ಮನ್ಸ ಮಹಿಳೆಯರ ವೃತ್ತಿ

ಮನ್ಸ ಮಹಿಳೆಯರು ಸ್ವಾತಂತ್ಯ್ರೋತ್ತರ ಭಾರತದಲ್ಲಿ ಮೂಲದ ಹೆಣ್ಣಾಗಿ ಜಮೀನ್ದಾರರ ಮನೆಯಲ್ಲಿ ಊಳಿಗವನ್ನು ಮಾಡುವ ಸ್ಥಿತಿಯಿತ್ತು. ಗಂಡಸರು ಮಾಡುವ ಎಲ್ಲಾ ವೃತ್ತಿಗಳನ್ನು ಅವರು ಮಾಡುತ್ತಿದ್ದರು. ಕೃಷಿ ಕೆಲಸಗಳ ಆಳಾಗಿ ದುಡಿಯುತ್ತಿದ್ದರು. ಗುಡ್ಡಗಾಡು ಪ್ರದೇಶವಾದುದರಿಂದ ಗೆಡ್ಡೆಗೆಣಸು, ಕಾಡುತ್ಪತ್ತಿಗಳನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದ್ದರು. ಗುಡ್ಡ ನಾಡು, ಕಾಡು ಮೇಡುಗಳಲ್ಲಿ ವಾಸಿಸುವುದರಿಂದ ಸಸ್ಯಗಳ ಉಪಯೋಗದ ಬಗ್ಗೆ ಅರಿವಿರುವುದರಿಂದ “ನಾಟಿ ವೈದ್ಯ” ರಾಗಿಯೂ ಕೆಲಸ ಮಾಡಿದ ಉದಾಹರಣೆಗಳಿವೆ. ಈ ರೀತಿಯಲ್ಲಿ ನಾಟಿ ವೈದ್ಯರಾಗಿ ದುಡಿದ ಮಹಿಳೆಯರ ಹೆಸರುಗಳು ದೊರೆಯುತ್ತವೆ. ಗಂಡಸರ ಬೇಟೆ, ಮೀನು ಹಿಡಿಯುವ ಕೆಲಸಗಳಲ್ಲಿ ಸಹಕರಿಸುತ್ತಿದ್ದರು. ಪ್ರಾಣಿಗಳ ಚರ್ಮ, ಕೊಂಬುಗಳನ್ನು ಮಾರಿಯೂ ಜೀವನ ನಡೆಸುತ್ತಿದ್ದರು. ಚಾಪೆ ಗೊರಬು (ಕೊರಂಬು), ಮುಟ್ಟಳೆ, ಬುಟ್ಟಿ, ಗೆರಸೆ ಇತ್ಯಾದಿ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಸೂಲಗಿತ್ತಿಯರಾಗಿಯೂ ಹಲವಾರು ಮಹಿಳೆಯರು ಹೆಸರುವಾಸಿಯಾಗಿದ್ದಾರೆ.

ಕ್ರಮೇಣ ಮನ್ಸರು ಗುಡ್ಡಗಾಡು ಪರದೇಶಗಳಿಂದ ವಲಸೆ ಹೋದರು. ಕೊಡಗು, ಚಿಕ್ಕಮಗಳೂರು ಕಡೆ ಚಹಾ, ಕಾಫಿ ಎಸ್ಟೆಟ್‌ಗಳಲ್ಲಿ ಆಳುಗಳ ಅಗತ್ಯ ಇದ್ದುದರಿಂದ ದಲ್ಲಾಳಿಗಳು ಅವರನ್ನು ಕರೆದುಕೊಂಡು ಹೋಗಿ ಎಸ್ಟೆಟ್‌ ಕೆಲಸಗಳಿಗೆ ಸೇರಿಸಿದರು. ಮಲೆನಾಡು ಪ್ರದೇಶಗಳಲ್ಲಿ ಚಹಾ, ಕಾಫಿ, ಏಲಕ್ಕಿ ತೋಟಗಳಲ್ಲಿ ಆಳುಗಳಾಗಿ ಇಂದು ಹಲವಾರು ಮನ್ಸರು ದುಡಿಯುತ್ತಿದ್ದಾರೆ. ಅಲ್ಲೂ ಅವರ ಆರ್ಥಿಕ ಸ್ಥಿತಿ ತುಂಬಾ ಸುಧಾರಣೆಯಾಗಿಲ್ಲ. ಇಲ್ಲಿಯ ಜಮೀನ್ದಾರರಂತೆ ಅಲ್ಲೂ ಎಸ್ಟೇಟ್ ಮಾಲೀಕರ ಶೋಷಣೆಗಳಿಗೆ ಒಳಗಾಗಿದ್ದಾರೆ. ಇದರಿಂದ ಇಂದು ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಮಾತ್ರವಲ್ಲದೆ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗಗಳಲ್ಲೂ ಹಬ್ಬಿದ್ದಾರೆ. ಕೆಲವೊಂದು ಕಡೆ ಅವರು ಇತರ ಪರಿಶಿಷ್ಟ ಜಾತಿಗಳೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ.

ಆಧುನಿಕ ಶಿಕ್ಷಣವು ಮನ್ಸ ಮಹಿಳೆಯರ ವೇತ್ತಿಜೀವನದ ಮೇಲೆ ಪರಿಣಾಮ ಬೀರಿದೆ. ಇಂದು ಹೆಣ್ಣು ಮಕ್ಕಳು ಶಾಲೆಗಳನ್ನು ಸೇರುತ್ತಿದ್ದಾರೆ. ಬೀಡಿ ಉದ್ಯಮ ಮನ್ಸ ಮಹಿಳೆಯರ ಆರ್ಥಿಕ ಹೆಣ್ಣುಮಕ್ಕಳು ಶಾಲೆಗಳನ್ನು ಸೇರುತ್ತಿದ್ದಾರೆ. ಬೀಡಿ ಉದಗಯಮ ಮನ್ಸ ಮಹಿಳೆಯರ ಆರ್ಥಿಕ ಜೀವನದಲ್ಲೂ ತೀವ್ರ ಬದಲಾವಣೆಯನ್ನು ಮಾಡಿದೆ. ಮನೆ ಕಟ್ಟಿಕೊಂಡು ಸ್ವಾವಲಂಬಿತ ಬದುಕನ್ನು ಬದುಕುವ ಪ್ರಯತ್ನಗಳನ್ನೂ ಅವರು ಮಾಡುತ್ತಿದ್ದಾರೆ. ಬೆರಳೆಣಿಕೆಯಷ್ಟು ಮಹಿಳೆಯರು ಹೆಚ್ಚಿನ ಶಿಕ್ಷಣವನ್ನು ಪಡೆದು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಸರ್ಕಾರದಿಂದ ಜಮೀನು ದೊರಕುವುದರಿಂದ ಕೆಲವರು ಸ್ವಂತ ಕೃಷಿಯಲ್ಲಿ ತೊಡಗಿದ ಉದಾಹರಣೆಗಳು ಕಂಡುಬರುತ್ತದೆ. ಆಧುನಿಕ ಮತ್ತು ಶಿಕ್ಷಣದ ಕಾರಣದಿಂದ ಮನ್ಸ ಮಹಿಳೆಯರ ಸ್ಥಿತಿಗತಿಯಲ್ಲಿ ಹೆಚ್ಚು ಬದಲಾವಣೆಗಳಿದ್ದರೂ ಪರಂಪರಾಗತ ವೃತ್ತಿ, ಶೋಷಣೆಗಳಿಂದ ಹೊರಬಂದು ಸ್ವತಂತ್ರ, ಸ್ವಾವಲಂಬಿತ ಜೀನವನ್ನು ನಡೆಸುವ ಪ್ರಯತ್ನಗಳನ್ನು ಅವರು ಮಾಡುತ್ತಿದ್ದಾರೆ.

