ಗೆಳೆಯರ ಮನೆಯಲ್ಲಿ ಹಚ್ಚಗೆ ಮೇದು ಹೋಟೆಲಿನ ಬೆಚ್ಚನೆಯ ಹಾಸುಗೆಯಲ್ಲಿ ಮಲಗಿದ ನನಗೆ ಸೊಗಸಾದ ನಿದ್ದೆ. ಇದು ಮಾಸ್ಕೋದಲ್ಲಿ ನನ್ನ ಮೊದಲ ರಾತ್ರಿ.

ಬೆಳಿಗ್ಗೆ ಎದ್ದಾಗ ಏಳು  ಗಂಟೆ. ಗಾಜಿನ ಕಿಟಕಿಯಾಚೆಯ  ಆಕಾಶದಲ್ಲಿ ಮಬ್ಬು. ಒಂಬತ್ತನೆಯ ನೆಲೆಯ ಕಿಟಕಿಯಿಂದಾಚೆ ನೋಡಿದರೆ ಕೆಳಗೆ ಜನ – ವಾಹನ ಸಂಚಾರ ಸಾಗಿತ್ತು. ಪ್ರಾತರ್‌ವಿಧಿಗಳನ್ನು ತೀರಿಸಿಕೊಂಡು, ಬಿಸಿನೀರಿನ ತುಂತುರು ಸ್ನಾನದಿಂದ ಲವಲವಿಕೆಗೊಂಡು ಲಿಫ್ಟ್‌ನಲ್ಲಿ ಇಳಿದು ಮ್ಯಾಥ್ಯೂ ಅವರ ಕೊಠಡಿಗೆ ಹೋದೆ. ಒಂದೇ ದಿನದಲ್ಲಿ ಲಿಫ್ಟನ್ನು ಚಾಲೂಮಾಡುವ ತಂತ್ರ ತಿಳಿದಿತ್ತು. ಇಬ್ಬರೂ ಮತ್ತೆ ರೆಸ್ಟೋರಾಂಟಿಗೆ ಹೋದೆವು. ಟೇಬಲ್ಲಿನ ಮೇಲೆ ಸಾಲಾಗಿ ಆಹಾರ ಪದಾರ್ಥಗಳನ್ನು ಜೋಡಿಸಲಾಗಿತ್ತು. ಬ್ರೆಡ್ಡು; ಮಾಂಸದ ತುಣುಕುಗಳು; ಕೇಕ್;  ಬೆಣ್ಣೆ, ಟೊಮ್ಯಾಟೊ, ಹಣ್ಣಿನ ರಸ ಮತ್ತು ಇನ್ನೂ ಏನೇನೋ ನಮಗರಿಯದ ಖಾದ್ಯ ವಸ್ತುಗಳು. ಆಗಲೇ ಕೈಯಲ್ಲೊಂದು ಮರದ ತಟ್ಟೆ ಹಿಡಿದು ಕ್ಯೂ ನಿಂತಿದ್ದರು ಜನ. ನಾವೂ ಒಂದೊಂದು ಮರದ ಟ್ರೇಗಳ ಮೇಲೆ ಪಿಂಗಾಣಿಯ ಪ್ಲೇಟುಗಳನ್ನಿರಿಸಿ ಕ್ಯೂನಲ್ಲಿ ನಿಂತು ಚಲಿಸುತ್ತ ನಮಗೆ ಬೇಕಾದ ಒಂದೊಂದು ಪದಾರ್ಥಗಳನ್ನಿರಿಸಿ ಕೊಳ್ಳುತ್ತಾ, ಟೇಬಲ್ಲಿನ ತುದಿಗೆ ಕೂತ ಸುಂದರಿಯ ಎದುರು ನಿಂತು ಹಣ ಕೊಟ್ಟೆವು. ನಮ್ಮ ಉಪಹಾರವೆಲ್ಲ ಒಂದೊಂದು ರೂಬಲ್‌ಗೆ ಮಿಗಿಲಾಗಲಿಲ್ಲ. ಅನಂತರ ಟೇಬಲ್ಲುಗಳ ಬಳಿಗೆ ಬಂದು ಕೂತು ಉಪಹಾರ ಮುಗಿಸಿದೆವು.

