ಅವರಿವರಿಗಾಗಿ ಮನೆ ಕಟ್ಟುತ್ತಾ ಕಟ್ಟುತ್ತಾ
ಸವೆದು ಹೋಗುವ ಈ ಜನಕ್ಕೆ
ಅನ್ನಿಸುವುದಿಲ್ಲವೆ, ತಮಗೂ ಒಂದು
ಚಿಕ್ಕ, ತೀರಾ ಚಿಕ್ಕದೇ ಆದಂಥ
ಮನೆ ಇಲ್ಲವೆಂದು

ಮನೆ ಕಟ್ಟುವಾಗ ಇವರೂ ಇಟ್ಟಿಗೆ
ಗಾರೆ ಸಿಮೆಂಟು ಕಬ್ಬಿಣದ ಜತೆಗೆ
ಬರೀ ನಿರ್ಮಾಣ ಸಾಮಗ್ರಿಗಳೆ ?
ಬೆರೆಯುವುದಿಲ್ಲವೆ ಕಟ್ಟಡದೊಳಗೆ
ಇವರ ಮೈ ಬೆವರು, ಕಣ್ಣೀರು, ನಿಟ್ಟುಸಿರು
ಮತ್ತೆ ತಮಗೆಂದೆಂದಿಗೂ
ಮನೆಯಿರಲಾರದೆಂಬಂಥ ಕೊರಗೂ ?

ಮನೆ ಕಟ್ಟುವುದೆ ಕೆಲಸ ಈ ಜನಕ್ಕೆ
ಮಳೆಯಲ್ಲಿ, ಬಿಸಿಲಲ್ಲಿ, ಗಾಳಿಯಲ್ಲಿ
ಮಣ್ಣು ಹೊರುತ್ತಾ, ದಿನದಿಂದ ದಿನಕ್ಕೆ
ತಾವೆ ಕಟ್ಟುತ್ತಿರುವ ಮನೆ ಮಹಡಿ ಮಹಡಿ-
ಗಳಾಗಿ ಏರುವುದನ್ನು ಕಾಣುತ್ತಾ,
ಅದರ ಬದಿ ಜೋಪಡಿಯಲ್ಲಿ ಕೊರಗುತ್ತಾ
ಸವೆದು ಹೋಗುತ್ತಿರುವ ಈ ಮಂದಿಗೆ
ಅನ್ನಿಸುವುದಿಲ್ಲವೆ, ತಮಗೂ ಒಂದು
ಮನೆಯಿಲ್ಲವೆಂದು ?