 

ಸಂದರ್ಶನ

(ಸೂಲಗಿತ್ತಿಯಾಗಿವೃತ್ತಿನಿರ್ವಹಿಸುತ್ತಿದ್ದಶ್ರೀಮತಿಮೋಂಟುಅವರಸಂದರ್ಶನ)

 • ನಿಮ್ಮ ಬಾಲ್ಯದ ಬಗ್ಗೆ ಹೇಳುತ್ತೀರಾ?

ಬಾಲ್ಯದಲ್ಲಿ ನಮಗೆ ಭಾರಿ ಬಡತನ ಇತ್ತು. ನಾವು ಚಿಕ್ಕಪ್ರಾಯದಲ್ಲೇ ಕೆಲಸಕ್ಕೆ ಹೋಗುತ್ತಿದ್ದೆವು. ಆಗ ಶಾಲೆಗಳು ಕಡಿಮೆ ಇದ್ದರೂ ನಮ್ಮಂತವರು ಹೋಗುವಂತಿಲ್ಲ. ದೊಡ್ಡವರ ಹೆಣ್ಣುಮಕ್ಕಳೇ ಶಾಲೆಗೆ ಹೋಗುತ್ತಿರಲಿಲ್ಲ. ನಾವು ತಂದೆ ತಾಯಿಯವರು ಹೇಳಿದಂತೆ ಕೇಳುತ್ತಿದ್ದೆವು. ಚಿಕ್ಕ ಪ್ರಾಯದಲ್ಲೇ ಮದುವೆ ಮಾಡುತ್ತಿದ್ದರು. ನನಗೂ ಚಿಕ್ಕಪ್ರಾಯದಲ್ಲೇ ಮದುವೆಯಾಗಿದೆ. ಪ್ರಾಯ ನೆನಪಿಡುತ್ತಿರಲಿಲ್ಲ.

 • ನೀವು ಯಾವ ಕೆಲಸಗಳನ್ನು ಮಾಡುತ್ತಿದ್ದೀರಿ?

ನಾನು ಕೃಷಿಯಲ್ಲಿ ಕೂಲಿ ಕೆಲಸವನ್ನು ಮಾಡುತ್ತಿದ್ದೆ. ನನ್ನ ಅಜ್ಜಿ, ತಾಯಿ ಇವರೊಂದಿಗೆ ನಾನು ಗದ್ದೆ ಹೋಗುತ್ತಿದ್ದೆ. ಗದ್ದೆಯ ಎಲ್ಲಾ ಕೆಲಸ ಮಾಡುತ್ತಿದ್ದೆ. ಇದು ನಮ್ಮ ಮುಖ್ಯ ಉದ್ಯೋಗ. ಕೋಳಿ ಸಾಕುವುದು ಈಗಲೂ ನನಗೆ ಪ್ರೀತಿ. ಹಾಗೆಯೇ ದನ ಸಾಕುವುದು. ಅದರೊಂದಿಗೆ ಹೆರಿಗೆ ಮಾಡಿಸುವ ಕೆಲಸ ಮಾಡುತ್ತಿದ್ದೆ. ಇದಕ್ಕೆ ಬಾರಿ ಪರಿಣಿತಿ ಬೇಕು.

 • ಹೆರಿಗೆ ಮಾಡಿಸುವಾಗ ಯಾವ ಪರಿಣಿತಿ ಬೇಕು?

ಇದು ಅನುಭವದಿಂದ ಬರುವುದು. ನಾನು ನನ್ನ ತಾಯಿಯಿಂದ ಇದನ್ನು ಕಲಿತೆ. ಅವರು ಹೇಳಿದ ಮಾತು ಕೇಳಿ ನಾನು ಇದನ್ನು ಕಲಿತಿದ್ದೇನೆ. ಅವರೊಂದಿಗೆ ಹೋಗಿ ನೋಡುತ್ತಿದ್ದೆ. ಹಿಂದೆ ಎಂಥಾ ಪರಿಣತರು ಇದ್ದರು ಎಂದರೆ ಗರ್ಭಿಣಿಯನ್ನು ನೋಡಿಯೇ ಗರ್ಭಪಾತ ಆಗಿದೆಯೇ? ಮಗುವು ಯಾವ ದಿಕ್ಕಿನಲ್ಲಿದೆ? ಯಾವಾಗ ಹೆರಿಗೆ ಆಗುತ್ತದೆ ಎಂಬುದನ್ನು ಹೇಳತ್ತಿದ್ದರು. ಧೈರ್ಯ ಮತ್ತು ಪರಿಣತಿ ಇದ್ದರೆ ಮಾತ್ರ ಹೆರಿಗೆ ಮಾಡಿಸುವ ಕೆಲಸ ಸಾಧ್ಯ. ನಾವು ಗರ್ಭಿಣಿಯಲ್ಲಿ ಧೈರ್ಯ ಮತ್ತು ಪರಿಣತಿ ಇದ್ದರೆ ಮಾತ್ರ ಹೆರಿಗೆ ಮಾಡಿಸುವ ಕೆಲಸ ಸಾಧ್ಯ. ನಾವು ಗರ್ಭಿಣಿಯಲ್ಲಿ ಧೈರ್ಯ ತುಂಬಬೇಕು. ಅವರಿಗೆ ವಿಶ್ವಾಸದ ಮಾತುಗಳನ್ನು ಆಡಬೇಕು. ಇಡೀ ವಾತಾವರಣವನ್ನು ಲಘುಗೊಳಿಸಬೇಕು. ಅನಂತರ ಹೆರಿಗೆಯ ಕೆಲಸವನ್ನು ಆರಂಭಿಸಬೇಕು.

 • ಇದರಿಂದ ನಿಮಗೆ ಏನು ಸಂಬಳ ಸಿಗುತ್ತಿತ್ತೇ?

