್ಲಿ ಕೆಲಸ ಮಾಡಿ ಕೈತುಂಬ ಸಂಬಳ ತರುತ್ತಿದ್ದ ಆಶ ಮೈಸೂರಿಗೆ ಬಂದ ಮೇಲೆ ಮನೆ ಮತ್ತು ತೋಟದ ಕೆಲಸದಲ್ಲೇ ತೃಪ್ತರಾಗಿದ್ದಾರೆ. ಯಾವದೇ ಕೆಲಸವಾದರೂ ‘ಮಾನಸಿಕ ಸಿದ್ದತೆ’ ತುಂಬ ಅಗತ್ಯ ಎನ್ನುವ ಆಶ ಅವರ ಮಾತು ಅವರ ತೋಟ ನೋಡಿದಾಗ ಅನುಭವಕ್ಕೆ ಬರುತ್ತದೆ.

ತೋಟದಲ್ಲಿ ಸುತ್ತಾಟ ಆಶ-ವೇಣು.

ಮೈಸೂರಿನ ಹೊರವಲಯದ ಪ್ರಶಾಂತ ವಾತಾವರಣದಲ್ಲಿ, ಮನೆಯ ಪಕ್ಕದಲ್ಲಿ ಖಾಲಿ ಇರುವ ಜಾಗವೇ ಇವರ ಪ್ರೀತಿಯ ತೋಟ, ಹಿತ್ತಿಲು, ಧ್ಯಾನ ಮಂದಿರ ಎಲ್ಲವೂ. ಆದರೆ ಈ ಹಿತ್ತಿಲ ನಿರ್ಮಾಣದ ಹಿಂದೆ ಒಂದು ದೊಡ್ಡ ಕಥೆಯೇ ಇದೆ. ಮೈಸೂರಿಗೆ ಬಂದ ಮೇಲೆ ಸಾವಯವ ಸಂಸ್ಥೆಗಳ ಒಡನಾಟ, ಸಾವಯವ ಆಹಾರ ಸೇವನೆಯಿಂದಾಗಿ ಚಿಂತನೆ ಬೇರೆಯೇ ಜಾಡು ಹಿಡಿಯಿತು. ವಿಷಮುಕ್ತ ತರಕಾರಿ ಬೆಳೆಯುವ ಬಗ್ಗೆ, ಆಹಾರ ದಲ್ಲಿನ ಪೌಷ್ಟಿಕಾಂಶದ ಬಗ್ಗೆ, ಮೌಲ್ಯವರ್ಧನೆಯ ನೆಪದಲ್ಲಿ ಆಗುತ್ತಿರುವ  ಕಲಬೆರಕೆಯ ಬಗ್ಗೆ ಯೋಚನೆ ಬಂದಾಗ ಪೂರಕ ಮಾಹಿತಿ ಸಂಗ್ರಹ ಶುರುವಾಯಿತು.

ಸೋದರನೊಂದಿಗೆ ಸೇರಿ ಖರೀದಿಸಿದ ಒಂದು ಎಕರೆ ಕೃಷಿ ಭೂಮಿಯ ಅರ್ಧಭಾಗದಲ್ಲಿ ಸುಮಾರು ೩೨೦ ಹಣ್ಣಿನ ಗಿಡಗಳನ್ನು ನಾಟಿ ಮಾಡಿದರು. ಬೇರೆ ಬೇರೆ ರಾಜ್ಯಗಳಿಂದ ಆಯ್ದು ತಂದ ಗಿಡಗಳಿಗೆ  ಎರೆಡು ವರ್ಷ ಕಾಲ ಆರೈಕೆ ಮಾಡಿದರು. ಪ್ರತಿ ದಿನ ಗಿಡಗಳ ಒಡನಾಟ ದೇಹ ಮನಸ್ಸು ಎರೆಡನ್ನೂ ಹಗುರ ಗೊಳಿಸಿತು. ಸಾವಯವ ಕೃಷಿಯಿಂದ ಗಿಡಗಳ ಮೇಲಾಗುವ ಪರಿಣಾಮ, ಭೂಮಿಯ ಫಲವತ್ತತೆ ಹೆಚ್ಚಾಗುವ ಪರಿ ಗಮನಿಸಿದ ವೇಣು ಈ ಕೃಷಿಯ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಕಲೆ ಹಾಕ ತೊಡಗಿದರು.

