ಕ್ಷಮಿಸಿ. ಅಪಾರ ಪ್ರಚಾರ ಪಡೆದು ವರ್ಷಗಳೇ ಆದರೂ ರಸ್ತೆಯಲ್ಲಿ ಕಾಣಿಸಿಕೊಳ್ಳದ ಟಾಟಾರವರ ನಾನೊ ಕಾರಿನ ಬಗ್ಗೆ ಈ ಲೇಖನ ಅನ್ನುವ ಭಾವನೆಯನ್ನು ಈ ತಲೆಬರಹ ಉಂಟು ಮಾಡಿದ್ದರೆ ಕ್ಷಮಿಸಿ. ಮಲಿನ ನೀರನ್ನು ಶುದ್ಧಿ ಮಾಡುವುದರಿಂದ ಹಿಡಿದು ಕೊಳೆಯಾದರು ಹೊಲಸು ವಾಸನೆ ಬೀರದ, ನಿಮ್ಮ ನಾಡಿಯನ್ನು ನಿರಂತರ ಅಳೆಯುವ ಸೂಕ್ಷ್ಮಸಂವೇದಿ ದಿರಿಸು, ಅಂಗೈಯಲ್ಲೇ ಮ್ಯಾಜಿಕ್ ಮಾಡುವ ಪ್ರಯೋಗಾಲಯ, ಉಸಿರು ಊದಿದರೆ ವಿದ್ಯುತ್ ಉತ್ಪಾದಿಸುವ ಸೂಕ್ಷ್ಮ ಜನರೇಟರ್ ಮುಂತಾದ ನಾಳಿನ ತಂತ್ರಜ್ಞಾನದ ಬೆನ್ನೆಲುಬೆನ್ನಿಸಿರುವ ನಾನೊಕೊಳವೆಗಳ ಕುರಿತು ಈ ಲೇಖನ. ಇದುವರೆವಿಗೂ ಪತ್ರಿಕೆಗಳಲ್ಲಿ ಸುದ್ದಿ ಮಾಡುತ್ತಿದ್ದ, ಪ್ರಪಂಚದ ಅತ್ಯುನ್ನತ ಪ್ರಯೋಗಾಲಯಗಳಲ್ಲಿ ಕೌತುಕದ ವಿಷಯವಾಗಿದ್ದ ನಾನೊಕೊಳವೆ ಈಗ ನಮ್ಮ, ನಿಮ್ಮ ಮನೆ ಹೊಕ್ಕಿದೆಯಂತೆ. ಹಾಗೆಂದು ಕಾನ್ಪುರದ ಐಐಟಿಯಲ್ಲಿ ಪ್ರೊಫೆಸರ್ ಆಗಿರುವ ಸಬ್ಯಸಾಚಿ ಸರ್ಕಾರ್ ಮತ್ತು ಸಂಗಡಿಗರು ಇದೇ ವಾರ ಪ್ರಕಟವಾದ ಕರೆಂಟ್ ಸೈನ್ಸ್ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ನಮ್ಮ, ನಿಮ್ಮ ಮನೆಯ ಅಡುಗೆ ಕೋಣೆಗಳಲ್ಲಿ ಪಾತ್ರೆಗಳಿಗೆ ಹಾಗೂ ಎಕ್ಸ್ಹಾಸ್ಟ್ ಫ್ಯಾನ್ಗಳಲ್ಲಿ ಅಂಟಿಕೊಂಡಿರುವ ದೂಳು ಇನ್ನೇನೂ ಅಲ್ಲ, ಅತಿ ಸೂಕ್ಷ್ಮವಾದ ನಾನೊಕೊಳವೆಗಳ ಸಂಗ್ರಹ ಎಂದು ಸರ್ಕಾರ್ ಕಂಡು ಕೊಂಡಿದ್ದಾರೆ. ಹೀಗೆ ನಾನೊ ಹೊಸ್ತಿಲು ದಾಟಿ ಮನೆಯೊಳಗೆ ಬಂದಿದೆ.