ಇದನ್ನು ನಾವು ಹಣಕ್ಕಾಗಿ ಮಾಡುತ್ತಿದ್ದಿಲ್ಲ. ಹಾಗೆಂದು ಅವರು ಹಣ ಕೊಡುತ್ತಿದ್ದರು. ಕೊಟ್ಟಾಗ ನಾವು ತೆಗೆದುಕೊಳ್ಳುತ್ತಿದ್ದೆವು. ಇಷ್ಟೇ ಹಣ ಎಂದು ಕೇಳುತ್ತಿರಲಿಲ್ಲ. ಅವರು ಕೊಟ್ಟದ್ದನ್ನು ನಾವು ತೆಗೆದುಕೊಳ್ಳುತ್ತಿದ್ದೆವು. ಅವರವರ ಸ್ಥಿತಿವಂತಿಕೆಗೆ ಸರಿಯಾಗಿ ಕೊಡುತ್ತಿದ್ದರು. ಕೆಲವು ಕಡು ಬಡವರಲ್ಲಿ ಕೊಡಲು ಏನೂ ಇರಲಿಲ್ಲ. ಆಗ ನಾವು ಒತ್ತಾಯ ಮಾಡುತ್ತಿರಲಿಲ್ಲ. ಇದು ಬಾರಿ ಪುಣ್ಯದ ಕೆಲಸ. ನಮಗೆ ದೇವರು ಕೊಡುತ್ತಾರೆ. ಭಾರಿ ನಿಷ್ಠೆಯಿಂದ ಈ ಕೆಲಸವನ್ನು ಮಾಡುವುದು ಮುಖ್ಯ. ಹಣಕ್ಕಾಗಿ ಅಲ್ಲ. ನಾವು ವೃತ್ತಿಯಾಗಿ ಇದನ್ನು ಮಾಡುತ್ತಿರಲಿಲ್ಲ. ಸಹಾಯ ಮಾಡುವುದಕ್ಕಾಗಿ ಮಾಡುತ್ತಿದ್ದೆವು. ಇದರಲ್ಲಿ ನಮಗೆ ಆದಾಯಕ್ಕಿಂತಲೂ ಜನಕ್ಕೆ ಸಹಾಯ ಮಾಡುವುದು ಮುಖ್ಯವಾಗಿರುತ್ತಿತ್ತು. ಇದನ್ನು ನಾನು ನನ್ನ ಹಿರಿಯರಿಂದ ಕಲಿತದ್ದು. ಹೆರಿಗೆಗೆ ಸಮಯವೆಂದು ಇರುತ್ತಿರಲಿಲ್ಲ. ಕೆಲವೊಮ್ಮೆ ನಾಟಿ ಗದ್ದೆಯಿಂದಲೇ ಕೆಲಸ ನಿಲ್ಲಿಸಿ ಹೋಗುವುದಿದೆ. ಹೊಟ್ಟೆನೋವು ಆರಂಭವಾದಾಗಸ ನಮಗೆ ಕರೆ ಬರುತ್ತಿತ್ತು. ಆಗ ಹೋಗುತ್ತಿದ್ದೆವು. ಹೆಚ್ಚಾಗಿ ನಾವು ನಮ್ಮ ಜಾತಿಯವರ ಹೆರಿಗೆ ಮಾಡಿಸುತ್ತಿದ್ದೆವು. ಇತರ ಜಾತಿಯವರ ಹೆರಿಗೆ ಮಾಡಿಸಿದ್ದೂ ಇದೆ.

 • ನಿಮ್ಮಲ್ಲಿ ಬಾಣಂತಿಯ ಆರೈಕೆ ಹೇಗೆ ಮಾಡುತ್ತಿದ್ದರು?

ನಮ್ಮಲ್ಲಿ ಮೊದಲ ಹೆರಿಗೆ ತಾಯಿ ಮನೆಯಲ್ಲೇ ಆಗುತ್ತದೆ. ಬಯಕೆಯನ್ನು ಗಂಡನಮನೆಯಲ್ಲಿ ಮುಗಿಸಿದ ಬಳಿಕ ತಾಯಿ ಮನೆಗೆ ಬರಬೇಕು. ಇಲ್ಲಿಯೂ ಮತ್ತೆ ಬಯಕೆ ಇದೆ. ಅಲ್ಲದೆ ಸಂಬಂಧಿಕರ ಮನೆಗೂ ಗರ್ಭಿಣಿಯನ್ನು ಊಟಕ್ಕೆ ಕರೆಯುತ್ತಾರೆ. ಗರ್ಭಿಣಿಯನ್ನು ಎಚ್ಚರಿಕೆಯಿಂದ ನೋಡಬೇಕು. ಶೀತ, ಕೆಮ್ಮು, ಭಾರ ಎತ್ತದಂತೆ, ಕಠಿಣ ಕೆಲಸ ಮಾಡದಂತೆ ನೋಡಿಕೊಳ್ಳಬೇಕು. ಹಾಗೆಂದು ಕೆಲಸ ಮಾಡದೆಯೇ ಇರುವುದು ಒಳ್ಳೆಯದಲ್ಲ. ಕೆಲಸ ಮಾಡುತ್ತಾ ಇದ್ದರೆ ಹೆರಿಗೆ ಸುಲಭವಾಗುತ್ತದೆ. ಮಗು ತುಂಬಾ ಬೆಳೆದರೆ ಹೆರಿಗೆ ಕಷ್ಟ. ಕೆಲವರು ಗದ್ದೆ ಕೆಲಸ ಮಾಡುತ್ತಿದ್ದಾಗ ಹೆರಿಗೆ ನೋವು ಆರಂಭವಾಗಿ ಹೆರಿಗೆ ಆದದ್ದಿದೆ.

ಹೆರಿಗೆ ಖರ್ಚನ್ನು ಗಂಡನೇ ಕೊಡಬೇಕು. ಅದು ಗಂಡನ ಹಕ್ಕು. ಅಲ್ಲದೆ ಗರ್ಭಿಣಿಗೆ ಬೇಕಾದ ಅಗತ್ಯವನ್ನು ಅವನು ಪೂರೈಸಬೇಕು. ಇದನ್ನು “ಪೇತ್ ಕೊಡುವುದು” ಎನ್ನುತ್ತಾರೆ. ಕೆಲವೊಮ್ಮೆ ಇದನ್ನು ಕೊಡದಿದ್ದರೆ ತವರುಮನೆಯಿಂದ ಹೆಣ್ಣನ್ನು ಗಂಡನ ಮನೆಗೆ ಕಳುಹಿಸಿಕೊಡುತ್ತಿದ್ದಿಲ್ಲ. ಜಗಳವಾಗುತ್ತಿತ್ತು. ಆ ಮೇಲೆ ತವರು ಮನೆಯವರು ಪಶ್ಚಾತ್ತಾಪ ಪಡುತ್ತಿದ್ದರು.

ಹೆರಿಗೆ ಒಂಬತ್ತು ತಿಂಗಳಲ್ಲಿ ಆಗುತ್ತದೆ. ಹಾಗೆಯೇ ನಿರ್ದಿಷ್ಟ ದಿನವನ್ನು ಹೇಳುವುದು ಕಷ್ಟ. ನಾಲ್ಕೈದು ದಿನದ ಮೊದಲು ಹೇಳಬಹುದು. ಕಲವೊಮ್ಮೆ ಬೇಗನೇ ಹೆರಿಗೆ ಆಗುವುದು ಇದೆ. ಬೇಗ ಹೆರಿಗೆ ಆಗುವುದು ಮಗುವಿನ ದೃಷ್ಟಿಯಿಂದ ಒಳ್ಳೆಯದಲ್ಲ. ತಡವಾಗಿ ಹೆರಿಗೆ ಆಗುವುದು ಇದೆ. ಇದರಿಂದ ತೊಂದರೆ ಇಲ್ಲ.