ಹನ್ನೊಂದರ ವೇಳೆಗೆ ಮ್ಯಾಥ್ಯೂ ಅವರು ‘ಗುಡ್‌ಬೈ’ ಹೇಳಿ ಕೀವ್ ನಗರಕ್ಕೆ ಹೊರಡುವ ಸಿದ್ಧತೆ ನಡೆಯಿಸಿದರು. ಮೂರು ವಾರಗಳ ತರುವಾಯ ಇಂಡಿಯಾಕ್ಕೆ ಹೋಗುವ ವೇಳೆಗೆ ಮತ್ತೆ ಬರುತ್ತೇನೆ ಎಂದರು. ನಾನು ಕೊಠಡಿಗೆ ಬಂದು ವಿಶ್ರಮಿಸುವ ಹೊತ್ತಿಗೆ ಫೋನ್ ಬಡಿದುಕೊಳ್ಳತೊಡಗಿತು. ಕಿವಿಗಿಟ್ಟಾಗ, ನನ್ನನ್ನು ಒಪ್ಪಿಕೊಂಡ ಸಂಸ್ಥೆಯ ಮುಖ್ಯಸ್ಥರು ಮಾತನಾಡಿದರು ; ‘ಕ್ಷಮಿಸಬೇಕು, ನಿಮ್ಮೊಂದಿಗೆ ಈ ಮೊದಲೇ ಮಾತನಾಡಲಾಗಲಿಲ್ಲ. ನೀವು ಇಲ್ಲಿಗೆ ಬರಲಿರುವ ವಿಚಾರ ನಮಗೆ ಸಚಿವ ಶಾಖೆಯಿಂದ ನಿನ್ನೆ ದಿನ ತಾನೇ ತಿಳಿಯಿತು. ಈಗ ನಮ್ಮ ಕಡೆಯ ಭಾಷಾ ಸಹಾಯಕ – ಇಂಟರ್‌ಪ್ರಿಟರ್ ಬರುತ್ತಾನೆ. ನಿಮ್ಮ ಹಣದ ವ್ಯವಸ್ಥೆ ಆಗುತ್ತದೆ. ಉಳಿದದ್ದು ನಾಳೆ ಕೂತು ಮಾತನಾಡೋಣ.’

ಅಂತೂ ಪರಿಸ್ಥಿತಿ  ಕ್ರಮೇಣ ವ್ಯವಸ್ಥೆಗೆ ಬರುತ್ತಿದೆ ಎಂಬ ಸಮಾಧಾನವಾಯಿತು. ಅರ್ಧ ಗಂಟೆಯಲ್ಲಿ ನನ್ನ ‘ದ್ವಿಭಾಷಿ’ ಬಾಗಿಲು ಬಡಿದ. ಸ್ವಚ್ಛವಾದ ಇಂಗ್ಲಿಷಿನಲ್ಲಿ ‘ಮೇ ಐ ಕಮಿನ್’ ಎಂದ. ಒಳಗೆ ಬಂದಾತ ೧೯-೨೦ ವರ್ಷದ ಚಿಗುರು ಮೀಸೆಯ, ಕೆಂಪನೆ ಹುಡುಗ. ತನ್ನನ್ನು ವೊಲೋಜ ಎಂದು ಕರೆದರೆ ಸಾಕು ಎಂದ. ಈ ದಿನ ಮೊದಲು ನಿಮಗೆ ಹಣ ಕೊಡಿಸಬೇಕು. ಈಗಲೇ ಹೊರಡೋಣವೆ ಎಂದ. ಸರಿ, ಹೊರಟೆ. ಮಾಸ್ಕೋ  ವಿಶ್ವವಿದ್ಯಾಲಯದ ಆವರಣದ ವಿದೇಶ ಶಾಖೆಗೆ ಕರೆದೊಯ್ದ. ಕೆಲವೇ ನಿಮಿಷಗಳಲ್ಲಿ ದಿನಕ್ಕೆ ಏಳು ರೂಬಲ್ಲುಗಳಂತೆ, ಇಪ್ಪತ್ತೊಂದು ದಿನದ ಒಟ್ಟು ಹಣ ನನ್ನ ಜೇಬಿಗೆ ಸಂದಾಯವಾಯಿತು. ಅನಂತರ ಕೆಫೆಯೊಂದನ್ನು ಹುಡುಕಿ ವೊಲೋಜನ ಜತೆ ಊಟಕ್ಕೆ ಕೂತೆ.

ನಾನು ಊಟ ಮಾಡುವ ಶಾಖಾಹಾರದ ವಿವರಗಳನ್ನು ಕೇಳಿ ವೊಲೋಜ ನಿಗೆ ಆಶ್ಚರ್ಯವಾಯಿತು. ‘ಮಾಂಸ ತಿನ್ನದಿದ್ದರೆ ಹೋಗಲಿ, ಮೊಟ್ಟೆಯನ್ನು, ಕಡೆಗೆ ಮೀನನ್ನು  ತಿನ್ನಬಹುದಲ್ಲ’ – ಎಂದು ಸೂಚಿಸಿದ. ನಾನು ಅದಾವುದನ್ನೂ ಮುಟ್ಟುವುದಿಲ್ಲ ಎಂದಾಗ, ಅವನಿಗಿನ್ನೂ ವಿಸ್ಮಯವಾಯಿತು. ಕಡೆಗೆ ನನಗೊಂದಿಷ್ಟು ಅನ್ನ, ಹಾಲಿನ ಕೆನೆ, ಟೊಮ್ಯಾಟೋ ಹೋಳುಗಳು, ಕೇಕ್, ಕಾಫಿ ತರಿಸಿದ, ‘ಇಷ್ಟನ್ನು ತಿಂದು ನೀವು ನಡೆಯುತ್ತಿರೀರಾದರೂ ಹೇಗೆ’ ಎಂದ. ನಾನೆಂದೆ, ‘ನಾವು ಭಾರತೀಯರು, ಆತ್ಮಬಲದಿಂದ ನಡೆಯುತ್ತೇವೆ’ ಎಂದೆ. ‘ನಿಜಕ್ಕೂ ?’ ಎಂದು ಆತ ನಂಬಿಯೇ ಬಿಟ್ಟ. ನಾನು ತಮಾಷೆಗೆ ಹೇಳಿದೆ ಎಂದು ಆತನನ್ನು ತಿದ್ದಿದ್ದಾಯಿತು.

