ಇದು ಪರಿಣತಿಯ ಯುಗ. ಯಾವುದಾದರೂ ಒಂದು ವಿಭಾಗ, ವಿಷಯದಲ್ಲಿ ಉನ್ನತ ಮಟ್ಟದ ಪರಿಣತಿ ಇದರ ವಿಶೇಷತೆ. ಇಂಥ ಪರಿಣತರನ್ನು ತಜ್ಞರು (ಸ್ಪೆಷಲಿಸ್ಟ್) ಎನ್ನುತ್ತೇವೆ.  ವೈದ್ಯಕೀಯ ಕ್ಷೇತ್ರದ ಒಂದು ನೋಟ ಇದನ್ನು ಪುಷ್ಟೀಕರಿಸುತ್ತದೆ. ಕಣ್ಣು, ಕಿವಿ, ಮೂಗು, ಗಂಟಲು, ಚರ್ಮ, ಹೃದಯ, ಮೂಳೆ, ರಕ್ತ, ನರ, ಸ್ನಾಯು, ಮೂತ್ರ ವ್ಯವಸ್ಥೆ – ಹೀಗೆ ಒಂದೊಂದು ವಿಷಯಕ್ಕೂ ತಜ್ಞ ವೈದ್ಯರಿರುತ್ತಾರೆ. ಹೀಗೆಯೇ ಮನೋವಿಜ್ಞಾನದಲ್ಲಿಯೂ ಅನೇಕ ವಿಭಾಗಗಳಿವೆ. ಶರೀರ ವಿಜ್ಞಾನದಷ್ಟು ಮನೋವಿಜ್ಞಾನ ಇನ್ನೂ ಬೆಳೆದಿಲ್ಲ; ಈಗ ಬೆಳೆಯುತ್ತಿದೆ.   ಮನಸ್ಸಿಗೆ ಸಂಬಂಧಪಟ್ಟ ಅನೇಕ ಕಾಯಿಲೆಗಳು ಮೊದಲು ಮೊದಲಿಗೆ ಗಮನಕ್ಕೇ ಬರುವುದಿಲ್ಲ ಅಥವಾ ಪ್ರಕಟಗೊಳ್ಳುವುದಿಲ್ಲ. ದೈಹಿಕ ಕಾಯಿಲೆಗಳು ಬಹುಪಾಲು ಪ್ರಕಟಗೊಳ್ಳುತ್ತವೆ.

ಮಾನಸಿಕ ಅಥವಾ ಮನೋ ಕಾಯಿಲೆಗಳು ಕೂಡ ಒಂದು ಅಥವಾ ಹೆಚ್ಚಿನ ಮಾನಸಿಕ ಮತ್ತು ಪರಿಸರಗಳಿಂದಾಗಿ ಹಾಗೂ ಹಲವು ಜೀನ್‌ಗಳ ಸಂಯುಕ್ತ ಪ್ರಕ್ರಿಯೆಗಳಿಂದಾಗಿ ಉಂಟಾಗುತ್ತವೆ ಎಂದು ಮನೋ ವಿಜ್ಞಾನ ಹೇಳುತ್ತದೆ. ನಮಗೆ ಅತ್ಯಂತ ಆತ್ಮೀಯ ವ್ಯಕ್ತಿಯೊಬ್ಬರ ನಿಧನದಿಂದಾಗಿ ಅಥವಾ ಅತೀ ಒತ್ತಡದ ಜೀವನ ಶೈಲಿಗಳಿಂದಾಗಿ ಜೀನ್‌ಗಳ ಈ ಪ್ರಕ್ರಿಯೆ ನಡೆಯುತ್ತದೆ.  