ಗರ್ಭಿಣಿ ಹೆರಿಗೆ ಆದ ಮೇಲೆ ಕಸ ಹೋಗಬೇಕು. ಮಗುವನ್ನು ಎತ್ತಿ ಅಳುವಂತೆ ಮಾಡಬೇಕು. ಕೆಲವೊಮ್ಮೆ ಮಕ್ಕಳು ಅಳುವುದಿಲ್ಲ. ಆಗ ಹೆದರುತ್ತಾರೆ. ಅದನ್ನು ಅಳುವಂತೆ ಮಾಡುತ್ತೇವೆ. ಗರ್ಭಿಣಿಗೆ ಹೆರಿಗೆಯ ನಂತರ ಶೀತ ಆಗದಂತೆ ನೋಡುವುದು ಮುಖ್ಯ. ಶೀತ ಆಗಿ ಜ್ವರ ಬಂದರೆ ಮುಂದೆ ಭಾರಿ ಕಷ್ಟವಾಗುತ್ತದೆ. ಅದು ಹಿಷ್ಟೀರಿಯಾ ಆದರೂ ಆಗಬಹುದು.

ಮಗು ಹುಟ್ಟಿದ ಹದಿನಾರನೇ ದಿನದಲ್ಲಿ ಸೂತಕ ಬೆಳೆದು ಶುದ್ಧ ಮಾಡಿ ಮಗುವಿಗೆ ಹೆಸರಿಡುತ್ತಾರೆ. ಮಗುವಿನ ಅಜ್ಜಿ ಹೆಸರನ್ನು ಕಿವಿಯಲ್ಲಿ ಹೇಳಬೇಕು. ನಮ್ಮಲ್ಲಿ ಸಾಮಾನ್ಯವಾಗಿ ವಾರಗಳ ಹೆಸರನ್ನು ಇಡುತ್ತಿದ್ದರು. ಸೋಮ, ಸೋಮಕ್ಕ, ಅಂಗಾರೆ ಹೀಗೆ ಹೆಸರು ಇಡುತ್ತಿದ್ದರು. ಈಗ ಒಳ್ಳೆಯ ಹೆಸರುಗಳನ್ನು ಇಡುತ್ತಾರೆ. ನೋಡಿ ನನ್ನ ಮೊಮ್ಮಗಳ ಹೆಸರು “ಕವನ” ನಾಮಕರಣದ ದಿನ ಗಂಡನ ಮನೆಯವರು ಬರುತ್ತಾರೆ. ಹೆರಿಗೆಯ ಖರ್ಚು ಕೊಟ್ಟ ಊಟ ಮಾಡಿ ಹೋಗುತ್ತಾರೆ. ಆಮೇಲೆ ಇನ್ನೊಂದು ದಿನ ಬಂದು ಹೆಣ್ಣನ್ನು ಕರೆದುಕೊಂಡು ಹೋಗುತ್ತಾರೆ.

 • ಹೆರಿಗೆ ಕೆಲಸ ಕಷ್ಟವೇ?

ಕಷ್ಟವಲ್ಲ. ಆದರೆ ಎಚ್ಚರಿಕೆ ಅಗತ್ಯ. ಎಲ್ಲಾ ದೇವರ ಮೇಲೆ ಭಾರ ಹಾಕುತ್ತೇವೆ. ದೇವರು ಇದ್ದಾನೆ. ಪರಿಣತಿ ಅಗತ್ಯ. ಅದು ಆದ ಅನುಭವದಿಂದ ಬರುತ್ತದೆ. ಕೆಲವೊಮ್ಮೆ ಮಗು ಸತ್ತರೆ ನೋವಾಗುತ್ತದೆ. ಮಗು ಸತ್ತರೆ ಹೆರಿಗೆ ಮಾಡಿಸುವವರಿಗೆ ಅಪವಾದ ಬರುವುದು ಕಡಿಮೆ. ಯಾಕೆಂದರೆ ಮಗು ಸಾಯುವುದಕ್ಕೆ ಕಾರಣಗಳಿರುತ್ತದೆ. ಹೆಚ್ಚಾಗಿ ಇಂತಹ ಸಂದರ್ಭದಲ್ಲಿ ಹೆರಿಗೆ ಮಾಡಿಸಲು ಸಾಧ್ಯವಾಗುವುದಿಲ್ಲ. ಆಗ ಡಾಕ್ಟರ ಹತ್ತಿರ ಹೋಗಬೇಕು.

 • ಈಗಲೂ ಹೆರಿಗೆ ಮಾಡಿಸಲು ಹೋಗುತ್ತೀರಾ?

ಈಗ ಪ್ರಾಯ ಆಗಿದೆ. ನಡೆದಾಡಲು ಆಗುವುದಿಲ್ಲ. ಆ ಕೆಲಸ ಈಗ ಸಾಧ್ಯವಿಲ್ಲ. ನಮ್ಮ ಕಿರಿಯರಿಗೂ ಇದು ಗೊತ್ತಿಲ್ಲ. ಅವರು ಕಲಿಯಲಿಲ್ಲ ಕೆಲವರಿಗೆ ಗೊತ್ತಿದೆ. ಆದರೆ ಈಗ ಬೇಕಾದಷ್ಟು ಆಸ್ಪತ್ರಗಳಿವೆ. ಡಾಕ್ಟರ್ ಹತ್ತಿರ ಹೋಗುತ್ತಾರೆ. ಅವರು ಎಲ್ಲಾ ಆರೈಕೆ ಮಾಡುತ್ತಾರೆ. ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸುತ್ತಾರೆ. ಮೊದಲಿನ ತೊಂದರೆ ಈಗ ಇಲ್ಲ. ಎಲ್ಲವೂ ಒಳ್ಳಯದೇ ಇದೆ. ನಮ್ಮಂತವರ ಅಗತ್ಯವೂ ಈಗ ಇಲ್ಲ.

 • ನಿಮ್ಮ ಸಮಾಜ ಬದಲಾಗಿದೆ ಅಂತ ಅನಿಸುತ್ತದೆಯೇ?

ಹೌದು. ಖಂಡಿತಾ ಬದಲಾಗಿದೆ. ಮೊದಲಿನ ಹಾಗೆ ಯಾವುದೂ ಇಲ್ಲ. ಯಾವುದೇ ಕೆಲಸಗಳು  ಮೊದಲಿನ ಹಾಗೆ ನಡೆಯುವುದಿಲ್ಲ. ಮೊದಲಿನ ಕಷ್ಟವೂ, ಬಡತನವೂ ಈಗ ಇಲ್ಲ. ಸ್ವಲ್ಪ ಮಟ್ಟಿಗೆ ಒಳ್ಳೆಯ ಜೀವನ ನಡೆಸುತ್ತಿದ್ದೇನೆ.

