ಮೈಸೂರಿನಲ್ಲಿ ಮೊದಲ ಎಂ.ಬಿ.ಬಿ.ಎಸ್. ಓದುತ್ತಿದ್ದೇನೆ. ನಮ್ಮ ಊರು ಬನ್ನೂರು, ತಂದೆ ಕೃಷಿಕ. ನಾನು ಪ್ರೌಢಶಾಲೆ ವಿದ್ಯಾರ್ಥಿನಿಯಾಗಿದ್ದಾಗ ಮದ್ದೂರಿನಲ್ಲಿ ಮಾವನ ಮನೆಯಲ್ಲಿದ್ದೆ. ಆಗ ಕೂಡ ನನಗೆ ಹೋಂ ಸಿಕ್ನೆಸ್ ಇತ್ತು. ಈಗಂತೂ ವಿಪರೀತ. ಓದಲಿಕ್ಕೇ ಆಗುವುದಿಲ್ಲ. ನಾನು ಚೆನ್ನಾಗಿ ಓದಬೇಕೆಂದು ಆಸೆ. ಅಪ್ಪ, ಅಮ್ಮ ಒಳ್ಳೆ ಸ್ಥಿತಿಯಲ್ಲಿಲ್ಲ. ನನಗೆ ಅಪ್ಪ, ಅಮ್ಮ ಅಂದರೆ ತುಂಬಾ ಪ್ರೀತಿ. ಓದಲಿಕ್ಕೆ ಪುಸ್ತಕ ತೆಗೆದರೆ ಮನೆಯದೇ ನೆನಪು. ನಾನು ಹಾಸ್ಟೆಲ್ನಲ್ಲಿ ಇರುವುದು. ಅಪ್ಪ ಕಷ್ಟಪಟ್ಟು ನನಗೆ ಹಾಸ್ಟೆಲ್ಗೆ ದುಡ್ಡು ಕಳುಹಿಸಬೇಕು, ನಾನೇನು ಮಾಡಲಿ ಹೇಳಿ.

ಮೈಸೂರಿನಲ್ಲಿ ವೈದ್ಯಕೀಯ ವ್ಯಾಸಂಗ ನಡೆಸಿರುವ ನೀವು ನಿಮ್ಮ ’ಹೋಂ ಸಿಕ್‌ನೆಸ್’ ಬಗ್ಗೆ ಬರೆದಿದ್ದೀರಿ. ಇದು ಯಾವ ರೀಇತಯ ಮನೋವಿಕಾರವೂ ಅಲ್ಲ. ಅತ್ಯಂತ ಸಹಜ ಪ್ರಕ್ರಿಯೆ. ಒಂದೇ ವಾತಾವರಣದಲ್ಲಿ ಹೊಂದಿಕೊಂಡು ಅದರ ಸದಸ್ಯರೊಡನೆ ಗುರುತಿಸಿಕೊಂಡಾಗ ಅದು ಮಾನಸಿಕ ಸುಭದ್ರತೆ ಮೂಡಿಸುತ್ತದೆ. ಭದ್ರತೆ ನೀಡುವ ಸಕಲ ವಸ್ತು, ವ್ಯಕ್ತಿ ಪರಿಸರದ ಮೇಲೆ ಅವಲಂಬಿತವಾಗಿರುವುದು ಸಹಜ ಮನೋಸ್ಥಿತಿ. ಏಕಾಏಕಿ ವಾತಾವರಣವೇ ಬದಲಾಗಬೇಕಾದ ಪ್ರಸಂಗ ಬಂದಾಗ ಈ ಭದ್ರತೆಯ ಅಡಿಪಾಯ ಕುಸಿದು ಮನಸ್ಸಿನಲ್ಲಿ ಅವ್ಯಕ್ತ ಭೀತಿ, ಅಸಮಾಧಾನ, ಅಭದ್ರತೆ ಮೂಡುತ್ತದೆ. ಹೊಸ ಹೊಂದಾಣಿಕೆ, ಹೊಸ ಒಡನಾಟ, ಹಲವಾರು ಜವಾಬ್ದಾರಿಗಳನ್ನು ಸ್ವತಂತ್ರವಾಗಿ ನಿರ್ವಹಿಸಬೇಕಾದ ಪ್ರಸಂಗ ಬಂದಾಗ ಅಧೀರತೆ ಕಂಡುಬಂದು, ಮನಸ್ಸಿಗೆ ಭದ್ರತೆ, ಸಮಾಧಾನ ನೀಡುವ ಮನೆಗೆ ವಾಪಸ್ಸಾಗೋಣ ಎಂದೆನಿಸುತ್ತದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಸಂಸ್ಕೃತಿಯಲ್ಲಿ ಮನೆ ಎಂಬ ಸಂಘಟನೆಗೆ ಇರುವ ಪ್ರಾಮುಖ್ಯತೆ ಮತ್ತು ಜಂಟಿ ಸಂಸಾರಗಳು ಮುರಿದು ಬೀಳುತ್ತಿರುವುದೇ ಇಂದಿನ ಹಲವಾರು ಮನೋವಿಕಾರಗಳಿಗೆ ಕಾರಣ ಎಂದು ಸಮಾಜಶಾಸ್ತ್ರಜ್ಞರು, ಹಿರಿಯರು, ಮನೋವಿಜ್ಞಾನಿಗಳು