ನಾನೊಕೊಳವೆಗಳು ಬೇರೇನಲ್ಲ. ಅವು ಕಾರ್ಬನ್ನ ಒಂದು ರೂಪ ಅಷ್ಟೆ.  ವಾಹನದ ಹೊಗೆಯಲ್ಲಿ, ಇದ್ದಿಲಿನಲ್ಲಿ ಇರುವ ಇಂಗಾಲವೇ ಕಾರ್ಬನ್. ಇದರ ಹಲವು ಅವತಾರಗಳಲ್ಲಿ ವಜ್ರ, ಪೆನ್ಸಿಲ್ಗಳಲ್ಲಿ ಇರುವ ಸೀಸದ ಕಡ್ಡಿ ಹಾಗೂ ಇದ್ದಿಲ ಪುಡಿಗಳೂ ಸೇರಿವೆ. ಎರಡು ದಶಕಗಳ ಹಿಂದಿನವರೆಗೂ ಕಾರ್ಬನ್ಗೆ ಈ ಮೂರೇ ಸ್ವರೂಪಗಳಿವೆ ಎಂದು ತಿಳಿಯಲಾಗಿತ್ತು. ಆದರೆ 1983ರಲ್ಲಿ ಇಂಗ್ಲೆಂಡಿನ ರಿಚರ್ಡ್ ಸ್ಮಾಲಿ ಮತ್ತು ಸಂಗಡಿಗರು ನಡೆಸಿದ ಸಂಶೋಧನೆ ಕಾರ್ಬನ್ ಮತ್ತೊಂದು ರೂಪದಲ್ಲಿಯೂ ಕಾಣಿಸುತ್ತದೆ ಎಂದು ತಿಳಿಸಿತು. ಅದೇ ಸಮಯದಲ್ಲಿ ಇಂಗ್ಲೆಂಡಿನವರೇ ಆದ ಹೆರಾಲ್ಡ್ ಕ್ರೋಟೋ ಕೋಟ್ಯಂತರ ಕಿಲೋಮೀಟರು ದೂರವಿರುವ ನಕ್ಷತ್ರಗಳಲ್ಲಿರುವ ಕಾರ್ಬನ್ನ ಸ್ವರೂಪವೇ ಬೇರೆ ಎಂದು ನಿರೂಪಿಸಿದರು. ಇವರಿಬ್ಬರಿಗೂ ಅನಂತರ ನೋಬೆಲ್ ಬಹುಮಾನ ದೊರಕಿತು.

ಇವರ ಶೋಧವಾದ ಕಾರ್ಬನ್ ರೂಪವೇ ನಾನೊಕಾರ್ಬನ್. ಅದನ್ನು ಬಕಿಚೆಂಡುಗಳೆಂದೂ ಜನ ಕರೆದರು. ಈ ಕಾರ್ಬನ್ನ ರೂಪದಲ್ಲಿ ಅಣುಗಳ ಜೋಡಣೆ ವಿಶಿಷ್ಟವಾಗಿತ್ತು. ಸೀಸದ ಕಡ್ಡಿಗಳಲ್ಲಿ ಅವು ಜೇನುಗೂಡಿನಂತೆ ಷಟ್ಕೋಣಾಕಾರದಲ್ಲಿ ಜೋಡಣೆಯಾಗಿರುತ್ತವೆ. ಬಕಿಬಾಲ್ನಲ್ಲಿ ಈ ಷಡ್ಭುಜಾಕಾರದ ಜೊತೆಗೆ ಎಲ್ಲೋ ಒಂದು ಪಂಚಭುಜಾಕೃತಿಯೂ ಇರುತ್ತದೆ. ಗ್ರಾಟ್ ಹಾಳೆ ಈ ಪಂಚಭುಜಾಕೃತಿ ಇರುವ ಸ್ಥಳದಲ್ಲಿ ಮುರುಟಿಕೊಂಡು ಚೆಂಡಿನ ರೂಪ ತಾಳುತ್ತದೆ. ಇದನ್ನೇ ಬಕಿಬಾಲ್ ಅಥವಾ ಬಕಿಚೆಂಡು ಎಂದು ಹೆಸರಿಸಿದರು (ಬಕ್ಮಿನ್ಸ್ಟರ್ ಫುಲರ್ ಎನ್ನುವ ಇಂಜಿನೀಯರ್ ಈ ಆಕಾರದ ರಚನೆಗಳಿಗೆ ಪ್ರಸಿದ್ಧ. ಅದಕ್ಕೇ ಈ ಹೆಸರು). ಫುಲರೀನ್ ಎಂದೂ ಇದನ್ನು ಕರೆಯುತ್ತಾರೆ.

