ಮಲೆನಾಡಿನ ಕೃಷಿಕರ ಮನೆ ತೋಟದ ಸನಿಹದಲ್ಲಿರುತ್ತದೆ. ಕಾಡಿನ ಜತೆಗೆ ಕೃಷಿ ಮಾಡಬೇಕಾದ ಇಲ್ಲಿ ಬೆಳೆ ರಕ್ಷಣೆ ಕಷ್ಟದ ಕೆಲಸ. ವನ್ಯಜೀವಿಗಳ ಉಪಟಳ, ಕಳ್ಳರು, ಬಿಡಾಡಿ ದನಕರುಗಳ ಹಾವಳಿ. ಶತಮಾನಗಳ ಇತಿಹಾಸ ತೆಗೆದರೆ ಇಲ್ಲಿ ಭೂಮಿಯಲ್ಲಿ ದುಡಿಮೆ ಮಾಡುವವರಿಲ್ಲದೇ ತೋಟಗಳು ಹಾಳಾದ ದಾಖಲೆಗಳಿವೆ. ಕೂಲಿಕಾರರ ಅಭಾವವೂ ಇತ್ತು. ಕೃಷಿ ಬೆಳೆ ಕೈಗೆ ಬರಬೇಕೆಂದರೆ ಜತೆಗೆ ಬದುಕುವದು ಅನಿವಾರ್ಯವಾಗಿತ್ತು. ಅವಿಭಕ್ತ ಕುಟುಂಬ ಪದ್ದತಿ ಚಾಲ್ತಿಯಲ್ಲಿದ್ದ ಕಾಲದಲ್ಲಿ ಪ್ರತಿ ಮನೆಯಲ್ಲಿಯೂ ೪೦-೫೦ ಜನ ಒಟ್ಟಿಗೆ ಬಾಳುತ್ತಿದ್ದರು. ಭತ್ತದ ಗದ್ದೆ, ಅಡಿಕೆ ತೋಟಗಳಲ್ಲಿ ಲಾಗಾಯ್ತಿನಿಂದಲೂ ತೋಟಕ್ಕೆ ವಿಶೇಷ ಮಹತ್ವ. ಹೀಗಾಗಿ ಕೃಷಿ ನಿರ್ವಹಣೆ ಅನುಕೂಲವಾಗಲೆಂದು ತೋಟದ ಸನಿಹದಲ್ಲಿ ಮನೆ ಕಟ್ಟುತ್ತಿದ್ದರು.ತೀರ್ಥಹಳ್ಳಿಯ ಕೃಷಿತಜ್ಞ ದಿ| ಎಂ. ಪುರುಷೋತ್ತಮ ರಾಯರು ನೀವು ನಿಮ್ಮ ಭೂಮಿ ಮೆಟ್ಟಿದ್ದೀರಾ? ತೋಟದ ಎಲ್ಲ ಮರಗಳನ್ನು ಮುಟ್ಟಿದ್ದೀರಾ?’ ಕೃಷಿ ಸಭೆಗಳಲ್ಲಿ ಕೇಳುತ್ತಿದ್ದರು. ಭೂಮಿಯ ಜತೆಗೆ ಕೃಷಿಕರ ನಿಕಟ ಸಂಪರ್ಕವಿದ್ದಾಗ ಮಾತ್ರ ಕೃಷಿ ಅಭ್ಯುದಯ ಸಾಧ್ಯ  ಎಂಬುದು ಇದರರ್ಥ.