ಅಭಿಪ್ರಾಯಪಡುವುದುಂಟು. ಮನೆಯೇ ಸರ್ವಸ್ವ. ತನಗೆ ಅದು ರಕ್ಷಣೆ ನೀಡುತ್ತದೆ. ಹೊರಗಿನ ಪ್ರಪಂಚದಲ್ಲಿ ಯಾವುದೇ ಆಘಾತ, ಅಪಘಾತಗಳಾದರೂ ತಾನು ಮನೆಗೆ ಮರಳಿದರೆ ಅಲ್ಲಿನ ಸದಸ್ಯರ ಸಹಾಯ, ಸಹಾನುಭೂತಿ, ಸಹಕಾರ, ಪ್ರೀತಿ, ವಿಶ್ವಾಸ, ಮಮತೆ ತನಗೆ ದೊರಕುತ್ತದೆ ಎನ್ನುವ ಮನಃಸ್ಥಿತಿಯು ನಮ್ಮೆಲ್ಲರ ಆತ್ಮವಿಶ್ವಾಸಕ್ಕೆ ಕಾರಣ. ಓದಲು ಬೇರೆ ಸ್ಥಳಕ್ಕೆ ಹೋಗಲೇಬೇಕಾದ ಪರಿಸ್ಥಿತಿ ಬಂದಾಗ ಬೇರ್ಪಡುವಿಕೆಯ ಆತಂಕ ಉಂಟಾಗುತ್ತದೆ. ಹೊಸ ಸಂಬಂಧಗಳನ್ನು ಬೆಳೆಸಲು ಮಾನಸಿಕ ಬಂಡವಾಳಗಳ ಕೊರತೆ ಇದೆ ಎಂದೆನಿಸುತ್ತದೆ. ಇದಕ್ಕೆಲ್ಲಾ ಸಮಯವೇ ಮದ್ದು. ದಿನಕಳೆದಂತೆ ನಿಮ್ಮ ಆತಂಕ ಅಸಮಧಾನ ಮರೆಯಾಗುವುದು ಖಂಡಿತಾ. ನೆನಪಿನಲ್ಲಿಡಿ, ಅಲ್ಲಿಗೆ ಈ ವರ್ಷ ಓದಲು ಬಂದ ಎಲ್ಲಾ ವಿದ್ಯಾರ್ಥಿಗಳ ಮನೋಸ್ಥಿತಿಯೂ ನಿಮ್ಮಂತೆಯೇ ಇದೆ. ಅವರೂ ತಮ್ಮ ಸಾಂತ್ವನ ಸಮಾಧಾನಕ್ಕಾಗಿ ಸಮಾನ ಮನಸ್ಕರನ್ನು ಹುಡುಕುತ್ತಲೇ ಇದ್ದಾರೆ. ಆದ್ದರಿಂದ ಮುಕ್ತವಾಗಿ ಎಲ್ಲರೊಡನೆ ಬೆರೆಯುವುದರಿಂದ ನಿಮ್ಮ ಮನಸ್ಸಿಗೆ ಹಿತವೆನಿಸುವ ಗೆಳತಿಯರು ಸಿಕ್ಕುವುದು ಖಂಡಿತ. ಲೈಬ್ರರಿ ಸದಸ್ಯರಾಗಿರಿ, ಏಕಾಂತಕ್ಕೆ ಸಿದ್ಧೌಪದ ಚೇತೋಹಾರಿಯಾದ ಓದು, ಸಂಜೆ ಆಟದ ಮೈದಾನದಲ್ಲಿ ಕಳೆಯಿರಿ.

ಎಲ್ಲಕ್ಕೂ ಮಿಗಿಲಾಗಿ ನಿಮ್ಮ ಮನೆಯ ಕಂಡೀಷನ್ ಅಷ್ಟು ಚೆನ್ನಾಗಿಲ್ಲ ಎಂದು ಬರೆದಿದ್ದೀರಿ. ಆದ್ದರಿಂದ ನೀವು ದೃಢ ನಿರ್ಧಾರ ತೆಗೆದುಕೊಂಡು ನಿಶ್ಚಲ ಮನಸ್ಸಿನಿಂದ ನೀವು ವೈದ್ಯರಾಗಬೇಕು ಎಂಬ ಧ್ಯೇಯವನ್ನು ಗಣನೆಗೆ ತೆಗೆದುಕೊಂಡಾಗ ನಿಮ್ಮ ಗುರಿ ಸಾಧನೆಗೆ ಸಮರ್ಥ ವೇದಿಕೆ ನಿರ್ಮಾಣವಾಗುತ್ತದೆ. ನೀವು ಬೇಗ ಒಳ್ಳೆಯ ವೈದ್ಯರಾಗುವುದರಿಂದ ನಿಮ್ಮ ಮನೆಯ ಕಂಡಿಷನ್ ಉತ್ತಮಗೊಳಿಸಬಹುದು. ಆದ್ದರಿಂದ ಈ ರೀತಿಯ ತಾತ್ಕಾಲಿಕ ತ್ಯಾಗ ಅವಶ್ಯಕ. ಮುಂದೆ ಮದುವೆಯಾದ ನಂತರ ಇದೇ ರೀತಿ ಹೋಂ ಸಿಕ್‌ನೆಸ್ ಬಂದೂ ಆಗ ಮತ್ತೊಮ್ಮೆ ಇದನ್ನು ಪರಿಶೀಲಿಸೋಣ.