‘ಈ ದಿನ ಬೇರೆ ಕೆಲಸವಿಲ್ಲ; ಇನ್‌ಸ್ಟಿಟ್ಯೂಟ್ ಆಫ್ ಈಸ್ಟರ‍್ನ್ ಲ್ಯಾಂಗ್ವೇಜಸ್‌ನ ಪ್ರೊಫೆಸರನ್ನು ಭೇಟಿಯಾಗುವುದು ನಾಳೆಯೆ. ಹಾಗಾದರೆ ಈ ದಿನ ಮಾಸ್ಕೋ ವಿಶ್ವವಿದ್ಯಾಲಯವನ್ನು ನೋಡೋಣ’ – ಎಂದ.

ಮಾಸ್ಕೋ ವಿಶ್ವವಿದ್ಯಾಲಯ ‘ಲೆನಿನ್ ಹಿಲ್ಸ್’ ಎಂದು ಕರೆಯಲ್ಪಡುವ ಎತ್ತರವಾದ ಪ್ರದೇಶದಲ್ಲಿದೆ. ಈ ವಿಶ್ವವಿದ್ಯಾಲಯದ ಮುಂದೆ ದಟ್ಟವಾದ ಮರಗಳ ನಡುವಣ ತಗ್ಗಿನಲ್ಲಿ ಮಾಸ್ಕ್ವಾ ನದಿ  ಅರ್ಧಚಂದ್ರಾಕಾರವಾಗಿ ಹರಿಯುತ್ತದೆ. ಈ ವಿಶ್ವವಿದ್ಯಾಲಯದ ಬೃಹತ್ ಕಟ್ಟಡದ ಗೋಪುರ ಮುಗಿಲಿಗೆ ಚಾಚಿಕೊಂಡಿದೆ. ಇದರ ಸುತ್ತ ತೀರಾ ವಿಸ್ತಾರವಾದ ಉದ್ಯಾನವಿದೆ. ವಿಶ್ವವಿದ್ಯಾಲಯದ ಮಹಾದ್ವಾರದೆದುರು ಮೆಟ್ಟಿಲುಗಳ ಎರಡೂ ಬದಿಯಲ್ಲಿ, ಕೈಯಲ್ಲಿ ಪುಸ್ತಕವನ್ನು ಹಿಡಿದು ನಿಂತ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಎತ್ತರವಾದ  ಶಿಲ್ಪಕೃತಿಗಳಿವೆ. ಇದರ ಅರ್ಥ ಈ ವಿಶ್ವವಿದ್ಯಾಲಯ ಇರುವುದು ವಿದ್ಯಾರ್ಥಿಗಳಿಗಾಗಿ ಎಂದು. ಈ ವಿಶ್ವವಿದ್ಯಾಲಯವನ್ನು ಹೊಕ್ಕರೆ, ದಕ್ಷಿಣ ಭಾರತದ ಮಹಾ ದೇವಾಲಯಗಳ ಒಳಭಾಗವನ್ನು ಪ್ರವೇಶಿಸಿದ ಅನುಭವವಾಗುತ್ತದೆ. ವಿಸ್ತಾರವಾದ ನಡು ಅಂಗಣಗಳು, ಅಮೃತಶಿಲೆಯ ಬೃಹದಾಕಾರವಾದ ಕಂಬಗಳು, ಜಗಜಗಿಸುವ ವಿಲಕ್ಷಣ ಅಲಂಕಾರದ ದೀಪಗಳು ತೂಗುವ ಮೇಲ್ಪಟ್ಟು, ಅಮೃತ ಶಿಲೆಯದು; ಅದರ ಅಂಚಿಗೆ ನಯವಾದ ಕೆತ್ತನೆ ಕೆಲಸ. ೧೯೪೯ ರಿಂದ ೧೯೫೩ರಲ್ಲಿ ಕಟ್ಟಲಾದ ಈ ವಿಶ್ವವಿದ್ಯಾಲಯ ಮೂವತ್ತೆರಡು ಹಂತಗಳನ್ನು ಒಳಗೊಂಡಿದೆ. ಈ ಕಟ್ಟಡದಲ್ಲಿ ಒಟ್ಟು ನಲವತ್ತೈದು ಸಾವಿರ ಕೊಠಡಿಗಳಿವೆ. ಇಷ್ಟನ್ನೂ ನಡೆದು ನೋಡಬೇಕೆಂದು ಹೊರಟರೆ ನೂರಾ ನಲವತ್ತೈದು ಕಿಲೋಮೀಟರ್ ದೂರವಾಗುತ್ತದೆ. ಒಂದೊಂದು ಕೊಠಡಿಯನ್ನು ಕಡೆಯ ಪಕ್ಷ ಒಂದೊಂದು ನಿಮಿಷವಾದರೂ ನಿಂತು ನೋಡುತ್ತೇನೆಂದರೆ, ಅಷ್ಟನ್ನೂ ನೋಡಿ ಮುಗಿಸಲು ಏಳುನೂರಾ ಐವತ್ತು ಗಂಟೆಗಳು ಬೇಕಾಗುತ್ತದೆ. ಹದಿನೈದು ಅಧ್ಯಯನಾಂಗಗಳನ್ನು ಉಳ್ಳ  ಈ ವಿಶ್ವವಿದ್ಯಾಲಯದಲ್ಲಿ ಸುಮಾರು ಮೂವತ್ತು ಸಾವಿರ ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲರೂ ಈ ಮಹಾವಿದ್ಯಾಲಯದ ಗಗನಚುಂಬಿಯಾದ ಒಂದೇ ಕಟ್ಟಡದಲ್ಲಿ ವಾಸಿಸುತ್ತಾರೆ ಎಂಬುದಂತೂ ದಂಗುಬಡಿಸುವ ಸಂಗತಿಯಾಗಿದೆ. ಈ ವಿಶ್ವವಿದ್ಯಾಲಯವನ್ನು ಸುತ್ತವರಿದಿರುವ ವಿವಿಧ ಸಸ್ಯ ಸಮೃದ್ಧವಾದ ಉದ್ಯಾನದಲ್ಲಿ ನಡೆಯುವುದು ಸೊಗಸಾದ ಒಂದು ಅನುಭವ.

