ಸಾವಿನ ಕುರಿತಾದ ಆಚರಣೆಗಳು

ಸಾವಿನ ಆಚರಣೆಯಲ್ಲಿ ಹೆಣ್ಣಿಗೆ ಹೆಚ್ಚಿನ ಮಹತ್ವವಿಲ್ಲ. ಸತ್ತಾಗ ಕುಟುಂಬಿಕರಿಗೆ, ಸಂಬಂಧಿಗಳಿಗೆ ಹೇಳಿಕೆ ಕೊಡಬೇಕು. ಸಾವಿನ ಹೇಳಿಕೆ ಕೊಡುವ ಸಂದರ್ಭದಲ್ಲಿ ಎಲೆಅಡಿಕೆ ನೀಡಿ ಹೇಳಿಕೆ ಮಾಡಬೇಕು. ಹೇಳಿಕೆ ಮಾಡಲು ಸಂಬಂಧಿಕರು ಅಥವಾ ಇತರ ಯಾರನ್ನಾದರೂ ಕಳುಹಿಸಬಹುದು. ಆದರೆ ಯಾರು ಸಾವಿನ ಹೇಳಿಕೆ ನೀಡುತ್ತಾರೆ ಅವರ ದಾರಿ ಖರ್ಚನ್ನು ನೀಡಬೇಕು.

ಸಾವಿನ ಸಂದರ್ಭದಲ್ಲಿ ಆಚರಣೆ ಹೆಣ್ಣು ಮತ್ತು ಗಂಡಿಗೆ ಸಮಾನವಿರುತ್ತದೆ. ಮನ್ಸರಲ್ಲಿ ಸತ್ತರೆ ಸುಡುವ ಪದ್ಧತಿಯಿರಲಿಲ್ಲ. ಹೂಳುವ ಪದ್ಧತಿಯಿತ್ತು. ಆದರೆ ಈಗ ಸುಡುವ ಪದ್ಧತಿಯೂ ಜಾರಿಗೆ ಬಂದಿದೆ. ಶವವನ್ನು ಸಿಂಗಾರ ಮಾಡಿ ಹೂಳುವ ಹೊಂಡದತ್ತ ಕೊಂಡೊಯ್ಯುತ್ತಾರೆ. ತಾಯಿಯ ಶವವನ್ನು ಮಕ್ಕಳು ಹೊರಬೇಕು. ಹಿರಿಮಗ ಚಟ್ಟದ ಬಲ ಹಲಗೆಗೂ, ಕಿರಿಮಗ ಎಡ ಹಲಗೆಗೂ ಭುಜ ಕೊಡಬೇಕು. ಒಂದು ವೇಳೆ ಮಕ್ಕಳಿಲ್ಲದಿದ್ದರೆ ಸಂಬಂಧಿಕರು ಹೆಣ ಹೊರಬಹುದು. ಗಂಡನು ಬದುಕಿದ್ದರೆ ವಿಧಿವಿಧಾನಗಳನ್ನು ನೆರವೇರಿಸಬೇಕು. ಹೂತ ನಂತರ ಕುಟುಂಬದವರು ಮೂರು ದಿನ ಸತ್ತ ಮನೆಯಲ್ಲಿ ಇರಬೇಕು.

ಸತ್ತ ದಿನ ಮನೆಯಲ್ಲಿ ಸೆಗಣಿ ಸಾರಿಸಿ ಗಂಜಿ ಬೇಯಿಸಿ ಊಟ ಮಾಡಬೇಕು. ಇದನ್ನು ಧುಃಖದ ಗಂಜಿ ಎಂದು ಕರೆಯುತ್ತಾರೆ. ಮೂರನೇ ದಿನ ಹೂತಿಟ್ಟ ಸ್ಥಳಕ್ಕೆ ಹೋಗಿ ಕುಟುಂಬದ ಸದಸ್ಯರು ತಳಿಪುಕೊಳ್ಳಬೇಕು. ತಳಿಪು ಎಂದರೆ ದೇವರ ತೀರ್ಥವನ್ನು ಪ್ರೋಕ್ಷಣೆ ಮಾಡುವುದು. ತಂಬಿಗೆ ನೀರಿಗೆ ಮಾವಿನ ಎಲೆ ಹಾಕಿ ನೀರನ್ನು ಪ್ರೋಕ್ಷಣೆ ಮಾಡುವುದು ತಳಿಪು ಕ್ರಿಯೆ. ಹೆಣವನ್ನು ಹೂಳುವುದರಿಂದ ೪೩, ೪೫, ೪೭ ದಿನಗಳಲ್ಲಿ ಉತ್ತರಕ್ರಿಯೆ ನಡೆಸಬಹುದು. ಇತ್ತೀಚೆಗೆ ಹೆಣ್ಣ ಸುಡುತ್ತಿರುವುದರಿಂದ ೧೨ ಅಥವಾ ೧೬ ರಲ್ಲಿ ಉತ್ತರಕ್ರಿಯೆ ನಡೆಯಬಹುದು.

ಹೆಣ್ಣಾಗಲಿ, ಗಂಡಾಗಲಿ ಸತ್ತಲ್ಲಿ ಆಚರಣೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದರೆ ಹೆಣ್ಣಿನ ಸಂಬಂಧಿಸಿದಂತೆ ಕೆಲವು ವಿಶಿಷ್ಟ ಆಚರಣೆಗಳಿವೆ.

ಗಂಡ ಸತ್ತರೆ ಹೆಣ್ಣು ಕೆಲವು ವಿಧಾನಗಳನ್ನು ಪಾಲಿಸಬೇಕು. ಗಂಡನ ಮನೆಯಲ್ಲಿ ಆಕೆಗೆ ಧುಃಖದ ಬಟ್ಟೆಯನ್ನು ಕೊಡುತ್ತಾರೆ. ಅದನ್ನು ಉಟ್ಟು ಕೊಂಡು ಗಂಡನ ಪ್ರಾಣ ಹೋದ ಜಾಗದಲ್ಲಿ ಅಥವಾ ಶವ ಇರಿಸಿದ ಜಾಗದಲ್ಲಿ ಕುಳಿತುಕೊಳ್ಳಬೇಕು. ತಂಬಿಗೆಯಲ್ಲಿ ನೀರಿಟ್ಟು ಕುಳಿತುಕೊಂಡು ಎರಡು ಮೂರು ಬಾರಿ ನೀರನ್ನು ಬದಲಿಸುತ್ತಿರಬೇಕು. ಉತ್ತರಕ್ರಿಯೆಯ ದಿನ ಆಕೆ ತವರುಮನೆಗೆ ಹೋಗಬೇಕು. ನಂತರ ಆಕೆ ತವರುಮನೆಯಲ್ಲಿಯೇ ಇರುತ್ತಾಳೆ.

ಸಾವಿನ ಆಚರಣೆಯ ಸಂದರ್ಭದಲ್ಲೂ ಹೆಣ್ಣಿಗೆ ಸಂಬಂಧಿಸಿದಂತೆ ಮನ್ಸರಲ್ಲಿ ಹಲವು ವಿಶಿಷ್ಟ ಅಂಶಗಳನ್ನು ಗಮನಿಸಬಹುದಾಗಿದೆ. ಹೆಣ್ಣು ಮತ್ತು ಗಂಡು ಯಾರು ಸತ್ತರೂ ಸಮಾನವಾದ ಆಚರಣೆಯು ಗಮನ ಸೆಳೆಯುತ್ತದೆ. ಸತ್ತಾಗ, ಹೂಳುವಾಗ, ಉತ್ತರಕ್ರಿಯೆ ಸಂದರ್ಭದಲ್ಲಿ ಸಮಾನ ಆಚರಣೆಯಿದೆ. ಮೇಲ್ವರ್ಗದ ಕೆಲವು ಸಮುದಾಯಗಳಲ್ಲಿ ಇರುವಂತೆ ಗಂಡ ಸತ್ತಾಗ, ಬಳೆ, ಮೂಗುತಿ ಒಡೆಯುವ, ಕುಂಕುಮ ಅಳಿಸುವ ಹೃದಯವಿದ್ರಾವಕ ಸನ್ನಿವೇಶಗಳು ಅಲ್ಲಿಲ್ಲ. ಸಾವನ್ನೂ ಒಂದು ಸಹಜ ಕ್ರಿಯೆಯಾಗಿ ಸ್ವೀಕರಿಸುವ ಮನೋಭಾವ ಕಂಡು ಬರುತ್ತದೆ. ಇಲ್ಲಿನ ಆಚರಣೆಗಳಲ್ಲಿ ಗಂಡಿನ ಹೆಚ್ಚುಗಾರಿಕೆ ಕಾಣಬರುವುದಿಲ್ಲ. ಇತರ ಕೆಲವು ಸಮುದಾಯಗಳಲ್ಲಿ ಸತ್ತವನಿಗೆ ನೀರಿಡುವ ಆಚರಣೆಗಳನ್ನು ಮಕ್ಕಳು ಮಾಡುವುದಿದ್ದರೆ ಇಲ್ಲಿ ಹೆಂಡತಿಯು ಈ ಆಚರಣೆಯನ್ನು ನಡೆಸುತ್ತಾಳೆ. ಆ ಬಳಿಕ ಅವಳು ತವರು ಮನೆಗೆ ಹೋಗುತ್ತಾಳೆ. ಅಲ್ಲಿ ಅವಳಿಗೆ ಎಲ್ಲಾ ಹಕ್ಕುಗಳು ಇರುತ್ತವೆ. ಬಳಿಕ ಬುಡಧಾರೆಯ ಮೂಲಕ ಮರುಮದುವೆ ಆಗಬಹುದು.

ಸತ್ತ ನಂತರ ಉತ್ತರಕ್ರಿಯೆಯ ದಿನ ರಾತ್ರಿ “ಹದಿನಾರರ ಜತೆ ಸೇರಿಸುವ ಪದ್ಧತಿ” ಇದೆ. ಇದನ್ನು “ಉಳಯಿ ಲೆಪ್ಪುಲು” ಪುಡಪ್ಪಜೆ (ಮಡೆಬೊಜ್ಜ) ಎಂದು ಕರೆಯುತ್ತಾರೆ. ಸತ್ತವರ ಕುಟುಂಬ ಎಂದರೆ ೧೬ ಎಂದರ್ಥ. ಅಂದರೆ ಒಬ್ಬ ಸತ್ತಾಗ ಸತ್ತವರ ಸಮೂಹದಲ್ಲಿ ೧೬ನೇಯವರ ಸಂಬಂಧ ಕಳಚಿಕೊಂಡು ಸತ್ತ ವ್ಯಕ್ತಿಯನ್ನು ಸೇರಿಸಲಾಗುತ್ತದೆ. ೧೬ ಎಲೆ ಹಾಕಿ ಕೋಳಿ, ಮೀನು ಪದಾರ್ಥ ಮಾಡಿ ಬಡಿಸುತ್ತಾರೆ. ಮೊದಲು ೧೫ ಎಲೆಗಳಿಗೆ ಬಡಿಸಿ ಬಳಿಕ ದೂರದಲ್ಲಿ ಇನ್ನೊಂದು ಎಲೆಗೆ ಬಡಿಸಿ ಅದನ್ನು ೧೬ರಲ್ಲಿ ಸೇರಿಸುತ್ತಾರೆ. ಅಂದರೆ ಸತ್ತವರನ್ನು ಕುಟುಂಬದ ಸತ್ತವರ ಸಮೂಹದಲ್ಲಿ ಸೇರಿಸಲಾಗಿದೆ ಎಂದರ್ಥ. ಇಲ್ಲಿಯೂ ಹೆಣ್ಣು ಮತ್ತು ಗಂಡು ಎಂಬ ಭೇದ ಭಾವ ಇಲ್ಲದೆ ಕುಟುಂಬಕ್ಕೆ ಸೇರಿಸಿಕೊಳ್ಳುವುದು ಒಂದು ಮಹತ್ವದ ಅಂಶವಾಗಿದೆ. ಈ ದೃಷ್ಟಿಯಿಂದ ಸಾವಿನ ಆಚರಣೆಯಲ್ಲಿ ಮನ್ಸರಲ್ಲಿ ಹೆಣ್ಣಿಗೆ ಸಮಾನತೆಯಿರುವುದು ಹಾಗೂ ವಿಧವೆಯಾದರೆ ಆಕೆ ವಿಧವೆಯಾಗಿ ಉಳಿಯಬೇಕಿಲ್ಲ ಎಂಬ ವಿಚಾರವೂ ಮಹತ್ವದ ಅಂಶವಾಗಿದೆ.