ಮಲೆನಾಡಿನ ಹಳ್ಳಿ ನಿರ್ಮಾಣ ಪರಂಪರೆಯಲ್ಲಿ ತೋಟದ ಪಕ್ಕ ಮನೆ ನಿಮಿಸುವಲ್ಲಿ ಕೃಷಿ ಸೂತ್ರ ಅಡಕವಾಗಿದೆ. ಮನೆಯಿಂದ ಅಂಗಳಕ್ಕೆ ಕಾಲಿಟ್ಟರೆ ತೋಟದ ಜತೆಗೆ ಒಡನಾಟ. ಹತ್ತು ನಿಮಿಷ ಸಮಯವಿದ್ದರೆ ತೋಟ ಸುತ್ತಾಡಿ ಮರಳುವ ಸದಾವಕಾಶ. ತೋಟಕ್ಕೆ ಹೋಗಲು ಹೆಚ್ಚು  ಸಮಯದ ಅಗತ್ಯವಿಲ್ಲದ್ದರಿಂದ ಕೃಷಿಕರು ದಿನದ ಹೆಚ್ಚು ಸಮಯ ಒಂದಿಲ್ಲೊಂದು ಕೆಲಸದಲ್ಲಿ ಕಾಲ ಕಳೆಯಬಹುದು. ಮಧ್ಯಾನ್ಯ ಊಟದ ಸಮಯಕ್ಕೆ ಬಾಳೆಗೊನೆ ತಿನ್ನಲು ಬರುವ ಮಂಗ ಓಡಿಸುವದು, ರಾತ್ರಿ ಕಾಡು ಹಂದಿ ಹಾನಿ ತಡೆಯುವದಕ್ಕೂ ಇಡೀ ಕೃಷಿ ಕುಟುಂಬ ಎಚ್ಚರ! ಮಕ್ಕಳು, ಹಿರಿಯರು ,ಹೆಂಗಸರು ವ್ಯತ್ಯಾಸವಿಲ್ಲದೇ ಮನೆ ಮಂದಿಯೆಲ್ಲ ಅವರವರ ಸಮಯಕ್ಕೆ ತೋಟಕ್ಕೆ ಹೋಗಿ ಕೈಲಾದ ಕೆಲಸ ಮಾಡಬೇಕು. ಇದರಿಂದ ಕೃಷಿಯ ಎಷ್ಟೋ ಕೆಲಸಗಳು ಸಲೀಸಾಗಿ ಸಮಯಕ್ಕೆ ಸರಿಯಾಗಿ ನಡೆಯುತ್ತವೆ. ಸಸಿಗಳಿಗೆ ನೀರು, ಗೊಬ್ಬರ ಹಾಕುವದು, ಕಳೆ ತೆಗೆಯುವ ಕಾರ್ಯ ಹಿಂದೆ ಬಿದ್ದರೆ ನಿತ್ಯ ತೋಟ ಓಡಾಡುವ ಮನಸ್ಸು ಜಾಗೃತವಾಗುತ್ತದೆ. ಬೆಳೆಗೆ ಚಿಕ್ಕಪುಟ್ಟ ರೋಗ, ಕೀಟ ತಗಲಿದರೂ ಫಕ್ಕನೆ ಗಮನಕ್ಕೆ ಬರುತ್ತದೆ. ಇಲ್ಲಿ ದಿನದ ೨೪ ಗಂಟೆಯೂ ಕೃಷಿ ಉಸ್ತುವಾರಿ, ಮನೆ ಕಟ್ಟುವ ಸ್ಥಳ ಆಯ್ಕೆಯೇ ಕೃಷಿಗೆ ಉಪಕಾರಿ!

ತೋಟದ ಮುಖ್ಯ ಬೆಳೆಯಾದ ಅಡಿಕೆ, ತೆಂಗು, ಬಾಳೆ, ಏಲಕ್ಕಿ, ಕಾಳುಮೆಣಸು ಪೋಸುವಲ್ಲಿ ಗಂಡಸರು ಹೆಚ್ಚು ಆಸಕ್ತರು. ಅದೇ ತೋಟದ ವಿವಿಧ ಜಾಗಗಳಲ್ಲಿ ಸವತೆ, ಹಾಗಲು, ಸೂಜಿಮೆಣಸು, ಕೆಸವಿನಗಡ್ಡೆ, ಗೆಣಸು, ಸುವರ್ಣಗಡ್ಡೆ, ಅರಿಶಿನ, ಅಂಬೆಕೊಂಬು, ಜಾಯಿಕಾಯಿ, ಬಿಂಬಳೆ, ನುಗ್ಗೆ, ಬೇರು ಹಲಸು ಹೀಗೆ ಕಾಲಕ್ಕೆ ತಕ್ಕಂತೆ ಅಡುಗೆಗೆ ಅಗತ್ಯವಾದ ಸಸ್ಯ ಬೆಳೆಸುವಲ್ಲಿ ಮಹಿಳೆಯರು ಸಿದ್ದಹಸ್ತರು! ಕೃಷಿಯ ನಿಜವಾದ ಕ್ರಿಯಾಶೀಲತೆಯ ದರ್ಶನ ಇಲ್ಲಿ ಸಾಧ್ಯ. ಮನೆಯ ಪಕ್ಕ ಬಾವಿ, ಝರಿ ನೀರಿರುತ್ತದೆ. ತೋಟದ ಮನೆಗಳು ನೆಮ್ಮದಿಯ ನೆಲೆಗಳಾದವು. ಕಾಡಿನ ಜತೆಗೆ ಒಡನಾಡಿಗಳಾದ್ದರಿಂದ ಒಂಟಿತನದ ಭಯವಿಲ್ಲ. ಭೂಮಿಯ ಸಂಬಂಧಗಳು ಅನ್ಯೋನ್ಯವಾಗಿ ಬೆಸೆದವು.