ಈ ವಿಶ್ವವಿದ್ಯಾಲಯದ ಮೇಲಿನ ಹಂತಗಳಲ್ಲಿ ವಿವಿಧ ವಿಜ್ಞಾನಕ್ಕೆ ಸಂಬಂಧಪಟ್ಟ ‘ಮ್ಯೂಸಿಯಂ’ಗಳಿವೆ. ೨೪ ಮತ್ತು ೨೬ನೇ ಹಂತದಲ್ಲಿರುವ ಖನಿಜ ಸಂಗ್ರಹಾಲಯವನ್ನು ನೋಡಿಕೊಂಡು ಹೋಟೆಲಿನ ಕೊಠಡಿಗೆ ಬರುವ ವೇಳೆಗೆ ಸಂಜೆ ಐದು ಗಂಟೆಯಾಯಿತು.

ಆ ವೇಳೆಗೆ ಲುಮುಂಬಾ ವಿಶ್ವವಿದ್ಯಾಲಯದಲ್ಲಿ ರಷ್ಯನ್ ಭಾಷೆಯಲ್ಲಿ ಪಿ. ಹೆಚ್. ಡಿ. ಗೆ ಅಭ್ಯಾಸ ಮಾಡುತ್ತಿರುವ ಶ್ರೀ ಉಮಾಪತಿಯವರು ಕಾದಿದ್ದರು. ನನ್ನ ಭಾಷಾ ಸಹಾಯಕ ವೊಲೋಜನಿಗೆ ‘ದಸ್ವಿದಾನಿಯಾ’ (ಗುಡ್‌ಬೈ) ಹೇಳಿ, ನಾಳೆ ಬರುವಂತೆ ತಿಳಿಸಿದೆ. ಉಮಾಪತಿಯವರ ಜತೆ ತಿರುಗಾಡಲು ಹೊರಟೆ. ಅವರು ‘ಒಳ್ಳೆಯ ಕಾಫಿ ಕೊಡಿಸುತ್ತೇನೆ ಬನ್ನಿ’ ಎಂದು ತಮ್ಮ ವಿದ್ಯಾರ್ಥಿ ನಿಲಯಕ್ಕೆ ಟ್ಯಾಕ್ಸಿಮಾಡಿಕೊಂಡು ಕರೆದೊಯ್ದರು. ವಿದ್ಯಾರ್ಥಿನಿಲಯದ ಒಳಗೆ ಹೋದೊಡನೆ  ಬಾಗಿಲಲ್ಲಿ ಕೂತ ಮಹಿಳೆ ನನ್ನನ್ನು ತಡೆದು ‘ಪಾಸ್ ಪೋರ್ಟ್  ?’ ಎಂದಳು. ಉಮಾಪತಿಯವರ ಸೂಚನೆಯ ಮೇರೆಗೆ ನನ್ನ ಪಾಸ್‌ಪೋರ್ಟನ್ನು ಜೇಬಿನಲ್ಲಿರಿಸಿಕೊಂಡಿದ್ದೆ ; ತೋರಿಸಿದೆ. ನನ್ನಂಥ ವಿದೇಶೀಯನಿಗೆ ಮಾತ್ರ ಅಲ್ಲ, ಈ ದೇಶದಲ್ಲಿ ಹದಿನಾರು ವರ್ಷಕ್ಕೆ ಮೀರಿದ ಪ್ರತಿಯೊಬ್ಬರೂ ಪಾಸ್‌ಪೋರ್ಟನ್ನು ಪಡೆದಿರಬೇಕು. ಅದನ್ನು ತೋರಿಸದೆ ಯಾವ ಒಂದು ಸಂಸ್ಥೆಯ ಒಳಗೂ ಪ್ರವೇಶವಿಲ್ಲ.

