ಆರುಗಂಟೆಯ ಮೊಳಗು :
ಮೂಡಣದ ಹೆರಿಗೆ ಮನೆಯಲ್ಲಿ ಸಡಗರವೊ ಸಡಗರ ;
ಕತ್ತಲಿನ ಬಸಿರು ಬೆಸಲಾದ ಬಂಗಾರ ಮೋರೆಯ ಕುವರ
ಬಂದ, ಉಲ್ಲಾಸಗಳ ತಂದ

ಜೋಯಿಸರು ಪಂಚಾಂಗವನು ತಿರುವಿ
ಸಕಲಗ್ರಹಬಲಸ್ಥಿತಿಯ ನೋಡಿ, ಕುಂಡಲಿ ಬರೆದು
ಮರಳಿದರು ಮನೆಗೆ.

ಅಂಬೆಗಾಲಿಟ್ಟು ಹೊಸಿಲು ದಾಟಿತು ಬಿಸಿಲು-
ಬಾಗಿಲಲಿ ಹಾಲ್ ಕರೆವ ಹಸುಕೊರಳ ಗಂಟೆದನಿ,
ತುಂಬು ಕೆಚ್ಚಲಿನಲ್ಲಿ ಮೊಗವಿಟ್ಟ ಮುದ್ದು ಕರು,
‘ಕಾ’ ಎನುವ ಕಾಗೆ, ಚಿಲಿಪಿಲಿ ಗುಬ್ಬಿ, ಬಾಲವಾಡಿಪ ನಾಯಿ ;
ಸೋಜಿಗದ ಹೊನಲು.

ಏಳು ಗಂಟೆಯ ಮೊಳಗು :
ಏಳರಿಂದ ಎಂಟರತನಕ ಸದಾ
ಮಲ್ಲಿಗೆಯ ಮಳೆಗರೆವ ಕಣ್ಣು ಎರಡೇ ಎರಡು
ಮೇಲ್ ಮುಗಿಲಲ್ಲಿ,
ಕೆಳಗೆ ಹಸುರು ಸೆರಗಿನ ಮೆತ್ತೆ ;
ಈ ನಡುವೆ ಬಾಯಿಟ್ಟು ಸೀಪಿದಾಗೆಲ್ಲ ಹಾಲನು ಸುರಿವ
ಚಂದ್ರ ಕುಂಭಗಳೆರಡು,
ಎಂದು ಯಾವಾಗಲೂ ಗಕ್ಕನೆಯೆ ನಿಂತು ಕೈಕೊಡದ ನಲ್ಲಿ
ತುಟಿಯ ಬಟ್ಟಲಿನಲ್ಲಿ !

ಎಂಟು ಗಂಟೆಗೆ ಅದಿಗೊ ಉಗುರು ಬೆಚ್ಚಗೆ ಬಿಸಿಲು-
ಸುತ್ತ ಮರಗಿಡಗಳಲಿ ಲಾಲಿ ಹಾಡುವ ಹಕ್ಕಿ,
ಮರದ ಬೊಂಬೆಗೂ ಜೀವ ಬಂದಿದೆ ; ಕಲ್ಲು ಹರಳುಗಳೆಲ್ಲ
ಚಿನ್ನ-ರನ್ನ !
ಆ, ಅಗೊ, ಕರೆಯುತಿದೆ ಪಾಠಶಾಲೆಯ ಗಂಟೆ,
ಸ್ಲೇಟು ಪುಸ್ತಕವನ್ನು ಹೆಗಲಿಗೇರಿಸು, ಹೊರಡು ;
ಅಲ್ಲಿ ಕಾದಿದ್ದಾರೆ ‘ಮೇಸ್ಟ್ರು’.
ತಿದ್ದು ‘ಅ ಆ ಇ ಈ’ : ಮಗ್ಗಿಯೊಪ್ಪಿಸು ‘ಆಟ ಊಟ ಓಟ’.
ಮೆಲ್ಲನೆಯೆ ಜಾರುತಿದೆ ಬೆಳಗು ಬಿತ್ತಿದ ಮಾಟ.
*     *     *
ಹನ್ನೊಂದರಿಂದ ಹನ್ನೆರಡು :
ಜಂತೆ ಜಂತೆಯ ತುಂಬ ಜೇನುಗೂಡು !

ಕಂಡ ಕಂಡುದನೆಲ್ಲ ಗುದ್ದುತಿದೆ ಮರಿಗೂಳಿ
ಹಗಲಿರುಳ ಮಗ್ಗದಲಿ ಜೊನ್ನಗನಸಿನ ಲಾಳಿ
ಕದಡು ನೀರಿನ ಕೊಳದಿ ಮುಖದ ನೆರಳನು ನೋಡಿ
ಕ್ರಾಪು ತಿದ್ದುವ ಚಾಳಿ
ಎದೆ ತುಂಬ ಮೊರೆಯುತಿವೆ ಹತ್ತು ದಿಕ್ಕಿನ ಗಾಳಿ !

ತುಂಬಿದೂರಿನ ನಡುವೆ ಗೋಪುರದ ಗಡಿಯಾರ-
ಕಾದ ಬಿಸಿಲಿನ ಎದೆಗೆ ಒಂದು ಗಂಟೆಯ ಬಡಿತ.
ದೂರದಲಿ ಹಸಿರು ಚಪ್ಪರದೊಳಗೆ ಮದುವೆ ಬ್ಯಾಂಡಿನ ಮೋಡಿ,
ಮೈತುಂಬ ಹೂ ಮುಡಿದು ಹುಚ್ಚಾದ ಮರ ಚೈತ್ರದಲಿ
ಮೆರವಣಿಗೆ ಹೊರಟು ನಿಂತಿವೆ ನೋಡಿ.
ಚಿಕ್ಕೆ ಚಿಕ್ಕೆಗೆ ಒಂದು ಉಯ್ಯಾಲೆಯನು ತೂಗಿ
ದಿಗ್ದಿಗಂತದ ನೀಲ ಗಾಜುಗೋಡೆಗೆ ತಾಗಿ
ಜೋಕಾಲಿಯಾಡುವ ಬಯಕೆ-
‘ನಾ ನಿನಗೆ ನೀನೆನಗೆ ಜೇನಾಗುವಾ
ರಸ ದೇವಗಂಗೆಯಲಿ ಮೀನಾಗುವಾ’.
*     *     *
ಒಂದು, ಎರಡು, ಮೂರು-
ಬಾರಿಸಿತು ಗಡಿಯಾರ ತನ್ನ ಪಾಡಿಗೆ ತಾನು.
ಅಯ್ಯೊ, ಯಾವಾಗ ಈ ಮುಳ್ಳು ಒಂದು ಎರಡನು ದಾಟಿ
ಮೂರಕ್ಕೆ ಬಂದಿತೋ,
ಹಿಡಿದುಕೋ ಅಲ್ಲೆ ಆ ಗಡಿಯಾರಗಳ ಮುಳ್ಳ, ಭದ್ರ ;
ಬಿಡಬೇಡ ಮುಂದಕ್ಕೆ ಕೊಂಚ ಕಾಲ.
ಗಡಿಯಾರ ನಕ್ಕಿತ್ತು, ‘ಎಂಥ ಚಪಲ !’