ಆರಾಧನೆಆಚರಣೆಗಳಲ್ಲಿ ಮಹಿಳೆ

ಮನ್ಸರಲ್ಲಿ ಮಾತೃಪ್ರಧಾನ ಕೌಟುಂಬಿಕ ವ್ಯವಸ್ಥೆಯಿದ್ದರೂ ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಯಲ್ಲಿ ಪುರುಷರು ಪ್ರಧಾನ ಪಾತ್ರ ವಹಿಸುತ್ತಾರೆ. ಆದರೆ ಆರಾಧನೆಯ ಹಿನ್ನೆಲೆಯನ್ನು ಗಮನಿಸಿದರೆ ಮಾತೃಪ್ರಧಾನ ವ್ಯವಸ್ಥೆಯ ಹಿನ್ನೆಲೆಯಿಂಧ ಆರಾಧನಾ ವ್ಯವಸ್ಥೆ ರೂಪಗೊಂಡಿರುವುದು ಸ್ಪಷ್ಟ. ತುಳುನಾಡಿನ ಆರಾಧನಾ ಪರಂಪರೆಯು ಮಾತೃ ಮೂಲ ವ್ಯವಸ್ಥೆಯಿಂದ ರೂಪುಗೊಂಡಿದೆ. ಮನ್ಸರ ಆರಾಧನೆಯೂ ತುಳುನಾಡಿನ ಆರಾಧನಾ ಪರಂಪರೆಯಿಂದಲೇ ರೂಪುಗೊಂಡಿರುತ್ತದೆ. ತುಳುನಾಡಿನ ಭೂತಾರಾಧನೆ ಪರಂಪರೆ ಮನ್ಸರ ಆರಾಧನೆಯಾಗಿದೆ.

ಬೆರ್ಮೆರ್ ತುಳುನಾಡಿನ ಎಲ್ಲಾ ಜನಾಂಗಗಳ ಆರಾಧನಾ ದೈವ. ಎಲ್ಲಾ ಆರಾಧನೆಯ ಮೂಲ ಬೆರ್ಮರೆ ಆರಾಧನೆ. ವೈದಿಕ ಪರಂಪರೆಯ ಬ್ರಹ್ಮನಿಗಿಂತ ಭಿನ್ನವಾದ ಕಲ್ಪನೆ ಬೆರ್ಮರದು. ಬೆರ್ಮರು ಸಂತಾನ ದೇವತೆಯಾಗಿ, ಕೃಷಿ ದೇವತೆಯಾಗಿ, ಪ್ರಕೃತಿ ದೇವತೆಯಾಗಿ ಎಲ್ಲಾ ದೈವಗಳ ಮೂಲವಾಗಿರುವಂತೆ ಕಂಡುಬರುತ್ತದೆ. ಬಿಲ್ಲವರ ಗರಡಿ, ಮೊಗೇರರ ಆರಾಧನಾ ಕಳ, ಬಂಡನ ಸಿರಿ ಆರಾಧನೆ ಹೀಗೆ ಎಲ್ಲಾ ಆರಾಧನೆಗಳ ಮೂಲದೇವರು ಬೆರ್ಮರು.

ತುಳುನಾಡಿನಲ್ಲಿ ಬೆರ್ಮರ ಆರಾಧನೆ ಪ್ರಾಚೀನ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ಇಲ್ಲಿರುವ ಹಲವಾರು ಸ್ಥಳನಾಮ ಮತ್ತು ವ್ಯಕ್ತಿನಾಮಗಳಿಂದ ಇದು ಕಂಡು ಬಂದಿದೆ. ನಾಗಾರಾಧನೆಗೂ ಬೆರ್ಮರ ಆರಾಧನೆಗೂ ನಿಕಟ ಸಂರ್ಪವಿದೆ. “ಆಲಡೆ” ಕಲ್ಪನೆ ತುಳುನಾಡಿನಲ್ಲಿ ವಿಶಿಷ್ಟವಾದುದು. ಆಲಡೆ ಎಂದರೆ ಮೂಲಸ್ಥಾನ ಎಂದರ್ಥ. ಆದರೆ ಒಂದು ಕುಟುಂಬದ ಮೂಲ ನಾಗಾರಾಧನೆಯು ಒಂದು ನಿರ್ದಿಷ್ಟ ಸ್ಥಳದಲ್ಲಿ ಗುರುತಿಸಲ್ಪಡುತ್ತದೆ. ಇಲ್ಲಿ ಕುಟುಂಬದವರು ಬಂದು ನಾಗನ ಆರಾಧನೆಯನ್ನು ಮಾಡುತ್ತಾರೆ. ಈ ಆಲಡೆಯ ಮೂಲ ದೇವರು ಬೆರ್ಮರು. ಮೊದಲು ಬೆರ್ಮರಿಗೆ ಹರಕೆ ತಂಬಿಲ ಕಟ್ಟಿಸುವ ಕಾರ್ಯ ನಡೆಯಬೇಕು. ವರ್ಷಕ್ಕೊಮ್ಮೆ ಆಲಡೆಗೆ ಹೋಗಿ ಬೆರ್ಮರಿಗೆ ಹರಕೆ ನೀಡಿ ನಾಗಾರಾಧನೆಯನ್ನು ಮಾಡಿದರೆ ಸುಳ –  ಸಂತಾನ – ಸಂತೃಪ್ತಿಗಳು ಪ್ರಾಪ್ತವಾಗುತ್ತದೆ ಎನ್ನುವುದು ನಂಬಿಕೆ. ಇದರಿಂದಲೇ ತುಳುನಾಡಿನಲ್ಲಿ ಆಲಡೆಯಲ್ಲಿ ಬೆರ್ಮರ ಆರಾಧನೆ ಮಹತ್ವದ ಸ್ಥಾನವನ್ನು ಹೊಂದಿದೆ.

ಒಂದು ಕುಟುಂಬಕ್ಕೆ, ಕುಟುಂಬದ ಮನೆಯಿದೆ. ಅಂದರೆ ಒಂದು ಕುಟುಂಬವು ನೂರಾರು ವರ್ಷಗಳಲ್ಲಿ ಹಲವು ಕವಲುಗಳಾಗಿ ಒಡೆದು ಬೇರೆ ಬೇರೆ ಕಡೆ, ಬೇರೆ ಕುಟುಂಬಗಳಾಗಿ ಕಾರ್ಯನಿರ್ವಹಿಸುತ್ತಿರಬಹುದು. ಅಲ್ಲಿ ವಾರ್ಷಿಕ ದೈವಗಳ ಆರಾಧನೆಗಳು ನಡೆಯುತ್ತವೆ. ಈ ಎಲ್ಲಾ ಕುಟುಂಬಗಳಿಗೆ ಒಂದೇ ಆಲಡೆಯಿರುತ್ತದೆ.

ಕುಟುಂಬದ ಮನೆಯಲ್ಲಿ ದೈವ ದೇವರಿಗೆ ವಾರ್ಷಿಕ ಆರಾಧನೆ ತಂಬಿಲ ನಡೆಯುತ್ತದೆ. ಮನ್ಸರಲ್ಲಿ ಈ ದೈವಗಳನ್ನು ಆರಾಧಿಸಲಾಗುತ್ತದೆ.

೧. ಬೆರ್ಮರ್ ೨. ಸತ್ಯ ಪದಿನಾಜಿ ೩. ಪಂಜುರ್ಲಿ ೪.ಕಲ್ಲುರ್ಟಿ, ೫. ಗುಳಿಗ, ೬. ಚಾಮುಂಡಿ, ೭. ಬೈಕಡ್ತಿ, ೮. ಮಂತ್ರದೇವತೆ, ೯. ಅಜ್ಜೆರ್, ೧೦. ತಂಗಡಿ ೧೧. ರಾವು

ಬೆರ್ಮರ ಆರಾಧನೆ ಆಲಡೆಯಲ್ಲಿ ನಡೆಯುತ್ತದೆ. ಅದರೊಂದಿಗೆ ನಾಗಾರಾಧನೆಯೂ ನಡೆಯುತ್ತದೆ. ಸತ್ಯ ಪದಿನಾಜಿ ದೈವದ ಆರಾಧನೆಯು ಸಾಮೂಹಿಕವಾಗಿ ನಡೆಯುತ್ತದೆ. ಉಳಿದ ದೈವಗಳ ಆರಾಧನೆ ಕುಟುಂಬದ ಮನೆಗಳಲ್ಲಿ ನಡೆಯುತ್ತದೆ. ವಾರ್ಷಿಕವಾಗಿ ಕುಟುಂಬದ ಮನೆಯಲ್ಲಿ ಎಲ್ಲರೂ ಸೇರಿ ಈ ಆರಾಧನೆಯನ್ನು ನಡೆಸುತ್ತಾರೆ.

ರಾತ್ರಿ ಆರಾಧನೆ ನಡೆಸಿದ ಬಳಿಕ ಕುಟುಂಬದ ಮನೆಯಲ್ಲಿ ಮುಡಿಪು ಕಟ್ಟುವ ಸಂಪ್ರದಾಯವಿದೆ. ಪ್ರತಿ ತಲೆಕಾಣಿಕೆಗಾಗಿ ಕುಟುಂಬದ ಸದಸ್ಯರು ನಾಲ್ಕಾಣೆ ಕಾಣಿಕೆ ಹಾಕುತ್ತಾರೆ. ಮನೆಯಲ್ಲಿ ನಡೆಯುವ ಆರಾಧನೆಯ ಖರ್ಚನ್ನು ಕುಟುಂಬದ ಸದಸ್ಯರು ಪಾಲು ಮಾಡಿ ಹಂಚಿಕೊಂಡು ನಡೆಸುತ್ತಾರೆ. ಅಕ್ಕ-ತಂಗಿಯ ಮಕ್ಕಳು ಬಂದು ಕುಟುಂಬ ಎಂದು ಈ ಎಲ್ಲಾ ಖರ್ಚುವೆಚ್ಚಗಳನ್ನು ಹೆಂಗಸರೇ ಪಾಲು ಮಾಡಿಕೊಂಡು ಹಂಚಿಕೊಳ್ಳುತ್ತಾರೆ. ಒಂದೇ ಕುಟುಂಬದ ಅಕ್ಕ-ತಂಗಿಯ ಮಕ್ಕಳು ಈಗ ಹಲವು ಕುಟುಂಬಗಳಾಗಿದ್ದರೂ, ಅವರೆಲ್ಲರೂ ಒಂದು ಗೂಡಿ ದೈವಾರಾಧನೆ ಮಾಡಿ ಮನೆಯ ಹಿರಿಯ ಮಹಿಳೆಯರು ಖರ್ಚನ್ನು ಹಂಚಿಕೊಳ್ಳುತ್ತಾರೆ. ಆರಾಧನೆಯಲ್ಲಿ ಗಂಡಸರು ಪಾಲ್ಗೊಳ್ಳುವರಾದರೂ ಖರ್ಚಿನ ವಿಚಾರದಲ್ಲಿ ಅವರು ತಲೆ ಹಾಕುವುದಿಲ್ಲ. ಅದನ್ನು ಹೆಂಗಸರೇ ಪರಸ್ಪರ ಮಾತುಕತೆಯ ಮೂಲಕ ನಿರ್ಧರಿಸುತ್ತಾರೆ.

ಇದರಿಂದ ಕುಟುಂಬದ ಆರಾಧನೆಯಲ್ಲಿ ಮಹಿಳೆಯೇ ಪ್ರಧಾನ ಸ್ಥಾನ ವಹಿಸುತ್ತಾಳೆ. ಆರಾಧನೆಯ ವಿಚಾರ ಮತ್ತು ಖರ್ಚು ವೆಚ್ಚವನ್ನು ಮಹಿಳೆಯರೇ ನೋಡಿಕೊಳ್ಳುತ್ತಾರೆ. ಗಂಡಸರು ಆರಾಧನೆಯ ವಿಧಿ ವಿಧಾನಗಳನ್ನು ಮಾತ್ರ ನೋಡಿಕೊಳ್ಳುತ್ತಾರೆ. ಹೆಂಗಸರ ಮಧ್ಯೆ ಮನಸ್ತಾಪಗಳು ಬಂದರೆ ಕೆಲವೊಮ್ಮೆ ಆರಾಧನೆಯು ನಿಂತುಹೋಗುವುದಿದೆ. ಈ ರೀತಿ ಕುಟುಂಬದ ಮನೆಯಲ್ಲಿ ನಡೆಯುವ ಆರಾಧನೆಯು ಕೌಟುಂಬಿಕ ಸಾಮರಸ್ಯ ಮತ್ತು ಸಂಬಂಧಗಳನ್ನು ಬಲಗೊಳಿಸುತ್ತದೆ. ಇವೆಲ್ಲವುದರ ಮೂಲ ಮಹಿಳೆಯರೆಂಬುದು ಗಮನಾರ್ಹ ಸಂಗತಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಮಾತೃಮೂಲ ಕುಟುಂಬ ಪದ್ಧತಿ ಮನ್ಸರಲ್ಲಿ ಇರುವುದಾಗಿದೆ.