ಈ ವಿದ್ಯಾರ್ಥಿನಿಲಯದ ಕೊಠಡಿಗಳು, ನಮ್ಮ ವಿದ್ಯಾರ್ಥಿನಿಲಯದ ಕೊಠಡಿಗಳಷ್ಟೇ ಅವ್ಯವಸ್ಥಿತವಾಗಿದೆ. ಆದರೆ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಅಕ್ಕಪಕ್ಕದ ಕೊಠಡಿಗಳಲ್ಲಿ ಇರುತ್ತಾರೆ. ಉಮಾಪತಿಯ ಗೆಳತಿಯೊಬ್ಬರು ಮಾಡಿಕೊಟ್ಟ ಸೊಗಸಾದ ‘ಇಂಡಿಯನ್ ಕಾಫಿ’ಯನ್ನು ಕುಡಿದು, ಮತ್ತೆ ನಗರ ಸಂಚಾರಕ್ಕೆ ಹೊರಟೆವು. ಸಿಕ್ಕ ಬಸ್ಸನ್ನು ಹತ್ತಿ ಅದು ಹೋಗುವಷ್ಟು ದೂರ ಹೋದೆವು.

ಸುಮಾರು ಇಪ್ಪತ್ತು ವಾಹನಗಳು ಸಲೀಸಾಗಿ ಸಂಚರಿಸುವಷ್ಟು ವಿಸ್ತಾರವಾದ ರಸ್ತೆ ; ಅದರ ಬದಿಗೆ ಒತ್ತಾಗಿ ಸಾಲಾಗಿ ಸಮೃದ್ಧವಾದ ಮರಗಳನ್ನು ಬೆಳೆಯಿಸಿದ ಕಾಲು ದಾರಿ; ಅದರ ಪಕ್ಕದಲ್ಲಿ ಎರಡು ಮೂರು ವಾಹನಗಳು ಚಲಿಸಲನುಕೂಲವಾದ ರಸ್ತೆ ; ಅನಂತರ ಹದಿನೈದು ಇಪ್ಪತ್ತು ಅಡಿಯ ಖಾಲಿ ಪ್ರದೇಶ; ಅದರ ಬದಿಗೆ ಸಾಲಾಗಿ ಎತ್ತರವಾದ ಮನೆಗಳು. ಮನೆಗಳು ಅನ್ನುವುದಕ್ಕಿಂತ ಕಟ್ಟಡಗಳು ಅನ್ನಬೇಕು. ಭಾರಿ ಕಟ್ಟಡಗಳ ಕೆಳಗಿನ ಮೊದಲ ಸ್ತರವೆಲ್ಲಾ ಅಂಗಡಿಗಳು; ಅದರ ಮೇಲೆ ಹದಿನೈದು ಇಪ್ಪತ್ತು ಅಂತಸ್ತುಗಳೆಲ್ಲ ಮನೆಗಳು. ಬಹುಶಃ ಒಂದೊಂದು ಕಟ್ಟಡದೊಳಗೆ ಇನ್ನೂರಕ್ಕೂ ಮೀರಿದ ವಸತಿಗಳಿವೆ. ಇಲ್ಲಿ ಒಂದು ಸಂಸಾರಕ್ಕೆ ಒಂದು ಮನೆ. ಆ ಸಂಸಾರದ ಗಾತ್ರಕ್ಕೆ, ಆವಶ್ಯಕತೆಗೆ  ಅನುಸಾರವಾಗಿ  ಮನೆಗಳನ್ನು ಕೊಡಲಾಗಿದೆ. ಒಬ್ಬ ದೊಡ್ಡ ಅಧಿಕಾರಿ ಇದ್ದಾನೆಂದು ಊಹಿಸಿ; ಆತನ  ಸಂಸಾರದಲ್ಲಿ ದಂಪತಿಗಳಿಬ್ಬರೇ ಇದ್ದರೆ ಪುಟ್ಟಮನೆ. ಇನ್ನೊಬ್ಬ, ಕೆಲಸಗಾರನಾಗಿರಬಹುದು; ಅವನ ಸಂಸಾರದ ಸಂಖ್ಯೆ ದೊಡ್ಡದಿದ್ದರೆ ದೊಡ್ಡ ಮನೆ. ದೊಡ್ಡ ಮನುಷ್ಯ ಎಂಬ ಕಾರಣಕ್ಕೆ ದೊಡ್ಡ ಮನೆಯನ್ನು ಕೊಡುವುದಿಲ್ಲ. ನಮ್ಮಲ್ಲಾದರೆ ? ದೊಡ್ಡ ಸಾಹೇಬರಿಗೆ ಎಷ್ಟು ದೊಡ್ಡ ಬಂಗಲೆ, ಎಷ್ಟು ಆಳುಕಾಳುಗಳು ? ಗುಮಾಸ್ತನಿಗೋ, ಜವಾನನಿಗೋ ಚಿಕ್ಕ ಗೂಡುಗಳು. ವ್ಯಕ್ತಿಯ ಅವಶ್ಯಕತೆಯೇ ಇಲ್ಲಿ ಸರ್ಕಾರ ಮನೆಯನ್ನು ನಿಗದಿ ಮಾಡಲು ಇರುವ ಮೂಲಮಾನ. ಅಧಿಕಾರ ಅಲ್ಲ. ಇಲ್ಲಿ ಅಧಿಕಾರದ ಪ್ರಶ್ನೆ ಮುಖ್ಯವೇ ಅಲ್ಲ. ದೊಡ್ಡ ರಾಷ್ಟ್ರದ ಮಹಾಕಾರ್ಯದ ವಿವಿಧ ವಿಭಾಗಗಳಲ್ಲಿ ಅವನವನು ಅವನವನ ಕೆಲಸ ಮಾಡುವ ಉಪಕರಣ ಮಾತ್ರ. ಇಲ್ಲಿ ನಿರುದ್ಯೋಗದ ಪ್ರಶ್ನೆ ಇಲ್ಲ ; ಸರ್ಕಾರ ಎಲ್ಲರಿಗೂ ಉದ್ಯೋಗದ ಭರವಸೆ ಕೊಡುತ್ತದೆ – ಅವನವನ ಸಾಮರ್ಥ್ಯವನ್ನು ಪರಿಶೀಲಿಸಿ. ವಯಸ್ಸಾದರೆ ನನ್ನ ಗತಿ ಏನು ಎಂದೂ ಯಾರೂ ಯೋಚಿಸಬೇಕಾಗಿಲ್ಲ. ವಯಸ್ಸಾದರೆ, ನಿವೃತ್ತಿ ವೇತನವಿದೆ; ಅಥವಾ ಇನ್ನೂ ಕೆಲಸ ಮಾಡಲಪೇಕ್ಷಿಸಿದರೆ, ಅವರು ಮಾಡಬಹುದಾದಂಥ ಕೆಲಸವನ್ನು ಕೊಡುತ್ತಾರೆ; ಅಥವಾ ವಯಸ್ಸಾದವರಿಗೆ ಮೀಸಲಾದ ವಸತಿಗಳಲ್ಲಿ ಹಾಯಾಗಿರಬಹುದು. ಹೊಟ್ಟೆಗೆ ಅನ್ನ ; ಇರಲು ವಸತಿ; ಮಾಡಲು ಒಂದು ಉದ್ಯೋಗ – ಇಷ್ಟಿದ್ದರೆ, ಇದನ್ನು ಸುಖ ಅನ್ನದೆ ಇನ್ನೇನೆನ್ನಬೇಕು?