ತಾವೇ ಬೆಳೆದ ಕ್ಯಾರೆಟ್ ನೊಂದಿಗೆ ಆಶ.

ಹಣ್ಣಿನ ಮರಗಳು ಬೆಳೆದು ಫಲ ಕೊಡುವ ವೇಳೆಗೆ ಅನಿರೀಕ್ಷಿತವಾಗಿ ತೋಟ ಕೈ ಬಿಟ್ಟಿತು. ಎಲ್ಲವೂ ಕಳೆದು ಹೋಯಿತೆನ್ನುವ ನಿರಾಸೆ ಮನದಾಳಕ್ಕಿಳಿಯುವ ಮೊದಲೇ ಕಣ್ಣಿಗೆ ಬಿದ್ದಿದ್ದು ಮನೆಯ ಪಕ್ಕದಲ್ಲಿದ್ದ ಖಾಲಿ ಜಾಗ. sಸಸ್ಯ ಪ್ರೀತಿ ಮನಸ್ಸಿನ ಮಂಕು ಹರಿಸಿತು. ಬರಡಾಗಿ, ಕಳೆಗಳ ತವರಾಗಿದ್ದ  ಜಾಗ ತರಕಾರಿ ತೋಟವಾಗಿ ಬದಲಾಯಿತು. ಇದನ್ನು ತೋಟವೆನ್ನುವುದಕ್ಕಿಂತ ಮನೆಯ ‘ತರಕಾರಿ ಬುಟಿ’ ಎನ್ನುವುದು ಸೂಕ್ತವಾಗ  ಬಹುದು.

ನಿತ್ಯದ ಬಳಕೆಗೆ ಬೇಕಾದ ಪುದೀನ, ಕೊತ್ತಂಬರಿ, ಮೆಣಸಿನ ಕಾಯಿಗಳು ಸಮೃದ್ಧ. ಟೊಮೆಟೊ, ಬದನೆ, ಹಲಸಂದೆ, ಹೀರೆ, ಹೂ ಕೋಸು, ಬೆಂಡೆ, ಗೋರಿಕಾಯಿ, ಕ್ಯಾರೆಟ್ ಗಳು ಬೆಳೆದು ನಿಂತಿವೆ. ಹತ್ತಾರು ಪರಂಗಿ ಗಿಡಗಳು ಬಾಳೆಗಿಡಗಳು ಹಣ್ಣು ಬಿಡುವ ಸಿದ್ಧತೆ ಯಲ್ಲಿವೆ. ನಾನೇನು ಕಮ್ಮಿ ಎಂಬಂತೆ ಅಗಸೆ, ನುಗ್ಗೆ ಗಿಡಗಳು ಹೂಗಳಿಂದ ತುಂಬಿವೆ.   ಬೆಲೆಗಳು ತಾರಕಕ್ಕೇರಿ, ಕಣ್ಣೀರು ತರಿಸಿದ ‘ಈರುಳಿ’ ಆಶಾ ಅವರ ಮುಖದಲ್ಲಿ ಮಾತ್ರ ಮಂದಹಾಸ ಮೂಡಿಸಿದೆ. ಕಾರಣ ಇವರ ತೋಟದಲ್ಲಿ ಬಂದ ‘ಈರುಳ್ಳಿ’ ಯ ಬಂಪರ್ ಬೆಳೆ. ಸ್ನೇಹಿತರೊಂದಿಗೆ ಹಂಚಿಕೊಳ್ಳುವಷ್ಟು, ಮನೆಗೆ ಬಂದವರಿಗೆ ಕೊಡುವಷ್ಟು. ‘ಇದರ ಬಿಸಿ ನಮಗೆ ತಟ್ಟಲೇ ಇಲ್ಲ’ ಎಂದು ನಗುತ್ತಾರೆ ಆಶ.

ವಿಷ ಮುಕ್ತ ಹೂ ಕೋಸು.