ತುಮಕೂರು, ಜಮಖಂಡಿ, ರಾಯಚೂರು ಹೀಗೆ ಬಯಲುಸೀಮೆ, ಅರೆಮಲೆನಾಡಿನ ರೈತರು ಮಲೆನಾಡನ್ನು ಅಚ್ಚರಿಯಿಂದ ನೋಡುತ್ತಾರೆ. ಕೃಷಿಕರು ಒಂಟಿ ಮನೆಗಳಲ್ಲಿ ಏಕೆ ಬದುಕುತ್ತಾರೆಂಬ ಸಹಜ ಪ್ರಶ್ನೆ ಕಾಡುತ್ತವೆ. ದಾಳಿಂಬೆ, ತೆಂಗು, ಮಾವು, ಬಾಳೆ, ಚಿಕ್ಕು ಮುಂತಾದ ತೋಟದ ಒಳಗಡೆ ಸ್ವತಃ ಬದುಕಿದರೆ  ನಿಜವಾದ ಅನುಭವ ಸಾಧ್ಯವಿದೆ. ಇಂದು ಗುಬ್ಬಿ, ತಿಪಟೂರು, ತುರುವೆಕೆರೆ, ಚಿಕ್ಕನಾಯಕನಹಳ್ಳಿ ತೆಂಗಿನ ತೋಟಗಳಲ್ಲಿ ಅತ್ಯುತ್ತಮ ತೋಟ ಏಲ್ಲಿದೆ ಹುಡುಕಿದರೆ ಅಲ್ಲಿ ತೋಟದಲ್ಲಿ ಕೃಷಿಕರ ವಾಸದ ಮನೆ ದೊರೆಯುತ್ತದೆ! ಮೂಲತಃ ಈ ಪ್ರದೇಶದಲ್ಲಿ ತೆಂಗು ಪ್ರಮುಖ ಬೆಳೆ. ನಾಟಿ ಮಾಡುವದು, ಗೊಬ್ಬರ, ನೀರು ನೀಡುವದು, ಉಳುಮೆ ಮಾಡುವದು ಕೃಷಿ ಕೆಲಸ. ಸುಲಭ ವಿಧಾನ ಎಲ್ಲರಿಗೂ ಕರಗತವಾಗಿದೆ. ಸ್ವತಃ ಇಡೀ ಕುಟುಂಬ ತೆಂಗಿನ ತೋಟದಲ್ಲಿ ವಾಸಿಸುವ ಅಗತ್ಯವೇನಿದೆ ಎಂಬುದು ಹಲವರ ಪ್ರಶ್ನೆ. ಅಬ್ಬಬ್ಬಾ! ಎಂದರೆ ಒಂದು ಅಂದಾಜಿನ ಪ್ರಕಾರ ಒಟ್ಟೂ ತೆಂಗು ಬೆಳೆಗಾರರಲ್ಲಿ ಶೇಕಡಾ ೧೦ರಷ್ಟು ಕುಟುಂಬಗಳು ಮಾತ್ರ ತೋಟದಲ್ಲಿ ಬದುಕುತ್ತಿವೆ.