ಅಣುರಚನೆಯಷ್ಟೆ ಅಲ್ಲ, ಈ ಫುಲರೀನ್ ಕಾರ್ಬನ್ನ ರಾಸಾಯನಿಕ ಗುಣಗಳೂ ವಿಶಿಷ್ಟ. ಸುಲಭವಾಗಿ ರಾಸಾಯನಿಕ ಕ್ರಿಯೆಯಲ್ಲಿ ಅದು ತೊಡಗಿಕೊಳ್ಳುವುದಿಲ್ಲ. ಹೀಗಾಗಿ ಈ ರಾಸಾಯನಿಕದ ಬಗ್ಗೆ ಸಂಶೋಧನೆಗಳು ಎಗ್ಗಾ ಮುಗ್ಗಾ ನಡೆದುವು ಎನ್ನಬಹುದು. ಇತ್ತೀಚೆಗೆ ಫುಲರೀನ್ನ ಮತ್ತೊಂದು ರೂಪ ಇನ್ನೂ ಸುದ್ದಿ ಮಾಡುತ್ತಿದೆ. ಅದುವೇ ನಾನೊಕೊಳವೆ. ನಾನೊಕೊಳವೆಯಲ್ಲಿ ಫುಲರೀನ್ ಚೆಂಡಿನಾಕಾರ ಕಳೆದುಕೊಂಡು ಕೊಳವೆಯಾಕಾರ ತಾಳುತ್ತದೆ. ಈ ಕೊಳವೆಯ ವ್ಯಾಸ ಕೆಲವೇ ನಾನೋಮೀಟರು (ನಾನೋಮೀಟರು ಎಂದರೆ ಮಿಲಿಮೀಟರಿನ ಹತ್ತುಲಕ್ಷದಲ್ಲೊಂದಂಶ)ಗಳಾದ್ದರಿಂದ ಈ ಹೆಸರು.  ಫುಲರೀನ್ನಂತೆಯೇ ಇದುವೂ ಸುಲಭವಾಗಿ ರಾಸಾಯನಿಕ ಕ್ರಿಯೆಗಳಲ್ಲಿ ತೊಡಗುವುದಿಲ್ಲವಾದರೂ ಹಲವಾರು ಉಪಯುಕ್ತ ಗುಣಗಳನ್ನು ವಿಜ್ಞಾನಿಗಳು ಇದರಲ್ಲಿ ಕಂಡಿದ್ದಾರೆ. ಇದು ಸಿಲಿಕಾನ್ನಂತೆ ಅರೆವಾಹಕವಾಗಿ ಕೆಲಸ ಮಾಡುತ್ತದೆ. ಒಂದಿಷ್ಟು ಲೋಹದ ಅಣುಗಳನ್ನು ಕೂಡಿಸಿದರೆ ವಾಹಕವಾಗುತ್ತದೆ. ಬೇರೆ ಧಾತುಗಳ ಒಂದೆರಡು ಅಣುಗಳನ್ನು ಮಿಶ್ರ ಮಾಡಿದರೆ ಸ್ವತಃ ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಳ್ಳದಿದ್ದರೂ, ಕ್ರಿಯೆಯ ವೇಗವನ್ನು ಹೆಚ್ಚಿಸಬಲ್ಲುದು. ಹೀಗಾಗಿ ನಾನೊಕೊಳವೆಗಳಿಂದ ವೈವಿಧ್ಯಮಯ ಸಾಧನಗಳನ್ನು ತಯಾರಿಸಲು ಯೋಜಿಸಲಾಗಿದೆ.