ಬೆಳಗ್ಗೆ ಗಾಳಿ ಸಂಚಾರಕ್ಕೆ ಹೋಗುವ ವೇಣು ಕೈಯಲ್ಲಿ ಒಂದು ಪ್ಲಾಸ್ಟಿಕ್ ಬಕೀಟು. ಹಿಂದಿರುಗುವಾಗ ಅದರ ತುಂಬ ಸಗಣಿ. ಜೀವಾಮೃತ (ದ್ರವ ಗೊಬ್ಬರ) ಮಾಡಲು, ಗಿಡಗಳಿಗೆ ಕಾಂಪೋಸ್ಟ್ ಒದಗಿಸಲು ಈ ಸಗಣಿ ಬೇಕಲ್ಲ ಅನ್ನುತ್ತಾರೆ ವೇಣು.

ಸುಲಭವಾಗಿ ಇವರು ಮಾಡಿಕೊಂಡಿರುವ ‘ಬಯೋ-ಡೈಜೆಸ್ಟರ್’ ಎಲ್ಲ ಗಿಡಗಳಿಗೂ ‘ಆರೋಗ್ಯ ವಿಮೆ’ ಮಾಡಿಸಿದಂತೆ. ತೋಟದಲ್ಲಿ ಕೀಳುವ ಕಳೆಗಳು, ಸೊಪ್ಪು-ಸೆದೆಗಳು, ಹೆಕ್ಕಿ ತಂದ ಸಗಣಿ, ಮೂರು ದಿನಕ್ಕೊಮ್ಮೆ ಸ್ವಲ್ಪ ನೀರು ಇದಕ್ಕೆ ಆಹಾರ. ಬೇಕೆಂದಾಗ ನಲ್ಲಿ ತಿರುಗಿಸಿ  ದ್ರವರೂಪದ ಕಶಾಯ ಹಿಡಿದು ಗಿಡಗಳಿಗೆ ಹಾಕಿದರೆ ಆಯಿತು. ಅವುಗಳಿಗೆ ಸಮೃದ್ಧ ಪೋಶಕಾಂಶಗಳು ದೊರೆತಂತೆ. ಅಲ್ಲಲ್ಲಿ ಬೆಳೆದಿರುವ ಚೆಂಡು ಹೂಗಳು, ಹಳದಿ ಗೆಲಾರ್ಡಿಯ (ಗಲಾಟೆ-ಹೂವು) ಕೀಟ ರೋಗಗಳನ್ನು ಹದ್ದು-ಬಸ್ತಿನಲ್ಲಿಡಲು ಸಹಕಾರಿ.

ಮೈಸೂರು ಬದನೆ.(ನಶಿಸುತ್ತಿರುವ ಈರನಗೆರೆ ತಳಿ)

ತರಕಾರಿ ಬೆಳೆಯ ಬೇಕೆಂಬ ಆಲೋಚನೆ ಬಂದ ದಿನದಿಂದ ಮಾಡಿದ ಪ್ರಯತ್ನಕ್ಕೀಗ ಆರು ತಿಂಗಳು. ಅಂದಿನಿಂದ ಹೊರಗಿನಿಂದ ತರಕಾರಿ ತಂದಿಲ್ಲ. ನಿತ್ಯ ಒಂದು ಗಂಟೆಯ ಕೆಲಸ. ಅಲ್ಲಲ್ಲಿ ಅನಾಥವಾಗಿ ಬಿದ್ದಿರುವ ಸಗಣಿ ಆರಿಸಿ ತರಲು ಅರ್ಧ ಗಂಟೆ ಸಮಯ ಸಾಕು. ಅದರೊಂದಿಗೇ ನನ್ನ ವಾಯು ವಿಹಾರವೂ ಮುಗಿಯುತ್ತೆ ಎನ್ನುವ ವೇಣು ಅವರ ಮುಖದಲ್ಲಿ ತೋಟದ ಬಗೆಗಿನ ಹೆಮ್ಮೆ ಎದ್ದು ಕಾಣುತ್ತದೆ.