ತೋಟದಲ್ಲಿ ಏಕೆ ಮನೆ ನಿರ್ಮಿಸುತ್ತಿಲ್ಲ ಎಂದರೆ ಬಹುತೇಕ ಕುಟುಂಬದ ಯಜಮಾನರಿಗೆ ಅಂತಹ ಕಲ್ಪನೆಯಿಲ್ಲ! ಸಾಲು ಮನೆಗಳಲ್ಲಿ ಬದುಕುವ ಸಂಸ್ಕೃತಿ ಅಭ್ಯಾಸವಾಗಿದೆ. ಇಲ್ಲಿ ಕುಡಿಯುವ ನೀರಿಗೆ ಊರಿಗೊಂದು ಬಾವಿ ಇರುತ್ತಿತ್ತು. ನೀರು ನಂಬಿ ಅದರ ಸುತ್ತ ಊರು ಬೆಳೆಯಿತು. ಶತಮಾನಗಳ ಹಿಂದೆ ದರೋಡೆಗಳು ಮಾಮೂಲಿ. ರಕ್ಷಣೆಗೆ ಊರು ಒಂದಾಗಿರಬೇಕಿತ್ತು. ಸರಕಾರಿ ಸೌಲಭ್ಯಗಳು ಹೆಚ್ಚು ಜನಸಂಖ್ಯೆಯ ಗ್ರಾಮಗಳಿಗೆ ದೊರೆಯುವದರಿಂದ ಸಾಲು ಮನೆಗಳ ಹಳ್ಳಿ ಬೆಳೆದವು. ಶಾಲೆ, ವಿದ್ಯುತ್, ನಲ್ಲಿ ನೀರು, ಆಸ್ಪತ್ರೆ, ಬಸ್ ವ್ಯವಸ್ಥೆ ಎಲ್ಲವೂ ಮನೆಯ ಎದುರಿನಲ್ಲಿ ಸಾಧ್ಯವಿರುವಾಗ ಇದನ್ನು ಮೀರಿ ದೂರ ಸರಿಯುವದಕ್ಕೆ ಮನಸ್ಥಿತಿ ಒಪ್ಪಲಿಲ್ಲ. ಜಾನುವಾರು ಮೇವು, ತೆಂಗುಕೊಯ್ಲಿಗೆ ತೋಟಕ್ಕೆ ಹೋದರೆ ಸಾಕು. ಪರಿಣಾಮ ಹತ್ತಾರು ಎಕರೆ ತೋಟವಿದ್ದವರೂ ಕಿಷ್ಕಿಂದೆಯಂತಹ ಹಳ್ಳಿಯ ಪುಟ್ಟ ಮನೆಯಲ್ಲಿ ಗುಬ್ಬಚ್ಚಿಯಂತೆ ಬದುಕುತ್ತಾರೆ. ಕೃಷಿ ಕೆಲಸಕ್ಕಿಂತ ಹೆಚ್ಚಿನ ಸಮಯ ಓಡಾಟದಲ್ಲಿ ಕಳೆಯುತ್ತದೆ. ಹಳ್ಳಿಯಿಂದ ತೋಟಕ್ಕೆ ಗೊಬ್ಬರ ಸಾಗಿಸುವದು, ದನಕರು ಮೇವಿಗೆ ಹೊಡೆದುಕೊಂಡು ಹೋಗುವದು, ಕೃಷಿ ಉತ್ಪನ್ನ ಸಾಗಿಸುವ ಕೆಲಸಗಳಿಗೆ ಸಮಯ ಖಾಲಿಯಾಗುತ್ತದೆ. ತೆಂಗಿನ ತೋಟ ನಿರ್ವಹಿಸುವಲ್ಲಿಯೇ ಸಾಕೋ ಸಾಕಾಗಿ ಹೊಸ ಬೆಳೆ ಬೆಳೆಯುವ ಸಾಧ್ಯತೆ ಕ್ಷೀಣಿಸುತ್ತದೆ.

ತುಮಕೂರಿನ ಚಿಕ್ಕನಾಯಕನ ಹಳ್ಳಿಯ ಆಣೆಕಟ್ಟೆ ಜಯಣ್ಣ ತೋಟದಲ್ಲಿ ಮನೆ ನಿರ್ಮಿಸಿ ಹತ್ತಾರು ವರ್ಷಗಳಾಗಿವೆ. ತೋಟದ ಪಸಲು ಚೆನ್ನಾಗಿದೆ, ಬಾಳೆ, ಅಡಿಕೆ, ವೀಳ್ಯದೆಲೆ ಸೇರಿದಂತೆ ಹೆಚ್ಚು ಹೆಚ್ಚು ಸಸ್ಯಗಳನ್ನು ಬೆಳೆಸಿದ್ದಾರೆ.  ನಮ್ಮ ರೈತರಿಗೆ ತೋಟದ ಮನೆ ವಾಸದ ಅರಿವಿಲ್ಲ, ಪರಂಪರೆಯಂತೆ ದೂರದಲ್ಲಿ ನಿಂತು ತೋಟ ನಿರ್ವಹಿಸುತ್ತಾರೆ.ಭೂಮಿ ಅರ್ಥವಾಗಲು ಹಸಿರಿನ ಮಧ್ಯೆ ನಿಲ್ಲಬೇಕುತೋಟದ ಮನೆಯಲ್ಲಿ ತರಹೇವಾರಿ ಸಸ್ಯ ಬೆಳೆಸಿದ ಕೃಷಿಕ ರಘುರಾಮ ಆಣೆಕಟ್ಟೆ ಹೇಳುತ್ತಾರೆ. ಮಾದರಿಗಳನ್ನು ನೋಡಿ ಕೃಷಿಕರು ಮನೆ, ಮನ ಬದಲಿಸಬೇಕು.