ಮನ್ಸರ ಮೂಲಕಾನದ ಕಟದರ ಐತಿಹ್ಯ ಮತ್ತು ಮಹಿಳೆ

ಕಾನದ – ಕಟದ ಎಂಬ ಅವಳಿ ಸಹೋದರರಿಗೆ ಸಂಬಂಧಿಸಿದ ಐತಿಹ್ಯವು ಮನ್ಸರ ವೀರರ ಕಥೆಯಾಗಿದೆ. ಅವರು ಮನ್ಸರ ಮೂಲ ಎಂಬ ನಂಬಿಕೆಯಿದೆ. ತಮ್ಮ ಸಾಧನೆ ಮತ್ತು ಸ್ವಾಭಿಮಾನದ ಹೋರಾಟದಿಂದ ಅತಿಮಾನುಷ ವೀರರಾಗಿ ಜನಾಂಗದಿಂದ ಪೂಜಿತರಾಗುತ್ತಿದ್ದಾರೆ. ಅವರನ್ನೇ ಸಾರಮುಪ್ಪನೆರ್ ಅಥವಾ ಸತ್ಯ ಪದಿನಾಜಿ ದೈವಗಳೆಂದು ಪೂಜಿಸುತ್ತಾರೆ. ಸತ್ಯ ಪದಿಪಾಜಿ ಎಂದರೆ ಮೂರು ಹೊತ್ತು ಪೂಜಿಸುವ ಎಂದರ್ಥ. ಅತಿಮಾನುಷ ವ್ಯಕ್ತಿತ್ವದಿಂದಾಗಿ ದೈವಗಳಾಗಿ ಪೂಜನೀಯರಾದ ಈ ದೈವಗಳ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರ ಸಾಧನೆಯು ಉಲ್ಲೇಖಾರ್ಹವಾದುದು.

ಕಿಜನಗುತ್ತಿಗೆ ವೀರಚಂದ್ರ ಬಲ್ಲಾಳನೆಂಬ ಅರಸನ ಮನೆಯಲ್ಲಿದ್ದ ಮೂಲದ ಹೆಣ್ಣು ಬೊಮ್ಮಿ. ಬೊಮ್ಮಿಯ ಮೂಲಕ ಗುಡ್ಡದ ಪೊದೆಯಲ್ಲಿ ದೊರೆತ ಹೆಣ್ಣು ಮಗುವನ್ನು ಅರಸನು ಸಾಕಲು ಬೊಮ್ಮೆಗೆ ನೀಡುತ್ತಾನೆ. ಮುಂದೆ ಸಾಯನ ಬೈದ್ಯನ ಹೆಂಡತಿ ದೇಯಿ ಬೈದೆತಿ ಎಂಬುವಳು ಆ ಮಗುವನ್ನು ಅರಸನಿಂದ ಪಡೆದು ಸಾಕುತ್ತಾಳೆ. ಅವಳಿಗೆ ಬೊಲ್ಲೆ ಎಂಬ ಹೆಸರಿಟ್ಟು ಸಾಕುತ್ತಿರಲಾಗಿ, ಬೊಮ್ಮೆ ಬೆಳೆದು ದೊಡ್ಡವಳಾಗುತ್ತಾಳೆ. ದೇಯಿ ಬೈದತಿ ಮತ್ತು ಬೊಮ್ಮೆ ಒಂದು ದಿನಮುಟ್ಟಾಗುತ್ತಾರೆ. ಅವರಿಬ್ಬರೂ ಕರಿಯಲ ತೋಡು ಎಂಬಲ್ಲಿ ಸ್ನಾನ ಮಾಡಿ ಮುಗಿಸಿ ಬರುವಾಗ ಪುರುವೊಲು ಮೀನು ಆಡುತ್ತಿದ್ದವು. ದೇಯಿ ತನ್ನ ಕೈಯಲ್ಲಿರುವ ಬೆಳ್ತಿಗೆ ಅಕ್ಕಿಯನ್ನು ಬಿಸಾಡಿ “ಈ ಅಕ್ಕಿ ನಿಮ್ಮ ಹೊಟ್ಟೆಯಲ್ಲಿ ಅಕ್ಕಿ ಹೋಗಿ ಹಿಟ್ಟು ಆದ ಹಾಗೆ ನಮ್ಮ ಹೊಟ್ಟೆಯಲ್ಲಿ ಗರ್ಭ ನಿಲ್ಲಲಿ” ಎಂದು ಪ್ರಾರ್ಥಿಸುತ್ತಾಳೆ. ಇದರಿಂದ ಅವರಿಬ್ಬರೂ ಗರ್ಭಿಣಿಯಾಗುತ್ತಾರೆ. ಬೊಲ್ಲೆಗೆ ಮದುವೆಯಾಗದಿರುವುದರಿಂದ ಅನೈತಿಕತೆಯ ಅಪವಾದ ಬರುತ್ತದೆ.

ಈ ವಿಚಾರ ವೀರಚಂದ್ರ ಬಲ್ಲಾಳನಿಗೆ ತಿಳಿದು ಅವನು ಬೊಲ್ಲೆಯ ಸತ್ಯ ಪರೀಕ್ಷೆಗಾಗಿ ಶಿಕ್ಷೆ ನೀಡುತ್ತಾನೆ. ಕುದಿಯುವ ಎಣ್ಣೆಯ ಕೊಪ್ಪರಿಗೆಯಲ್ಲಿ ಮಿಂದು ಬರಬೇಕು; ವಿಳ್ಯದೆಲೆಯಲ್ಲಿ ಬೆಣ್ಣೆಯ ಮುದ್ದೆಯನ್ನು ಇಟ್ಟು ಕಾದ ಪಂಚಲೋಹದ ಮೇಲಿಟ್ಟು ಅತ್ತಿತ್ತ ಹೋಗಿ ಬರಬೇಕು; ಆಗ ಬೆಣ್ಣೆ ಕರಗಬಾರದು; ಮಡಕೆಯೊಳಗೆ ಇರುವ ನಾಗರಹಾವನ್ನು ಕೈ ಹಾಕಿ ತೆಗೆಯಬೇಕು. ಹೀಗೆ ಶಿಕ್ಷೆಯ ಸವಾಲನ್ನು ನೀಡುತ್ತಾನೆ. ಅದರಲ್ಲಿ ಆಕೆ ಗೆಲ್ಲುತ್ತಾಳೆ.

ಅರಸನು ಬೊಲ್ಲೆಗೆ ಮದುವೆ ಮಾಡಿಸುತ್ತಾನೆ. ಅವಳು ಅವಳಿ ಮಕ್ಕಳನ್ನು ಹೆರುತ್ತಾಳೆ. ಅವರಿಗೆ ಕಾನದ-ಕಟದ ಎಂದು ಹೆಸರಿಡುತ್ತಾರೆ. ಅವರನ್ನು ದೇಯಿ ಬೈದೆತಿ ಸಾಕುತ್ತಾಳೆ. ಮುಂದೆ ಅವರು ಶೌರ್ಯ, ಸ್ವಾಭಿಮಾನ, ಅತಿಮಾನುಷ ಶಕ್ತಿಯ ಮೂಲಕ ಪ್ರಸಿದ್ಧರಾಗಿ ಅಕಾಲ ಮರಣವನ್ನು ಪಡೆದು ಸತ್ಯಪದಿನಾಜಿ ದೈವಗಳಾಗುತ್ತಾರೆ.

ಅವಳಿ ವೀರರಾದ ಕಾನದ – ಕಟದರು ಅತಿಮಾನುಷ ವೀರರಾಗಿ ಪೂಜನೀಯರಾದರೂ ಅದರ ಹಿನ್ನೆಲೆಯಲ್ಲಿ ಬರುವ ದೇಯಿ ಬೈದಿತಿ, ಬೊಮ್ಮಿ ಮತ್ತ ಬೊಲ್ಲೆ ಎಂಬ ಮೂರು ಹೆಣ್ಣುಗಳು ಅವರ ಮುನ್ನಡೆಗೆ ಕಾರಣವಾಗುತ್ತಾರೆ. ಕಾನನ- ಕಟದರ ಕಥೆಯ ಅರ್ಧಭಾಗದಲ್ಲಿ ಈ ಹೆಣ್ಣುಗಳ ದಿಟ್ಟತನದ ವಿವರಗಳು ಬರುತ್ತದೆ. ಅರಸನ ಮೂಲದ ಹೆಣ್ಣಾದ ಬೊಮ್ಮಿ ಮತ್ತು ದೇಯಿ ಬೈದತಿಯರು ಅನಾಥ ಮಗು ಬೊಮ್ಮೆಯನ್ನು ಸಾಕುತ್ತಾರೆ. ಬಿಲ್ಲವರ ಹೆಣ್ಣಾದ ದೇಯಿ ಬೈದಿತಿ ಅನಾರ್ಥ ಮಗು ಬೊಲ್ಲೆಯನ್ನು  ಸಾಕುತ್ತಾಳೆ. ಬೊಮ್ಮೆ ಅತಿಮಾನುಷದ ವ್ಯಕ್ತಿತ್ವದ ಮೂಲಕ ಪುರುಷ ಸಮಾನ ಹಾಕಿದ ಎಲ್ಲಾ ಸವಾಲುಗಳನ್ನು ಗೆಲ್ಲುತ್ತಾಳೆ. ಕಾನದ-ಕಟದರ ಹುಟ್ಟಿಗೆ ಕಾರಣಳಾಗುತ್ತಾಳೆ. ಹೀಗೆ ಕಾನದ -ಕಾಟದರ ಶ್ರೇಷ್ಠತೆಯ ಹಿನ್ನೆಲೆಯಲ್ಲಿ ಈ ಮೂರು ಮಹಿಳೆಯರನ್ನು ಗುರುತಿಸಬಹುದು. ಅನಾಥಳಾದ ಬೊಲ್ಲೆಯನ್ನು ಮಾನವೀಯ ದೃಷ್ಟಿಕೋನದಿಂದ ಬಿಲ್ಲವ ಮಹಿಳೆ ದೇಯಿ ಬೈದೆತಿ ಸಾಕುವುದು; ಅವಳು ಮದುವೆಯಾಗದೆ ಗರ್ಭಿಯಾದಾಗ ಸಮರ್ಥಿಸುವುದು ಮತ್ತು ಅವಳನ್ನು ಬೆಂಬಲಿಸುವುದು; ಸಮಾನವನ್ನು ಎದುರಿಸುವಂತೆ ನೈತಿಕ ಬೆಂಬಲ ನೀಡುವುದು; ಬೊಲ್ಲೆ ದಿಟ್ಟತನದಿಂದ ಸಮಾಜವನ್ನು ಎದುರಿಸಿ, ಅವರ ಎಲ್ಲಾ ಪರೀಕ್ಷೆಗಳನ್ನು ಮೀರಿ ಮಕ್ಕಳಿಗೆ ಜನ್ಮ ನೀಡುವುದು; ಕಾನದ -ಕಾಟದರ ಶೌರ್ಯದ ಕಥೆಗಿಂತಲೂ ಬಹುಮುಖ್ಯವಾದುದು. ಇಲ್ಲಿನ ಅತಿಮಾನುಷ ಅಂಶವನ್ನು ಬದಿಗಿಟ್ಟು ನೋಡಿದರೆ ಈ ಮಹಿಳೆಯರ ದಿಟ್ಟತನ-ಸ್ವಾಭಿಮಾನ-ಸ್ವಾತಂತ್ಯ್ರದ ಬದುಕಿನ ಅರಿವಾಗುತ್ತದೆ. ಈ ಮಹಿಳೆಯರು ನಿರ್ಲಕ್ಷ್ಯಕ್ಕೆ ಒಳಗಾಗಿ ಕೇವಲ ಕಾನದ- ಕಾಟದರು ಮಾತ್ರ ಪೂಜನೀಯರಾಗುವುದು ಪುರುಷಕೇಂದ್ರಿಕ ಸಮಾಜ ವ್ಯವಸ್ಥೆಯಲ್ಲಿ ದೈವತ್ವಕ್ಕೇರಿಸುವಲ್ಲಿ ಮಹಿಳೆಯರನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ.