 • ಶ್ರೀಮತಿ ಮೋಂಟು ಅವರ ಸಂಪರ್ಕ ವಿವರ

ವಿಳಾಸ : ಮಾತೃ ಸದನ, ದೇವರಾಜ ಅರಸು ನಗರ, ಪೆಂಚಾರು ಮೂಡಬಿದರೆ, ಮಂಗಳೂರು

ಪ್ರಾಯ : ೭೦ ವರ್ಷ

 

ಸಂದರ್ಶನ

(ಶ್ರೀಮತಿಸುರೇಖಇವರುಶ್ರೀನಿರಂಜನಸ್ವಾಮಿದೇವಳಕಾಲೇಜಿನಲ್ಲಿವಾಣಿಜ್ಯಉಪನ್ಯಾಸಕಿಯಾಗಿಸೇವೆಸಲ್ಲಿಸುತ್ತಿದ್ದಾರೆ. ಅವರಅಭಿಪ್ರಾಯವನ್ನುಸಂದರ್ಶನದಮೂಲಕದಾಖಲಿಸಲಾಗಿದೆ)

 • ನಿಮ್ಮ ಬಾಲ್ಯದ ಅನುಭವ ಹೇಳಿ?

ಬಾಲ್ಯದಲ್ಲಿ ನಮಗೆ ಬಡತನವಿತ್ತು. ನಮ್ಮ ತಾಯಿ ಶಿಕ್ಷಕಿಯಾಗಿದ್ದುದರಿಂದ ತಂತರ ಸ್ವಲ್ಪ ಸುಧಾರಣೆ ಆಯಿತು. ನಮ್ಮ ತಾಯಿಗೆ ಮಕ್ಕಳು ಚೆನ್ನಾಗಿ ಕಲಿತು ಒಳ್ಳೆಯ ಉದ್ಯೋಗ ಪಡೆಯಬೇಕೆಂಬ ಆಸೆ ಇತ್ತು. ಇದರಿಂದ ನಮ್ಮನ್ನು ಕಲಿಸಿದ್ದಾರೆ. ಹೆಣ್ಣಿರಲಿ ಗಂಡಿರಲಿ ಅವರ ಹಿರಿಯರಿಗೆ ಮತ್ತು ಅವರಿಗೆ ಕಲಿಯುವ ಮನಸ್ಸಿರಬೇಕು. ಆಗ ಕಲಿತು ಮುಂದೆ ಬರಬಹುದು.

 • ನಿಮಗೆ ಜಾತಿಯ ಕಾರಣದಿಂದ ತೊಂದರೆ ಆಗಿದೆಯೇ?

ಸ್ವಲ್ಪ ಮಟ್ಟಿಗೆ ಆ ಅನುಭವ ಆಗಿದೆ. ಅದು ನಮ್ಮ ಸಮಾಜದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆ ಇರುವುದರಿಂದ ಎಲ್ಲರಿಗೂ ಆಗುವ ಅನುಭವ. ಈಗ ಸ್ವಲ್ಪ ಮಟ್ಟಿಗೆ ಬದಲಾಗಿದೆ. ಪೂರ್ಣ ಬದಲಾವಣೆ ಆಗಿಲ್ಲ. ಇದಕ್ಕೆ ಪರಿಹಾರವೆಂದರೆ ಶಿಕ್ಷಣವನ್ನು ಪಡೆಯುವುದು ಶಿಕ್ಷಣವನ್ನು  ಪಡೆದು ಉದ್ಯೋಗವನ್ನು ಪಡೆದು ಸ್ವಾಲಂಬಿಗಳಾದರೆ ಆಗ ಸಮಾಜದಲ್ಲಿ ಗೌರವ ದೊರೆಯುತ್ತದೆ.

 • ಮನ್ಸಎಂದು ಜಾತಿಯ ಹೆಸರಿನಿಂದ ಕರೆಸಿಕೊಳ್ಳುವ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಈಗ ಎಲ್ಲರೂ ಅವರ ಜಾತಿಯ ಹೆಸರಿನಿಂದಲೇ ಕರೆಸಿಕೊಳ್ಳುತ್ತಾರೆ. “ಮನ್ಸ” ಎಂದರೆ ಮನುಷ್ಯ ಎಂಬುದರಿಂದ ಬಂದುದು ಇರಬೇಕು. ಇದು ಜಾತಿಯ ಹೆಸರನ್ನು ಸೂಚಸುತ್ತದೆ. ಜಾತಿಯ ಹೆಸರನ್ನು ನಮ್ಮ ಹೆಸರಿನೊಂದಿಗೆ ಹಾಕಿಕೊಳ್ಳುವುದಿಲ್ಲ. ನಮ್ಮಲ್ಲಿ ಯಾರೂ ಜಾತಿಯ ಹೆಸರನ್ನು ಹಾಕಿಕೊಳ್ಳುವುದಿಲ್ಲ. ಅದು ಹಾಕಿಕೊಳ್ಳಬಾರದು. ಹಾಗೆಯೇ ತಾಂತ್ರಿಕ ಕಾರಣಗಳಿಗಾಗಿ ಸರ್ಕಾರಿ ದಾಖಲೆಗಳಿಗೆ ಹಾಗೆ ಸೂಚಿಸುವುದು ತಪ್ಪಲ್ಲ.

ಈಗ ನಮ್ಮಲ್ಲಿ “ಮನ್ಸ” ಎಂದು ಹಾಕಬಾರದು “ಆದಿದ್ರಾವಿಡ” ಎಂದು ಹಾಕಿಕೊಳ್ಳಬೇಕು ಎಂದು ವಾದವಿದೆ. ಇಲ್ಲಿರುವ ಸಮಸ್ಯೆ ಎಂದರೆ ಆದಿದ್ರಾವಿಡರೆಂದು ಹಲವಾರು ಜಾತಿಗಳು ಹಾಕಿಕೊಳ್ಳುತ್ತಾರೆ. ಇದರಿಂದ ಮೀಸಲಾತಿ ಸೌಲಭ್ಯದಿಂದ ನಾವು ವಂಚಿತರಾಗಬೇಕಾಗುತ್ತದೆ.

ನಾವು ಆಗ ಹೇಳಿದಂತೆ ತಾಂತ್ರಿಕ ಕಾರಣಗಳಿಗಾಗಿ ಜಾತಿ ಹೆಸರನ್ನು ಹಾಕುತ್ತೇವೆ, ಸಂಘಟನೆಗಾಗಿ ಉಪಯೋಗಿಸಿಕೊಳ್ಳುತ್ತೇವೆ. ಇದರಿಂದ ಯಾವುದೇ ತೊಂದರೆ ಇಲ್ಲ. ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಬದುಕಿನ ಮೂಲಕ ನಾವು ಬೆಳೆದರೆ ಆಗ ನಮ್ಮ ಮತ್ತು ನಮ್ಮ ಜಾತಿಯ ಸ್ಥಾನಮಾನ ಹೆಚ್ಚುತ್ತದೆ. ಹೆಸರಿಗೆ ತಲೆ ಕೆಡಿಸಿಕೊಳ್ಳುವ ಬದಲಾಗಿ ನಾವು ನಮ್ಮ ಸಮಾಜವನ್ನು ಹೇಗೆ ಆರ್ಥಿಕವಾಗಿ ಗಟ್ಟಿಗೊಳಿಸಬಹುದು ಎಂಬುದರ ಬಗ್ಗೆ ಯೋಚಿಸಬೇಕು. ಮುಂದಿನ ದಿನಗಳಲ್ಲಿ ಇದು ಮುಖ್ಯ ಎಂದು ನನಗನಿಸುತ್ತದೆ.