ನಾನೊಕೊಳವೆಗಳು ಬಳಕೆಗೆ ಬರುವ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಅದರ ಬಗ್ಗೆ ಆತಂಕವೂ ಹೆಚ್ಚುತ್ತಿದೆ. ಜೀವಕೋಶಗಳಲ್ಲಿರುವ ಹಲವು ಕೋಶಾಂಗಗಳಿಗಿಂತಲೂ ಸಣ್ಣದಾಗಿರುವ ನಾನೊಕೊಳವೆಗಳು ಜೀವಕೋಶಗಳಿಗೆ ಹಾನಿಯುಂಟುಮಾಡಲಾರವೇ ಎನ್ನುವ ಸಂದೇಹವೂ ಇದೆ. ನಾನೊಪ್ರಮಾಣದಲ್ಲಿರುವ ಎಲ್ಲ ವಸ್ತುಗಳ ಬಗ್ಗೆಯೂ ಈ ಅನುಮಾನ ಇದೆಯಾದರೂ, ನಾನೊಕಾರ್ಬನ್ ಅದರಲ್ಲೂ ವಿಶೇಷವಾಗಿ ನಾನೊಕೊಳವೆಗಳ ಬಗೆಗಿನ ಅನುಮಾನ ತುಸು ಹೆಚ್ಚೇ ಎನ್ನಬಹುದು. ಏಕೆಂದರೆ ಇವುಗಳನ್ನು ವಿವಿಧ ಸಾಧನಗಳಲ್ಲಿ, ಉಪಯೋಗಗಳಿಗೆ ಬಳಸುವ ಯೋಜನೆಗಳಿವೆ. ನಾನೊಕೊಳವೆಗಳನ್ನು ಬಳಸಿದ ಸಾಧನಗಳು, ವಸ್ತುಗಳು ಮಾರುಕಟ್ಟೆಯಲ್ಲಿ ಶೀ್ರವೇ ಬರಬಹುದೆನ್ನುವುದೂ ಗಮನದಲ್ಲಿಡಬೇಕಾದ ಸಂಗತಿ. ಇಂತಹ ಸಂದರ್ಭದಲ್ಲಿ ಮನೆಯೊಳಗೇ ನಾನೊಕಾರ್ಬನ್ ಇದೆ ಎಂದರೆ ಅಚ್ಚರಿಯಾಗದೇ?  ಸರ್ಕಾರ್ ರವರ ಸಂಶೋಧನೆ ಈ ಅಚ್ಚರಿ ತಂದಿದೆ.