ಮಕ್ಕಳ ಯೋಗಕ್ಷೇಮದ ಬಗ್ಗೆ ಸರ್ಕಾರ ವಹಿಸುವ ಆಸಕ್ತಿ ವಿಶೇಷ ರೀತಿಯದು. ಒಂದು ಮಗುವಾದೊಡನೆ, ಆ ಮನೆಗೆ ಸರ್ಕಾರದ ನರ್ಸ್ ಬರುತ್ತಾಳೆ; ಉಚಿತವಾಗಿ ಒಂದು ತಿಂಗಳ ಕಾಲ ಮಗುವಿನ ಲಾಲನೆ ಪಾಲನೆ ಮಾಡಿ ಮನೆಯವರಿಗೆ ಮಗುವಿನ ಪೋಷಣೆಯ ಬಗ್ಗೆ ತಿಳಿವಳಿಕೆ ಕೊಡುತ್ತಾಳೆ. ಮಗುವಿನ ಹೆಸರಿಗೆ ಒಂದು ಕಾರ್ಡು ಕೊಡಲಾಗುತ್ತದೆ. ಅದನ್ನು ತೋರಿಸಿ ಅದಕ್ಕೆ ಅಗತ್ಯವಾದ ಆಹಾರವನ್ನು ಪಡೆಯಬಹುದು. ವೈದ್ಯಕೀಯ ಸೌಲಭ್ಯ ಉಚಿತ. ಖಾಸಗಿ ವೈದ್ಯರು ಇರುವಂತೆಯೇ ಇಲ್ಲ. ಯಾವ ಮನೆಯಲ್ಲಿ ಖಾಯಿಲೆಯಾದರೂ, ವೈದ್ಯರು ಬಂದು ನೋಡಬೇಕಾದಂಥ ಪರಿಸ್ಥಿತಿ ಇದ್ದರೆ, ಫೋನ್ ಮಾಡಿದರೆ ಸಾಕು – ವೈದ್ಯರು ಬರುತ್ತಾರೆ.