ಆಷಾಢದಾಗಸದ ಗಾಳಿ ಪಟಗಳ ಮೇಲೆ ವಿರಹಿ ಯಕ್ಷನ ಸುಯ್ಲು :
ಶ್ರಾವಣದ ಮಳೆ ಬಿಸಿಲು ; ಗದ್ದೆಯಲಿ ತೆನೆದೂಗುತಿವೆ ಪೈರು ;
ನೀಲಿಯಂಗಳದಲ್ಲಿ ಮೋಡ ಮಕ್ಕಳ ಕೇಕೆ.
ಬಿಳಲು ಬಿಡುತಿದೆ ವೃಕ್ಷ, ಟೊಂಗೆ ಟೊಂಗೆಯ ತುಂಬ
ಹಕ್ಕಿ ತೊಟ್ಟಿಲ ಕಟ್ಟಿ ಜೋಗುಳವ ಹಾಡುತಿವೆ ;
ಮೈಗೆ ಹೆಣೆದಿವೆ ಬಳ್ಳಿ ಅಲ್ಲಿಂದ ಇಲ್ಲಿಂದ ;
ಆಗಾಗ ಒಮ್ಮೊಮ್ಮೆ ಬಂದು ಕಾಡಿದೆ ಪ್ರಶ್ನೆ :
‘ನಾ ಬಂದುದೆಲ್ಲಿಂದ ?’
*     *     *
ಗಂಟೆ ಹೊಡೆಯಿತು ನಾಲ್ಕು ;
ಟೆನ್ನಿಸ್ಸಿನಾಟದಲಿ ಏನೊ ಬಳಲಿಕೆ, ಸುಸ್ತು,
ಮಹಡಿ ಮೆಟ್ಟಿಲನು ಹತ್ತುವಾಗಲು ಕೂಡ ಎಂದಿಲ್ಲದಾಯಾಸ ;
ಜಂತೆಯಲಿ ಗೂಡು ಕಟ್ಟಿದ ಜೇನು ಹಾರಿಹೋಗಿವೆ, ಈಗ
ತೂಗುತ್ತಲಿವೆ ಖಾಲಿ ಗೂಡು.
ಅಲ್ಲಲ್ಲಿ ಜೇಡಬಲೆಗಳ ಜಾಲ, ಸುಣ್ಣ ಬಣ್ಣವ ಬಳಿದ
ಗೋಡೆಯಲ್ಲೂ ಕೂಡ
ಸುಕ್ಕು, ತರಕಲು, ಬಿರುಕು ;
ಛಾವಣಿಯ ಹೆಂಚು ಮಳೆ ಬಿಸಿಲು ಗಾಳಿಯಲಿ ಉದುರಿ
ಈಗೀಗ ಜಿನುಗುತಿದೆ ಮಾಗಿ ಮಂಜಿನ ಸೋನೆ.
ಆಗಾಗ ಸುಣ್ಣ ಬಣ್ಣವ ಹೊಡೆದು ರಿಪೇರಿ ಮಾಡಿದರೆ
ಇನ್ನರ್ಧ ಶತಮಾನ ಗ್ಯಾರಂಟಿ.
*     *     *
ನಿಷ್ಕರುಣ ಗಡಿಯಾರ-
ಮುಳ್ಳು ನಾಲ್ಕನು ದಾಟಿ ಐದನೂ ಮುಟ್ಟಿ ಮುಂದೆ
ಸಾಗುತ್ತಲಿದೆ.
ಸೂರ್ಯನ ಶಾಖ ಕಡಿಮೆಯಾಗುತ್ತಲಿದೆ ದಿನದಿನಕೆ
ಬಾನ ನೀಲಿಗೆ ಹೊಳಪು ಸಾಲದು ; ನೀರಿನಲಿ ರುಚಿಯಿಲ್ಲ
ಏನು ಕಾಲವೊ ಏನೊ.
ಸಂಜೆ ಬಾನಿನ ತುಂಬ ಹಗಲ ನೆನಪಿನ ಚಿತ್ರ.
ಮನೆಯಂಗಳದ ಮಬ್ಬು ಬೆಳಕಿನ ನಡುವೆ ತಡವರಿಸುತಿವೆ ಕಣ್ಣ್ಣು
ಮಹಡಿ ಮೆಟ್ಟಿಲ ಮೇಲೆ ಯಾರ‍್ಯಾರದೋ ಹೆಜ್ಜೆ.
ಗೋಡೆ ಗಡಿಯಾರದಲಿ ಗಂಟೆ ಹೊಡೆದಿದೆ ಏಳು-
ಅದೊ ಕೇಳು.
ಯಾರೋ ಬಡಿಯುತ್ತಿದ್ದಾರೆ ಬಾಗಿಲ ಹೊರಗೆ
ಒಂದೇ ಸಮನೆ –
ಏಳು, ಬಾಗಿಲನು ತೆರೆ, ಹೆದರದಿರು ಕೊನೆಗೆ.