ಮಬ್ಬಿನಿರುಳು ದಬ್ಬುತಲಿದೆ ಹೇಗೊ ತನ್ನ ಕಾಲವ,
ಕುರುಡು ಮೋಡ ಹರಡುತಲಿದೆ ಬಾನ ತುಂಬ ಜಾಲವ.
ಬಾನ ಬಟ್ಟೆಗುಜ್ಜಿ ಉಜ್ಜಿ ಸವೆದ ಮುರುಕು ಸೋಪಿನಂತೆ
ತೆಳ್ಳಗಾದ ಚಂದಿರ,
ಮೈಲಿಗೆಯೊಳು ತೇಲುತಿಹನು ಕವಿದ ಹಾಗೆ ಮಂಪರ.

ಪುರಾತನದ ಮಹಲಿನಲ್ಲಿ ಬಲೆನೇಯುವ ಜೇಡದಂತೆ
ಮಬ್ಬು ಬೆಳಕು ಹಬ್ಬುತಿರಲು, ಗಿಡಮರಗಳ ರೂಕ್ಷ ಚಿಂತೆ
ತಲೆಯ ಕೆದರಿ ಗಾಳಿ ಹೊಳೆಯೊಳೀಜಿ ಈಜಿ ಸೋಲುತಿರಲು,
ಒಂದೇ ಸಮನೆ ಪಟ್ಟು ಹಿಡಿದು ಸೋನೆಯ ಮಳೆ ಸಿಡಿಯುತಿರಲು,
ನಿಲುವುದೆಂದೊ ನಿಲುವುದೆಂದೊ ಭೂತದ ಮನೆ ನೆರಳ ಪಾತ್ರ
ಕೆಸರ ಹೆಜ್ಜೆ ಕೇಳಿಕೆ,
ಬೆಳಗು ಬಂದು ನಿಲಿಸಬಹುದೆ ಸಲಿಸಿ ತನ್ನ ಕಾಣಿಕೆ ?