ತುಳುನಾಡಿನಲ್ಲಿ ಸಾಮಾನ್ಯವಾಗಿ ಕೆಳಜಾತಿಯ ಹೆಣ್ಣು ಮಕ್ಕಳಲ್ಲಿರುವ ಸಾಮರಸ್ಯದ ಸಂಕೇತವಾದ ಕಾನದ- ಕಾಟದ ಐತಿಹ್ಯವು ಮುಖ್ಯವಾಗುತ್ತದೆ. ಮೂಲದ ಹೆಣ್ಣುಮಗಳು ಬೊಮ್ಮಿಗೆ ಗುಡ್ಡದಲ್ಲಿ ಆಳುವ ಮಗಿವಿನ ಧ್ವನಿ ಕೇಳುವುದು; ಅವಳು ಅರಸನಲ್ಲಿ ಬಂದು ಹೇಳುವುದು; ಅರಸನು ಮಗುವನ್ನು ಬೊಮ್ಮಿಯಲ್ಲಿ ಸಾಕುವಂತೆ ಹೇಳುವುದು; ಈ ಸುಂದರ ಮಗುವನ್ನು ನಾನು ಸಾಕಲಾರೆ ಎಂದು ಬೊಮ್ಮಿ ಹೇಳುವುದು; ಕೊನೆಗೆ ಅರಸನ ಒತ್ತಾಯಕ್ಕೆ ಬೊಮ್ಮಿ ಮಗುವನ್ನು ಸಾಕಲು ಒಪ್ಪುವುದು. ಈ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಲವು ಅಂಶಗಳು ವ್ಯಕ್ತವಾಗುತ್ತದೆ. ಸುಂದರವಾಗಿದ್ದರೂ ಅನಾಥ ಹೆಣ್ಣು ಮಗುವನ್ನು ಅರಸನು ಸಾಕಲು ಸಿದ್ಧವಿಲ್ಲದಿರುವುದು. ಮಗು ಸುಂದರವಾಗಿದೆ ಎಂಬ ಕಾರಣಕ್ಕಾಗಿ ಬೊಮ್ಮಿ ಸಾಕಲು ಮೊದಲು ನಿರಾಕರಿಸುವುದು. ಇತ್ಯಾದಿಗಳು ಜಾತಿ ವ್ಯವಸ್ಥೆಯ ಸೂಕ್ಷ್ಮತೆಗಳನ್ನು ಪರಿಚಯಿಸುತ್ತದೆ. ಅನಾಥ ಮಗುವನ್ನು ದೇಯಿಬೈದಿತಿ ಪಡೆದು ಸಾಕುವುದು ಜಾತಿಯ ಶ್ರೇಣೀಕೃತ ವ್ಯವಸ್ಥೆಯನ್ನು ಮುರಿದು ಹೆಣ್ಣು ಮಕ್ಕಳು ಸಾಮರಸ್ಯದ ಬದುಕನ್ನು ಬಯಸುವ ಸಂಕೇತದಂತೆ ಕಾಣುತ್ತದೆ.

ಇಲ್ಲಿ ಇನ್ನೊಂದು ಮಹತ್ವದ ಅಂಶವನ್ನು ಗುರುತಿಸಬಹುದಾಗಿದೆ. ಕಾನದ -ಕಾಟದರು ಮುಂದೆ ದೇಯಿ ಬೈದಿತಿಯ ಮಕ್ಕಳಾದ ಕೋಟಿ -ಚೆನ್ನಯರನ್ನು ಎದುರಿಸಿ ಸೋಲಿಸುತ್ತಾರೆ. ಮೊಗೇರರ ವೀರರಾದ ಮುದ್ದ -ಕಳಲರೂ ಎದುರಾಗುತ್ತಾರೆ. ಅವರನ್ನು ಕಾನದ-ಕಾಟದರು ಸೋಲಿಸುತ್ತಾರೆ. ಆದರೆ ಮುಂದೆ ಕೋಟಿ – ಚೆನ್ನಯ್ಯ, ಮುದ್ದ -ಕಳಲ, ಕಾನದ-ಕಟದರು ಒಂದಾಗುತ್ತಾರೆ. ಹೀಗೆ ತುಳುನಾಡಿನ ವಿವಿಧ ಜಾತಿಗಳ ನಡುವೆ ಸಂಘರ್ಷ ಮತ್ತು ಸೌಹಾರ್ದತೆ ಇಲ್ಲಿ ವ್ಯಕ್ತವಾಗುತ್ತದೆ. ಆದರೆ ಈ ಸೌಹಾರ್ದತೆಯ ಎಳೆ ಆರಂಭದಲ್ಲೇ ದೊರೆಯುತ್ತದೆ. ಕಾನದ -ಕಟದರ ತಾಯಿ ಅನಾಥಳಾಗಿದ್ದ ಬೊಲ್ಲೆಯನ್ನು ದೇಯಿ ಬೈದೆತಿ ಸಾಕುತ್ತಾಳೆ. ಆರಂಭದಲ್ಲಿ ದೇಯಿ ಬೈದೆತಿ ಸಾಯನ ಬೈದ್ಯರಿಂದ ಆರಂಭವಾಗುವ ಸಾಮರಸ್ಯವು ಕೋಟಿ-ಚೆನ್ನಯ, ಮುದ್ದ-ಕಳಲ, ಕಾನದ-ಕಟದರು ಒಂದಾಗುವುದರಲ್ಲಿ ಪರ್ಯಾವಸಾನವಾಗುತ್ತದೆ. ಹೀಗೆ ಸೌಹಾರ್ದತೆಗೆ ನಾಂದಿಯನ್ನು ಕಥೆಯ ಆರಂಭದಲ್ಲೇ ಬರುವ ಹೆಣ್ಣುಗಳಲ್ಲಿ ಕಾಣಬಹುದಾಗಿದೆ.

ಮನ್ಸರ ಮೌಖಿಕ ಸಾಹಿತ್ಯ ಮತ್ತು ಮಹಿಳೆಯರು

ತುಳುನಾಡಿನಲ್ಲಿ ವಿಫುಲವಾಗಿರುವ ಲಿಖಿತ ಸಾಹಿತ್ಯ ಯಾವುದೇ ಜಾತಿ-ಜನಾಂಗದ ಮನೋಭಾವಗಳನ್ನು ಪ್ರತಿನಿಧಿಸುತ್ತಿಲ್ಲ. ಅವು ಇಲ್ಲಿನ ಸಮಗ್ರ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಎಲ್ಲಾ ಜಾತಿ-ಧರ್ಮಗಳಲ್ಲಿರುವಂತೆ ಮನ್ಸರಲ್ಲಿ ಪಾಡ್ದನ, ಕಬಿತ, ಉರಲ್, ಜನಪದ, ಕಥೆ, ಒಗಟು, ಗಾದೆ, ಹಾಡುಗಳನ್ನು ಹಾಡುವ ಮಹಿಳೆಯರಿದ್ದಾರೆ. ಈ ಮೌಖಿಕ ಸಾಹಿತ್ಯವು ಈ ಪ್ರದೇಶದ ಸಮಗ್ರ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಉದಾಹರಣೆಗೆ ಮನ್ಸ ಮಹಿಳೆಯೊಬ್ಬರಲ್ಲಿ ಸಂಗ್ರಹಿಸಿದ ಅತ್ತೆ-ಸೊಸೆ ಎಂಬ ಐತಿಹ್ಯವನ್ನು ಉದಾಹರಣೆಯಾಗಿ ನೀಡಬಹುದು. ತುಳುವರ ಬದುಕಿನಲ್ಲಿ ಅತ್ತೆ ಸೊಸೆ ಸಂಬಂಧದ ಸ್ವಾರಸ್ಯ ಘಟನೆಗಳು ಸಾಕಷ್ಟು ಸಿಗುತ್ತವೆ. ಮನ್ಸರ ಒಂದು ನಿರ್ದಿಷ್ಟ ಬಳಿಗೆ ಸಂಬಂಧಿಸಿರವ ಐತಿಹ್ಯವೊಂದು ಹೀಗಿದೆ.

ಒಬ್ಬಾಕೆಗೆ ತನ್ನ ಸೊಸೆಯ ಮೇಲೆ ಯಾವತ್ತೂ ಸಂಶಯ. ಮನೆಯಲ್ಲಿ ತನಗೆ ತಿಳಿಯದಂತೆ ಆಕೆ ಕದ್ದು ತಿನ್ನುತ್ತಾಳೆ ಎನ್ನುವುದೇ ಅತ್ತೆಯ ಸಂದೇಹಕ್ಕೆ ಮೂಲ. ಇದರಿಂದಾಗಿ ಮನೆಗೆ ತರುವ ವಸ್ತು ಪದಾರ್ಥಗಳ ಮೇಲೆ ನಿಗಾ ವಹಿಸತೊಡಗಿದಳು. ಒಂದು ಬಾರಿ ಮನೆಗೆ ಬಂಗುಡೆ ಮೀನು ತಂದಾಗಲೂ ಅಷ್ಟೇ. ಮೂರು ಬಂಗುಡೆ ಮೀನುಗಳನ್ನು ಆರು ತುಂಡು ಮಾಡಿ ಪದಾರ್ಥ ಮಾಡಿದ ಬಳಿಕ ಮರ ಹತ್ತಿ ಹುಳಿತು ಕಾಯತೊಡಗಿದಳು.

ಮನ್ಸರ ಹದಿನಾರು ಬಳಿಗಳಲ್ಲಿ ಬಾಕುಡದಣ್ಣ ಬಳಿಯವರು ಹೀಗೆ ಮಾಡುತ್ತಿದ್ದರು ಎನ್ನುತ್ತಾರೆ. ಈ ಬಳಿಗೆ ಈ ಬಂಗೇರದಣ್ಣಾಯ ಬಳಿ ಎಂದೂ ಹೆಸರಿದೆ. ಈ ಬಳಿಯವರು ಬೊಳದಂಗಡಿಯ ಬಂಗೇರ ಮೂಲದವರು ಎನ್ನುವುದರಿಂದಾಗಿ ಈ ಹೆಸರು ಬಂದಿದೆ ಎನ್ನಲಾಗುತ್ತಿದೆ.

ಮದುವೆಯಾಗಿ ಬರುವ ಸೊಸೆಯನ್ನು ಅತ್ತೆಯಾದವಳು ಯಾವತ್ತೂ ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುತ್ತಾಳೆ. ಈ ಕಥೆಯಲ್ಲಿ ಅತ್ತೆಯೊಬ್ಬಳು ಸೊಸೆಯ ಬಗ್ಗೆ ಸಂಶಯ ಪಡುವ ವಿವರಗಳಿವೆ. ಇದು ಎಲ್ಲಾ ಜಾತಿ ವರ್ಗಗಳಲ್ಲಿರುವ ಮಾನವ ಸಹಜ ಪ್ರಕೃತಿಯ ಅಭಿವ್ಯಕ್ತಿಯಾಗಿದೆಯೋ ಹೊರತು ಮನ್ಸ ಸಮುದಾಯದ ವಿಶಿಷ್ಟ ಅಭಿವ್ಯಕ್ತಿಯಲ್ಲ. ಆದರೆ ಇಂತಹ ಸಾಮಾನ್ಯ ಕಥೆ ಮತ್ತು ಐತಿಹ್ಯಗಳನ್ನು ಕೆಲವೊಮ್ಮೆ ಸಮುದಾಯಕ್ಕೆ ಅನ್ವಯಿಸುವುದನ್ನು ಅಧ್ಯಯನ ಯೋಗ್ಯವಾಗಿದೆ.

ಉದಾಹರಣೆಗೆ ಮೇಲಿನ ಕಥೆಯನ್ನು ಮನ್ಸರ ಹದಿನಾರು ಬಳ್ಳಿಗಳಲ್ಲಿ ಬಾಕುಡಣ್ಣನ ಬಳಿಯವರು ಹೀಗೆ ಮಾಡುತ್ತಿದ್ದರು ಎಂದು ಹೇಳುತ್ತಾರೆ. ಇದು ಸಾರ್ವತ್ರಿಕವಾದ ಕಥೆ-ಐತಿಹ್ಯವಾದರೂ ಒಂದು ಬಳಿಗೆ ಇದನ್ನು ಅನ್ವಯಗೊಳಿಸಿ ಸಮುದಾಯಕ್ಕೆ ಸಂಬಂಧಿಸಿದಂತೆ ಮಾರ್ಪಡಿಸುವುದನ್ನು ಇಲ್ಲಿ ಕಾಣಬಹುದಾಗಿದೆ. ಆದರೆ ಈ ರೀತಯ ಅನ್ವಯಗಳು ತೀರಾ ಕಡಿಮೆ.