ಇಲ್ಲಿ ಗಂಡಸರು – ಹೆಂಗಸರು ಇಬ್ಬರೂ ಉದ್ಯೋಗಸ್ಥರೆ. ಹೆಂಗಸರದೇ ಮೇಲುಗೈ ಎಲ್ಲಾ ಕಡೆ – ಅಂಗಡಿ ಮಳಿಗೆಗಳಲ್ಲಿ, ಪುಸ್ತಕ ಭಂಡಾರಗಳಲ್ಲಿ, ಮ್ಯೂಸಿಯಂಗಳಲ್ಲಿ, ರೆಸ್ಟೋರಾಂಟುಗಳಲ್ಲಿ ಮಹಿಳೆಯರೆ. ಬಸ್ ಡ್ರೈವರುಗಳಾಗಿ, ಮೆಟ್ರೋ ರೈಲಿನ ಚಾಲಕರಾಗಿ ಕೂಡ ಕೆಲಸಮಾಡುತ್ತಾರೆ. ಹೆಣ್ಣು ಕೂಡ ಗಂಡಿನಂತೆ ದುಡಿಯುವುದರಿಂದ ಹೆಣ್ಣು ಗಂಡಿನ ಕೈ ಕಾಯಬೇಕಾಗಿಲ್ಲ. ಗಂಡನಿಗೆ ತಾನು ಅಧೀನಳೆಂಬ ದೈನ್ಯತೆಯಿಲ್ಲ. ‘ನೀನಿಲ್ಲದಿದ್ದರೆ ಇನ್ನೊಬ್ಬ’ – ಎಂಬ ನಿರ್ಲಕ್ಷ್ಯವೆ ಹೆಚ್ಚು. ಇದರಿಂದ ಸಾಂಸಾರಿಕ ಜೀವನದ ಮೇಲೆ ಕೊಂಚ ಕೆಟ್ಟ ಪರಿಣಾಮವಾಗಿ ವಿವಾಹ ವಿಚ್ಛೇದನಗಳು ವಿಶೇಷವಾಗುತ್ತಿವೆಯಂತೆ.

ನಾನು ಎರಡು ದಿನಗಳಿಂದ ಈ ಜನದ ಬದುಕಿನಲ್ಲಿ ಗಮನಿಸಿದ್ದು ಒಂದು ಬಗೆಯ ಗಂಭೀರತೆಯನ್ನು. ಬದುಕೆಲ್ಲ ಯಾವುದೋ ಸ್ತಬ್ಧವಾದ ನಿಯಂತ್ರಣದೊಳಗೆ ಪ್ರವಹಿಸುತ್ತಿದೆಯೇನೋ ಅನ್ನಿಸುತ್ತದೆ. ಗಂಡು – ಹೆಣ್ಣು ಕೈಯಲ್ಲಿ ಕೈ ಹಾಕಿಕೊಂಡು ನಡೆಯುವಾಗ ಕೂಡ ಏನೋ ಯಾಂತ್ರಿಕತೆ ಕಾಣುತ್ತದೆ. ಎಲ್ಲಾ ಕಡೆ ಜನ ಜಂಗುಳಿಯನ್ನು ಕಂಡಿದ್ದೇನೆ. ಮಾತನಾಡುವುದೆ ಕಡಮೆ. ಮುಖದಲ್ಲಿ ಅಂಥ ಗೆಲವು   ಕಾಣದು. ಯಾಕಿರಬಹುದು ? ಚಿಂತೆಯಿಲ್ಲದ ಬದುಕು. ಉದ್ಯೋಗದ ಖಾತ್ರಿ. ಊಟಕ್ಕೆ ತೊಂದರೆಯಿಲ್ಲ. ಇರಲು ವಸತಿ, ನಾಳೆಗೆಂತೋ ಏನೋ ಎಂಬ ಆತಂಕವಿಲ್ಲ. ಪ್ರತಿಯೊಬ್ಬನಿಗೂ ತಾನು ಏನು, ಏನಾಗಿದ್ದಾನೆ, ಏನಾಗುತ್ತೇನೆಂಬುದು ಸ್ಪಷ್ಟ. ಸ್ಪರ್ಧೆಗೆ ಅವಕಾಶವೆ ಇಲ್ಲ. ನನ್ನದು – ತನ್ನದು ಎನ್ನುವುದರಲ್ಲಿ ಇರುವ ಕಳಕಳಿ, ಕನಸುಗಾರಿಕೆ, ಆಕಾಂಕ್ಷೆ, ಸ್ಪರ್ಧೆ, ತತ್ಪರಿಣಾಮವಾದ ಉತ್ಸಾಹ – ರಭಸಕ್ಕೆ ಇಲ್ಲಿ ಆಸ್ಪದವಿರುವಂತೆ ತೋರುವುದಿಲ್ಲ. ಇರುವುದೆಲ್ಲ ಸರ್ಕಾರದ್ದು ; ತಾನು ಈ ಮಹಾಯಂತ್ರದ ಒಂದು ಭಾಗ ಮಾತ್ರ ; ತನ್ನ ವ್ಯಕ್ತಿತ್ವಕ್ಕೆ ಬೆಲೆ ಇರುವುದು ಇಷ್ಟೆ ಎಂಬ ಇಕ್ಕಟ್ಟಿನ ಭಾವದಿಂದೇನಾದರೂ ಈ ಜನ ಹೀಗೆ ತುಟಿ  ಬಿಗಿದುಕೊಂಡು ಹೇಳಲಾಗದ ಭಾವಗಳನ್ನು ಹುಗಿದುಕೊಂಡಂತೆ ತೋರುತ್ತಾರೋ, ಅಥವಾ ಈ ಜನ ಬದುಕಿರುವ, ಬದುಕುತ್ತಿರುವ ರೀತಿಯೇ ಹೀಗಿದೆಯೋ ತಿಳಿಯಲಿಲ್ಲ.