ಒತ್ತಡದ ಜೀವನದಿಂದ  ಬರಬಹುದಾದ ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್‌ಗಳೂ ಸಹ   ಮನೋಕಾಯಿಲೆಗಳನ್ನು ಉಂಟು ಮಾಡಬಹುದು. ಹುಚ್ಚು ಬಿಟ್ಟರೆ, ಉಳಿದ ಅನೇಕ ಮನಸ್ಸಿನ ಕಾಯಿಲೆಗಳನ್ನು ಸಾಧಾರಣವಾಗಿ ಅಷ್ಟು ಗಂಭೀರವಾಗಿ ಪರಿಗಣಿಸದೆ ಅವರೊಡನೆ ಬದುಕುವವರಿಗೂ ಕಷ್ಟ, ಕಾಯಿಲೆಯಿರುವವರಿಗೂ ಕಷ್ಟವಾಗುತ್ತದೆ. ಇದು ಹೀಗೆಯೇ ಮುಂದುವರಿದರೆ ಅದರಿಂದ ದೈಹಿಕ ಕಾಯಿಲೆಗಳು ಉಂಟಾಗಿ, ಅವು ಪ್ರಬಲಗೊಳ್ಳಬಹುದು, ದೈಹಿಕವಾಗಿಯೂ ಊನ ಆಗಬಹುದು, ಅಥವಾ ಅಕಾಲ ಮರಣವುಂಟಾಗಬಹುದು. ಇಂಗ್ಲೀಷ್‌ನಲ್ಲಿ ಸೈಕೊಸೊಮಾಟಿಕ್ (psycho somatic) ಎಂಬ ಪದವಿದೆ. ಹೀಗೆಂದರೆ ಮನಸ್ಸಿನ ಪರಿಸ್ಥಿತಿ ದೇಹದ ಮೇಲೆಯೂ ಪರಿಣಾಮ ಬೀರುತ್ತದೆ. ಇದಕ್ಕೆ ವಿರುದ್ಧವಾಗಿ, ದೈಹಿಕ ಕಾಯಿಲೆಗಳೂ ಮನಸ್ಸಿನ ಮೇಲೆ ಪರಿಣಾಮ ಉಂಟು ಮಾಡುವುದೂ ತಿಳಿದಿದೆ.

ಮಾನಸಿಕ ಕಾಯಿಲೆ ವ್ಯಕ್ತಿಯ ದೌರ್ಬಲ್ಯವೆಂದು ತಿಳಿಯಬಾರದು. ಅಥವಾ ಅದು ಹಾಗೆಯೇ ಕಡಿಮೆಗೊಳ್ಳುತ್ತದೆ ಎಂಬ ಉಪೇಕ್ಷೆಯೂ ಸಲ್ಲದು. ವಾಸ್ತವವಾಗಿ, ಮಾನಸಿಕ ರೋಗದಿಂದ ರೋಗಿಯು ತಾನೇ ನಿಯಂತ್ರಿಸಿಕೊಳ್ಳಲೂ ಆಗದಂತಹ ಪರಿಸ್ಥಿತಿಗಳು  ಉಂಟಾಗುತ್ತವೆ.  ಐತಿಹಾಸಿಕವಾಗಿ, ಅನೇಕ ಮಹಾನ್ ವ್ಯಕ್ತಿಗಳು ಮನೋರೋಗಿಗಳಾಗಿದ್ದರೆಂದು ದಾಖಲಾಗಿದೆ.  ಮೈಕೆಲ್ ಫೆರಡೆ, ಐಸಾಕ್ ನ್ಯೂಟನ್, ಎಬ್ರಹಾಂ ಲಿಂಕನ್, ಮೈಕೆಲೇಂಜಲೋ ಮುಂತಾದ ಮಹಾನ್ ವ್ಯಕ್ತಿಗಳ ಈ ವಿಷಯದ ಬಗೆಗೆ ತಿಳಿದವರು ದಾಖಲಿಸಿದ್ದಾರೆ. ಆದರೆ ದಾಖಲಾಗದ ಮನೋರೋಗಿಗಳು ಅಸಂಖ್ಯಾತ. ಇದಕ್ಕೆ ಕಾರಣವೂ ಇದೆ. ಸಾಮಾಜಿಕವಾಗಿ ಇದು ವ್ಯಕ್ತಿಗಳಷ್ಟೇ ಅಲ್ಲ, ಕುಟುಂಬಕ್ಕೆ ಕಳಂಕ ತರುವ ವಿಷಯ ಎಂಬ ನಂಬಿಕೆಯಿಂದಾಗಿ ಈ ವಿಷಯಗಳು ಹೊರಕ್ಕೆ ಬರುವುದೇ ಇಲ್ಲ. ಅನೇಕ ಬಾರಿ ಗಂಡು ಹೆಣ್ಣುಗಳು ಇಂತಹ ವಿಷಯಗಳ ಬಗೆಗೆ ತಿಳಿಸದೆ ಮದುವೆಗಳು ಕೂಡ ಆಗಿ ಬಿಡುತ್ತಾರೆ. ಇದರಿಂದ ಜೀವನ ಸಂಗಾತಿಯೂ ಪಡಬೇಕಾದ ಕಷ್ಟ ಎಂಥದು ಎಂಬುದನ್ನು ಉಹಿಸಿಕೊಳ್ಳಬೇಕು. ಮತ್ತೆ, ಅವರೂ ಅದನ್ನು ಹೇಳಿಕೊಳ್ಳದೆ, ಅವರಿಗೆ ಮಕ್ಕಳಾದರೆ ಆ ಮಕ್ಕಳಿಗೂ ಜೀನ್ ದೋಷವಿದ್ದಲ್ಲಿ ಅದು ರವಾನೆಯಾಗಬಹುದು.

ಮಾನಸಿಕ ಕಾಯಿಲೆ ಇರುವವರು ವೈದ್ಯರ ಸಮಾಲೋಚನೆಗೆ ಬರುವುದೇ ಇಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಮನೋವಿಜ್ಞಾನ, ಈ ವಿಷಯ ಸಮಾಲೋಚಕ ಪರಿಣತರು ಈಗ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.  ನಮ್ಮ ದೇಶದಲ್ಲಿ ಈ ರೋಗಗಳ ರೋಗನಿದಾನವೂ ಆಗುತ್ತಿಲ್ಲ. ಸಮಾಲೋಚನೆ, ಚಿಕಿತ್ಸೆಗಳು ಇನ್ನೂ ಹೆಚ್ಚಬೇಕು, ಉತ್ತಮಗೊಳ್ಳಬೇಕು.

ಇಂದಿನ ಕಾಲದ ಜೀವನ ಶೈಲಿಯಲ್ಲಿ ಆತಂಕ, ಉದ್ವೇಗಗಳು ಭಾವಾನಾತ್ಮಕ ಕಳವಳ ಉಂಟು ಮಾಡುತ್ತವೆ. ಅತಿಯಾದ ಬೇಗುದಿ (distress), ಏನೋ ದುರವಸ್ಥೆ ಉಂಟಾಗುವುದೆಂಬ ಅನಾವಶ್ಯಕ ಅನಿಸಿಕೆಗಳು ಉಂಟಾಗುತ್ತವೆ. ಒಂದು ಬಗೆಯ ಭೀತಿ ಮತ್ತು ಕ್ಲೇಶ (worry), ಒತ್ತಡ, ಉದ್ವಿಗ್ನತೆಗಳು ಮೊದಲಿಗೆ ನರ ವ್ಯವಸ್ಥೆಯ ಮೇಲೆ  ಪರಿಣಾಮ ಬೀರುತ್ತವೆ. ಆತಂಕಗಳಿಲ್ಲದೆ ಇರುವುದು ಸಾಧ್ಯವಿಲ್ಲ, ಹೌದು. ಆದರೆ ಅದನ್ನು ನಿಭಾಯಿಸುವ ಮಟ್ಟವನ್ನು ಕಳೆದುಕೊಂಡಾಗ ಅದು ಮಾನಸಿಕ ಹಾಗೂ ಮುಂದೆ ದೈಹಿಕ ತೊಂದರೆಗಳಿಗೆ ಎಡೆ ಮಾಡುತ್ತದೆ.  