ಮನೆಯೊಳಗೆ ಇರುವ ಧೂಳಿನಲ್ಲಿ ಕಾರ್ಬನ್ ಕಣಗಳು ಇರುವುದು ಅಚ್ಚರಿಯ ವಿಷಯವೇನಲ್ಲ. ಆದರೆ ಈ ಕಾರ್ಬನ್ ನಾನೊಕೊಳವೆಗಳ ರೂಪದಲ್ಲಿ ಇದೆ ಎನ್ನುವುದು ಹೊಸತು. ಸರ್ಕಾರ್ರವರ ತಂಡ ಹಲವು ಮನೆಗಳಲ್ಲಿ ಕಟ್ಟಿದ ಜೇಡರಬಲೆಯನ್ನು ಸಂಗ್ರಹಿಸಿ, ರಾಸಾಯನಿಕಗಳಿಂದ ತೊಳೆದು ಪರೀಕ್ಷಿಸಿದೆ. ಪರೀಕ್ಷೆಗಳ ಪ್ರಕಾರ ಈ ಬಲೆಗಳಲ್ಲಿ ಸಿಲುಕಿಕೊಂಡ ಧೂಳಿನಲ್ಲಿ ಸಾಕಷ್ಟು ನಾನೊಕೊಳವೆಗಳಿವೆ. ಅಷ್ಟೆ ಅಲ್ಲ. ಈ ನಾನೊಕೊಳವೆಗಳು ರಾಸಾಯನಿಕವಾಗಿಯೂ ಬಲು ಚುರುಕಾಗಿವೆಯಂತೆ. ಇವು ತಮ್ಮ ಸಂಪರ್ಕಕ್ಕೆ ಬಂದ ಗಾಳಿಯಲ್ಲಿರುವ ಆಕ್ಸಿಜನ್ ಅನ್ನು ಅತ್ಯಂತ ಕ್ರಿಯಾಶೀಲವನ್ನಾಗಿ ಮಾಡುತ್ತದೆಂದು ಇವರು ಗಮನಿಸಿದ್ದಾರೆ. ರಿಯಾಕ್ಟಿವ್ ಆಕ್ಸಿಜನ್ ಎಂದು ಕರೆಯಲ್ಪಡುವ ಈ ಆಕ್ಸಿಜನ್ ರೂಪ ಜೀವಕೋಶಗಳಲ್ಲಿನ ಹಲವು ಪ್ರಕ್ರಿಯೆಗಳನ್ನು ಹಾದಿ ತಪ್ಪಿಸಬಲ್ಲುದು. ಇಂತಹ ನಾನೊಕೊಳವೆಗಳು ಸಹಜವಾಗಿಯೇ ನಮ್ಮ ಮನೆಯಲ್ಲಿ ಸಂಗ್ರಹವಾಗುತ್ತದೆ ಎನ್ನುವುದು ಆತಂಕ ತರದಿರಬಹುದು. ಆದರೆ ಇದೇ ವಾರ ನಾನೊಕೊಳವೆಗಳ ಬಗ್ಗೆ ನೇಚರ್ ನಾನೊಟೆಕ್ನಾಲಜಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಮತ್ತೊಂದು ಸಂಶೋಧನೆ ಖಂಡಿತವಾಗಿಯೂ ಆತಂಕ ತರಲಿದೆ. ಅಮೆರಿಕೆಯ ನಾರ್ತ್ ಕೆರೋಲಿನ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇಲಿಗಳ ಶ್ವಾಸಕೋಶಗಳ ಮೇಲೆ ನಾನೊಕೊಳವೆಗಳು ವಿಪರೀತ ಪರಿಣಾಮವನ್ನು ಬೀರುತ್ತವೆ ಎಂದು ತಿಳಿಸಿದ್ದಾರೆ. ನಾನೊಕೊಳವೆಗಳನ್ನು ಉಸಿರಾಡಿದ ಇಲಿಗಳ ಶ್ವಾಸಕೋಶಗಳ ಹೊದಿಕೆಗಳು ಊದಿಕೊಂಡು ಅಸ್ತಮಾದಂತೆ ಉಸಿರಾಟದ ತೊಂದರೆಯನ್ನು ಉಂಟು ಮಾಡುತ್ತವೆಂದು ನಿರೂಪಿಸಿದ್ದಾರೆ. ಹಾಗಿದ್ದರೆ ನಮ್ಮ ಅಡುಗೆಮನೆಗಳ ಜೇಡರಬಲೆಗಳಲ್ಲಿ ಸಂಗ್ರಹವಾಗುವ ನಾನೊಕೊಳವೆಗಳ ಪರಿಣಾಮಗಳು ಏನಿರಬಹುದೋ?

Sumit Kumar Sonkar et al.. Activation of aerial oxygen to superoxide radical by carbon nanotubes in indoor spider web trapped aerosol;  Current Science,  Vol. 97, No. 8,  Pp 1227-1230 (25 October 2009), 2009.

John Bonner et al., Nature Nanotechnology, doi:10.1038/nnano.2009.305 (2009)