ನಿಮ್ಮಲ್ಲಿ ಶಿಕ್ಷಣದ ಪ್ರಮಾಣ ಹೇಗಿದೆ?

ನಮ್ಮಲ್ಲಿ ಯಾವುದರ ಬಗ್ಗೆಯೂ ಸರ್ವೆ ಆಗಿಲ್ಲ. ಈ ಬಗ್ಗೆ ವ್ಯವಸ್ಥಿತವಾದ ಸರ್ವೆ ಆಗಬೇಕು. ಆಗ ಸರಿಯಾದ ಅಂಕಿ ಅಂಶಗಳು ಸಿಗಲು ಸಾಧ್ಯ. ಈಗ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಅಲ್ಲದೆ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಬೆಂಗಳೂರಿನಲ್ಲೂ ನಮ್ಮ ಜನ ಇದ್ದಾರೆ. ಹಿಂದಿನ ಸ್ಥಿತಿಗೆ ಹೋಲಿಸಿದರೆ ಈಗ ತುಂಬಾ ಸುಧಾರಣೆ ಆಗಿದೆ, ವಿದ್ಯಾವಂತರ ಸಂಖ್ಯೆ ಹೆಚ್ಚಿದೆ ಹಾಗೆಂದು ಇತರರಿಗೆ ಹೋಲಿಸಿದಾಗ ತುಂಬಾ ಕಡಿಮೆ ಎಂದೇ ಹೇಳಬೇಕು.

ಅದರಲ್ಲೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ತುಂಬಾ ಕಡಿಮೆ. ಸಾಮಾನ್ಯವಾಗಿ ಹೈಸ್ಕೂಲ್‌ನಲ್ಲಿ ಹೆಚ್ಚಿನ ಹೆಣ್ಣುಮಕ್ಕಳು ಶಾಲೆ ಬಿಡುತ್ತಾರೆ. ಮನೆಯಲ್ಲಿ ಬಡತನ ಇರುವುದರಿಂದ ಅವರು ಅನಿವಾರ್ಯವಾಗಿ ಬೀಡಿ, ಗೇರುಬೀಜ ಫ್ಯಾಕ್ಟರಿ ಮತ್ತು ಕೆಲಸಗಳಿಗೆ ಹೋಗುತ್ತಾರೆ. ಇದರಿಂದ ಹೆಣ್ಣು ಮಕ್ಕಳು ಶಿಕ್ಷಣಮಟ್ಟ ತುಂಬಾ ಕಡಿಮೆ. ಒಟ್ಟಿನಲ್ಲಿ ಶಿಕ್ಷಣದ ಬಗ್ಗೆ ನಮ್ಮ ಸಮಾಜದಲ್ಲಿ ಹೆಚ್ಚಿನ ಆಧ್ಯತೆ ನೀಡುವ ಅಗತ್ಯವಿದೆ.

 • ಹಿಂದಿನ ಸಂಪ್ರದಾಯಗಳು ಇವೆಯೇ?

ಹೆಚ್ಚಿನ ಸಂಪ್ರದಾಯಗಳು ಬದಲಾಗುತ್ತಿದೆ. ಮದುವೆ, ಸೀಮಂತ, ಸಾವು, ಹಬ್ಬ ಹರಿದಿನಗಳಲ್ಲಿ ಹಿಂದಿನ ಸಂಪ್ರದಾಯಗಳು ಸ್ವಲ್ಪ ಮಟ್ಟಿಗೆ ಪಾಲನೆಯಾಗುತ್ತಿದೆ. ಹೆಚ್ಚಿನದು ಬದಲಾವಣೆಯಾಗುತ್ತಿದೆ. ಮೂಢನಂಬಿಕೆಗಳಿದ್ದಲ್ಲಿ ಅದು ಸಮಾಜಕ್ಕೆ ಮಾರಕವಾಗಿರುವುದರಿಂದ ಬದಲಾಗಬೇಕಾಗಿರುವುದು ಸ್ವಾಗತಾರ್ಹ. ಆದರೆ ಕೆಲವು ಅರ್ಥವತ್ತಾದ ಸಂಪ್ರದಾಯಗಳು ಮರೆಯಾಗುತ್ತಿರುವುದು, ಅದರ ಸ್ಥಾನದಲ್ಲಿ ಬೇರೆ ಸಂಸ್ಕೃತಿ ವಿಚಾರಗಳು ಬರುತ್ತಿರುವುದು ಖೇದಕರ. ಸಮಾಜದ ಅನನ್ಯತೆಯನ್ನು ಉಳಿಸಿಕೊಳ್ಳುವುದು ಒಳ್ಳೆಯರು.

ಆಧುನಿಕ ಸಂದರ್ಭದಲ್ಲಿ ಮನ್ಸ ಮಹಿಳೆ

ಸ್ವಾತಂತ್ಯ್ರದ ಬಳಿಕ ಅದರಲ್ಲೂ ೭೦ ರ ದಶಕದ ನಂತರ ಬೀಸಿದ ಸುಧಾರಣೆಯ ಗಾಳಿ ದಲಿತರ ಜೀವನದಲ್ಲಿ ವ್ಯಾಪಕ ಬದಲಾವಣೆಗಳನ್ನು ಮಾಡಿದೆ. ೮೦ರ ದಶಕರಲ್ಲಿ ನಡೆದ ದಲಿತ ಹೋರಾಟಗಳು ದಲಿತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳಲ್ಲಿ ಬದಲಾವಣೆಯನ್ನು ತಂದಿದೆ. ದಲಿತರು ಸಂಘಟಿತರಾಗಿ ಹೋರಾಟದ ಮೂಲಕ ಹೊಸ ಬದುಕನ್ನು ಕಟ್ಟುವ ಪ್ರಯತ್ನ ಮಾಡಿದ್ದಾರೆ. ತಮ್ಮ ಮೇಲೆ ನಡೆದ ದೌರ್ಜನ್ಯ ಶೋಷಣೆಗಳನ್ನು ಅರ್ಥ ಮಾಡಿಕೊಂಡಿರುವ ದಲಿತರು ಸಾಮೂಹಿಕವಾಗಿ ಸಂಘಟಿತರಾಗಿ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ. ಡಾ|| ಬಾಬಾ ಸಾಹೇಬ ಅಂಬೇಡ್ಕರ್‌ರ ಚಿಂತನೆಗಳಿಂದ ಸ್ಫೂರ್ತಿ ಪಡೆದು ಸಂಘಟಿತರಾಗಿ ಹೋರಾಡಿದರು. ಅಂಬೇಡ್ಕರರ ಚಿಂತನೆಗಳು ಇಂದು ದಲಿತ ಸಮೂಹದಲ್ಲಿ ವ್ಯಾಪಕ ಬದಲಾವಣೆಗಳನ್ನು ತಂದಿದೆ. ಪ್ರಜಾಪ್ರಭುತ್ವದ ಮೌಲ್ಯಗಳು, ಮೀಸಲಾತಿ, ಅಜಲು ಮತ್ತು ಅಸ್ಪಶ್ಯತೆಯಂಥ ಸಮಾಜವಿರೋಧಿ ಆಚರಣೆಗಳನ್ನು ವಿರೋಧಿಸುವಂತಹ ಕಾನೂನುಗಳಿಂದಾಗಿ ದಲಿತರು ಸ್ವಾಭಿಮಾನದ ಬದುಕನ್ನು ಪಡೆಯುವ ಪ್ರಯತ್ವಗಳನ್ನು ಮಾಡುತ್ತಿದ್ದಾರೆ.