ಆತಂಕ ಪಡುವುದರಲ್ಲಿ ಆನುವಂಶಿಕತೆಗೂ ಪಾತ್ರವಿದೆಯೆಂದು ಈಗಲೀಗ ತರ್ಕಿಸಲಾಗಿದೆ. ಏಕೆಂದರೆ ದೈಹಿಕ ಕಾರಣಗಳು – ಉದಾಹರಣೆಗೆ ನ್ಯೂರೊಟ್ರಾನ್ಸ್‌ಮಿಟರ್‌ನಲ್ಲಿ ಉಂಟಾಗುವ ಅಸಮತೋಲದಿಂದಲೂ ಆತಂಕವು ಪರಿಣಮಿಸುತ್ತದೆ (ನ್ಯೂರೊಟ್ರಾನ್ಸ್‌ಮಿಟರ್ ಎಂದರೆ ಒಂದು ನರದಿಂದ ಇನ್ನೊಂದು ನರ ಅಥವಾ ಸ್ನಾಯುವಿಗೆ ಚೋದನೆ (stimulus) ರವಾನಿಸಲು ನೆರವಾಗುವ ರಾಸಾಯನಿಕ ವಸ್ತು).  ಡಯಬಿಟಿಸ್, ಮೂರ್ಛೆರೋಗ, ಏಡ್ಸ್, ಹೃದ್ರೋಗ ಮುಂತಾದ ದೈಹಿಕ ರೋಗಗಳು ಆತಂಕವನ್ನು ಖಂಡಿತವಾಗಿ ಉಂಟು ಮಾಡುತ್ತವೆ.

ಅನವಶ್ಯಕ ಆತಂಕಪಡುವ ವ್ಯಕ್ತಿಯ ಜೀವನದ ಚಟುವಟಿಕೆಗಳ ಮೇಲೆ ಆತಂಕದ ಛಾಪು ಖಂಡಿತ ಇರುತ್ತದೆ. ನಿರುತ್ಸಾಹ, ಬಳಲಿಕೆ, ಸಿಡುಕು, ಸ್ನಾಯುಗಳಲ್ಲಿ ಬಿಗಿತ, ಸರಿಯಾಗಿ ನಿದ್ದೆ ಬಾರದಿರುವುದು ಇತ್ಯಾದಿಗಳು ಅತಿ ಆತಂಕವಿರುವ ವ್ಯಕ್ತಿಯಲ್ಲಿ ಕಂಡುಬರುತ್ತವೆ.  ಆತಂಕದ ಲಕ್ಷಣಗಳಿರುವ ವ್ಯಕ್ತಿಯನ್ನು ಮನೋವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ, ಚಿಕಿತ್ಸೆ ಕೊಡಿಸಬೇಕು. ಇದಕ್ಕೆ ಮದ್ದುಗಳಲ್ಲದೆ, ಕೆಲವು ಬಗೆಯ ಕಸರತ್ತುಗಳು, ಅವರ  ಗ್ರಹಿಕೆಯ ಬಗೆಗಿನ ಚಿಕಿತ್ಸೆಗಳು ರೋಗಿಯ ನೆರವಿಗೆ ಬರುತ್ತವೆ.

ಖಿನ್ನತೆ (depression) ಇಂದು ಜಗತ್ತಿನಲ್ಲಿ ಅತಿ ವ್ಯಾಪಕವಾಗಿರುವ ಮಾನಸಿಕ ರೋಗ. ಇದು ದೇಹ, ಚಿತ್ತಸ್ಥಿತಿ (mood) ಮತ್ತು ನಮ್ಮ ಮನಸ್ಸಿನ ಆಲೋಚನೆಗಳು – ಈ ಎಲ್ಲವನ್ನೂ ಒಳಗೊಳ್ಳುವ ರೋಗ. ನಾವು ತಿನ್ನುವುದು, ನಿದ್ರಿಸುವುದು, ನಮಗೆ ನಮ್ಮ ಬಗೆಗಿನ ಅನಿಸಿಕೆ, ನಾವು ಚಿಂತಿಸುವ ಬಗೆ ಇವೆಲ್ಲ ಈ ರೋಗದಿಂದ ಪ್ರಭಾವಿತವಾಗುತ್ತವೆ. ಮಕ್ಕಳು, ವಿಶೇಷವಾಗಿ ಹದಿಹರಯದವರು, ಖಿನ್ನತೆಯಿಂದ ಬಳಲುವುದು ತಿಳಿದಿದೆ. ಈ ರೋಗದ ವ್ಯಾಪ್ತಿ ನಿಜವಾಗಿ ಪ್ರಕಟವಾಗುವುದೇ ಇಲ್ಲ. ಇದು ರೋಗವೆಂಬ ಪರಿಗಣನೆಗೂ ಬರುವುದಿಲ್ಲ. ಸ್ವಲ್ಪ ದಿನ ಕಂಡು, ಆಮೇಲೆ ತಗ್ಗುವುದೆಂಬ ಭ್ರಾಂತಿಯೂ ಇದೆ. ಆದರೆ ಇದು ದಿಟವಾಗಿ ಒಂದು ರೋಗ.  ಈ ರೋಗಕ್ಕೆ ಮೊದಲೇ ಪ್ರಸ್ತಾಪಿಸಿದಂತೆ ಮಾನಸಿಕ ಮತ್ತು ಪರಿಸರ ಅಂಶಗಳ ಮೇಲಿನ ಬಹುಜೀನ್‌ಗಳ ಪ್ರಕ್ರಿಯೆ ಕಾರಣವೆಂದು ವರದಿಯಾಗಿದೆ. ಹಾಗೆಯೇ ಬಿಟ್ಟರೆ ವಾರಗಳು, ತಿಂಗಳುಗಳ ನಂತರ ಖಿನ್ನತೆ ವರ್ಷಗಳ ಕಾಲ ಕಾಡುತ್ತದೆ. ಇದಕ್ಕೆ ಮದ್ದುಗಳಿವೆ. ಖಿನ್ನತೆಯಿಂದ ಬಳಲುವವರು ಕೆಲವೊಮ್ಮೆ ಮದ್ದುಗಳನ್ನು ಬಿಡುವಂತೆಯೇ ಇಲ್ಲ. ಮದ್ದಿಲ್ಲದ ‘ನ್ಯೂರೊಥೆರಪಿ’ಯನ್ನು ಅತಿ ಶಿಸ್ತಿನಿಂದ ಪಾಲಿಸಬೇಕು.

ಖಿನ್ನತೆ ಹದಿಹರಯದವರಲ್ಲಿ ಹಲವಾರು ಕಾರಣಗಳಿಗೆ ಬರುತ್ತದೆ. ಇದು ತಳಮಳದ ವಯಸ್ಸು. ಆದ್ದರಿಂದ ಈ ವಯೋಮಾನದ ಕಿಶೋರ, ಕಿಶೋರಿಯರು ಆದಷ್ಟು ಅನವಶ್ಯ ಆತಂಕ ಉಂಟು ಮಾಡುವ ಚಟುವಟಿಕೆಗಳಲ್ಲಿ ತೊಡಗಬಾರದು. ಅಥವಾ ಚಟುವಟಿಕೆಗಳನ್ನು ಸರಿಯಾಗಿ, ತರ್ಕಬದ್ಧವಾಗಿ ನಡೆಸಬೇಕು. ದುಗುಡವನ್ನು ತಗ್ಗಿಸುವಂತಹ ಯೋಗ, ಏಕಾಗ್ರತೆ ನೀಡುವ ಧ್ಯಾನ ಮುಂತಾದ ಯುಕ್ತ ಕಸರತ್ತುಗಳನ್ನು ಮಾಡಬೇಕು. ಅಗತ್ಯವಿದ್ದರೆ ಹಿರಿಯರ, ವೈದ್ಯರ ಸಲಹೆ ಪಡೆಯಲು ನಾಚಿಕೆ ಪಡಬಾರದು. ಸರಿಯಾದ ಘಟ್ಟದಲ್ಲಿ, ಇಂತಹ ಸರಿಯಾದ ಕ್ರಮಗಳಿಂದ ಇಡೀ ಜೀವನ ಹದವಾಗುವುದು ಎಂಬುದನ್ನು ಮಾತ್ರ ಮರೆಯಬೇಡಿ.