ಮಾತೃಮೂಲ ವ್ಯವಸ್ಥೆಯಲ್ಲಿ ಸ್ತ್ರೀಗೆ ಆಸ್ತಿಯ ಹಕ್ಕು ಇರುವುದರಿಂದ ಅವರಲ್ಲಿ ಸ್ವಾಭಿಮಾನ, ಮೇಲಾಟ ಅಧಿಕಾರಕ್ಕಾಗಿ ಸ್ಪರ್ಧೆ ಇತ್ಯಾದಿಗಳು ಸಹಜವಾಗಿದೆ. ಈ ದೃಷ್ಟಿಯಿಂದ ಇಂಥ ಕಥೆಗಳು ಹುಟ್ಟಿಕೊಂಡಿರಬೇಕು. ಒಂದು ಬಳಿಯ ಸ್ವಾಭಿಮಾನಿ ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಈ ಸಂಘರ್ಷ ಕಂಡು ಬಂದಿರಬೇಕು. ಇದರಿಂದ ಒಂದು ಬಳಿಗೆ ಇದನ್ನು ಅನ್ವಯಿಸಿರಬೇಕು. ಅವಿಭಕ್ತ ಕುಟುಂಬವಿದ್ದಾಗ ತುಳುನಾಡಿನ ಮಹಿಳೆಯರಲ್ಲಿ ಸಾರ್ವತ್ರಿಕವಾಗಿ ಕಾಣುತ್ತಿದ್ದ ಸಂವೇದನೆ- ಸಂಘರ್ಷಗಳು ಮನ್ಸ ಮಹಿಳೆಯರಲ್ಲೂ ಕಂಡು ಬಂದಿದೆ. ಇದನ್ನು ಈ ಕಥೆ ಪ್ರತಿನಿಧಿಸುತ್ತದೆ.

ಆದರೆ ಪ್ರತಿ ಜಾತಿ-ಸಮುದಾಯದ ಶೌರ್ಯ-ಸ್ವಾಭಿಮಾನವನ್ನು ಸಾರುವ ವೀರರ ಕಥೆಗಳು ಜನಪದ ಕಾವ್ಯವಾಗಿ ಬೆಳೆದುಬಂದಿದೆ. ಅತಿಮಾನುಷ ವೀರರು ತಮ್ಮ ಶೌರ್ಯ – ಸಾಹಸಗಳನ್ನು  ಪ್ರದರ್ಶಿಸಿ ಅಕಾಲ ಮರಣಕ್ಕೆ ತುತ್ತಾಗಿ ಪೂಜನೀಯರಾಗುವುದು ಈ ಜನಪದ ಮಹಾಕಾವ್ಯಗಳ ವಸ್ತುವಾಗಿದೆ. ಉದಾಹರಣೆಗೆ ಬಿಲ್ಲವ ಜಾತಿಗೆ ಸಂಬಂಧಿಸಿದಂತೆ ಕೋಟಿ-ಚೆನ್ನಯರ ಪಾಡ್ದನ, ಬಂಟ ಜನಾಂಗಕ್ಕೆ ಸಂಬಂಧಿಸಿದಂತೆ ಸಿರಿ ಪಾಡ್ದನ, ಮುಗೇರರಿಗೆ ಸಂಬಂಧಿಸಿದಂತೆ ಮುಗೇರರ ಪಾಡ್ದನ ಹಾಗೆಯೇ ಮನ್ಸರಿಗೆ ಸಂಬಂಧಿಸಿದಂತೆ ಕಾನದ-ಕಟದ ಪಾಡ್ದನವು ಜನಾಂಗದ ಚರಿತ್ರೆಯನ್ನು ಹೇಳುವ ಮಹಾಕಾವ್ಯವಾಗಿದೆ. ಈ ಎಲ್ಲಾ ಮಹಾಕಾವ್ಯಗಳಲ್ಲಿ ಹಿಂದೆ ಚರ್ಚಿಸಿರುವಂತೆ ಮಹಿಳೆಯರು ಪ್ರಧಾನ ಪಾತ್ರ ವಹಿಸುತ್ತಾರೆ. ಮನ್ಸರಿಗೆ ಸಂಬಂಧಿಸಿದ ಕಾನದ-ಕಾಟದ ಮಹಾಕಾವ್ಯದಲ್ಲಿ ದೇಯಿಬೈದತಿ, ಬೊಮ್ಮಿ, ಬೊಲ್ಲೆ ಈ ರೀತಿಯ ಪಾತ್ರವನ್ನು ವಹಿಸುವುದನ್ನು ಕಾಣಬಹುದಾಗಿದೆ.

ಜನಾಂಗದ ಜೀವನಾರ್ತದ ಆಚರಣೆಯ ಚಟುವಟಿಕೆಗಳನ್ನು ನಿರೂಪಿಸುವ ವಿಶೇಷ ಹಾಡುಗಳಿವೆ. ಜನಾಂಗದ ವಿಶಿಷ್ಟ ಆಚರಣೆಗಳನ್ನು ಕಲಾತ್ಮಕವಾಗಿ ಈ ಹಾಡುಗಳಲ್ಲಿ ನಿರೂಪಿಸಲಾಗಿದೆ. ಆಚರಣೆಗಳನ್ನು ಮೌಖಿಕವಾಗಿ ಹಿಡಿದಿಟ್ಟುಕೊಂಡು ಪರಂಪರೆಯಿಂದ ಪರಂಪರೆಗೆ ಸಾಗಿಸುವುದು ಈ ಮೌಖಿಕ ಸಾಹಿತ್ಯದ ಉದ್ದೇಶವಾಗಿದೆ. “ಚುಮದೀರನ್ನೇ” ಪಾಡ್ದನವನ್ನು ಇದಕ್ಕೆ ಉದಾಹರಿಸಬಹುದಾಗಿದೆ.

ಲೇ… …. ಲೇ… …. ಲೇ… ಲೇ… …. ಲೇ… …. ಲೇ…
ಚುವದೀರನ್ನೇ ಪೇರ್ ಪರ್ ಚುವದೀರನ್ನೇ ಹಾಲು ಕುಡಿ
ಚುವದಿರನ್ನೇ… … ಚುವದಿರನ್ನ … …
ಚುಮದೀರನ್ನೇ ಮಕೆದ ತಮ್ಮಲೆಗ್ ಚುಮದೀರನ್ನ ಪ್ರೀತಿಯ ಸೋದರಮಾವನಿಗೆ
ಚುಮದೀರನ್ನೇ ಪರ್‌ದ್‌ ಬರ್ಪೆರ್‌ ಆರ್… ಚುಮದೀರನ್ನ ಕುಡಿದು ಬರುತ್ತಾಳೆ ಅವರು
ಲೇ… ಲೇ… ಲೇ… ಚುವದಿರನ್ನೇ ಲೇ… ಲೇ… ಲೇ… ಚುವದಿರನ್ನ
ಚುಮದೀರನ್ನೇ  ಪುನತ್ತ ಮೇಲ್‌ಡ್‌ ಚುಮದೀರನ್ನ ಹೆಣದ ಮೇಲಿನಿಂದ
ಬಾಲೆನ್ ದೆತ್ತ್‌ದೆರ್ ಮಗುವನ್ನು ತೆಗೆಯುತ್ತಾರೆ
ಲೇ… ಲೇ… ಲೇ… ಚುವದಿರನ್ನೇ ಲೇ… ಲೇ… ಲೇ… ಚುವದಿರನ್ನ
ಅಲೆನ ಅಪ್ಪೆನ್, ಅಮ್ಮೆನ್ ಮುಗ್ತ್‌ದೆರ್ ಅವಳ ಅಪ್ಪ – ಅಮ್ಮನನ್ನು ಕರೆದಿದ್ದಾರೆ
ದಿಕ್ಕ್‌ದಾನೆ ಮುಗೀತ್‌ಂದ್‌ಂಡ್‌ ದಿಕ್ಕು ಏನು ಮುಗಿದೆಯೋ
ಮಾಮಿಯರೆನ್ ಲೆಪ್ಪಾವೆರ್ ಅತ್ತೆಯವರನ್ನು ಕರೆಸುತ್ತಾರೆ.
ಲೇ… ಲೇ… ಲೇ… ಚುವದಿರನ್ನೇ ಲೇ… ಲೇ… ಲೇ… ಚುವದಿರನ್ನ
ಆಯೆರೆಡ್ ಕುಕ್ಕುದ ಮರ ಆ ದಿಕ್ಕಿನಲ್ಲಿ ಮಾವಿನ ಮರ
ಲೇ… ಲೇ… ಲೇ… ಚುವದಿರನ್ನೇ ಲೇ… ಲೇ… ಲೇ… ಚುವದಿರನ್ನ
ಈಯೆರೆಡ್ ಪೆಲತ್ತ ಮರ ಈ ದಿಕ್ಕಿನಲ್ಲಿ ಹಲಸಿನ ಮರ
ಲೇ… ಲೇ… ಲೇ… ಚುವದಿರನ್ನೇ ಲೇ… ಲೇ… ಲೇ… ಚುವದಿರನ್ನ
ಮರಕ್ಕ್ ಗಡಿ ದೀಪಾದೆರ್ ಮರಕ್ಕೆ ಕೊಡಲಿ ಹಾಕಿಸಿದ್ದಾರೆ
ಲೇ… ಲೇ… ಲೇ… ಚುವದಿರನ್ನೇ ಲೇ… ಲೇ… ಲೇ… ಚುವದಿರನ್ನ
ಚುವದಿರನ್ನೇ ಚುವದಿರನ್ನ
ಪೇರ್‌ಗ್‌ಪೆತ್ತ್ ದೇರ್‌ದೆರ್ ಹಾಲಿಗೆ ಹಸುವನ್ನು ತರಿಸಿದ್ದಾರೆ
ಮೊಕೆದ ತಮ್ಮಲೆನೇ ಪ್ರೀತಿಯ ಸೋದರಮಾವ
ದಿಕ್ಕ್ ನಿಕ್ಕ್ ಮುತ್ತುಂಡೇ ಮಗಾ ದಿಕ್ಕು ನಿನಗೆ ಮುಗಿಯಿತೇ ಮಗಾ
ಅಪ್ಪೆಲಾ ಅಮ್ಮೆಲಾ ಸೈದೆರ್ ಅಪ್ಪನೂ ಅಮ್ಮನೂ ಸತ್ತಿದ್ದಾರೆ.
ಚುವದಿರನ್ನೇ ಚುವದಿರನ್ನ
ಗಿಂಡೆ ಬತ್ತ್ ಪೊತ್ತಾದೆರ್ ಗಿಂಡೆ ಬಂದು ಹೊತ್ತಿಸಿದರು
ಪೇರ್ ಬೆಚ್ಚ ಮಲ್ತ್‌ದೆರ್ ಹಾಲು ಬಿಸಿ ಮಾಡಿದ್ದಾರೆ
ಪಿಂಗಾಣಿಗ್‌ಮೈತ್‌ದೆರ್ ಪಿಂಗಾಣಿಗೆ ಹಾಕಿದ್ದಾರೆ
ಚುವದಿರನ್ನೇ ಚುವದಿರನ್ನ
ಪಟ್ಟೆನ್ ಪರಿತ್‌ದೆರ್ ಪಟ್ಟೆಯನ್ನು ಹರಿದಿದ್ದಾರೆ
ಕಿನಿ ಕಿನಿ ಬಿರೆಲೆಗ್ ಚಿಕ್ಕ ಚಿಕ್ಕ ಬೆರಳನ್ನು
ಚುವದಿರನ್ನೇ ಚುವದಿರನ್ನ
ಪೇರ್‌ಗ್ ಕಂತಾದೆರ್ ಹಾಲಿಗೆ ಮುಳುಗಿಸಿದ್ದಾರೆ
ಮೋಕೆದ ತಮ್ಮಲೆ ಪ್ರೀತಿಯ ಸೋದರಮಾವ
ಚುವದಿರನ್ನೇ ಚುವದಿರನ್ನ
ಬಾಲೆನ್ ದೆತ್ತ್‌ದ್‌ ಮಗುವನ್ನು ಎತ್ತಿ
ತಿಗಲೆಡ್ ಪಾಡೊಂಡೆರ್ ಎದೆ ಮೇಲೆ ಮಲಗಿಸಿದ್ದಾರೆ
ಚುವದಿರನ್ನೇ ಚುವದಿರನ್ನ
ಪೇರ್‌ಗೇ ಮಿರೇಂದ್‌ ಹಾಲಿಗೆ ಮೊಲೆ ಎಂದು
ಭಾಮೆಂದೆರ್ ಉಣಿಸಿದ್ದಾರೆ
ಮೋಕೆದ ತಮ್ಮಲೆ ಪ್ರೀತಿಯ ಸೋದರಮಾವ
ಚುವದಿರನ್ನೇ ಚುವದಿರನ್ನ
ಬಾಲೆಗ್ ಮಿರೆ ಬಾಮೆಂದರ್ ಮಗುವಿಗೆ ಮೊಲೆ ಉಣಿಸಿದ್ದಾರೆ
ಮೋಕೆದ ತಮ್ಮಲೆ ಪ್ರೀತಿಯ ಸೋದರಮಾವ
ಚುವದಿರನ್ನೇ ಚುವದಿರನ್ನ
ಅಮ್ಮೆ ಸೈತ್ ಆಜಿ ತಿಂಗೊಲ್ ಅಪ್ಪ ಸತ್ತು ಆರು ತಿಂಗಳು
ಅಪ್ಪೆ ಸೈತ್ ಮೂಜಿ ತಿಂಗೊಲ್ ಅಮ್ಮ ಸತ್ತು ಮೂರು ತಿಂಗಳು
ಚುವದಿರನ್ನೇ ಚುವದಿರನ್ನ
ಉಂದು ಒಂಜಿ ಬಾಲೆನ್ ಈ ಒಂದು ಮಗುವನ್ನು
ಪೊರ್ಲ್ದ್ ಸಾಂಕೊಂಡ್ಂದ್ ಪಂಡೆರ್ ಚೆನ್ನಾಗಿ ಸಾಕಬೇಕೆಂದು ಹೇಳಿದರು
ಮೋಕೆದ ತಮ್ಮಲೆ ಪ್ರೀತಿಯ ಸೋದರಮಾವ
ಚುವದಿರನ್ನೇ ಚುವದಿರನ್ನ
ಪೆತ್ತ ನನ ಬಚ್ಚುನಗ ದನ ಇನ್ನು ಬರಡಾಗುವಾದ (ಬತ್ತುವಾಗ)
ಎರ್ಮ್ಮೆನ್ ದೇರ್‌ದೇರ್ ಮ್ಮೆಯನ್ನು ತರಿಸಿದ್ದಾರೆ
ಎರ್ಮೆ ನನ ಬಚ್ಚುನಗ ಎಮ್ಮೆಯನ್ನು ಇನ್ನು ಬರಡಾಗುವಾಗ (ಬತ್ತುವಾಗ)
ಪರತ್ ಆಲ್ ಬರ್ಪೊಲಾಲ್ ಹರಿದು ಅವಳು ಬರುತ್ತಾಳೆ
ಚುವದಿರನ್ನೇ ಚುವದಿರನ್ನ
ಪರತೊಂದ್ ಆಲ್ ಬರ್ಪೊಲ್ ಹರಿದುಕೊಂಡು ಅವಳು ಬರುತ್ತಾಳೆ
ಮೋನೆ ತೂದು ತೆಲಿಪುವೊಲ್ ಮುಖ ನೋಡಿ ನಗುತ್ತಾಳೆ
ಚುವದಿರನ್ನೇ ಚುವದಿರನ್ನ
ಎರಮೆ ನನ ಬಚ್ಚುನಗಾ ಎಮ್ಮೆ ಇನ್ನು ಬತ್ತುವಾಗ
ಏಡೆನ್ ದೇರ್ದೆರ್ ಆಡನ್ನು ತಂದಿದ್ದಾರೆ
ಚುವದಿರನ್ನೇ ಚುವದಿರನ್ನ
ಏಡ್ ನನ ಬಚ್ಚುನಮ ಆಡು ಇನ್ನು ಬತ್ತುವಾಗ
ಮಟ ಮಟ ನಡಪೊಲ್ ಆಲ್ ಮಟ ಮಟ ನಡೆಯುತ್ತಾಳೆ ಅವಳು
ಚುವದಿರನ್ನೇ ಚುವದಿರನ್ನ
ಪೋದ್ ನನ ಕುಲ್ಲುದೆರ್ ಮೋಕೆದ ತಮ್ಮಲೆ ಸೋದರಮಾವ ಅಲ್ಲಿಗೆ ಹೋಗಿ ಕುಳಿತಿದ್ದಾರೆ
ಚುವದಿರನ್ನೇ ಚುವದಿರನ್ನ
ಪೋದ್ ನನ ಕುಲ್ಲುದೆರ್ ಮೋಕೆದ ತಮ್ಮಲೆ ಸೋದರಮಾವ ಅಲ್ಲಿಗೆ ಹೋಗಿ ಕುಳಿತಿದ್ದಾರೆ
ಚುವದಿರನ್ನೇ ಚುವದಿರನ್ನ
ಉಜ್ಜೆಲ್‌ಡ್ ಪೋದ್ ನನ ಕುಲ್ಲುದೆರ್ ಉಯ್ಯಾಲೆಯಲ್ಲಿ ಹೋಗಿ ಇನ್ನು ಕುಳಿತಿದ್ದಾರೆ
ಚುವದಿರನ್ನೇ ಚುವದಿರನ್ನ
ಬಾಲೆದ ಪೊರ್ಲಾಗ್ ಮಗುವಿನ ಅಂದಕ್ಕೆ
ಕಾರ್‌ದ್‌ಪೊರ್ಲು ತೂದ್ ಕಾಲಿನ ಅಂದ ನೋಡಿ
ಚುವದಿರನ್ನೇ ಚುವದಿರನ್ನ
ಮಟ ಮಟ ನಡಪುನಗ ಮಟ ಮಟ ನಡೆಯುವಾಗ
ತಿರಿಗೆಜ್ಜೆ ಚೈನ್ ಅಲೆಗ್ ತಿರಿಗೆಜ್ಜೆ ಚೈನು ಅವಳಿಗೆ
ಚುವದಿರನ್ನೇ ಚುವದಿರನ್ನ
ಕೈತ ಪೊರ್ಲು ತೂದ್ ಕೈಯ ಅಂದ ನೋಡಿ
ಕರಿಯ ಕಾಜಿ ದೀಪಾದೆರ್ ಕಪ್ಪು ಬಳೆ ತೊಡಿಸಿದ್ದಾರೆ
ಚುವದಿರನ್ನೇ ಚುವದಿರನ್ನ
ಕಂಟೆಲ್ಲ ಪೊರ್ಲ್‌ಗ್ ಕುತ್ತಿಗೆಯ ಅಂದಕ್ಕೆ
ಪಿಲಿ – ಉಗುರು ಸರಪಳಿ ಅಲೆಗ್ ಹುಲಿ- ಉಗುರು ಸರಪಳಿ ಅವಳಿಗೆ
ಚುವದಿರನ್ನೇ ಚುವದಿರನ್ನ
ಸೊಂಟದ ಪೊರ್ಲ್‌ಗ್ ಸೊಂಟದ ಅಂದಕ್ಕೆ
ಡಾಬು ಪೊರ್ಲ್‌‌ಗ್ ಡಾಬು ತೊಡಿಸಿದ್ದಾರೆ
ಚುವದಿರನ್ನೇ ಚುವದಿರನ್ನ
ತರೆತ್ತ ಪೊರ್ಲ್‌‌ಗ್ ತಲೆಯ ಅಂದಕ್ಕೆ
ನೆತ್ತೆ ಬಗತಲೆ ಮಲ್ಪಾದೆರ್ ನೆತ್ತಿ ಬೈತೆಲೆ ಮಾಡಿಸಿದ್ದಾರೆ
ಚುವದಿರನ್ನೇ ಚುವದಿರನ್ನ
ಈತ್ ಮಾತ ಆನಾಗ ಇಷ್ಟೆಲ್ಲಾ ಆಗುವಾಗ
ಪೊಣ್ಣು ಆಲ್ ಪೋತೋಲ್ ಆಲ್ ಹುಡುಗಿ ಅವಳು ಹೋಗಿದ್ದಾಳೆ
ಪೊಣ್ಣು ಪೋದು ಪೊಂಜೊವ್ ಆಪಲ್ ಹುಡುಗಿ ಹೋಗಿ ಹೆಂಗಸಾಗಿದ್ದಾಳೆ
ಚುವದಿರನ್ನೇ ಚುವದಿರನ್ನ
ಬೇಲೆ ನನ ಕಲ್ಪೊಡೇ ಮಗ ಕೆಲಸ ಇನ್ನು ಕಲಿಯಬೇಕೇ ಮಗಾ
ಬೇಲೆ ನೀ ಕಲ್ಪೊಡೇ ಮಗ ಕೆಲಸ ನೀ ಕಲಿಯಬೇಕೇ ಮಗಾ
ಈಯೆ ಈ ಅರಮನೆ ತೊವೊಡೇ ಮಗ ನೀನೇ ಇನ್ನು ಈ ಅರಮನೆ ನೋಡಬೇಕೇ ಮಗಾ
ಚುವದಿರನ್ನೇ ಚುವದಿರನ್ನ
ಬೇಲೆ ನನ ಕಲ್ಪೊವೊಲ್ ಕೆಲಸ ಇನ್ನು ಕಲಿಯುತ್ತಾಳೆ
ಪಾತೆರ ಅಲೆಗ್ ಬರ್ಪುಂಡ್ ನೆಂಟಸ್ತಿಕೆ ಅವಳಿಗೆ ಬರುತ್ತದೆ
ಮದಿಮೆ ನಿಕ್ಕ್‌ಲಾ ಆವೊಡೇ ಮಗೆ ಮದುವೆ ನಿನಗೂ ಆಗಬೇಕೇ ಮಗಾ
ಮೋಕೆದ ಮರ್‌ಮಾಲ್ ಪ್ರೀತಿಯ ಸೊಸೆ
ಚುವದಿರನ್ನೇ ಚುವದಿರನ್ನ
ಪಾತೆರ ಬರ್ಪಂಡ್‌ಅಲೆಗ್ ನಂಟಸ್ತಿಕೆ ಬರುತ್ತದೆ ಅವಳಿಗೆ
ಮದಿಮೆ ಮಲ್ಪುವೆರ್ ಅಲೆಗ್ ಮದುವೆ ಮಾಡುತ್ತಾರೆ ಅವಳಿಗೆ
ಮೇಲ್ ಬರಿತ ಅಂಗಾರಗ್ ಪಾತೆರ ಮೇಲ್ ಬರಿ ಅಂಗಾರನಿಗೆ ಮಾತುಕತೆ
ನಿಶ್ಚಯ ಮಲ್ತ್‌ದೆರ್ ನಿಶ್ಚಯ ಮಾಡಿದ್ದಾರೆ
ಚುವದಿರನ್ನೇ ಚುವದಿರನ್ನ
ಬಾಕ್ಕ್ಯಾರ್ ಕೆತ್ತಾದೆರ್ ಕುರುಂಬುದ ಕಂಬ ಬಾಕ್ಯಾರು ಕೆತ್ತಿಸಿ, ಕಬ್ಬಿನ ಕಂಬ
ಬಚ್ಚಿರೆದ ದೊಂಪ ಪಾಡ್‌ಪಾದೆರ್ ವೀಳ್ಯದೆಲೆಯ ಚಪ್ಪರ
ಮೋಕೆದ ತಮ್ಮಾಲೆನೇ ಪ್ರೀತಿಯ ಸೋದರಮಾವ
ಚುವದಿರನ್ನೇ ಚುವದಿರನ್ನ
ಬಚ್ಚಿರೆದ ಪನಿದೊಂಪ ಕರಿಯದೊಂಪ ಮಲ್ಪಾದೆರ್‌ ವೀಳ್ಯದೆಲೆಯ ಹನಿಚಪ್ಪರ, ಕರಿಯ ಚಪ್ಪರ ಮಾಡಿಸಿದ್ದಾರೆ
ಪಿಂಗಾರ್ದ ದಿಡ್ಕೆ ಬೊಲ್ಯ ಮುಚ್ಚಿ ಜಪ್ಪಾದೆರ್ ಹಿಂಗಾರದ ದಿಡಿಕೆ ಬೆಳ್ಳಿಯ ಮುಚ್ಚುಗೆ ಇಳಿಸಿದ್ದಾರೆ
ಉಪ್ಪು -ಉಪ್ಪಡ್ ಪಾಡ್ಪಾದೆರ್ ಉಪ್ಪು- ಉಪ್ಪಿನಕಾಯಿ ಹಾಕಿಸಿದ್ದಾರೆ
ಮೋಕೆದ ತಮ್ಮಲೆನೇ ಪ್ರೀಯ ಸೋದರಮಾವ
ಚುವದಿರನ್ನೇ ಚುವದಿರನ್ನ
ಮದಿಮೆದ ದಿನ ಬತ್ತ್‌ಂಡ್ ಮದುವೆಯ ದಿನ ಬಂತು
ಮೋಕೆದ ತಮ್ಮಲೆನೇ ಪ್ರೀಯ ಸೋದರಮಾವ
ಸಾವಿರ ಬಿರ್ದಂದ್ ಸಾವಿರ ಬಿರುದಿನಲ್ಲಿ
ಚುವದಿರನ್ನೇ ಚುವದಿರನ್ನ
ಅಣ್ಣಾ ದಿಬ್ಬಣ ಬತ್ತ್‌ಂದ್‌ಂಡ್‌ ಅಣ್ಣಾ ದಿಬ್ಬಣ ಬಂತು
ನೀರ್‌ಂದ್ ಕೊರ್ಪಾದೆರ್, ದಿಬ್ಬಣ ಉಲಾಯಿ ನೀರು ಕೊಟ್ಟಿದ್ದಾರೆ, ದಿಬ್ಬಣ ಒಳಗೆ ತಂದರು
ಸಾವಿರ ಬಿರ್ದಂದ್ ಸಾವಿರ ಬಿರುದಿನಲ್ಲಿ
ಚುವದಿರನ್ನೇ ಚುವದಿರನ್ನ
ಪೊಣ್ಣ ಸಿಂಗಾರ ಮಲ್ತೊಂದ್ ಮದುಮಗಳ ಶೃಂಗಾರ ಮಾಡಿಸಿದ್ದಾರೆ
ಸಾವಿರ ಬಿರ್ದಂದ್ ಸಾವಿರ ಬಿರುದಿನಲ್ಲಿ
ಪೂ- ಸೀರೆ ಕೊರ್‌ಪಾದೆರ್ ಹೂ- ಸೀರೆ ಕೊಡಿಸಿದ್ದಾರೆ
ಮದಿಮೆದ ಐತ ಮಲ್ಪಾದೆರ್ ಮದುಮಗಳನ್ನು ಶೃಂಗಾರ ಮಾಡುವಾಗ
ದಿಕ್ಕ ದಿಕ್ಕ್‌ತೂದು ಬಲ್ಪುವೆರ್ ದಿಕ್ಕು ದಿಕ್ಕು ನೋಡಿ ಅಳುತ್ತಾರೆ
ಮೋಕೆದ ತಮ್ಮಾಲೇ ಚುವದೀರನ್ನೇ ಪ್ರೀತಿಯ ಸೋದರ ಮಾವ
ಈತ್ ಎಲ್ಯಾ ಬಾಲೆನ್ ಈತ್ ಮುಟ್ಟು ಸಾಂಕಿನ ಇಷ್ಟು ಚಿಕ್ಕ ಮಗುವನ್ನು ಇಷ್ಟವರೆಗೆ ಸಾಕಿದೆ
ಯಾನ್ …. ಚುವದಿರನ್ನೇ ನಾನು ….ಚುವದಿರನ್ನ
ಮದಿಮಲೆನ್ ಐದ ಮಲ್ಪುನಗ ಅಡ್ಡ- ನೀಟ ಮದುಮಗಳನ್ನು ಶೃಂಗಾರ ಮಾಡುವಾಗ ಉದ್ದ-ಅಡ್ಡ
ಬೂರುವೊಲ್, ಅಡ್ಡ-ನೀಟ ಬೂರುನಗ ಬೀಳುತ್ತಾಳೆ, ಉದ್ದ ಅಡ್ಡ ಬೀಳುವಾಗ
ದಾನೆ ನಿಕ್ಕ್ ಆಂಡ್ ಮಗ ಏನಾಯಿತು ನಿನಗೆ ಮಗಾ ಏನಾಯಿತು
ದನೆಲಾ ಅಂಡ್‌ದೆರ್ ಮೋಕೆದ ತಮ್ಮಲೆನೇ ಏನಾಯಿತು ಎಂದರು ಪ್ರೀತಿಯ ಮಾವ
ಈತ್ ಎಲ್ಯ ಬಾಲೆನ್ ತೂದ್ ಸಾಂಕ್ಯನೇ ಯಾನ್ ಇಷ್ಟು ಚಿಕ್ಕ ಮಗುವನ್ನು ನೋಡಿ ನಾನು ಸಾಕಿದ್ದೇನೆ
ಅಡ್ಡ ಬೂರ‍್ದು ದುಃಖ ಬಲ್ಪುವೆರ್ ಅಡ್ಡಬಿದ್ದು ದುಃಖಿಸಿ ರಂಬನೆ ಅಳುತ್ತಾರೆ
ಉಲ್ಲಾಯ ಯಾನ್ ತರ್ಪಾವೊಡ್ ಒಡೆಯ ನಾನು ತರಿಸಬೇಕು
ಭಾರೀ ಯಾನ್ ಕೊನಾವೊಡ್ ಭಾರೀ ನಾನು ತರಬೇಕು
ತೂನಾಗ ತೋಜಿದ್ ಬರ್ಪಾಲೆ ಅಲೆಗ್ ನೋಡುವಾಗ ಅವಳಿಗೆ ಕಾಣಿಸಿಕೊಳ್ಳುತ್ತಾರೆ
ನಾರಾಯಣ ದೇವೆರ್ ತೋಜಿದ್ ಬರ್ಪೆರ್ ನಾರಾಯಣ ದೇವರು ಕಾಣಿಸಿಕೊಳ್ಳುತ್ತಾರೆ
ಚುವದಿರನ್ನೇ ಚುವದಿರನ್ನ
ಇನ್ ಒಂಜಿ ತೊಯೆರ್ ಇನ್ನು ಒಂದು ನೋಡಿದರು
ಅಂಗಣದ ಚಾಕಿರಿ ತೂವೊಡ್ ಅಂಗಣದ ಚಾಕಿರಿ ನೋಡಬೇಕು
ನಡತ್ ಬತ್ತ್‌ದೆರ್ ನಡೆದುಕೊಂಡು ಬರುತ್ತಾರೆ
ಇನ್ನ ಒಂಜಿ ಕಾಲೊಡ್ ಇನ್ನು ಒಂದು ಕಾಲದಲ್ಲಿ
ಬುಡ್ದ್‌ಪಾಡ್ಯಾನಾ ಪಂದ್ ಬಿಟ್ಟು ಹಾಕಿದೆಯಾ ಎಂದು
ತೋಜಿದ್ ಬರ್ಪಾದೆರ್ ಅಲೆಗ್ ತೋರಿಸಿಕೊಟ್ಟರು ಅವಳಿಗೆ
ದಾನೆ ಪರಕೇಂದ್ ಕೇಂಡೆರ್ ಏನು ಹರಕೆ ಎಂದಳು
ತಾರೆದ ಪರಕೆ ಅಂದಳ್ ತೆಂಗಿನ ಹರಕೆ ಎಂಳು
ಲಾದ್ ಪರಕೆ ಕೊನೊಂದು ಪರಕೆ ನನ ಬೂಟಾದೊಲ್ ಹರಕೆಯನ್ನು ಕೊಂಡುಹೋಗಿ ಹರಕೆಯನ್ನು ತೀರಿಸಿದಳು
ಚುವದಿರನ್ನೇ ಚುವದಿರನ್ನ
ಇನ್ನ ನಂದಳಿಕೆದ ದೇವೆರ್ ನಂದಳಿಕೆಯ ದೇವರಿಗೆ
ಚುವದಿರನ್ನೇ ಚುವದಿರನ್ನ
ಈರ್ ಒಂಜಿ ಬುಡ್ದ್‌ಪಾಡ್ಯರೆ ಅಂದೆರ್ ನೀವು ಒಂದು ಬಿಟ್ಟು ಹಾಕಿದಿರಾ ಎಂದರು
ನಂದಳಿಕೆದ ದೇವೆರೆಗ್ ದಾನೆಂದ್ ಪರಕೆ ಪಂಡಾಳ್ ನಂದಳಿಕೆಯ ದೇವರಿಗೆ ಹರಕೆ ಏನೆಂದು ಕೇಳಿದಳು
ಚುವದಿರನ್ನೇ ಚುವದಿರನ್ನ
ಬಂಗಾರ್ದ ತೊಟ್ಟಿಲ್ ಬೊಳ್ಳಿದ ಬಾಲೆಂದರ್ ಬಂಗಾರದ ತೊಟ್ಟಿಲು, ಬೆಳ್ಳಿಯ ಮಗು ಎಂದರು
ಪುಂಡಿ ಪಣವು ಪಂಡೆರ್ ಮುಷ್ಠಿ ಹಣ ಎಂದು
ಪುಂಡೀಪಣವುಲ ಚುವದಿರನ್ನೇ ಮುಷ್ಠಿ ಹಣ ಕೂಡಾ ಚುವದಿರನ್ನ
ರಾರ್ ತಿದ್ದೊಡ್ ಲಾದ್ ಪರಕೆ ಜೋಂಡಿಂದ್‌ಲ್‌ ನೀವು ತೀರ್ಸಬೇಕು ಹರಕೆ ಜೋಡಿಸಿದಳು
ಪರಕೆ ಕೊಂಡ್ ಪಾಡ್ಯಳ್ ಹರಕೆ ಕೊಂಡು ಹೋಗಿ ಸಲ್ಲಿಸಿದಳು
ಅಡ್ಡ ನನ ಬರೊಂದಲ್ ಅಡ್ಡ ಇನ್ನು ಬಿದ್ದಿದ್ದಾಳೆ
ಚುವದಿರನ್ನೇ ಚುವದಿರನ್ನ
ಗಂಧ ಪ್ರಸಾದ ದೆತೊನ್ಯೊಲ್ ಗಂಧ ಪ್ರಸಾದ ತೆಗೆದುಕೊಂಡಳು
ಪಿರ ನನ ಬತ್ ವಣಸುಗ್ ಹಿಂದೆ ಬಂದು ಊಟಕ್ಕೆ
ನೀರ್ ಕೊರ್ಪಾದೆರ್ ಧಾರೆಗೆ ಕುಳ್ಳಿರಿಸಿದ್ದಾರೆ
ಮೋಕೆದ್ ತಮ್ಮಲೇ ಪ್ರೀತಿಯ ಸೋದರಮಾವ
ಪಕಲೊಡ್ ದೆತ್ತೂಂಡೆರ್ ಹವಳದಲ್ಲಿ ತೆಗೆದುಕೊಂಡರು
ಮುತ್ತುಡ್ ಧಾರೆಂದೆರ್ ಮುತ್ತಿನಲ್ಲಿ ಧಾರೆಯೆರೆದರು
ಚುವದಿರನ್ನೇ ಚುವದಿರನ್ನ
ಮದುಮೆ ನನ ಅಂಡ್‌ಂದ್‌ ಮದುವೆ ಇನ್ನು ಆಯ್ತೆಂದು
ಚುವದಿರನ್ನೇ ಚುವದಿರನ್ನ
ಧಾರೆಯ ಪೊರ್ಲು ತೊಪೆರ್ ಧಾರೆಯ ಚಂದ ನೋಡುತ್ತಾರೆ
ಚುವದಿರನ್ನೇ ಚುವದಿರನ್ನ
ದಂಡಿಗೆಡ್ ತರ್ಕ್ದ್‌ಮದಿಮಲೆನ್ ಕುಲ್ಲಾದೆರ್ ದಂಡಿಗೆಯಲ್ಲಿ ತಬ್ಬಿಕೊಂಡು ಮದುಮಗಳನ್ನು ಕುಳ್ಳಿರಿಸಿದ್ದಾರೆ
ಚುವದಿರನ್ನೇ ಚುವದಿರನ್ನ
ಸಾವಿರ ಬಿರ್ದಾಡ್ ಪೊಣ್ಣನ್ ಒಚ್ಚಿದ್ ಕೊರ್ಪೆರ್ ಸಾವಿರ ಬಿರುದಿನಲೊ ಹೆಣ್ಣನ್ನು ಒಪ್ಪಿಸಿ ಕೊಡುತ್ತಾರೆ
ಚುವದಿರನ್ನೇ ಚುವದಿರನ್ನ
ಒಂಜಿ ಇಲ್ಲಡ್ ಒರಿಯೆ ಪಂದ್ ಒಂದು ಮನೆಯಲ್ಲಿ ಒಬ್ನೇ ಎಂದು
ದುಃಖಿ ದುಃಖಿ ಬುಲುವೆರ್ ದುಃಖಿಸಿ ದುಃಖಿಸಿ ಅಳುತ್ತಾರೆ
ಈತ್ ಎಲ್ಯ ಬಾಲೆನ್ ಯಾನ್ ತೂವೊಂದ್ ಇಷ್ಟು ಚಿಕ್ಕ ಮಗುವನ್ನು ನಾನು ನೋಡಿಕೊಂಡು
ಈತ್ ನೆಟ್ಟ ಸಾಂಕ್ಯ ಮಗ ಇಷ್ಟರವರೆಗೆ ಸಾಕಿದ್ದೇನೆ ಮಗಾ
ಚುವದಿರನ್ನೇ ಚುವದಿರನ್ನ

ಪಾಡ್ದನ ಹೇಳಿದವರ ಹೆಸರು : ಶ್ರೀಮತಿ ಮೋಂಟು, ದೇವರಾಜ ಅರಸು ನಗರ, ಪೆಂಜಾರು, ಮೂಡಬಿದಿರೆ, ಮಂಗಳೂರು ತಾಲೂಕು

ಪ್ರಾಯ: ಸುಮಾರು ೭೦ ವರ್ಷ, ವೃತ್ತಿ: ಸೂಪಗಿತ್ತಿ, ಕೃಷಿ ಕೆಲಸ

ಈ ಪಾಡ್ದನವು ಸಾವಿನೊಂದಿಗೆ ಆರಂಭವಾಗಿ, ಅನಾಥ ಮಗುವೊಂದನ್ನು ಮಾವನು ಪಾಲನೆ- ಪೋಷಣೆ ಮಾಡಿ, ಮದುವೆ ಮಾಡಿಸುವ ವೃತ್ತಾಂತವಿದೆ. ಪಾಡ್ದನದಲ್ಲಿ ಸಾವು, ಮದುವೆ ಆಚರಣೆಗಳ ವಿವರಗಳಿವೆ.

ಕಾನದ ಕಟದರಲ್ಲಿಯ ಬೊಲ್ಲೆಯ ಐತಿಹ್ಯದಂತೆ “ಚುವ್ವದೀರನ್ನೇ” ಪಾಡ್ದನದಲ್ಲೂ ಅನಾಥ ಮಗುವನ್ನು ಸಾಕುವ ಮಾನವೀಯ ಸನ್ನಿವೇಶವಿದೆ. ಈ ಹಾಡು, ತುಳುನಾಡಿನ ಅವಿಭಕ್ತ ಕುಟುಂಬದ ವ್ಯವಸ್ಥೆಯಲ್ಲಿ ಮಹತ್ವದ ಧನಾತ್ಮಕ ಅಂಶವೊಂದನ್ನು ಅಭಿವ್ಯಕ್ತಿಗೊಳಿಸುತ್ತದೆ. ಪಾಲಕರನ್ನು ಕಳೆದುಕೊಂಡು ಮಗು ಅನಾಥವಾದರೂ ಅದನ್ನು ಮಾವ ತನ್ನ ಮಗುವಿನಂತೆ ಸಾಕುತ್ತಾನೆ. ತುಳುನಾಡಿನಲ್ಲಿ ಬ್ರಾಹ್ಮಣೇತರ ಜಾತಿಗಳಲ್ಲಿ ಮಾವನಿಗೆ ಮಹತ್ವದ ಸ್ಥಾನವಿದೆ. ಅವನು ತಂದೆಗೆ ಸಮಾನ. ಅವನನ್ನು “ತಮೇರಿ” ಎಂದರೆ ರಕ್ಷಕ ಎಂದು ಕರೆಯಲಾಗುತ್ತದೆ. ತನ್ನ ಅಕ್ಕ ತಂಗಿಯ ಮಕ್ಕಳ ಪಾಲನೆಯ ಜವಾಬ್ದಾರಿ ಅವನದು. ಹೆಣ್ಣುಮಗಳನ್ನು ಮದುವೆ ಮಾಡಿ ಕೊಡುವವರೆಗೂ ಅವನ ಜವಾಬ್ದಾರಿಯಿದೆ. ಅದನ್ನು ಅವನು ಪಾಲಿಸಲೇಬೇಕೆಂಬ ಸಾಮಾಜಿಕ ಕಟ್ಟಳೆಯಿದೆ. ಮನ್ಸರಲ್ಲೂ ಇದು ಪ್ರಚಲಿತವಿರುವುದು ಹಾಡಿನಲ್ಲಿ ವ್ಯಕ್ತವಾಗುತ್ತದೆ. ತುಳುನಾಡಿನ ಹೆಣ್ಣು ಮಕ್ಕಳ ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಮಾವ-ಸೊಸೆಯರ ಈ ಬಾಂಧವ್ಯ ಅನನ್ಯವಾದುದು. ಸಾಮಾಜಿಕ ವ್ಯವಸ್ಥೆಯ ಅತ್ಯಂತ ಧನಾತ್ಮಕ ಅಂಶ ಇದಾಗಿದೆ. ಹಾಗೆಯೇ ಮೂಲದ ಪಾಡ್ದನದಲ್ಲಿ ಮನ್ಸರ ಮೂಲಪುರುಷ ಮಾಯಿಲ ದಿಕ್ಕನು ಹೇಗೆ ಮೂಲದವನಾಗಿ ಒಡೆಯರಲ್ಲಿ ಸೇರಿದ ಎಂಬುದನ್ನು ಸೂಚಿಸಲಾಗಿದೆ.

ಉರಲ್‌ಗಳನ್ನು ಗದ್ದೆ ಕೆಲಸ ಮಾಡುವ ಸಂದರ್ಭದಲ್ಲಿ ಹಾಡುತ್ತಾರೆ. ಈ ಉರಲ್‌ಗಳು ಎಲ್ಲಾ ವರ್ಷದ ಜನರಲ್ಲೂ ಜನಪ್ರಿಯವಾಗಿದೆ. ಮನ್ಸ ಸಮುದಾಯದ ಮಹಿಳೆಯರಲ್ಲೂ ಈ ಉರಲ್‌ಗಳನ್ನು ಸಂಗ್ರಹಿಸಬಹುದು. ಉರಲ್‌ನಲ್ಲಿ ಒಡೆಯರ ಶೋಷಣೆಯ ವಿರುದ್ಧ ಧ್ವನಿಯನ್ನು ಗುರುತಿಸಬಹುದಾಗಿದೆ. ಈ ಉರಲ್‌ಗಳಲ್ಲಿ ಒಡೆಯನ ಮಡದಿ ಮತ್ತು ಒಡೆಯನನ್ನು ಕುರಿತು ಲೇವಡಿಯಿದೆ. ಉಲ್ಲಾಯ ಅಥವಾ ಒಡೆಯನನ್ನು ನೇರವಾಗಿ ಎದುರಿಸಲಾರದ ತುಳಿತಕ್ಕೊಳಗಾದ ವರ್ಷವು ಉರಲ್‌ನಂಥ ಹಾಡಿನ ಮೂಲಕ ಪ್ರತಿಭಟನೆಯ ಧ್ವನಿಯನ್ನು ಹೊರಡಿಸುತ್ತದೆ. ಈ ದೃಷ್ಟಿಯಿಂದ ಇಂಥ ಮೌಖಿಕ ಸಾಹಿತ್ಯವು ಅಧ್ಯಯನಯೋಗ್ಯವಾಗಿದೆ.

ದುಡಿ ತುಳುನಾಡಿನ ಪುರಾತನ ಪ್ರಸಿದ್ಧ ಚರ್ಮವಾದ್ಯವಾಗಿದೆ. ದುಡಿಯನ್ನು ಬಡಿಯುವುದು ಒಂದು ಕಲಾತ್ಮಕವಾದ ಶ್ರಮದಾಯಕ ಕಲೆಯಾಗಿದೆ. ಮನ್ಸರಿಗೂ ದುಡಿಗೂ ಹತ್ತಿರದ ಸಂಬಂಧವಿದೆ. ದುಡಿಯನ್ನು ಅಪ್ಪಿ ಹಿಡಿದು ಬಾಗೋಲು ಎತ್ತಿ ಹಿಡಿದು ನಡು ಹಗ್ಗವನ್ನೆಳೆದು ಬಿಗಿದು ಕೋಲಲ್ಲಿ ಬಡಿದು ಸ್ವರ ಎಬ್ಬಿಸುವುದು ಒಂದು ಕಲೆ. ದುಡಿಯನ್ನು ಹಲವು ಸಂದರ್ಭಗಳಲ್ಲಿ ಬಡಿದು ಕುಣಿಯುತ್ತಾರೆ.

ಆದರೆ ಹೆಂಗಸರು ದುಡಿ ಬಡಿಯುವುದಿಲ್ಲ. ಆದರೆ ಕೆಲವು ಸಂದರ್ಭದಲ್ಲಿ ಕುಣಿತದಲ್ಲಿ ಪಾಲ್ಗೊಳ್ಳುತ್ತಾರೆ. ಮನೆಯ ಮುನ್ನಾ ದಿನ ಮುಹೂರ್ತದ ಸಂದರ್ಭದಲ್ಲಿ ದುಡಿ ಬಡಿತಕ್ಕೆ ತಕ್ಕಂತೆ ಹಾಡನ್ನು ಹಾಡಿ ಕುಣಿಯುತ್ತಾರೆ. ಮದುವೆಯ ಸಂದರ್ಭದಲ್ಲೂ ಗಂಡಿನ ಕಡೆಯವರನ್ನು ಹೀಯಾಳಿಸುತ್ತಾ ಕುಣಿಯುವ ಸಂಪ್ರದಾಯವಿದೆ. ದಿನದ ಶ್ರಮದ ಕೆಲಸದಿಂದ ಪಟ್ಟ ಆಯಾಸವನ್ನು ದುಡಿಯ ಬಡಿತಕ್ಕೆ ಕುಣಿದು ಪರಿಹರಿಸಿಕೊಳ್ಳುತ್ತಾರೆ. ಕಾರಂತರ ಕಾದಂಬರಿ “ಚೋಮನ ದುಡಿ” ಯಲ್ಲಿ ಚೋಮನು ದುಡಿ ಬಡಿದು ತನಗಾಗುವ ಕಷ್ಟ, ಶೋಷಣೆ, ನೋವುಗಳನ್ನು ನುಂಗಿಕೊಳ್ಳುವಂತೆ, ಈ ಜನರು ಬದುಕಿನ ಕಷ್ಟ ಕಾರ್ಪಣ್ಯಗಳನ್ನು ದುಡಿ ಕುಣಿತದ ಮೂಲಕ ವ್ಯಕ್ತಪಡಿಸುತ್ತಾರೆ. ಕುಣಿತದಲ್ಲಿ ಹಂಗಸರು ಭಾಗವಹಿಸುವುದು ವಿಶಿಷ್ಟವಾಗಿದೆ.

ಮನ್ಸರ ವಿಶೇಷವಾದ ಕುಣಿತ ಕರಂಗೋಲು ಕುಣಿತ. ಕರಂಗೋಲು ಕುಣೀತದ ಒಟ್ಟು ಸ್ವರೂಪವನ್ನು ಗಮನಿಸಿದರೆ ಅದು ಕೃಷಿ ಅಥವಾ ಪ್ರಕೃತಿಗೆ ಸಂಬಂಧಿಸಿದ ಆಚರಣೆ ಎಂದು ಕಂಡುಬರುತ್ತದೆ. ತುಳುನಾಡಿನಲ್ಲಿ ಮುಗೇರರು ಮತ್ತು ಮನ್ಸರಲ್ಲಿ ಈ ರೀತಿಯ ಕುಣಿತದ ಆಚರಣೆಗಳಿವೆ. ಆದರೆ ಈ ಕುಣಿತದಲ್ಲಿ ಮಹಿಳೆಯರು ಭಾಗವಹಿಸುವುದು ಕಂಡುಬರುವುದಿಲ್ಲ.