ಈ ರೀತಿಯ ಬದಲಾವಣೆಗಳು ಮನ್ಸ ಸಮುದಾಯ ಮತ್ತು ಮನ್ಸರ ಮಹಿಳೆಯರ ಬದುಕು ಕೂಡ ವ್ಯಾಪಿಸಿದೆ. ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ಕ್ರಿಯಾವೇದಿಕೆ, ತುಳು ಸಾಂಸ್ಕೃತಿಕ ಕಲಾಲೋಕ, ಕರ್ನಾಟಕ ಸಮತಾ ಸೈನಿಕದಳ, ತುಳುನಾಟ ಆಟ ಕೂಟ ಇತ್ಯಾದಿ ಸಂಘಟನೆಗಳು ಮನ್ಸರಲ್ಲಿ ಅದರಲ್ಲೂ ಮನ್ಸ ಮಹಿಳೆಯರಲ್ಲಿ ಜಾಗೃತಿಯನ್ನು ಉಂಟು ಮಾಡುವ ಕಾರ್ಯವನ್ನು ನಿರ್ವಹಿಸಿವೆ. ಇದರಿಂದ ವ್ಯಾಪಕವಾಗಿ ಅಲ್ಲವಾದರೂ ಗಮನಾರ್ಹ ಮಟ್ಟದಲ್ಲಿ ಇಂದು ಮನ್ಸ ಮಹಿಳೆಯರಲ್ಲಿ ಜಾಗೃತಿಯುಂಟಾಗುತ್ತಿದೆ.

ಕೌಟುಂಬಿಕ ಮಟ್ಟದಲ್ಲಿ ಮನ್ಸ ಮಹಿಳೆಗೆ ಬಹುಮುಖ್ಯ ಸ್ಥಾನವಿದೆ. ಪುರುಷನಿಗೆ ಸಮಾನವಾದ ಸ್ಥಾನಮಾನವಿದೆ. ಕುಟುಂಬದ ಮಟ್ಟದಲ್ಲಿ ಸ್ವತಂತ್ರ ಮತ್ತು ಸ್ವಾವಲಂಬನೆಯ ಬದುಕನ್ನು ನಡೆಸಬಹುದಾದ ವ್ಯವಸ್ಥೆಯಿದೆ. ಆದರೆ ಸಾಮಾಜಿಕವಾಗಿರುವ ಅಸಮಾನತೆ ಮತ್ತು ಅಸ್ಪೃಶ್ಯತೆ ಅವರನ್ನು ಸಮಾಜಿಕ ಮುಖ್ಯವಾಹಿತಿಯಿಂದ ದೂರ ಮಾಡಿದೆ. ಮನ್ಸರ ಪುರುಷರಿಗಿಂತ ಮನ್ಸರ ಮಹಿಳೆಯರು ಸಾಮಾಜಿಕವಾಗಿ ಹೆಚ್ಚು ಅಸಮಾನತೆಗಳಿಗೆ ಒಳಗಾಗಿದ್ದಾರೆ. ಮೂಲದ ಹೆಣ್ಣಾಗಿ ಜೀತಕ್ಕೆ ಒಳಗಾಗಿ, ಜಮೀನ್ದಾರರ ಕ್ರೌರ್ಯ, ಶೋಷಣೆಗಳಿಗೆ ಒಳಗಾದ ಉದಾಹರಣೆಗಳಿವೆ. ಮನೆ ನಡೆಸುವವಳು ಹೆಣ್ಣಾದುದರಿಂದ ಗಂಡಂತಿರ ಕುಡಿತದ ಚಟದಿಂದಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದಾಳೆ. ಸರ್ಕಾರದ ಮಟ್ಟದಿಂದ ಮೀಸಲಾತಿ, ವಿವಿಧ ಯೋಜನೆ, ಸೌಲಭ್ಯಗಳು ದೊರೆತರೂ ಕಟುಬಡತನದಿಂದಾಗಿ ಶೈಕ್ಷಣಿಕ ಅರ್ಹತೆ, ಅಜ್ಞಾನ, ಅರಿವಿನ ಕೊರತೆಯಿಂದ ಇನ್ನೂ ಆ ಸೌಲಭ್ಯಗಳ ಹಲವು ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಇನ್ನೂ ಬಡತನ ಮನ್ಸ ಮಹಿಳೆಯರ ಸ್ಥಿತಿಯನ್ನು ಕಾಡುತ್ತಿದೆ. ಬೆರಳೆಣಿಕೆಯಷ್ಟು ಜನರು ಮಾತ್ರ ಸರ್ಕಾರಿ ಉದ್ಯೋಗವನ್ನು ಪಡೆದು ಸ್ವಲ್ಪ ಮಟ್ಟಿನ ಆರ್ಥಿಕ ಸ್ವಾವಲಂಬನೆಯನ್ನು ಪಡೆದಿದ್ದಾರೆ. ಬಡತನ ಹಾಗೂ ಇತರ ಕಾರಣಗಳಿಂದಾಗಿ ಮನ್ಸ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹೊಸ ಉದ್ಯೋಗವನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಅಭದ್ರತೆ, ಅಸಾಯಕತೆಗಳು ಮನ್ಸರನ್ನು, ಮುಖ್ಯವಾಗಿ ಮನ್ಸ ಮಹಿಳೆಯರನ್ನು ಕಾಡುತ್ತಿದೆ. ಅವರ ಕೌಟುಂಬಿಕ ಸಮಾನತೆ ಮೊದಲಾದ ಪುರೋಗಾಮಿ ಮೌಲ್ಯಗಳು ಸಾಮಾಜಿಕವಾಗಿ ಅವರಿಗೆ ಯಾವುದೇ ಉಪಯೋಗವನ್ನು ನೀಡುತ್ತಿಲ್ಲ.