ಇರುಳಾದೊಡನೆ ಈ ನಗರ ಅನಗತ್ಯವಾದ ಅಲಂಕರಣ ದೀಪಗಳಿಂದ ಜಗಜಗಿಸುವುದಿಲ್ಲ. ಅವಶ್ಯಕವಾದಷ್ಟು ದೀಪಗಳು. ರಸ್ತೆಗೆ ಚೆನ್ನಾಗಿ ಬೆಳಕು ಬೀಳಲು ಸಾಕಾದಷ್ಟು ದೀಪಗಳು. ಇರುಳಾದೊಡನೆ ಕೇವಲ ದೀಪಗಳಿಂದ ಕಣ್‌ಸೆಳೆಯುವಂಥ ವ್ಯವಸ್ಥೆ ಯಾವ ಅಂಗಡಿ ಮಳಿಗೆಗಳಿಗೂ ಇಲ್ಲ. ಈ ಬಗೆಯ ಮಿತವ್ಯಯ, ಔಪಯೋಗಿಕ ದೃಷ್ಟಿ ಈ ನಾಡಿಗೆ ಪ್ರಧಾನ. ಹಾಗೆ ನೋಡಿದರೆ, ವಿದ್ಯುಚ್ಛಕ್ತಿಗೆ ಬರಗಾಲವೆ ಇಲ್ಲ ಇವರಿಗೆ. ಬೀದಿ ಬೀದಿಯ ಬದಿಗೆ ಅದನ್ನು ಕೊಳ್ಳಿರಿ, ಇದನ್ನು ಕೊಳ್ಳಿರಿ ಎಂಬ ಜಾಹಿರಾತುಗಳಿಲ್ಲ. ಎಲ್ಲದರ ತಯಾರಿಕೆಯೂ ಸರ್ಕಾರದ್ದೆ ಆಗಿರುವಾಗ ಜಾಹಿರಾತು ಮಾಡುವ ಪ್ರಶ್ನೆಯೆ ಏಳುವುದಿಲ್ಲ. ಇರುಳಿನ ಸಂಚಾರ ಕೂಡ ಮಿತವಾದ ದೀಪದಲ್ಲಿ ಸಾಗುತ್ತದೆ. ಬೀದಿಗೆ ಸಾಕಾದಷ್ಟು ಬೆಳಕಿನ ವ್ಯವಸ್ಥೆ ಇರುವಾಗ ವಾಹನಗಳಿಗೆ ‘ಹೆಡ್ ಲೈಟ್’ ಹಾಕುವ ಅವಶ್ಯಕತೆಯಿಲ್ಲ; ಹಾಕಿದರೆ ಕೆಲವೆಡೆ ಅದು ಅಪರಾಧವೆಂದು ಪರಿಗಣಿತವಾಗುತ್ತದೆ. ಆದ್ದರಿಂದ ವಾಹನಗಳು ಕೆಳದೀಪದ ಬೆಳಕಲ್ಲೇ, ಅದೂ ವಾಹನವನ್ನು ಇತರರು ಗುರುತಿಸಲು ಸಾಕಾಗುವಷ್ಟು ದೀಪದಲ್ಲಿ ಸಂಚರಿಸುತ್ತವೆ.

ಇಲ್ಲಿ ಭಾರತೀಯರು ಸುಮಾರು ಜನ ಇದ್ದಾರೆ. ವಿವಿಧ ಅಧ್ಯಯನಕ್ಕೆಂದೆ ಬಂದ ಮುನ್ನೂರಕ್ಕಿಂತ ಮಿಗಿಲಾದ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ಆಫ್ರಿಕಾದಿಂದ ಬಂದ ವಿದ್ಯಾರ್ಥಿಗಳೂ ಸಾಕಷ್ಟಿದ್ದಾರೆ. ಒಂದು ವಿಶೇಷವೆಂದರೆ, ಈ ದೇಶದ ಜನ, ವಿದೇಶಿಯರಾದ, ಅದರಲ್ಲೂ ವರ್ಣೀಯರಾದ ನಮ್ಮಂಥವರನ್ನು ವಿಲಕ್ಷಣವಾಗಿ ನೋಡುವುದಿಲ್ಲ. ನಾವು ಈ ಜನಕ್ಕೆ ಒಂದು ಬಗೆಯ ಅಪರೂಪದ ವಸ್ತುಗಳಂತೆ ತೋರುತ್ತೇವೇನೋ ಎಂದು ಅನಿಸದಂಥ ರೀತಿಯಲ್ಲಿ, ತೀರ ಸಹಜವಾಗಿ ಇರಬಹುದು.