ತಮ್ಮ ಪರಿಶ್ರಮದ ಫಲ ಕುರಿತು ಇತರರಿಗೆ ತಿಳಿಸಲು ವೇಣು ಹಿಂಜರಿಯುವುದಿಲ್ಲ. ನಾಲ್ಕಾರು ಜನ ಸೇರಿದಾಗ ಆ ಸಂದರ್ಭವನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಇತರರೂ ತಮ್ಮಂತೆ ವಿಷ ಮುಕ್ತ ಆಹಾರ ಸೇವಿಸ ಬೇಕೆಂಬುದೇ ಇದರ ಹಿಂದಿನ  ಆಶಯ. ಈ ರೀತಿಯ ಒಡನಾಟದಿಂದಾಗಿ ಸದ್ದಿಲ್ಲದೇ ಒಂದು ಪಡೆ ಸಿದ್ಧವಾಗುತ್ತಿದೆ. ಹತ್ತಾರು ಗೆಳೆಯರು ಒಂದುಗೂಡಿ, ಸಾಮೂಹಿಕವಾಗಿ ಒಂದೇ ಜಾಗದಲ್ಲಿ ರಾಸಾಯನಿಕ ಮುಕ್ತ ತರಕಾರಿ ಬೆಳೆದು ನೇರವಾಗಿ ಗ್ರಾಹಕರಿಗೆ ತಲಪಿಸುವ ಬಗ್ಗೆ ಸಿದ್ದತೆಗಳು ನಡೆಯುತ್ತಿವೆ. ಕೆಲ ದಿನಗಳಲ್ಲೇ ಅದು ಕಾರ್ಯರೂಪಕ್ಕೆ ಬರಲಿದೆ. ಈಗ ಬೀಳುತ್ತಿರುವ ಸಾಗಾಣಿಕೆ ವೆಚ್ಚ ಮತ್ತು ಮಧ್ಯವರ್ತಿಗಳಿಂದಾಗುತ್ತಿರುವ ಹೆಚ್ಚುವರಿ ಬೆಲೆಯನ್ನು ತಡೆದು ಎಲ್ಲರಿಗೂ, ಅದರಲ್ಲೂ ಮಧ್ಯಮ ವರ್ಗದ ಜನರಿಗೆ  ಒಳ್ಳೆಯ ಆಹಾರ ಸಿಗುವಂತೆ ಮಾಡುವ ಹಂಬಲ. ಈಗಾಗಲೇ ರೂಪು ರೇಷೆ ಗಳು ಸಿದ್ಧವಾಗಿ, ಸಧ್ಯದಲ್ಲೇ ಬೆಳಕು ಕಾಣಲಿದೆ ಎನ್ನುತ್ತಾರೆ ಆಶ.

ಬಯೋ-ಡೈಜೆಸ್ಟರ್.

ಮೈಸೂರಿನ ಗ್ರಾಹಕರು ಈಗಾಗಲೇ ಎಚ್ಚೆತ್ತು ಕೊಂಡಿದ್ದಾರೆ. ವಿಷಮುಕ್ತ ಆಹಾರಗಳನ್ನು ಒದಗಿಸುವ ಸಾವಯವ ಸಂಸ್ಥೆಗಳು ಹತ್ತಾರಿವೆ. ಹಾಗಾಗಿ ತಮ್ಮ ಈ ಯೋಜನೆಗೆ ಈಗಾಗಲೇ ನೂರಾರು ಮಂದಿ ಸದಸ್ಯರಾಗಲು ಸಿದ್ಧರಿದ್ದಾರೆ. ಕೆಲವೇ ದಿನಗಳಲ್ಲಿ ಕಾರ್ಯ ಪ್ರಾರಂಭ ವಾಗಲಿದೆ ಎನ್ನುವ ವೇಣು  ನಾಟಿ ಬೀಜಗಳ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಈ ನಮ್ಮ ತೋಟ ಕೊಟ್ಟ ಅನುಭವ ಅಪಾರ . ಮುಂದೆ ಮಾಡ ಹೊರಟಿರುವ ಯೋಜನೆಗೆ ಇದು ಮೊದಲ ಮೆಟ್ಟಲು ಎಂಬುದು ನಿರ್ವಿವಾದ ಎನ್ನುತ್ತಾರೆ ಈ ದಂಪತಿಗಳು.

(ಚಿತ್ರಗಳು: ಎ.ಆರ್.ಎಸ್.ಶರ್ಮ)