ಭಾರತೀಯ ಸಮಾಜಕ್ಕೆ ಜಾತಿ ಪದ್ಧತಿ ಒಂದು ಶಾಪ ನಿಜ. ಇದು ಅಸ್ಪೃಶ್ಯತೆ ಮತ್ತು ಅಸಮಾನತೆಗೆ ದಾರಿ ಮಾಡಿದೆ ಎಂಬುದು ಅಷ್ಟೇ ಸತ್ಯ. ಆದರೆ ಭಾರತೀಯ ಸಮಾಜವು ಜಾತಿಯ ನೆಲೆಯಲ್ಲಿ ಒಡೆದು ಕಾರ್ಯ ನಿರ್ವಹಿಸುವುದರಿಂದ ಒಂದು ಜಾತಿ ಸಮುದಾಯದ ಅಭಿವೃದ್ಧಿಯ ದೃಷ್ಟಿಯಿಂದ ಈ ಜಾತಿಯ ಸಮಗ್ರ ಸಂಸ್ಕೃತಿಯ ಅಧ್ಯಯನ ಅತಿ ಅಗತ್ಯ. ನಮ್ಮ ಸಾಮಾಜಿಕ ಸಂದರ್ಭದಲ್ಲಿ ಜಾತಿಯ ಹಿಂದುಳಿಯುವಿಕೆಯ ಕಾರಣವನ್ನು ಆ ಜಾತಿಯ ಸಂಸ್ಕೃತಿಯ ಬೇರಿನಲ್ಲಿ ಹುಡುಕಬೇಕಾಗುತ್ತದೆ. ಈ ದೃಷ್ಟಿಯಿಂದ ಮನ್ಸರ ಅದರಲ್ಲೂ ಮನ್ಸ ಮಹಿಳೆಯರ ಕುರಿತು ಆಳವಾದ ಅಧ್ಯಯನ ಅಗತ್ಯವಾಗಿದೆ.

ಅಧ್ಯಯನದಿಂದ ವ್ಯಕ್ತವಾಗುವ ಅಂಶಗಳು

೧. ಮನ್ಸ ಸಮುದಾಯವು ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದ್ದು, ಅವರ ಸಾಂಸ್ಕೃತಿಕ ವಿಚಾರಗಳು ಅನನ್ಯವಾಗಿವೆ. ಹಲವು ದೃಷ್ಟಿಗಳಿಂದ ಪರಂಪರಾಗತವಾಗಿ ಬಂದ ಅವರ ಸಾಂಸ್ಕೃತಿಕ ವ್ಯವಸ್ಥೆಯು ಪುರೋಗಾಮಿ ವಿಚಾರಗಳನ್ನು ಒಡಲಲ್ಲಿ ಇಟ್ಟುಕೊಂಡಿರುವುದರಿಂದ ಈ ಬಗ್ಗೆ ಆಳವಾದ ಅಧ್ಯಯನ ಅಗತ್ಯ. ಆಗ ಮನ್ಸ ಮಹಿಳೆಯರ ಅನನ್ಯತೆಯ ಕುರಿತಾದ ಕುತೂಹಲಕಾರಿ ವಿವರಗಳನ್ನು ನೀಡಬಹುದಾಗಿದೆ. ಈ ಬಗ್ಗೆ ಆಳವಾದ ಅಧ್ಯಯನ ನಡೆದಿಲ್ಲ. ಇಂತಹ ಅಧ್ಯಯನಗಳ ಅಗತ್ಯವಿದೆ.

೨. ಕೌಟುಂಬಿಕ ಮಟ್ಟದಲ್ಲಿ ಮನ್ಸ ಮಹಿಳೆಯು ಪುರುಷರಿಗೆ ಸಮಾನವಾದ ಸ್ಥಾನವನ್ನು ಹೊಂದಿದ್ದಾಳೆ. ಇದಕ್ಕೆ ಮುಖ್ಯ ಕಾರಣ ಅವರ ಮಾತೃಮೂಲ ಕೌಟುಂಬಿಕ ಪದ್ಧತಿ. ಇದು ಮಹಿಳೆಗೆ ಹಲವು ಹಕ್ಕುಗಳನ್ನು ನೀಡಿದೆ. ಎಲ್ಲಾ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸುವವಳು ಮಹಿಳೆಯೇ ಆಗಿದ್ದಾಳೆ. ಆಸ್ತಿಯ ಹಕ್ಕು ಅವಳಿಗಿರುವುದರಿಂದ ಹಲವಾರು ಸ್ವಾತಂತ್ಯ್ರವನ್ನು ಅವಳು ಪಡೆದಿದ್ದಾಳೆ. ವಿವಾಹ ವಿಚ್ಚೇದನ, ಮರುಮದುವೆಯ ಸ್ವಾತಂತ್ಯ್ರವು ಅವಳಿಗಿದೆ. ಆಸ್ತಿಯು ಅವಳಿಗೆ ದೊರೆಯುವುದರಿಂದ ಗಂಡ ಸತ್ತರೂ ತವರು ಮನೆಯಲ್ಲಿ ಭದ್ರತೆಯಿದೆ. ಕೌಟುಂಬಿಕವಾಗಿ ಮಹತ್ವದ ಸ್ಥಾನವಿದೆ.

೩. ಸಾಂಸ್ಕೃತಿಕವಾಗಿಯೂ ಮಹಿಳೆ ಸಮುದಾಯದಲ್ಲಿ ಕ್ರಿಯಾಶೀಲಳಾಗಿದ್ದಾಳೆ. ಮದುವೆಯಂಥ ಆಚರಣೆ, ಆರಾಧನೆಗಳಲ್ಲಿ ಆಕೆಗೆ ವಿಶೇಷ ಸ್ಥಾನಮಾನವಿದೆ. ಗಂಡಸು ಮಾಡುವ ಯಾವುದೇ ವೃತ್ತಿಯನ್ನು ಆಕೆ ಆಯ್ಕೆ ಮಾಡುವುದರಿಂದ ಕೌಟುಂಬಿಕ ಮಟ್ಟದಲ್ಲಿ ಆಕೆ ಆರ್ಥಿಕ ಸ್ವಾವಲಂಬನೆಯನ್ನು ಪಡೆಯಲು ಸಾಧ್ಯವಾಗಿದೆ.

೪. ಆಧುನಿಕತೆ ಮತ್ತು ಆಧುನಿಕ ಶಿಕ್ಷಣ ಮನ್ಸರ ಮಹಿಳೆಯರ ಬದುಕಿನಲ್ಲಿ ತುಸು ಬದಲಾವಣೆ ತಂದಿದ್ದರೂ ಅದು ನಿರೀಕ್ಷಿತ ಮಟ್ಟದಲ್ಲಿಲ್ಲ. ಜಾತಿಯ ಕಾರಣದಿಂದ ಸಾಮಾಜಿಕ ಅಸ್ಪೃಶ್ಯತೆ ಮತ್ತು ಅಸಮಾನತೆ ಇಂದೂಸ ಸಾಮಾಜಿಕ ಜೀವನದಲ್ಲಿ ಕ್ರಿಯಾಶೀಲವಾಗಿದೆ. ಇದು ಆಕೆಯ ಶಿಕ್ಷಣ ಮತ್ತು ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರಿದೆ. ಮನ್ಸರ ಪುರುಷರು ಪಡೆಯುತ್ತಿರುವಷ್ಟು ಶೈಕ್ಷಣಿಕ ಹಾಗೂ ಆರ್ಥಿಕ ಸೌಲಭ್ಯಗಳನ್ನು ಮಹಿಳೆ ಪಡೆಯುತ್ತಿಲ್ಲ. ಅವರ ಬದುಕನ್ನು ಸುಧಾರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ.