ಪ್ರಸ್ತಾವನೆ  

ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡವನ್ನೊಳಗೊಂಡ ತುಳುನಾಡು ಪ್ರದೇಶವು ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಹೊಂದಿದ ಪ್ರದೇಶವಾಗಿದೆ. ಹಲವು ಜಾತಿ, ಜನಾಂಗಗಳ ವೈವಿಧ್ಯ ಜೀವನಕ್ರಮವನ್ನು ಇಲ್ಲಿ ಕಾಣಬಹುದಾಗಿದೆ. ಅದರಲ್ಲೂ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡಗಳೆಂದು ಗುರುತಿಸಿದೆ. ಬೆಟ್ಟಗುಟ್ಟಗಳಲ್ಲಿ ಅರಣ್ಯ ಉತ್ಪಾದನೆಗಳ ಸಂಗ್ರಹ ಮತ್ತು ಕೃಷಿಯನ್ನು ವೃತ್ತಿಯನ್ನಾಗಿಸಿಕೊಂಡು ಸಾವಿರಾರು ವರ್ಷಗಳಿಂದ ಜೀವನ ನಡೆಸಿಕೊಂಡು ಬಂದಿವೆ. ತಮ್ಮ ಮುಗ್ಧ ಜೀವನಕ್ರಮದಿಂದಾಗಿ ಮೇಲ್ವರ್ಗ ಮತ್ತು ಮೇಲ್ಜಾತಿಗಳ ಶೋಷಣೆಗೆ ಒಳಗಾಗಿವೆ. ಇಂದು ಪ್ರಜಾಪ್ರಭುತ್ವದ ಮೌಲ್ಯಗಳು, ಶಿಕ್ಷಣ, ಮೀಸಲಾತಿ ಇತ್ಯಾದಿಗಳಿಂದ ಸ್ವಲ್ಪ ಮಟ್ಟಿಗೆ ಸ್ವಾವಲಂಬನೆಯ ಜೀವನವನ್ನು ಈ ಸಮುದಾಯಗಳು ನಡೆಸುತ್ತಿವೆ. ಕೊರಗ, ಮಲೆಕುಡಿಯ, ಮರಾಠಿ, ಅಜಲ, ಬೈರ, ಬಾಕುಡ, ಮುಗೇರ, ಮುಂಡಾಲ, ಪಂಬರ, ಪರವ, ನಲಿಕೆ, ಸಮಗಾರ, ತೋಟಿ, ರಾಣಿಯರ್, ಹಸಲ, ಬತ್ತಡ ಹೀಗೆ ವಿವಿಧ ಸಮುದಾಯಗಳನ್ನು ಗುರುತಿಸಬಹುದಾಗಿದೆ.

ರಾಜಕೀಯ ಅಧಿಕಾರವನ್ನು ಪಡೆದು ಸಂಪತ್ತಿನ ಒಡೆಯರಾದ ಮೇಲ್ವರ್ಗ-ಮೇಲ್ಜಾತಿಯವರಿಂದಾಗಿ ಈ ಸಮುದಾಯಗಳು ಶೋಷಣೆಗೆ ಒಳಗಾದರೂ ತಮ್ಮದೇ ಆದ ವಿಶಿಷ್ಟ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಹೊಂದಿದೆ. ತುಳುನಾಡಿನಲ್ಲಿ ಬ್ರಾಹ್ಮಣೇತರರ ಸಂಸ್ಕೃತಿಯಲ್ಲಿ ಕೆಲವು ಸಮಾನ ಅಂಶಗಳಿವೆ. ಮಾತೃಮೂಲ ಆಚರಣೆ, ನಂಬಿಕೆ, ಆಹಾರ ಪದ್ಧತಿ ಇತ್ಯಾದಿಗಳಲ್ಲಿ ಸಮಾನ ಅಂಶಗಳನ್ನು ಗುರುತಿಸಬಹುದಾಗಿದೆ. ಆದರೆ ಈ ಸಮಾನ ಅಂಶಗಳ ನಡುವೆಯೂ ಪ್ರತಿಯೊಂದು ಸಮುದಾಯಗಳೂ ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿವೆ. ಈ ಸಮುದಾಯಗಳ ಸಾಂಸ್ಕೃತಿಕ ವಿವರಗಳನ್ನು ಸಂಗ್ರಹಿಸಿ ವಿಶ್ಲೇಷಿಸುವುದು ಕುತೂಹಲಕಾರಿಯಾಗಿದೆ. ಈ ಸಮುದಾಯಗಳ ಅಭಿವೃದ್ಧಿಯ ದೃಷ್ಟಿಯಿಂದ ಮಾಹಿತಿ ಸಂಗ್ರಹಿಸಿ ಅವುಗಳನ್ನು ವಿಶ್ಲೇಷಿಸುವುದು ಅಗತ್ಯವಾಗಿದೆ. ಆ ಮೂಲಕ ಅವರ ಹಿಂದುಳಿಯುವಿಕೆ, ಶೋಷಣೆಗಳ ಕಾರಣಗಳನ್ನು ಕಂಡುಕೊಳ್ಳಬಹುದಾಗಿದೆ. ಈ ದೃಷ್ಟಿಯಿಂದ ಇಂಥ ಸಮುದಾಯಗಳ ಸಾಂಸ್ಕೃತಿಕ ಅಧ್ಯಯನವು ಮಹತ್ವವನ್ನು ಪಡೆಯುತ್ತದೆ.

ತುಳುನಾಡಿನ ಹಲವು ಬುಡಕಟ್ಟು ಸಮುದಾಯಗಳಲ್ಲಿ ಮನ್ಸರು ಸಮುದಾಯ ಬಹುಮುಖ್ಯವಾಗಿದೆ. ಈಗ ಆದಿದ್ರಾವಿಡರೆಂದು ಗುರುತಿಸಿಕೊಳ್ಳುತ್ತಿರುವ ಈ ಸಮುದಾಯವು ಹಲವು ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಅದರಲ್ಲೂ ಈ ಸಮುದಾಯದಲ್ಲಿ ಮಹಿಳೆಯರಿಗೆ ವಿಶಿಷ್ಟವಾದ ಸ್ಥಾನವಿದೆ. ಸಂಸ್ಕೃತಿಯಲ್ಲಿ ಮಹಿಳೆಗೆ ಸಂಬಂಧಿಸಿದಂತೆ ಹಲವು ನಂಬಿಕೆ, ಆಚರಣೆ-ವಿಧಿ ನಿಷೇಧಗಳಿವೆ. ಈ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸುವುದು ಈ ಲೇಖನದ ಉದ್ದೇಶವಾಗಿದೆ. ಈ ಮೂಲಕ ಸಮುದಾಯದ ಸಂಸ್ಕೃತಿಯಲ್ಲಿ ಮಹಿಳೆಯ ಸ್ಥಾನ, ಎದುರಿಸುತ್ತಿರುವ ಬಿಕ್ಕಟ್ಟು, ಮಹಿಳೆಗಿರುವ ಮಹತ್ವಗಳನ್ನು ಗುರುತಿಸುವುದು ಈ ವಿಶ್ಲೇಷಣೆಯ ಉದ್ದೇಶವಾಗಿದೆ.

ಮನ್ಸರು : ಒಂದು ಪರಿಚಯ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳು ಮತ್ತು ಕಾಸರಗೋಡಿನ ಹಲವೆಡೆ ಮನ್ಸರ ಕುಟುಂಬಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ವರ್ಷಗಳಿಂದ ಬದುಕುತ್ತಿರುವ ಬುಡಕಟ್ಟು ಸಮುದಾಯಗಳಲ್ಲಿ ಮನ್ಸರದು ಪ್ರಮುಖ ಸಮುದಾಯವಾಗಿದೆ. ಇವರು ಇಲ್ಲಿನ ಮೂಲನಿವಾಸಿಗಳಿರಬೇಕೆಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ಸರ್ಕಾರವು ಅಧಿಕೃತವಾಗಿ ಮನ್ಸರನ್ನು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿಸಿವೆ. ೧೯ನೇ ಶತಮಾನದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸ್ಟರಕ್ ಎಂಬ ಅಧಿಕಾರಿ ಮನ್ಸರ ಕುರಿತಾಗಿ ವಿವರಗಳನ್ನು ನೀಡುತ್ತಾನೆ. ಥರ್ಸನ್ ಎಂಬ ವಿದ್ವಾಂಸನು ೧೯೦೯ ರಲ್ಲಿ ಈ ಬಗ್ಗೆ ಉಲೇಖಿಸುತ್ತಾನೆ. ೧೯೦೧ ರ ಜನಗಣತಿ ಮತ್ತು ೧೯೦೩ ರಲ್ಲಿ ಎಚ್. ವಿ. ನಂಜುಡಯ್ಯ ಮತ್ತು ರಾವ್ ಬಹದ್ದೂರ್ ಅನಂತಕೃಷ್ಣ ಅಯ್ಯರ್ ನಡೆಸಿದ ಅಧ್ಯಯನದಲ್ಲಿ ಮನ್ಸರ ಮದುವೆಯ ಕುರಿತಾಗಿ ಉಲ್ಲೇಖಗಳಿವೆ.

ಮನ್ಸರು  ಎನ್ನುವ ಪದದ ಬಗ್ಗೆ ಹೆಚ್ಚು ವ್ಯಾಪಕವಾದ ಚರ್ಚೆಯಾಗಲಿ, ಈ ಸಮುದಾಯದ ಬಗ್ಗೆ ವಿಸ್ತಾರವಾದ ಅಧ್ಯಯನವಾಗಲಿ ನಡೆದಿಲ್ಲ. ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಸಮುದಾಯದ ಒಂದು ವರ್ಗವನ್ನು ಹಿಂದಿನಿಂದಲೂ ಈ ಹೆಸರಿನಿಂದ ಕರೆಯುತ್ತಿದ್ದರು. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇವರಿಗೆ “ಮಾನ್ಯೆರ್” ಎಂದು ಕರೆಯುವ ಪದ್ಧತಿಯೂ ಇದೆ. ಬಹುಶಃ ಇಲ್ಲಿನ ಆಳುವ ವರ್ಗದ ಆಳುಗಳಾಗಿ ದುಡಿಸಿರುವುದರಿಂದ ಇವರನ್ನು “ಮಾನ್ಯೆರ್” ಅಥವಾ “ಮೂಲದ ಮಾನಿ” ಎಂದು ಕರೆದಿರಬೇಕು. “ಮನ್ಸ” ಎಂದರೆ ಮನುಷ್ಯ ಎಂದರ್ಥ. ಈ ನಾಡಿನ ಮೂಲದವರು ಎಂಬ ಅರ್ಥದಲ್ಲಿ ಮೂಲದ ಮಾನಿಗಳು ಎಂದು ಕರೆದಿರಬಹುದು. ಮಾನಿ (ಮಾಣಿ)ಗಳು ಎಂದರೆ ದೈವದ ಆರಾಧನೆಯನ್ನು ಮಾಡುವವ ಎಂಬ ಅರ್ಥವಿದೆ. ಕೆಲವು ನಿರ್ದಿಷ್ಟ ದೈವಗಳ ಆರಾಧನೆಯನ್ನು ಮಾಡುವವರು ಇವರಾದುದರಿಂದ ಇವರಿಗೆ ಮೂಲದ ಮಾನಿ (ಮಾಣಿ) ಎಂಬ ಹೆಸರು ಬಂದಿರಬಹುದು.

“ಮನ್ಸ” ಎಂದರೆ ಸಂಸ್ಕೃತದ ಮನುಷ್ಯ ಎಂಬ ಪದದ ತದ್ಬವ. ವ್ಯಾಪಕಾರ್ಥದಲ್ಲಿ ಮನುಷ್ಯ ಎಂಬ ಅರ್ಥ. ಕಾಲಕ್ರಮೇಣ ಜನಾಂಗ ವಾಚಕವಾಗಿ “ಮನ್ಸ” ಎಂದರೆ ಒಂದು ನಿರ್ದಿಷ್ಟ ಸಮುದಾಯವು ಈ ಹೆಸರನ್ನು ಪಡೆದಿರಬೇಕು. ಸಾಮಾಜಿಕ ಅಸ್ಪೃಶ್ಯತೆಯ ಕಾರಣದಿಂದಾಗಿ ಈ ಪದಕ್ಕೆ ಹೀನಾರ್ಥ ಪ್ರಾಪ್ತವಾಗಿ ಅಸ್ಪೃಶ್ಯರು ಎಂಬ ಗ್ರಹಿಕೆ ಉಂಟಾಗಿದೆ. ಇದರಿಂದಲೇ ಇತ್ತೀಚೆಗೆ ಈ ಸಮುದಾಯಕ್ಕೆ ಸೇರಿದವರು ತಮ್ಮನ್ನು “ಆದಿದ್ರಾವಿಡ”ರು ಎಂದು ಕರೆಸಿಕೊಳ್ಳಲು ಇಷ್ಟ ಪಡುತ್ತಿದ್ದಾರೆ. ಆದರೆ “ಆದಿದ್ರಾವಿಡ” ಎಂದು ಕರೆಯುವಲ್ಲಿ ಹಲವಾರು ಸಮುದಾಯಗಳು ಸೇರಿರುವುದರಿಂದ ಸಮುದಾಯದ ಅನನ್ಯತೆ ವ್ಯಕ್ತವಾಗುವುದಿಲ್ಲ. ಇದರಿಂದ “ಮನ್ಸ” ಎಂದರೆ ಮನುಷ್ಯ ಎಂಬ ವಿಶಾಲಾರ್ಥದಲ್ಲಿ ಕರೆಯಿಸಿಕೊಳ್ಳಬೇಕೆಂದು ಸಮುದಾಯದ ಕೆಲವರು ಅಭಿಪ್ರಾಯಪಡುತ್ತಾರೆ.

ಬುಡಕಟ್ಟು ಸಮುದಾಯ ಮತ್ತು ಗಿರಿಜನ ವರ್ಗದ ಕೆಲವು ಸಮುದಾಯಗಳಿಗೆ “ಹೊಲೆಯ” ಎಂಬ ಪದದ ಬಳಕೆ ಹಿಂದೆ ಇತ್ತು. ಹೊಲದಲ್ಲಿ ದುಡಿಯುವವನು “ಪುಲಮರ್ದ್‌” ಅಥವಾ ಹೊಲಮದ್ದು ಅಂದರೆ ನಾಟಿ ಮದ್ದು ಮಾಡುವವನು ಎಂಬರ್ಥದಲ್ಲಿ ಬಳಕೆಯಾಗಿ ಕ್ರಮೇಣ “ಹೊಲೆ”  ಎಂದರೆ “ಸೂತಕ”, “ಅಸ್ಪೃಶ್ಯ” ಎಂಬ ಅರ್ಥ ಪ್ರಾಪ್ತವಾಗಿರಬೇಕು. ಇದರಿಂದ ಈಗ ಈ ರೀತಿಯ ಪದಗಳನ್ನು ನಿಷೇಧಿಸಲಾಗಿದೆ. ಆದರೆ ಮೂಲದ ಹೊಲೆಯ ಅಥವಾ “ಮಾನಿ” ಎಂಬ ಪದ ಪ್ರಯೋಗ ಹಿಂದೆ ವ್ಯಾಪಕವಾಗಿದ್ದು, ಅವರಿಗೆ ನಿರ್ದಿಷ್ಟ ಉದ್ಯೋಗಗಳನ್ನು ಸೂಚಿಸಲಾಗಿತ್ತು.

ಮನ್ಸರು ಅರಸರಾಗಿದ್ದರು ಎಂಬ ಐತಿಹ್ಯಗಳು ಇವೆ. ಕ್ರಮೇಣ ಅರಸೊತ್ತಿಗೆಯನ್ನು ಕಳೆದುಕೊಂಡು ಕಾಡು ಪಾಲಾದರು. ತದನಂತರ ಜೈನ ಮತ್ತು ಬಂಟ ಅರಸರ, ಪಾಳೆಯಗಾರರ ಅಧೀನದಲ್ಲಿ ದುಡಿಯುವ ವರ್ಗವಾದರು ಎಂಬ ನಂಬಿಕೆಯು ಐತಿಹ್ಯದ ಹಿನ್ನೆಲೆಯಲ್ಲಿ ವ್ಯಕ್ತವಾಗುತ್ತದೆ. ಇದರಿಂದಲೇ ಇವರನ್ನು “ಮೂಲದವರು” ಎಂದು ಕರೆಯುತ್ತಾರೆ ಎಂದು ಹೇಳಲಾಗುತ್ತಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಕಾಡುತ್ಪತ್ತಿ ಸಂಗ್ರಹ, ಕೃಷಿ ಕೆಲಸಗಳು ಮತ್ತು ಆಳಾಗಿ ದುಡಿಯುತ್ತಿದ್ದರು. ಇಂದು ತಮ್ಮದೇ ಆದ ಸ್ವಾಭಿಮಾನದ ಬದುಕನ್ನು ಬದುತ್ತಿರುವ ಇವರು ಭೂಮಿಯನ್ನು ಪಡೆದು ಸಣ್ಣ ಮಟ್ಟಿನ ಕೃಷಿ, ಸರ್ಕಾರಿ ಉದ್ಯೋಗ, ತೋಟಗಳಲ್ಲಿ ದುಡಿಯುತ್ತಿದ್ದಾರೆ. ಇಂದು ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಮಾತ್ರವಲ್ಲ ಚಿಕ್ಕಮಗಳೂರು, ಕೊಡಗು -ಹೀಗೆ ಕರ್ನಾಟಕದ ಇತರ ಪ್ರದೇಶಗಳಲ್ಲೂ ವ್ಯಾಪಿಸಿದ್ದಾರೆ. ಕುಂದಾಪುರ ಪ್ರದೇಶದಲ್ಲಿ ಇವರನ್ನು ಉಪ್ಪಾರರು ಎಂದು ಕರೆಯುತ್ತಾರೆ. ಆದರೆ ಅವಿಭಜಿತ ದಕ್ಷಿಣ ಕನ್ನಡದ ಮನ್ಸರಿಗಿಂತ ತುಸು ಭಿನ್ನವಾದ ಸಂಸ್ಕೃತಿಯನ್ನು ಇವರು ಹೊಂದಿದ್ದಾರೆ.

ಮನ್ಸರಿಗೆ ತಮ್ಮದೇ ಆದ ವಿಶಿಷ್ಟ ಸಂಸ್ಕೃತಿಯಿದೆ. ಹುಟ್ಟು-ಮದುವೆ-ಸಾವು ಇತ್ಯಾದಿ ಜೀವನಾವರ್ತನ ಚಟುವಟಿಕೆಗಳಲ್ಲಿ, ಆರಾಧನೆ, ಕುಣಿತ, ಉಡುಗೆ-ತೊಡುಗೆ ಇತ್ಯಾದಿಗಳಲ್ಲಿ ಅವರ ಅನನ್ಯತೆಯನ್ನು ಗುರುತಿಸಬಹುದಾಗಿದೆ. ಇಂದು ಅವರ ಸಂಸ್ಕೃತಿಯಲ್ಲಿ ವ್ಯಾಪಕ ಬದಲಾವಣೆಯನ್ನು ಕಾಣಬಹುದಾದರೂ ಹಿಂದಿನ ಛಾಯೆಯನ್ನೂ ಗುರುತಿಸಬಹುದಾಗಿದೆ.

ಮನ್ಸರದು ಮಾತೃಮಾಲೀಯ ಕೌಟುಂಬಿಕ ವ್ಯವಸ್ಥೆ. ಅಳಿಯಕಟ್ಟಿನ ಪದ್ಧತಿ ಅವರಲ್ಲಿ ಜಾರಿಯಲ್ಲಿತ್ತು. ಇದರಿಂದ  ಸಹಜವಾಗಿಯೇ ಹೆಣ್ಣಿಗೆ ಪ್ರಧಾನ ಸ್ಥಾನವಿತ್ತು. ಎಲ್ಲಾ ಚಟುವಟಿಕೆಗಳಲ್ಲೂ ಹೆಣ್ಣು ಮುಖ್ಯವಾಗಿರುವುದರಿಂದ ಈ ಸಮುದಾಯದ ಕುರಿತಾದ ಅಧ್ಯಯನವು ಹೆಣ್ಣಿನ ಸಮಾನತೆ ಮತ್ತು ಸ್ವಾವಲಂಬನೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಈ ದೃಷ್ಟಿಯಿಂದ ಮನ್ಸ ಜನಾಂಗದಲ್ಲಿ ಮಹಿಳೆಯ ಕುರಿತಾದ ಅಧ್ಯಯನವೆಂದರೆ ಪರೋಕ್ಷವಾಗಿ ಸಮಗ್ರವಾಗಿ ಸಮುದಾಯದ ಅಧ್ಯಯನವೇ ಆಗುತ್ತದೆ.

ಇದುವರೆಗೆ ನಡೆದ ಅಧ್ಯಯನಗಳು

ಮನ್ಸ ಜನಾಂಗದ ಬಗ್ಗೆ ವಿಸ್ತಾರವಾದ ಅಧ್ಯಯನವು ಇದುವರೆಗೆ ನಡೆದಿಲ್ಲ. ಬಿಡಿಬಿಡಿಯಾದ ಲೇಖನಗಳು ಪ್ರಕಟವಾಗಿವೆ. ಸಾಂದರ್ಭಿಕವಾಗಿ ಇತರ ಲೇಖನಗಳಲ್ಲಿ ಕೆಲವು ಮಾಹಿತಿಗಳನ್ನು ನೀಡಲಾಗಿದೆ. ಆದಿವಾಸಿ, ಬುಡಕಟ್ಟು ಮತ್ತು ಗಿರಿಜನರ ಬಗ್ಗೆ ಹಲವು ವಿದೇಶಿ ವಿದ್ವಾಂಸರು ಮತ್ತು ಕ್ರೈಸ್ತ ಮಿಶನರಿಗಳು ಅಧ್ಯಯನ ನಡೆಸಿದ್ದಾರೆ. ಆದರೆ ಅದರಲ್ಲಿ ಮನ್ಸ ಸಮುದಾಯದ ಬಗ್ಗೆ ಯಾವುದೇ ಉ‌ಲ್ಲೇಖ ದೊರೆಯುವುದಿಲ್ಲ. ೧೮೪೭ರ ಕರ್ನಲ್ ಮೆಕಂಜಿಯವರ ಕೈಫಿಯತ್ತುಗಳಲ್ಲಿ ಇತರ ಜಾತಿಗಳನ್ನು ಉಲ್ಲೇಖಿಸುವಾಗ ಮನ್ಸರ ಉಲ್ಲೇಖ ಬರುತ್ತದೆ.

ಥರ್ಸ್ಸನ್ ಎಂಬ ವಿದ್ವಾಂಸರು ೧೯೦೯ರಲ್ಲಿ ವಿವಿಧ ಜನಾಂಗಗಳ ಬಗೆಗಿನ ಅಧ್ಯಯನದಲ್ಲಿ ಮಾರಿಮನ್ಸರ ಬಗ್ಗೆ ಉಲ್ಲೇಖಿಸುತ್ತಾರೆ. ೧೯೦೧ ರಲ್ಲಿ ಪ್ರಕಟವಾದ ಮ್ಯಾನವಲ್ ಆಫ್ ಸೌತ್ ಕೆನರಾ ಡಿಸ್ಟ್ರಿಕ್ಟ್‌ನಲ್ಲಿ ಮನ್ಸರ ಮದುವೆಯ ಕುರಿತು ಉಲ್ಲೇಖವಿದೆ. ಎಚ್. ವಿ. ನಂಜುಂಡಯ್ಯ ಮತ್ತು ರಾವ್ ಬಹದ್ದೂರ್ ಅನಂತಕೃಷ್ಣ ಅಯ್ಯರ್ ೧೯೦೩ ರಲ್ಲಿ ಮನ್ಸರ ಮದುವೆಯ ಕುರಿತು ದಾಖಲಿಸಿದ್ದಾರೆ. ಪಿ. ಕಮಲಾಕ್ಷ ಅವರು ೧೯೬೮ ರಲ್ಲಿ ಪ್ರಕಟಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ಮತ್ತು ಗಿರಿಜನ ಸಾಮಾಜಿಕ ಇತಿಹಾಸ ಎಂಬ ಕೃತಿಯಲ್ಲಿ ಮನ್ಸರ ಕುರಿತಾದ ಕೆಲವು ಮಾಹಿತಿಗಳಿವೆ.

ಡಾ. ಶಿವರಾಮ ಕಾರಂತರು ಚೋಮನ ದುಡಿ ಕಾದಂಬರಿಯಲ್ಲಿ ಮನ್ಸ ಜನಾಂಗದ ಚೋಮನನ್ನು ಮುಖ್ಯವಾಗಿಟ್ಟುಕೊಂಡು ಕಾದಂಬರಿಯನ್ನು ರಚಿಸಿದ್ದಾರೆ. ಈ ಜನಾಂಗದ ದಾರುಣ ಬದುಕನ್ನು ಕಾರಂತರು ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಕೆ.ವಿ. ರಾವ್ ಉಜಿರೆ  ಇವರು ಬಾಡ  ಕಾದಂಬರಿಯಲ್ಲಿ ಮನ್ಸರ ಬದುಕನ್ನು ಚಿತ್ರಿಸಿದ್ದಾರೆ. ಹೀಗೆ ಸಾಹಿತ್ಯ ಕೃತಿಗಳಿಗೂ ಮನ್ಸರ ಬದುಕು ಸ್ಫೂರ್ತಿಯಾಗಿದೆ. ಡಾ. ವಾಮನ ನಂದಾವರ ಅವರ ಕರ್ನಾಟಕ ಬುಡಕಟ್ಟುಗಳು ಕೃತಿಯಲ್ಲಿ  ಪ್ರಕಟವಾದ “ಮನ್ಸರು” ಎಂಬ ಲೇಖನವು ಜನಾಂಗದ ಬಗ್ಗೆ ಈವರೆಗೆ ನಡೆದ ಅಧ್ಯಯನಗಳಲ್ಲಿ ವಿಸ್ತಾರವಾದ ಅಧ್ಯಯನವಾಗಿದೆ. ಮನ್ಸರ ಸಮಗ್ರ ಸಂಸ್ಕೃತಿಯ ವಿಚಾರಗಳನ್ನು ಡಾ. ನಂದಾವರರು ವಿವರವಾಗಿ ನೀಡಿದ್ದಾರೆ. ಪಿ. ಡೀಕಯ್ಯ ಅವರು ಈ ಜನಾಂಗದ ಅಮರ ವೀರರ ಕುರಿತಾದ ಕಾನದ ಕಟದರು  ಎಂಬ ಕೃತಿಯಲ್ಲಿ ವಿಶ್ಲೇಷಣಾತ್ಮಕವಾಗಿ ತುಳುವಿನಲ್ಲಿ ರಚಿಸಿದ್ದಾರೆ.

ಆದರೆ ಮನ್ಸ ಸಮುದಾಯದ ಬಗ್ಗೆ ವಿಸ್ತಾರವಾದ ಅಧ್ಯಯನ ಈವರೆಗೆ ನಡೆದಿಲ್ಲ. ಅದರಲ್ಲೂ ಮನ್ಸರ ಮಹಿಳೆಯರ ಕುರಿತಾದ ಯಾವುದೇ ಪ್ರತ್ಯೇಕ ಅಧ್ಯಯನ ನಡೆದಿಲ್ಲ. ನಡೆದ ಅಧ್ಯಯನಗಳಲ್ಲೂ ಮಹಿಳೆಯರ ಸ್ಥಿತಿಗತಿ ಬಗ್ಗೆ ಹೆಚ್ಚಿನ ಉಲ್ಲೇಖಗಳಿಲ್ಲ. ಇದು ಈ ರೀತಿಯ ಮೊದಲ ಅಧ್ಯಯನವಾಗಿದೆ. ಇದು ಕ್ಷೇತ್ರಕಾರ್ಯದ ಮೂಲಕ ಮಾಹಿತಿಗಳನ್ನು ಸಂಗ್ರಹಿಸಿ ಸರಳವಾದ ವಿಶ್ಲೇಷಣಾತ್ಮಕ ಅಧ್ಯಯನವಾಗಿದೆ. ಈ ಬಗ್ಗೆ ವಿಸ್ತಾರವಾದ ಅಧ್ಯಯನ ನಡೆಸಬೇಕಾದ ಅಗತ್ಯವಿದೆ.

ಕುಟುಂಬದಲ್ಲಿ ಮಹಿಳೆ

ತುಳುನಾಡಿನ ಇತರ ಬ್ರಾಹ್ಮಣೇತರ ಜಾತಿಗಳಲ್ಲಿ ಇರುವ “ಅಳಿಯಕಟ್ಟು” ಅಥವಾ ಮಾತೃಮೂಲ ವ್ಯವಸ್ಥೆಯು ಮನ್ಸರಲ್ಲೂ ಇದೆ. ಅಂದರೆ ಯಜಮಾನನ ನಂತರ ಅವನ ಆಸ್ತಿಯು ಅವನ ಮಕ್ಕಳಿಗೆ ಹೋಗದೆ ಅದು ತಂಗಿ ಮತ್ತು ಅಕ್ಕನ ಮಕ್ಕಳಿಗೆ ಹೋಗುತ್ತದೆ. ಅಂದರೆ ಪರೋಕ್ಷವಾಗಿ ಆಸ್ತಿಯು ಹೆಣ್ಣಿನಿಂದ ಹೆಣ್ಣಿಗೆ ಹಸ್ತಾಂತರವಾಗುತ್ತದೆ. ಮೇಲ್ನೋಟಕ್ಕೆ ಯಜಮಾನನಾಗಿ ಗಂಡನ್ನು ಗುರುತಿಸಿದರೂ, ಆಸ್ತಿ ಪಡೆಯುವ ಇಲ್ಲವೇ ಎಲ್ಲಾ ಕೌಟುಂಬಿಕ ಅಧಿಕಾರಗಳು ಹೆಣ್ಣಿನಲ್ಲಿ ಕೇಂದ್ರೀಕೃತವಾಗಿರುತ್ತದೆ. ಇದರಿಂದಲೇ ತಂದೆ ಸತ್ತರೆ ತಾಯಿಯ ಕುಟುಂಬದ ಮಕ್ಕಳು ತಂದೆ ಮನೆಯಿಂದ ತಾಯಿ ಮನೆಗೆ ಹೋಗುತ್ತಾರೆ. ತಂದೆಯ ಮನೆಯಲ್ಲಿ ಅವರಿಗೆ ಯಾವುದೇ ಹಕ್ಕು ಇರುವುದಿಲ್ಲ. ಆಸ್ತಿಯ ಹಕ್ಕು ಮಹಿಳೆಯಲ್ಲಿ ಕೇಂದ್ರೀಕೃತವಾಗಿರುವುದರಿಂದ ಸಹಜವಾಗಿಯೇ ಎಲ್ಲಾ ಚಟುವಟಿಕೆಗಳಲ್ಲೂ ಹೆಣ್ಣಿಗೆ ಪ್ರಧಾನ ಸ್ಥಾನವಿದೆ. ಎಲ್ಲಾ ಆಚರಣೆಗಳಲ್ಲೂ ಆಕೆಯೇ ಮುಖ್ಯವಾಗುತ್ತಾಳೆ. ಹೆಣ್ಣಿನ ಕುರಿತಾದ ನಿರ್ಬಂಧಗಳು ಸರಳವಾಗಿದೆ. ಹೆಣ್ಣಿಗೆ ಹೆಚ್ಚಿನ ಸ್ವಾತಂತ್ರ್ಯಗಳು ಲಭ್ಯವಾಗಿದೆ. ಕೌಟುಂಬಿಕ ವಿಚಾರಗಳನ್ನು ನಿರ್ಧರಿಸುವವಳು ಹೆಣ್ಣೆ ಆಗಿರುತ್ತಾಳೆ. ಅವಳಿಗೆ ಆರ್ಥಿಕ ಸ್ವಾತಂತ್ಯ್ರವು ಸ್ವಲ್ಪ ಮಟ್ಟಿಗಿರುವುದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾಗಿದೆ. ಉದಾಹರಣೆಗೆ ಮನ್ಸರಲ್ಲಿ ವಿಚ್ಛೇದನ ಮತ್ತು ಮರು ಮದುವೆ ಒಂದು ಸರಳ ಕಾರ್ಯ. ಅದಕ್ಕೆ ಸಾಮಾಜಿಕವಾಗಿ ಯಾವುದೇ ನಿಷೇಧವಿಲ್ಲ. ಅದು ಸಾಮಾಜಿಕವಾಗಿ ಅಗೌರವವನ್ನು ತರುವ ವಿಷಯವೂ ಅಲ್ಲ. ಯಾಕೆಂದರೆ ಗಂಡಿಗಿರುವಂತೆ ಇಲ್ಲಿ ಹೆಣ್ಣಿಗೆ ಆಯ್ಕೆಯ ಸ್ವಾತಂತ್ಯ್ರವೂ ಇದೆ. ದುಡಿಯುವ ಸ್ವಾತಂತ್ಯ್ರವೂ ಇದೆ. ತುಳುನಾಡಿನ ಬ್ರಾಹ್ಮಣೇತರ ಜಾತಿಗಳಲ್ಲಿ ಇದನ್ನು ಕಾಣಬಹುದಾಗಿದೆ. ಆದರೆ ಮನ್ಸರಂಥ ಪರಿಶಿಷ್ಟ ಜಾತಿ ಮತ್ತು ವರ್ಗಗಳಲ್ಲಿ ಈ ಸ್ವಾತಂತ್ಯ್ರವು ಹೆಚ್ಚು ನಿರಾತಂಕವಾಗಿರುವುದು ವಿಶಿಷ್ಟವಾಗಿದೆ. ವಿಶೇಷವೆಂದರೆ ಆಧುನಿಕತೆ ಮತ್ತು ಶಿಕ್ಷಣವು ಮನುಷ್ಯನನ್ನು ಹೆಚ್ಚು ಪ್ರಜ್ಞಾವಂತರನ್ನಾಗಿ ಮಾಡಬೇಕಾಗಿದೆ. ಆದರೆ ತುಳುನಾಡಿನಲ್ಲಿ ಮೂಲ ಸಂಸ್ಕೃತಿಯಲ್ಲಿದ್ದ ಸರಳತೆ ಇಂದು ಮಾಯವಾಗಿ ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಹೆಣ್ಣಿಗೆ ಪರೋಕ್ಷ ಒತ್ತಡಗಳನ್ನು ಹೇರಲಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳಿಂದಾಗಿ ಮೇಲ್ನೋಟಕ್ಕೆ ಹೆಣ್ಣಿಗೆ ಸ್ವಾತಂತ್ಯ್ರವಿದ್ದಂತೆ ಭಾಸವಾದರೂ ಮದುವೆ ಆಯ್ಕೆ ಇತ್ಯಾದಿಗಳಲ್ಲಿ ಗಂಡು ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಈ ಬದಲಾವಣೆ ಮನ್ಸರಂಥ ಅನನ್ಯ ಜೀವನಕ್ರಮವನ್ನು ಹೊಂದಿದ ಸಮುದಾಯಗಳನ್ನು ತಟ್ಟುತ್ತಿರುವುದು ವಿಷಾದದ ಸಂಗತಿಯಾಗಿದೆ.

ಬಂಧುತ್ವ ವ್ಯವಸ್ಥೆಯಲ್ಲಿ ಮನ್ಸರದ್ದು ಮಾತೃಮೂಲವಾದುದು. ಅವರಲ್ಲಿ ಹದಿನಾರು ಬಳಿಗಳಿವೆ ಎನ್ನುತ್ತಾರೆ. ಹೀರೆಕಣ್ಣಾಯ, ಕಲ್ಲಾರ್ದಣ್ಣಾಯ, ಬಾಕುಡದಣ್ಣಾಯ, ಪರ್ಕೆದಣ್ಣಾಯ ಇತ್ಯಾದಿ ಹದಿನಾರು ಬಳಿಗಳನ್ನು ಹೆಸರಿಸುತ್ತಾರೆ. ಈ ಬಳಿಗಳನ್ನು ಆಧರಿಸಿಯೇ ಗುಜರನ್‌, ಸಾನಿಯಾನ್, ಕುಂದರ್, ಬಂಗೇರ ಇತ್ಯಾದಿ ಉಪನಾಮಗಳಿವೆ. ಕೆಲವು ಬಳಿಗಳ ನಡುವೆ ಮದುವೆ ಸಂಬಂಧ ಕೂಡಿ ಬರುತ್ತದೆ. ಆ ಬಳಿಗಳು ಯಾವುದೆಂದು ನಿಶ್ಚಿತವಾಗಿದೆ. ಇನ್ನು ಕೆಲವು ಬಳಿಗಳ ನಡುವೆ ಸಂಬಂಧ ಕೂಡಿಬರುವುದಿಲ್ಲ. ಇದು ರಕ್ತ ಸಂಬಂಧವನ್ನು ಆಧರಿಸಿರುತ್ತದೆ. ರಕ್ತ ಸಂಬಂಧಿಗಳು ಮದುವೆಯಾಗುವಂತಿಲ್ಲ. ಈ ದೃಷ್ಟಿಯಿಂದಲೇ ಬಳಿಗಳ ಕುರಿತಾದ ನಿಷೇಧಗಳಿವೆ. ಬಳಿಗಳ ವ್ಯವಸ್ಥೆಯ ಆಧಾರದಿಂದ ಹೇಳುವುದಾದರೆ ಸಂಬಂಧ ರೂಪುಗೊಳ್ಳುವುದು ತಾಯಿಯ ಮೂಲದಿಂದ ಹೊರತು ತಂದೆಯ ಮೂಲದಿಂದಲ್ಲ. ಈ ದೃಷ್ಟಿಯಿಂದ ಕುಟುಂಬದಲ್ಲಿ ಹೆಣ್ಣಿಗೆ ಪ್ರಧಾನ ಸ್ಥಾನವಿದೆ. ಕೆಲವು ಸಮುದಾಯಗಳು ಮಾತೃ ಮೂಲವಾಗಿರುತ್ತದೆ. ಆದರೆ ಇತರ ಪರಿಶಿಷ್ಟ ಜಾತಿ ಮತ್ತು ವರ್ಗಗಳಲ್ಲಿರುವಂತೆ ಮನ್ಸರಲ್ಲಿ ಈ ರೀತಿಯಿಲ್ಲ. ಅವರಲ್ಲಿ ಮಾತೃ ಮೂಲವಾಗಿರುವುದರಿಂದ ಕೌಟುಂಬಿಕ ವ್ಯವಸ್ಥೆ, ಆಚರಣೆ ಮತ್ತು ನಂಬಿಕೆಗಳಲ್ಲಿ ಹೆಣ್ಣಿಗೆ ಪ್ರಮುಖ ಸ್ಥಾನ ನೀಡಿರುವುದರಿಂದ ಸಾಮಾಜಿಕ ವ್ಯವಸ್ಥೆಯಲ್ಲೂ ಅದು ಕಂಡುಬರುತ್ತದೆ.

ಮನ್ಸರಲ್ಲಿ ಮದುವೆ

ಋತುಮತಿ ಆಚರಣೆ

ಮದುವೆಗೆ ಹೆಣ್ಣು ಸಿದ್ಧವಾಗಿರುವುದನ್ನು ಸೂಚಿಸುವ ಆಚರಣೆಯೇ ಋತುಮತಿಯಾದಾಗ ಮಾಡುವ ಆಚರಣೆ. ಈ ಆಚರಣೆಯು ಎಲ್ಲಾ ಕಡೆ ಒಂದೇ ರೀತಿಯಾಗಿರುವುದಿಲ್ಲ. ಹೆಣ್ಣು ಋತುಮತಿಯಾಗಿ ಫಲವಂತಿಕೆಯನ್ನು ಪಡೆದಿದ್ದಾಳೆ ಎಂಬುದನ್ನು ಸೂಚಿಸುವುದು ಈ ಆಚರಣೆಯ ಉದ್ದೇಶವಿದ್ದಂತೆ ಕಂಡುಬರುತ್ತದೆ. ಹಿಂದೆ ಬಾಲ್ಯವಿವಾಹ ಪದ್ಧತಿ ಇದ್ದುದರಿಂದ ಕೆಲವೊಮ್ಮೆ ಮದುವೆಯ ಬಳಿಕ ಈ ಆಚರಣೆ ನಡೆಯುತ್ತಿದ್ದುದು ಹೆಚ್ಚು. ಇಲ್ಲೂ ಫಲವಂತಿಕೆಯನ್ನು ಸೂಚಿಸುವುದು ಆಚರಣೆಯ ಉದ್ದೇಶವಾಗಿದೆ. ಅನುಭವಿಗಳ ಮಾತಿನಂತೆ ಮನ್ಸರಲ್ಲಿ ಋತುಮತಿಯಾದ ಬಳಿಕವೇ ಮದುವೆಯ ಆಚರಣೆ ನಡೆಯುವುದು ಹೆಚ್ಚು.

ಈ ಆಚರಣೆಯನ್ನು “ನೀರ್ ಪೊರ್ತ್ತಾವ್” ಅಥವಾ “ಮದ್ಮಲ್ ಮದ್ಮೆ” ಎಂದು ಕರೆಯುತ್ತಾರೆ. ಬಹುಶಃ ಇದು “ನೀರ್ ಪತ್ತಾವುನು” ಆಗಿರಬಹುದು. ಮದುವೆಗೆ ಮದುಮಗಳು ಸಿದ್ಧಳಾಗಿದ್ದಾಳೆ ಎಂಬುದನ್ನು ಸೂಚಿಸುವುದಕ್ಕಾಗಿ “ಮದ್ಮಲ್ ಮದಿಮೆ” ಎಂದು ಆಚರಣೆಯನ್ನು ಸೂಚಿಸುತ್ತಿರಬಹುದು.

“ನೀರ್ ಪೊರ್ತ್ತಾವ್” ಅಥವಾ “ಮದ್ಮಲ್ ಮದ್ಮೆ” ಆಚರಣೆಯಲ್ಲಿ ಋತುಮತಿಯಾದ ಹೆಣ್ಣನ್ನು ಕಿದೆ (ದನದ ಕೊಟ್ಟಿಗೆ) ಅಥವಾ ಮನೆ (ಮರೆ)ಯಲ್ಲಿ ಕುಳ್ಳಿರಿಸುತ್ತಾರೆ. ಐದು ಅಥವಾ ಏಳು ಮನೆಯ ಐದು ಬಳಿಗಳ ಹೆಂಗಸರು ಬರಬೇಕು. ಐದು ಬಳಿಗಳು ಎಂಬುವುದನ್ನು ನಿರ್ದಿಷ್ಟಪಡಿಸಲಾಗಿದೆ. ಅಂಗಾರ್ದಾಣಾಯೆ, ಕುಮೇರ್ದಣಯೆ, ಕನಾಡ್‌ದಣಯೆ, ಮಾಜರ್ದಣಯೆ, ಬೊರ್ಯಾದಾಣಯೆ ಹೀಗೆ ಐದು ಬಳ್ಳಿಯ ಹೆಂಗಸರು ಬರಬೇಕು.

ಏಳು ಸೇರು ಭತ್ತದ ಕುರುಂಟು(ಮುಡಿ)ನ್ನು ಅದಕ್ಕೆ ತೆಂಗಿನಕಾಯಿಯನ್ನು ಕಟ್ಟಿ ಋತುಮತಿಯಾದ ಹೆಣ್ಣನ್ನು ಅದರ ಮೇಲೆ ಕುಳ್ಳಿರಿಸುತ್ತಾರೆ. ಅಂಗಳದಲ್ಲಿ ಒನಕೆಯಿಟ್ಟು ಗುರಿಕಾರನ ಹೆಂಡತಿ ಅದರ ಸುತ್ತ ಸೇಡಿಯಲ್ಲಿ ಮಂಡಲ ಬರೆಯುತ್ತಾಳೆ. ಏಳು ಗೆರಸೆಗಳಲ್ಲಿ ಏಳು ಅಡಿಕೆ ಇಡುತ್ತಾರೆ. ತೆಂಗಿನ ಮರದ ಬುಡದಲ್ಲಿ ಹೆಣ್ಣನ್ನು ಕುಳ್ಳರಿಸಿ ಮೊಗಾಯಿಯಲ್ಲಿ ನೀರು ಹೊಯ್ಯುತ್ತಾರೆ. ಆಕೆ ಎಲ್ಲವನ್ನೂ ಮುಟ್ಟಿ ನಮಸ್ಕರಿಸಬೇಕು. ನೀರು ಹೊಯ್ಯುವ ಐದು ಬಳಿಯ ಹೆಂಗಸರು ಮುತ್ತೈದೆಯರು ಇರಬೇಕು. ವಿಧವೆ ಅಥವಾ ಎರಡನೆಯ ಮದುವೆಯಾದವರು ಆಗಬಾರದು ಎಂಬ ನಿಯಮವಿದೆ.

ಐದು ಗಡಿಗೆಗಳಲ್ಲಿ ನೀರು ತುಂಬಿಸಿ ಅಂಗಳದ ಐದು ಮೂಲೆಯಲ್ಲಿರಿಸುತ್ತಾರೆ. ಇದನ್ನು “ಕಲಶನೀರು” ಎಂದು ಕರೆಯುತ್ತಾರೆ. ಕಲಶನೀರು ತುಂಬಿದ ಪಾತ್ರೆಯ ಅಡಿಗೆ ತೆರಿಯ (ಸಿಂಬಿ) ಇಡುತ್ತಾರೆ. ಈ ತೆರಿಯ ಕಟ್ಟಿ ನೀರನ್ನು ಗುರಿಕಾರನ ಹೆಂಡತಿ ಇರಬೇಕೆಂಬ ನಿಯಮವಿದೆ. ಈ ಬಳಿಕ ಆ ದಿನವೇ ಆಕೆಗೆ ಆ ಕಲಶ ನೀರಿನಿಂದ ಸ್ನಾನ ಮಾಡಿಸುತ್ತಾರೆ. ಸೇಡಿನಿಂದ ಮಂಡಲ ಬರೆದು (ರಂಗೋಲಿಯಂಥ ರಚನೆ) ಅದರ ಮಧ್ಯೆ ಭತ್ತದ ಮುಡಿಯನ್ನಿಟ್ಟು ಹೆಣ್ಣನ್ನು ಕುಳ್ಳಿರಿಸುತ್ತಾರೆ. ಈ ಸಂದರ್ಭದಲ್ಲಿ ದುಡಿ ಬಡಿಯುತ್ತಾರೆ.

ಹೆಣ್ಣನ್ನು ಭತ್ತದ ಮುಡಿಯ ಮೇಲೆ ಕುಳ್ಳಿರಿಸಿ ನೀರು ಸಿಂಪಡಿಸುತ್ತಾರೆ. ಆಕೆಯ ಮೈದುನ ಅಥವಾ ನಾದಿನಿಯನ್ನು ಋತುಮತಿಯಾದ ಕನ್ಯೆಯ ಎರುದು ಕುಳ್ಳಿರಿಸಿ ಅವರ ತಲೆಯ ಮೇಲೆ ಇಡಿಯಾದ ಬಾಳೆಯೆಲೆಯನ್ನು ಇಟ್ಟು ನೀರು ಹೊಯ್ದು, “ಪಿಲೆ ಹೋಯಿತು” ಎನ್ನುತ್ತಾರೆ. ಬಳಿಕ ಮೊಗಾಯಿಯಲ್ಲಿ ನೀರನ್ನು ತೆಂಗಿನ ಬುಡಕ್ಕೆ ಹೊಯ್ಯುತ್ತಾರೆ. ಮತ್ತೆ ಮೊಗಾಯಿಯಲ್ಲಿ ನೀರನ್ನು ಮೈದುನ ತರಬೇಕು. ತೋಡಿನ ನೀರನ್ನು ಕತ್ತಿಯಿಂದ ಕಡಿದು ತರಬೇಕು. ಬಳಿಕ ಉಡುಗೊರೆ ಕೊಡುವ ಪದ್ಧತಿಯಿದೆ. ಬಂಧುಗಳಲ್ಲದೆ ಇತರ ಜಾತಿಯ ಜನರೂ ಈ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಅವರೂ ಉಡುಗೊರೆ ನೀಡುತ್ತಾರೆ. ಒಡೆಯನ ಮನೆಯವರು ಮತ್ತು ಬಂಧುಗಳು ಅವಲಕ್ಕಿ, ತೆಂಗಿನಕಾಯಿ ಮೊದಲಾದ ಉಡುಗೊರೆಯನ್ನು ನೀಡುವ ಪದ್ಧತಿಯಿದೆ.

ಬಳಿಕ ಹನ್ನೆರಡು ದಿನಗಳವರೆಗೆ ಮೈಗೆ ತಿಂಗಿನ ಹಾಲನ್ನು ಪೂಸಿ ಸ್ನಾನ ಮಾಡಿಸುತ್ತಾರೆ. ಕುರುಂಟು ಅಥವಾ ಮುಡಿ ಕಟ್ಟಿದ ಭತ್ತದಿಂದ ಅಕ್ಕಿ ಮಾಡಿಸಿ ಅದರಿಂದ ಮೆಂತೆ ಗಂಜಿ ಮಾಡಿಸಿ ಹನ್ನೆರಡು ದಿನಗಳವರೆಗೆ ಕೊಡುತ್ತಾರೆ. ಮೈನೆರೆದ ಹುಡುಗಿಗೆ ಅವಲಕ್ಕಿ, ಬೆಲ್ಲ, ತೆಂಗಿನಕಾಯಿ ತಿನ್ನಲು ಕೊಡುತ್ತಾರೆ. ಅವಳನ್ನು ಕುಟುಂಬದ ಮಾವನ ಮನೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲೂ ಅವಲಕ್ಕಿ, ಬೆಲ್ಲ ಕೊಡುತ್ತಾರೆ. ಇದನ್ನು ಅವಲಕ್ಕಿ ಹಾಕುವುದು ಎನ್ನುತ್ತಾರೆ. ಮೈನೆರೆದವಳು ಕಲಶಸ್ವಾನದ ವಿಧಿ ನಡೆಯದೆ ಮನೆಯೊಳಗೆ ಬರಬಾರದು ಎಂಬ ನಂಬಿಕೆ ಇದೆ. ಮನೆಯ ವಸ್ತುಗಳನ್ನು ಮನೆಯ ಹೊರಗೆ ಇಟ್ಟು ಆ ದಿನ ಆಕೆಯಿಂದ ಮುಟ್ಟಿಸುತ್ತಾರೆ. ಹಿಂದೆ ಹನ್ನೆರಡು ದಿನ ಆಕೆ ಮನೆಯಿಂದ ಹೊರಗೆ ಕೊಟ್ಟಿಗೆಯಲ್ಲಿ ಕುಳಿತುಕೊಳ್ಳಬೇಕು. ಗಂಡಸರ ಮುಖ ನೋಡಬಾರದು ಎಂಬ ನಿಷೇಧಗಳಿತ್ತು. ಈಗ ಇದನ್ನು ಸರಳಗೊಳಿಸಲಾಗಿದೆ. ಹಿಂದಿನ ವಿಸ್ತಾರವಾದ ಆಚರಣೆಗಳಲ್ಲ. ಸರಳವಾದ ಆಚರಣೆಯನ್ನು ನಡೆಸಲಾಗುತ್ತಿದೆ.

ಇಡೀ ಆಚರಣೆಯ ಹಿನ್ನೆಲೆಯನ್ನು ಗಮನಿಸಿದರೆ ಹೆಣ್ಣು ಮೈನೆರೆದು ಮದುವೆಗೆ ಸಿದ್ಧಳಾಗಿದ್ದಾಳೆ ಎಂಬುದನ್ನು ಸೂಚಿಸುವುದು ಈ ಆಚರಣೆಯ ಉದ್ದೇಶ. ಇದುವರೆಗೆ ಹುಡುಗಿಯಾದವಳು ಯೌವನವನ್ನು ಪಡೆದಿದ್ದಾಳೆ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವುದು ಈ ಆಚರಣೆಯ ಉದ್ದೇಶವಾಗಿದೆ. ಈ ಬಗ್ಗೆ ಸಮುದಾಯದ ಹಿರಿಯರಲ್ಲಿ ವಿಚಾರಿಸಿದರೆ ಆಕೆಯನ್ನು ಪವಿತ್ರಗೊಳಿಸುವ ಕಾರ್ಯ; ಹೆಣ್ಣು ಒಂದು ಹಂತದಿಂದ ಇನ್ನೊಂದು ಹಂತವನ್ನು ಪ್ರವೇಶಿಸುತ್ತಾಳೆ; ಆಗ ಆಕೆಗೆ ಜವಾಬ್ದಾರಿಯನ್ನು ನೆನಪಿಸುವ ಕಾರ್ಯ ಈ ಆಚರಣೆ ಎಂಬುದಾಗಿ ವಿವರಿಸುತ್ತಾರೆ. ಇಲ್ಲಿ ನಡೆಸುವ ಆಚರಣೆಯು ಫಲವಂತಿಕೆಯನ್ನು ಸೂಚಿಸುವಂತಿದೆ. ಹೆಣ್ಣು ಗರ್ಭಧಾರಣೆಗೆ ಸಿದ್ಧಳಾಗಿದ್ದಾಳೆ ಎಂಬುದನ್ನು ಸಾಂಕೇತಿಕವಾಗಿ ಸೂಚಿಸುವುದು ಈ ಆಚರಣೆಯ ಉದ್ದೇಶವಾಗಿದೆ. ಹೆಣ್ಣಿಗೆ ಪೌಷ್ಠಿಕ ಆಹಾರವನ್ನು ನೀಡಿ ಆಕೆಯ ಶಾರೀರಿಕ ಬೆಳವಣಿಗೆಯ ಮಹತ್ವವನ್ನು ಈ ಆಚರಣೆಯು ಸೂಚಿಸುತ್ತದೆ. ಈ ರೀತಿಯ ಆಚರಣೆ ಹೆಚ್ಚು ಕಡಿಮೆ ತುಳುನಾಡಿನ ಎಲ್ಲಾ ಬ್ರಾಹ್ಮಣೇತರ ಜನವರ್ಗಗಳಲ್ಲೂ ಕಂಡುಬರುತ್ತದೆ. ಹೆಣ್ಣಿಗೆ ಮಹತ್ತರ ಸ್ಥಾನ ನೀಡಿರುವುದು ಮತ್ತು ಹೆಣ್ಣಿನ ಕುರಿತು ಕಾಳಜಿಯನ್ನು ಈ ಆಚರಣೆಯು ಸ್ಪಷ್ಟಪಡಿಸುತ್ತದೆ. ಕೌಟುಂಬಿಕ ಮತ್ತು ದಾಂಪತ್ಯದ ಬದುಕಿಗೆ ಹೆಣ್ಣನ್ನು ಸಿದ್ಧಗೊಳಿಸುವ ಚಟುವಟಿಕೆಯಾಗಿ ಈ ಆಚರಣೆಯು ಕಂಡುಬರುತ್ತದೆ.

ಮನ್ಸರ ಮದುವೆಯ ಆಚರಣೆ

ಮದುವೆಗೆ ಸಂಬಂಧಿಸಿದ ವಿವರಗಳು ಒಂದು ಜಾತಿ –  ವರ್ಗದಲ್ಲಿ ಹೆಣ್ಣಿನ ಕುರಿತಾದ ದೃಷ್ಟಿಕೋನಕ್ಕೆ ಹಲವು ಉದಾಹರಣೆಗಳನ್ನು ಒದಗಿಸಬಲ್ಲುದು. ಮದುವೆ ವ್ಯಕ್ತಿಯ ಜೀವನದ ಮಹತ್ವದ ಘಟ್ಟ. ಅದರಲ್ಲೂ ಸಂಪ್ರದಾಯಬದ್ಧ ಸಮಾಜದಲ್ಲಿ ಮದುವೆಯು ಹಲವು ವಿಚಾರಗಳನ್ನು ವ್ಯಾಖ್ಯಾನಿಸುತ್ತದೆ. ಅದರಲ್ಲೂ ಬುಡಕಟ್ಟು ಮತ್ತು ಗಿರಿಜನರ ಮದುವೆ ಸಂಪ್ರದಾಯವು ಹಲವು ಕುತೂಹಲಕಾರಿ ಅಂಶಗಳ ಬಗ್ಗೆ  ಬೆಳಕು ಚೆಲ್ಲುತ್ತದೆ. ಈ ದೃಷ್ಟಿಯಿಂದ ಮನ್ಸರ ಮದುವೆಗಳನ್ನು ಗಮನಿಸಬೇಕಾಗಿದೆ.

ಹುಲ್ಲುಕಡ್ಡಿ ನಿಶ್ಚಯ

ಮನ್ಸರ ಮದುವೆಗೆ “ಮೊಜಕೆ” ಎಂದು ಹೇಳುತ್ತಾರೆ. ಗಂಡ ಹೆಂಡತಿಯರಿಗೆ ಪಿಲ್ಲೆ-ಪಿಲೆತಿ ಎಂದು ಕರೆಯುತ್ತಾರೆ. ವಿಶಿಷ್ಟ ರೀತಿಯಲ್ಲಿ ಮದುವೆ ನಿಶ್ಚಯವಾಗುವುದಿದೆ. ಹುಲ್ಲು ಕಡ್ಡಿ ಹಿಡಿದು ನಿಶ್ಚಯ ಮಾಡುತ್ತಾರೆ. ಇದನ್ನು “ಹುಲ್ಲುಕಡ್ಡಿ ಗಂಟು” ಎಂದು ಕರೆಯುತ್ತಾರೆ. ಹುಲ್ಲು ಕಡ್ಡಿ ಹಿಡಿಯುವ ಸಂಪ್ರದಾಯವು “ನಿಶ್ಚಯ”ಕ್ಕೆ ಸಂಕೇತ. ಹಿಂದೆ ಯುದ್ಧದ ಸಂದರ್ಭದಲ್ಲಿ ರಣರಂಗದಲ್ಲಿ ಸೈನಿಕರು ಸೋತಾಗ ತನ್ನ ಸೋಲನ್ನು ಖಚಿತಪಡಿಸಲು ಹುಲ್ಲುಕಡ್ಡಿಯನ್ನು ಎತ್ತಿ ಹಿಡಿಯುತ್ತಾರೆ. ಹಾಗೆ ಶರಣಾದ ವೈರಿಯನ್ನು ಕೊಲ್ಲಬಾರದು ಎಂಬ ನಿಯಮ ಯುದ್ಧ ಸಂದರ್ಭದಲ್ಲಿತ್ತು. ಇಲ್ಲಿಯೂ ಮದುವೆಯನ್ನು ನಿಶ್ಚಯಗೊಳಿಸಲು ಹುಲ್ಲು ಕಡ್ಡಿಯನ್ನು ತೋರಿಸಲಾಗುತ್ತದೆ. ಬಹುಶಃ ಬುಡಕಟ್ಟುಗಳಲ್ಲಿ ಯಾವುದೇ ಕಾರ್ಯವು ನಿಶ್ಚಯವಾದಾಗ ಅದನ್ನು ಬದ್ಧಗೊಳಿಸಲು ಹುಲ್ಲುಕಡ್ಡಿಯನ್ನು ಹಿಡಿಯುವ ಪರಂಪರೆ ಬೆಳೆದು ಬಂದಿರಬೇಕು. ಇದನ್ನು ಮನ್ಸರಲ್ಲೂ ಕಾಣುತ್ತೇವೆ. ಮದುವೆಗೆ ವಧು – ವರರು ಬದ್ಧರಾಗಿರಬೇಕೆಂದು ಇದು ಸೂಚಿಸುತ್ತದೆ.

ಬಳಿ ಮತ್ತು ಮದುವೆ

ಮದುವೆಗೆ ಬಳಿ ನೋಡುವ ಸಂಪ್ರದಾಯವಿದೆ. ಅಂದರೆ ಒಂದೇ ಬಳಿಯವರ ಮದುವೆ ನಿಷಿದ್ಧ. ಅವರು ರಕ್ತ ಸಂಬಂಧಿಗಳಾಗಿರಬಹುದು ಎಂಬ ದೃಷ್ಟಿಯಿಂದ ಈ ರೀತಿಯಿರಬಹುದು. ಕೆಲವು ನಿರ್ದಿಷ್ಟ ಬಳಿಗಳಿಗೆ ಕೆಲವು ನಿರ್ದಿಷ್ಟ ಬಳಿಗಳೊಂದಿಗೆ ಸಂಬಂಧ ಏರ್ಪಡಿಸಿಕೊಳ್ಳಬಹುದೆಂಬ ನಿಯಮವಿದೆ. ಅದರಂತೆ ಸಂಬಂಧ ಏರ್ಪಡುತ್ತವೆ. ತಾಯಿಯ ಬಳಿಯ ಹೆಣ್ಣನ್ನು ಮದುವೆಯಾಗುವುದಕ್ಕೆ ನಿಷೇಧವಿದೆ. ರಕ್ತ ಸಂಬಂಧಿಗಳು ಮದುವೆಯಾಗದಂತೆ ತಡೆಯುವ ಆರೋಗ್ಯಕರ ಸಂಪ್ರದಾಯ ಬಳಿ ಸಂಪ್ರದಾಯ ಮೂಲಕ ಮಾಡಲಾಗುತ್ತದೆ.

ತೆರ ಅಥವಾ ವಧು ದಕ್ಷಿಣೆ

ಮನ್ಸ ಸಮುದಾಯದ ಮದುವೆಗಳಲ್ಲಿ ಅತ್ಯಂತ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ “ವಧು ದಕ್ಷಿಣೆ” ಅಥವಾ “ತೆರ” ನೀಡುವ ಪದ್ಧತಿ. ಅಲ್ಲಿ ವರದಕ್ಷಿಣೆಗೆ ಸಂಪೂರ್ಣ ನಿಷೇಧವಿದೆ. ವರದಕ್ಷಿಣೆಯನ್ನು ಪಡೆದುಕೊಳ್ಳುವುದನ್ನು ಸಂಪ್ರದಾಯವೇ ವಿರೋಧಿಸುತ್ತದೆ. ಬದಲಾಗಿ ವಧುವಿಗೆ ತೆರ ನೀಡುವ ಪದ್ಧತಿ ಜಾರಿಯಲ್ಲಿದೆ. ಹಿಂದೆ ಹೆಣ್ಣನ್ನು ಅಪಹರಿಸಿ ತಂದರೆ ತೆರ ನೀಡುವ ಪದ್ಧತಿ ಇತ್ತು. ಕ್ರಮೇಣ ಅದು ಸಂಪ್ರದಾಯವೇ ಆಯಿತು ಎಂದು ಕೆಲವು ಹಿರಿಯರ ಅಭಿಪ್ರಾಯ. ವಧುದಕ್ಷಿಣೆಯಾಗಿ ಮೂರು ಮುಡಿ ಅಕ್ಕಿ, ನೂಲಿನ ಕರಿಮಣಿ, ಸೀರೆ, ರವಕೆ, ತಲೆಗೆ ಹಾಕುವ ಎಣ್ಣೆ, ಬಾಚಣಿಗೆಗಳನ್ನು ಹುಡುಗನ ತೆರವಾಗಿ ನೀಡಬೇಕು. ಮೂರು ಮುಡಿ ಅಕ್ಕಿಗೆ ಬದಲಾಗಿ ೧೦೧ ರೂಪಾಯಿ, ಎಣ್ಣೆ ಖರ್ಚಿಗೆಂದು ೧೨೫ ರೂಪಾಯಿ ನೀಡುವ ಪದ್ಧತಿಯಿದೆ. ಹೆಣ್ಣಿಗೆ ತವರುಮನೆಯಿಂದ ಕತ್ತಿ, ಮುಟ್ಟಾಳೆ, ಹಿಡಿಸೂಡಿ, ಬಟ್ಟಲನ್ನು ನೀಡುತ್ತಾರೆ.

ಬುಡಕಟ್ಟು ಜನಾಂಗಗಳಲ್ಲಿ ಗಂಡುಗಳ ಸಂಖ್ಯೆ ಹೆಚ್ಚಿರುವುದರಿಂದ ವರದಕ್ಷಿಣೆ ಬದಲಾಗಿ ವಧು ದಕ್ಷಿಣೆ ಜಾರಿಯಲ್ಲಿದೆ ಎಂದು ಸಮಾಜಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಆದರೆ ಮಾತೃಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ಮಹತ್ತ್ವದ ಸ್ಥಾನ ಇರುವುದರಿಂದ ಗಂಡಿನಷ್ಟೇ ಹೆಣ್ಣೂ ಮುಖ್ಯ ಎಂಬ ಕಲ್ಪನೆ ಇರುವುದರಿಂದ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿರಲು ಸಾಧ್ಯವಿಲ್ಲ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿನ ಕುರಿತಾದ ಕೀಳರಿಮೆ, ಗಂಡ ಶ್ರೇಷ್ಠ ಎಂಬ ಮನೋಭಾವದಿಂದ ಭ್ರೂಣಹತ್ಯೆ ಇತ್ಯಾದಿಗಳಿಂದ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಮಾತೃಮೂಲ ಕೌಟುಂಬಿಕ ವ್ಯವಸ್ಥೆಯಲ್ಲಿ ಈ ಸಾಧ್ಯತೆ ಕಡಿಮೆ. ಅಲ್ಲದೆ ಹಿಂದಿನಿಂದಲೂ ತಮ್ಮ ಸಮುದಾಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚೆಂಬುದನ್ನು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಮನ್ಸ ಸಮುದಾಯದ ಹಿರಿಯರು ಹೇಳಿದ್ದಾರೆ. ಇದರಿಂದ ಹೆಣ್ಣಿಗಿರುವ ಮಹತ್ವದಿಂದಲೇ ಈ ತೆರ ಅಥವಾ ವಧುದಕ್ಷಿಣೆ ಪದ್ಧತಿ ಜಾರಿಯಲ್ಲಿತ್ತು ಎಂಬುದು ಒಪ್ಪಬೇಕಾದ ವಿಚಾರವಾಗಿದೆ.

ಮದುವೆ ಮುಹೂರ್ತ

ಮದುವೆಯ ಹಿಂದಿನ ರಾತ್ರಿ ಮಹೂರ್ತ ಮಾಡುವ ಸಂಪ್ರದಾಯದಲ್ಲಿ ಮಹಿಳೆಯರಿಗೆ ಮುಖ್ಯ ಸ್ಥಾನವಿದೆ. ಮುಹೂರ್ತದ ಮಣೆಯ ಮೇಲೆ ಹೆಣ್ಣನ್ನು ಕುಳ್ಳಿರಿಸುತ್ತಾರೆ. ಒಲೆಯ ಮೇಲೆ ಮಣ್ಣಿನ ಪಾತ್ರೆಯನ್ನು ಇಟ್ಟು ಅದರ ಮೇಲೆ ಸುಣ್ಣದ ಬೊಟ್ಟನ್ನು ಇಡುತ್ತಾರೆ. ಒಲೆಯ ಮೇಲೆ ಮಣ್ಣಿನ ದೊಡ್ಡ ಪಾತ್ರೆ ಗುರ್ಕೆಯನ್ನು ಇಡುವಾಗ ಹೆಂಗಸರು ಪಾಡ್ದನ ಹಾಡುತ್ತಾರೆ. ಗಂಡಸರು ಮನರಂಜನೆಗಾಗಿ ದುಡಿ ಬಡಿಯುತ್ತಾರೆ. ಇಲ್ಲಿ ಸಾಮಾನ್ಯವಾಗಿ ಹೆಣ್ಣನ್ನು ರೇಗಿಸುವಂಥ ಸ್ವರಚಿತ ಪಾಡ್ದನಗಳನ್ನು ಹಾಡುತ್ತಾರೆ. ಅಲ್ಲಲ್ಲಿ ಕುಲದೇವರ ಕುರಿತಾದ ಪಾಡ್ದನಗಳನ್ನು ಹಾಡುವುದೂ ಇದೆ. ಗಂಡಸರು ದುಡಿ ಬಡಿದರೆ ಹೆಂಗಸರು ಹಾಡು ಹಾಡುತ್ತಾ ಕುಣಿಯುತ್ತಾರೆ. ಈ ಸಂದರ್ಭದಲ್ಲಿ ಕುಲದೈವವಾದ “ಸತ್ಯಸಾರಮಾಣಿ” ದೈವಕ್ಕೆ ಅವಲಕ್ಕಿ ಹಾಕುವ ಸಂಪ್ರದಾಯವು ಇದೆ. ಮದುವೆ ಮುಹೂರ್ತದ ಆಚರಣೆಯಲ್ಲಿ ಮಹಿಳೆಗೆ ಪ್ರಧಾನ ಸ್ಥಾನವಿದ್ದು, ಪುರುಷರಿಗೆ ಅಂತಹ ಮಹತ್ವವಿಲ್ಲ.

ಮದುವೆಯ ಸಂದರ್ಭದಲ್ಲಿ ಹೆಣ್ಣಿಗೆ ಮಹತ್ವವಿದೆ. ಮದುಮಗಳಿಗೆ ಸ್ನಾನ ಮಾಡಿಸಿ ಅಂಚು ಇರುವ ಬಿಳಿ ಸೀರೆಯನ್ನು ಸೊಂಟದಿಂದ ಕೆಳಗೆ ಉಡಿಸುತ್ತಾರೆ. ಸೊಂಟದಿಂದ ಮೇಲೆ ಮೆನ್ನಟೆಯೆನ್ನಲಾಗುವ ಒಂದು ರುಮಾಲಿನಂತಹ ವಸ್ತುವನ್ನು ಉಪಯೋಗಿಸುತ್ತಾರೆ. ಅದನ್ನು ಎದೆಗೆ ಹೊದಿಸಿ ಹಿಂದಕ್ಕೆ ಎಳೆದು ಕಟ್ಟುತ್ತಾರೆ. ಒಂದು ಕೈಗೆ ಗೆಜ್ಜೆತ್ತಿ (ಗೆಜ್ಜೆ ಕತ್ತಿ), ಇನ್ನೊಂದು ಕೈಗೆ ಬಿಳಿ ರುಮಾಲು ಜೊತೆಗೆ ಹಣ್ಣು ಅಡಿಕೆ, ಎಲೆ ಹಾಗೂ ರೂಪಾಯಿ ಕೊಡುತ್ತಾರೆ. ಈಗ ಮದುವೆಯ ಉಡುಪು ಬದಲಾವಣೆ ಹೊಂದಿದೆ. ಮೆನ್ನಟೆಯ ಬದಲಿಗೆ ರವಕೆ ಉಡುತ್ತಾರೆ. ಕರಿಮಣಿ, ಬಂಗಾರ, ಕಾಲುಂಗುರ, ಬಳೆ, ಕುಂಕುಮ, ಕರಡಿಗೆ, ಕನ್ನಡಿ, ಬಾಚಣಿಗೆ, ಎಣ್ಣೆ ಹೆಣ್ಣಿಗೆ ಗಂಡು ಒದಗಿಸಬೇಕು. ಕರಿಮಣಿಯನ್ನು ಕುಟುಂಬದ ಯಜಮಾನನು ಕಟ್ಟುತ್ತಾನೆ.

ಇಲ್ಲಿ ಗಂಡು ದಿಬ್ಬಣದಲ್ಲಿ ಹೆಣ್ಣಿನ ಮನೆಗೆ ಬಂದು ಕರಿಮಣಿ ಕಟ್ಟುವ ಸಂಪ್ರದಾಯವಿದೆ. ಗಂಡಿಗೂ ಕರಿಮಣಿ ಕಟ್ಟುವುದಿದೆ. ಗಂಡಿಗೆ ಕರಿಮಣಿ ಕಟ್ಟು ಆಚರಣೆಯನ್ನು “ಮೂರ್ತಮುತ್ತೇಸ” ಅಥವಾ ಮುತ್ತೇಸ ಕಟ್ಟುವುದು ಎನ್ನುತ್ತಾರೆ. ಇದನ್ನು ಕುಟುಂಬದ ಹಿರಿಯರು ನಿರ್ವಹಿಸುತ್ತಾರೆ. ಮನ್ಸರು ಕುಣಿತದ ಸಂದರ್ಭದಲ್ಲಿ ಬಡಿಯುವ ವಾದನ ದುಡಿಗೆ ಮದುವೆಯ ಸಂದರ್ಭದಲ್ಲಿ ಮಹತ್ವವಿದೆ. ಮದುವೆಯ ದಿನ ಸಿಂಗಾರಕ್ಕೆ ಕುಳಿತುಕೊಳ್ಳುವಾಗ ದುಡಿಯ ತುದಿಯಲ್ಲಿ ಸತ್ಯಸಾರ ಮಣಿ ದೈವದ ಹೆಸರು ಹೇಳಿ ಗಂಡಿಗೆ ಸುಣ್ಣದ ಬೊಟ್ಟು ಇಡುವ ಪದ್ಧತಿಯಿದೆ. ಹುಡುಗಿಗೆ ಧಾರೆಗೆ ಮೊದಲು ಸುಣ್ಣದ ಬೊಟ್ಟನ್ನು ಹಚ್ಚಲಾಗುತ್ತದೆ. ಮದುವೆಯ ಸಂದರ್ಭದಲ್ಲಿ ದುಡಿ ಬಡಿದು ಹಾಡುತ್ತಾ ಕುಣಿಯುವ ಸಂಪ್ರದಾಯವಿದೆ.

ಧಾರೆಯ ಬಳಿಕ ಹೆಣ್ಣಿನ ಮಾವ ಹೆಣ್ಣನ್ನು ಎತ್ತಿ ಗಂಡಿಗೆ ಒಪ್ಪಿಸುತ್ತಾನೆ. ಇದನ್ನು ಹೆಣ್ಣೊಪ್ಪಿಸುವುದು ಎಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಹೆಣ್ಣು – ಗಂಡಿನ ಕಡೆಯವರು ಹಾಡಿನ ಮೂಲಕ ಸಂಭಾಷಣೆ ನಡೆಸುವುದಾಗಿದೆ. ದಾಂಪತ್ಯದ ಬಗೆಗಿನ ಶೃಂಗಾರದ ಮಾತುಗಳು, ಮಧುರ ಸಂಭಾಷಣೆಗಳು, ಹಾಸ್ಯೋಕ್ತಿಗಳು, ಹೊಗಳಿಕೆಯ ಮಾತುಗಳು, ಬೈಗುಳಗಳು ನೀತಿ ಮಾತುಗಳು ಇರುವುದುಂಟು.

ಉದಾಹರಣೆಗೆ, “ನಮ್ಮ ಹೆಣ್ಣನ್ನು ಸಾಕಿ ಇಷ್ಟು ಬೆಳೆಸಿದ್ದೇವೆ. ಇನ್ನು ಮುಂದೆ ಸರಿಯಾಗಿ ನೋಡಿಕೊಳ್ಳುವ ಜವಾಬ್ದಾರಿ ನಿನ್ನದು. ಇಲ್ಲವಾದರೆ ನಿನ್ನ ಕೈಕಾಲು ಮುರಿಯುತ್ತೇವೆ.” ಎಂಬಂತಹ ಎಚ್ಚರಿಕೆಯ ಮಾತುಗಳು ಈ ಹಾಡುಗಳಲ್ಲಿರುವುದು ಗಮನಾರ್ಹವಾದುದು.

ಮದುವೆ ಸಂದರ್ಭದ ಹಲವು ವಿಚಾರಗಳು ವಿಶಿಷ್ಟವಾಗಿವೆ. ಮನ್ಸರಲ್ಲಿ ಮಾತ್ರ ಅನನ್ಯವಾದುದಾಗಿದೆ. ಗಂಡು ಹೆಣ್ಣಿನ ಮನೆಗೆ ಮದುವೆಗಾಗಿ ಬರುವುದರಲ್ಲಿ ಹೆಣ್ಣಿನ ಮಹತ್ವವಿದೆ. ಅವರಲ್ಲಿರುವ ತೆರ ಪದ್ಧತಿ ಹೆಣ್ಣಿನ ಮಹತ್ವವನ್ನು ಸೂಚಿಸುತ್ತದೆ. “ತಾಳಿ” ಕಟ್ಟುವ ಕ್ರಿಯೆ ಇವರ ಸಮುದಾಯಗಳಲ್ಲಿ ಹೆಣ್ಣಿಗೆ ಮಾತ್ರ ಸೀಮಿತವಾದುದು. ತಾಳಿ ಹೆಣ್ಣಿಗೆ ಪವಿತ್ರ ಎಂಬ ಕಲ್ಪನೆಯಿದೆ. ಆದರೆ ಮನ್ಸರ ಹೆಣ್ಣಿನ ತಾಳಿ ಕಟ್ಟುವವನು ಮಾವ ಅಲ್ಲದೆ ಗಂಡಿಗೂಸ ಹಿರಿಯ ತಾಳಿ ಕಟ್ಟುವ ಪದ್ಧತಿಯಿದೆ. ತಾಳಿಯ ಮೂಲಕ ಹೆಣ್ಣನ್ನು ಗಂಡಿನ ಅಧೀನಕ್ಕೆ ಒಳಪಡಿಸುವ ಮದುವೆಗಿಂತ ಇದು ಭಿನ್ನವಾದುದಾಗಿದೆ. ಮದುವೆಯ ಎಲ್ಲಾ ಚಟುವಟಿಕೆಗಳಲ್ಲಿ, ಹಾಡು-ಕುಣೀತಗಳ ಮೂಲಕ ಮದುವೆಯಲ್ಲಿ ಒಂದು ರೀತಿಯ ಮನೋರಂಜನೆಯ ವಾತಾವರಣ ನಿರ್ಮಾಣವಾಗುವುದಾದರೂ ಮುಖ್ಯವಾಗಿ ಗಂಡಿನ ಜವಾಬ್ದಾರಿಯನ್ನೂ, ಹೆಣ್ಣನ್ನು ಸಮಾನವಾಗಿ ಕಾಣಬೇಕೆಂಬ ಎಚ್ಚರಿಕೆಯನ್ನು ನೀಡಲು ಹಾಡುಗಳನ್ನು ಬಳಸಿಕೊಳ್ಳುವುದು ಮಹತ್ವದ ಅಂಶವಾಗಿದೆ. ಈ ಸಮುದಾಯದಲ್ಲಿ ಹೆಣ್ಣಿಗಿರುವ ಮಹತ್ವವನ್ನು ಇದು ಖಚಿತಪಡಿಸುತ್ತದೆ.

ಮರುಮದುವೆ ಮತ್ತು ವಿಚ್ಛೇದನ

ಗಂಡ ಅಥವಾ ಹೆಂಡತಿಯರು ಪರಸ್ಪರ ಸೌಹಾರ್ದತೆಯಿಂದ ಬದುಕುವುದು ಅಸಾಧ್ಯವೆಂದು ಕಂಡುಬಂದರೆ ಅವರು ಪ್ರತ್ಯೇಕವಾಗಿ ಬದುಕುವ ಇಲ್ಲವೇ ಮರುಮದುವೆ ಮಾಡಿಕೊಳ್ಳುವ ಮುಕ್ತ ಅವಕಾಶವಿದೆ. ಈ ಅವಕಾಶ ಕೇವಲ ಗಂಡಿಗಲ್ಲದೆ ಹೆಣ್ಣಿಗೂ ಇರುವುದು ಮಹತ್ವದ ಅಂಶವಾಗಿದೆ. ಗಂಡ ಸತ್ತರೆ ಹೆಣ್ಣಿಗೂ ಮರುಮದುವೆಯಾಗುವುದಕ್ಕೆ ಸಮುದಾಯದಲ್ಲಿ ಬೆಂಬಲವಿದೆ. ಎರಡನೆಯ ಮದುವೆಯಾಗುವುದನ್ನು “ಬಡುಧಾರೆ” ಎಂದು ಬರೆಯುತ್ತಾರೆ. ಇದು ಮದುವೆಗಿಂತ ಭಿನ್ನವಾಗಿದ್ದು ಸರಳವಾಗಿದೆ. ಮೊದಲ ಮದುವೆಯನ್ನು ಕೈಧಾರೆ ಎಂದು ಕರೆಯುತ್ತಾರೆ. ಬುಡುಧಾರೆಯಲ್ಲಿ ಹೆಣ್ಣು ಈಗಾಗಲೇ ಮೊದಲ ಗಂಡನಿಂದ ಮಗುವನ್ನು ಪಡೆದಿದ್ದರೆ ಆಕೆಗೆ ಸಿಗುವ ವಧುದಕ್ಷಿಣೆ ಕಡಿಮೆಯಾಗುತ್ತದೆ. ಮಕ್ಕಳನ್ನು ಪಡೆಯದಿದ್ದರೆ ಮೊದಲು ಮದುವೆಯಾಗುವ ಹೆಣ್ಣು ಪಡೆಯುವಷ್ಟೇ ತೆರವನ್ನು ಪಡೆಯಲು ಇವಳೂ ಅರ್ಹಳಾಗಿರುತ್ತಾಳೆ. ಉಳಿದಂತೆ ಕೈಧಾರೆಯ ಮಹಿಳೆಯಂತೆ ಬುಡುಧಾರೆಯ ಮಹಿಳೆಯರು ಸಮಾನರಾಗಿಯೇ ಇರುತ್ತಾರೆ.

ಇದು ಹೆಣ್ಣಿಗಿರುವ ಮಹತ್ವದ ಸ್ವಾತಂತ್ಯ್ರವಾಗಿದೆ. ಅನಿವಾರ್ಯ ಕಾರಣವಾದರೆ ಗಂಡನನ್ನು ಬಿಟ್ಟು ಬೇರೆ ಮದುವೆಯಾಗುವ ಸ್ವಾತಂತ್ಯ್ರ ನೀಡುವ ಸಾಮಾಜಿಕ ವ್ಯವಸ್ಥೆ ಅಪರೂಪವಾದುದು. ಈ ದೃಷ್ಟಿಯಿಂದಲೇ ಇಂಥ ಸಮಾಜದಲ್ಲಿ ಹೆಣ್ಣಿಗೆ ಹೆಚ್ಚಿನ ಸ್ಥಾನವಿದೆ ಎನ್ನಬಹುದಾಗಿದೆ. ಗಂಡಿನಷ್ಟೇ ಸಮಾನತೆಯನ್ನು ಇಲ್ಲಿ ಹೆಣ್ಣಿಗೆ ಒದಗಿಸಿರುವುದು ಮಹತ್ವದ ಅಂಶವಾಗಿದೆ.

ಬಾಣಂತಿ ಆರೈಕೆ
ಬಯಕೆ ಮದುವೆ

ಮನ್ಸರಲ್ಲಿ ಸೀಮಂತ ನಡೆಯವ ಪದ್ಧತಿಯು ವಿಶಿಷ್ಟವಾಗಿದೆ. ಅದನ್ನು “ಬಯಕೆ ಮದುವೆ” ಎನ್ನುತ್ತಾರೆ. “ಕೋಳಿ ಬಿಡುವ” ಪದ್ಧತಿಯಿದೆ. ಅಂದರೆ ಗರ್ಭಿಣಿಯ ಹೆಸರಿನಲ್ಲಿ ಹೆಣ್ಣು ಕೋಳಿಮರಿಯನ್ನು ಬಿಡುತ್ತಾರೆ. ಅದು ಗಂಡಿನ ಮನೆಯಲ್ಲಿ ಇರುತ್ತದೆ. ಅದನ್ನು ಸಾಕಿ ಮರಿ ಮಾಡಬೇಕು. ಇದು ಸಂತಾನ ಫಲದ ಸಂಕೇತವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಹೆಣ್ಣು ಹೆರಿಗೆಗಾಗಿ ತವರುಮನೆಗೆ ಹೋಗುವುದರಿಂದ ಆಕೆಯ ಹೆರಿಗೆ ಕ್ರಿಯೆಯನ್ನು ಸಂಕೇತಿಸುವುದು, ಗಂಡನಿಗೆ ನೆನಪಿಸುವುದು ಈ ಕ್ರಿಯೆಯ ಉದ್ದೇಶವಾಗಿದೆ. ಇದರಿಂದಲೇ ಹೆಣ್ಣು ತವರುಮನೆಯಲ್ಲಿರುವಾಗ ಹೆಣ್ಣುಕೋಳಿ ಮರಿ ಗಂಡನ ಮನೆಯಲ್ಲಿ ಇರುತ್ತದೆ.

ಬಯಕೆ ಸೀಮಂತ ಏಳನೇ ತಿಂಗಳಲ್ಲಿ ನಡೆಯುತ್ತದೆ. ತವರು ಮನೆಗೆ ಹೋಗುವ ಮೊದಲು ಗಂಡನ ಮನೆಯಲ್ಲಿ ಸೀಮಂತ ನಡೆಯುತ್ತದೆ. ಸೀಮಂತದ ದಿನ ಬಂಧುಗಳನ್ನು ಕರೆಸುತ್ತಾರೆ. ಗರ್ಭಿಣಿಯನ್ನು ಸಿಂಗಾರಗೊಳಿಸಿ ಅಂಗಳದಲ್ಲಿ ಕುಳಿತುಕೊಳ್ಳಿಸಿ ವಿಶೇಷ ಅಡುಗೆ, ಶಾವಿಗೆ, ದೋಸೆ, ಅಪ್ಪ, ಪಾಯಸ, ಕೋಳಿ ಪದಾರ್ಥ, ಕೋಳಿಮೊಟ್ಟೆ ಇತ್ಯಾದಿಗಳನ್ನು ಬಡಿಸುತ್ತಾರೆ. ಮುಂಜಾನೆ ಕೋಳಿ ಬಿಡುವ ಆಚರಣೆ ಇದೆ. ಬಯಕೆ ಸೀರೆ ಕುಪ್ಪಸವನ್ನು ಗಂಡಿನ ಮನೆಯವರು ಕೊಡಿಸಬೇಕು. ಹೂ, ಚಿನ್ನಾಭರಣ, ಸಿಹಿತಿಂಡಿ ಸಹಿತ ಹೆಣ್ಣಿನ ಮನೆಯವರು ಬರುತ್ತಾರೆ. ಸೀಮಂತವಾಗಿ ಗರ್ಭಿಣಿಯನ್ನು ತವರುಮನೆಯವರು ಮನೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಮತ್ತೆ ಸೀಮಂತ ನಡೆಯುತ್ತದೆ. ಬಳಿಕ ಹತ್ತಿರದ ಬಂಧುಗಳನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ಊಟ ಬಡಿಸುತ್ತಾರೆ.

ಹೆರಿಗೆಯ ಬಳಿಕ ಮಗುವನ್ನು ತೊಟ್ಟಿಲಿಗೆ ಹಾಕುವ ಪದ್ಧತಿ ವಿಶಿಷ್ಟವಾದುದ್ದು. ಮಗು ಹುಟ್ಟಿದ ಹದಿನಾರನೇ ದಿನದಲ್ಲಿ ಬಾಣಂತಿ ಸೂತಕ ಕಳೆದು ತೊಟ್ಟಿನಿಗೆ ಹಾಕುವ ಕ್ರಮ. ತವರುಮನೆಯಲ್ಲಿ ಈ ವಿಧಿ ನಡೆಯುತ್ತದೆ. ಗಂಡನ ಮನೆಯವರು ತವರುಮನೆಗೆ ಬರಬೇಕು. ಈ ದಿನ “ಪೇತ್” ಕೊಡುವ ಪದ್ಧತಿ ಬಹಳ ವಿಶಿಷ್ಟವಾದದ್ದು. ಓಲೆಬೆಲ್ಲ, ತೆಂಗಿನಕಾಯಿ, ಮೆಂತೆ, ಕರಿಮೆಣಸು, ಎಣ್ಣೆ, ಕೊತ್ತಂಬರಿ, ಓಮ, ಸೊಂಟದ ನೂಲು ಇತ್ಯಾದಿಗಳನ್ನು ಗಂಡಿನ ಮನೆಯವರು ತೆಗೆದುಕೊಂಡು ಹೋಗಿ ಕೊಡಬೇಕು. ಗಂಡನ ಮನೆಯವರು ಬಾಣಂತಿ ಆರೈಕೆಯ ಖರ್ಚನ್ನು ಕೊಡಬೇಕು. ಇದನ್ನು ಮಗುವಿನ ತಂದೆ ತೆಗೆದುಕೊಂಡು ಹೋಗಬೇಕು. ಮಗುವಿನ ಹೆರಿಗೆಯ ಖರ್ಚು ಮತ್ತು ಆ ವಸ್ತುಗಳನ್ನು ಬಾಣಂತಿಯ ತಾಯಿಯ ಕೈಯಲ್ಲಿ ಮಗುವಿನ ತಂದೆ ಅಥವಾ ತಂದೆಯ ತಾಯಿ (ಅಜ್ಜಿ) ಕೊಡಬೇಕು. ಹೆಣ್ಣಿನ ಕಡೆಯವರು “ಪೇತ್” ಬಂದಿದೆ ಎಂದು ಹೇಳಬೇಕು. ಆ ಬಳಿಕ ಊಟ ಮಾಡಿ ಹೋಗುತ್ತಾರೆ. ಕೆಲವು ತಿಂಗಳುಗಳ ನಂತರ ಬಂದು ಮಗುವನ್ನು ತಂದೆಯ ಮನೆಯವರು ಕರೆದುಕೊಂಡು ಹೋಗುತ್ತಾರೆ.

“ಪೇತ್” ಕೊಡುವುದನ್ನು ತವರುಮನೆಯವರು ಗಂಭೀರವಾಗಿ ಪರಿಗಣಿಸುತ್ತಾರೆ. ಕೆಲವೊಮ್ಮೆ ಈ “ಪೇತ್” ಅಂದರೆ ಮಗುವಿನ ಖರ್ಚನ್ನು ಕೊಡದಿದ್ದರೆ ಬಾಣಂತಿಯನ್ನು ಗಂಡನ ಮನೆಗೆ ಕಳುಹಿಸಿಕೊಡುವುದು ಇಲ್ಲ. ಇದರಿಂದ ಇದೊಂದು ಬಹಳ ಮುಖ್ಯ ಕ್ರಿಯೆಯಾಗಿದೆ. ತೊಟ್ಟಿಲಲ್ಲಿ ಹಾಕುವ ಆಚರಣೆಯ ದಿನ ಮಗುವಿನ ಹೆಸರಿಡುವ ಪದ್ಧತಿಯೂ ಇದೆ. ಮಗುವಿನ ಅಕ್ಕಿ ಹೆಸರನ್ನು ಮಗುವಿನ ಕಿವಿಯಲ್ಲಿ ಹೇಳುತ್ತಾಳೆ.

ಬಾಣಂತಿ ಆರೈಕೆ ಮತ್ತು ಸೀಮಂತದಲ್ಲಿ ಹಲವು ಮುಖ್ಯ  ವಿಚಾರಗಳು ಹೆಣ್ಣಿನ ಮಹತ್ವವನ್ನು ತಿಳಿಸುತ್ತದೆ. ಮದುವೆಯಾಗಿ ಬಂದ ಹೆಣ್ಣಿಗೆ ಗಂಡನ ಮನೆಯಲ್ಲಿ ಮಹತ್ವದ ಸ್ಥಾನವಿದೆ. ಇದರಿಂದಲೇ ಆಕೆ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಸಾಂಕೇತಿಕವಾಗಿ ಕೋಳಿಯನ್ನು ಬಿಡಲಾಗುತ್ತದೆ. “ಪೇತ್”ಸ ಕೊಡುವ ಪದ್ಧತಿ ಗಂಡನ ಜವಾಬ್ದಾರಿಯನ್ನು ನೆನಪಿಸುತ್ತದೆ. ತುಳುನಾಡಿನ ಹೆಚ್ಚಿನ ಜಾತಿ- ವರ್ಗಗಳಲ್ಲಿ ಮೊದಲ ಹೆರಿಗೆಯ ಜವಾಬ್ದಾರಿ ತವರಿಗೆ ಸೇರಿದ್ದು. ಅದು ಗಂಡನ ಮನೆಯ ಜವಾಬ್ದಾರಿಯಲ್ಲ. ಈ ಬಗ್ಗೆ ಗಂಡನ ಮನೆಯವರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಮನ್ಸರಲ್ಲಿ ಮಗುವಿನ ಹೆರಿಗೆಯ ಖರ್ಚನ್ನು ಗಂಡನು ಕೊಡಬೇಕಾದುದು ವಿಶಿಷ್ಟವಾಗಿದೆ. ವಧುದಕ್ಷಿಣೆಯಂತೆ ಇದೊಂದು ವಿಶಿಷ್ಟ ಪದ್ಧತಿಯಾಗಿದೆ. ತವರುಮನೆಯವರಿಗೆ ಇದೊಂದು ಉಪಯುಕ್ತ ಸಂಪ್ರದಾಯವಾಗಿದೆ. “ಪೇತ್” ಕೊಡುವುದು, ಹೆಸರಿಡುವುದು, ಈ ಕ್ರಿಯೆಯಲ್ಲಿ ಮಗುವಿನ ಅಜ್ಜಿಗೆ ಮಹತ್ವದ ಸ್ಥಾನವಿರುವುದು ಮನ್ಸರಲ್ಲಿ ಹೆಣ್ಣಿಗಿರುವ ಮಹತ್ವವನ್ನು ತಿಳಿಸುತ್ತದೆ. ಇಂಥ ಆಚರಣೆಗಳಲ್ಲಿ ಗಂಡಿನಷ್ಟೆ ಹೆಣ್ಣಿಗೆ ಮಹತ್ವ ಇರುವುದು ಈ ಸಮುದಾಯದ ವೈಶಿಷ್ಟ್ಯವಾಗಿದೆ.

ಬಾಣಂತಿ ಸೂತಕಮುಟ್ಟಿನ ಆಚರಣೆ

ಋತುಮತಿಯಾಗುವುದು ಒಂದು ಸಹಜ ಕ್ರಿಯೆಯಾದರೂ ಸಾಮಾಜಿಕವಾಗಿ ಅದನ್ನು ಅಸ್ಪೃಶ್ಯವೆಂದು ಭಾವಿಸುವುದು ಪರಂಪರಾಗತವಾಗಿ ಎಲ್ಲಾ ಸಮಾಜಗಳಲ್ಲೂ ಪರಿಗಣಿಸಲಾಗಿದೆ. ಆಧುನಿಕ ಸಮಾಜಿಕ ವ್ಯವಸ್ಥೆಯಲ್ಲಿ ಮುಟ್ಟಿನ ದಿನಗಳ ವಿಧಿವಿಧಾನಗಳು ದೂರವಾಗುತ್ತಿದ್ದರೂ ಆ ರೀತಿಯ ಕಲ್ಪನೆ ದೂರವಾಗಿಲ್ಲ. ಮನ್ಸರಲ್ಲೂ ಮುಟ್ಟು ಸೂತಕ ಎಂಬ ಕಲ್ಪನೆಯಿದೆ. ಹೆಣ್ಣು ಮುಟ್ಟಾಗುವುದನ್ನು “ಹೊರಗಾಗುವುದು” ಎನ್ನುತ್ತಾರೆ. ಆಕೆ ಮನೆಯ ಹೊಸ್ತಿಲಿನಿಂದ ಹೊರಗೆ ಇರಬೇಕು. ಆಕೆ ಕೊಟ್ಟಿಗೆ ಅಥವಾ ಅಂಗಳದ ಮೂಲೆಯಲ್ಲಿರಬೇಕು. ಮೂರು ದಿನದವರೆಗೂ ಈ ಸೂತಕವಿರುತ್ತದೆ. ಮೂರು ದಿನಗಳ ಬಳಿಕ ಸ್ನಾನ ಮಾಡಿ ಹೊರಗಿನಿಂದ ಸೆಗಣಿ ಸಾರಿಸುತ್ತಾ ಒಳಗೆ ಬರಬೇಕು. ಮುಟ್ಟಿನ ಕುರಿತಾಗಿ ಸಾಂಪ್ರದಾಯಕ ಮನೋಭಾವವನ್ನು ಇಲ್ಲಿ ಕಾಣಬಹುದು.

ಸತ್ತ ಸೂತಕಕ್ಕಿಂತಲೂ ಹೆತ್ತ ಸೂತಕ ಹೆಚ್ಚು ಎಂಬ ನಾಣ್ಣುಡಿ ಇದೆ. ಇದರಂತೆ ತುಳುನಾಡಿನ ಎಲ್ಲಾ ಜಾತಿವರ್ಗಗಳಲ್ಲಿ ಹೆರಿಗೆ ಬಳಿಕ ಹದಿನಾರು ದಿನಗಳನ್ನು ಸೂತಕದ ದಿನಗಳೆಂದು ಪರಿಗಣಿಸಲಾಗುತ್ತದೆ. ಹೆತ್ತ ಮೂರನೇ ದಿನ ಮೂರನೆ ಆಮೆ, ಐದನೇ ದಿನ ಏಳನೇ ಅಮೆ (ಸೂತಕ)ಯನ್ನು ಆಚರಿಸಲಾಗುತ್ತದೆ. ದೇವರ ತೀರ್ಥ ತಂದು ಮನೆಗೆ ಚಿಮುಕಿಸುತ್ತಾರೆ. ಬಟ್ಟೆ ಚಾಪೆಗಳಿಗೆ ಚಿಮುಕಿಸುತ್ತಾರೆ. ಬಳಿಕ ಬಾಣಂತಿ ಸ್ನಾನ ಆದ ಬಳಿಕ ಅವಳಿಗೆ ಆಹಾರ ನೀಡಲಾಗುತ್ತದೆ. ಹದಿನಾರನೆಯ ದಿನ ಮಾಡುವ ಶುದ್ಧದಲ್ಲಿ ಬಾಣಂತಿ ಸೂತಕ ಕಳೆಯುತ್ತದೆ. ಬಳಿಕ ಮಗುವನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರ ನಡೆಯುತ್ತದೆ.

ಸೂಲಗಿತ್ತಿಯರು

ಮನ್ಸರಲ್ಲಿ ಅದೇ ಸಮುದಾಯದಲ್ಲಿ ಹೆರಿಗೆ ಮಾಡಿಸುವ ಸೂಲಗಿತ್ತಿಯರಿರುತ್ತಾರೆ. ಅವರು ಹೆರಿಗೆಯ ಮೇಲ್ವಿಚಾರವನ್ನು ನೋಡಿಕೊಳ್ಳುತ್ತಾರೆ. ಅವರು ಹೆರಿಗೆ ಮಾಡಿಸುವ ವಿಚಾರದಲ್ಲಿ ಪರಿಣಿತರಾಗಿರುತ್ತಾರೆ. ಗರ್ಭಪಾತ, ಮಗುವಿನ ಸ್ಥಾನವನ್ನು ಅವರು ಗರ್ಭಿಣಿಯನ್ನು ನೋಡಿಯೇ ಗುರುತಿಸುತ್ತಾರೆ. ಹೆರಿಗೆಯ ವಿಧಾನವನ್ನು ಅವರು ತಿಳಿದಿರುತ್ತಾರೆ. ಶ್ರೀಮತಿ ಮೋಂಟು ಎಂಬುವರು ಹಲವಾರು ಹೆರಿಗೆಗಳನ್ನು ಮಾಡಿದ ಅನುಭವ ಉಳ್ಳವರು. ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಶನವನ್ನು ಅನುಬಂಧದಲ್ಲಿ ನೀಡಲಾಗಿದೆ. ಇತ್ತೀಚೆಗೆ ಮಹಿಳೆಯರು ಹೆರಿಗೆಗೆ ಆಸ್ಪತ್ರೆಗಳಿಗೆ ಹೋಗುತ್ತಿರುವುದಾದರೂ ಈಗಲೂ ಮನೆಯಲ್ಲಿ ಸೂಲಗಿತ್ತಿಯರು ಹೆರಿಗೆ ಮಾಡುವ ಪದ್ಧತಿಯಿದೆ.